![]() |
ಸಾರಾ ಅಬೂಬಕರ್ |
ದಿನೇಶ್ ಅವಿೂನ್ ಮಟ್ಟು ಅಥವಾ ನವೀನ್ ಸೂರಿಂಜೆಯವರ ಅಭಿಪ್ರಾಯಗಳನ್ನು ಪ್ರಭಾಕರ ಭಟ್ಟರದ್ದೋ ತೊಗಾಡಿಯಾ, ಯೋಗಿ ಆದಿತ್ಯನಾಥರದ್ದೋ ಅಭಿಪ್ರಾಯಗಳಂತೆ ಕಾಣುವುದು ಆಕ್ಷೇಪಾರ್ಹ, ಹಾಸ್ಯಾಸ್ಪದ ಮತ್ತು ಖಂಡನೀಯವಾದದ್ದು. ಅವಿೂನ್ ಮಟ್ಟು ಅವರು ನಮ್ಮ ನಡುವಿನ ಅತ್ಯಂತ ಸಂವೇದನಾಶೀಲ ಚಿಂತಕ, ಬರಹಗಾರ. ಅವರು ಈ ನಾಡಿನ ಜಾತ್ಯತೀತ ಮತ್ತು ಕೋಮುವಾದಿ ವಿರೋಧಿ ನಿರ್ಭೀತ ವ್ಯಕ್ತಿತ್ವವೂ ಹೌದು. ನವೀನ್ ಸೂರಿಂಜೆ ಯುವ ಪತ್ರಕರ್ತ. ಅವರಲ್ಲಿ ಅಪಾರ ಉತ್ಸಾಹ ಇದೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾರೆ. ಕೋಮುವಾದವನ್ನು ಮತ್ತು ಧಾರ್ಮಿಕ ಕಂದಾಚಾರಗಳನ್ನು ರಿಸ್ಕ್ ತೆಗೆದುಕೊಂಡು ಖಂಡಿಸುವ ಛಾತಿ ತೋರಿಸುತ್ತಾರೆ. ಇವರನ್ನು ವಿಮರ್ಶಿಸುವ ಮೊದಲು ಈ ಅರಿವು ಇರಬೇಕು. ಹಾಗಂತ, ಇವರ ಅಭಿಪ್ರಾಯಗಳನ್ನು ಸಾರಾಸಗಟು ಒಪ್ಪಿಕೊಳ್ಳಬೇಕು ಎಂದಲ್ಲ. ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಮಟ್ಟು ಮತ್ತು ಸೂರಿಂಜೆಗೆ ಎಷ್ಟು ಇದೆಯೋ ಅಷ್ಟೇ ಸ್ವಾತಂತ್ರ್ಯ ಆ ಅಭಿಪ್ರಾಯಗಳನ್ನು ವಿಮರ್ಶಿಸುವುದಕ್ಕೂ ಇದೆ. ಆದರೆ, ಆ ವಿಮರ್ಶೆಯು ಸೌಜನ್ಯದ ಗೆರೆಯನ್ನು ದಾಟಬಾರದು. ಇವರನ್ನು ಸಂಘಪರಿವಾರದ ವ್ಯಕ್ತಿಗಳೆಂದು ನಿಂದಿಸುವುದು ಖಂಡನೀಯವಷ್ಟೇ ಅಲ್ಲ, ಅದರಲ್ಲಿ ಅಜ್ಞಾನ ಇದೆ. ಅವರ ವ್ಯಕ್ತಿತ್ವ, ನಿಲುವು, ಹೋರಾಟಗಳ ಬಗ್ಗೆ ಅಪರಿಚಿತತೆಯಿದೆ ಮತ್ತು ಧರ್ಮವಿರೋಧಿ ಅಸಹಿಷ್ಣುತೆಯಿದೆ. ಇಂಥ ಏಕಮುಖ ನಿಲುವುಗಳು ಅಂತಿಮವಾಗಿ ಅಭಿಪ್ರಾಯ ಸ್ವಾತಂತ್ರ್ಯವನ್ನೇ ಸಹಿಸದ ಮತ್ತು ಅಂಥವರ ಮೇಲೆ ದಾಳಿ ಮಾಡಬಹುದಾದ ಮಟ್ಟಕ್ಕೆ ಕೊಂಡೊಯ್ಯಬಹುದು. ಇದು ಅಪಾಯಕಾರಿ.
