
ಹಾಗಂತ, ಭಾರತ, ಚೀನಾ, ನೇಪಾಳಗಳಲ್ಲಿ ಗಂಡು ಮಗುವಿನ ಮೇಲೆ ವಿಪರೀತ ಪ್ರೀತಿಯಿದೆ ಎಂಬುದನ್ನು ತಿರಸ್ಕರಿಸಬೇಕಿಲ್ಲ. ಅದೇ ವೇಳೆ, ಗಲ್ಫ್ ರಾಷ್ಟ್ರಗಳಲ್ಲಿ ಲಿಂಗಪತ್ತೆ ಪರೀಕ್ಷೆಯು ತೀರಾ ಸಾಮಾನ್ಯವಾಗಿದೆ. ಅಲ್ಲಿ ಭ್ರೂಣದ ಲಿಂಗವನ್ನು ಬಹಿರಂಗಪಡಿಸುವುದು ಅಪರಾಧವೇ ಅಲ್ಲ. ಪ್ರಸವಪೂರ್ವದಲ್ಲೇ ಪ್ರತಿ ಗರ್ಭಿಣಿಗೂ ಹುಟ್ಟುವ ಮಗು ಗಂಡೋ ಹೆಣ್ಣೋ ಎಂಬುದು ಮೊದಲೇ ಗೊತ್ತಿರುತ್ತದೆ. ಗರ್ಭಧರಿಸಿ 7 ವಾರಗಳಲ್ಲೇ ಭ್ರೂಣದ ಲಿಂಗವನ್ನು ಪತ್ತೆ ಹಚ್ಚುವ ತಂತ್ರಜ್ಞಾನವನ್ನು ದುಬೈ, ಶಾರ್ಜಾ, ಅಬೂಧಾಬಿ ಮತ್ತು ಅಲ್‍ಐನ್‍ಗಳು 2010ರಲ್ಲಿ ಅಳವಡಿಸಿಕೊಂಡಿತ್ತು. ಗರ್ಭಿಣಿಯಿಂದ ಒಂದು ಹನಿ ರಕ್ತವನ್ನು ಪಡೆದು ಈ ಪತ್ತೆ ಕಾರ್ಯವನ್ನು ನಡೆಸಲಾಗುವುದು ಎಂದು ಅದು ಘೋಷಿಸಿತ್ತು. ಆ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ನಡೆದ ಚರ್ಚೆ ತೀರಾ ಸ್ವಾರಸ್ಯಕರವಾಗಿತ್ತು. ಚರ್ಚೆ ನಡೆದಿದ್ದು ಭ್ರೂಣಹತ್ಯೆಯ ಸುತ್ತ ಆಗಿರಲಿಲ್ಲ. ಈ ತಂತ್ರಜ್ಞಾನವು ಎಷ್ಟು ನಂಬಲರ್ಹ ಮತ್ತು ಭೂಣದ ಲಿಂಗದ ಪತ್ತೆ ಕಾರ್ಯ ಎಷ್ಟು ನಿಖರ ಎಂಬುದಾಗಿ ಹೆಚ್ಚಿನ ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಯಾಕೆಂದರೆ, ಹೆಣ್ಣು ಮತ್ತು ಗಂಡನ್ನು ಸಮಾನವಾಗಿ ಸ್ವೀಕರಿಸುವ ವಾತಾವರಣವೊಂದು ಗಲ್ಫ್ ರಾಷ್ಟ್ರಗಳಲ್ಲಿದೆ. ಹಾಗಂತ, ಅದು ಕಾನೂನಿನ ಭಯದಿಂದ ಹುಟ್ಟಿ ಕೊಂಡದ್ದಲ್ಲ. ಹೆಣ್ಣು ಮಗುವನ್ನು