Tuesday, May 29, 2012

ಖಾಸಗಿತನಕ್ಕೆ ಕ್ಯಾಮರ ಇಡುವುದು ಯಾವ ಬಗೆಯ ಜರ್ನಲಿಸಮ್ ?

ಮೊಹನಿಶ್ ಮಿಶ್ರ
ಶಲಭ್ ಶ್ರೀವಾಸ್ತವ
ಸುಧೀಂದ್ರ
ಅಮಿತ್ ಯಾದವ್
ಅಭಿನವ್ ಬಾಲಿ
    ಈ ಐವರು ಐಪಿಎಲ್ ಕ್ರಿಕೆಟಿಗರು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆಂದು ಇಂಡಿಯಾ ಟಿ.ವಿ. ಚಾನೆಲ್ 2012 ಮೇ 15ರಂದು ಸುದ್ದಿ ಸ್ಫೋಟಿಸಿದಾಗ ಸ್ಟಿಂಗ್ ಆಪರೇಶನ್ (ಕುಟುಕು ಕಾರ್ಯಾಚರಣೆ) ಮತ್ತೊಮ್ಮೆ ಚರ್ಚೆಗೊಳಗಾಯಿತು. ಅದರ ನೈತಿಕತೆಯ ಬಗ್ಗೆ ಪ್ರಶ್ನೆ ಎದ್ದಿತು. ಅಪರಾಧದ ಹಿನ್ನೆಲೆ ಇಲ್ಲದ ಅಥವಾ ಫಿಕ್ಸಿಂಗ್ ನಲ್ಲಿ ಭಾಗಿಯಾದ ಯಾವೊಂದು ಆರೋಪವೂ ಇಲ್ಲದ ವ್ಯಕ್ತಿಗಳ ಬಳಿಗೆ ಏನೇನೋ ಸೋಗು ಹಾಕಿಕೊಂಡು, ಯಾವ್ಯಾವುದೋ ಆಮಿಷಗಳನ್ನು ಒಡ್ಡಿ, ಅವರ ಪ್ರತಿಕ್ರಿಯೆಗಳನ್ನು ಹಿಡನ್ ಕ್ಯಾಮರಾದಲ್ಲಿ ಚಿತ್ರೀಕರಿಸುವುದು ಎಷ್ಟು ಸರಿ? ಇದು ವಂಚನೆಯಲ್ವೆ, ಸ್ಟಿಂಗ್ ಜರ್ನಲಿಝಮ್ (ಕುಟುಕು ಪತ್ರಿಕೋದ್ಯಮ) ಮತ್ತು ಇನ್ವೆಸ್ಟಿಗೇಶನ್ ಜರ್ನಲಿಸಮ್ ನ (ತನಿಖಾ ಪತ್ರಿಕೋದ್ಯಮ) ನಡುವೆ ಇರುವ ವ್ಯತ್ಯಾಸದ ಬಗ್ಗೆ ಮಾಧ್ಯಮದ ಮಂದಿಯೇಕೆ ಮಾತಾಡುತ್ತಿಲ್ಲ.. ಎಂದೆಲ್ಲಾ ಪ್ರಶ್ನಿಸಲಾಯಿತು. ಇದಕ್ಕೆ ಪೂರಕವಾಗಿ, ‘ತಮ್ಮ ಮಾತುಗಳನ್ನು ಇಂಡಿಯಾ ಟಿ.ವಿ. ತಿರುಚಿ ಪ್ರಸಾರ ಮಾಡಿದೆ' ಎಂದು ಐವರು ಕ್ರಿಕೆಟಿಗರೂ ದೂರಿಕೊಂಡರು.
      ಇಷ್ಟಕ್ಕೂ, ಸ್ಟಿಂಗ್ ಆಪರೇಶನ್ ಎಂಬುದು ಕಣ್ಣು ಮುಚ್ಚಿ ಸಮರ್ಥಿಸುವಷ್ಟು ಪಾವನವಾದುದೇ? ನೈತಿಕ, ಸಾಮಾಜಿಕ ಪ್ರಶ್ನೆಗಳಿಗೆ ಅದು ಕಾರಣವಾಗಿಲ್ಲವೇ?