ದಿನೇಶ್ ಅವಿೂನ್ ಮಟ್ಟು ಅವರು ಬುರ್ಖಾದ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಈವರೆಗೆ ಈ ಸಮಾಜ ಆಲಿಸದ ಅಭಿಪ್ರಾಯಗಳೇನೂ ಅಲ್ಲ. ಅವರ ಅಭಿಪ್ರಾಯದಲ್ಲಿ ಒಂದಷ್ಟು ಅರಿವಿನ ಕೊರತೆ, ಯಾವುದೋ ಒತ್ತಡ, ಮುಸ್ಲಿಮ್ ಸಮುದಾಯದೊಳಗಿನ ಇತ್ತೀಚಿನ ಸಂವೇದನಾಶೀಲ ಬೆಳವಣಿಗೆಗಳ ಕುರಿತಂತೆ ಅಧ್ಯಯನ ನಡೆಸದೇ ಇರುವುದು.. ಮುಂತಾದುವುಗಳು ಗೋಚರಿಸುತ್ತವೆ. ಮಟ್ಟು ಸರ್ ಅವರ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡೇ ಈ ಮಾತುಗಳನ್ನು ಹೇಳಬೇಕಾಗಿದೆ. ನಿಜವಾಗಿ, ಬುರ್ಖಾವನ್ನು ಕಳಚಲೇಬೇಕು ಅನ್ನುವುದು ಬುರ್ಖಾ ಧರಿಸಲೇಬೇಕು ಅನ್ನುವಷ್ಟೇ ಅಪಾಯಕಾರಿ ಮತ್ತು ಸ್ವಾತಂತ್ರ್ಯ ವಿರೋಧಿಯಾದುದು. ಬುರ್ಖಾವನ್ನು ಕಿತ್ತು ಹಾಕಬೇಕೆಂಬ ದನಿ ಜೋರಾದಂತೆಲ್ಲ ಅದನ್ನು ಧರಿಸಲೇಬೇಕು ಎಂದು ವಾದಿಸುವವರ ಚಟುವಟಿಕೆಗಳೂ ಜೋರಾಗುತ್ತವೆ. ಇದಕ್ಕೆ ಕಾರಣ, ಬುರ್ಖಾವು ಧರ್ಮದ ಮೂಲಭೂತ ಹಕ್ಕು ಎಂದೋ ಅದಿಲ್ಲದೇ ಧರ್ಮ ಸಂಪೂರ್ಣವಾಗದು ಎಂದೋ ಅಲ್ಲ. ಅದೊಂದು ಬಗೆಯ ಭೀತಿ. ಮುಸ್ಲಿಮರ ಕುರಿತಂತೆ ಈ ದೇಶದಲ್ಲಿ ಇವತ್ತು ಸಾಕಷ್ಟು ಪ್ರಮಾಣದಲ್ಲಿ ಅಪಪ್ರಚಾರಗಳು ಮತ್ತು ಆಕ್ರಮಣಗಳು ನಡೆಯುತ್ತಿವೆ. ಅವರ ಅಸ್ತಿತ್ವ, ಐಡೆಂಟಿಟಿಯನ್ನೇ ಪ್ರಶ್ನಾರ್ಹಗೊಳಿಸುವ ಚಟುವಟಿಕೆಗಳು ನಡೆಯುತ್ತಿವೆ. ಬುರ್ಖಾ, ಸ್ಕಾರ್ಫ್‍ನ ನೆಪದಲ್ಲಿ ಶಾಲಾ
ಪ್ರವೇಶಾತಿಯನ್ನೇ ನಿರಾಕರಿಸುವ ಘಟನೆಗಳೂ ನಡೆಯುತ್ತಿವೆ. ಇಂಥ ನಕಾರಾತ್ಮಕ ಬೆಳವಣಿಗೆಗಳು ಅಂತಿಮವಾಗಿ ಧರ್ಮದ ಮೂಲಭೂತ ಬೇಡಿಕೆಗಳಲ್ಲದವುಗಳನ್ನು ಕೂಡ ಧರ್ಮದ ಬೇಡಿಕೆಯಾಗಿ ಮತ್ತು ಅದನ್ನು ಪ್ರಶ್ನಿಸುವವರನ್ನು ಸಂಚುಕೋರರನ್ನಾಗಿ ಪರಿಗಣಿಸುವಂತೆ ಮಾಡುವುದಕ್ಕೆ ಅವಕಾಶ ಇದೆ. ತಮ್ಮ ಧರ್ಮದ ಒಂದೊಂದು ಕುರುಗಳನ್ನು ಅಳಿಸುವ ಸಂಚುಗಳು ನಡೆಯುತ್ತಿವೆ ಎಂದು ಕೆಲವರು ಭಾವಿಸುವುದಕ್ಕೂ ಸಾಧ್ಯವಿದೆ. ಅಂಥ ಸಂದರ್ಭಗಳಲ್ಲಿ, ತಾವು ‘ಕುರುಹು’ ಎಂದು ಭಾವಿಸುವ ವಿಷಯಗಳು ನಿಜವಾದ ಧಾರ್ಮಿಕ ಕುರುಹುಗಳೋ ಎಂದು ಆಲೋಚಿಸುವಷ್ಟೂ ಅವರಲ್ಲಿ ಸಹನೆ ಇರುವುದಿಲ್ಲ. ಮಟ್ಟು ಮತ್ತು ಸೂರಿಂಜೆಯವರನ್ನು ನಿಂದಿಸಿದವರಲ್ಲಿ ಈ ಅವಿವೇಕ ಗೋಚರಿಸುತ್ತದೆ. ಅವರ ಪ್ರತಿಕ್ರಿಯೆಗಳಲ್ಲಿ, ಬುರ್ಖಾ ಧರಿಸಲೇಬೇಕು ಎಂಬ ಆಗ್ರಹಕ್ಕಿಂತ ತಮ್ಮ ಧರ್ಮದ ವಿರುದ್ಧ ಸಂಚು ನಡೆದಿದೆ ಎಂಬ ಭೀತಿಯೇ ಎದ್ದು ಕಾಣುತ್ತದೆ.
![]() |
ಬಿ. ಎಂ. ಬಶೀರ್ |
![]() |
ಅಮೀನ್ ಮಟ್ಟು |
ಬುರ್ಖಾವು ಮುಸ್ಲಿಮ್ ಸಮುದಾಯದಲ್ಲಿ ಎಷ್ಟು ಬೇಗ ಜನಪ್ರಿಯಗೊಂಡಿತೋ ಅಷ್ಟೇ ವೇಗವಾಗಿ ಇವತ್ತು ಅದರ ‘ಧಾರ್ಮಿಕ ಅನ್ಯತ್ವ'ದ ಕುರಿತೂ ಚರ್ಚೆಗಳಾಗುತ್ತಿವೆ. ಬುರ್ಖಾ ಅಂದರೆ ಕುರ್‍ಆನ್ ಹೇಳಿರುವ ಪರ್ದಾ ಅಲ್ಲ ಎಂಬ ಅರಿವು ಸಮಾಜದಲ್ಲಿ ಮೂಡತೊಡಗಿದೆ. ಈ ಅರಿವನ್ನು ಮೂಡಿಸುತ್ತಿರುವುದು ಮೂಲಭೂತವಾದಿಗಳೆಂದು ಪ್ರಗತಿಪರರು ದೂಷಿಸುವ ಧಾರ್ಮಿಕ ಸಂಘಟನೆಗಳೇ ಎಂಬುದು ಗಮನಾರ್ಹ. ಆದರೂ, ನಿಂತ ಸ್ಥಿತಿಯಲ್ಲಿಯೇ ಬುರ್ಖಾವನ್ನು ಕಳಚಿ ಹಾಕುವಂತಹ ವೈರಾಗ್ಯವಾಗಲಿ, ಅನಿವಾರ್ಯತೆಯಾಗಲಿ ಅಥವಾ ಆರ್ಥಿಕ ಸಬಲೀಕರಣವಾಗಲಿ ಮುಸ್ಲಿಮ್ ಸಮುದಾಯದಲ್ಲಿ ಇವತ್ತಿಲ್ಲ. ಇವತ್ತಿನ ತಲೆಮಾರು ಇದಕ್ಕೆ ಎಷ್ಟರ ಮಟ್ಟಿಗೆ ಒಗ್ಗಿ ಹೋಗಿದೆ ಎಂದರೆ, ಅದಿಲ್ಲದೆ ಕಂಫರ್ಟಬಲ್ ಆಗುತ್ತಿಲ್ಲ ಎಂದು ಹೇಳುವಷ್ಟು. ಮಾತ್ರವಲ್ಲ, ‘ಬುರ್ಖಾ ಕಡ್ಡಾಯ' ಎಂದು ಮನೆಯ ಪುರುಷರು ಭಾವಿಸುವಷ್ಟು. ಇವತ್ತು ಅಸಂಖ್ಯ ಯುವತಿಯರು ಯಾರ ಒತ್ತಡವೂ ಇಲ್ಲದೇ ಇಷ್ಟಪಟ್ಟು ಬುರ್ಖಾ ಧರಿಸುತ್ತಿದ್ದಾರೆ. ಅದು ಕಡ್ಡಾಯವಲ್ಲ ಎಂದು ಹೇಳಿದರೂ ಕಂಫರ್ಟಬಲ್‍ನ ಕಾರಣ ಮುಂದಿಡುತ್ತಾರೆ. ಅವಿೂನ್ ಮಟ್ಟು ಅವರು ಹೇಳಿದಂತೆ, ಒಂದು ವೇಳೆ ಮುಸ್ಲಿಮ್ ಮಹಿಳೆಯರ ಮಧ್ಯೆ ಬುರ್ಖಾ ಬೇಕೇ ಬೇಡವೇ ಎಂಬ ವಿಷಯದಲ್ಲಿ ಇವತ್ತು ಗುಪ್ತ ಮತದಾನ ನಡೆಸಿದರೆ ಬುರ್ಖಾವೇ ಜಯಶಾಲಿಯಾಗುವ ಸಾಧ್ಯತೆ ಇದೆ. ಯಾಕೆಂದರೆ, ಅದರ ಹಿಂದೆ ಇರುವುದು ಮೂಲಭೂತವಾದವಲ್ಲ; ಮರ್ಯಾದೆ ವಾದ, ಬಡತನ ವಾದ ಮತ್ತು ಕೆಲವೊಮ್ಮೆ ಮೈಮುಚ್ಚುವ ವಾದ.
ಹಾಗಂತ, ಮುಸ್ಲಿಮ್ ಸಮಾಜದಲ್ಲಿ ಅಪದ್ಧಗಳು ಇಲ್ಲ ಎಂದಲ್ಲ. ಬುರ್ಖಾ ಕಡ್ಡಾಯವಲ್ಲ ಎಂದು ವಾದಿಸುವ ಮಂದಿಯೇ ತಂತಮ್ಮ ಮನೆಗಳಲ್ಲಿ ಕಡ್ಡಾಯದಂತೆ ಅದನ್ನು ಹೇರುವುದಿದೆ. ಬುರ್ಖಾ ಧರಿಸದೆ ಇರುವ ಸಹಜ ಸ್ವಾತಂತ್ರ್ಯವನ್ನು ಮಹಿಳೆಯರಿಂದ ಕಿತ್ತುಕೊಳ್ಳುವುದಿದೆ. ಬುರ್ಖಾ ಧರಿಸದೇ ಇರುವುದು ಧರ್ಮವಿರೋಧಿ ಕ್ರಮದಂತೆ ವಾದಿಸುವುದೂ ಇದೆ. ಸಾಕಷ್ಟು ಮಹಿಳೆಯರು ತಮ್ಮ ಗಂಡಂದಿರದ್ದೋ ಪುರುಷ ಸಮಾಜದ್ದೋ ಒತ್ತಡಕ್ಕೆ ಮಣಿದು ಬುರ್ಖಾ ಧರಿಸುತ್ತಿರುವರೆಂಬ ವಾದವನ್ನು ನಾನು ಸಾರಾಸಗಟು ತಿರಸ್ಕರಿಸುತ್ತಲೂ ಇಲ್ಲ. ಆದರೆ, ಇವಕ್ಕೆಲ್ಲ ಬುರ್ಖಾ ವಿರೋಧಿ ಅಭಿಯಾನ ನಡೆಸುವುದೋ ನಿಂತ ಸ್ಥಿತಿಯಲ್ಲೇ ಅದನ್ನು ಕಳಚಿ ಹಾಕಬೇಕೆಂದು