Tuesday, June 19, 2012

ಯುದ್ಧ ನಿಲ್ಲಿಸಿದ ಆ ಪತ್ರಕರ್ತನೆಲ್ಲಿ,ಯುದ್ಧ ಪ್ರಚೋದಿಸುವ BBC ಎಲ್ಲಿ?


1972 ಜೂನ್ 8
ದಕ್ಷಿಣ ಮತ್ತು ಉತ್ತರ ವಿಯೆಟ್ನಾಮ್ ಗಳ ನಡುವೆ ಭೀಕರ ಯುದ್ಧ ನಡೆಯುತ್ತಿತ್ತು. ದಕ್ಷಿಣ ವಿಯೆಟ್ನಾಮನ್ನು ವಶಪಡಿಸಿಕೊಳ್ಳಲು ಉತ್ತರ ವಿಯೆಟ್ನಾಮ್ ಗರಿಷ್ಠ ಪ್ರಯತ್ನದಲ್ಲಿತ್ತು. ಆದ್ದರಿಂದಲೇ 1972 ಜೂನ್ 8ರಂದು ಅದು ದಕ್ಷಿಣ ವಿಯೆಟ್ನಾಮ್ ನ  ಟ್ರಾಂಗ್ ಬಾಂಗ್ ಗ್ರಾಮದ ಮೇಲೆ ಅಪಾಯಕಾರಿ ವಿಕಿರಣಗಳನ್ನು ಸೂಸುವ (ನಪಾಮ್) ಬಾಂಬನ್ನು ಸುರಿಸುತ್ತದೆ. ತಾತ್ಕಾಲಿಕ ಶಿಬಿರದಲ್ಲಿ ವಾಸಿಸುತ್ತಿದ್ದ 9 ವರ್ಷದ ಬಾಲೆ ಕಿಮ್ ಪುಕ್ ಮತ್ತು ಆಕೆಯ ಅಣ್ಣ, ಮತ್ತಿತರರು ಚೀರುತ್ತಾ ರಸ್ತೆಯಲ್ಲಿ ಓಡತೊಡಗುತ್ತಾರೆ. ಅದಾಗಲೇ ಕಿಮ್ ಳ  ದೇಹದ ಮೇಲೆ ವಿಕಿರಣಗಳು ಪರಿಣಾಮ ಬೀರಿರುತ್ತವೆ. ಬಟ್ಟೆ ಮಾತ್ರವಲ್ಲ, ಬೆನ್ನು, ಕೈ ಸಹಿತ ದೇಹದ ಬಹುತೇಕ ಭಾಗಗಳು ಸುಟ್ಟು ಹೋಗಿರುವ ಸ್ಥಿತಿಯಲ್ಲಿ ನಗ್ನವಾಗಿ ಅಣ್ಣನ ಹಿಂದೆ ಆಕೆ ಓಡುತ್ತಿರುತ್ತಾಳೆ. AP (ಅಸೋಸಿಯೇಟೆಡ್ ಪ್ರೆಸ್)ಗಾಗಿ ಯುದ್ಧದ ವರದಿಯನ್ನು ಮಾಡುತ್ತಿದ್ದ 21 ವರ್ಷದ ಛಾಯಾಗ್ರಾಹಕ ನಿಕ್ ಉಟ್ ಕ್ಯಾಮರಾ ಕ್ಲಿಕ್ಕಿಸುತ್ತಾನೆ. ಬಳಿಕ ಆ ಹುಡುಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಾನೆ. ನಂತರ ಆತ ತನ್ನ ಪೋಟೋವನ್ನು ಅಭಿವೃದ್ಧಿ (develop ) ಗೊಳಿಸಿ ಅಮೆರಿಕದಲ್ಲಿರುವ ಮುಖ್ಯ ಕಾರ್ಯಾಲಯಕ್ಕೆ ಕಳುಹಿಸಿಕೊಡುತ್ತಾನೆ. ಆದರೆ, ಕಾರ್ಯಾಲಯದಲ್ಲಿ ಸಂಪಾದಕರು ಮತ್ತು ಉಪಸಂಪಾದಕರ ಮಧ್ಯೆ ದೊಡ್ಡ ಚರ್ಚೆಯೇ ನಡೆಯುತ್ತದೆ. ನಗ್ನ ಪೋಟೋವನ್ನು ಮುದ್ರಿಸುವುದು ಜರ್ನಲಿಝಮ್ ನ  ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಸಂಪಾದಕರು ಪೋಟೋವನ್ನು ತಿರಸ್ಕರಿಸುತ್ತಾರೆ. ಆದರೆ ಚರ್ಚೆ ಅಲ್ಲಿಗೇ ನಿಲ್ಲುವುದಿಲ್ಲ. ಕೆಲವು ದಿನಗಳ ಚರ್ಚೆಯ ಬಳಿಕ ಆ ಪೋಟೋವನ್ನು ಪ್ರಕಟಿಸಲಾಗುತ್ತದೆ. ಮಾತ್ರವಲ್ಲ, ಆ ಪೋಟೋ ಜಗತ್ತಿನ ಮೇಲೆ ಎಷ್ಟು ದೊಡ್ಡ ಪ್ರಭಾವ ಬೀರುತ್ತದೆಂದರೆ, ವಿಯೆಟ್ನಾಮ್ ಯುದ್ಧವನ್ನೇ ಕೊನೆಗೊಳಿಸುವುದಕ್ಕೆ ಅದು ಕಾರಣವಾಗುತ್ತದೆ. ಯುದ್ಧ, ಅದರ ಕ್ರೌರ್ಯ, ದಿಕ್ಕಾಪಾಲಾಗುವ ಜನ ಸಮೂಹದ ಕುರಿತಂತೆ ಒಂದು ಗಂಭೀರ ಚರ್ಚೆಗೆ ವೇದಿಕೆ ಒದಗಿಸಿದ ಆ ಪೋಟೋ, ಬಳಿಕ ಪುಲಿಟ್ಝರ್ ಪ್ರಶಸ್ತಿಯನ್ನೂ ಪಡಕೊಳ್ಳುತ್ತದೆ.
          ಇದನ್ನು ಇಲ್ಲಿ ಪ್ರಸ್ತಾಪಿಸುವುದಕ್ಕೆ ಕಾರಣ ಇದೆ..
2012 ಮೇ 25ರಂದು ಸಿರಿಯದ ಹೌಲಾದಲ್ಲಿ ಸರಕಾರಿ ಪಡೆಗಳು ಭೀಕರ ಹತ್ಯಾಕಾಂಡ ನಡೆಸಿವೆಯೆಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತದೆ. ಸುಮಾರು 50ರಷ್ಟು ಮಕ್ಕಳೂ ಸಹಿತ 100ರಷ್ಟು ಮಂದಿಯನ್ನು ನಿರ್ದಯವಾಗಿ ಕೊಲ್ಲಲಾಗಿದೆ ಎಂದು ವರದಿಗಳು ಹೇಳುತ್ತವೆ. ಸಿರಿಯನ್ ಸರಕಾರ ಆ ಘಟನೆಯನ್ನು ಅಡಗಿಸಿಟ್ಟಿದ್ದು, ಮಾಧ್ಯಮಗಳು ಮತ್ತು ಇತರರಿಂದಾಗಿ ಅದು ಪತ್ತೆಯಾಗಿದೆ ಎಂದೂ ಮಾಧ್ಯಮಗಳು ಹೇಳಿಕೊಳ್ಳುತ್ತವೆ. ಇಷ್ಟೇ ಆಗಿದ್ದರೆ ಅದನ್ನು ನಿರ್ಲಕ್ಷಿಸಬಹುದಿತ್ತು. ಆದರೆ BBC (ಬಿ.ಬಿ.ಸಿ.) ತನ್ನ ಮುಖಪುಟದಲ್ಲಿ ಒಂದು ಪೋಟೋವನ್ನು ಪ್ರಕಟಿಸಿ, ಇದು ಹೌಲಾ ಹತ್ಯಾಕಾಂಡದ ಮೃತದೇಹಗಳು ಎಂದು ಬರೆಯುತ್ತದೆ. 5 ಸಾಲುಗಳಷ್ಟು ಇದ್ದ ಮೃತ ದೇಹಗಳನ್ನು ಬಿಳಿ ಬಟ್ಟೆಯಿಂದ ಹೊದೆಯಲಾಗಿದ್ದು, ಓರ್ವರು ಅದರ ನಡುವಿನಿಂದ ದಾಟುತ್ತಿರುವ ದೃಶ್ಯ. ಆದರೆ ಮೇ 29ರಂದು ಇರಾನಿನ ಪ್ರೆಸ್ ಟಿ.