Tuesday, September 9, 2014

‘ಮೌಲಾನಾ’ ಪ್ರತಿಪಾದಿಸಿದ ಭಾವೈಕ್ಯತೆಯ ಸುತ್ತ..

ಅಕ್ಬರ್
ದಾರಾಶುಕೊ
ರಾಜಾರಾಂ ಮೋಹನ್ ರಾಯ್
ರಾಮಕೃಷ್ಣ ಪರಮಹಂಸ
    ಸಹಿತ ಅನೇಕಾರು ಮಂದಿ ಈ ದೇಶದಲ್ಲಿ ‘ಸರ್ವಧರ್ಮ ಸಮಭಾವ' ಅಥವಾ ಧಾರ್ಮಿಕ ಸೌಹಾರ್ದತೆಯ ಕುರಿತಂತೆ ತಮ್ಮದೇ ಆದ ವಿಚಾರಗಳನ್ನು ಮುಂದಿಟ್ಟಿದ್ದಾರೆ. ಅವುಗಳ ಪರ ಮತ್ತು ವಿರುದ್ಧ ಧಾರಾಳ ಚರ್ಚೆಗಳೂ ಆಗಿವೆ. ವಿಭಿನ್ನ ಧರ್ಮ, ಜಾತಿ, ಜನಾಂಗಗಳಿರುವ ದೇಶವೊಂದರಲ್ಲಿ ಧಾರ್ಮಿಕ ಆಚರಣೆಗಳು ಹೇಗಿರಬೇಕು? ಅವುಗಳ ನಡುವೆ ಸೌಹಾರ್ದತೆ ಸಾಧ್ಯವೇ? ಹೇಗೆಲ್ಲ ಸಾಧ್ಯ? ಯಾವುದು ಸೌಹಾರ್ದ ಮತ್ತು ಯಾವುದಲ್ಲ? ಗಾಡ್, ಖುದಾ, ಭಗವಾನ್, ಅಲ್ಲಾಹ್.. ಮುಂತಾದುವುಗಳೆಲ್ಲ ಓರ್ವ ದೇವನ ಹಲವು ನಾಮಗಳಾಗಬಹುದಾದರೆ, ಇಸ್ಲಾಮ್, ಕ್ರೈಸ್ತ, ಹಿಂದೂ, ಬೌದ್ಧ, ಜೈನ.. ಮುಂತಾದುವುಗಳೆಲ್ಲ ಆ ಓರ್ವ ದೇವನ ಹಲವು ಹೆಸರುಗಳಲ್ಲಿರುವ ಒಂದೇ ಧರ್ಮವಾಗಬಾರದೇಕೆ? ‘ಸರ್ವೆ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾ - ಎಲ್ಲರೂ ಸುಖವಾಗಿರಲಿ, ಯಾರಿಗೂ ದುಃಖ ಬಾರದಿರಲಿ’ - ಎಂಬ ಶ್ಲೋಕಕ್ಕಿಂತ ‘ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಮತ್ತು ಸರ್ವ ಸಮಾನರು' ಎಂಬ ಕುರ್‍ಆನಿನ (49:13) ವಚನದಲ್ಲಿ ಏನು ಭಿನ್ನತೆಯಿದೆ? ಧರ್ಮಗಳೆಲ್ಲ ಪರಸ್ಪರ ಪ್ರತ್ಯೇಕವಾಗಿ ಮತ್ತು ಆಚರಣೆಗಳಲ್ಲೋ ಆರಾಧನೆಗಳಲ್ಲೋ ಒಂದಕ್ಕೊಂದು ಸಂಧಿಸದಷ್ಟು ಅನ್ಯವಾಗಿ ಗುರುತಿಸಿಕೊಳ್ಳುತ್ತಿರುವುದರಿಂದಲೇ ಅಲ್ಲವೇ ವಿಚಾರವಾದ, ನಾಸ್ತಿಕವಾದ, ಮೂಲಭೂತವಾದಗಳು ಬೆಳೆದಿರುವುದು? ಟಿ.ಎನ್. ಸೀತಾರಾಮ್‍ರ ಧಾರಾವಾಹಿಯೊಂದರಲ್ಲಿ ಮಗುವೊಂದು ಬೆತ್ತಲೆಯಾಗಿ ಮನೆಯಿಂದ ಹೊರಗೆ ಹೋಗುವ ದೃಶ್ಯವಿದೆ. ಧರ್ಮದ ಬೇಲಿಯೊಳಗೆ ಬೆಳೆಸದೆ ಸ್ವತಂತ್ರವಾಗಿ ಮನುಷ್ಯರನ್ನು ಬೆಳೆಸಬೇಕೆಂಬ ಆಗ್ರಹ ಆ ದೃಶ್ಯದಲ್ಲಿದೆ. ಇಂಥ ಆಲೋಚನೆ, ವಿಚಾರಗಳಿಗೆ ಮೂಲ ಕಾರಣ ಯಾರು? ಧರ್ಮಗಳೋ ಅಥವಾ ಅದನ್ನು ಪ್ರತ್ಯೇಕತೆಯೊಳಗೆ ತೂರಿಸಿದ ಧರ್ಮಭಕ್ತರೋ?