ರಾಬರ್ಟ್ ರೆಡ್ ಫೋರ್ಡ್  ಮತ್ತು ಪೌಲ್ ನ್ಯೂಮನ್ ರು  ಒಟ್ಟು ಸೇರಿ `ದಿ ಸ್ಟಿಂಗ್' ಎಂಬ ಸಿನಿಮಾವನ್ನು 1973ರಲ್ಲಿ ಬಿಡುಗಡೆಗೊಳಿಸಿದ ಬಳಿಕ ಸ್ಟಿಂಗ್ ಆಪರೇಶನ್ ಎಂಬ ಪದ ಬಳಕೆ ಬಂತಾದರೂ ಭಾರತದಲ್ಲಿ ಅದು ದೊಡ್ಡ ಮಟ್ಟದಲ್ಲಿ ಪ್ರಯೋಗಕ್ಕೆ ಒಳಗಾದದ್ದು ತೆಹಲ್ಕಾದ ಮೂಲಕ. ರಕ್ಷಣಾ ಇಲಾಖೆಯಲ್ಲಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದಕ್ಕಾಗಿ 2೦೦1ರಲ್ಲಿ `ಆಪರೇಶನ್ ವೆಸ್ಟ್ ಎಂಡ್' ಎಂಬ ಹೆಸರಲ್ಲಿ ತೆಹಲ್ಕಾ ಸ್ಟಿಂಗ್ ಆಪರೇಶನ್ ನಡೆಸಿತು. ಲಂಡನ್ನಿನ ಶಸ್ತ್ರಾಸ್ತ್ರ ಕಂಪೆನಿಯ ದಲ್ಲಾಳಿಗಳ ಸೋಗಿನಲ್ಲಿ ರಕ್ಷಣಾ ಅಧಿಕಾರಿಗಳು, ರಾಜಕಾರಣಿಗಳನ್ನು ತೆಹಲ್ಕಾದ ಪತ್ರಕರ್ತರು ಸಂಪರ್ಕಿಸಿದರು. ದುಡ್ಡಿಗಾಗಿ ಬಾಯಿ ಬಿಡುವ ಅಧಿಕಾರಿಗಳನ್ನು, ಬಂಗಾರು ಲಕ್ಷ್ಣಣ್ ರಂಥ  ರಾಜಕಾರಣಿಗಳನ್ನು ತೆಹಲ್ಕಾದ ಹಿಡನ್ ಕ್ಯಾಮರಾ ಚಿತ್ರೀಕರಿಸಿತು. ಒಂದು ರೀತಿಯಲ್ಲಿ ಭಾರತದ ರಾಜಕಾರಣವನ್ನೇ, ರಕ್ಷಣಾ ಇಲಾಖೆಯ ಬದ್ಧತೆಯನ್ನೇ ಪ್ರಶ್ನಿಸಿದ, ಅಲ್ಲಾಡಿಸಿದ ಪ್ರಕರಣ ಅದು.
    ಆದರೆ,
    ತೆಹಲ್ಕಾ ಈ ಕಾರ್ಯಾಚರಣೆಯಲ್ಲಿ ವೇಶ್ಯೆಯರನ್ನು ಬಳಸಿತ್ತು. ಮದ್ಯವನ್ನು ಉಪಯೋಗಿಸಿತ್ತು. ವೇಶ್ಯೆಯರೊಂದಿಗೆ ರಕ್ಷಣಾ ಅಧಿಕಾರಿಗಳು ಸರಸವಾಡಿದ್ದನ್ನು, ಆ ಸಂದರ್ಭದಲ್ಲಿ ಅವರು ಆಡಿದ ಮಾತುಗಳನ್ನು ಹಿಡನ್ ಕ್ಯಾಮರಾದಲ್ಲಿ ತೆಹಲ್ಕಾ ಚಿತ್ರೀಕರಿಸಿತ್ತು. ಮದ್ಯದ ಅಮಲಿನಲ್ಲಿ ಅಧಿಕಾರಿಗಳು ಹೇಳಬಾರದ್ದನ್ನೆಲ್ಲಾ ಹೇಳಿದರು. ಆದ್ದರಿಂದಲೇ ಗುಪ್ತಚರ ವಿಭಾಗದ (ಜಶ) ಮಾಜಿ ಮುಖ್ಯಸ್ಥರಾಗಿದ್ದ ಎಂ.ಕೆ. ನಾರಾಯಣನ್ ರು ಈ ಕಾರ್ಯಾಚರಣೆಯ ನೈತಿಕತೆಯನ್ನು ಪ್ರಶ್ನಿಸಿ ಮಾರ್ಚ್ 26. 2001ರಲ್ಲಿ ಏಶಿಯನ್ ಏಜ್ ಪತ್ರಿಕೆಯಲ್ಲಿ ಲೇಖನ ಬರೆದಿದ್ದರು. ಇದಕ್ಕಿಂತ 5 ದಿನಗಳ ಮೊದಲು ಸರಕಾರದ ಹೆಚ್ಚುವರಿ ಕಾರ್ಯದರ್ಶಿ ರಾಮನ್ ರು ಕೂಡ ಕಾರ್ಯಾಚರಣೆಯ ವಿಧಾನವನ್ನು ಖಂಡಿಸಿ ಲೇಖನ ಬರೆದಿದ್ದರು.
