Monday, April 16, 2012

ಇಷ್ಟಿದ್ದೂ ಹೆಣ್ಣನ್ನು ನಾವು ಬೆಲೆರಹಿತ ಅನ್ನುತ್ತೇವಲ್ಲ,ಛೆ

2010 ಅಕ್ಟೋಬರ್ 15ರಂದು ಅಮೇರಿಕದ ವರ್ಜೀನಿಯಾದಲ್ಲಿರುವ ರಾಷ್ಟ್ರೀಯ ಶವಾಗಾರದಲ್ಲಿ ತನ್ನ ಗಂಡ ಟೋಡಿ ವೇವರ್ ನ ಶವಸಂಸ್ಕಾರ ನಡೆಸಿ ಎಮ್ಮಾ ವೇವರ್ ಮನೆಗೆ ಬರುತ್ತಾಳೆ. ಮನಸ್ಸನ್ನಿಡೀ ಟೋಡಿ ಆವರಿಸಿರುತ್ತಾನೆ. ಎಷ್ಟೇ ಅದುಮಿಟ್ಟರೂ ಕಣ್ಣು ತುಂಬಿಕೊಳ್ಳ ತೊಡಗುತ್ತದೆ. ಅಮೇರಿಕನ್ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿದ್ದ ಟೋಡಿ, 2010 ಜೂನಿನಲ್ಲಿ ಅಫಘಾನಿಸ್ತಾನಕ್ಕೆ ಎರಡನೇ ಬಾರಿ ಪ್ರಯಾಣ ಬೆಳೆಸಿದ್ದ. ಅಫಘಾನ್ ಎಂಬುದು ಯಾವ ಸಂದರ್ಭದಲ್ಲೂ ಸಾವನ್ನು ಕರುಣಿಸುವ ಪ್ರದೇಶ ಅನ್ನುವುದು ಟೋಡಿಗೆ ಚೆನ್ನಾಗಿಯೇ ಗೊತ್ತಿತ್ತು. ಆದ್ದರಿಂದಲೇ ಅಫಘಾನ್ ಗೆ ಹೊರಡುವಾಗ ಭಾವುಕನಾಗಿದ್ದ. 9 ತಿಂಗಳ ತನ್ನ ಮಗಳು ಕಿಲ್ಲೆಯನ್ನು ಮುದ್ದಿಸಿದ್ದ. ಎಮ್ಮಾಳನ್ನು ಆಲಿಂಗಿಸಿದ್ದ. ಹಾಗೆ ಅಫಘಾನ್ ಹೋದ ಆತ ಬರೇ 3 ತಿಂಗಳೊಳಗೆ, 2010 ಸೆಪ್ಟಂಬರ್ ನಲ್ಲಿ ರಸ್ತೆ ಬದಿಯ ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದ..
ಎಮ್ಮಾ ಒದ್ದೆ ಕಣ್ಣನ್ನು ಉಜ್ಜಿಕೊಂಡು ಗಂಡನ ಲಾಪ್ಟಾಪ್ ನ್ನು ಎತ್ತಿಕೊಳ್ಳುತ್ತಾಳೆ. ತನ್ನ ನೋವನ್ನು, ವಿಷಾದವನ್ನು ಮರೆಸುವ ಏನನ್ನಾದರೂ ತನ್ನ ಗಂಡ ಅದರಲ್ಲಿ ಇಟ್ಟಿರಬಹುದೇ ಅಂಥ ಹುಡುಕುತ್ತಾಳೆ. ಲಾಪ್ಟಾಪ್ ನ ಡೆಸ್ಕ್ ಟಾಪ್ ನಲ್ಲಿ ಎರಡು ಪತ್ರಗಳು ಕಾಣಿಸುತ್ತವೆ. ಒಂದು, ‘ಪ್ರೀತಿಯ ಎಮ್ಮಾಳಿಗೆ’ ಅನ್ನುವ ಹೆಸರಲ್ಲಿ. ಇನ್ನೊಂದು, ‘ಮುದ್ದಿನ ಮಗಳಿಗೆ’ ಎಂಬ ಹೆಸರಲ್ಲಿ. ಆಕೆ ಮಗಳ ಪತ್ರವನ್ನು ಓದತೊಡಗುತ್ತಾಳೆ..