ಆಗ್ರಹಿಸುವುದೋ ಪರಿಹಾರ ಅಲ್ಲ. ಸಾರಾ ಅಬೂಬಕರ್ ಮಾಡಿದ್ದೂ ಇದೇ ತಪ್ಪನ್ನು. ಅವರು ಮುಸ್ಲಿಮ್ ಸಮಾಜದಲ್ಲಿದ್ದ ಅಜ್ಞಾನಜನ್ಯ ಮತ್ತು ಧರ್ಮ ವಿರೋಧಿ ಆಚರಣೆಗಳನ್ನು ಕಟುವಾಗಿ ಖಂಡಿಸಿದರು. ಅದಕ್ಕೆ ಧರ್ಮವೇ ಕಾರಣ ಎಂಬ ಅತಿರೇಕದ ವ್ಯಾಖ್ಯಾನವನ್ನು ಕೊಟ್ಟರು. ಪದಗಳಿಂದ ಚುಚ್ಚಿದರು. ಅವಮಾನಿಸಿದರು. ಸಾರಾರ ಈ ವಾದದಲ್ಲಿ ಸಮಾಜವನ್ನು ಚಿಂತನೆಗೆ ಹಚ್ಚುವುದಕ್ಕಿಂತ ಆಕ್ರೋಶಕ್ಕೆ ದೂಡುವ ಅಂಶಗಳೇ ಹೆಚ್ಚಿದ್ದುವು. ಮೂರು ದಶಕಗಳ ಹಿಂದಿನ ಸಮಾಜವು ಅವರ ನಕಾರಾತ್ಮಕ ಧೋರಣೆಯನ್ನು ನಕಾರಾತ್ಮಕವಾಗಿಯೇ ಸ್ವೀಕರಿಸಿತು. ಅದು ಸರಿ ಎಂದಲ್ಲ. ಆದರೆ, ಸಾರಾರನ್ನು ನಕಾರಾತ್ಮಕವಾಗಿ ಸ್ವೀಕರಿಸಿದ ಅದೇ ಸಮಾಜ, ‘ಮೂಲಭೂತವಾದಿ'ಗಳ ಸುಧಾರಣಾವಾದಿ ಸಭ್ಯ ವಾದವನ್ನು ಅಷ್ಟೇ ಸಕಾರಾತ್ಮಕವಾಗಿ ಆಲಿಸಿತು. ತನ್ನನ್ನು ತಿದ್ದಿಕೊಳ್ಳಲು ಮುಂದಾಯಿತು. ತಲಾಕ್, ಬಹುಪತ್ನಿತ್ವ, ಬುರ್ಖಾ, ಹೆಣ್ಣು ಮಕ್ಕಳ ಶಿಕ್ಷಣ.. ಮುಂತಾದುವುಗಳ ಕುರಿತಂತೆ ಸಮಾಜದಲ್ಲಿದ್ದ ದೊಡ್ಡದೊಂದು ಅಜ್ಞಾನದ ಪರದೆಯನ್ನು ಕಿತ್ತುಹಾಕುವಲ್ಲಿ ಅದು ಬಹುದೊಡ್ಡ ಯಶಸ್ಸು ಪಡೆಯಿತು. ಇವತ್ತು ಮುಸ್ಲಿಮ್ ಸಮಾಜದಲ್ಲಿ ‘ತಲಾಕ್, ತಲಾಕ್, ತಲಾಕ್’ ನಗಣ್ಯವಾಗುತ್ತಾ ಬಂದಿದೆ. ‘ಬಹುಪತ್ನಿತ್ವ'ದ ಇತಿ-ಮಿತಿಗಳು ಅರ್ಥವಾಗಿವೆ ಮತ್ತು ಹೆಣ್ಣು ಮಕ್ಕಳು ಧಾರಾಳ ಸಂಖ್ಯೆಯಲ್ಲಿ ಶಿಕ್ಷಿತರಾಗುತ್ತಿದ್ದಾರೆ. ಕಳೆದೆರಡು ದಶಕಗಳಲ್ಲಿ ಮುಸ್ಲಿಮ್ ಸಮುದಾಯದೊಳಗೆ ಸದ್ದು-ಗದ್ದಲವಿಲ್ಲದೇ ನಡೆದಿರುವ ಈ ಕ್ರಾಂತಿಯನ್ನು ಪರಿಗಣಿಸುವಾಗ ಸಾರಾ-ಬೊಳುವಾರು ಅವರ ಪರಂಪರೆಯ ಪಂಜನ್ನು (ರಿಲೇ ಬ್ಯಾಟನ್) ಬಿ.