ವಿ. ಆ ಪೋಟೋದ ನಕಲಿತನವನ್ನು ಬಯಲು ಮಾಡುತ್ತದೆ. ಮಾರ್ಕ್ ಡಿ ಲೂರೋ ಅನ್ನುವ ಛಾಯಾಗ್ರಾಹಕ 2003 ಮೇ 27ರಂದು ಇರಾಕ್ ನ  ಅಲ್ ಮುಸಯ್ಯಿಬ್ ನಲ್ಲಿ ಆ ಪೋಟೋ ತೆಗೆದಿದ್ದು, ಬಿಬಿಸಿ ಅದನ್ನೇ ಹೌಲಾದ ದೃಶ್ಯವೆಂದು ಸುಳ್ಳಾಗಿ ಮುದ್ರಿಸಿದೆ ಎಂದು ಆಕ್ಷೇಪಿಸುತ್ತದೆ. ಪುರಾವೆಗಾಗಿ, ಮಾರ್ಕ್ ಡಿ ಲೂರೋನ 2003ರ ಪೋಟೋವನ್ನು BBC ಯ ಪೋಟೋದ ಜೊತೆಗಿಟ್ಟು ಓದುಗರ ಮುಂದಿಡುತ್ತದೆ.BBCಯ ಪೋಟೋವನ್ನು ಆ ವರೆಗೆ ನಿಜವೆಂದೇ ನಂಬಿದ್ದ ಓದುಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ. BBCಯು ಇಸ್ರೇಲ್ ಪಕ್ಷಪಾತಿ, ಅದು ಝಿಂಬಾಬ್ವೆಯ ಬಗ್ಗೆ, ನೆಲ್ಸನ್ ಮಂಡೇಲಾರ ಬಿಡುಗಡೆಯ ಬಗ್ಗೆ, ಇರಾಕ್ ಯುದ್ಧದ ಬಗ್ಗೆಯೆಲ್ಲಾ ಹೇಳಿದ್ದೂ ಸುಳ್ಳನ್ನೇ. ಇನ್ನು ಮುಂದೆ ನಾವು BBCಯ ಚಂದಾದಾರಿಕೆ ಮಾಡುವುದಿಲ್ಲ ಎಂದು ಬ್ರಿಟನ್ನಿಗರೇ ಸಿಟ್ಟಾಗುತ್ತಾರೆ. ಇದರಿಂದ ಮುಜಗರಕ್ಕೊಳಗಾದ BBCಯು ತನ್ನ ಸೈಟಿನಿಂದ ಪೋಟೋವನ್ನು ಹಿಂತೆಗೆದುಕೊಂಡು ಪರೋಕ್ಷವಾಗಿ ತಪ್ಪೊಪ್ಪಿ ಕೊಳ್ಳುತ್ತದೆ..
        ಒಂದು ಕಡೆ, ಯುದ್ಧವನ್ನೇ ನಿಲ್ಲಿಸುವುದಕ್ಕೆ ಪೋಟೋವೊಂದು ಪ್ರೇರಣೆ ನೀಡಿದ್ದರೆ, ಇನ್ನೊಂದು ಕಡೆ, ಸುಳ್ಳು ಸುಳ್ಳೇ ಪೋಟೊವೊಂದನ್ನು ಪ್ರಕಟಿಸಿ ಯುದ್ಧಕ್ಕೆ ಪ್ರಚೋದನೆ ಕೊಡುವುದು! ಆಧುನಿಕ ಮಾಧ್ಯಮವೇಕೆ ಹೀಗಾಗಿ ಬಿಟ್ಟಿದೆ? ಲಿಬಿಯದ ಮೇಲೆ ನ್ಯಾಟೋ ದಾಳಿ ಮಾಡಿದಾಗಲೂ BBCಯ ಮೇಲೆ ಇಂಥದ್ದೇ ಆರೋಪವನ್ನು ಮಾಡಲಾಗಿತ್ತು. ಬಂಡುಕೋರ ಪಡೆಯ ಅನಾಹುತವನ್ನು ಗದ್ಧಾಪಿಯ ಕ್ರೌರ್ಯ ಎಂದು ಅದು ಪ್ರಕಟಿಸಿತ್ತು. ಲಿಬಿಯದ ಮೇಲೆ ನ್ಯಾಟೋ ಪಡೆ ಮಾಡಿದ ಬಾಂಬ್ ದಾಳಿ ಮತ್ತು ಸಾವು ನೋವುಗಳನ್ನು ಅಡಗಿಸಿ ಗದ್ಧಾಪಿಯನ್ನು ಖಳನಾಯಕನಂತೆ ಬಿಂಬಿಸಿದ್ದಕ್ಕೂ ಟೀಕೆ ವ್ಯಕ್ತವಾಗಿತ್ತು.
