Tuesday, May 1, 2012

ಶಿಸ್ತಿನ ಹೆಸರಲ್ಲಿ ಮಗುವಿನ ಸ್ವಾತಂತ್ರ್ಯವನ್ನೇ ಕಸಿಯಬಾರದಲ್ಲ..

ಮಕ್ಕಳ ಬಗ್ಗೆ, ಅವರನ್ನು ಯಾವ ರೀತಿ ಬೆಳಸಬೇಕು ಎಂಬ ಬಗ್ಗೆ, ಅವರೊಂದಿಗೆ ಹೆತ್ತವರು ವರ್ತಿಸಬೇಕಾದ ವಿಧಾನದ ಕುರಿತಂತೆ ಅಸಂಖ್ಯ ಬರಹಗಳು ಪ್ರಕಟವಾಗಿವೆ. ಪುಸ್ತಕಗಳಿವೆ. ಬೆಳೆದು ದೊಡ್ಡವರಾದ ಮಕ್ಕಳಿಗಿಂತ ಹೆಚ್ಚು ಸಮಸ್ಯೆಯನ್ನು ಕೊಡುವುದು ಪುಟ್ಟ ಮಕ್ಕಳು. ಪಿಯುಸಿಯಲ್ಲೋ ಡಿಗ್ರಿಯಲ್ಲೋ ಓದುತ್ತಿರುವ ಮಕ್ಕಳಿಗೆ ಅದು ಮಾಡಬೇಡ, ಇದು ಸರಿಯಲ್ಲ, ಹಾಗೆ ಮಾತಾಡಬಾರದು, ಅವೆಲ್ಲ ಕೆಟ್ಟದು.. ಎಂದು ಮುಂತಾಗಿ ಉಪದೇಶಿಸುವ ಅಗತ್ಯ ಕಂಡುಬರುವುದು ಕಡಿಮೆ. ಬೇಕು ಮತ್ತು ಬೇಡಗಳನ್ನು ಒಂದು ಹಂತದ ವರೆಗೆ ನಿರ್ಧರಿಸುವ ಸಾಮರ್ಥ್ಯ  ಅವರಲ್ಲಿರುತ್ತದೆ. ಆದರೆ ಪುಟ್ಟ ಮಕ್ಕಳು ಹಾಗಲ್ಲ. ಆದ್ದರಿಂದಲೇ ಹೆತ್ತವರು ಅವರನ್ನು ಹೆಜ್ಜೆ ಹೆಜ್ಜೆಗೂ ತಿದ್ದುವ, ತಿಳಿ ಹೇಳುವ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಈ ಕಾರಣದಿಂದಲೋ ಏನೋ ಯುರೋಪ್ ನಲ್ಲಿ  ಒಂದು ಕತೆ ಪ್ರಚಲಿತದಲ್ಲಿದೆ.
    ಸ್ಕೂಲಿಗೆ ಬಂದ ಜಾನ್ ನಲ್ಲಿ ಟೀಚರ್ ಪ್ರಶ್ನಿಸುತ್ತಾಳೆ,
    ವಾಟ್ ಈಸ್ ಯುವರ್ ನೇಮ್? (ನಿನ್ನ ಹೆಸರೇನು ಪುಟ್ಟ?)
    ಮಗು ಉತ್ತರಿಸುತ್ತದೆ,
    ಡೋಂಟ್ ಜಾನ್
ಅಂಥದ್ದೊಂದು ಹೆಸರನ್ನು ಟೀಚರ್ ಕೇಳಿದ್ದು ಅದೇ ಮೊದಲು. ನಿಜವಾಗಿ ಯುರೋಪಿಯನ್ ರಾಷ್ಟ್ರಗಳಲ್ಲಿ ಮಕ್ಕಳಿಗೆ ಹೆಸರಿಡುವುದಕ್ಕೆ ನಿರ್ದಿಷ್ಟ  ನಿಯಮಗಳೇನೂ ಇಲ್ಲ. ತಾವು ಹನಿಮೂನ್ ಗೆ  ಹೋದ ಸ್ಥಳದ ಹೆಸರನ್ನೇ ಮಗುವಿಗೆ ಇಡುವ ಹೆತ್ತವರು ಅಲ್ಲಿ ಧಾರಾಳ ಇದ್ದಾರೆ. ರಾಬರ್ಟ್ ಗೆ  ಗಂಡು ಮಗು ಹುಟ್ಟಿದರೆ ರಾಬರ್ಟ್ಸನ್ ಅಂತ ಹೆಸರಿಡುತ್ತಾರೆ. ಪೀಟರ್ ನ  ಮಗು ಪೀಟರ್ಸನ್ ಆಗುತ್ತದೆ. ರಿಚರ್ಡ್ ನ  ಮಗ ರಿಚರ್ಡ್ಸನ್   ಆಗುತ್ತಾನೆ.. ಇಂಥದ್ದನ್ನೆಲ್ಲ ಬಲ್ಲ ಆ ಟೀಚರ್ ಗೆ  ಡೋಂಟ್ ಜಾನ್ ಅನ್ನುವ ಹೆಸರು ಅಪರೂಪದ್ದು ಮಾತ್ರವಲ್ಲ ತುಸು ಕುತೂಹಲದ್ದೂ ಆಗಿ ಕಾಣಿಸುತ್ತದೆ. ಆದ್ದರಿಂದಲೇ ಆಕೆ ಡೋಂಟ್ ಜಾನ್ ಹೆಸರಿನ ಹಿನ್ನೆಲೆಯನ್ನು ತಿಳಿದುಕೊಳ್ಳಲು ಮುಂದಾಗುತ್ತಾಳೆ. ಅಂತಿಮವಾಗಿ ಆಕೆಗೆ ಗೊತ್ತಾದ ಮಾಹಿತಿ ಇಷ್ಟು..
          ಮಗುವಿನ ನಿಜವಾದ ಹೆಸರು ಜಾನ್. ಆದರೆ ಜಾನ್ ನ  ಮನೆಯಲ್ಲಿ ವಿಪರೀತ ಸ್ಟ್ರಿಕ್ಟು. ಅದು ಮಾಡಬೇಡ, ಇದು ಮುಟ್ಟಬೇಡ, ಹಾಗೆ ಆಡಬೇಡ, ತಿರುಗಬೇಡ, ನಡೆಯಬೇಡ.. ಹೀಗೆ ಬೇಡ(ಡೋಂಟ್)ಗಳ ದೊಡ್ಡದೊಂದು ಪಟ್ಟಿಯನ್ನೇ ಹೆತ್ತವರು ಜಾನ್ ನ  ಮೇಲೆ ಹೇರಿರುತ್ತಾರೆ. ಹಾಗಂತ ಹೆತ್ತವರಿಗೆ ಜಾನ್ ನ  ಮೇಲೆ ಪ್ರೀತಿ ಇಲ್ಲ ಎಂದಲ್ಲ. ಗಂಡಾಗಿಯೂ ಹೆಣ್ಣಾಗಿಯೂ ಇರುವುದು ಒಂದೇ ಮಗು. ಆದ್ದರಿಂದ ವಿಪರೀತ ಮುದ್ದು, ಕಾಳಜಿ. ಅಂಗಡಿಯಿಂದ ಆಟಿಕೆಗಳನ್ನು ಖರೀದಿಸಿ ತಂದು ಜಾನ್ ನ  ಕೈಗಿಡುವ ಹೆತ್ತವರು, ಅದನ್ನು ಹೇಗೆ ಬಳಸಬೇಕು ಎಂದೂ ಹೇಳಿಕೊಡುತ್ತಾರೆ. ಆದರೆ ಎಷ್ಟಾದರೂ ಜಾನ್ ಮಗುವಲ್ಲವೇ? ಅಪ್ಪ ಹೇಳಿದಂತೆ ಒ0ದೈದು ನಿಮಿಷ ಆಡುವ ಜಾನ್, ಬಳಿಕ ಅದನ್ನು ಕಳಚಲು ಪ್ರಾರಂಭಿಸುತ್ತಾನೆ. ಅಪ್ಪ ಡೋಂಟ್ ಜಾನ್ ಅನ್ನುತ್ತಾನೆ. ಅಂಗಳಕ್ಕಿಳಿದು ಮಣ್ಣಲ್ಲಿ ಆಡುವ ಅಂದರೆ ಆಗಲೂ ಡೋಂಟ್ ಜಾನ್. ಅಪ್ಪ ತಂದಿಟ್ಟ ಪುಸ್ತಕವನ್ನು ಬಿಡಿಸಲು ಪ್ರಾರಂಭಿಸಿದರೂ ಡೋಂಟ್ ಜಾನ್. ಗ್ಲಾಸಲ್ಲಿರುವ ನೀರನ್ನು ನೆಲಕ್ಕೆ ಚೆಲ್ಲಿದಾಗ, ತಿಂಡಿಯನ್ನು ಬಿಸಾಕಿದಾಗ, ಗೋಡೆಯಲ್ಲಿ ಗೀಚಿದಾಗ, ಬಾಯಿಗೆ ನೀರು ಹಾಕಿ ಉಗುಳಿದಾಗ.. ಎಲ್ಲ ಸಂದರ್ಭಗಳಲ್ಲೂ ಹೆತ್ತವರು ‘ಬೇಡ’, ‘ಡೋಂಟ್' ಪದವನ್ನೇ ಉಚ್ಚರಿಸುತ್ತಿರುತ್ತಾರೆ. ಒಂದು ರೀತಿಯಲ್ಲಿ ಜಾನ್ ಗೆ  ಡೋಂಟ್ ಅನ್ನುವ ಪದ ಎಷ್ಟು ಪರಿಚಿತ ಆಗಿಬಿಟ್ಟಿರುತ್ತದೆಂದರೆ ಮಿಚೆಲ್ ಜಾನ್ಸನ್ ಅನ್ನುವ ತನ್ನ ಹೆಸರನ್ನೇ ಮರೆತಿರುತ್ತಾನೆ.
    ಮಕ್ಕಳನ್ನು ಬೆಳೆಸುವುದು ಇಂದಿನ ಸಮಾಜದಲ್ಲಿ ದೊಡ್ಡ ಸವಾಲು. ಪೈಪೋಟಿಯ, ಜಿದ್ದಿನ, ಸ್ಪರ್ಧೆಯ ಜಗತ್ತಿಗೆ ಮಕ್ಕಳನ್ನು ತಯಾರು ಗೊಳಿಸುವ ಗುರುತರ ಜವಾಬ್ದಾರಿ ಹೆತ್ತವರ ಮೇಲಿದೆ. ಆದರೆ ಎಷ್ಟು ಹೆತ್ತವರಿಗೆ ಅಂಥದ್ದೊಂದು ಪ್ರಜ್ಞೆಯಿದೆ? ಮಗುವಿನಲ್ಲಿ ಹೆಚ್ಚೆಚ್ಚು ಸಕಾರಾತ್ಮಕ ನಿಲುವನ್ನು ತುಂಬಲು ಎಷ್ಟು ಹೆತ್ತವರು ಪ್ರಯತ್ನಿಸುತ್ತಾರೆ? ಮಗು ವಸ್ತುವನ್ನು ಮುಟ್ಟಿದರೂ ತಪ್ಪು , ಮುಟ್ಟದಿದ್ದರೂ ತಪ್ಪು  ಅನ್ನುವ ಶೈಲಿಯಲ್ಲೇ ಮಾತಾಡುವ ನಾವು;  ಅದು ಸರಿ, ಹಾಗೆ ಮಾಡು, ಶಭಾಷ್.. ಎಂಬೆಲ್ಲಾ ಪದಗಳನ್ನು ತೀರಾ ಅಪರೂಪವಾಗಿ ಬಳಸುತ್ತಿಲ್ಲವೇ? ಒತ್ತಾಯಕ್ಕೆ ಮಣಿದೋ, ಸ್ವಇಚ್ಛೆಯಿಂದಲೋ ಪೇಟೆಯಿಂದ ಆಟಿಕೆಯೊಂದನ್ನು ಖರೀದಿಸಿ ಮಗುವಿನ ಕೈಗಿಡುವ ನಾವು, ಆ ಆಟಿಕೆಯನ್ನು ಇಷ್ಟ ಬಂದಂತೆ ಬಳಸುವ ಸ್ವಾತಂತ್ರ್ಯವನ್ನು ಮಗುವಿಗೆ ಕೊಡುತ್ತೇವಾ? ಕೈಗಿಡುವ ವೊದಲೇ ಕೆಲವು ‘ಬೇಡ’ಗಳ ಪಟ್ಟಿಯನ್ನು ಮಗುವಿನ ಮೇಲೆ ಹೊರಿಸುವುದಿಲ್ಲವೇ? ನಾವು ಹೇಳಿದಂತೆ ಆಡದಿದ್ದರೆ ಮಗುವನ್ನು ಗದರಿಸುವುದಿಲ್ಲವೇ? ಆಟಿಕೆಯನ್ನು ಮುರಿದು ಕಿವಿ ಹಿಂಡಿಸಿಕೊಳ್ಳುವ, ಬೆನ್ನಿಗೆ ಏಟು ಪಡಕೊಳ್ಳುವ ಎಷ್ಟು ಮಕ್ಕಳಿಲ್ಲ ನಮ್ಮ ಮಧ್ಯೆ? ನಿಜವಾಗಿ ಆಟಿಕೆಗಳನ್ನು ಖರೀದಿಸುವುದೇ ಮಕ್ಕಳಿಗೆಂದು. ಹೀಗಿದ್ದೂ ಅದನ್ನು ತಮ್ಮಿಷ್ಟದಂತೆ ಬಳಸುವ ಸ್ವಾತಂತ್ರ್ಯವನ್ನು ಮಕ್ಕಳಿಗೆ ಕೊಟ್ಟರೇನು ತಪ್ಪು ?
      ನಿಜವಾಗಿ ಮಕ್ಕಳ ಮನಸು ದೊಡ್ಡವರಂತೆ ಅಲ್ಲ. ದೊಡ್ಡವರ ಗುಣಾಕಾರ-ಭಾಗಾಕಾರವನ್ನು ಅರ್ಥ  ಮಾಡಿಕೊಳ್ಳುವ ಸಾಮರ್ಥ್ಯವೂ ಅವಕ್ಕಿಲ್ಲ. ಮಕ್ಕಳಲ್ಲಿರುವುದು ತುಸು ಕುತೂಹಲ, ತಂಟೆ , ಸಂಶೋಧನಾತ್ಮಕ ಮನಸು. ಆಟಿಕೆಯನ್ನು ಪಡಕೊಳ್ಳುವ ಮಗು ಆರಂಭದಲ್ಲಿ ಹೆತ್ತವರು ಹೇಳಿದಂತೆಯೇ ಉಪಯೋಗಿಸುತ್ತದೆ. ಆ ಬಳಿಕ ಕುತೂಹಲದಿಂದ ತಿರುಗ ಮುರುಗ ಮಾಡಿ, ಅದರ ಗಾಲಿಯನ್ನೋ ಇನ್ನೇನನ್ನೋ ಕಿತ್ತು, ಏನನ್ನೋ ಹುಡುಕುತ್ತದೆ. ಆದರೆ ದುಡ್ಡು ಕೊಟ್ಟಿರುವ ಹೆತ್ತವರಿಗೆ ಅದರ ಕುತೂಹಲ, ಅನ್ವೇಷಕ ಗುಣವನ್ನು ಅರಿತುಕೊಳ್ಳುವುದಕ್ಕೆ ಬಹುತೇಕ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ. ಒಂದು ರೀತಿಯಲ್ಲಿ ಆಟಿಕೆಯನ್ನು ಜೋಪಾನವಾಗಿ ಉಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುವ ನಾವು, ಹಾಗೆ ಮಾಡುವ ಮೂಲಕ ಮಗುವಿನ ಅನ್ವೇಷಕ ಗುಣವನ್ನು, ಸ್ವತಂತ್ರ ವ್ಯಕ್ತಿತ್ವವನ್ನು ನಾಶಪಡಿಸುತ್ತಿದ್ದೇವೆ ಅನ್ನುವುದನ್ನು ತಿಳಿದಿರುವುದೂ ಇಲ್ಲ. ಆಟಿಕೆಯನ್ನು ಮುರಿದು ಪೆಟ್ಟು ತಿಂದ ಮಗು, ಮುಂದೆ ಆಟಿಕೆಯನ್ನು ಮುರಿಯುವುದಕ್ಕೆ ಹಿಂಜರಿಯಬಹುದು  ನಿಜ. ಆದರೆ ಪೆಟ್ಟು ಅನ್ನುವ ಭಯವು ಮಗುವಿನ ‘ಕುತೂಹಲ’ ಅನ್ನುವ ಅಮೂಲ್ಯ ಗುಣವನ್ನೂ ನಾಶಪಡಿಸುವುದಿಲ್ಲವೇ? ಮಗು ಆಟಿಕೆ ಕಾರಿನ ಗಾಲಿಯನ್ನು, ಸ್ಟೇರಿಂಗನ್ನು ಅಥವಾ ಇನ್ನಾವುದನ್ನೋ ಕಿತ್ತು ಹಾಕಿದ ಮಾತ್ರಕ್ಕೇ ಅವೆಲ್ಲ ಹಾಳಾಯಿತು ಎಂದೇಕೆ ನಾವು ತೀರ್ಮಾನಿಸಬೇಕು? ಆ ಮೂಲಕ ಮಗು ಅಮೂಲ್ಯವಾದ ಸಂಗತಿಗಳನ್ನು ಕಂಡುಕೊಂಡಿದೆ ಎಂದೇಕೆ ಆಲೋಚಿಸಬಾರದು? ಆಟಿಕೆ ಮಗುವಿನದು, ಅದು ಹೇಗೆ ಬೇಕಾದರೂ ಬಳಸಲಿ.. ಅನ್ನುವ ಉದಾರ ನಿಲುವು ಮಗುವಿನಲ್ಲಿ ಆತ್ಮವಿಶ್ವಾಸವನ್ನು ತುಂಬುವುದಕ್ಕೆ ಅವಕಾಶ ಇದೆ. ಯಾವುದೇ ವಿಷಯದಲ್ಲೂ ಮುನ್ನುಗ್ಗಿ ಮಾತಾಡಲು, ಸ್ವತಂತ್ರವಾಗಿ ಆಲೋಚಿಸಲು, ತುಸು ಧೈರ್ಯದ ನಿಲುವುಗಳನ್ನು ಕೈಗೊಳ್ಳಲು ಇಂಥ ನಿಲುವು ಭವಿಷ್ಯದಲ್ಲಿ ನೆರವಾಗಬಲ್ಲದು. ಜೋಪಾನದ ಹೆಸರಲ್ಲಿ ಹೆಜ್ಜೆ ಹೆಜ್ಜೆಗೂ ನಿಯಂತ್ರಣವನ್ನು ಹೇರತೊಡಗಿದರೆ ಮತ್ತೆ ಆ ಮಗು ಮಗುವಾಗಿರುವುದಿಲ್ಲ. ಅದು ಹೆತ್ತವರ ಪಡಿಯಚ್ಚು ಆಗಿಬಿಡುತ್ತದೆ. ಪ್ರತಿಯೊಂದಕ್ಕೂ ಹೆತ್ತವರನ್ನೋ ಇನ್ನಾರನ್ನೋ ಅವಲಂಬಿಸುವ, ನಾಯಕತ್ವ ಗುಣವನ್ನು ಹೊಂದಿಲ್ಲದ, ನಕಾರಾತ್ಮಕವಾಗಿಯೇ ಆಲೋಚಿಸುವ ವ್ಯಕ್ತಿತ್ವವಾಗಿ ಮಾರ್ಪಡುತ್ತದೆ. .
       ಗುಡ್ ಗರ್ಲ್  ಮತ್ತು ಬ್ಯಾಡ್ ಬಾಯ್ ಎಂಬ ಪದಗಳನ್ನು ನಾವು ಮಕ್ಕಳ ಮೇಲೆ ಪ್ರಯೋಗಿಸುವಾಗ ಅದು ಬೀರುವ ಪರಿಣಾಮವನ್ನು ಕೆಲವೊಮ್ಮೆ ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಉತ್ತಮ ಹುಡುಗಿ ಅಂದಾಗ ಅರಳುವ ಮಗುವಿನ ಮುಖ, ಕೆಟ್ಟ ಹುಡುಗಿ ಅಂದಾಗ ಅರಳುವುದಿಲ್ಲ. ಒಂದು ವೇಳೆ ಕೆಟ್ಟ ಹುಡುಗಿ ಅನ್ನುವ ಪದವನ್ನು ನಾವು ಪದೇ ಪದೇ ಬಳಸತೊಡಗಿದರೆ ಮಗು ಯಾವ ಮನಸ್ಥಿತಿಯೊಂದಿಗೆ ಬೆಳೆಯಬಹುದೆಂದು ಯೋಚಿಸಿ. ಹಾಗಂತ ತಪ್ಪನ್ನು ತಿದ್ದಬಾರದು ಎಂದಲ್ಲ. ಇಷ್ಟಕ್ಕೂ, ನಾವು ಯಾವುದನ್ನು ತಪ್ಪು , ಕೆಟ್ಟದು ಎಂದು ಹೇಳಿರುತ್ತೇವೋ, ಅವು ನಿಜವಾಗಿಯೂ ಕೆಟ್ಟದೇ ಆಗಿರುತ್ತದಾ? ಮಣ್ಣಿನಲ್ಲಿ ಆಡುವುದನ್ನು ಕೆಟ್ಟದು ಎಂದು ಎಷ್ಟು ಹೆತ್ತವರು ಮಕ್ಕಳಿಗೆ ಕಲಿಸಿ ಕೊಡುತ್ತಿಲ್ಲ? ಮಳೆ ನೀರಿನಲ್ಲಿ ಆಡುವುದಕ್ಕೆ ಎಷ್ಟು ಮಕ್ಕಳಿಗೆ ಸ್ವಾತಂತ್ರ್ಯ ಇರುತ್ತದೆ? ಶಿಸ್ತಿನ ನೆಪದಲ್ಲಿ ಮಕ್ಕಳನ್ನು ಬೆಕ್ಕಿನಂತೆ, ಮನೆಯಲ್ಲಿ ಇದ್ದಾರೋ ಇಲ್ಲವೋ ಅನ್ನುವಷ್ಟು ಮೌನವಾಗಿ ಬೆಳೆಸುವವರು ನಮ್ಮಲ್ಲಿ ಎಷ್ಟು ಮಂದಿಯಿಲ್ಲ? ಮನೆಗೆ ಅತಿಥಿಗಳು ಬಂದರೆ ‘ಶಿಸ್ತು’ ಅನ್ನುವ ಅಪಾಯಕಾರಿ ಅಸ್ತ್ರವೊಂದನ್ನು ಸಾಕಷ್ಟು ಹೆತ್ತವರು ಒರೆಯಿಂದ ಹೊರತೆಗೆಯುವುದಿದೆ. ಮಕ್ಕಳು ಮೌನವಾಗಿರಬೇಕು, ಅತಿಥಿಗಳ ಮುಂದೆ ಸುಮ್ಮನೆ ಅಡ್ಡಾಡಬಾರದು.. ಎಂಬೆಲ್ಲಾ `ಬಾರದು'ಗಳನ್ನು ಮಕ್ಕಳ ಮೇಲೆ ಹೇರುವುದಿದೆ. ಅತಿಥಿಗಳಿಗೆ ಇಟ್ಟ ತಟ್ಟೆಯಿಂದ ತಿಂಡಿಯನ್ನು ತೆಗೆದು ಮಕ್ಕಳು ಬಾಯಿಗೆ ಹಾಕಿದರೆ ಅವಮಾನವಾದಂತೆ ಕುದಿಯುವ ಹೆತ್ತವರು ಎಷ್ಟಿಲ್ಲ ನಮ್ಮ ನಡುವೆ?
ಸಿಟ್ಟಿನಿಂದ ಎರಡೇಟು ಬಿಗಿಯುವುದೂ ಇದೆಯಲ್ಲವೇ? ನಿಜವಾಗಿ, ಅತಿಥಿಗಳಿಗೆ ಕೊಟ್ಟ ಅದೇ ತಿಂಡಿಯನ್ನು ಅಡುಗೆ ಕೋಣೆಯಲ್ಲಿ ಕೊಟ್ಟರೆ ಮಗು ತಿನ್ನುವುದಿಲ್ಲ. ಯಾಕೆಂದರೆ ಮಗುವಿಗೆ ಆಸಕ್ತಿ ಇರುವುದು ತಿಂಡಿಯ ಮೇಲಲ್ಲ, ಅತಿಥಿಗಳ ಮೇಲೆ. ಅವರ ಗಮನವನ್ನು ಸೆಳೆಯುವುದು ಅದರ ಉದ್ದೇಶ. ಮನೆಗೆ ಬಂದ ಅತಿಥಿಗಳು ಒಂದು ವೇಳೆ ಮಕ್ಕಳ ಬಗ್ಗೆ ಆಸಕ್ತಿಯನ್ನೇ ತೋರದಿದ್ದರೆ, ಮಾತಾಡಿಸದಿದ್ದರೆ ಮಕ್ಕಳು ಕಿರಿಕಿರಿ ಮಾಡುವುದಿದೆ. ಬೊಬ್ಬೆ ಹೊಡೆದೋ ಅತಿಥಿಗಳ ಜೊತೆ ಮಾತಾಡುವ ತಂದೆಯನ್ನೋ ತಾಯಿಯನ್ನೋ ಎಳೆದಾಡಿಯೋ ಗಮನ ಸೆಳೆಯಲು ಪ್ರಯತ್ನಿಸುವುದಿದೆ. ಆದರೆ ಅನೇಕ ಬಾರಿ ನಮಗೆ ಅವುಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ‘ಮಗುವಿಗೆ ಭಾರೀ ಹಠ’ ಅಂದುಬಿಟ್ಟು, ನಾಲ್ಕು ಬಿಗಿದು ಸುಮ್ಮನಾಗಿಸುತ್ತೇವೆ.
ನಮ್ಮ ಸಿಟ್ಟನ್ನು, ಒತ್ತಡವನ್ನು, ಅವಿವೇಕವನ್ನು.. ಮಕ್ಕಳ ಮೇಲೆ ಪ್ರಯೋಗಿಸುವುದು ಸುಲಭ. ಯಾಕೆಂದರೆ ನಮ್ಮನ್ನು ಎದುರಿಸುವ ಸಾಮರ್ಥ್ಯ  ಮಕ್ಕಳಲ್ಲಿಲ್ಲವಲ್ಲ. ನಮ್ಮ ಆಲೋಚನೆಯನ್ನು ತಪ್ಪು  ಎಂದು ಹೇಳುವಷ್ಟು ಅವುಗಳ ಮೆದುಳು ಬೆಳೆದಿರುವುದೂ ಇಲ್ಲ. ನಾವು ಕೊಟ್ಟ ಪೆಟ್ಟನ್ನು ತಿಂದು, ಅದಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಕಣ್ಣೀರಿಳಿಸಿ ಅವು ಸುಮ್ಮನಾಗುತ್ತವೆ. ಬಳಿಕ ಮುಟ್ಟಬೇಡ ಅಂದರೆ ಮುಟ್ಟುವುದಿಲ್ಲ. ತಿನ್ನಬೇಡ ಅಂದರೆ ತಿನ್ನುವುದಿಲ್ಲ. ಆಡಬೇಡ ಅಂದರೆ ಆಡುವುದಿಲ್ಲ.. ಆದರೆ ಹೀಗೆ ‘ಬೇಡ’ಗಳನ್ನು ನಮ್ಮಿಷ್ಟದಂತೆ ನಾವು ಹೇರುತ್ತಾ ಹೋದರೆ ಮಗು ನಿಷೇಧಾತ್ಮಕ ನಿಲುವಿನೊಂದಿಗೆ ಬೆಳೆಯುತ್ತಾ ಹೋಗುತ್ತದೆ ಎಂಬ ಪ್ರಜ್ಞೆ ಮಕ್ಕಳ ಜೊತೆ ರಜೆಯ ಮಜವನ್ನು ಅನುಭವಿಸುತ್ತಿರುವ ಎಲ್ಲ ಹೆತ್ತವರಲ್ಲೂ ಇರಬೇಕು.ಆದ್ದರಿಂದ ಮಗು  ಮಗುವಾಗಿಯೇ ಬೆಳೆಯಲಿ. ಶಿಸ್ತು, ನಿಯಂತ್ರಣ, ಜೋಪಾನ.. ಎಂಬೆಲ್ಲಾ ಹೊರಗಿನ ಒತ್ತಡಗಳು ಅವುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರದಿರಲಿ..

No comments:

Post a Comment