ಮುದ್ದಿನ ಮಗಳೇ..
ನಿನಗೆ ನನ್ನ ನೆನಪು ಇರುವ ಸಾಧ್ಯತೆ ಕಡಿಮೆ. ನಿನಗೆ 9 ತಿಂಗಳು ತುಂಬಿದ್ದಾಗಲೇ ನಾನು ಅಫಘಾನ್ ಅನ್ನುವ ಯುದ್ಧ ಭೂಮಿಗೆ ಹೋಗಬೇಕಾಯಿತು. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಮಗು. ಎಳವೆಯಲ್ಲೇ ನನ್ನನ್ನು ಕೈಬಿಟ್ಟು ಹೋದ ಅಪರಾಧಿ ಈ ಅಪ್ಪ ಅಂತ ಎಂದೂ ನೆನಪಿಸದಿರು ಕಿಲ್ಲೆ. ನಿನಗೆ ಗೊತ್ತಾ, ನಿನ್ನನ್ನು ಬಿಟ್ಟು ಹೋಗುವುದಕ್ಕೆ, ನಿನ್ನ ಕೆಲವಾರು ಫೋಟೋಗಳೊಂದಿಗೆ ಯುದ್ಧ ಭೂಮಿಗೆ ತೆರಳುವುದಕ್ಕೆ ನಾನು ತುಂಬ ಸಂಕಟಪಟ್ಟಿದ್ದೆ. ನಾನು ನನ್ನ ಬದುಕಿನಲ್ಲೇ ಅತ್ಯಂತ ನೋವು ಅನುಭವಿಸಿದ ಘಟನೆಗಳಲ್ಲಿ ನಿನ್ನನ್ನು ಅಗಲಿದ ಸಂದರ್ಭವೂ ಒಂದು. ಈ ಪ್ರಾಯದಲ್ಲಿ ಓರ್ವ ಅಪ್ಪನ ಸಂಕಟ ನಿನಗೆ ಅರ್ಥವಾಗಲ್ಲ ಅನ್ನುವುದೂ ನನಗೆ ಗೊತ್ತು. ಆದರೆ ನೀನು ಬೆಳೆದು ದೊಡ್ಡವಳಾದಾಗ, ಖಂಡಿತ ನಿನಗೆ ಮನವರಿಕೆಯಾಗಬಹುದು. ನೀನು ನನ್ನ ಬದುಕಿನ ಸಂತೋಷ ಆಗಿರುವೆ ಮಗು. ನನ್ನ ಬದುಕಿನ ಅತ್ಯಂತ ಸಂತಸದ, ಖುಷಿಯ ಸಂಗತಿ ಯಾವುದೆಂದರೆ, ಅದು ನೀನು ಈ ಭೂಮಿಗೆ ಬಂದ ದಿನ. ನೀನು ನನ್ನನ್ನು ಅಪ್ಪ ಅಂತ ಕರೆದು, ಮಡಿಲಲ್ಲಿ ಕುಳಿತು, ಕಿಸೆಗೆ ಕೈ ಹಾಕಿ, ಕೆನ್ನೆಗೊಂದು ಪಪ್ಪಿ ಕೊಟ್ಟು, ಕೂಗಿ, ಅತ್ತು, ನಕ್ಕು, ತೆವಲುತ್ತಾ, ಬೀಳುತ್ತಾ, ಏಳುತ್ತಾ, ಸಿಟ್ಟಾಗುತ್ತಾ.. ಇವೆಲ್ಲವನ್ನೂ ಓರ್ವ ಅಪ್ಪನಾಗಿ ಅನುಭವಿಸುವುದಕ್ಕೆ ಸಾಧ್ಯವಾಗುತ್ತಿಲ್ಲವಲ್ಲ ಅನ್ನುವ ನೋವು ನನ್ನಲ್ಲಿದೆ. ಆದರೇನು ಮಾಡಲಿ, ದಿನಾ ಲ್ಯಾಪ್ಟಾಪನ್ನು ತೆರೆದು ನಿನ್ನನ್ನು ನೋಡುತ್ತೇನೆ. ನೀನು ನಗುವುದನ್ನು ನೋಡುವಾಗ ಹೃದಯ ತುಂಬುತ್ತದೆ. ಓರ್ವ ಯೋಧನ ಹೃದಯವನ್ನು ಮೃದು ಮಾಡುವ ಸಾಮರ್ಥ್ಯ ಒಂದು ಮಗುವಿಗೆ ಇದೆ ಅಂದರೆ ನೀನು ನಂಬುತ್ತೀಯಾ ?
ನಿನಗೆ ಗೊತ್ತಾ..
ನೀನು ಹುಟ್ಟುವ ವರೆಗೆ ನನ್ನ ಬದುಕು ಸಂಪೂರ್ಣ ಆಗಿರಲಿಲ್ಲ. ಯಾವಾಗ ನೀನು ಭೂಮಿಗೆ ಬಂದೆಯೋ ಅಂದೇ ನಾನು ಸಂಪೂರ್ಣ ಮಾನವನಾದೆ . ನಿನ್ನನ್ನು ನೋಡುತ್ತಾ, ನನ್ನ ಬದುಕು, ಅದರ ಮಹತ್ವ, ಗುರಿಗಳು ಸ್ಪಷ್ಟವಾಗತೊಡಗಿದವು. ಅಪ್ಪ ಅನ್ನುವ ಖುಷಿಯ ಜೊತೆಗೇ ನೀನು ಬೆಳೆಯುವುದನ್ನು, ನಿನ್ನ ತುಂಟತನವನ್ನು, ಕೊಂಡಾಟವನ್ನು, ಹುಡುಗಿತನವನ್ನು ನೋಡಲು, ಅನುಭವಿಸಲು ಸಾಧ್ಯವಾಗುತ್ತಿಲ್ಲವಲ್ಲ ಅನ್ನುವ ವಿಷಾದವೂ ನನ್ನೊಳಗಿದೆ. ನಿನ್ನ ಜೊತೆಗೆ ನಾನಿರುತ್ತಿದ್ದರೆ.. ಅಂತ ದಿನಾ ಆಸೆಯಾಗುತ್ತದೆ. ಮಗು, ನೀನು ದುಃಖಿಸಬಾರದು. ನಿನ್ನ ಅಪ್ಪ ನಿನ್ನಿಂದ ದೂರದಲ್ಲೇನೂ ಇಲ್ಲ. ಆತ ಸ್ವರ್ಗದಲ್ಲಿ ದಿನಾ ನಿನ್ನನ್ನು ನೋಡುತ್ತಾ, ನಿನ್ನ ಬೆಳವಣಿಗೆಯನ್ನು ಅನುಭವಿಸುತ್ತಾ ಇದ್ದಾನೆ ಅನ್ನುವ ಪ್ರಜ್ಞೆಯೊಂದಿಗೆ ನೀನು ಬದುಕಬೇಕು. ನೀನೆಂದೂ ಕಣ್ಣೀರು ಹಾಕಬಾರದು. ಯಾಕೆ ಗೊತ್ತಾ, ನೀನು ಅತ್ತರೆ, ನಿನ್ನ ಕಣ್ಣಂಚು ಒದ್ದೆಯಾದರೆ, ಅದು ನಿನ್ನದು ಮಾತ್ರ ಅಲ್ಲ, ನನ್ನ ಕಣ್ಣಂಚೂ ಒದ್ದೆಯಾಗುತ್ತದೆ. ನೀನು ಸದಾ ನಗುತ್ತಿದ್ದರೆ, ನಾನೂ ನಗುತ್ತಿರುವೆ. ಎಲ್ಲಿ ಪ್ರಾಮಿಸ್ ಮಾಡು..