         ಇದೊಂದೇ ಅಲ್ಲ..
                      BBC ಪೋಟೋ             2003 ರ ಪೋಟೋ                         
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ 2012 ಎಪ್ರಿಲ್ 30ರಂದು ವಿದೇಶಾಂಗ ಇಲಾಖೆಯ ಮುಖ್ಯಸ್ಥರಿಂದ ಪತ್ರಿಕಾಗೋಷ್ಠಿಯೊಂದು ನಡೆಯುತ್ತದೆ. ನೈಜೀರಿಯಾದಲ್ಲಿ ಪಾಶ್ಚಾತ್ಯ ಹಿತಾಸಕ್ತಿಗಳ ಮೇಲೆ ಆಗುತ್ತಿರುವ ಆಕ್ರಮಣಗಳು, ಅಲ್ ಕಾಯ್ದದಿಂದ ಮುಗ್ಧರ ಹತ್ಯೆಗಳು, ಭಯೋತ್ಪಾದನೆಯಿಂದಾಗಿ ಆಗುತ್ತಿರುವ ಸಾವುಗಳ ಬಗ್ಗೆ ಅಧಿಕಾರಿ ವಿವರಣೆ ನೀಡುತ್ತಿರುತ್ತಾರೆ. ಆಗ ಯುವತಿಯೊಬ್ಬಳು ಎದ್ದು ನಿಂತು ಅಮೆರಿಕದ ಬದ್ಧತೆಯ ಬಗ್ಗೆ ಪ್ರಶ್ನಿಸುತ್ತಾಳೆ. ಯಮನ್, ಸೊಮಾಲಿಯ, ಪಾಕಿಸ್ತಾನಗಳಲ್ಲಿ ಅಮೆರಿಕದ ಡ್ರೋನ್ ಕ್ಷಿಪಣಿಗಳಿಂದ ಸಾವಿಗೀಡಾದ ಮುಗ್ಧರ ಬಗ್ಗೆಯೇಕೆ ನೀವು ಹೇಳುತ್ತಿಲ್ಲ? ಅಮೆರಿಕನ್ ಯೋಧರ ತ್ಯಾಗದ ಬಗ್ಗೆ ಮಾತಾಡ್ತೀರಲ್ಲ, ಯಾಕೆ ಇವರ ಕೈಯಿಂದಲೇ ಆಗಿರುವ ಮುಗ್ಧರ ಪ್ರಾಣ ಹರಣದ ವಿವರಗಳನ್ನು ಅಡಗಿಸ್ತೀರಿ.. ಎಂದೆಲ್ಲಾ ಪ್ರಶ್ನಿಸ ತೊಡಗುತ್ತಾಳೆ. ಸಭೆಯ ಗಮನವೆಲ್ಲಾ ಆ ಕಡೆಗೆ ತಿರುಗುತ್ತದೆ. ಕೊನೆಗೆ ಆ ಯುವತಿಯನ್ನು ಎತ್ತಿಕೊಂಡು ಹೊರಗೆ ಕಳುಹಿಸಲಾಗುತ್ತದೆ. ಈ ಇಡೀ ದೃಶ್ಯವನ್ನು C - SPAN  ಚಾನೆಲ್ ನೇರ ಪ್ರಸಾರ ಮಾಡುತ್ತದೆ. What about the hundreds of innocent people we are killing with our drone Strikes in Pakistan  - ಎಂಬ ಹೆಸರಿನಲ್ಲಿ ಯೂಟ್ಯೂಬ್ ನಲ್ಲಿ ಈಗಲೂ ಅದರ ವೀಡಿಯೋ ಇದೆ. ಇದನ್ನು ವಿಶ್ವಾದ್ಯಂತದ ಅಸಂಖ್ಯಾತ ಮಂದಿ ವೀಕ್ಷಿಸುತ್ತಾರೆ. ಕಾಮೆಂಟ್ ಬರೆಯುತ್ತಾರೆ.