   ಬಹುಶಃ ಪ್ರಶ್ನೆಗಳು ಧಾರಾಳ ಇವೆ. ಮಾತ್ರವಲ್ಲ, ಇಂಥ ಪ್ರಶ್ನೆಗಳು ಎಷ್ಟು ಪ್ರಭಾವಶಾಲಿ ಆಗಿರುತ್ತವೆ ಎಂದರೆ, ದಾರಾಶುಕೊರಂಥ ಅನೇಕಾರು ಮಂದಿಯನ್ನೂ ಅವು ಸೃಷ್ಟಿಸುತ್ತವೆ. ನಿಜವಾಗಿ, ‘ಕಾರ್ಮಿಕ ವರ್ಗದ ಹೊಟ್ಟೆಯನ್ನು ಧಾರ್ಮಿಕ ಚಿಂತನೆಗಳು ತಣಿಸುವುದಿಲ್ಲ' ಎಂಬ ಅಸಹನೆಯಿಂದಲೇ ಕಾರ್ಲ್ ಮಾರ್ಕ್ಸ್ ರ ಕಮ್ಯುನಿಸ್ಟ್ ಮೆನಿಫೆಸ್ಟೋ ಹುಟ್ಟಿಕೊಂಡದ್ದು. ಹಾಗಂತ, ಆ ಮೆನಿಫೆಸ್ಟೋ ಕಾರ್ಮಿಕರ ಹೊಟ್ಟೆಯನ್ನು ತಣಿಸಿತೋ ಎಂದು ಪ್ರಶ್ನಿಸಿದರೆ, ವಿಷಾದವೇ ಉತ್ತರವಾಗುತ್ತದೆ. ಜಗತ್ತಿನ ಇತಿಹಾಸವು ವರ್ಗ ಸಂಘರ್ಷದ ಇತಿಹಾಸವಾಗಿದೆ ಎಂದು ಹೇಳಿದ್ದು ಕಾರ್ಲ್ ಮಾರ್ಕ್ಸ್. ಅವರು ಕಾರ್ಮಿಕ ವರ್ಗದ ಕ್ರಾಂತಿಯನ್ನು ಬಯಸಿದರು. ಕಮ್ಯುನಿಸಂ ಎಂಬ ‘ಕಾರ್ಮಿಕ ಕ್ರಾಂತಿ'ಯು ಯುರೋಪನ್ನು ಸಂಪೂರ್ಣವಾಗಿ ಆವರಿಸದಿದ್ದರೂ ಅಲ್ಲೆಲ್ಲಾ ಶ್ರೀಮಂತ ವರ್ಗವನ್ನು ಅದು ಅಪ್ರತ್ಯಕ್ಷಗೊಳಿಸಲಿದೆ ಎಂದು ಅವರು ಭಾವಿಸಿದ್ದರು. ಅಷ್ಟಕ್ಕೂ, ಅದು ಅವರೊಬ್ಬರ ನಿರೀಕ್ಷೆಯಷ್ಟೇ ಆಗಿರಲಿಲ್ಲ. ಏಂಗಲ್ಸ್ ರಿಗೂ ಮತ್ತು ಅವರಂಥ ಅನೇಕ ಚಿಂತಕರಿಗೂ ಅದರಲ್ಲಿ ಪಾತ್ರವಿದೆ. ಜಗತ್ತಿನಲ್ಲಿರುವ ಧರ್ಮಗಳಿಗೆಲ್ಲ ಪರ್ಯಾಯ ಧರ್ಮವಾಗಿ ‘ಕಾರ್ಮಿಕ ಧರ್ಮ' ಉದಯವಾಯಿತೆಂಬ ಮತ್ತು ಅದುವೇ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವೆಂಬ ಪ್ರಚಾರವೂ ನಡೆಯಿತು. ಆದರೆ ಆ ಭರವಸೆ ತೀರಾ ಸಣ್ಣ ಅವಧಿಯಲ್ಲೇ ಧರಾಶಾಹಿಯಾಯಿತು. ಕಮ್ಯುನಿಸ್ಟ್ ಮೆನಿಫೆಸ್ಟೋವನ್ನು ರಷ್ಯಾದಲ್ಲಿ ಜಾರಿಗೆ ತಂದ ಸ್ಟಾಲಿನ್‍ರೇ ಆ ಮೆನಿಫೆಸ್ಟೋದ ಅಪ್ರಸ್ತುತತೆಯನ್ನು ಸಾರಿಬಿಟ್ಟರು. ಅವರಿಗೆ ಒಂದಕ್ಕಿಂತ ಹೆಚ್ಚು ಅದ್ದೂರಿ ಬಂಗಲೆಗಳಿದ್ದುದು, ಅತ್ಯಾಧುನಿಕ ವಾಹನಗಳಲ್ಲಿ ಸಂಚರಿಸುತ್ತಿದ್ದುದು ಮತ್ತು ಸ್ವದೇಶಿತನವನ್ನು ಪ್ರಚುರಪಡಿಸುತ್ತಾ ವಿದೇಶಿ ಮದ್ಯವಾದ ಸ್ಕೋಡಾವನ್ನು ಸೇವಿಸುತ್ತಿದ್ದುದೆಲ್ಲಾ ಕ್ರಮೇಣ ಬಹಿರಂಗವಾಯಿತು. ಕಮ್ಯುನಿಸ್ಟ್ ಮೆನಿಫೆಸ್ಟೋ ಮಾತಾಡಿದ್ದು ಕಾರ್ಮಿಕರ ಪರ. ಆದರೆ ಸ್ಟಾಲಿನ್ ಬದುಕಿದ್ದು ಅಪ್ಪಟ ಶ್ರೀಮಂತರಂತೆ. ಅವರ ದಾಂಪತ್ಯ ಬದುಕಂತೂ ಅತ್ಯಂತ ಮಾದರಿರಹಿತವಾಗಿತ್ತು ಎಂದು ಎರಡು ವರ್ಷಗಳ ಹಿಂದೆ ಮೃತಪಟ್ಟ ಅವರ ಮಗಳು ಸ್ವೆಟ್ಲಾನಾ ಸ್ಟಾಲಿನಾ ತಮ್ಮ ‘ಟ್ವೆಂಟಿ ಲೆಟರ್ಸ್ ಟು ಏ  ಫ್ರೆಂಡ್  ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಅವರು ನನ್ನ ತಾಯಿಯನ್ನು ಗುಂಡಿಟ್ಟು ಕೊಂದಿದ್ದಾರೆ ಎಂದವರು ಹೇಳಿದ್ದಾರೆ. ಧರ್ಮದ ವೈಫಲ್ಯವನ್ನು ಎತ್ತಿಕೊಂಡು ಕಾರ್ಮಿಕವಾದವನ್ನು ನೆಚ್ಚಿಕೊಂಡ ವ್ಯಕ್ತಿಯೋರ್ವರ ವಿಫಲ ಬದುಕಿನ ಚಿತ್ರಣವನ್ನು ಸ್ವೆಟ್ಲಾನಾರ ಆತ್ಮಕತೆ ವಿವರಿಸುತ್ತದೆ. ಧಾರಾಶುಕೊ ಅಂತೂ ಧರ್ಮಗಳ ನಡುವೆ ಪಾರಿಭಾಷಿಕಗಳ ಹೊರತು ಇನ್ನೇನೂ ವ್ಯತ್ಯಾಸ ಇಲ್ಲವೆಂದು ಹೇಳಿದ್ದ. ಧಾರ್ಮಿಕ ಸೌಹಾರ್ದತೆಯನ್ನು ಗುರಿಯಾಗಿಟ್ಟುಕೊಂಡು ‘ದೀನೇ ಇಲಾಹಿ'ಯನ್ನು ಅಕ್ಬರ್ ಸ್ಥಾಪಿಸಿದಂತೆಯೇ ಅದರ ಮುಂದುವರಿದ ಭಾಗವನ್ನು ದಾರಾಶುಕೊ ಕೈಗೆತ್ತಿಕೊಂಡಿದ್ದ. ಆತ ಉಪನಿಷತ್ತು, ಭಗವದ್ಗೀತೆ, ಚಂದ್ರವಧೆ, ಯೋಗವಿಶಿಷ್ಟ ಇತ್ಯಾದಿ ಸಂಸ್ಕøತ ಗ್ರಂಥಗಳನ್ನು ಫಾರ್ಸಿ ಭಾಷೆಗೆ ಅನುವಾದಿಸಿದ್ದ. ಹಿಂದೂ ಮತ್ತು ಇಸ್ಲಾಮ್ ಧರ್ಮಗಳ ತುಲನಾತ್ಮಕ ಅಧ್ಯಯನವುಳ್ಳ ‘ಮಜ್‍ಮಉಲ್ ಬಹ್ರೈನ್' ಎಂಬ ಫಾರ್ಸಿ ಗ್ರಂಥವನ್ನು ಬರೆದದ್ದಲ್ಲದೇ ‘ಸಮುದ್ರ ಸಂಗಮ’ ಎಂಬ ಹೆಸರಲ್ಲಿ ಅದನ್ನು ಸಂಸ್ಕøತಕ್ಕೂ ಅನುವಾದಿಸಿದ್ದ. 1866ರಲ್ಲಿ ಸ್ಥಾಪಿತವಾದ ‘ಭಾರತೀಯ ಬ್ರಹ್ಮ ಸಮಾಜವು' ಹಿಂದೂ, ಬೌದ್ಧ ಮತ್ತು ಇಸ್ಲಾಮ್‍ನಿಂದ ಪಡೆಯಲಾದ ಉದ್ಧರಣೆಗಳಿಂದ ಕೂಡಿದ ಚಿಂತನೆಗಳಾಗಿವೆ ಎಂದು ಹೇಳಲಾಗುತ್ತದೆ. ಸರ್ವಧರ್ಮ ಸಮಭಾವ ಎಂಬ ಕಲ್ಪನೆಯಲ್ಲಿ ರಾಮಕೃಷ್ಣ ಪರಮ ಹಂಸರಿಗೂ ವಿರೋಧ ಇರಲಿಲ್ಲ. ಹೀಗೆ ಒಂದು ಬಗೆಯ ಧಾರ್ಮಿಕ ಸೌಹಾರ್ದತೆ, ಸಮಭಾವದ ಕಲ್ಪನೆಗಳು ಈ ದೇಶದಲ್ಲಿ ಆಗಾಗ ಮೂಡಿ ಬರುತ್ತಲೇ ಇದ್ದುವು. ವಿವಿಧ ನದಿಗಳು ಸಾಗರಕ್ಕೆ ಸೇರುವಂತೆ ವಿವಿಧ ಧರ್ಮಗಳೆಲ್ಲ ಒಂದೇ ದೇವನಲ್ಲಿಗೆ ಸೇರುತ್ತವೆ ಎಂಬ ಮಾತುಗಳೂ ಹುಟ್ಟಿಕೊಂಡವು. ಅಷ್ಟಕ್ಕೂ,
   ಬಹುದೇವಾರಾಧನೆ ಮತ್ತು ಮೂರ್ತಿ ಪೂಜೆಯನ್ನು ಪ್ರತಿಪಾದಿಸುವ ಹಿಂದೂ ಧರ್ಮ ಮತ್ತು ಏಕದೇವಾರಾಧನೆಯನ್ನು ಮಾತ್ರ ಪ್ರತಿಪಾದಿಸುವ ಹಾಗೂ ಮೂರ್ತಿ ಪೂಜೆ ಮತ್ತು ಬಹುದೇವಾರಾಧನೆಯನ್ನು ಪ್ರಬಲವಾಗಿ ನಿರಾಕರಿಸುವ ಇಸ್ಲಾಮ್ ಧರ್ಮದ ನಡುವೆ ಭಾವೈಕ್ಯತೆ ಹೇಗೆಲ್ಲ ಸಾಧ್ಯ? ಯಾವೆಲ್ಲ ವಿಷಯಗಳಲ್ಲಿ ಸಾಧ್ಯ? 33ರಿಂದ 33 ಕೋಟಿಯ ವರೆಗೆ ದೇವತೆಗಳಲ್ಲಿ ನಂಬಿಕೆಯಿಡುವ ಹಿಂದೂ ಧರ್ಮಕ್ಕೂ ಪ್ರವಾದಿ ಮುಹಮ್ಮದ್‍ರನ್ನು(ಸ) ಅಂತಿಮ ಪ್ರವಾದಿ ಮತ್ತು ಪವಿತ್ರ ಕುರ್‍ಆನನ್ನು ಅಂತಿಮ ದೇವಗ್ರಂಥ ಎನ್ನುವ ಇಸ್ಲಾಮ್‍ಗೂ ನಡುವೆ ಖಂಡಿತ ಅನೇಕಾರು ವಿಷಯಗಳಲ್ಲಿ ಮೂಲಭೂತ ವ್ಯತ್ಯಾಸಗಳಿವೆ. ಹೀಗಿರುವಾಗ, ಮೂರ್ತಿ ಪೂಜೆಯನ್ನು ಪ್ರಬಲವಾಗಿ ನಿರಾಕರಿಸುವ ಧರ್ಮದ ವ್ಯಕ್ತಿಯೊಬ್ಬ ಗಣಪತಿಯನ್ನು ಪೂಜಿಸುವುದು ಮತ್ತು ಅದನ್ನು ಭಾವೈಕ್ಯತೆ ಎಂದು ಮಾಧ್ಯಮಗಳು ವ್ಯಾಖ್ಯಾನಿಸುವುದನ್ನು ಎಲ್ಲಿಯವರೆಗೆ ಒಪ್ಪಿಕೊಳ್ಳಬಹುದು? ಧರ್ಮದ ಮೂಲಭೂತ ವಿಶ್ವಾಸಕ್ಕೇ ವಿರುದ್ಧವಾದ ಕೃತ್ಯವೊಂದು ಭಾವೈಕ್ಯತೆಯ ಹೆಸರಲ್ಲಿ ಶ್ಲಾಘನೆಗೆ ಒಳಗಾಗುವುದು ಎಷ್ಟು ಸರಿ? ಇಸ್ಲಾಮ್‍ನಲ್ಲಿ ಮದ್ಯಪಾನವನ್ನು ಬಲವಾಗಿ ನಿಷೇಧಿಸಲಾಗಿದೆ. ಸಾಷ್ಟಾಂಗವು ನಿರಾಕಾರನಾದ ದೇವನಿಗೆ ಹೊರತು ಇನ್ನಾವ ಮನುಷ್ಯರಿಗೋ ವಿಗ್ರಹಗಳಿಗೋ ಆಗಬಾರದೆಂದು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಅಸಂಖ್ಯ ದೇವ-ದೇವತೆಗಳ ಜೊತೆಗೇ ಜಡ ಮತ್ತು ಚೇತನ ವಸ್ತುಗಳೂ ಶ್ರದ್ಧಾಕೇಂದ್ರಗಳಾಗಿವೆ. ಸೂರ್ಯ, ಚಂದ್ರ, ನಕ್ಷತ್ರ, ಸಮುದ್ರ, ನದಿ, ಪರ್ವತ, ಮರ, ಗೋವು ಎಲ್ಲವೂ ಪೂಜನೀಯ. ಹಾಗಂತ, ಇವುಗಳನ್ನು ಪೂಜಿಸುವವರನ್ನು ನಿರಾಕಾರ ದೇವನನ್ನು (ಅಲ್ಲಾಹ್) ಪೂಜಿಸುವಂತೆ ಇಸ್ಲಾಮ್ ಬಲವಂತ ಪಡಿಸುವುದಿಲ್ಲ (ಪವಿತ್ರ ಕುರ್‍ಆನ್: 2: 256). ಅಲ್ಲದೇ, ಅದು ವಿಗ್ರಹಗಳ ನಿಂದನೆಯನ್ನು