Wednesday, February 24, 2016

  ಯಾವುದು ರಾಷ್ಟ್ರೀಯತೆ, ಯಾವುದು ರಾಷ್ಟ್ರದ್ರೋಹ?

     ಜರ್ಮನಿಯ ಪ್ರಸಿದ್ಧ ಇತಿಹಾಸಕಾರ ಆಲ್ಫ್ರೆಡ್ ರೊಸೆನ್‍ಬರ್ಗ್ ಅವರು ತನ್ನ, ‘ಫ್ಯಾಸಿಸಂ ಆ್ಯಸ್ ಎ ಮಾಸ್ ಮೂವ್‍ಮೆಂಟ್’ (Fascism As a Mass Movement) ಎಂಬ ಕೃತಿಯಲ್ಲಿ ‘ಗೂಂಡಾ ರಾಷ್ಟ್ರೀಯತೆ’ಯ ಕೆಲವು ಲಕ್ಷಣಗಳನ್ನು ದಾಖಲಿಸಿದ್ದಾರೆ. ಆ ಲಕ್ಷಣಗಳೆಲ್ಲ ಬಿಜೆಪಿ ಇವತ್ತು ಪ್ರಸ್ತುತಪಡಿಸುತ್ತಿರುವ ‘ರಾಷ್ಟ್ರೀಯತೆ’ಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಫ್ಝಲ್‍ಗುರು ಮತ್ತು ಯಾಕೂಬ್ ಮೇಮನ್ ಇಬ್ಬರೂ ಈ ದೇಶದ ನ್ಯಾಯಾಂಗ ವ್ಯವಸ್ಥೆಯ ಕುರಿತಂತೆ ಭಿನ್ನ ಬಗೆಯ ಚರ್ಚೆಯನ್ನು ಹುಟ್ಟು ಹಾಕಿದವರು. ಅಫ್ಝಲ್ ಗುರು ಮತ್ತು ಯಾಕೂಬ್ ಮೇಮನ್‍ಗೆ ವಿಧಿಸಲಾದ ಮರಣ ದಂಡನೆಯ ಶಿಕ್ಷೆಯನ್ನು ಪ್ರಶ್ನಿಸಿರುವವರಲ್ಲಿ ಅವರ ಪರವಾಗಿ ವಾದಿಸಿರುವ ವಕೀಲರು ಮಾತ್ರ ಇರುವುದಲ್ಲ. ಈ ದೇಶದ ಹಲವಾರು ಪ್ರಸಿದ್ಧ ನ್ಯಾಯವಾದಿಗಳು ಆ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ. ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಯಾಕೂಬ್ ಮೇಮನ್‍ನ ಬಗೆಗಂತೂ ಸರ್ವೋಚ್ಚ ನ್ಯಾಯಾಲಯವೇ ಗೊಂದಲದಲ್ಲಿತ್ತು ಎಂಬುದಕ್ಕೆ ರಾತ್ರಿ 3 ಗಂಟೆಗೆ ವಿಶೇಷ ಕಲಾಪ ನಡೆಸಿದ್ದೇ ಸಾಕ್ಷಿ. ಹೀಗಿರುತ್ತಾ, ಈ ಇಬ್ಬರ ಕುರಿತಾಗಿ ಸಭೆ ಏರ್ಪಡಿಸುವವರನ್ನು ಮತ್ತು ಅದರಲ್ಲಿ ಭಾಗವಹಿಸುವವರನ್ನು ‘ದೇಶದ್ರೋಹಿ’ಗಳು ಎಂದು ಕರೆಯುವುದು ಯಾವ ಬಗೆಯ ರಾಷ್ಟ್ರೀಯತೆ? ಈ ರಾಷ್ಟ್ರೀಯತೆಯನ್ನು ಪರಿಚಯಿಸಿದವರು ಯಾರು- ಸಂವಿಧಾನವೇ, ನ್ಯಾಯಾಲಯವೇ ಅಥವಾ ಬಲಪಂಥೀಯರೇ? ಹಾಗಂತ, ವಿಶ್ವವಿದ್ಯಾನಿಲಯಗಳೆಂದರೆ, ಕಿರಾಣಿ ಅಂಗಡಿಗಳಂತೆ ಅಲ್ಲವಲ್ಲ. ಮುಕ್ತ ಚರ್ಚೆಯೇ ವಿಶ್ವವಿದ್ಯಾನಿಲಯಗಳ ವಿಶೇಷತೆ. ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕಂತೂ (JNU) ಈ ಕುರಿತಂತೆ ದೊಡ್ಡ ಇತಿಹಾಸವಿದೆ. ಅಲ್ಲಿ ಪ್ರಮುಖ ಪತ್ರಕರ್ತರು, ಅನುವಾದಕರು, ಬರಹಗಾರರು, ಸಾಮಾಜಿಕ ಹೋರಾಟಗಾರರು, ಪ್ರೊಫೆಸರ್‍ಗಳು, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು, ರಾಜಕಾರಣಿಗಳು, ಉದ್ಯಮಿಗಳು, ವೈಸ್ ಚಾನ್ಸೆಲರ್‍ಗಳೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಉಪನ್ಯಾಸ ಕೊಡುತ್ತಿರುತ್ತಾರೆ. ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸುತ್ತಾರೆ. ವಿಜ್ಞಾನ ವಿಭಾಗದಲ್ಲಿ ಕಲಿಯುವ ವಿದ್ಯಾರ್ಥಿಗಳು ಕೂಡ ಸಮಾಜಶಾಸ್ತ್ರ ವಿಭಾಗದಲ್ಲಿ ಕುಳಿತು ಚರ್ಚೆಯಲ್ಲಿ ಭಾಗ ವಹಿಸುವಷ್ಟು ಇಲ್ಲಿನ ವಾದ-ತರ್ಕಗಳು ಆಸಕ್ತಿಕರವಾಗಿರುತ್ತವೆ. ವಿದ್ಯಾರ್ಥಿಗಳ ಆಲೋಚನಾ ಮಟ್ಟವನ್ನು ವಿಸ್ತಾರಗೊಳಿಸುವ ಈ ಬಗೆಯ ಚರ್ಚೆಗಳಿಂದಾಗಿಯೇ JNU ಎಮರ್ಜೆನ್ಸಿಯ ಸಂದರ್ಭದಲ್ಲೂ ಸುದ್ದಿ ಮಾಡಿದೆ. ‘ತಾನಾಶಾಹಿ ನಹೀ ಚಲೇಗಿ’ ಎಂಬ ಘೋಷಣೆಯೊಂದಿಗೆ ಇಲ್ಲಿನ ವಿದ್ಯಾರ್ಥಿಗಳು ಈ ಹಿಂದೆ ಪ್ರತಿಭಟಿಸಿದ್ದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಹೇರಲಾಗಿದ್ದ MISA ಕಾಯ್ದೆಯನ್ನು ವಿರೋಧಿಸಿ ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದರು. ಆ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಇರಾನ್‍ನ ಶಾ  ಆಡಳಿತದ ವಿರುದ್ಧ, ಫೆಲೆಸ್ತೀನನ್ನು ಇಸ್ರೇಲ್‍ಗೆ ಮಾರಾಟ ಮಾಡುವ ರೀತಿಯಲ್ಲಿದ್ದ ಕ್ಯಾಂಪ್ ಡೇವಿಡ್ ಒಪ್ಪಂದದ ವಿರುದ್ಧ JNU ಪ್ರತಿಭಟಿಸಿತ್ತು. ಪೋಲ್‍ಪಾಟ್‍ನ ಜನಾಂಗ ಹತ್ಯೆಯಿಂದಾಗಿ ಸಂಪೂರ್ಣ ವಿವಶವಾಗಿದ್ದ ಕೊಲಂಬಿಯಾಕ್ಕೆ ಆಹಾರ ಧಾನ್ಯಗಳನ್ನು ಕಳುಹಿಸಿಕೊಡುವಂತೆಯೂ ಇಲ್ಲಿ ಪ್ರತಿಭಟನೆಗಳು ನಡೆದಿದ್ದುವು. ಈ ಪ್ರಕ್ರಿಯೆ ಈಗಲೂ ಮುಂದುವರಿಯುತ್ತಿದೆ. ಒಂದು ವಿಶ್ವ ವಿದ್ಯಾನಿಲಯವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಮೇಲೆ ಈ ಮಟ್ಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತದೆಂದರೆ ಅದು ಅಲ್ಲಿನ ವಿದ್ಯಾರ್ಥಿಗಳ ಪ್ರಬುದ್ಧತೆಗೆ ಸಾಕ್ಷಿ. ತುರ್ತುಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿಯವರು ಈ ಬೆಳವಣಿಗೆಯನ್ನು ಅಪಾಯಕಾರಿಯೆಂದು ಘೋಷಿಸಿದ್ದರು. ಇದೀಗ ನರೇಂದ್ರ ಮೋದಿಯವರು ತುರ್ತುಸ್ಥಿತಿಯನ್ನು ಘೋಷಿಸದೆಯೇ ಇಂದಿರಾ ಗಾಂಧಿಯವರನ್ನು ಅನುಸರಿಸುತ್ತಿದ್ದಾರೆ. ಮೊದಲು ಹೈದರಾಬಾದ್ ವಿಶ್ವವಿದ್ಯಾನಿಲಯವನ್ನು ಈ ಅಘೋಷಿತ ತುರ್ತುಸ್ಥಿತಿಗೆ ಆಯ್ಕೆ ಮಾಡಲಾಯಿತು. ಯಾಕೂಬ್ ಮೇಮನ್‍ನ ಬಗ್ಗೆ ಸಭೆ ಏರ್ಪಡಿಸಿದ ಅಂಬೇಡ್ಕರ್ ಸ್ಟೂಡೆಂಟ್ ಯೂನಿಯನ್ (ASU) ಅನ್ನು ABVPಯು ದೇಶದ್ರೋಹಿಯೆಂದು ಗುರುತಿಸಿತು. ಬಳಿಕ ಬಿಜೆಪಿ ಸಂಸದ ಬಂಡಾರು ದತ್ತಾತ್ರೇಯ ಅವರು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ದೂರು ನೀಡಿದರು. ಬಳಿಕ ಉಪಕುಲಪತಿಯವರು ಕ್ರಮ ಕೈಗೊಂಡರು. JNU ಎರಡನೇ ಆಯ್ಕೆ. ಅಫ್ಝಲ್ ಗುರುವಿನ ವಿಷಯದಲ್ಲಿ ಏರ್ಪಡಿಸಲಾದ ಸಭೆಯನ್ನು ABVP ದೇಶದ್ರೋಹಿಯಾಗಿ ಚಿತ್ರಿಸಿತು. BJP ಸಂಸದ ಮಹೇಶ್ ಗಿರಿ ದೂರು ಕೊಟ್ಟರು. ಉಪಕುಲಪತಿಗಳು ಕ್ರಮ ಕೈಗೊಂಡರು. ಎರಡರಲ್ಲೂ ಸಮಾನತೆಯಿದೆ. ಅದೇನೆಂದರೆ, ದೇಶದ್ರೋಹವನ್ನು ತೀರ್ಮಾನಿಸುವುದು ABVP ಅಥವಾ ಬಿಜೆಪಿ.
  1950-60ರ ದಶಕದಲ್ಲಿ ಪ್ರತ್ಯೇಕ ತಮಿಳು ರಾಷ್ಟ್ರದ ಕೂಗು ಎದ್ದಿತ್ತು. ಡಿ.ಎಂ.ಕೆ. ತನ್ನ ಅಜೆಂಡಾದಲ್ಲಿ ಅದನ್ನು ಸೇರಿಸಿಯೂ ಇತ್ತು. ಮಾತ್ರವಲ್ಲ, ಮುಖ್ಯಮಂತ್ರಿ ಅಣ್ಣಾದುರೈಯವರು ಪ್ರತ್ಯೇಕ ತಮಿಳು ರಾಷ್ಟ್ರದ ಪರ ದೆಹಲಿಯಲ್ಲಿ ಮಾತಾಡಿದ್ದರು. ಅದರ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆಯೂ ವ್ಯಕ್ತವಾಯಿತು. ಆದರೆ ಪ್ರಧಾನಿ ನೆಹರೂ ಅವರು ಅಣ್ಣಾದುರೈ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ‘ಅವರ ವಾಕ್ ಸ್ವಾತಂತ್ರ್ಯವನ್ನು ಗೌರವಿಸೋಣ’ ಎಂದಷ್ಟೇ ಹೇಳಿದ್ದರು. 1960ರಲ್ಲಿ ಡಿ.ಎಂ.ಕೆ. ಪಕ್ಷವು ತನ್ನ ಅಜೆಂಡಾದಿಂದ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನೇ ಕಿತ್ತು ಹಾಕಿತು. ವಿಯೆಟ್ನಾಂ ವಿರುದ್ಧ ಅಮೇರಿಕವು ಸಾರಿದ ಯುದ್ಧವು ಅಮೇರಿಕದಲ್ಲಿ ಪರ-ವಿರೋಧಿಗಳನ್ನು ಹುಟ್ಟು ಹಾಕಿತ್ತು. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಮೇರಿಕದ ಧ್ವಜವನ್ನೇ ಸುಟ್ಟು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. 2003ರಲ್ಲಂತೂ ಅಮೇರಿಕದಲ್ಲಿ ತೀವ್ರ ಪ್ರತಿಭಟನೆ ಗಳು ಕಾಣಿಸಿಕೊಂಡವು. ಬರ್ಕ್‍ಲಿಯಿಂದ ಬ್ರೋನ್‍ವರೆಗೆ ‘ಇರಾಕ್ ಯುದ್ಧ ವಿರೋಧಿ’ ಪ್ರತಿಭಟನೆಗಳು ಕಾಣಿಸಿಕೊಂಡವು. ಆದರೆ ಈ ಯಾವ ಪ್ರಕರಣದಲ್ಲೂ ಯಾರ ಮೇಲೂ ಅಮೇರಿಕ ದೇಶದ್ರೋಹಿ ಪ್ರಕರಣವನ್ನು ದಾಖಲಿಸಲಿಲ್ಲ. ಅಷ್ಟಕ್ಕೂ, ದೇಶದ್ರೋಹದ ಮಾನದಂಡ ಏನೆಲ್ಲ? ಯಾವ ಕಾರಣಕ್ಕಾಗಿ ಓರ್ವನನ್ನು, ಒಂದು ಗುಂಪನ್ನು, ಒಂದು