     ಓ ಅಮೆರಿಕನ್ನರೇ,
‘.. ಭಯೋತ್ಪಾದಕರು, ಭಯೋತ್ಪಾದಕರು.. ಅಂತ ನಮ್ಮನ್ನು ನೀವು ಹೇಳುವುದನ್ನು ಕೇಳಿ ಕೇಳಿ ಸಾಕಾಗಿಬಿಟ್ಟಿದೆ. ಆನ್ ಲೈನ್ ನಲ್ಲಿ ವೀಡಿಯೋ ಗೇಮ್ ಆಡುವ 9 ವರ್ಷದ ನನ್ನ ತಮ್ಮ ಮೊನ್ನೆ ಕೇಳಿದ, ಟೆರರಿಸ್ಟ್ ಅಂದರೆ ಏನು ಎಂದು. ಅವನನ್ನು ಯಾರೋ ಟೆರರಿಸ್ಟ್ ಅಂದರಂತೆ. ನಾನು ಗೊತ್ತಿಲ್ಲ ಅಂದೆ. ಅದೇನೋ ಭಾರೀ ಗೌರವಾರ್ಹ ಪದ ಎಂದು ನನ್ನ ತಮ್ಮ ಭಾವಿಸಿದ್ದಾನೆ. ಯಾಕೆಂದರೆ ಆತನಿಗೆ ‘ಇಂಗ್ಲಿಷ್ ಗೊತ್ತಿಲ್ಲ..’ ಹಾಗಂತ ಜೂನ್ ಆರಂಭದಲ್ಲಿ ಸೌದಿಯ ಓರ್ವ ಹೆಣ್ಣು ಮಗಳು ಕಾಮೆಂಟ್ ಬರೆಯುತ್ತಾಳೆ.
    ನಿಜವಾಗಿ, ಅಮೆರಿಕದ ಭಯೋತ್ಪಾದನೆಯ ವಿರುದ್ಧದ ಹೋರಾಟವು ಇವತ್ತು ಸೈನಿಕರ ಮುಖಾಂತರ ನಡೆಯುತ್ತಿಲ್ಲ. ಎಲ್ಲವನ್ನೂ ಡ್ರೋನ್ ಕ್ಷಿಪಣಿಗಳೇ ನಿರ್ವಹಿಸುತ್ತಿವೆ. 2004ರಿಂದ ಈ ವರೆಗೆ 330 ಡ್ರೋನ್ ದಾಳಿಗಳು ಕೇವಲ ಪಾಕಿಸ್ತಾನವೊಂದರಲ್ಲೇ ನಡೆದಿವೆ. 2,500ರಿಂದ 3,500ರ ವರೆಗೆ ಸಾವುಗಳೂ ಸಂಭವಿಸಿವೆ. ಭಯೋತ್ಪಾದಕರ ಅಡಗು ತಾಣಕ್ಕೆಂದು ಹೊರಡುವ ಈ ಕ್ಷಿಪಣಿಗಳು ಅಂತಿಮವಾಗಿ ಮುಗ್ಧರ ಮೇಲೆ ಬಿದ್ದು ಸಾವು ನೋವುಗಳಾದದ್ದೇ ಹೆಚ್ಚು. ಬುಶ್ ಅಧಿಕಾರಾವಧಿಯಲ್ಲಿ 52 ಡ್ರೋನ್ ದಾಳಿಗಳು ನಡೆದಿದ್ದರೆ, ಒಬಾಮರ ಅಧಿಕಾರಾವಧಿಯಲ್ಲಿ ಈಗಾಗಲೇ 278 ದಾಳಿಗಳು ನಡೆದಿವೆ. ಒಂದು ರೀತಿಯಲ್ಲಿ ಡ್ರೋನ್ ದಾಳಿಯೆಂಬುದು ಸೈನಿಕರ ಮಟ್ಟಿಗೆ ನೂರು ಶೇಕಡಾ ಸುರಕ್ಷಿತ. ಮಾನವರಹಿತವಾಗಿರುವ ಈ ಕ್ಷಿಪಣಿಯನ್ನು ಸೈನಿಕ ಬಿಡಾರಗಳಿಂದಲೇ ಹಾರಿಸಲು ಸಾಧ್ಯವಾಗಿರುವುದರಿಂದ ಸೇನಾ ಕಾರ್ಯಾಚರಣೆಯ ಅಗತ್ಯವೇ ಇರುವುದಿಲ್ಲ.
