
"ಸಾಮಾನ್ಯವಾಗಿ ಮನೆಯಿಂದ ಓಡಿ ಹೋಗುವವರಲ್ಲಿ ಬ್ಯಾಗು ಇರುತ್ತದಲ್ಲ. ನಿನ್ನಲ್ಲಿ ಅದು ಕಾಣಿಸುತ್ತಿಲ್ಲ. ಏನಾಯ್ತು?"
ಆಕೆ: ನಾನು ಓಡಿ ಹೋಗುತ್ತಿರುವುದಾಗಿ ನಿಂಗೆ ಯಾರು ಹೇಳಿದ್ದು?
ಆತ: ನೀನೇ
ಆಕೆ: ನಾನಾ..
ಆತ: ಹಾಂ, ನಿನ್ನ ಮುಖವೇ ಅದನ್ನು ಹೇಳುತ್ತದೆ.
ಹೀಗೆ ಮಾತುಕತೆಗಳು ಸಾಗುತ್ತವೆ. ಹೇಳಲೋ ಬೇಡವೋ ಎಂಬ ಗೊಂದಲ ಹುಡುಗಿಯಲ್ಲಿ. ಆತ ಒತ್ತಾಯಪಡಿಸುತ್ತಾನೆ. ಇಲ್ಲಿ ನಾವಿಬ್ಬರೂ ಅಪರಿಚಿತರು ಅನ್ನುತ್ತಾನೆ. ನೀನು ಈ ಕಾರಿನಿಂದ ಇಳಿದು ಹೋದ ಬಳಿಕ ನೀನಾರೋ ನಾನಾರೋ? ನನ್ನಲ್ಲಿ ನೀನು ವಿಷಯ ಹೇಳುವುದರಿಂದ ನಮಗಲ್ಲದೇ ಇನ್ನಾರಿಗೂ ಗೊತ್ತಾಗಲ್ಲ.. ಎಂದೆಲ್ಲಾ ನಂಬಿಸುತ್ತಾನೆ. ಅರ್ಧದಲ್ಲೇ ಕಾರು ನಿಲ್ಲಿಸುತ್ತಾ, ‘ಇಷ್ಟವಿಲ್ಲದಿದ್ದರೆ ಇಳಿದು ಹೋಗಬಹುದು' ಎಂದೂ ಹೇಳುತ್ತಾನೆ. ಕಾರು ಚಲಿಸುತ್ತದೆ. ಹುಡುಗಿ ವೃತ್ತಾಂತ ಹೇಳತೊಡಗುತ್ತಾಳೆ. ನೀವು ಅನುಮಾನಿಸಿದ್ದೇ ನಿಜ ಅನ್ನುತ್ತಾಳೆ. ಕಾಲೇಜು ಸಹಪಾಠಿಯಾದ ರವಿಯನ್ನು ತಾನು ಪ್ರೀತಿಸುತ್ತಿದ್ದು, ಮನೆಯವರು ಈ ಪ್ರೀತಿಗೆ ಒಪ್ಪಿಗೆ ಸೂಚಿಸಲಿಲ್ಲ, ಬೇರೆಯೇ ಮದುವೆ ನಿಶ್ಚಯಿಸಿದ್ರು. ಆದ್ದರಿಂದ ಹೊರಟು ಬಂದೆ ಅನ್ನುತ್ತಾಳೆ. ಆತ ಆಕೆಯ ನಿರ್ಧಾರವನ್ನು ಒಂದು ಹಂತದಲ್ಲಿ ಸಮರ್ಥಿಸುತ್ತಾನೆ. ಮದುವೆ ನಿಶ್ಚಯವಾದ ಕೂಡಲೇ ಹೊರಟು ಬಂದದ್ದು ಒಳ್ಳೆಯದಾಯಿತು. ಈಗಿನ ಕೆಲವು ಪ್ರಕರಣಗಳಂತೂ ದಿಗಿಲು ಬಡಿಸುವಂತಿರುತ್ತದೆ ಅನ್ನುತ್ತಾನೆ. ಮದುವೆ ಮುನ್ನಾದಿನ ಅಥವಾ ರಾತ್ರಿ ಅಥವಾ ಮದುವೆ ಮಂಟಪದಿಂದಲೇ ಹುಡುಗಿಯರು ಓಡಿ ಹೋಗುತ್ತಿರುವ ಘಟನೆಗಳು ನಡೆಯುತ್ತಿವೆ. ಇಂಥ ಸ್ಥಿತಿಯಲ್ಲಿ ನಿಶ್ಚಯದ ಸಂದರ್ಭದಲ್ಲೇ ಹೊರಟು ಬಂದದ್ದು ಅದಕ್ಕಿಂತ ಉತ್ತಮ ಅನ್ನುತ್ತಾನೆ. ಹುಡುಗಿ ಗಲಿಬಿಲಿಯಿಂದ ನೋಡುತ್ತಾಳೆ. ತಗ್ಗಿದ ದನಿಯಲ್ಲಿ, “ನನಗೆ ನಾಳೇನೇ ಮದುವೆ“ ಅನ್ನುತ್ತಾಳೆ. ತುಸು ಹೊತ್ತು ಮೌನ. ಬಳಿಕ ಆತನೇ ಮಾತು ಪ್ರಾರಂಭಿಸುತ್ತಾನೆ.
"ಇಲ್ಲಿಂದ ಹೋದ ಬಳಿಕ ಏನು ಮಾಡುತ್ತೀ?"
ಆಕೆ: ರವಿಗೆ ಪಾಲಕ್ಕಾಡಿನಲ್ಲಿ ಓರ್ವ ಗೆಳೆಯನಿದ್ದಾನೆ. ಮದುವೆ ರಿಜಿಸ್ಟರ್ಗೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಆತ ಮಾಡಿಟ್ಟಿದ್ದಾನೆ. ರವಿಗೆ ಒಂದು ಉದ್ಯೋಗ ಸಿಗುವವರೆಗೆ ಆತನ ಮನೆಯಲ್ಲೇ ತಂಗುವ ಯೋಜನೆ ಹಾಕಿ ಕೊಂಡಿದ್ದೇವೆ.
ಆತ: ನಿನಗೆ ನಿನ್ನ ಪ್ರಿಯಕರನ ಉದ್ಯೋಗದ ಬಗ್ಗೆ, ನಿನ್ನ ನಾಳೆಯ ಬಗ್ಗೆ ಕಾಳಜಿ ಇದೆ. ಭವಿಷ್ಯದ ಕುರಿತಂತೆ ಯೋಜನೆಯೂ ಇದೆ. ಆದರೆ ನಾಳೆಯ ದಿನ ನಿನ್ನ ಮನೆಯವರು ಎದುರಿಸುವ ಸಮಸ್ಯೆಗಳ ಕುರಿತಂತೆ ನೀನು ಯೋಚಿಸಿರುವೆಯಾ? ನಿನ್ನ ಹೆತ್ತವರ ಮುಂದೆ ನಿನ್ನ ಕುಟುಂಬದವರು ಎಸೆಯುವ ಪ್ರಶ್ನೆಗಳು, ಭತ್ರ್ಸನೆಗಳು ಏನಾಗಿರಬಹುದು ಎಂಬ ಬಗ್ಗೆ ಆಲೋಚಿಸಿರುವಿಯಾ?
ಹುಡುಗಿ ಮೌನ ವಹಿಸುತ್ತಾಳೆ.
ಆತ: ಮನೆಯಲ್ಲಿ ಯಾರೆಲ್ಲ ಇದ್ದಾರೆ?
ಆಕೆ: ತಂದೆ-ತಾಯಿ, ತಂಗಿ, ತಮ್ಮ..
