Tuesday, August 12, 2014

ಮುಹಮ್ಮದ್ ಮುಸ್ಲಿಯಾರ್ ರ ಮಗಳ ಮದುವೆ

   “ನನ್ನ ಮಗಳಿಗೆ ವಿವಾಹ ನಿಶ್ಚಯ ಆಗಿದೆ ಇವನೇ” - ಕಳೆದವಾರ ಉಭಯ ಕುಶಲೋಪರಿಯ ಮಧ್ಯೆ ಮುಹಮ್ಮದ್
ಮುಸ್ಲಿಯಾರ್ (ಹೆಸರು ಬದಲಿಸಲಾಗಿದೆ) ನನ್ನೊಂದಿಗೆ ಹೇಳಿದರು. ನಾವಿಬ್ಬರೂ ಅಚಾನಕ್ ಆಗಿ ಮಧ್ಯಾಹ್ನ ಹೊಟೇಲಿನಲ್ಲಿ ಭೇಟಿಯಾಗಿದ್ದೆವು. ಸಂಬಂಧದಲ್ಲಿ ಅವರು ನನಗೆ ಮಾವ ಆಗುತ್ತಾರೆ. ಅಭಿನಂದಿಸಿದೆ. ಆದರೆ ನನ್ನ ಅಭಿನಂದನೆಯನ್ನು ಅಷ್ಟೇ ಸ್ಫೂರ್ತಿಯಿಂದ ಸ್ವೀಕರಿಸುವ ಉತ್ಸಾಹ ಅವರಲ್ಲಿ ಕಾಣಿಸಲಿಲ್ಲ. ಖುಷಿ ಮತ್ತು ಬೇಸರ ಎರಡೂ ಬೆರೆತ ಮುಖಭಾವ. ನನ್ನ ಅಚ್ಚರಿಯನ್ನು ಗುರುತಿಸಿದವರಂತೆ, ‘ಇಪ್ಪತ್ತು ಪವನ್ ಕೊಡಬೇಕು ಕಾದರ್' ಅಂದರು. ನಾನು ತುಸು ಪ್ರತಿಭಟನೆಯ ಧನಿಯಲ್ಲಿ ಮಾತಾಡಿದೆ. ‘ಈ ಕಾಲದಲ್ಲಿ ವರದಕ್ಷಿಣೆಯಾ? ಯಾಕೆ ಒಪ್ಪಿಕೊಂಡಿರಿ ನೀವು' ಎಂದೆ. ಅವರು ಹೇಳಿದರು, ‘ಒಪ್ಪಿಕೊಳ್ಳದೇ ಇನ್ನೇನು ಮಾಡಕ್ಕಾಗುತ್ತೆ ಇವನೇ? ಬಡವರ ಮನೆಯ ಮಕ್ಕಳಿಗೆ ಹೆಚ್ಚು ಅವಕಾಶಗಳು ಇಲ್ಲವಲ್ಲ. ಶ್ರೀಮಂತರ ಮಧ್ಯೆ ಇಂಥ ತಾಪತ್ರಯಗಳು ಕಡಿಮೆ. ಅಲ್ಲಿ ಪ್ರತಿಭಟನೆ, ನಿರಾಕರಣೆಗಳಿಗೆ ಅವಕಾಶವೂ ಇರುತ್ತೆ. ಆದರೆ ನಮ್ಮಂಥವರು ಒಪ್ಪಿಕೊಳ್ಳದಿದ್ದರೆ ಹೆಣ್ಣು ಮಕ್ಕಳು ಮನೆಯಲ್ಲೇ ಇರಬೇಕಾಗುತ್ತೆ ನೋಡು. ಹಾಗಂತ, ಜಮಾಅತೆ ಇಸ್ಲಾವಿೂ, ಸಲಫಿಗಳಲ್ಲಿರುವ ಧೈರ್ಯ (ವರದಕ್ಷಿಣೆರಹಿತ ವಿವಾಹವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವುದು) ನಮ್ಮಲ್ಲಿ ಎಲ್ಲಿದೆ ಹೇಳು?”