     ಪ್ರಕರಣ ಇದೊಂದೇ ಅಲ್ಲ
  2005ರಲ್ಲಿ ಇದೇ ಇಂಡಿಯಾ ಟಿ.ವಿ., ಹೊಟೇಲ್ ಕೊಠಡಿಯಲ್ಲಿ ಬಾಲಿವುಡ್ ನಟ ಶಕ್ತಿ ಕಪೂರ್ ಗೆ ಪಾರ್ಟಿಯೊಂದನ್ನು ಏರ್ಪಡಿಸಿತ್ತು. ನಟನಿಗೆ ಏನೆಲ್ಲ ಬೇಕೋ ಅವೆಲ್ಲವನ್ನೂ ಕೊಟ್ಟು, ವಿಸ್ಕಿ ಕುಡಿಸಿ ಬಾಲಿವುಡ್ ನಲ್ಲಿ  ನಟಿಯರನ್ನು ಹೇಗೆ ದುರ್ಬಳಕೆ ಮಾಡಲಾಗುತ್ತದೆ ಎಂದು ಹೇಳಿಸಿತು. ಐಶ್ವರ್ಯ ರೈಯ ಹೆಸರನ್ನೂ ಆತ ಹೇಳಿದ. ಎಲ್ಲವನ್ನೂ ಹಿಡನ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ ಇಂಡಿಯಾ ಟಿ.ವಿ., ಆ ಬಳಿಕ ಅದನ್ನು ಪ್ರಸಾರ ಮಾಡಿತು. ಸದ್ಯ NDTV ಇಮ್ಯಾಜಿನ್ ಥರದ ಮನರಂಜನಾತ್ಮಕ ಚಾನೆಲ್ ಗಳು  ಹಿಡನ್ ಕ್ಯಾಮರಾದೊಂದಿಗೆ ಲವರ್ಸ್ ಗಳ ಸುತ್ತ ಸುತ್ತುತ್ತಿವೆ. ಇಬ್ಬರು ಲವರ್ಸ್ ಗಳನ್ನು   ಆಯ್ಕೆ ಮಾಡಿ, ಅವರಲ್ಲಿ ಯಾರ ಲವ್ ಸಾಚಾ, ಯಾರು ಮೋಸ ಮಾಡುತ್ತಾರೆ ಎಂಬುದನ್ನೆಲ್ಲಾ ಚಿತ್ರೀಕರಿಸಿ ಪ್ರಸಾರ ಮಾಡುತ್ತಿವೆ.