ಎಂ. ಬಶೀರ್ ಅಷ್ಟೇ ಆಸಕ್ತಿಯಿಂದ ಯಾಕೆ ಮುಂದುವರಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸಾರಾರ ಸಮಾಜವಲ್ಲ ಇವತ್ತಿನದು. ಬೊಳುವಾರು ಎದುರಿಸಿದ ಸಮಸ್ಯೆಗಳಲ್ಲ ಇವತ್ತಿನ ಮುಸ್ಲಿಮ್ ಸಮಾಜದ್ದು. ಬಲಪಂಥೀಯ ಕೋಮುವಾದಿ ವಿಚಾರಧಾರೆಯ ಭೀತಿಯೇ ಇವತ್ತಿನ ಮುಸ್ಲಿಮ್ ಸಮುದಾಯದ ಒಳಗಿನ ಮತ್ತು ಹೊರಗಿನ ತಲ್ಲಣಗಳಾಗಿವೆ. ಭಾರತೀಕರಣದ ನೆಪದಲ್ಲಿ ಬುರ್ಖಾವನ್ನು ಅವು ಇಶ್ಯೂ ಮಾಡುತ್ತಿವೆ. ತಲಾಕ್, ಬಹುಪತ್ನಿತ್ವ, ಜಿಹಾದ್.. ಎಂಬೆಲ್ಲಾ ಪದಗಳನ್ನು ಅವು ವಿರೂಪಗೊಳಿಸಿ ಮಾರುತ್ತಿವೆ. ಹೆಣ್ಣು-ಗಂಡಿನ ಪ್ರೀತಿಯನ್ನು ಲವ್ ಜಿಹಾದ್ ಅನ್ನುತ್ತಿವೆ. ಪ್ರತಿ ಸ್ಥಳೀಯ ಘಟನೆಯನ್ನೂ ರಾಷ್ಟ್ರಮಟ್ಟದ ಇಶ್ಯೂ ಆಗಿಸುವ ಮತ್ತು ಕೋಮುಗಲಭೆಗೆ ಪ್ರಚೋದನೆ ಕೊಡುವ ಜಾಣತನವನ್ನು ಅವು ಪ್ರದರ್ಶಿಸುತ್ತಿವೆ. ಇಂಥ ಹೊತ್ತಲ್ಲಿ ಬಿ.ಎಂ. ಬಶೀರ್‍ರಂಥವರು ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಇವತ್ತು ಮುಸ್ಲಿಮ್ ಸಮಾಜದೊಳಗಿನ ಸುಧಾರಣಾ ಪ್ರಕ್ರಿಯೆಗೆ ಅಡ್ಡವಾಗಿ ನಿಂತಿರುವುದು (ಮಟ್ಟು ಸರ್ ಪ್ರಕಾರ) ‘ಮೂಲಭೂತವಾದಿ' ಸಂಘಟನೆಗಳಲ್ಲ. ನಿಜವಾಗಿ ಅವೇ ಸುಧಾರಣಾ ಪ್ರಕ್ರಿಯೆಗಳಿಗೆ ಚಾಲನೆ ಕೊಟ್ಟಿವೆ ಮತ್ತು ಆ ದಾರಿಯಲ್ಲಿ ಶ್ರಮಿಸುತ್ತಿವೆ. ಈ ಸುಧಾರಣಾ ಪ್ರಕ್ರಿಯೆಗಳು ನಿಧಾನಗೊಳ್ಳುವಂತೆ ಮತ್ತು ಸಮಾಜವು ಕೋಮುವಾದೀಕರಣಗೊಳ್ಳುವಂತೆ ಪ್ರಚೋದನೆ ಸಿಗುತ್ತಿರುವುದು ಬಲಪಂಥೀಯ ಕೋಮುವಾದದಿಂದ. ಆದ್ದರಿಂದ ಸಾರಾರ ಪಂಜನ್ನು ಪಕ್ಕಕ್ಕಿಟ್ಟ ಬಶೀರ್‍ರ ನಡೆಯನ್ನು ಸೂಕ್ತ ಮತ್ತು ಸಮಂಜಸ ಎಂದೇ ವ್ಯಾಖ್ಯಾನಿಸಬೇಕಾಗಿದೆ. ಇವತ್ತಿನ ದಿನಗಳಲ್ಲಿ ಮುಸ್ಲಿಮ್ ಸಮಾಜಕ್ಕೆ ಸಾರಾರ (ಬಂಡಾಯ) ಅಗತ್ಯವಿಲ್ಲ. ಬಶೀರ್‍ರಂಥವರ ಅಗತ್ಯವಿದೆ. ಮುಸ್ಲಿಮ್ ಸಮಾಜದ ಒಳಗೆ ಗುರುತಿಸಿಕೊಂಡು ಅಲ್ಲಿನ ಧ್ವನಿಯಾಗುತ್ತಲೇ ಮತ್ತು ಸಂದರ್ಭೋಚಿತವಾಗಿ ಸುಧಾರಣಾ ಪರ ನಿಲುವು ವ್ಯಕ್ತಪಡಿಸುತ್ತಲೇ ಬಲಪಂಥೀಯ ಕೋಮುವಾದದ ವಿರುದ್ಧ ಅವರು ಪ್ರಬಲ ಪಂಜನ್ನು ಉರಿಸಬೇಕಾಗಿದೆ. ಈ ಪಂಜು ಎಲ್ಲ ರೀತಿಯ ಕೋಮುವಾದವನ್ನು ದಹಿಸುವ ಮತ್ತು ಅಜ್ಞಾನದ ಕತ್ತಲೆಗೆ ಬೆಳಕು ನೀಡುವ ಕೆಲಸವನ್ನು ಮಾಡಬೇಕಾಗಿದೆ.
ಕುಕ್ಕಿಲ ಅವರಿಗೆ --- ಬುರ್ಖಾದ ಅನಿವಾರ್ಯತೆ ಮತ್ತು ಅಗತ್ಯತೆಯನ್ನು ಬಹಳ ತರ್ಕ ಬದ್ಧವಾಗಿ ಹೇಳಿದ್ದೀರಿ. ಆದರೆ ನಮ್ಮ ಜೀವನದಲ್ಲಿ ತರ್ಕವಷ್ಟೇ ಸತ್ಯವಲ್ಲ ಅಥವಾ ತರ್ಕವೇ ಸತ್ಯವಾಗಿರಲು ಸಾಧ್ಯವಿಲ್ಲ ಎಂಬುದನ್ನು ಮರೆಯಬಾರದು. ಬಡವರು ತಮ್ಮ ಉಡುಗೆ ತೊಡುಗೆಗಳ ಬಡತನವನ್ನು ಮುಚ್ಚಿಕ್ಕೊಳ್ಳಲು ಬುರ್ಖಾ ಧರಿಸಿರಬಹುದು. ಆದರೆ ಶ್ರೀಮಂತರೂ ಏಕೆ ಧರಿಸುತ್ತಾರೆ ಎಂಬ ಪ್ರಶ್ನೆಯನ್ನು ತಾವು ಕೇಳಿಕೊಂಡಿಲ್ಲ. ನಾನು ಸ್ವತಃ ಬೆಂಗಳೂರಿಗೆ ತೀರಾ ಸಮೀಪದಲ್ಲಿರುವ , ಮುಂದುವರೆದ ತಾಲೋಕ್ಕು ಕೇಂದ್ರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಶಾಖೆಯೊಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುವ ಮುಸ್ಲಿಂ ಹೆಣ್ಣು ಮಗಳೊಬ್ಬರು ಸಂಜೆ ನಾಲ್ಕು ಗಂಟೆಗೆ ಆಕೆಯ ಕೆಲಸ ಮುಗಿದ ನಂತರ ಬುರ್ಖಾ ಧರಿಸಿ ಹೊರಟಿದ್ದನ್ನು ನೋಡಿದ್ದೇನೆ. ತಾವು ಮುಸ್ಲಿಂ ಪ್ರಗತಿಪರರಿಗಿಂತ ಹೆಚ್ಚಿನ ಬದಲಾವಣೆಯನ್ನು ಮೂಲಭೂತವಾದಿಗಳು ತಂದಿದ್ದಾರೆ ಎಂದಿದ್ದೀರಿ. ಅದೇ ರೀತಿ ಮುಸ್ಲಿಮೇತರ ಧರ್ಮ,ಪಂಗಡಗಳಲ್ಲೂ ಬದಲಾವಣೆಯ ಗಾಳಿ ಬೀಸುತ್ತಿರುವುದು ಸಂಪ್ರದಾಯ ನಿಷ್ಠರಿಂದಲೇ. (ಪ್ರಗತಿಪರರು ಸದಾ ನಿಂದಿಸುವ, ಟೀಕಿಸುವ ಪುರೋಹಿತಶಾಹಿಗಳು,ಅದರಲ್ಲೂ ಬ್ರಾಹ್ಮಣರ ಸಮಾಜದಲ್ಲಿ). ಆದರೆ ಇದನ್ನು ನಮ್ಮ ಕನ್ನಡದ ಬುದ್ಧಿಜೀವಿಗಳು ( ಹಿಂದೂ ಮತ್ತು ಮುಸ್ಲಿಂ ಇಬ್ಬರೂ) ಗಮನಿಸಲಿಲ್ಲ. ಟೀಕೆ ಅವಹೇಳನವನ್ನೇ ತಮ್ಮ ಪೂರ್ಣಾವಧಿ ಉದ್ಯೋಗ ಮಾಡಿಕೊಂಡರು. ಈಗಲೂ ಮಾಡುತ್ತಿದ್ದಾರೆ. ಆದರೆ ಈಗ ಮುಸ್ಲಿಂ ಸಮಾಜದ ಬುರ್ಖಾ ವಿಷಯದ ಬಗ್ಗೆ ಬಂದ ಒಂದು ಮಾತಿಗೆ ಎಷ್ಟೊಂದು ಸಮರ್ಥನೆಗಳು!!. ಏಕೆ ಹೀಗೆ? ಮುಸ್ಲಿಂ ಸಮಾಜದಲ್ಲಿನ ಸಂಪ್ರದಾಯಗಳ ಬಗ್ಗೆ ಮಾತಾಡುವುದು ಅಪರಾಧವಾಗುತ್ತದೆಯೇ? ಈ ಪ್ರಶ್ನೆಯನ್ನು ತಾವು ತಮ್ಮ ಲೇಖನದಲ್ಲಿ ಕೇಳಿಕೊಂಡಿಲ್ಲ. ಮಾಮೂಲಿನಂತೆ ಹಿಂದೂ ಸಂಘಟನೆಗಳಿಂದ ಮುಸ್ಲಿಂ ಸಮಾಜಕ್ಕೆ ಭಯ ಬಂದಿದೆ. ಎಂದಿದ್ದೀರಿ. ಆದರೆ ಇಸ್ಲಾಂ ಧರ್ಮದ ದೇಶಗಳಿಗಿಂತ ಜಾತ್ಯಾತೀತ,ಧರ್ಮಾತೀತ ಭಾರತದಲ್ಲಿ ಮುಸ್ಲಿಂ ಜನಾಂಗಕ್ಕೆ ಹೆಚ್ಚಿನ ಸ್ಥಾನ, ಭದ್ರತೆ ಇದೆ ಎಂಬುದನ್ನು ತಾವು ಮರೆಯಬಾರದು. ಕಿಡಿಗೇಡಿಗಳು ಎಲ್ಲಾ ಧರ್ಮ, ಜಾತಿಗಳಲ್ಲೂ ಇರುತ್ತಾರೆ. ಆದರೆ ಅದೊಂದರಿಂದಲೇ ಹಿಂದುಗಳನ್ನು ಮುಸ್ಲಿಂಮರು, ಮುಸ್ಲಿಮರನ್ನು ಹಿಂದೂಗಳು ಅಪನಂಬಿಕೆಯ ಕಣ್ಣುಗಳಿಂದ ನೋಡುವುದು ಸರಿಯಲ್ಲ.
ReplyDelete--ಎಂ ಎ ಶ್ರೀರಂಗ ಬೆಂಗಳೂರು .