   ನಿಜವಾಗಿ, ಈ ವಾರ ವರದಕ್ಷಿಣೆಯ ಕುರಿತಾಗಿ ಲೇಖನ ಬರೆಯಲು ನಾನು ಉದ್ದೇಶಿಸಿಯೇ ಇರಲಿಲ್ಲ. ವರದಕ್ಷಿಣೆಯ ಸುತ್ತ ಈ ಸಮಾಜದಲ್ಲಿ ಈಗಾಗಲೇ ಅನೇಕಾರು ಚರ್ಚೆಗಳಾಗಿವೆ. ಸಭೆ, ವಿಚಾರಗೋಷ್ಠಿ, ಸಂವಾದಗಳು ನಡೆದಿವೆ. ವರದಕ್ಷಿಣೆಯನ್ನು ಖಂಡಿಸಿ ಜಾಥಾಗಳು ನಡೆದಿವೆ. ಮಹರ್ ವ್ಯವಸ್ಥೆಯನ್ನು ಜಾಗೃತಗೊಳಿಸುವ ಕಾರ್ಯಕ್ರಮಗಳೂ ನಡೆದಿವೆ. ‘ಸನ್ಮಾರ್ಗ’ದಲ್ಲೇ ವರದಕ್ಷಿಣೆಯ ಸುತ್ತ ಓದುಗರ ಚರ್ಚೆಯನ್ನು ನಡೆಸಲಾಗಿದೆ. ಅನೇಕಾರು ಬರಹಗಳನ್ನೂ ಪ್ರಕಟಿಸಲಾಗಿದೆ. ಆದರೂ, ಈ ಪಿಡುಗು ಸಮಾಜದಿಂದ ತೊಲಗುತ್ತಿಲ್ಲ ಅಂದರೆ ಏನೆನ್ನಬೇಕು? ಅಂದಹಾಗೆ, ಉಸ್ತಾದರಿಗೂ (ಮುಸ್ಲಿಯಾರ್) ಜನಸಾಮಾನ್ಯರಿಗೂ ನಡುವೆ ಖಂಡಿತ ವ್ಯತ್ಯಾಸ ಇದೆ. ಉಸ್ತಾದರಿಗೆ ಸಮಾಜದಲ್ಲಿ ಒಂದು ಬಗೆಯ ವಿಶೇಷ ಗೌರವವಿದೆ. ಇತರರಿಗೆ ಸಲಾಮ್ ಹೇಳದವರು ಕೂಡ ಉಸ್ತಾದರನ್ನು ಕಂಡ ಕೂಡಲೇ ಸಲಾಮ್ ಹೇಳುತ್ತಾರೆ. ಎದ್ದು ನಿಲ್ಲುತ್ತಾರೆ. ಮುಖಭಾವಗಳು ಬದಲಾಗುತ್ತವೆ. ಇಸ್ಲಾಮಿನ ತಿಳುವಳಿಕೆಯಿರುವ ಮತ್ತು ಸಮಾಜಕ್ಕೆ ಮಾರ್ಗದರ್ಶನ ಮಾಡುವವರೆಂಬ ನೆಲೆಯಲ್ಲಿ ಸಮಾಜ ಅವರನ್ನು ಅತ್ಯಂತ ಎತ್ತರದ ಸ್ಥಾನದಲ್ಲಿಟ್ಟು ಗೌರವಿಸುತ್ತದೆ. ಆದರೆ ಅಂಥವರಲ್ಲೇ ವರದಕ್ಷಿಣೆಯ ಬೇಡಿಕೆ ಇಡಲಾಗುತ್ತದೆಂದರೆ? ಅವರ ಧಾರ್ಮಿಕ ಜ್ಞಾನ ಮತ್ತು ಸಾಮಾಜಿಕ ಸ್ಥಾನ-ಮಾನವನ್ನು ಓರ್ವ ‘ವರ' ಮಣ್ಣುಪಾಲು