ಕಿಲ್ಲೆ, ನೀನು ಅದೃಷ್ಟವಂತೆ. ಯಾಕೆಂದರೆ, ನಿನಗೆ ಜಗತ್ತಿನಲ್ಲೇ ಓರ್ವ ಅತ್ಯುತ್ತಮ ತಾಯಿ ಸಿಕ್ಕಿದ್ದಾಳೆ. ಎಮ್ಮಾ ನಿನ್ನನ್ನು ಚೆನ್ನಾಗಿ ನೋಡುತ್ತಾಳೆ ಅನ್ನುವ ಸಂಪೂರ್ಣ ಭರವಸೆ ನನಗಿದೆ. ಅಂಥ ಅಮ್ಮನಿಗೆ ನೀನು ಎಂದೂ ನೋವು ಕೊಡಬಾರದು. ಆಕೆಯ ಕಣ್ಣಲ್ಲಿ ಕಣ್ಣೀರು ತರಿಸಬಾರದು. ಆಕೆಗೆ ಅಗತ್ಯ ಬಿದ್ದಾಗಲೆಲ್ಲಾ ನೆರವಿಗೆ ಧಾವಿಸಬೇಕು. ಆಕೆಯ ಆದೇಶವನ್ನು ಪಾಲಿಸಬೇಕು..
ಮಗು..
ನಿನ್ನ ರಾತ್ರಿಯ ಪ್ರಾರ್ಥನೆಯಲ್ಲಿ ಈ ಅಪ್ಪನನ್ನು ನೆನಪಿಸಿಕೊಳ್ಳಬೇಕು. ನನಗಾಗಿ ಪ್ರಾರ್ಥಿಸಬೇಕು . ನಿನಗೆ ಸಿಗುವ ಅನುಗ್ರಹಗಳಿಗೆ ಎಂದೂ ಕ್ರಿತಜ್ಞಲಾಗಿರಬೇಕು. ಈ ಅಪ್ಪನನ್ನು ನಾನು ನೋಡಿಯೇ ಇಲ್ಲ ಎಂದೋ ಅಥವಾ ಆತ ನನಗಾಗಿ ಸಮಯವನ್ನೇ ಕೊಟ್ಟಿಲ್ಲ ಎಂದೋ ಸಿಟ್ಟಾಗಿ ನನ್ನನ್ನು ಮರೆಯಲ್ಲ ತಾನೇ. ನಾನು ಸೇನೆಯಲ್ಲಿ ಇಲ್ಲದೇ ಇರುತ್ತಿದ್ದರೆ ನನ್ನ ಕಿಲ್ಲೆಯ ಜೊತೆಯೇ ಇರುತ್ತಿದ್ದೆ. ಕಿಲ್ಲೆಗೆ ನನ್ನೆಲ್ಲಾ ಪ್ರೀತಿಯನ್ನು ಧಾರೆಯೆರೆಯುತ್ತಿದ್ದೆ. ಪೇಟೆ ಸುತ್ತಿಸುತ್ತಿದ್ದೆ.. ಆದರೆ ನನ್ನ ಉದ್ಯೋಗ ಅದಕ್ಕೆಲ್ಲಾ ಅನುಮತಿಸುತ್ತಿಲ್ಲ ಮಗು. ಇವತ್ತು ಅಫಘಾನಿಗಾದರೆ, ನಾಳೆ ಇನ್ನೆಲ್ಲಿಗೋ ಹೋಗಬೇಕು. ಹಾಗಂತ ಹೋಗದೇ ಇರಲು ಆಗುತ್ತಾ? ಕರ್ತವ್ಯ ನಿಷ್ಠೆ ಇರಬೇಕಲ್ಲವೇ? ದೊಡ್ಡವಳಾದಾಗ ನಿನಗೂ ಇದು ಅರ್ಥವಾಗುತ್ತೆ ..
ಮಗು, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನೀನು ಬೆಳೆದು ದೊಡ್ಡವಳಾಗಿ ಸ್ಕೂಲಿಗೆ ಹೋಗುತ್ತೀಯಲ್ಲ, ಚೆನ್ನಾಗಿ ಓದಬೇಕು. ತಾಯಿಗೆ ಕಷ್ಟ ಕೊಡಬಾರದು. ಈ ಜಗತ್ತನ್ನು, ಇಲ್ಲಿಯ ಜನರನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕು. ಜನರ ಅಗತ್ಯಕ್ಕೆ ಸ್ಪಂದಿಸುವ, ಅವರ ಪ್ರೀತಿಯನ್ನು ಸಂಪಾದಿಸುವ ಹೆಣ್ಣಾಗಿ ಮಾರ್ಪಡಬೇಕು . ನೀನು ಯಾವತ್ತೂ ಸ್ಪೆಶಲ್ ಆಗಿರಬೇಕೆಂದೇ ನನ್ನ ಆಸೆ. ಯಾವಾಗಲೂ ಚೆನ್ನಾಗಿರು, ನಗುನಗುತ್ತಾ ಇರು. ಇತರರನ್ನು ನಿನ್ನ ನಗು, ಸಂತಸದ ಜೊತೆಯಲ್ಲೇ ಕೊಂಡೊಯ್ಯು. ಜನರ ಪಾಲಿಗೆ ಇಷ್ಟದ ಹೆಣ್ಣು ಆಗುವ ಜೊತೆಗೇ ಜಗತ್ತು ನಿನಗೆ ಇಷ್ಟದ ತಾಣವಾಗುವಂತೆ ಬದುಕು. ನಿನ್ನ ಚಟುವಟಿಕೆ ಯಾವಾಗಲೂ ಮನುಷ್ಯ ಪ್ರೇಮದ್ದಾಗಿರಲಿ.