ಕೊಂದವರನ್ನು ನಾಳೆ ದೇವನು ಪರಲೋಕದಲ್ಲಿ ಪ್ರಶ್ನಿಸಿ ಕಠಿಣ ಶಿಕ್ಷೆಗೊಳಪಡಿಸುತ್ತಾನೆ (81: 8-9) ಎಂಬ ಪವಿತ್ರ ಕುರ್‍ಆನಿನ ಘೋಷಣೆ ಹಾಗೂ ಹೆಣ್ಣು ಮಕ್ಕಳನ್ನು ಪೋಷಿಸಿ ಬೆಳೆಸಿ ಸಂಸ್ಕಾರ ಕಲಿಸಿದ ಹೆತ್ತವರಿಗೆ ಸ್ವರ್ಗ ಇದೆ ಎಂದ ಪ್ರವಾದಿಯವರ(ಸ) ಉಪದೇಶಗಳು ಅದರ ಹಿಂದಿದೆ. ನಿಜವಾಗಿ, ಹುಟ್ಟುವ ಮಗು ಗಂಡೋ ಹೆಣ್ಣೋ ಎಂಬುದನ್ನು ಪ್ರಸವಪೂರ್ವದಲ್ಲೇ ಹೇಳಿ ಬಿಡುವುದನ್ನು ನಾವು ಬರೇ ನಕಾರಾತ್ಮಕ ದೃಷ್ಟಿಕೋನದಿಂದಲೇ ವ್ಯಾಖ್ಯಾನಿಸಬೇಕಿಲ್ಲ. ಮಗು ದೇವದತ್ತವಾದದು, ಅದೊಂದು ಉಡುಗೊರೆ ಎಂಬ ನಂಬಿಕೆ ಬಹುತೇಕ ಪ್ರತಿಯೋರ್ವರಲ್ಲೂ ಇರುತ್ತದೆ. ಪತ್ನಿ ಗರ್ಭಿಣಿಯಾದ ಕೂಡಲೇ ಪತಿಯ ದಿನಚರಿಗಳೇ ಬದಲಾಗಿ ಬಿಡುತ್ತದೆ. ಆಕೆ ವಿಶೇಷ ಆದರಕ್ಕೆ ಪಾತ್ರವಾಗುತ್ತಾಳೆ. ಅತ್ತೆಗೆ ಇಷ್ಟವಾಗದ ಸೊಸೆ ಕೂಡ ಗರ್ಭಿಣಿಯಾದ ಕೂಡಲೇ ಇಷ್ಟವಾಗುವುದಿದೆ. ಮನೆಯಲ್ಲಿ ಒಂದು ಬಗೆಯ ನಿರೀಕ್ಷೆಯನ್ನು ಆಕೆ ಹುಟ್ಟಿಸಿರುತ್ತಾಳೆ. ಮಗುವಿನ ಬಗ್ಗೆ ಪತಿ ಮತ್ತು ಪತ್ನಿ ವಿವಿಧ ಬಗೆಯ ಕನಸುಗಳನ್ನು ಕಾಣತೊಡಗುತ್ತಾರೆ. ತಮ್ಮ ಗೆಳೆಯರ, ನೆರೆಯವರ ಅಥವಾ ಕುಟುಂಬಸ್ಥರ ಮಕ್ಕಳನ್ನು ಕಲ್ಪಿಸುತ್ತಾ ತನಗೆ ಬರಲಿರುವ ಮಗುವನ್ನು ಹೇಗೆ ಬೆಳೆಸಬೇಕು, ಯಾವ ಬಗೆಯ ಶಿಕ್ಷಣವನ್ನು ನೀಡಬೇಕು, ಎಷ್ಟು ಸಮಯವನ್ನು ಮಗುವಿನೊಂದಿಗೆ ಕಳೆಯಬೇಕು ಎಂಬೆಲ್ಲ ಕನಸುಗಳನ್ನು ಕಾಣುತ್ತಿರುತ್ತಾರೆ. ಅತ್ತೆಗೂ ಅವರದ್ದೇ ಆದ ಕನಸುಗಳಿರುತ್ತವೆ. ಅದು ಆ ಮನೆಯ ಮೊದಲ ಮಗು ಎಂದಾದರೆ ಮನೆಯಲ್ಲಿರುವ ಸಡಗರವೇ ಬೇರೆ. ಅತ್ತೆ ಮತ್ತು ಮಾವ ಎಲ್ಲೇ ಹೋದರೂ ಸೊಸೆಗೆ ಏನನ್ನಾದರೂ ತಂದೇ ತರುತ್ತಾರೆ. ಭ್ರೂಣದ ಬೆಳವಣಿಗೆಗೆ ತಮ್ಮದೇ ಆದ ಗಿಡಮೂಲಿಕೆಗಳನ್ನೋ ಸೊಪ್ಪು ತರಕಾರಿಗಳನ್ನೋ ತರುತ್ತಾರೆ. ಪದಾರ್ಥ ಮಾಡಿ ನೀಡುತ್ತಾರೆ. ತವರು ಮನೆಯಲ್ಲೂ ಒಂದು ಬಗೆಯ ಸಡಗರ ಇರುತ್ತದೆ. ಗರ್ಭಿಣಿಯ ಹೊಟ್ಟೆಯ ಆಕಾರವನ್ನು ನೋಡಿ ಕಣಿ ಹೇಳುವುದೂ ಇದೆ. ಮುಂದೆ ಬರುವ ಮಗು ಗಂಡೇ ಆಗಿರುತ್ತದೆ ಎಂದು ಹೊಟ್ಟೆ ನೀವಿ ಕೆಲವರು ಅಂದಾಜಿಸುವುದಿದೆ. ಇಂಥ ಕಣಿಗಳ ಆಧಾರದಲ್ಲಿ ಹುಟ್ಟಲಿರುವ ಮಗುವಿಗೆ ಮನದಲ್ಲೇ ಪತಿ-ಪತ್ನಿ ಕುಲಾವಿ ಹೊಲಿಯುತ್ತಾರೆ. ಹೆಣ್ಣಾದರೆ ಇದು, ಗಂಡಾದರೆ ಇದು ಎಂದು ತಮ್ಮಿಷ್ಟದ ಹೆಸರನ್ನು ಹುಡುಕಿ ಇಟ್ಟಿರುತ್ತಾರೆ. ನಿಜವಾಗಿ, ಖಚಿತತೆ ಇಲ್ಲದೇ ಮನದಲ್ಲೇ ಮಂಡಿಗೆ ಸವಿಯುವ ರೀತಿಯ ವರ್ತನೆಗಳಿವು. ಒಂದು ವೇಳೆ, ಈ ಗರ್ಭದ ಅವಧಿಯಲ್ಲೇ ಮಗುವಿನ ಲಿಂಗ ಗೊತ್ತಾಗುವುದಾದರೆ ಇಲ್ಲಿಯ ವರ್ತನೆಗಳಲ್ಲೆಲ್ಲ ನಿಖರತೆ ಮತ್ತು ಖಚಿತತೆ ಇರಲಾರದೇ? ಹುಟ್ಟಲಿರುವ ಮಗು ಹೆಣ್ಣು ಎಂದು ಗೊತ್ತಾಗಿರುವ ಕುಟುಂಬದ ವರ್ತನೆಗೂ ಅದು ಗೊತ್ತಿಲ್ಲದ ಕುಟುಂಬದ ವರ್ತನೆಗೂ ನಡುವೆ ಸಾಕಷ್ಟು ವ್ಯತ್ಯಾಸ ಇದ್ದೇ ಇರುತ್ತದೆ. ಹುಟ್ಟಲಿರುವ ಮಗು ಹೆಣ್ಣೋ ಗಂಡೋ ಎಂಬುದು ಖಚಿತವಾಗಿ ಗೊತ್ತಿರುವ ಕುಟುಂಬಕ್ಕೆ ಮಗುವನ್ನು ಸ್ವೀಕರಿಸುವುದಕ್ಕೆ ಸಾಕಷ್ಟು ಸಮಯ ಲಭ್ಯವಾಗಿರುತ್ತದೆ. ಹೆಣ್ಣು ಮಗು ಎಂದು