ಧರ್ಮನಿಷಿದ್ಧ ಎನ್ನುತ್ತದೆ (ಪವಿತ್ರ ಕುರ್‍ಆನ್: 6: 108). ಹಾಗೆಯೇ, ಶವವನ್ನು ದಫನ ಮಾಡಬೇಕೆಂದೇ ಇಸ್ಲಾಮ್ ಆದೇಶಿಸುತ್ತದೆ. ಹಿಂದೂಗಳಲ್ಲಿರುವ ಸಪ್ತಪದಿಗಿಂತ ಭಿನ್ನವಾಗಿ ಇಸ್ಲಾಮ್‍ನಲ್ಲಿ ನಿಕಾಹ್ ಕ್ರಮ ಇದೆ. ಜೈನರ ದಿಗಂಬರ ಪದ್ಧತಿ ಇಸ್ಲಾಮ್‍ನಲ್ಲಿಲ್ಲ. ಸನ್ಯಾಸತ್ವವೂ ಇಲ್ಲ. ಹಾಗಂತ, ಭಾವೈಕ್ಯತೆಗಾಗಿ ಓರ್ವ ಮುಸ್ಲಿಮ್ ಈ ನಿಯಮಗಳನ್ನೆಲ್ಲಾ ಮುರಿಯಬಹುದೇ? ಹಾಗೆ ಮುರಿಯುವುದು ಭಾವೈಕ್ಯತೆಯೆಂದಾದರೆ, ಭಾವೈಕ್ಯತೆಯ ಅರ್ಥವೇನು, ಧರ್ಮಗಳ ಮೂಲಭೂತ ಬೇಡಿಕೆಗಳನ್ನು ಮುರಿಯುವುದೇ? ಹೀಗೆ ಮುರಿಯುವುದರಿಂದ ಒಂದು ಧರ್ಮದ ಅನುಯಾಯಿಗಳಿಗೆ ಆಗಬಹುದಾದ ನೋವುಗಳು ಎಷ್ಟರ ಮಟ್ಟಿಗೆ ಪರಿಗಣನೆಗೆ ಒಳಗಾಗಿವೆ? ಭಾವೈಕ್ಯತೆ ಎಂಬುದು ವಿವಿಧ ಧರ್ಮಗಳ ಅನುಯಾಯಿಗಳು ತಂತಮ್ಮ ಧರ್ಮದ ಮೂಲಭೂತ ವಿಶ್ವಾಸ ಮತ್ತು ಬೇಡಿಕೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದರ ಹೆಸರೇ ಆಗಿದ್ದರೆ ಮತ್ತು ಅದು ಶ್ಲಾಘನಾರ್ಹ ಕ್ರಮ ಎಂದಾದರೆ ಫಲಿತಾಂಶ ಏನಾದೀತು? ಸಾಮಾಜಿಕವಾಗಿ ಇಂಥ ಭಾವೈಕ್ಯತೆಗಳು ಭಾರೀ ಪ್ರಮಾಣದಲ್ಲಿ ನಡೆದರೆ ಮಸೀದಿ, ಮಂದಿರ, ಚರ್ಚ್, ಬಸದಿ, ಗುರುದ್ವಾರಗಳು ಹೇಗೆ ಕಾಣಿಸಿಕೊಂಡಾವು? ಅವು ಸೃಷ್ಟಿಸಬಹುದಾದ ಸಮಸ್ಯೆಗಳು ಮತ್ತು ಪರಿಣಾಮಗಳೇನು? ಧರ್ಮದ ನಿಯಮಗಳನ್ನು ಮುರಿಯುವುದೇ ಭಾವೈಕ್ಯತೆ ಎಂಬುದು ಕೊನೆಗೆ ಏನನ್ನು ಮತ್ತು ಯಾವುದನ್ನೆಲ್ಲಾ ಮುರಿಯುವುದಕ್ಕೆ ಪ್ರೇರೇಪಿಸಬಹುದು?