ನೀವೇ ಹೇಳಿ, ಓರ್ವ ವ್ಯಕ್ತಿಯ ಖಾಸಗಿ ಬದುಕಿಗೆ ಕ್ಯಾಮರಾ ಇಡುವುದು ಜರ್ನಲಿಸಮ್ಮಾ? ಪ್ರತಿಯೊಬ್ಬರಿಗೂ ಅವರವರದೇ ಆದ ಬದುಕಿದೆ, ಖಾಸಗಿತನವಿದೆ. ಅವರಿಗೆ ವಿಸ್ಕಿ ಕೊಟ್ಟೋ ಇನ್ನಾವುದಾದರೂ ಆಮಿಷವನ್ನು ಒಡ್ಡಿಯೋ ಅವರ ದೌರ್ಬಲ್ಯವನ್ನು ಚಿತ್ರೀಕರಿಸುವುದು ನ್ಯಾಯ ಸಮ್ಮತವಾ? ಇಂಥ ಕಾರ್ಯಾಚರಣೆಗಳನ್ನು ಪ್ರಾಮಾಣಿಕ ಅಂತ ಹೇಗೆ ಹೇಳುವುದು? ಸ್ಟಿಂಗ್ ಆಪರೇಶನ್ ಗಿಳಿದ ಚಾನೆಲ್ ಗೆ  ಅದರದ್ದೇ ಆದ ದುರುದ್ದೇಶ, ಹಿಡನ್ ಅಜೆಂಡಾಗಳೂ ಇರಬಾರದೆಂದಿಯೇ? ತನಗಾಗದ ವ್ಯಕ್ತಿಗಳ ಮಾನವನ್ನು ಸಾರ್ವಜನಿಕವಾಗಿ ಹರಾಜು ಹಾಕುವ ಉದ್ದೇಶದಿಂದ ಇಂಥ ಕಾರ್ಯಾಚರಣೆಗಳು ನಡೆಯಲಾರವು ಅನ್ನುವುದಕ್ಕೆ ಏನಿದೆ ಪುರಾವೆ? ಇಷ್ಟಕ್ಕೂ ಟಿ.ವಿ.ಯಲ್ಲಿ ಏನೆಲ್ಲ ಪ್ರಸಾರವಾಗಿರುತ್ತದೋ ಅದು ಮಾತ್ರ ವೀಕ್ಷಕರಿಗೆ ಗೊತ್ತಿರುತ್ತದೆ. ಆದರೆ ಆ ಕಾರ್ಯಾಚರಣೆಗೆ ಯಾವೆಲ್ಲ ವಿಧಾನಗಳನ್ನು ಅಳವಡಿಸಲಾಗಿದೆ ಎಂಬುದನ್ನು ಯಾವ ಚಾನೆಲ್ ಗಳೂ  ಸಂಪೂರ್ಣವಾಗಿ ಹೇಳಿಕೊಳ್ಳುವುದೇ ಇಲ್ಲ. ಆದ್ದರಿಂದ ತೆಹಲ್ಕಾದ ಸ್ಟಿಂಗ್ ಆಪರೇಶನ್ ಆಗಲಿ ಅಥವಾ ಇಂಡಿಯಾ ಟಿ.ವಿ. ಸಹಿತ ಇನ್ಯಾವುದರ ಕಾರ್ಯಾಚರಣೆಯೇ ಆಗಲಿ, ಅವು ಕಾರ್ಯಾಚರಣೆಯ ಬಗ್ಗೆ ಏನು ಹೇಳಿವೆಯೋ ಅದರಾಚೆಗೂ ಸಾಕಷ್ಟು ಸಂಗತಿಗಳಿರಬಹುದಲ್ಲವೇ? ಸಾರ್ವಜನಿಕರಿಗೆ ಹೇಳದೇ ಮುಚ್ಚಿಟ್ಟ ಅಂಶಗಳಿರಬಾರದೇ? ಹೀಗಿರುವಾಗ ಸ್ಟಿಂಗ್ ಆಪರೇಶನನ್ನು ಸಾರಾಸಗಟು ಸಮರ್ಥಿಸಿಕೊಳ್ಳುವುದು ಯಾಕೆ ಸರಿ ಅನ್ನಿಸಿಕೊಳ್ಳಬೇಕು? ಅಂದಹಾಗೆ, ಕಾರ್ಯಾಚರಣೆಯ ಹೆಸರಲ್ಲಿ ಲಂಚ ಕೊಡಬಹುದೇ? ವಿಸ್ಕಿ ಕುಡಿಸಬಹುದೇ? ವೇಶ್ಯೆಯರನ್ನು ಒದಗಿಸಬಹುದೇ? ಸುಳ್ಳು ಹೇಳಬಹುದೇ? ಆರೋಪವೇ ಇಲ್ಲದ ವ್ಯಕ್ತಿಗಳನ್ನು ಸ್ಟಿಂಗ್ ಆಪರೇಶನ್ ಗಾಗಿ  ಬಳಸಿಕೊಳ್ಳಬಹುದೇ?
   ಇಸ್ಲಾವಿೂ ಇತಿಹಾಸದಲ್ಲಿ ಒಂದು ಘಟನೆ ನಡೆದಿದೆ
ಪ್ರಧಾನಿ ಉಮರ್ ರು(ರ) ರಾತ್ರಿ ಗಸ್ತು ತಿರುಗುತ್ತಿದ್ದರು. ಆಗ ಒಂದು ಮನೆಯಿಂದ ಹಾಡು ಕೇಳಿಸುತ್ತದೆ. ಉಮರ್ರು ಒಂದಷ್ಟು ಆಸಕ್ತಿಯಿಂದ ಹಾಡನ್ನು ಆಲಿಸುತ್ತಾರೆ. ಹಾಡಿನಲ್ಲಿ ಮಾದಕತೆ, `ಮತ್ತು' ಇರುತ್ತದೆ. ಉಮರ್ ರು ಹಾಡುಗಾರನನ್ನು ಮತ್ತು ಅಲ್ಲಿನ ಸನ್ನಿವೇಶವನ್ನು ನೋಡುವುದಕ್ಕಾಗಿ ಮನೆಗೆ ತಾಗಿಕೊಂಡಿರುವ ಮರವನ್ನು ಹತ್ತಿ ಮನೆಯೊಳಗೆ ಇಣುಕುತ್ತಾರೆ. ಓರ್ವ ಹಾಡುತ್ತಿದ್ದ. ಎದುರಲ್ಲಿ ಮದ್ಯ ಇತ್ತು. ಹೆಣ್ಣೂ ಇದ್ದಳು. ಉಮರ್ ರಿಗೆ   ವಿಪರೀತ ಸಿಟ್ಟು ಬರುತ್ತದೆ. `ಉಮರ್ ಜೀವಂತ ಇರುವಾಗಲೇ ಇಂಥ ಅಪರಾಧ ಎಸಗಲಿಕ್ಕೆ ನಿನಗೆ ಧೈರ್ಯ ಬಂತಾದರೂ ಹೇಗೆ? ನಿನ್ನನ್ನು ಶಿಕ್ಷಿಸದೇ ಬಿಡಲಾರೆ' ಎಂದು ಮರದಿಂದಲೇ ಗುಡುಗುತ್ತಾರೆ.
   ಆ ವ್ಯಕ್ತಿ ಹೇಳುತ್ತಾರೆ,
  ನನ್ನ ನಾಯಕರೇ, ನಾನು ಮಾಡಿರುವುದು ಒಂದು ಅಪರಾಧ. ಆದರೆ, ನೀವು ಅದಕ್ಕಿಂತಲೂ ಹೆಚ್ಚು ಅಪರಾಧ ಮಾಡಿದ್ದೀರಿ. ಇನ್ನೊಬ್ಬರ ಮನೆಯೊಳಗೆ ಇಣುಕುವುದನ್ನು ಅಲ್ಲಾಹನು (ಸೃಷ್ಟಿಕರ್ತನು) ನಿಷೇಧಿಸಿದ್ದಾಗ್ಯೂ ನೀವು ನನ್ನ ಖಾಸಗಿತನಕ್ಕೆ ಭಂಗ ತಂದಿದ್ದೀರಿ, ಇಣುಕಿದ್ದೀರಿ. ಅನುಮತಿ ಇಲ್ಲದೇ ಯಾವ ಮನೆಯೊಳಗೂ ಪ್ರವೇಶಿಸಬಾರದು ಎಂದು ಅಲ್ಲಾಹನು ಆದೇಶಿಸಿದ್ದಾನೆ. ಆದರೆ ನೀವು ನನ್ನ ಅನುಮತಿ ಇಲ್ಲದೆಯೇ ನನ್ನ ಮನೆಯ ಮರಕ್ಕೆ ಹತ್ತಿದ್ದೀರಿ. ಒಂದು ರೀತಿಯಲ್ಲಿ ಮನೆಯೊಳಗೇ ಪ್ರವೇಶಿಸಿದ್ದೀರಿ. ಹಾಗೆಯೇ ಯಾರದೇ ತಪ್ಪುಗಳನ್ನು ಹುಡುಕುತ್ತಾ ಹೋಗಬೇಡಿ' ಎಂದು ಅಲ್ಲಾಹನು ಹೇಳಿದ್ದಾನೆ. ಆದರೆ ನೀವು ಅದನ್ನೇ ಮುರಿದಿದ್ದೀರಿ. ಆದ್ದರಿಂದ ನೀವೇ ಹೇಳಿ, ಯಾರು ಹೆಚ್ಚು ತಪ್ಪು ಮಾಡಿದವರು?
     ಉಮರ್ (ರ) ಆ ವ್ಯಕ್ತಿಯಲ್ಲಿ ಕ್ಷಮೆ ಯಾಚಿಸುತ್ತಾರಲ್ಲದೇ ಆತನ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳದೇ ಹಿಂತಿರುಗುತ್ತಾರೆ.
  ನಿಜವಾಗಿ, ದುರುದ್ದೇಶಕ್ಕೆ ಬಳಕೆಯಾಗುವ ಸಾಧ್ಯತೆ ಇದ್ದುದರಿಂದಲೇ ಸ್ಟಿಂಗ್ ಆಪರೇಶನನ್ನು ಅಮೇರಿಕದಲ್ಲಿ ನಿಷೇಧಿಸಲಾಗಿದೆ. ತನಿಖಾ ಸಂಸ್ಥೆ FBI ಗೆ (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್)ಗೆ  ಅಲ್ಲಿ ಸ್ಟಿಂಗ್ ಆಪರೇಶನ್ ನಡೆಸುವ ಅನುಮತಿ ಇದೆಯಾದರೂ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
  1. ವ್ಯಕ್ತಿಯೋರ್ವನ ಮೇಲೆ ಈಗಾಗಲೇ ಕ್ರಿಮಿನಲ್ ಆರೋಪಗಳಿದ್ದು, ಆತ ಈಗಲೂ ಅದನ್ನು ಮುಂದುವರಿಸುತ್ತಿದ್ದಾನೆಂದಾದರೆ ಹೆಚ್ಚುವರಿ ಪುರಾವೆಯನ್ನು ಸಂಗ್ರಹಿಸುವ ದೃಷ್ಟಿಯಿಂದ ಕುಟುಕು ಕಾರ್ಯಾಚರಣೆ ಕೈಗೊಳ್ಳಬಹುದು.
  2. ಆದರೆ ಕಾರ್ಯಾಚರಣೆಗಿಂತ ಮೊದಲು ಅಟಾರ್ನಿ ಜನರಲ್ ಅಥವಾ ಕೋರ್ಟಿನಿಂದ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಅದು ಅಪರಾಧವಾಗಿ ಪರಿಗಣಿಸಲ್ಪಡುತ್ತದೆ.
  3. ಒಂದು ಕಾರ್ಯಾಚರಣೆಯ ಸಂದರ್ಭದಲ್ಲಿ ಚಿತ್ರಿಸಲಾದ ದೃಶ್ಯಗಳನ್ನು ಎಡಿಟ್ ಮಾಡಲಾಗಿದೆ ಎಂದಾದರೆ ಇಡೀ ಕಾರ್ಯಾಚರಣೆಯನ್ನು ಅನೂರ್ಜಿತಗೊಳಿಸಲಾಗುವುದು.