ಖಚಿತವಾಗಿ ಗೊತ್ತಿರುವುದರಿಂದ ಪತಿ-ಪತ್ನಿ-ಕುಟುಂಬ ಗೊಂದಲದಲ್ಲಿರುವುದಿಲ್ಲ. ಗರ್ಭಿಣಿಯಲ್ಲಿ ಹೆಣ್ಣು ಮಗುವಿಗೆ ಪೂರಕವಾದ ಆಲೋಚನೆಗಳು, ಅದನ್ನು ಬೆಳೆಸುವ ವಿಧಾನಗಳು ಮತ್ತು ಇನ್ನಿತರ ಹೆಣ್ಣು ಸಂಬಂಧಿ ಚಿಂತನೆಗಳು ನಡೆಯುತ್ತಿರುತ್ತವೆ. ತಾಯಿಯ ಚಟುವಟಿಕೆಗಳು ಭ್ರೂಣದ ಮೇಲೆ ಪ್ರಭಾವ ಬೀರುವುದರಿಂದಲೂ ಭ್ರೂಣದ ಲಿಂಗಮೊದಲೇ ಗೊತ್ತಾಗುವುದಕ್ಕೆ ಮಹತ್ವವಿದೆ. ಗರ್ಭಿಣಿ ಮಹಿಳೆಗೂ ಭ್ರೂಣಕ್ಕೂ ನಡುವೆ ಒಂದು ಬಗೆಯ ಅನುಸಂಧಾನ ಸಹಜವಾದುದು. ಪ್ರಸವಕ್ಕಿಂತ ಸುಮಾರು 4 ತಿಂಗಳ ಮೊದಲೇ ಭ್ರೂಣಾವಸ್ಥೆಯಲ್ಲಿರುವ ಮಗು ಎಚ್ಚರದಿಂದ ತಾಯಿಯ ಚಟುವಟಿಕೆಯನ್ನು ಆಲಿಸುತ್ತಿರುತ್ತದೆ. ಆಕೆಯ ಮಾತು, ಗುನುಗುನಿಸುವ ಹಾಡು, ಬೇಸರ, ಒತ್ತಡ ಎಲ್ಲವೂ ಒಂದು ಹಂತದವರೆಗೆ ಗರ್ಭದೊಳಗಿರುವ ಮಗುವಿನ ಮೇಲೂ ಪರಿಣಾಮ ಬೀರುತ್ತಿರುತ್ತದೆ. ಇಂಥ ಸ್ಥಿತಿಯಲ್ಲಿ, ಭ್ರೂಣದ ಬಗ್ಗೆ ತಾಯಿಗೆ ಖಚಿತವಾಗಿ ಗೊತ್ತಿರುವುದು ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗಬಹುದು. ಮಗುವನ್ನು ಸ್ವಾಗತಿಸುವುದಕ್ಕೆ ಮಾತ್ರವಲ್ಲ, ಬೆಳೆಸುವ ಮತ್ತು ಉತ್ತಮ ನಾಗರಿಕಳಾಗಿಸುವ ವಿಷಯದಲ್ಲೂ ಸಿದ್ಧತೆಗೆ ಸಾಕಷ್ಟು ಸಮಯ ಸಿಗಬಹುದು. ಹುಟ್ಟಿದ ಬಳಿಕವೇ ಮಗು ಹೆಣ್ಣು ಅಥವಾ ಗಂಡು ಎಂದು ಗೊತ್ತಾಗುವುದರಲ್ಲಿ ಈ ಪೂರ್ವ ಸಿದ್ಧತೆಗಿರುವ ಅವಕಾಶಗಳೇ ತಪ್ಪಿ ಹೋಗುತ್ತವೆ. ಅಷ್ಟಕ್ಕೂ,
ಲಿಂಗಪತ್ತೆ ಪರೀಕ್ಷೆಯನ್ನು ಕಡ್ಡಾಯಗೊಳಿಸುವುದು ಮತ್ತು ಭ್ರೂಣದ ಲಿಂಗವನ್ನು ಮೊದಲೇ ಬಹಿರಂಗಪಡಿಸುವುದರಿಂದ ನಕಾರಾತ್ಮಕ ಪರಿಣಾಗಳೇನೂ ಆಗಲ್ಲ ಎಂದು ಹೇಳುತ್ತಿಲ್ಲ. ಹೆಣ್ಣಿನ ಬಗ್ಗೆ ಈ ದೇಶದಲ್ಲಿ ದ್ವಿತೀಯ ದರ್ಜೆಯ ಇಮೇಜು ಇದೆ. ತಾತ್ಸಾರತೆಯೂ ಇದೆ. ತಂದೆ-ತಾಯಿಯನ್ನು ಕೊನೆಯ ವರೆಗೂ ನೋಡುವವ ಎಂಬ ಹಣೆಪಟ್ಟಿಯೊಂದನ್ನು ಗಂಡಿಗೆ ಈ ಸಮಾಜ ಅಂಟಿಸಿರುವುದರಿಂದ ಮತ್ತು ಹೆಣ್ಣು ಹೇಗೂ ಮನೆ ಬಿಟ್ಟು ಹೋಗುವವಳು ಎಂಬ ಭಾವನೆ ಬಲವಾಗಿರುವುದರಿಂದ ಗಂಡು ಮಗು ‘ಚಿನ್ನ’ವಾಗಿದೆ. ಹೆಣ್ಣು ಮಗು ಬೆಳ್ಳಿಯೋ ಹಿತ್ತಾಳೆಯೋ ಅಥವಾ ಕೆಲವು ಕುಟುಂಬಗಳಿಗೆ ಕಬ್ಬಿಣವೋ ಆಗಿದೆ. ಆದರೂ ಈ ಆಧುನಿಕ ಕಾಲದಲ್ಲಿ ಈ ಒಟ್ಟು ವಿಷಯಗಳ ಮೇಲೆ ಮರು ಅವಲೋಕನವೊಂದು ನಡೆಯುವುದು ಅಪರಾಧವೇನೂ ಅಲ್ಲವಲ್ಲ. 20 ವರ್ಷಗಳ ಹಿಂದಿನ ಕೌಟುಂಬಿಕ ಪದ್ಧತಿಯು ಇವತ್ತಿನದ್ದಲ್ಲ. ಅವಿಭಕ್ತ ಕುಟುಂಬವು ವಿಭಕ್ತವಾಗಿ ಇವತ್ತು ಅಣು ಕುಟುಂಬಗಳಾಗಿ ಮಾರ್ಪಟ್ಟಿವೆ. ಮಕ್ಕಳ ಬಗ್ಗೆ ಲೆಕ್ಕಾಚಾರಗಳು ಶುರುವಾಗಿವೆ. ಮನೆ ತುಂಬ ಮಕ್ಕಳು ಎಂಬ ಮಾತು ಹಳತಾಗಿದೆ. ಒಂದೋ ಎರಡೋ ಮಕ್ಕಳನ್ನು ಹೊಂದಲು ತೀರ್ಮಾನಿಸಿ ಅದಕ್ಕಾಗಿ ಮಾನಸಿಕ ಮತ್ತು ಆರ್ಥಿಕ ಸಿದ್ಧತೆ ನಡೆಸುವ ದಂಪತಿಗಳು ಹೆಚ್ಚಾಗುತ್ತಿದ್ದಾರೆ. ಹಳ್ಳಿಗಳು ಖಾಲಿಯಾಗುತ್ತಾ, ಪಟ್ಟಣಗಳು ಗಿಜಿ ಗುಡುತ್ತಾ ಸಾಗುತ್ತಿವೆ. ಆದ್ದರಿಂದ 1994ರಲ್ಲಿ ಲಿಂಗಪತ್ತೆ ಪರೀಕ್ಷೆಯ ವಿರುದ್ಧ ನಿರ್ಬಂಧ ಹೇರಲು ಏನೆಲ್ಲ ಕಾರಣಗಳಿದ್ದುವೋ ಆ ಎಲ್ಲ ಕಾರಣಗಳು