 
     ನಿಜವಾಗಿ, ಭಾವೈಕ್ಯತೆಯು ಒಂದು ಧರ್ಮದ ನಿಯಮಗಳನ್ನು ಮುರಿದುಕೊಂಡು ನಡೆಸುವ ಆಚರಣೆಯ ಹೆಸರಲ್ಲ. ಅದು ಧರ್ಮಗಳನ್ನು ಮತ್ತು ಅದರ ಅನುಯಾಯಿಗಳನ್ನು ಪರಸ್ಪರ ಜೋಡಿಸುವುದರ ಹೆಸರು. ಆದ್ದರಿಂದ, ಒಂದು ಧರ್ಮದ ಆಚರಣೆಗಳನ್ನು ಗೌರವಿಸುವುದಕ್ಕೆ ಇನ್ನೊಂದು ಧರ್ಮದ ನಿಯಮಗಳನ್ನು ಮುರಿಯಬೇಕೆಂದಿಲ್ಲ. ಗಣೇಶ ಚತುರ್ಥಿಯ ದಿನದಂದು ಹಿಂದೂ ಬಾಂಧವರಿಗೆ ಶುಭಾಶಯ ಕೋರುವುದು, ಅವರ ಆಹ್ವಾನವನ್ನು ಸ್ವೀಕರಿಸಿ ಮನೆಗೆ ಭೇಟಿ ಕೊಡುವುದು, ಅವರ ಧಾರ್ಮಿಕ ಮೆರವಣಿಗೆ ಮತ್ತಿತರ ಸಂದರ್ಭಗಳು ಸುಗಮವಾಗಿ ನಡೆಯುವಂಥ ವಾತಾವರಣ ನಿರ್ಮಿಸುವುದು, ಅವರಿಗೆ ನೆರವಾಗುವುದು.. ಇತ್ಯಾದಿಗಳು ನಿಜ ಭಾವೈಕ್ಯತೆಯ ರೂಪಗಳಾಗಿವೆ. ವಿವಿಧ ಧರ್ಮದವರು ತಂತಮ್ಮ ಹಬ್ಬಗಳ ಸಂದರ್ಭದಲ್ಲಿ ಪರಸ್ಪರರ ಮನೆಗಳಿಗೆ ಭೇಟಿ ಕೊಡುವುದು ಮತ್ತು ಸಿಹಿ ತಿಂಡಿ, ಹಬ್ಬದೂಟಗಳನ್ನು ಹಂಚಿಕೊಳ್ಳುವುದು ದೊಡ್ಡದೊಂದು ಬದಲಾವಣೆಗೆ ಕಾರಣವಾಗಬಹುದು. ಇವು ಮನಸ್ಸುಗಳನ್ನು ಪರಸ್ಪರ ಹತ್ತಿರಗೊಳಿಸುತ್ತದೆ. ಅಲ್ಲಿ ಭಾವನಾತ್ಮಕ ಭದ್ರತೆಯೊಂದು ಏರ್ಪಡುತ್ತದೆ. ಮುರಿಯುವಿಕೆಯಲ್ಲಿ ಇಲ್ಲದ ತೃಪ್ತ ಮತ್ತು ನಿರಾಳ ಭಾವವೊಂದು ನಿರ್ಮಾಣವಾಗುತ್ತದೆ. ಅಂದಹಾಗೆ, ಗಣೇಶ ಚತುರ್ಥಿ ಎಂದಲ್ಲ, ವಿವಿಧ ಧರ್ಮಗಳಿರುವ ಈ ದೇಶದಲ್ಲಿ ಹಬ್ಬಗಳು ಮತ್ತು ವಿಶೇಷ ದಿನಗಳು ವಾರಕ್ಕೊಂದರಂತೆ ಬರುತ್ತಿರುತ್ತವೆ. ಇಂಥ ಸಂದರ್ಭಗಳಲ್ಲಿ ಆಯಾ ಧರ್ಮೀಯರು ತಮ್ಮೊಳಗೇ ಖುಷಿಯನ್ನು ಹಂಚಿಕೊಳ್ಳುವುದಕ್ಕಿಂತ ಎಲ್ಲ ಧರ್ಮೀಯರೂ ತಂತಮ್ಮ ಮಿತಿಯೊಳಗೆ ಒಟ್ಟಾಗಿ ಖುಷಿಯನ್ನು ಹಂಚಿಕೊಂಡು