ಸಂಘಟನೆಯನ್ನು ದೇಶದ್ರೋಹಿಯೆಂದು ಕರೆಯಬಹುದು? ಪಾಕಿಸ್ತಾನ್ ಜಿಂದಾಬಾದ್ ಎಂದು ಕರೆಯುವುದು ದೇಶದ್ರೋಹವಾಗುತ್ತದೆಂದಾದರೆ, ಗಣರಾಜ್ಯವನ್ನು ‘ಕರಾಳ ದಿನ’ವನ್ನಾಗಿ ಆಚರಿಸುವುದಕ್ಕೆ ಏನೆಂದು ಹೆಸರು? ಭಾರತೀಯ ಸಂವಿಧಾನದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರನ್ನು ಏನೆಂದು ಕರೆಯಬೇಕು? ಗಾಂಧೀಜಿಯವರ ಹತ್ಯೆಗೆ ಸಿಹಿ ಹಂಚುವುದು ಯಾವ ಕೆಟಗರಿಯಲ್ಲಿ ಬರುತ್ತದೆ? ನಾಥೂರಾಂ ಗೋಡ್ಸೆಯನ್ನು ಮಹಾನ್ ದೇಶಭಕ್ತನೆಂದು ಕರೆದು ಆತನ ಪುತ್ಥಳಿ ಯನ್ನು ಸ್ಥಾಪಿಸುವುದಾಗಿ ಘೋಷಿಸಿರುವುದಕ್ಕೆ ABVP ಮತ್ತು BJPಯ ನಿಲುವೇನು? ಅಖಿಲ ಭಾರತ ಹಿಂದೂ ಮಹಾಸಭಾವು ಇವೆಲ್ಲವನ್ನು ಮಾಡಿದ್ದರೂ ಮತ್ತು ಮತ್ತೆ ಮತ್ತೆ ಮಾಡುತ್ತಿದ್ದರೂ ABVPಯ ಗುಪ್ತಚರರು ಯಾಕೆ ಈ ಬಗ್ಗೆ ಬಂಡಾರು ದತ್ತಾತ್ರೇಯರಿಗೋ ಮಹೇಶ್ ಗಿರಿಗೋ ದೂರು ಕೊಟ್ಟಿಲ್ಲ? ರಾಜನಾಥ್ ಸಿಂಗ್‍ರವರು ಯಾಕೆ ಇದರ ಹಿಂದೆ ವಿದೇಶಿ ಶಕ್ತಿಗಳ ಕೈವಾಡವನ್ನು ಶಂಕಿಸಿಲ್ಲ? ಸಾಕ್ಷಿ ಮಹಾರಾಜ್, ಪ್ರಾಚಿ, ಕಿರಣ್ ರಿಜುಜು, ಸ್ಮೃತಿ ಇರಾನಿ, ಒ.ಪಿ. ಶರ್ಮಾ ಮತ್ತಿತರರು ಯಾಕೆ ಈ ಬಗ್ಗೆ ಒಂದೂ ಮಾತಾಡಿಲ್ಲ? ದೇಶಪ್ರೇಮವೆಂಬುದು ಇಷ್ಟೊಂದು ವೈರುಧ್ಯಗಳ ಹೆಸರೇ? ಅದರಲ್ಲೂ ವಿಧಗಳಿವೆಯೇ? ನಿಜವಾಗಿ, ಪಾಕ್‍ನ ಪರವೋ ಬಾಂಗ್ಲಾ, ಲಂಕಾ, ಅಮೇರಿಕದ ಪರವೋ ಘೋಷಣೆ ಕೂಗುವುದರಿಂದ ಆಗುವಂಥದ್ದೇನೂ ಇಲ್ಲ. ಅಂಥ ಘೋಷಣೆಗಳಿಂದ ಈ ದೇಶದಲ್ಲಿ ಹಿಂಸಾಚಾರ ಆಗುವುದೂ ಇಲ್ಲ. ಹಾಗಂತ ನಾನದನ್ನು ಸಮರ್ಥಿಸುತ್ತಿಲ್ಲ. ಈ ದೇಶದಲ್ಲಿ ನಿಂತು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಬೇಕಾದ ಯಾವ ಅಗತ್ಯವೂ ಯಾರಿಗೂ ಇಲ್ಲ. ಆದರೆ, ಈ ಘೋಷಣೆ ಬೀರುವ ಪರಿಣಾಮವು ‘ದಲಿತರನ್ನು ನಾಯಿಗಳು’ ಅನ್ನುವುದಕ್ಕಿಂತಲೂ ದೊಡ್ಡದೇ? ಹತ್ಯಾಕಾಂಡಕ್ಕೆ ನೇತೃತ್ವ ಕೊಡುವುದಕ್ಕಿಂತಲೂ ದೊಡ್ಡದೇ? ಗುಜರಾತ್‍ನಲ್ಲಿ ಸಾವಿರಕ್ಕಿಂತಲೂ ಅಧಿಕ ಮಂದಿಯನ್ನು ಹತ್ಯೆಗೈಯಲಾದ ಕೃತ್ಯವು ಪಾಕಿಸ್ತಾನ್ ಜಿಂದಾಬಾದ್‍ನ ಎದುರು ತೃಣ ಸಮಾನವೇ? ಮುಝಫ್ಫರ್ ನಗರ್ ಹತ್ಯಾಕಾಂಡವನ್ನು ‘ಪಾಕಿಸ್ತಾನ್ ಜಿಂದಾಬಾದ್’ನೆದುರು ಮುಖಾಮುಖಿಯಾಗಿಸಿದರೆ, ಹತ್ಯಾಕಾಂಡ ಹಗುರವೂ ಜಿಂದಾಬಾದ್ ಭಾರವೂ ಆಗಿಬಿಡುವುದೇ? ದಾದ್ರಿಯಲ್ಲಿ ಥಳಿಸಿ ಕೊಲ್ಲಲಾಯಿತಲ್ಲ, ಹರ್ಯಾಣದಲ್ಲಿ ದಲಿತರನ್ನು ಬೆಂಕಿ ಕೊಟ್ಟು ಸುಟ್ಟು ಹಾಕಲಾಯಿತಲ್ಲ, ಇನ್ನೆಲ್ಲೋ ದೇವಸ್ಥಾನ ಪ್ರವೇಶಿಸಿದುದಕ್ಕಾಗಿ ಹತ್ಯೆ ನಡೆಸಲಾಯಿತಲ್ಲ.. ಇವೆಲ್ಲ ‘ಪಾಕಿಸ್ತಾನ್ ಜಿಂದಾಬಾದ್’ನ ಮುಂದೆ ಜುಜುಬಿಯೇ? ಅಲ್ಲ ಎಂದಾದರೆ, ಇವರನ್ನೇಕೆ ನ್ಯಾಯಾಲಯದ ಆವರಣದಲ್ಲಿ ಥಳಿಸಲಾಗಿಲ್ಲ? ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿಲ್ಲ? ರಾಜನಾಥ್ ಸಿಂಗ್‍ರಿಂದ ಹಿಡಿದು ಅಮಿತ್ ಶಾರ ವರೆಗೆ ಯಾಕೆ ಯಾರೂ ಇವರನ್ನು ದೇಶದ್ರೋಹಿಗಳೆಂದು ಕರೆದಿಲ್ಲ?
  ನಿಜವಾಗಿ, ವೇಮುಲ, ಕನ್ಹಯ್ಯ ಅಥವಾ ಅಲಹಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ರಿಚಾ ಸಿಂಗ್ ಮುಂತಾದವರೆಲ್ಲ ಹಿಂದುಳಿದ ವರ್ಗದಿಂದ ಬಂದವರು. ಅವರ ಭಾಷೆ, ಆಹಾರ, ಆಲೋಚನೆ, ಮಾತುಗಾರಿಕೆ ಯಾವುವೂ ಇವತ್ತು ರಾಷ್ಟ್ರೀಯತೆಯ ಡಂಗುರ ಬಾರಿಸುವವರಿಗೆ ಜೀರ್ಣವಾಗುವಂಥದ್ದಲ್ಲ. ಯಾಕೆಂದರೆ, ಈ ಸ್ವಘೋಷಿತ ರಾಷ್ಟ್ರ ಪ್ರೇಮಿಗಳ ರಾಷ್ಟ್ರೀಯತೆ ನಿಂತಿರುವುದೇ ವೇಮುಲನಂಥವರ ಸಂಕಟಗಳ ಮೇಲೆ. ಕನ್ಹಯ್ಯ, ವೇಮುಲ, ರಿಚಾರು ಪ್ರತಿನಿಧಿಸುವ ಸಮುದಾಯದ ಮಂದಿ ತಲೆತಲಾಂತರಗಳಿಂದ ಇವರಿಂದ ಅವಮಾನ ಅನುಭವಿಸಿದ್ದಾರೆ. ಅಸಮಾನತೆಯ ನೋವನ್ನು ಉಂಡಿದ್ದಾರೆ. ಹಕ್ಕುಗಳಿಂದ ವಂಚಿತರಾಗಿದ್ದಾರೆ. ಮನುಷ್ಯರೆಂಬ ಪರಿಗಣನೆಗೂ ಒಳಗಾಗದೇ ಜೀತದಾಳುಗಳಂತೆ ಹೊಲಗಳಲ್ಲಿ ದುಡಿದಿದ್ದಾರೆ. ಕನ್ಹಯ್ಯ ಮತ್ತು ವೇಮುಲರ ಮಾತುಗಳಲ್ಲಿ ಕಾಣಿಸುವ ಆಕ್ರೋಶದ ಹಿಂದೆ ಈ ಕಾರಣಗಳನ್ನೂ ಹುಡುಕಬೇಕಾಗಿದೆ. ಆದರೆ ರಾಷ್ಟ್ರೀಯತೆ, ರಾಷ್ಟ್ರ ಪ್ರೇಮ, ರಾಷ್ಟ್ರದ್ರೋಹ ಎಂದೆಲ್ಲಾ ಹೇಳುವ ಮಂದಿಗೆ ಈ ದಮನಿತರ ಭಾಷೆ ಕರ್ಕಶವಾಗಿ ಕೇಳಿಸುತ್ತಿದೆ. ಅವರ ಆಲೋಚನೆಗಳು ದೇಶದ್ರೋಹಿಯಂತೆ ಗೋಚರಿಸುತ್ತದೆ. ತಮ್ಮ ಹಿಂಸಾತ್ಮಕ ಇತಿಹಾಸ ವನ್ನು ಅವರು ತೆರೆಯುತ್ತಿರುವರೆಂಬ ಭಯ ಆಗುತ್ತಿದೆ. ಆದ್ದರಿಂದಲೇ, ‘ಸಕಲ ರೋಗ ನಿವಾರಕ’ವಾಗಿ ಅವರು ರಾಷ್ಟ್ರೀಯತೆ ಎಂಬ ಅಸ್ತ್ರವನ್ನು ಎತ್ತಿಕೊಂಡಿದ್ದಾರೆ. ರಾಷ್ಟ್ರೀಯತೆಯು ಎಲ್ಲ ಜಾತಿ, ಜನಾಂಗ, ಭಾಷೆ, ಧರ್ಮಕ್ಕಿಂತ ಮೇಲು ಎಂದು ಹೇಳುತ್ತಿದ್ದಾರೆ. ಜಾತಿ-ಜನಾಂಗದ ಹೆಸರಲ್ಲಿ ಇವತ್ತು ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುವುದು ಮತ್ತು ಪೂರ್ವ ಇತಿಹಾಸದ ಬರ್ಬರತೆಗಳನ್ನು ನೆನಪಿಸುವುದು ರಾಷ್ಟ್ರೀಯತೆಗೆ ವಿರುದ್ಧ ಎಂದು ನಂಬಿಸುತ್ತಿದ್ದಾರೆ. ಅಷ್ಟಕ್ಕೂ, ಈ ರಾಷ್ಟ್ರೀಯತೆಯು ಭಾರತೀಯ ಸಂವಿಧಾನದಿಂದ ಆಯ್ದುಕೊಂಡದ್ದಲ್ಲ. ಈ ರಾಷ್ಟ್ರೀಯತೆಯ ಚೌಕಟ್ಟಿಗೆ ಸಂವಿಧಾನ ಮಾರ್ಗದರ್ಶಿಯೂ ಅಲ್ಲ. ಈ ರಾಷ್ಟ್ರೀಯತೆಯು ಹೊರಗೆ ತೀರಾ ಸಾಧುವಾಗಿ ಕಂಡರೂ ಒಳಗೆ ಒಂದೇ ಧರ್ಮ, ಒಂದೇ ಸಂಸ್ಕೃತಿ, ಒಂದೇ ಆಹಾರ ಕ್ರಮ, ಒಂದೇ ಭಾಷೆ.. ಮುಂತಾದ ಭೂಯಿಷ್ಟ ವಿಷಯಗಳಿಂದ ತುಂಬಿಕೊಂಡಿದೆ. ಆದ್ದರಿಂದಲೇ, ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವಾಗ ಕೆರಳುವ ಈ ರಾಷ್ಟ್ರೀಯತೆ, ‘ಏಕ್ ಧಕ್ಕಾ ಔರ್ ದೋ’ ಎಂದು ಹೇಳುವಾಗ ಸಂಭ್ರಮಿಸುತ್ತದೆ. ಸಂವಿಧಾನ ದಿನವನ್ನು ಕರಾಳ ದಿನವಾಗಿ ಆಚರಿಸುವಾಗ ಈ ರಾಷ್ಟ್ರೀಯತೆಗೆ ಮಾತೇ ಬರುವುದಿಲ್ಲ. ಕೊಂದವರು ಮತ್ತು ಕೊಲೆಗೀಡಾಗುವವರ ಧರ್ಮವನ್ನು ನೋಡಿ ಈ ರಾಷ್ಟ್ರೀಯತೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತದೆ. ಅಂದಹಾಗೆ, ಹೈದರಾಬಾದ್ ಮತ್ತು JNU ಪ್ರಕರಣದಿಂದ ಆಗಿರುವ ಒಂದೇ ಒಂದು ಲಾಭ ಎಂದರೆ, ಈ ತಥಾಕಥಿತ ರಾಷ್ಟ್ರೀಯವಾದಿಗಳ ರಾಷ್ಟ್ರೀಯತೆಯು ಎಷ್ಟು ಬೋಗಸ್ ಎಂಬುದು ಬಹಿರಂಗವಾದದ್ದು. ಈ ರಾಷ್ಟ್ರೀಯತೆಯು ಸಂಪೂರ್ಣವಾಗಿ ಭ್ರಮೆ, ಭಾವನೆ ಮತ್ತು ಪ್ರತಿಶತಃ ನೂರರಷ್ಟು ಜನಾಂಗೀಯತೆಯಿಂದ ತುಂಬಿರುವಂಥದ್ದು. ಇದು ವಾಸ್ತವಕ್ಕೆ ಮುಖಾಮುಖಿಯಾಗದ ಬರೇ ಒಂದು ಆವೇಶ. ಈ ರಾಷ್ಟ್ರೀಯತೆಯ ಎದುರು ವೇಮುಲ ಮತ್ತು ಕನ್ಹಯ್ಯ ರಾಷ್ಟ್ರ ದ್ರೋಹಿಗಳಾಗದೇ ಇರುವುದಕ್ಕೆ ಸಾಧ್ಯವೇ ಇರಲಿಲ್ಲ. ಬಹುಶಃ,
  ಖ್ಯಾತ ಪತ್ರಕರ್ತ ರಾಜ್‍ದೀಪ್ ಸರ್ದೇಸಾೈಯವರು ‘ನಾನೂ ದೇಶದ್ರೋಹಿ’ ಎಂದಿರುವುದು ಈ ಗೂಂಡಾ ರಾಷ್ಟ್ರೀಯತೆಗೆ ಚೆನ್ನಾಗಿಯೇ ಒಪ್ಪುತ್ತದೆ.



No comments:

Post a Comment