Tuesday, May 1, 2012

ಬುರ್ಖಾ,ನಕಾಬ್,ಸ್ಕಾರ್ಫ್ ಮತ್ತು ಪತ್ರಕರ್ತರು

 ಬುರ್ಖಾ,  ಹಿಜಾಬ್, ಪರ್ದಾ, ಐಸ್ಕಾರ್ಫ್ , ನಕಾಬ್, ಸ್ಕಾರ್ಫ್.. ಮುಂತಾದ ಪದಗಳ ಬಗ್ಗೆ ಪತ್ರಕರ್ತರಲ್ಲಿ ಎಷ್ಟರ ಮಟ್ಟಿಗೆ ಅಜ್ಞಾನ ಇದೆಯೆಂದರೆ, ಐಸ್ಕಾರ್ಫನ್ನೇ (ಮುಖಪರದೆ) ಬುರ್ಖಾ ಎಂದು ನಂಬುವಷ್ಟು. ಮುಖಪರದೆಯನ್ನು ಎಲ್ಲಾದರೂ ನಿಷೇಧಿಸಿಬಿಟ್ಟರೆ, ಬುರ್ಖಾವನ್ನೇ ನಿಷೇಧಿಸಲಾಗಿದೆ ಎಂದು ಬರೆಯುವಷ್ಟು. ಕಳೆದವಾರ ಮಂಗಳೂರಿನ ಎಲೋಶಿಯಸ್ ಕಾಲೇಜಿನಲ್ಲಿ ಬುರ್ಖಾ ಸುದ್ದಿಗೊಳಗಾಯಿತು. ಕಾಲೇಜಿನ ನೀತಿ-ನಿಯಮ ಕೈಪಿಡಿಯ 10ನೇ ಪುಟದಲ್ಲಿ, ‘ಗರ್ಲ್ಸ್  ಆರ್ ನೋಟ್ ಎಕ್ಸಪೆಕ್ಟೆಡ್ ಟು ವಿಯರ್ ಬುರ್ಖಾ ಇನ್ ದ ಕ್ಲಾಸ್ ರೂಮ್ಸ್  ಎಂಡ್ ಇನ್ ದ ಎಕ್ಸಾಮಿನೇಶನ್ ಹಾಲ್ಸ್ ’ (ಪರೀಕ್ಷಾ ಕೊಠಡಿ ಮತ್ತು ತರಗತಿಯೊಳಗೆ ವಿದ್ಯಾರ್ಥಿನಿಯರು  ಬುರ್ಖಾ ಧರಿಸಬಾರದು) ಎಂದಿತ್ತು. ಪೋಷಕರು ಪ್ರತಿಭಟನೆಗೆ ಸಜ್ಜಾಗುತ್ತಿರುವುದನ್ನು ಅರಿತುಕೊಂಡ ಕಾಲೇಜು ಆಡಳಿತ ಮಂಡಳಿ, ‘ನಾವು ಮುಖಪರದೆಯನ್ನಷ್ಟೇ ನಿಷೇಧಿಸಿದ್ದೇವೆ, ಬುರ್ಖಾವನ್ನಲ್ಲ’ ಅಂದುಬಿಟ್ಟಿತು. ದುರಂತ ಏನೆಂದರೆ, ಕೆಲವು ಪತ್ರಿಕೆಗಳು ಮರುದಿನ ಈ ಸ್ಪಷ್ಟೀಕರಣವನ್ನು ಪ್ರಕಟಿಸಿದ್ದೂ, ‘ಬುರ್ಖಾವನ್ನು ನಿಷೇಧಿಸಲಾಗಿದೆ’ ಎಂದೇ.
ಹಿಜಾಬ್ ಅಂದರೆ ದೇಹ ಮುಚ್ಚುವ ಉಡುಪು  ಎಂದರ್ಥ. ಕನ್ನಡದಲ್ಲಿ ಸಾಮಾನ್ಯವಾಗಿ ಬುರ್ಖಾ ಎಂಬ ಪದವನ್ನು ಹಿಜಾಬ್ ಗೆ  ಪರ್ಯಾಯವಾಗಿ ಬಳಸಲಾಗುತ್ತದೆ. ಸ್ಕಾರ್ಫ್ ಅಂದರೆ ಶಿರವಸ್ತ್ರ ಎಂದರ್ಥ. ನಕಾಬ್ ಅಥವಾ ಐಸ್ಕಾರ್ಫಗೆ ಮುಖಪರದೆ ಎಂದು ಹೆಸರು. ಇಷ್ಟಕ್ಕೂ ಇವೇನೂ ತಲೆಗೆ ಹತ್ತದ ಭಾರೀ ಕಠಿಣ ಪದಗಳೋ, ರನ್ನ, ಪಂಪರ ಕಾವ್ಯ ಭಾಷೆಗಳೋ ಅಲ್ಲ. ನ್ಯೂಟನ್ನನ ಅಯಸ್ಕಾಂತೀಯ ನಿಯಮವನ್ನು ಪಟಪಟನೆ ಹೇಳುವ. ಡಾರ್ವಿನ್ ನ್ನನ ವಿಕಾಸವಾದ, ಸ್ಟಾಲಿನ್ನನ ಕಾರ್ಮಿಕ  ಸಿದ್ಧಾಂತದ ಬಗ್ಗೆ ಆಳ ಅರಿವುಳ್ಳ ಮಾತ್ರವಲ್ಲ, ಅವನ್ನು ಅಧ್ಯಯನ ನಡೆಸುವುದಕ್ಕೂ ಪುರುಸೊತ್ತಿರುವ ಮಾಧ್ಯಮ ಮಿತ್ರರಿಗೆ, ಮುಸ್ಲಿಮರಿಗೆ ಸಂಬಂಧಿಸಿದ ನಾಲ್ಕೈದು ಪದಗಳ ಬಗ್ಗೆ ಏನೇನೂ ಗೊತ್ತಿಲ್ಲ ಅಂದರೆ ಏನರ್ಥ? ಅಂಡಮಾನಿನ ಲ್ಲಿರುವ ಆದಿಮಾನವರ ಆಚಾರ, ಸಂಸ್ಕøತಿ, ಉಡುಪು , ಆಹಾರಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ನಮ್ಮ ಪತ್ರಕರ್ತರಿಗೆ ಬಿಡುವು, ಉಮೇದು ಇರುತ್ತದೆ. ಕೊರಗ ಸಮುದಾಯದ ಬಗ್ಗೆ, ಅವರ ಆರಾಧ್ಯರ ಕುರಿತಂತೆ ಪತ್ರಕರ್ತರಲ್ಲಿ ಕುತೂಹಲ ಇರುತ್ತದೆ. ತುಳುವರ ಮುಟ್ಟಾಳೆ, ದಲಿತರ ಭೂತ, ಬ್ರಾಹ್ಮಣರ ಪೂಜಾ ಪದ್ಧತಿಯ ವಿಚಾರವಾಗಿ, ಪುಟಗಟ್ಟಲೆ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಧಾರಾಳ ಸಂಖ್ಯೆಯ ಪತ್ರಕರ್ತರು ನಮ್ಮಲ್ಲಿದ್ದಾರೆ. ಇವೆಲ್ಲ ತಪ್ಪು  ಎಂದಲ್ಲ. ಆದರೆ ಈ ದೇಶದಲ್ಲಿ 8-9 ಶತಮಾನಗಳಿಂದ ಬದುಕುತ್ತಿರುವ, ದೇಶದ ಜನಸಂಖ್ಯೆಯಲ್ಲಿ ದೊಡ್ಡದೊಂದು ಪಾಲನ್ನು ಹೊಂದಿರುವ ಜನಸಮುದಾಯದ ಕುರಿತಂತೆ ಮಾಧ್ಯಮ ಮಿತ್ರರಲ್ಲಿ ಈ ಮಟ್ಟಿನ ನಿರ್ಲಕ್ಷ್ಯವೇಕೆ? ಯಾವುದೇ ಒಂದು ವಿಷಯದ ಬಗ್ಗೆ ವರದಿ ಮಾಡುವಾಗ, ವರದಿಯಲ್ಲಿರುವುದಕ್ಕಿಂತ ಹೆಚ್ಚು ವರದಿಗಾರನಿಗೆ ಗೊತ್ತಿರಬೇಕು, ಗೊತ್ತಿರುತ್ತದೆ. ಮುಸ್ಲಿಮರು ಈದ್ ನಮಾಝ್ ಮಾಡಿದರು’ ಅಂತ ಬರೆಯುವಾಗ ಕನಿಷ್ಠ ಈದ್ ಅಂದರೇನು ಅನ್ನುವುದಾದರೂ ಗೊತ್ತಿರಬೇಕಾಗುತ್ತದೆ. ದುರಂತ ಏನೆಂದರೆ, ಬುರ್ಖಾದ ಬಗ್ಗೆ ಬರೆಯುವ ನಮ್ಮಲ್ಲಿನ ಹೆಚ್ಚಿನ ಪತ್ರಕರ್ತರಿಗೆ ಬುರ್ಖಾ ಮತ್ತು ನಕಾಬ್ ನ  ವ್ಯತ್ಯಾಸವೇ ಗೊತ್ತಿರುವುದಿಲ್ಲ. ಸ್ಕಾರ್ಫ್ ಮತ್ತು ಹಿಜಾಬನ್ನು ಒಂದೇ ಎಂದು ತಿಳಿದುಕೊಂಡ ಧಾರಾಳ ವರದಿಗಾರರು ನಮ್ಮಲ್ಲಿದ್ದಾರೆ. ಇದನ್ನು ಅಜ್ಞಾನ  ಅಂದರಷ್ಟೇ ಸಾಕೇ? ಇದು ವರದಿಗಾರಿಕೆಗೆ ಮಾಡುವ ಅನ್ಯಾಯ, ಅಗೌರವವಲ್ಲವೇ?
       ನಿಜವಾಗಿ, ಪತ್ರಕರ್ತರಲ್ಲಿ ಇರುವಷ್ಟು ಕುತೂಹಲ, ಅಧ್ಯಯನ ಪ್ರವೃತ್ತಿ ಇನ್ನಾರಲ್ಲೂ ಇರುವುದಿಲ್ಲ. ಪತ್ರಿಕಾ ವೃತ್ತಿ ಹೆಜ್ಜೆ ಹೆಜ್ಜೆಗೂ ಸವಾಲನ್ನು ಒಡ್ಡುವಂಥದ್ದು. ಆದರೆ ಟೆಲಿವಿಷನ್ ಮಾಧ್ಯಮದ ಪೈಪೋಟಿಯಿಂದಾಗಿ ಪತ್ರಕರ್ತರಲ್ಲಿ ಅಧ್ಯಯನಕ್ಕಿಂತ ಹೆಚ್ಚು ತುರ್ತು  ಕಾಣಿಸುತ್ತಿದೆ. ಸುದ್ದಿಯ ಹಿನ್ನೆಲೆ-ಮುನ್ನೆಲೆ, ಆಳ-ಅಗಲವನ್ನು ವಿಶ್ಲೇಷಿಸುವ ಸಹನೆ ಬಹುತೇಕ ಯಾವ ಪತ್ರಕರ್ತರಲ್ಲೂ ಕಾಣಿಸುತ್ತಿಲ್ಲ. ಗಾಂಧೀಜಿ ಏನು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಅವರ ಜೀವನ ಚರಿತ್ರೆಯನ್ನು ಮತ್ತು ಇನ್ನಿತರ ಮಾಹಿತಿಕೋಶಗಳನ್ನು ಪತ್ರಕರ್ತರು ಅಧ್ಯಯನ ಮಾಡುತ್ತಾರೆ. ನೆಹರೂರ ಬದುಕನ್ನು, ಕುವೆಂಪು , ಕಾರಂತ, ಬೇಂದ್ರೆಯವರ ಸಾಹಿತ್ಯಿಕ ಸೊಬಗನ್ನು ತಿಳಿದುಕೊಳ್ಳುವುದಕ್ಕೆ, ಅವರವರ ಸಾಹಿತ್ಯವನ್ನೋ ಜೀವನ ಗ್ರಂಥವನ್ನೋ ಓದುವುದಿದೆ. ಅದು ಬಿಟ್ಟು ಗಾಂಧೀಜಿ ಏನು ಎಂದು, ನೆಹರೂ ಹೇಗೆ ಎಂದು ಯಾರಲ್ಲೋ ಕೇಳಿ, ಅದನ್ನೇ ಪರಿಪೂರ್ಣ  ಸತ್ಯ ಎಂದು ಬರೆಯುವ ಸಾಹಸವನ್ನು