ಮಾಡುತ್ತಾನೆಂದರೆ? ಸಾಮಾಜಿಕ ಅನಿಷ್ಠಗಳ ಬಗ್ಗೆ ಧಾರಾಳ ಮಾತಾಡಿದ ಉಸ್ತಾದರನ್ನೇ ಒಂದು ‘ಅನಿಷ್ಠ’ ಅಸಹಾಯಕ ವಾಗಿಸಿ ಬಿಡುತ್ತದೆಂದರೆ? ಯಾರು ಇದಕ್ಕೆ ಕಾರಣ? ಹೆಣ್ಣಿನ ತಂದೆ ಎನಿಸಿಕೊಳ್ಳುವುದು ಸಾಮಾಜಿಕ ಗೌರವವನ್ನೇ ಕುಗ್ಗಿಸುವಷ್ಟು ಭೀಕರ ಅಪರಾಧವೇ? ಯಾರು ಇಂಥದ್ದೊಂದು ವಾತಾವರಣವನ್ನು ಸಮಾಜದಲ್ಲಿ ಸೃಷ್ಟಿಸಿರುವುದು? ಜನಸಾಮಾನ್ಯರೇ, ಶ್ರೀಮಂತರೇ, ಉಸ್ತಾದರೇ, ಕಾಝಿಗಳೇ, ಸಂಘಟನೆಗಳೇ? ಒಂದು ಕಡೆ ಭ್ರೂಣಹತ್ಯೆಯ ವಿರುದ್ಧ ನಮ್ಮ ಮಸೀದಿಯ ಮೈಕುಗಳು ಧಾರಾಳ ಮಾತಾಡುತ್ತವೆ. ಭ್ರೂಣಹತ್ಯೆಗೀಡಾದ ಮಗುವಿನಲ್ಲಿ ನಾಳೆ ಅಲ್ಲಾಹನು ಅದಕ್ಕೆ ಕಾರಣರಾದವರ ಹೆಸರು ಹೇಳಿಸಿ ಶಿಕ್ಷಿಸುತ್ತಾನೆ (ಪವಿತ್ರ ಕುರ್‍ಆನ್: 81:8) ಎಂದು ಬೆದರಿಸಲಾಗುತ್ತದೆ. ಹೆಣ್ಣು ಸಮಾಜಕ್ಕೆ ಎಷ್ಟು ಪ್ರಯೋಜನಕಾರಿ ಎಂಬ ವ್ಯಾಖ್ಯಾನಗಳೂ ನಡೆಯುತ್ತಿವೆ. ಇಬ್ಬರು ಹೆಣ್ಣು ಮಕ್ಕಳನ್ನು ಉತ್ತಮ ಸಂಸ್ಕಾರ ಕೊಟ್ಟು ಬೆಳೆಸಿ, ವಿವಾಹ ಮಾಡಿಸಿಕೊಡುವ ಹೆತ್ತವರಿಗೆ ಸ್ವರ್ಗದ ವಾಗ್ದಾನವಿದೆ ಎಂದು ಹೇಳಲಾಗುತ್ತದೆ. ಪ್ರವಾದಿ ಮುಹಮ್ಮದ್‍ರಿಗೆ(ಸ) ಹೆಣ್ಣು ಮಕ್ಕಳು ಮಾತ್ರವೇ ಇದ್ದುದನ್ನು ನೆನಪಿಸಿ, ಹೆಣ್ಣು ಮಕ್ಕಳಿಗಾಗಿ ಸಂತಸಪಡಿ ಎನ್ನಲಾಗುತ್ತದೆ. ಆದರೆ, ಇನ್ನೊಂದು ಕಡೆ ಹೆಣ್ಣನ್ನು ಹೊರೆ ಎಂದೇ ಪರಿಗಣಿಸಲಾಗುತ್ತಿದೆ. ಹೆಣ್ಣು ಮಗು ಹುಟ್ಟಿದ ಕೂಡಲೇ ಅದರ ಮದುವೆಗಾಗಿ ಹಣ ಸಂಗ್ರಹಿಸತೊಡಗಬೇಕಾದ ಒತ್ತಡವನ್ನು ಹೆತ್ತವರ ಮೇಲೆ ಹೊರಿಸಲಾಗುತ್ತಿದೆ. ಯಾಕೆ ಈ ದ್ವಂದ್ವ? ನಮ್ಮ ಭಾಷಣಗಳಿಗೂ ವರ್ತನೆಗಳಿಗೂ ಯಾಕಿಷ್ಟು ಅಂತರ? ಭಾಷಣಗಳು ಎಷ್ಟು