ಮಗು, ಒಂದು ವಿಷಯವನ್ನು ಯಾವಾಗಲೂ ನೆನಪಿಟ್ಟು ಕೊಂಡಿರಬೇಕು..
ಯಾವುದೇ ಒಂದು ಸಂಗತಿ ನೀನು ನಿರೀಕ್ಷಿಸಿದಂತೆ ಆಗದೇ ಇರಬಹುದು. ನಿನ್ನ ಅಭಿಪ್ರಾಯಕ್ಕೆ ಭಿನ್ನವಾಗಿ ಅದು ಘಟಿಸಿ ಬಿಡಲೂ ಬಹುದು . ಚಿಂತಿಸಬೇಡ. ಯಾಕೆಂದರೆ ನಿನಗೆ ಏನು ಬೇಕು, ಯಾವುದು ಉತ್ತಮ ಅಂತ ನಿನಗಿಂತ ಚೆನ್ನಾಗಿ ದೇವನಿಗೆ ಗೊತ್ತು. ಆತನ ಮೇಲೆ ಭಾರ ಇಟ್ಟುಕೊಂಡು ಬದುಕು. ಎಲ್ಲವೂ ಚೆನ್ನಾಗಿಯೇ ಸಾಗುತ್ತದೆ. ಬದುಕಿನಲ್ಲಿ ಎಂದೂ ನಿರಾಶೆಗೆ ಒಳಗಾಗದಿರು ಪುಟ್ಟಿ . ಒಂದು ಬಾಗಿಲು ಮುಚ್ಚಿದರೆ, ಇನ್ನಷ್ಟು ಬಾಗಿಲುಗಳು ತೆರೆದಿರುತ್ತವೆ ಅನ್ನುವ ಬಲವಾದ ಆಶಾವಾದದೊಂದಿಗೆ ಜೀವಿಸು. ಯಾಕೆಂದರೆ ನಿನ್ನ ಅಪ್ಪ ಹಾಗೆ.
ಕೊನೆಯದಾಗಿ,
ತನಗಾಗಿ ಅತ್ಯಂತ ಮಹತ್ವದ, ಸುಂದರವಾದ ಭವಿಷ್ಯವೊಂದು ಕಾದಿದೆ ಅನ್ನುವ ವಿಶ್ವಾಸವನ್ನು ಸದಾ ಜೊತೆಗಿಟ್ಟುಕೋ. ಖಂಡಿತ ನಿನಗೆ ಅಂಥದ್ದೇ ಬದುಕು ಸಿಗುತ್ತದೆ. ಖುಷಿಯಾಗಿರು. ತಮಾಷೆ ಆಡುತ್ತಲಿರು. ನಿನ್ನ ತಂದೆ ನಿನ್ನ ಬಗ್ಗೆ ಯಾವಾಗಲೂ ಹೆಮ್ಮೆ ಪಡುವಂಥ ವರ್ತನೆಯನ್ನೇ ತೋರು. ಈ ಅಪ್ಪ ನಿನ್ನನ್ನು ಎಂದೂ ಪ್ರೀತಿಸುತ್ತಾನೆ..
ಇತೀ ನಿನ್ನ ಅಪ್ಪ
ಟೋಡಿ
ಲ್ಯಾಪ್ಟಾಪನ್ನು ಕೆಳಗಿಟ್ಟು ಮಗಳು ಕಿಲ್ಲೆಯನ್ನು ಎಮ್ಮಾ ಬಿಗಿದಪ್ಪಿ ಕೊಳ್ಳುತ್ತಾಳೆ. ಕಣ್ಣು ಒದ್ದೆಯಾಗುತ್ತದೆ..
ಒಂದು ವೇಳೆ ಅಮ್ಮಿ ಒಲಿವರ್ ಅನ್ನುವ ಲೇಖಕರು 2011 ಜೂನ್ 1ರಂದು ಟೋಡಿಯ ಈ ಎರಡು ಪತ್ರಗಳು ಮತ್ತು ಆ ಘಟನೆಯನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸದಿರುತ್ತಿದ್ದರೆ ಇದು ಜಗತ್ತಿಗೆ ಗೊತ್ತಾಗುವ ಸಾಧ್ಯತೆಯೇ ಇರಲಿಲ್ಲ.
ಹೆಣ್ಣು ಮಕ್ಕಳನ್ನು ಅಪಾರವಾಗಿ ಪ್ರೀತಿಸುವ ಟೋಡಿಯಂಥವರು ಈ ಜಗತ್ತಿನಲ್ಲಿ ಕೋಟ್ಯಂತರ ಇದ್ದಾರೆ. ಹಾಗೆಯೇ ಹೆಣ್ಣು ಮಗುವನ್ನು ದ್ವೇಷಿಸುವ ಉಮ್ಮರ್ ಫಾರೂಕ್ ನಂಥವರ ಸಂಖ್ಯೆಯೂ ಅಸಂಖ್ಯ ಇದೆ. ನಿಜವಾಗಿ ಹೆಣ್ಣು ಮಗುವೊಂದು ಮನೆಯಲ್ಲಿದ್ದರೆ, ಆ ಮನೆಯ ಖುಷಿಯೇ ಬೇರೆ. ಗಂಡು ಮಗುವಿಗಿಂತ ಬೇಗ ಅದು ಎಲ್ಲರನ್ನೂ ಆಕರ್ಷಿಸುತ್ತದೆ . ಗಂಡು ಮಗುವಿನಲ್ಲಿಲ್ಲದ ಒಂದು ಬಗೆಯ ಕೊಂಡಾಟ, ತುಂಟತನ, ಲಜ್ಜೆ ಅದರಲ್ಲಿರುತ್ತದೆ. ಗಂಡು ಮಗು ಬೆಳೆದಂತೆಲ್ಲಾ ಅಡುಗೆ ಮನೆಯಿಂದ, ಅಪ್ಪನಿಂದ, ಅಮ್ಮನಿಂದ ನಿಧಾನವಾಗಿ ಅಂತರವನ್ನು ಕಾಯ್ದಿಟ್ಟುಕೊಳ್ಳತೊಡಗಿದರೆ, ಹೆಣ್ಣು ಅದಕ್ಕಿಂತ ಭಿನ್ನವಾಗಿ ಹೆಚ್ಚೆಚ್ಚು ಹತ್ತಿರವಾಗುತ್ತಾ ಹೋಗುತ್ತದೆ. ಅಪ್ಪ ಕಚೇರಿಯಿಂದ ಬಂದರೆ ಮಗ ಕುಡಿಯಲು ನೀರು ತಂದು ಕೊಡುವುದಿಲ್ಲ. ಚಾ ಬೇಕಾ ಅಂತ ಕೇಳುವುದಿಲ್ಲ. ಸ್ನಾನ ಮಾಡುತ್ತೀರಾ ಪಪ್ಪಾ ಅಂತ ಪ್ರಶ್ನಿಸುವುದಿಲ್ಲ. ಆದರೆ ಮಗಳು ಅವೆಲ್ಲವನ್ನೂ ಮಾಡುತ್ತಾಳೆ. ಅಪ್ಪನ ಆದೇಶವನ್ನೋ ಮಾತನ್ನೋ ನಿರೀಕ್ಷಿಸುತ್ತಾ ಎದುರಲ್ಲೇ ನಿಲ್ಲುತ್ತಾಳೆ. ಅಪ್ಪ ಸಿಟ್ಟಾಗಿ ಏನಾದರೂ ಅಂದುಬಿಟ್ಟರೆ ಮೌನವಾಗುತ್ತಾಳೆ. ಬಳಿಕ ತಾನೇ ಮುಂದಾಗಿ ಮಾತು ಪ್ರಾರಂಭಿಸುತ್ತಾಳೆ. ಮಗ ಹಾಗಲ್ಲ, ಅಪ್ಪ ಸಿಟ್ಟಾದರೆ ಆತನೂ ಒಂದು ಬಗೆಯ ನಕಾರಾತ್ಮಕ ವರ್ತನೆಯನ್ನು ತೋರುತ್ತಾನೆ. ಅಸಹನೆ ವ್ಯಕ್ತಪಡಿಸುತ್ತಾನೆ. ಬಿಡುಬೀಸಾಗಿ ಮನೆಯಿಂದ ಹೊರಟು, ಗೆಳೆಯರೊಂದಿಗೆ ಹರಟೆ ಕೊಚ್ಚಿಯೋ ಆಡಿಯೋ ಮರಳಿ ಬರುತ್ತಾನೆ. ಆಗಲೂ ಆತನನ್ನು ಉಪಚರಿಸುವುದಕ್ಕೆ, ಅಪ್ಪ ಹೇಗಿದ್ದಾರೆ, ಎಲ್ಲಿದ್ದಾರೆ ಅನ್ನುವ ಸೂಚನೆಯನ್ನು ಕೊಟ್ಟು ಹಿಂದಿನ ಬಾಗಿಲಿನಿಂದ ಮನೆಯೊಳಗೆ ಸೇರಿಸುವುದು ತಂಗಿಯೇ. ಸ್ನಾನ ಮಾಡುವುದಕ್ಕೆ ಅಣ್ಣನಿಗೆ ಆಕೆ ಬಿಸಿ ನೀರನ್ನು ಸಿದ್ಧ ಮಾಡುತ್ತಾಳೆ. ಚಾ ಕೊಡುತ್ತಾಳೆ. ಬೆಳಿಗ್ಗೆ ನೀಟಾಗಿ ಡ್ರೆಸ್ಸು ತೊಟ್ಟು ಡೈನಿಂಗ್ ಟೇಬಲ್ ನ ಮುಂದೆ ಕೂರುವ ಅಣ್ಣ, ಅಪ್ಪ; ಉಪಾಹಾರ 5 ನಿಮಿಷ ತಡವಾದರೂ ಸಿಡಿಮಿಡಿಗೊಳ್ಳುತ್ತಾರೆ. 5 ನಿಮಿಷದಲ್ಲಿ ಹತ್ತು ಬಾರಿ ವಾಚು ನೋಡುತ್ತಾರೆ. ಅವರ ಮಾತಿನ ದಾಟಿ ಹೇಗಿರುತ್ತದೆಂದರೆ, ಬೆಳಿಗ್ಗೆ ತನ್ನಷ್ಟಕ್ಕೇ ಉಪಹಾರ ಸಿದ್ಧವಾಗುತ್ತದೇನೋ ಎಂಬ ರೀತಿಯಲ್ಲಿ. ಅದೇ ವೇಳೆ, ಕಚೇರಿಗೆ ಹೋಗುವ ಮಹಿಳೆಗೆ ಹೀಗೆ ಡೈನಿಂಗ್ ಟೇಬಲ್ ನ ಮುಂದೆ ಕೂರುವ, ಆದೇಶ ಕೊಡುವ, ವಾಚು ನೋಡುವ ಅವಕಾಶವೇ ಇರುವುದಿಲ್ಲ. ಯಾಕೆಂದರೆ ಆಕೆಯೇ ಅಡುಗೆ ಮಾಡಬೇಕು. ಹೀಗಿರುವಾಗ ಆಕೆ ಸಿಟ್ಟಾಗುವುದಾದರೂ ಯಾರ ಮೇಲೆ ?ಇಷ್ಟಕ್ಕೂ ಮುಂಜಾನೆ ಎದ್ದು ಅಡುಗೆ ಮನೆಗೆ ಹೋಗುವ ಮಗಳ ಜೊತೆ ಮಗನನ್ನೂ ಎಬ್ಬಿಸಿ, ಅಡುಗೆ ಮನೆಗೆ ಕಳುಹಿಸುವ ಪರಿಪಾಠ ಎಷ್ಟು ಮನೆಗಳಲ್ಲಿದೆ ? ಎಷ್ಟು ಗಂಡು ಮಕ್ಕಳು ಅಡುಗೆ ಮನೆಯಲ್ಲಿ, ಕಸ ಗುಡಿಸುವಲ್ಲಿ ತಾಯಿಗೆ, ತಂಗಿಗೆ ನೆರವಾಗುತ್ತಾರೆ? ಮಗಳು ಅಡುಗೆ ಮನೆಯಲ್ಲಿದ್ದರೆ, ಮಗ ಚಾಪೆಯಲ್ಲಿರುತ್ತಾನೆ. ಕಚೇರಿಗೋ ಕಾಲೇಜಿಗೋ ಸಮಯವಾಯಿತೆಂದು ಅಡುಗೆ ಮನೆಯಿಂದ ಬಂದು ಅಣ್ಣನನ್ನು ಎಬ್ಬಿಸುವ ಜವಾಬ್ದಾರಿಯೂ ತಂಗಿಯ ಮೇಲೆಯೇ. ಅಣ್ಣ-ತಂಗಿಯರಿಬ್ಬರೂ ಜೊತೆಯಾಗಿ ಟಿ.ವಿ. ವೀಕ್ಷಿಸುತ್ತಿದ್ದರೂ ತಾಯಿಯಿಂದಲೋ ತಂದೆಯಿಂದಲೋ ಆಗಾಗ ಕರೆ ಬರುವುದು ತಂಗಿಗೇ ಹೊರತು ಅಣ್ಣನಿಗಲ್ಲ. ಒಂದು ರೀತಿಯಲ್ಲಿ ಸಂತಸದಲ್ಲೂ, ದುಃಖದಲ್ಲೂ ಸಹನೆಯನ್ನು ಕಾಯ್ದುಕೊಳ್ಳುವುದು, ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಳ್ಳುವುದಕ್ಕಾಗಿ ಹೆಣಗುವುದು ಹೆಣ್ಣೇ. ಇಷ್ಟಿದ್ದೂ ಹೆಣ್ಣನ್ನು, ಅನಗತ್ಯ, ಸಮಾಜಕ್ಕೆ ಭಾರ, ಬೆಲೆರಹಿತ ಎಂದೆಲ್ಲಾ ಪುರುಷ ಜಗತ್ತು ಮೂದಲಿಸುತ್ತದಲ್ಲ, ಛೆ!
ಹೆಣ್ಣು ಮಗು ಎಂಬ ಏಕೈಕ ಕಾರಣಕ್ಕಾಗಿ ಉಮ್ಮರ್ ಫಾರೂಖ್ ಅನ್ನುವ ದುಷ್ಟ ಅಪ್ಪನ ಕೈಯಿಂದಲೇ ಗೋಡೆಗೆ ಅಪ್ಪಳಿಸಿಕೊಂಡು ಕಳೆದ ವಾರ ಸಾವಿಗೀಡಾದ ಬೆಂಗಳೂರಿನ 3 ತಿಂಗಳ ಬಾಲೆ ಅಫ್ರೀನಳನ್ನು ನೋಡುವಾಗ ಮನಸು ಭಾರವಾಗುತ್ತದೆ. ಹತ್ಯೆಗೀಡಾದ ಪ್ರತಿ ಹೆಣ್ಣು ಮಗುವನ್ನೂ ಜೀವಂತವಾಗಿ ಎಬ್ಬಿಸಿ, “ನಿನ್ನನ್ನು ಯಾವ ಕಾರಣಕ್ಕಾಗಿ ಕೊಲ್ಲಲಾಯಿತು ಮಗು” (82: 8-9) ಎಂದು ಸೃಷ್ಟಿಕತ್ರನು ನಾಳೆ ಪರಲೋಕದಲ್ಲಿ ಪ್ರಶ್ನಿಸುತ್ತಾನೆ ಎಂಬ ಪವಿತ್ರ ಕುರ್ಆನಿನ ವಚನ ನೆನಪಾಗುತ್ತದೆ.

No comments:

Post a Comment