ಈಗಲೂ ಇವೆ ಎಂದು ಹೇಳುವುದು ಅಜ್ಞಾನವಾಗುತ್ತದೆ. ಹೆಣ್ಣು ಮಗುವನ್ನು ಕಳಂಕ ಎಂದು ಬಲವಾಗಿ ನಂಬಿದ್ದವರ ನಿಲುವಿನಲ್ಲೂ ಇವತ್ತು ಸಾಕಷ್ಟು ಪರಿವರ್ತನೆಯಾಗಿದೆ. ಹೆಣ್ಣು ಮಗುವನ್ನು ಅಸಂತೃಪ್ತಿಯಿಂದಲಾದರೂ ಸ್ವೀಕರಿಸಿಕೊಳ್ಳುವಷ್ಟು ಅವರನ್ನು ಪರಿಸ್ಥಿತಿ
ಬದಲಾಯಿಸಿದೆ. ಹಾಗಾಗಿ, ಲಿಂಗಪತ್ತೆ ಪರೀಕ್ಷೆಯನ್ನು ನೇರಾತಿನೇರ ‘ಭ್ರೂಣಹತ್ಯೆ ಪರೀಕ್ಷೆ’ ಎಂದು ಹೇಳಬೇಕಿಲ್ಲ. ಮರು ಅವಲೋಕನಕ್ಕೆ ಒಳಪಡಿಸಲೇ ಬಾರದಷ್ಟು ಇದು ಅಸಂಬದ್ಧವೂ ಅಲ್ಲ. ಅಂದಹಾಗೆ, 100 ಗಂಡು ಮಕ್ಕಳಿಗೆ 100 ಹೆಣ್ಣು ಮಕ್ಕಳು ಎಲ್ಲ ಕೇರಿಗಳಲ್ಲೂ ಇರಲೇಬೇಕು ಎಂಬುದು ಎಲ್ಲಿಯ ನಿಯಮ? ಇದು ವೈಜ್ಞಾನಿಕವೇ ಅಥವಾ ಸಮಾನತೆಯ ಹೆಸರಲ್ಲಿ ಕೃತಕವಾಗಿ ರೂಪಿತವಾದದ್ದೇ? ದಕ್ಷಿಣ ಕನ್ನಡ, ಉಡುಪಿ ಮತ್ತಿತರ ಜಿಲ್ಲೆಗಳಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರಿದ್ದಾರೆ. ಇಲ್ಲೇನು ಗಂಡು ಭ್ರೂಣದ ಹತ್ಯೆ ನಡೆದಿದೆಯೇ? ಹೆಣ್ಣು-ಗಂಡಿನ ಅನುಪಾತ ಎಲ್ಲ ಊರು, ಪ್ರದೇಶ, ಜಿಲ್ಲೆ, ರಾಜ್ಯ, ದೇಶಗಳಲ್ಲಿ ನೂರಕ್ಕೆ ನೂರು ಇರಬೇಕೆಂದು ಬಯಸುವುದು ಪ್ರಾಕೃತಿಕವಾಗಿ ಸರಿಯೇ? ಪ್ರಕೃತಿ ಸಮತೋಲನವೆಂದರೆ ಪ್ರತಿ ಪ್ರದೇಶದಲ್ಲೂ ಹೆಣ್ಣು-ಗಂಡಿನ ಪ್ರಮಾಣ ಸರಿ ಸಮಾನವೆಂದೇ? ಅಂದಹಾಗೆ,
ಭ್ರೂಣ ಹೊತ್ತವರು ಭ್ರೂಣದ ಲಿಂಗವನ್ನು ಪ್ರಸವಪೂರ್ವದಲ್ಲೇ ತಿಳಿದುಕೊಳ್ಳುವುದರ ಸುತ್ತ ಚರ್ಚೆಗಳು ನಡೆಯಲಿ.
No comments:
Post a Comment