ಕರ್ಣಾನಂದಕರವೋ ಪ್ರಾಯೋಗಿಕವಾಗಿ ಅದು ಅಷ್ಟೇ ಕರ್ಕಶವೆನಿಸಿರುವುದೇಕೆ? ಹೀಗೆ ಭಾಷಣ ಮಾಡುವ ಉಸ್ತಾದರನ್ನೇ ಹೆಣ್ಣು ಬೇಟೆಯಾಡುತ್ತಿರುವುದೇಕೆ? ಹೆಣ್ಣು ಮಕ್ಕಳನ್ನು ಪ್ರೀತಿಸಿದ ಪ್ರವಾದಿಯವರ ಅನುಯಾಯಿಗಳಿಗೆ ಹೆಣ್ಣು ಮಕ್ಕಳು ಭಾರ ಅನಿಸಿರುವುದು ಯಾವುದರ ಸೂಚನೆ? ಇವೆಲ್ಲವನ್ನು ಇಟ್ಟುಕೊಂಡು ನಾವು, ಭ್ರೂಣಹತ್ಯೆ ಮಾಡಬೇಡಿ ಎಂದು ಕರೆ ಕೊಡುತ್ತೇವಲ್ಲ, ಹತ್ಯೆಗೀಡಾದ ಮಗುವಿನಲ್ಲೇ ಈ ಬಗ್ಗೆ ಪ್ರಶ್ನಿಸಿ ಶಿಕ್ಷೆ ನೀಡಲಾಗುತ್ತದೆ ಅನ್ನುತ್ತೇವಲ್ಲ ಮತ್ತು ಜೀವಂತವಾಗಿ ಹೆಣ್ಣು ಮಕ್ಕಳನ್ನು ಹೂಳುತ್ತಿದ್ದ ಅರಬರನ್ನು ಅಜ್ಞಾನಿಗಳು ಎಂದು ಟೀಕಿಸುತ್ತೇವಲ್ಲ, ಎಷ್ಟು ಹಾಸ್ಯಾಸ್ಪದ? ಓರ್ವ ಮಗಳ ವಿವಾಹವೇ ಉಸ್ತಾದರಿಗೆ ಇಷ್ಟು ಭಾರವಾಗಿರುವಾಗ ಒಂದಕ್ಕಿಂತ ಹೆಚ್ಚು ಹೆಣ್ಣು ಮಕ್ಕಳಿರುವ ಹೆತ್ತವರು ಏನು ಮಾಡಬೇಕು? ಕುರ್‍ಆನಿನ ಸೂಕ್ತಗಳನ್ನೋ ಪ್ರವಾದಿಯ(ಸ) ಮಾತುಗಳನ್ನೋ ಆಚರಣೆಗೆ ತರದ ಸಮಾಜದಲ್ಲಿ ಈ ಹೆತ್ತವರು ಇಸ್ಲಾಮಿನ ಈ ಪಾವನ ಮೌಲ್ಯಗಳಲ್ಲಿ ಎಲ್ಲಿಯವರೆಗೆ ನಂಬಿಕೆ ಇಟ್ಟುಕೊಂಡು ಮುಂದುವರಿಯಬಲ್ಲರು? ಹೆಣ್ಣು ಭ್ರೂಣಹತ್ಯೆ ಮಾಡಬೇಡಿ ಎಂದು ಅವರಲ್ಲಿ ಹೇಳುವುದಕ್ಕೆ ಈ ಸಮಾಜಕ್ಕೆ ಏನು ಅರ್ಹತೆಯಿದೆ? ಒಂದು ವೇಳೆ, ಅವರು ಅಂಥ ಹತ್ಯೆಗೆ ಮುಂದಾದರೆಂದರೆ, ಅದಕ್ಕಾಗಿ ಅಲ್ಲಾಹನು ಅವರನ್ನು ಮಾತ್ರ ಹಿಡಿಯುವನೇ? ಅಂಥ ಪಾಪ ಕೃತ್ಯವನ್ನು ಅವರಿಗೆ ಅನಿವಾರ್ಯಗೊಳಿಸಿದ ನಮ್ಮ-ನಿಮ್ಮನ್ನು ಆತ ತಪ್ಪಿತಸ್ಥರೆಂದು ಪರಿಗಣಿಸಲಾರನೇ?