ಆತ: ಇವತ್ತು ಸಂಜೆಯ ವರೆಗೆ ನಿನ್ನ ಮನೆಯವರು ನಿನ್ನನ್ನು ಹುಡುಕದೆ ಇರಬಹುದು. ಆದರೆ ಇದು ಹೆಚ್ಚು ಹೊತ್ತು ನಡೆಯಲ್ಲ. ಆ ಬಳಿಕ ನಿನ್ನ ಹುಡುಕಾಟ ನಡೆದೇ ನಡೆಯುತ್ತದೆ. ನೀನು ಓಡಿ ಹೋಗಿರುವಿ ಎಂಬ ಸುದ್ದಿ ನೆರೆಕರೆಗೆ, ಊರಿನವರಿಗೆ ನಿಧಾನವಾಗಿ ಗೊತ್ತಾಗುತ್ತದೆ. ಬಳಿಕ ನಾವು ಸಿನಿಮಾಗಳಲ್ಲಿ, ಪತ್ರಿಕೆಗಳಲ್ಲಿ ಓದಿರುತ್ತೇವಲ್ಲ - ಮದುವೆ ಮಂಟಪದಿಂದ ವಧು ಓಡಿ ಹೋದಳು, ಅವಮಾನ ಸಹಿಸಲಾರದೇ ತಂದೆ ಹೃದಯಾಘಾತದಿಂದ ನಿಧನರಾದರು, ತಾಯಿ ಆತ್ಮಹತ್ಯೆ ಮಾಡಿಕೊಂಡಳು ಎಂದೆಲ್ಲ.. ಅವೆಲ್ಲ ನಡೆಯಬಹುದು. ಬೇಡ ಬಿಡು- ನಿನ್ನ ಹೆತ್ತವರು, ಸಂಬಂಧಿಕರು ಅತ್ತ ಇರಲಿ, ತನ್ನ ಪತ್ನಿಯಾಗುವವಳ ಬಗ್ಗೆ ದೊಡ್ಡದೊಂದು ಕನಸು ಕಟ್ಟಿಕೊಂಡು ಅದಕ್ಕಾಗಿ ತಯಾರಿ ನಡೆಸುತ್ತಿರುವ ಮದುಮಗ ಇದ್ದಾನಲ್ಲ. ಆತನ ಬಗ್ಗೆ ಆಲೋಚಿಸಿದ್ದೀಯಾ? ಆತನ ಮುಂದೆಯಾದರೂ ಸತ್ಯ ಹೇಳಬಹುದಿತ್ತಲ್ಲವೇ? ಒಂದು ವೇಳೆ ನೀನು ಹೇಳಿರುತ್ತಿದ್ದರೆ ಈ ಪರಿಸ್ಥಿತಿ ಬರದಿರುವ ಸಾಧ್ಯತೆಯೂ ಇತ್ತಲ್ಲವೇ?
ಹುಡುಗಿ ಪಿಳಿಪಿಳಿ ಅನ್ನುತ್ತಾಳೆ. ತಾನು ಹೀಗೆಲ್ಲ ಆಲೋಚಿಸಲಿಲ್ಲ, ಮದುವೆ ನಿಶ್ಚಯಗೊಂಡ ಕೂಡಲೇ ಗಲಿಬಿಲಿಗೊಂಡೆ ಅನ್ನುತ್ತಾಳೆ. ತನಗೆ ಗೊತ್ತುಪಡಿಸಿದ ವರ ದುಬೈಯಲ್ಲಿ ಉದ್ಯೋಗದಲ್ಲಿದ್ದು ನಾವಿಬ್ಬರೂ ಮಾತಾಡಿಲ್ಲ. ನನ್ನ ಪೋಟೋ ನೋಡಿ ಆತ ಒಪ್ಪಿಕೊಂಡ. ಆತನ ಹೆತ್ತವರು ಮದುವೆ ನಿಶ್ಚಯಿಸಿದ್ರು.. ಎಂದೆಲ್ಲಾ ಹೇಳಿಬಿಡುತ್ತಾಳೆ. ಹುಡುಗಿಯ ಈ ಗಲಿಬಿಲಿಯನ್ನು ಸದುಪಯೋಗಿಸಿಕೊಂಡು ಹುಡುಗ ತನ್ನ ಬದುಕಿನಲ್ಲಾದ ಘಟನೆಯನ್ನು ಆಕೆಯ ಮುಂದೆ ತೆರೆದಿಡುತ್ತಾನೆ. ತನಗೋರ್ವ ಮುದ್ದು ತಂಗಿಯಿದ್ದದ್ದು, ತಾನು ಮತ್ತು ತಂದೆ-ತಾಯಿ ಅತ್ಯಂತ ಅಕ್ಕರೆಯಿಂದ ಆಕೆಯನ್ನು ನೋಡಿಕೊಂಡಿದ್ದು ಮತ್ತು ಆಕೆಯ ಒಪ್ಪಿಗೆ ಪಡೆದೇ ಮದುವೆ ನಿಶ್ಚಯಿಸಿದ್ದು.. ಎಲ್ಲವನ್ನೂ ಹೇಳುತ್ತಾನೆ. ಆದರೆ ಆಕೆಗೊಂದು ಅಫೇರ್ ಇದೆ ಎಂಬುದು ಆಕೆ ಹೇಳಿಯೂ ಇರಲಿಲ್ಲ. ಮನೆಯವರಿಗೆ ಗೊತ್ತೂ ಇರಲಿಲ್ಲ. ಹೀಗಿರುತ್ತಾ ಮದುವೆಯ ದಿನ ಆಕೆ ಓಡಿ ಹೋಗುತ್ತಾಳೆ. ಇದನ್ನು ಅರಗಿಸಿಕೊಳ್ಳಲಾಗದ ತಂದೆ ಹೃದಯಾಘಾತದಿಂದ ಸಾವಿಗೀಡಾಗುತ್ತಾರೆ. ತಾಯಿ ಕುಗ್ಗಿ ಹೋಗುತ್ತಾರೆ. ಊರವರು ಮನೆಗೆ ಬಂದು ಮಗಳನ್ನು ದೂಷಿಸುವುದನ್ನು ಆಲಿಸಲು ತಾಯಿ ಸಿದ್ಧಳಿರಲಿಲ್ಲ. ಆಕೆ ಆಗಲೂ ಮಗಳನ್ನು ಪ್ರೀತಿಸುತ್ತಿದ್ದಳು. ಆ ವರೆಗೆ ಪ್ರೀತಿಯಿಂದ ಬೆಳೆಸಿದ ತಂಗಿಯನ್ನು ದ್ವೇಷಿಸಲು ನಮ್ಮಿಂದ ಸಾಧ್ಯವೇ ಆಗಲಿಲ್ಲ.. ಅನ್ನುತ್ತಾನೆ. ಕಣ್ಣಲ್ಲಿ ಹನಿ ಕಣ್ಣೀರು. ನನ್ನ ತಂದೆಗಾದ ಸ್ಥಿತಿ ನಿನ್ನ ತಂದೆಗೆ ಆಗದಿರಲಿ ಎಂದೂ ಹೇಳುತ್ತಾನೆ. ಹುಡುಗಿಯ ಕಣ್ಣು ಹನಿಗೂಡುತ್ತದೆ. ತನ್ನ ಮನೆಯಲ್ಲಿ ಹೆತ್ತವರು, ಸಂಬಂಧಿಕರು ಆಡುತ್ತಿದ್ದ ಮಾತುಗಳು ನೆನಪಿಗೆ ಬರುತ್ತವೆ. ಕಾರನ್ನು ಮನೆಯತ್ತ ತಿರುಗಿಸುವಂತೆ ಹೇಳುತ್ತಾಳೆ. ಆಕೆಗೆ ವಿಸಿಟಿಂಗ್ ಕಾರ್ಡ್ ಕೊಟ್ಟು ಆಕೆಯ ಹೆಸರು ಕೇಳುತ್ತಾನೆ. ಸೀತ ಅನ್ನುತ್ತಾಳೆ. ಹ್ಯಾಪಿ ಮ್ಯಾರೇಜ್ ಲೈಫ್ ಎಂದು ಶುಭ ಕೋರುತ್ತಾನೆ. ಮನೆಗೆ ಹೋದ ಬಳಿಕ ತಾನು ಆತನನ್ನು ಮದುವೆಗೆ ಆಹ್ವಾನಿಸಿಲ್ಲ ಎನ್ನುವುದು ಆಕೆಗೆ ಜ್ಞಾಪಕಕ್ಕೆ ಬರುತ್ತದೆ. ಕರೆ ಮಾಡುತ್ತಾಳೆ. ಆದರೆ ತನಗೂ ಇಂತಿಂಥವರ ಮಗಳು ಸೀತಳಿಗೂ ನಾಳೆ ಮದುವೆ ಇದೆ ಎಂದು ಆತ ಹೇಳುತ್ತಾನೆ. ಹುಡುಗಿಗೆ ಗಾಬರಿಯಾಗುತ್ತದೆ. ತನಗೆ ಮದುವೆ ನಿಶ್ಚಯಗೊಂಡ ಹುಡುಗನ ಪೋಟೋ ಹುಡುಕುತ್ತಾಳೆ. ಅವನೇ ಇವನು. ಆಘಾತದಿಂದ ಇನ್ನೂ ಹೊರಬರದ ಆಕೆಯೊಂದಿಗೆ ಆತ ಹೇಳುತ್ತಾನೆ:
ನಾನು ನನ್ನ ಬದುಕಿನಲ್ಲಾದ ಘಟನೆಯನ್ನಷ್ಟೇ ನಿನ್ನಲ್ಲಿ ಹೇಳಿದೆ. ನಿನ್ನನ್ನು ನಾನು ನಿನ್ನ ಮನೆಗೆ ಮರಳಿಸಿಲ್ಲ. ಆದರೆ ನನ್ನ ಮಾತನ್ನು ಆಲಿಸಲು ಮತ್ತು ತಪ್ಪನ್ನು ತಿದ್ದಿಕೊಳ್ಳಲು ಮನಸ್ಸಾಯಿತಲ್ಲ, ಆ ಮನಸ್ಸನ್ನು ನಾನು ಇಷ್ಟಪಡುತ್ತೇನೆ. ನಡೆದ ಘಟನೆ ನಮ್ಮಿಬ್ಬರ ನಡುವೆಯೇ ಇರಲಿ. ನಾಳೆ ಮದುವೆ ಮಂಪಟದಲ್ಲಿ ಭೇಟಿಯಾಗೋಣ..”
ವಿಶಾಲ್ ಶಿವ್ ಪ್ರಭು ನಿರ್ದೇಶಿಸಿರುವ ‘ಶರಿಗಳ್ ಮಾತ್ರಂ' (sharikal matram) ಎಂಬ 17 ನಿಮಿಷಗಳ ಮಲಯಾಳಂ ಕಿರುಚಿತ್ರದ ದೃಶ್ಯಗಳಿವು. ಗೆಳೆಯ ಇರ್ಶಾದ್ ಬೈರಿಕಟ್ಟೆ ಕಳುಹಿಸಿಕೊಟ್ಟ ಈ ಕಿರುಚಿತ್ರವು ತನ್ನ ಭಾವುಕತೆಯಿಂದಾಗಿ ಮತ್ತೆ ಮತ್ತೆ ಕಾಡುತ್ತದೆ. ನಿಜವಾಗಿ, ಪ್ರೀತಿ-ಪ್ರೇಮ, ಓಡಿ ಹೋಗುವುದು.. ಇವೆಲ್ಲ ಇವತ್ತಿನ ದಿನಗಳಲ್ಲಿ ಹೊಸ ವಿಷಯವಲ್ಲ. ಅದನ್ನು ನಾವು - ಅವರು ಎಂದು ವಿಂಗಡಿಸಬೇಕಾದ ಅಗತ್ಯವೂ ಇಲ್ಲ. ಹೆಣ್ಣು-ಗಂಡು ನಡುವಿನ ಆಕರ್ಷಣೆಗೆ ಧರ್ಮಾತೀತವಾದ ಪ್ರಕೃತಿ ಸಹಜ ಕಾರಣಗಳಿವೆ. ಆದರೆ ಈ ವಾಸ್ತವವನ್ನು ನಿರ್ಲಕ್ಷಿಸುವ ಮಂದಿ ಇಂಥ ಪ್ರಕರಣಗಳನ್ನು ಮುಂದಿಟ್ಟುಕೊಂಡು ಸಮಾಜವನ್ನು ಉದ್ವಿಘ್ನಗೊಳಿಸುತ್ತಾರೆ. ಯಾವ ಧರ್ಮಕ್ಕೆ ಎಷ್ಟು ಲಾಭ-ನಷ್ಟ ಎಂಬ ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ಜೋಡಿಗಳನ್ನು ಹುಡುಕುವುದಕ್ಕಾಗಿ ತಂಡಗಳ ರಚನೆಯಾಗುತ್ತದೆ. ಒಂದು ರೀತಿಯ ಗದ್ದಲ, ಹೇಳಿಕೆ- ಪ್ರತಿ ಹೇಳಿಕೆಗಳ ನಡುವೆ ಪ್ರಕರಣ ಮಾಧ್ಯಮಗಳಲ್ಲೂ ಜೀವಂತ ಇರುತ್ತದೆ. ಆದರೆ ಇಂಥ ಪ್ರಕರಣಗಳಿಗೆ ಇನ್ನೊಂದು ಮುಖವಿರುತ್ತದೆ. ಅದುವೇ ಜೋಡಿಗಳ ಹೆತ್ತವರದ್ದು. ಮುಖ್ಯವಾಗಿ ಹೆಣ್ಣಿನ ಮನೆಯವರು ಇಂಥ ಸಂದರ್ಭಗಳಲ್ಲಿ ತೀವ್ರವಾಗಿ ಕುಗ್ಗಿ ಹೋಗಿರುತ್ತಾರೆ. ಹೆತ್ತು ಹೊತ್ತು ಬೆಳೆಸಿದ, ಮುದ್ದಾಡಿದ ಮಗುವೊಂದು ಕೈಯಿಂದ ಜಾರಿಹೋದ ಅನುಭವ. ಬಂಧುಗಳು ದೂಷಿಸುತ್ತಾರೆ. ನೆರೆಕರೆಯವರು ತಲೆಗೊಂದು ಮಾತಾಡುತ್ತಾರೆ. ಕಚೇರಿ, ಮಾರುಕಟ್ಟೆ, ಅಲ್ಲಿ-ಇಲ್ಲಿ.. ಎಲ್ಲೆಡೆಯೂ ಅವಮಾನಿಸಿದಂಥ ಅನುಭವವಾಗುತ್ತದೆ. ಎಲ್ಲಕ್ಕಿಂತ, ತಾನು ಈ ವರೆಗೆ ಇಷ್ಟು ಪ್ರೀತಿಯಿಂದ ಬೆಳೆಸಿದ ಮಗು ಹೀಗೆ ಮಾಡಿತಲ್ಲ ಎಂಬ ನೋವು ಮತ್ತೆ ಮತ್ತೆ ಹೆತ್ತವರನ್ನು ಚುಚ್ಚುತ್ತಿರುತ್ತದೆ. ನಿಜವಾಗಿ, ಭಾವುಕತೆ ಕೊಡುವ ನೋವು ಇತರೆಲ್ಲ ನೋವುಗಳಿಗಿಂತ ಹೆಚ್ಚು ತೀವ್ರವಾದುದು. ಹಾಗಂತ, ಮಕ್ಕಳೇ ತಪ್ಪು, ಹೆತ್ತವರೇ ಸರಿ ಎಂದಲ್ಲ. ತಮ್ಮ ಪ್ರೇಮ ಪ್ರಕರಣವನ್ನು ಹೆತ್ತವರ ಮುಂದೆ ಹೇಳುವ ಹೊಣೆಗಾರಿಕೆ ಮಕ್ಕಳ ಮೇಲೆ ಇರುವಂತೆಯೇ ಅವರನ್ನು ತಾಳ್ಮೆಯಿಂದ ಆಲಿಸುವ ಹೊಣೆಗಾರಿಕೆ ಹೆತ್ತವರ ಮೇಲೂ ಇದೆ. ತನ್ನ ಮಕ್ಕಳು ತಾನು ಹೇಳಿದಂತೆ ಕೇಳಬೇಕು ಎಂಬ ಅಧಿಕಾರ ಪ್ರಜ್ಞೆಯಿಂದಾಗಿ ಅನೇಕ ಬಾರಿ ಹೆತ್ತವರು ಅನಾಹುತಕ್ಕೆ ಅವಕಾಶ ಮಾಡಿಕೊಡುತ್ತಾರೆ. ಅದೇ ವೇಳೆ, ಇತರೆಲ್ಲ ವಿಷಯಗಳನ್ನು ಹೆತ್ತವರ ಮುಂದಿಡುವ ಮಕ್ಕಳು ಪ್ರೇಮ ಪ್ರಕರಣವನ್ನು ಮುಚ್ಚಿಡುವುದೇ ಹೆಚ್ಚು.
ಜಗತ್ತು ಆಧುನಿಕವಾಗಿದೆ ಎಂದು ನಾವೆಷ್ಟೇ ಹೇಳಿಕೊಂಡರೂ ಓರ್ವ ತಂದೆಗೆ ತನ್ನ ಮಗಳು ಯಾವಾಗಲೂ ಪುಟ್ಟ ಮಗುವೇ. ಆ ಮಗು ತನ್ನ ಭಾವನೆಯಂತೆ ಬದುಕಬೇಕು, ಸುಖವಾಗಿರಬೇಕು, ನಗುನಗುತ್ತಿರಬೇಕು, ಅಪ್ಪನನ್ನು ಕಾಡಿಸುತ್ತಿರಬೇಕು.. ಎಂದೆಲ್ಲಾ ಆತ ಆಸೆ ಪಡುತ್ತಿರುತ್ತಾನೆ. ಕೂಲಿ ಕೆಲಸ ಮಾಡಿಯೋ ರಿಕ್ಷಾ ಚಲಾಯಿಸಿಯೋ, ಕಚೇರಿಯಿಂದಲೋ ಸಂಜೆ ಮನೆಗೆ ಹೋದಾಗ ಅಪ್ಪನನ್ನು ಸ್ವಾಗತಿಸುವುದು ಮಗಳೇ. ನೀರು ಕೊಡುವುದು ಮಗಳೇ. ದಣಿವಾರಿಸಿಕೊಳ್ಳುವಂತೆ, ಸ್ನಾನ ಮಾಡುವಂತೆ, ಚಾ ಕುಡಿಯುವಂತೆ.. ಒತ್ತಾಯಿಸುವುದೆಲ್ಲ ಮಗಳೇ. ಮಗಳೆಂದರೆ ಮನೆಯ ದೀಪ. ಆ ದೀಪದ ಬೆಳಕಿನಲ್ಲಿ ಮನೆ ಖುಷಿ ಖುಷಿಯಾಗಿರುತ್ತದೆ. ಬಹುಶಃ ಇಂಥ ಮಗು ಮನೆಯಲ್ಲಿ ಹೇಳದೇ ಕೇಳದೇ ಹೊರಟು ಹೋಗುವುದನ್ನು ಯಾವ ಹೆತ್ತವರೂ ಜೀರ್ಣಿಸುವುದಕ್ಕೆ ಸಾಧ್ಯವಿಲ್ಲ. ತಮ್ಮ ಅಮೂಲ್ಯವಾದುದನ್ನು ಯಾರೋ ಕಿತ್ತುಕೊಂಡು ಹೋದರು ಎಂಬ ಭಾವದಲ್ಲಿ ಅಥವಾ ತನ್ನ ಮಗು ತನಗೆ ಮೋಸ ಮಾಡಿತು ಎಂಬ ನೋವಿನಲ್ಲಿ ಮನೆ ಮೌನವಾಗಿ ಬಿಡುತ್ತದೆ. ಅಂದಹಾಗೆ, ಮಕ್ಕಳ ಮೇಲೆ ಹೆತ್ತವರು ತಮ್ಮ ಇಚ್ಛೆಯನ್ನು ಹೇರುವುದು ತಪ್ಪೇ ಆಗಿರಬಹುದು. ತಮ್ಮ ಮೂಗಿನ ನೇರಕ್ಕೆ ಅವರು ಬದುಕಬೇಕು ಎಂದು ಬಯಸುವುದನ್ನು ಪ್ರಕೃತಿ ವಿರೋಧಿ ಎಂದೂ ಹೇಳಬಹುದು. ಆದರೆ ಈ ತಪ್ಪು-ಒಪ್ಪುಗಳ ಆಚೆಗೆ ಭಾವನಾತ್ಮಕ ಸಂಬಂಧವೊಂದು ಹೆತ್ತವರು ಮತ್ತು ಮಕ್ಕಳ ನಡುವೆ ಇದೆ. ಆ ಸಂಬಂಧ ಎಷ್ಟು ಗಾಢವಾದುದೆಂದರೆ ಈ ಸ್ವಾತಂತ್ರ್ಯ, ಅಧಿಕಾರ, ಒಪ್ಪು-ತಪ್ಪು ಎಂಬೆಲ್ಲ ವಿಧಿ ನಿಯಮಗಳನ್ನೇ ಸಡಿಲಗೊಳಿಸುವಷ್ಟು. ತಂದೆಯ ಮಡಿಲಲ್ಲಿ ತಲೆಯಿಟ್ಟು ಮಗಳು ತನ್ನ ಇಚ್ಛೆಯನ್ನು ಹೇಳಿಕೊಂಡರೆ ಯಾವ ಅಪ್ಪನೂ ಕರಗದಿರಲಾರ ಅಥವಾ ಮಗಳನ್ನು ಆಲಂಗಿಸಿ ತನ್ನ ಎದೆ ಮಿಡಿತವನ್ನು ಅಪ್ಪ ಹೇಳಿಕೊಂಡರೆ ಯಾವ ಮಗಳೂ ಕರಗದಿರಲಾರಳು. ‘ಶರಿಗಳ್ ಮಾತ್ರಂ’ ಚಿತ್ರದಲ್ಲಿ ಕಾರು ಚಾಲಕ ಹೇಳುವ ಒಂದು ಡಯಲಾಗ್ ಇದೆ -
“ತಾನು ಮಾಡಿದ್ದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಒಂದಂತೂ ಗೊತ್ತಿದೆ, ಹೆತ್ತವರನ್ನು ದುಃಖಕ್ಕೀಡು ಮಾಡುವ ಯಾವ ಸರಿಗಳೂ ನನಗೆ ತಪ್ಪುಗಳಾಗಿವೆ. ಅವರನ್ನು ಸಂತಸಪಡಿಸುವ ಯಾವ ತಪ್ಪುಗಳೂ ನನಗೆ ಸರಿಗಳಾಗಿವೆ. ಸರಿಗಳು ಮಾತ್ರ..”
ಇದು ನನ್ನನ್ನು ಮತ್ತೆ ಮತ್ತೆ ಕಾಡಿತು. ಭಾವುಕಗೊಳಿಸಿತು. ತಾರ್ಕಿಕ ಪ್ರಶ್ನೆಗಳೇನೇ ಇದ್ದರೂ..