ಅನುಭವಿಸುವುದರಿಂದ ಸಹಜ ಭಾವೈಕ್ಯತೆ ನಿರ್ಮಾಣವಾಗಬಹುದು. ಹಾಗಾದಾಗ, ಮೂರ್ತಿಯನ್ನು ಆರಾಧಿಸುವವ ಮತ್ತು ಆರಾಧಿಸದವ, ಯೇಸುವನ್ನು ದೇವಪುತ್ರ ಅನ್ನುವವಳು ಮತ್ತು ಪ್ರವಾದಿ ಅನ್ನುವವಳ ನಡುವೆ ಸಂಬಂಧ ಬೆಳೆಯುತ್ತದೆ. ಅಂಥ ಸಂಬಂಧಗಳು ಉಂಟು ಮಾಡುವ ಭಾವೈಕ್ಯತೆಯು ಧಾರ್ಮಿಕ ನಿಯಮಗಳನ್ನು ಮುರಿದು ಮಾಡುವ ಭಾವ ಐಕ್ಯತೆಗಳಂಥಲ್ಲ. ಮುರಿಯುವುದು ಮತ್ತು ಜೋಡಿಸುವುದು ಒಂದೇ ಅಲ್ಲ. ಆದರೂ, ಮುರಿಯುವುದೇ ಭಾವೈಕ್ಯತೆ ಮತ್ತು ಜೋಡಿಸುವುದೇ ‘ಮತಾಂತರ' ಎಂಬ ರೀತಿಯಲ್ಲಿ ಸುದ್ದಿಗಳು ಪ್ರಸಾರವಾಗುತ್ತಿರುವುದಕ್ಕೆ ಏನೆನ್ನಬೇಕು? ತಂತಮ್ಮ ಧರ್ಮದಲ್ಲಿದ್ದುಕೊಂಡೇ ಇನ್ನೊಂದು ಧರ್ಮವನ್ನು ಗೌರವಿಸುವ ಮತ್ತು ಅದರ ಆಚರಣೆಗಳಿಗೆ ಸಹಕರಿಸುವ ಕ್ರಮಗಳು ಯಾಕೆ ಸಾಮಾಜಿಕ ಅಗತ್ಯಗಳಾಗಿ ಪ್ರಚಾರಗೊಳ್ಳುತ್ತಿಲ್ಲ? ಭಾವೈಕ್ಯತೆಯ ನಿಜವಾದ ರೂಪಕ್ಕಿಂತ ಕುರೂಪವೇ ಯಾಕೆ ಮಾದರಿ ಅನ್ನಿಸಿಕೊಳ್ಳುತ್ತಿವೆ? ಈ ಮಾದರಿ ಎಷ್ಟು ಸ್ವಾಗತಾರ್ಹ? ಎಷ್ಟು ಸಮಾಜಮುಖಿ?  
   ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಕರುಂದವಾಡದ ಐದು ಮಸೀದಿಗಳಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿದ ಬಗ್ಗೆ ಮತ್ತು ಮಂಗಳೂರಿನ ಕೈಕಂಬದಲ್ಲಿ ಮೌಲಾನ ಎಂಬ ಬಿ.ಕಾಂ. ವಿದ್ಯಾರ್ಥಿ ಗಣೇಶ ವಿಗ್ರಹವನ್ನು ರಚಿಸಿ ಪೂಜಿಸಿದ ಚಿತ್ರಸಹಿತ ಸುದ್ದಿಗಳನ್ನು ‘ಭಾವೈಕ್ಯತೆ' ಎಂಬ ಶೀರ್ಷಿಕೆಯಲ್ಲಿ ಕಳೆದ ವಾರ ಮಾಧ್ಯಮಗಳು ಪ್ರಕಟಿಸಿದುದನ್ನು ಓದುತ್ತಾ ಹೀಗೆಲ್ಲಾ ಆಲೋಚಿಸಬೇಕಾಯಿತು.

No comments:

Post a Comment