     ಸಾಮಾನ್ಯವಾಗಿ, ಮುಸ್ಲಿಯಾರ್‍ಗಳಲ್ಲಿ ಹೆಚ್ಚಿನವರೂ ಬಡವರೇ. ಸಾಮಾನ್ಯ ಮಂದಿ ಎದುರಿಸುವ ಸಕಲ ಸಮಸ್ಯೆಗಳನ್ನು ಅವರೂ ಬಹುತೇಕ ಎದುರಿಸುತ್ತಾರೆ. ಅವರ ಮಕ್ಕಳು ಹೋಗುವುದು ಸರಕಾರಿ ಶಾಲೆಗೆ. ಸುಣ್ಣ-ಬಣ್ಣದ ಸಾಮಾನ್ಯ ಮನೆಗಳಲ್ಲಿ ಅವರು ಮತ್ತು ಅವರ ಕುಟುಂಬ ಬದುಕುತ್ತಿರುತ್ತದೆ. ಅವರದ್ದು ಸರಕಾರಿ ಉದ್ಯೋಗ ಅಲ್ಲವಾದ್ದರಿಂದ ಕೈ ತುಂಬ ಸಂಬಳವೂ ಸಿಗುವುದಿಲ್ಲ. ಪತಿಗೆ ಆರ್ಥಿಕವಾಗಿ ನೆರವಾಗುವುದಕ್ಕಾಗಿ ಮನೆಯಲ್ಲಿ ಬೀಡಿಯನ್ನೋ ಇತರ ಆರ್ಥಿಕ ಮೂಲಗಳನ್ನೋ ಪತ್ನಿ ಅವಲಂಬಿಸಿರುತ್ತಾರೆ. ಅಂದಹಾಗೆ, ಮುಸ್ಲಿಯಾರ್‍ಗಳ ಮಕ್ಕಳು ಮುಸ್ಲಿಯಾರ್ ಆಗದೇ ಇರುವುದಕ್ಕೆ ಮುಖ್ಯ ಕಾರಣ ಈ ಆರ್ಥಿಕ ದುಃಸ್ಥಿತಿಯೇ. ಅವರ ಉದ್ಯೋಗ ಸದಾ ಅನಿಶ್ಚಿತವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ, ಸಾಮಾಜಿಕ ಅನಿಷ್ಠಗಳಿಗೆ  ಅಥವಾ ತಪ್ಪು ಆಚರಣೆಗಳಿಗೆ  ಬಹಿರಂಗವಾಗಿ ವಿರೋಧ ವ್ಯಕ್ತಪಡಿಸದಷ್ಟು  ಔದ್ಯೋಗಿಕ ಅಭದ್ರತೆ ಕಾಡುತ್ತಿರುತ್ತದೆ. ಮಸೀದಿ ಆಡಳಿತ ಮಂಡಳಿಯಲ್ಲಿರುವವರಿಗೆ ಅಸಂತೃಪ್ತಿಯಾಗಬಹುದಾದ ಯಾವುದನ್ನೂ ಹೇಳದಂಥ ಮತ್ತು ಸದಾ ಅವರ ತೃಪ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರವಚನ ನೀಡಬೇಕಾದಂಥ ವಾತಾವರಣ ಇರುತ್ತದೆ. ಹೀಗೆ, ‘ರಾಜಿ ಮನಸ್ಥಿತಿ'ಯ ಹೊರತು ಅನ್ಯ ದಾರಿಯಿಲ್ಲದ ಸಂದರ್ಭವೊಂದು ಅನೇಕ ಮುಸ್ಲಿಯಾರ್‍ಗಳನ್ನು ಇವತ್ತು ಕಾಡುತ್ತಿದೆ. ಆದರೂ ಸಮಾಜ ಅವರ ಮೇಲೆ ಹೊರಿಸುತ್ತಿರುವ ಆರೋಪಗಳಿಗೆ  ಈ ಕಾರಣಗಳೆಲ್ಲ ಉತ್ತರವಾಗುವುದಿಲ್ಲ ನಿಜ. ಅನಿಷ್ಠಗಳ ವಿರುದ್ಧ ಜನಜಾಗೃತಿ ಮೂಡಿಸ ಬೇಕಾದ ವರ್ಗವೊಂದು ವೈಯಕ್ತಿಕ ಕಾರಣಗಳಿಗಾಗಿಯೋ ಮುಲಾಜಿಗಾಗಿಯೋ ಆ ಹೊಣೆಗಾರಿಕೆಯಿಂದ ನುಣುಚಿಕೊಂಡರೆ ಅದರ ದುಷ್ಫಲವನ್ನು ಇಡೀ ಸಮಾಜವೇ ಹೊರಬೇಕಾಗುತ್ತದಲ್ಲವೇ? ಅಂಥ ಸಂದರ್ಭಗಳಲ್ಲಿ ಆ ದುಷ್ಫಲ ಸ್ವತಃ ಆ ವರ್ಗವನ್ನೂ ಕಾಡುತ್ತದೆ. ಒಂದು ವೇಳೆ ಸಂಘಟನಾತ್ಮಕ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ ಇವತ್ತು ಏರ್ಪಡುತ್ತಿರುವ ಪ್ರವಚನ, ವಾದ-ಪ್ರತಿ ವಾದದಂಥ ಕಾರ್ಯಕ್ರಮಗಳ ಅರ್ಧದಷ್ಟನ್ನಾದರೂ ವರದಕ್ಷಿಣೆಯ ವಿರೋಧಕ್ಕಾಗಿ ವಿೂಸಲಿರಿಸುತ್ತಿದ್ದರೆ ಸಮಾಜದ ಪರಿಸ್ಥಿತಿಯೇ ಬೇರೆಯಿರುತ್ತಿತ್ತು. ವರದಕ್ಷಿಣೆಯ ಮದುವೆಯನ್ನು ನಡೆಸಿಕೊಡುವುದಿಲ್ಲವೆಂದು ಪ್ರತಿ ಮಸೀದಿ ಮತ್ತು ಉಸ್ತಾದರು ತೀರ್ಮಾನಿಸುವುದಾದರೆ ಹಾಗೂ ಕಾಝಿಗಳು ಈ ಬಗ್ಗೆ ಫತ್ವಾ ಹೊರಡಿಸುವುದಾದರೆ ಮುಹಮ್ಮದ್ ಮುಸ್ಲಿಯಾರ್‍ರಂಥ ‘ಬಡವರು' ಜಮಾಅತೆ ಇಸ್ಲಾಮಿಯ ಕಡೆಗೋ ಸಲಫಿಗಳ ಕಡೆಗೋ ಮೆಚ್ಚುಗೆಯ ನೋಟ ಬೀರುವುದಕ್ಕೂ ಅವಕಾಶವಿರುತ್ತಿರಲಿಲ್ಲ.