ಯಾವ ಪತ್ರಕರ್ತನೂ ಮಾಡಲಾರ. ಅನಂತ ಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯನ್ನು ಸ್ವಯಂ ಓದದೇ ಅದನ್ನು ಓದಿರುವೆ ಎಂದು ಹೇಳುವ ಯಾವುದೋ ವ್ಯಕ್ತಿಯ ಅಭಿಪ್ರಾಯವನ್ನು ತನ್ನ ಅಭಿಪ್ರಾಯದಂತೆ ಖಚಿತವಾಗಿ ಯಾವ ಪತ್ರಕರ್ತನೂ ಬರೆಯಲಾರ. ಯಾಕೆಂದರೆ ಅದು ಆತ್ಮವಂಚನೆ, ಓದುಗರಿಗೆ ಮಾಡುವ ದ್ರೋಹ. ವಿಷಾದ ಏನೆಂದರೆ, ಮುಸ್ಲಿಮರಿಗೆ ಸಂಬಂಧಿಸಿ ಬಹುತೇಕ ಪತ್ರಕರ್ತರು ಈ ತಪ್ಪುಗಳನ್ನೇ ಮಾಡುತ್ತಿದ್ದಾರೆ. ಇಸ್ಲಾಮ್ ಅಂದರೆ ಏನು, ಪವಿತ್ರ ಕುರ್ಆನಿನಲ್ಲಿ ಏನಿದೆ, ಮುಸ್ಲಿಮರ ಮದುವೆ, ತಲಾಕ್, ಜಿಹಾದ್.. ಎಂಬುದರ ಕುರಿತಂತೆಲ್ಲಾ ಅವರು ಬರೆಯುವುದು ಕುರ್ಆನನ್ನು ಓದಿಯಲ್ಲ. ಓದಿರುವೆ ಅನ್ನುವ ಯಾರನ್ನೋ, ಯಾರ ಲೇಖನವನ್ನೋ ಅಥವಾ ಮುಸ್ಲಿಮ್ ಹೆಸರಿಟ್ಟುಕೊಂಡ ಮತ್ತು ಅದರಂತೆ ಬದುಕನ್ನು ರೂಪಿಸಿಕೊಂಡಿರದ ಯಾವನನ್ನೋ ನೋಡಿಕೊಂಡು. ಇದನ್ನು ಏನೆಂದು ಕರೆಯಬೇಕು? ದೌರ್ಬಲ್ಯ, ಅಜಾಗರೂಕತೆ, ಅರಿವಿನ ಕೊರತೆ.. ಎಂಬೆಲ್ಲಾ ಪದಗಳನ್ನು ಬಳಸಿ ಸಮಾಧಾನ ಪಡುವುದು  ಆ ಪದಗಳಿಗೆ ಮಾಡುವ ಅವಮಾನವಾಗದೇ?
      ಶಾಂತಿ, ಸಹಬಾಳ್ವೆ, ಪರಸ್ಪರ ವಿಶ್ವಾಸದ ಸಮಾಜವೊಂದನ್ನು ಕಟ್ಟುವಲ್ಲಿ ಮಾಧ್ಯಮದ ಮಂದಿಯ ಪಾತ್ರ ಬಹಳ ಗುರುತರವಾದದ್ದು. ಅವರ ಅಜ್ಞಾನ  ಇಲ್ಲವೇ ನಿರ್ಲಕ್ಷ್ಯವು ಒಂದು ಇಡೀ ಸಮಾಜದ ಅಸ್ವಾಸ್ಥ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಮಾಧ್ಯಮದ ಮಂದಿ ಬಳಸುವ ಪ್ರತಿ ಪದವೂ ಅತ್ಯಂತ ಪ್ರಬುದ್ಧವಾಗಿರಬೇಕು. ಸತ್ಯ ಮತ್ತು ನೇರವಂತಿಕೆಯಿಂದ ಕೂಡಿರಬೇಕು. ಇಲ್ಲದಿದ್ದರೆ ನಕಾಬ್ ನಿಷೇಧವು  ಬುರ್ಖಾ ನಿಷೇಧವಾಗಿ ಸುದ್ದಿಗೀಡಾಗುವ ಅಪಾಯ ಸೃಷ್ಟಿಯಾಗುತ್ತದೆ.

No comments:

Post a Comment