   ಆದರೆ, ನಮ್ಮಲ್ಲಿ ಇಂಥ ನಿರ್ಬಂಧಗಳಾದರೂ ಎಲ್ಲಿವೆ? ಸ್ಟಿಂಗ್ ಜರ್ನಲಿಸಮ್ ಗೂ  ಇನ್ವೆಸ್ಟಿಗೇಶನ್ ಜರ್ನಲಿಸಮ್ ಗೂ ವ್ಯತ್ಯಾಸ ಗೊತ್ತಿರುವ ಎಷ್ಟು ಪತ್ರಕರ್ತರು ನಮ್ಮಲ್ಲಿದ್ದಾರೆ? ನಿರ್ದಿಷ್ಟ ಆರೋಪವೊಂದರ ಕುರಿತು ತನಿಖೆ ಮಾಡುವುದಕ್ಕೂ, ಯಾವೊಂದು ಆರೋಪ ಇಲ್ಲದೆಯೂ  ಕಿಸೆಯಲ್ಲಿ ಕ್ಯಾಮರಾ ಇಟ್ಟು ವಿವಿಧ ಆಮಿಷಗಳನ್ನು ಒಡ್ಡಿ ವ್ಯಕ್ತಿಯನ್ನು ಸಿಲುಕಿಸುವುದಕ್ಕೂ ನಡುವೆ ಅಂತರ ಇರುವುದನ್ನು ಟಿ.ವಿ. ಮಾಧ್ಯಮವೇಕೆ ಗುರುತಿಸುತ್ತಿಲ್ಲ? IPL ಫಿಕ್ಸಿಂಗ್ ನಲ್ಲಿ  ಕಾಣಿಸಿಕೊಂಡ ಐವರು ಕ್ರಿಕೆಟಿಗರಿಗೂ ಭ್ರಷ್ಟಾಚಾರದ ಪೂರ್ವ ದಾಖಲೆ ಇರಲಿಲ್ಲ ಎಂದು ಇಂಡಿಯಾ ಟಿ.ವಿ. ಚಾನೆಲ್ ನ ಸಂಪಾದಕ ರಜತ್ ಶರ್ಮಾ ಹೇಳಿದ್ದಾರೆ. ಸಂಪರ್ಕಿಸಿದ 10 ಕ್ರಿಕೆಟಿಗರಲ್ಲಿ ಐವರು ಕ್ರಿಕೆಟಿಗರು ಫಿಕ್ಸಿಂಗ್ ನಲ್ಲಿ ಭಾಗಿಯಾಗಲು  ನಿರಾಕರಿಸಿರುವುದಾಗಿಯೂ ಅವರು ಹೇಳಿದ್ದಾರೆ. ಒಂದು ವೇಳೆ ಇವರು ಸಂಪರ್ಕಿಸಿದ 10 ಮಂದಿಯೂ ನಿರಾಕರಿಸುತ್ತಿದ್ದರೆ ಕಾರ್ಯಾಚರಣೆಯ ಗತಿ ಏನಾಗುತ್ತಿತ್ತು?
   ತಮ್ಮ ವೀಕ್ಷಕರ ಸಂಖ್ಯೆಯನ್ನು ಹೆಚ್ಚುಗೊಳಿಸುವುದಕ್ಕೆ ಮತ್ತು ಓದುಗ ವಲಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಟಿ.ವಿ. ಚಾನೆಲ್ ಗಳು  ಮತ್ತು ಪತ್ರಿಕೆಗಳು ಯಾವ ಮಟ್ಟಕ್ಕೆ ಇಳಿಯಲೂ ಹೇಸದ ಕಾಲ ಇದು. ಪ್ರತಿಗಳು ಹೆಚ್ಚು ಮಾರಾಟವಾಗುವ ಸಾಧ್ಯತೆಯಿದೆಯೆಂದಾದರೆ ಯಾರ ತೇಜೋವಧೆಗೂ ಸಿದ್ಧವಾಗುವ ಪತ್ರಿಕೆಗಳು ನಮ್ಮ ಮಧ್ಯೆ ಇವೆ. ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವುದಕ್ಕಾಗಿ ಯಾರ ಬಚ್ಚಲ ಮನೆಗೂ ಕ್ಯಾಮರಾ ಇಡುವ ಚಾನೆಲ್ ಗಳೂ ಇವೆ. ಇವರ ಮಧ್ಯೆ ಜನರ ಖಾಸಗಿತನ, ಮಾನ, ಸ್ಥಾನಗಳು ಉಳಿಯಬೇಕಾದರೆ ಏನು ಮಾಡಬೇಕು? ಪೆನ್ನಿಗೆ, ಕ್ಯಾಮರಾಕ್ಕೆ ನೈತಿಕತೆ, ಪ್ರಾಮಾಣಿಕತೆಯನ್ನು ತುಂಬಿಸುವುದು ಹೇಗೆ, ಯಾರು?
     ಈ ಕುರಿತಂತೆ ಮಾಧ್ಯಮಗಳೇಕೆ ಗಂಭೀರ ಚರ್ಚೆ ನಡೆಸಬಾರದು?

No comments:

Post a Comment