   ಒಂದು ರೀತಿಯಲ್ಲಿ, ಮುಹಮ್ಮದ್ ಮುಸ್ಲಿಯಾರ್‍ರ ಆತಂಕವನ್ನು ನಾವು ಇನ್ನೊಂದು ಕಾರಣಕ್ಕಾಗಿಯೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇವತ್ತು ರೇಶನ್ ಕಾರ್ಡ್ ಮಾಡಿಸಬೇಕೆಂದರೆ ಅದಕ್ಕೆಂದೇ ಒಂದು ವ್ಯವಸ್ಥೆಯಿದೆ. ಇಂತಿಂಥ ಸ್ಥಳಗಳಿಗೆ, ನಿರ್ದಿಷ್ಟ ದಾಖಲಾತಿಗಳೊಂದಿಗೆ ಹೋದರೆ ರೇಶನ್‍ಕಾರ್ಡ್ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಶೀತ-ನೆಗಡಿಯಾದರೆ ಎಲ್ಲಿಗೆ ಹೋಗಬೇಕು ಎಂಬುದು ಸಮಾಜಕ್ಕೆ ಚೆನ್ನಾಗಿ ಗೊತ್ತು. ಇದೊಂದೇ ಅಲ್ಲ; ಡ್ರೈವಿಂಗ್ ಲೈಸೆನ್ಸ್, ಹಾಲು, ತರಕಾರಿ, ಮಾಂಸ.. ಇವೆಲ್ಲಕ್ಕೂ ನಿರ್ದಿಷ್ಟ ಜಾಗಗಳಿವೆ ಮತ್ತು ಅಲ್ಲಿಗೆ ತೆರಳಿದರೆ ಅವನ್ನು ಖರೀದಿಸುವ ಅವಕಾಶಗಳೂ ಮುಕ್ತವಾಗಿರುತ್ತವೆ. ಆದರೆ, ಮದುವೆ ಸಂಬಂಧವನ್ನು ಕುದುರಿಸುವುದಕ್ಕೆ ನಮ್ಮಲ್ಲಿ ಏನು ವ್ಯವಸ್ಥೆಯಿದೆ? ಹೆಣ್ಣು ಅಥವಾ ಗಂಡಿನ ಹೆತ್ತವರು ಯಾರನ್ನು ಸಂಪರ್ಕಿಸಬೇಕು? ಸಿಕ್ಕ-ಸಿಕ್ಕವರಲ್ಲಿ ಮದುವೆ ಸಂಬಂಧಕ್ಕೆ ಮೊರೆ ಇಡುತ್ತಾ, ಎಲ್ಲಾದರೂ ಅಂಥ ಅವಕಾಶಗಳಿವೆಯೇ ಎಂದು ಪತ್ರಿಕೆ ಇನ್ನಿತರ ಕಡೆ ಹುಡುಕುತ್ತಾ, ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಸಿಕ್ಕವರೊಡನೆ ಗುಟ್ಟಿನಲ್ಲೆಂಬಂತೆ  ಕೇಳಿಕೊಳ್ಳುತ್ತಾ ಬದುಕುವ ಸ್ಥಿತಿಯ ಹೊರತು ಈ ವರೆಗೆ ಇದಕ್ಕೆ ಬೇರೆ ಯಾವ ಪರ್ಯಾಯ ವ್ಯವಸ್ಥೆಯನ್ನು ಮಾಡಲು ನಮಗೆ ಸಾಧ್ಯವಾಗಿದೆ? ಹೆಣ್ಣು ಮತ್ತು ಗಂಡಿನ ವಿವರವುಳ್ಳ ಸಮಗ್ರ ಮ್ಯಾರೇಜ್ ಬ್ಯೂರೋವೊಂದನ್ನು ಸ್ಥಾಪಿಸುವುದು ನಮ್ಮ ಆದ್ಯತೆಯ ಪಟ್ಟಿಯಲ್ಲಿ ಈವರೆಗೂ ಸ್ಥಾನ ಪಡೆದಿಲ್ಲವೇಕೆ? ಮದುವೆ ಸಂಬಂಧ ಎಂಬುದು ಗುಟ್ಟಿನಲ್ಲಿ, ಅವರಿವರಲ್ಲಿ ಮುಚ್ಚುಮರೆಯೊಂದಿಗೆ ಹೇಳಿಕೊಳ್ಳಬೇಕಾದ ಸಂಗತಿಯೇ? ತನ್ನ ಹೆಣ್ಣು ಮಗಳು ಮದುವೆ ಪ್ರಾಯಕ್ಕೆ ಬಂದಿರುವಳೆಂಬುದಕ್ಕಾಗಿ ಓರ್ವ ತಂದೆ ಅಥವಾ ತಾಯಿ ಮುಜುಗರ ಪಟ್ಟುಕೊಳ್ಳಬೇಕೇ? ಸೂಕ್ತ ವರ ಅಥವಾ ವಧುವಿಗಾಗಿ ಅವರು ಅವರಿವರಲ್ಲಿ ಬೇಡುತ್ತಿರಬೇಕೇ? ತನಗೆ ಸೂಕ್ತ ವರನನ್ನು ಸ್ವಯಂ ತಾನೇ ಹುಡುಕಿ ನಿರ್ಧರಿಸುವ ಸ್ವಾತಂತ್ರ್ಯ ಮತ್ತು ಅವಕಾಶ ಹೆಣ್ಣಿಗೆ ಇಲ್ಲವೆಂದಾದರೆ ಅದಕ್ಕಾಗಿ ಆಕೆಗೆ ಅತ್ಯಂತ ಪಾರದರ್ಶಕ ವ್ಯವಸ್ಥೆಯೊಂದನ್ನು ಮಾಡಿ ಕೊಡಬೇಕಾದ ಹೊಣೆಗಾರಿಕೆ ಯಾರದು? ನಮ್ಮದಲ್ಲವೇ? ಆ ಹೊಣೆಗಾರಿಕೆಯನ್ನು ನಾವೆಷ್ಟರ ಮಟ್ಟಿಗೆ ನಿಭಾಯಿಸಿದ್ದೇವೆ? ಮುಹಮ್ಮದ್ ಮುಸ್ಲಿಯಾರರ ಭೀತಿ ಕೂಡ ಇದುವೇ. ಮದುವೆ ಸಂಬಂಧ ಕೂಡಿ ಬರುವುದೇ ತುಂಬಾ ಕಷ್ಟದಲ್ಲಿ. ಅದಕ್ಕಾಗಿ ಎಷ್ಟೋ ನಿದ್ದೆಗಳನ್ನು ಕಳೆಯಬೇಕಾಗುತ್ತದೆ.
ಓಡಾಡಬೇಕಾಗುತ್ತದೆ. ಕೆಲವಾರು ನಿರಾಶೆಯ ಉತ್ತರಗಳನ್ನೂ ಆಲಿಸಬೇಕಾಗುತ್ತದೆ. ಹೀಗಿರುವಾಗ, ಕೂಡಿ ಬಂದಿರುವ ಈ ಸಂಬಂಧವನ್ನೇ ವರದಕ್ಷಿಣೆಯ ಕಾರಣಕ್ಕಾಗಿ ತಿರಸ್ಕರಿಸಿ ಬಿಟ್ಟರೆ ಹೊಸ ಸಂಬಂಧವನ್ನು ಹುಡುಕುವುದು ಹೇಗೆ? ಒಂದು ವೇಳೆ ಈ ಅವ್ಯವಸ್ಥಿತ ಮೆಟ್ರಿಮೋನಿಯಲ್ ಜಗತ್ತಿನಲ್ಲಿ ತನ್ನ ಮಗಳು ಒಂಟಿಯಾದರೆ? ಸೂಕ್ತ ವರ ಸಿಗದೇ ಹೋದರೆ?
   ‘ಪ್ಲೀಸ್ ವರದಕ್ಷಿಣೆ ಪಡೆದ ಮದುವೆಯ ಆಮಂತ್ರಣವನ್ನು ನಮಗೆ ನೀಡದಿರಿ. ಅದರಲ್ಲಿ ಹೆಣ್ಣು ಹೆತ್ತವರ ಕಣ್ಣೀರ ಹನಿಗಳಿವೆ' ಎಂಬ ಸ್ಟಿಕ್ಕರ್ ಅನ್ನು ತಯಾರಿಸಿ ಮಿತ್ರ ಸಿದ್ದೀಕ್ ಜಕ್ರಿಬೆಟ್ಟು ಅವರು ವರ್ಷಗಳ ಹಿಂದೆ ಹಲವು ಕಡೆ ಹಂಚಿದ್ದರು. ಇದೀಗ ಅದರ ಪ್ರತ್ಯಕ್ಷ  ಸಂಕೇತವಾಗಿ ಮುಹಮ್ಮದ್ ಮುಸ್ಲಿಯಾರ್ ನಮ್ಮ ಮುಂದಿದ್ದಾರೆ. ಅವರ ನೋವಿಗೆ ಸಾಂತ್ವನ ಹೇಳುತ್ತಲೇ, ವರದಕ್ಷಿಣೆರಹಿತ ಮದುವೆ ವಾತಾವರಣವೊಂದನ್ನು ನಾವೆಲ್ಲ ನಿರ್ಮಿಸಬೇಕಿದೆ.

No comments:

Post a Comment