      ಎಲ್ಲೋ ಕೂತು ಇನ್ನೆಲ್ಲಿಗೋ ಹಾರಿಸುವ ಡ್ರೋನ್ ಕ್ಷಿಪಣಿ ಮನುಷ್ಯರ ಪಾಲಿಗೆ ಅಪಾಯಕಾರಿ ಅನ್ನುವುದಕ್ಕೆ ಗಾಯಗೊಂಡಿರುವ 2 ಸಾವಿರದಷ್ಟು ಮಂದಿಯೇ ಸಾಕ್ಷಿ. ಆದರೆ ಈ ಡ್ರೋನನ್ನು ಪ್ರಶ್ನಿಸಿದರೆ ಎತ್ತಿ ಹೊರ ಹಾಕಲಾಗುತ್ತದೆ. ಇನ್ನೊಂದೆಡೆ, ಯುದ್ಧಕ್ಕೆ ಪ್ರಚೋದನೆ ಕೊಡಬಲ್ಲ ನಕಲಿ ದೃಶ್ಯವನ್ನು BBCಯಂಥ ಖ್ಯಾತ ಸಂಸ್ಥೆಯೇ ಮುದ್ರಿಸಿ ಬಿಡುತ್ತದೆ. ಇವೆಲ್ಲ ಏಕೆ? ಲಿಬಿಯದ ಮೇಲೆ ನ್ಯಾಟೋದ ದಾಳಿಗೆ ವೇದಿಕೆ ಸಜ್ಜುಗೊಳಿಸಿದಂತೆ ಸಿರಿಯಾದ ಮೇಲೂ ದಾಳಿಗೆ ವೇದಿಕೆ ಸಜ್ಜುಗೊಳಿಸುವುದೇ? ಲಿಬಿಯನ್ ದಾಳಿಯಲ್ಲಿ ನ್ಯಾಟೊವು ನ್ಯೂಟ್ರನ್ ಬಾಂಬ್ ಮತ್ತು ಯುರೇನಿಯಂ ಶಸ್ತ್ರಾಸ್ತ್ರಗಳನ್ನು ಬಳಸಿತ್ತು. 2006ರಲ್ಲಿ ಲೆಬನಾನ್ ನ  ಮೇಲೆ ಮತ್ತು 2008/9ರಲ್ಲಿ ಗಾಝಾದ ಮೇಲೆ ಇಸ್ರೇಲ್ ದಾಳಿ ಮಾಡಿದಾಗ ಬಳಸಿದ್ದೂ ಇವೇ ಅಸ್ತ್ರಗಳನ್ನು.
ನಿಕ್ ಉಟ್    ಕಿಮ್ ಪುಕ್      
      ಇಷ್ಟಕ್ಕೂ ತನ್ನ ಪೋಟೋವನ್ನು ಪತ್ರಿಕೆಗೆ ಕಳುಹಿಸುವುದಕ್ಕಿಂತಲೂ ಮೊದಲು ಗಾಯಗೊಂಡ ಬಾಲೆಯನ್ನು ಆಸ್ಪತ್ರೆಗೆ ಸಾಗಿಸುವ ನಿಕ್ ಉಟ್ ಅನ್ನುವ ಪತ್ರಕರ್ತ ಮತ್ತು ಆ ಪೋಟೋವನ್ನು ಎದುರಿಟ್ಟು ಕೊಂಡು ನೈತಿಕತೆಯ ಬಗ್ಗೆ ಚರ್ಚಿಸಿದ ಸಂಪಾದಕರೆಲ್ಲಿ? ತಪ್ಪಾದ ಪೋಟೋವನ್ನು ಪ್ರಕಟಿಸಿ ಯುದ್ಧಕ್ಕೆ ಪ್ರಚೋದನೆ ಕೊಡುವ BBC ಎಲ್ಲಿ?
      1972 ಜೂನ್ 8ರ ಆ ಘಟನೆಗೆ ಕಳೆದ 2012 ಜೂನ್ 8ಕ್ಕೆ 40 ವರ್ಷಗಳು ಸಂದುವು. ಕೆನಡದಲ್ಲಿರುವ ಕಿಮ್ ಪುಕ್ ಈಗ ಎರಡು ಮಕ್ಕಳ ತಾಯಿ. ಈ ಹಿನ್ನಲೆಯಲ್ಲಿ ಕಿಮ್ ಪುಕ್ ಮತ್ತು ನಿಕ್ ಉಟ್ ರಿಗೆ  ಏರ್ಪಡಿಸಲಾದ ಸನ್ಮಾನದ ಪೋಟೋವನ್ನು ಮಾಧ್ಯಮಗಳಲ್ಲಿ ನೋಡಿದಾಗ ಇವೆಲ್ಲಾ ನೆನಪಾಯಿತು.

No comments:

Post a Comment