Wednesday, October 8, 2014

ಜ್ಞಾನಸರ ಮತ್ತು ವಿರತ್ತುರ ಪ್ರತಿಜ್ಞೆ ಧರ್ಮ ರಕ್ಷಣೆಗೋ ಜನಾಂಗ ನಿರ್ಮೂಲನಕ್ಕೋ?


    ಶ್ರೀಲಂಕಾದ ಬೋದು ಬಾಲ ಸೇನಾ (ಬೌದ್ಧ ಸೇನೆ)ದ ನಾಯಕ ಗಲಗೊಡ ಜ್ಞಾನಸರ ಮತ್ತು ಮ್ಯಾನ್ಮಾರ್‍ನ ‘969 ಚಳವಳಿ’ಯ ನಾಯಕ ಆಶಿನ್ ವಿರತ್ತು ಕಳೆದ ವಾರ ಲಂಕಾದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ ಮತ್ತು ಬೌದ್ಧ ಧರ್ಮದ ರಕ್ಷಣೆಗೆ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂಬ ಸುದ್ದಿಯನ್ನು ಮಾಧ್ಯಮಗಳು ಹೆಚ್ಚು ಒತ್ತು ಕೊಟ್ಟು ಪ್ರಕಟಿಸಿದ್ದುವು. ಇದಕ್ಕೆ ಕಾರಣವೂ ಇದೆ.  
   2014 ಜೂನ್ 15ರಂದು ಲಂಕಾದ ಕಲುತರ ಜಿಲ್ಲೆಯ ಅಲುತಗಮ, ಬೆರುವಲ ಮತ್ತು ದರ್ಗಾಟೌನ್ ಪ್ರದೇಶಗಳಲ್ಲಿ ಮುಸ್ಲಿಮ್ ವಿರೋಧಿ ಹಿಂಸಾಚಾರ ನಡೆಯಿತು. 4 ಮಂದಿ ಸಾವಿಗೀಡಾದರು. ಸಾವಿರಾರು ಮುಸ್ಲಿಮರು ನಿರ್ವಸಿತರಾದರು. 17 ಮಸೀದಿಗಳು ನೆಲಸಮಗೊಂಡವು. ಬೌದ್ಧ ಸನ್ಯಾಸಿ ಅಯಗಮ ಸಮಿತ್‍ರ ಮೇಲೆ ಹಲ್ಲೆ ನಡೆಸಲಾದ ನೆಪದಲ್ಲಿ ಬೌದ್ಧ ಸೇನೆ ಈ ಹಿಂಸಾಚಾರವನ್ನು ಆರಂಭಿಸಿತ್ತು. ಮೂರು ದಿನಗಳ ವರೆಗೆ ನಡೆದ ಈ ಹಿಂಸಾಚಾರದ ಸುದ್ದಿಯು ಹೊರ ಜಗತ್ತಿಗೆ ಅಷ್ಟೇ ತೀವ್ರತೆಯಿಂದ ವರದಿಯಾಗದಿರಲೆಂದು ಸರಕಾರವು ಮಾಧ್ಯಮಗಳ ಮೇಲೆ ಸೆನ್ಸಾರ್ ವಿಧಿಸಿತು. ಟಿ.ವಿ.ಗಳು ಸುಮ್ಮ ನಾದುವು. ಆದರೆ ಮಾಧ್ಯಮಗಳು ತೋರಿಸದಿದ್ದುದನ್ನು ಫೇಸ್‍ಬುಕ್, ಟ್ವಿಟರ್‍ನಂಥ ಸಾಮಾಜಿಕ ಜಾಲತಾಣಗಳು ಜಗತ್ತಿಗೆ ತೋರಿಸಿದುವು. ಬೌದ್ಧಸೇನೆಯ ಪ್ರಮುಖ ಟೀಕಾಕಾರರಾಗಿರುವ ಬೌದ್ಧ ಸನ್ಯಾಸಿ ವಾಟರೇಕ ವಿಜಿತರಿಗೆ ಜೂನ್ 19ರಂದು ಈ ಮಂದಿ ಬಲವಂತದಿಂದ ಸುನ್ನತಿ (ಮುಂಜಿ) ಮಾಡಿಸಿದರು. ಸಂಡೇ ಟೈಮ್ಸ್ ನ ಪತ್ರಕರ್ತ ಶರತ್ ಸಿರಿವರ್ಧನೆಯ ಮೇಲೆ ದಾಳಿ ನಡೆಯಿತು. ಅಲ್ ಜಝೀರಾ ಪತ್ರಿಕಾ ತಂಡ ಮತ್ತು ಪತ್ರಕರ್ತ ಬಿನಯ್ ಸೂರ್ಯರಚಿಯ ಮೇಲೂ ಹಲ್ಲೆ ನಡೆಯಿತು. ಮುಸ್ಲಿಮರ ಆಸ್ತಿ-ಪಾಸ್ತಿಗಳ ಮೇಲೆ ವ್ಯವಸ್ಥಿತ ದಾಳಿ ನಡೆಯಿತು. ಬೊಲಿವಿಯಾದಲ್ಲಿದ್ದ ಅಧ್ಯಕ್ಷ  ರಾಜಪಕ್ಸೆ ಹಿಂತಿರುಗಿ ಬರುವವರೆಗೆ ಸರಕಾರ ಯಾವ ಹೇಳಿಕೆಯನ್ನೂ ಹೊರಡಿಸಲಿಲ್ಲ. ಈ ಮುಸ್ಲಿಮ್ ವಿರೋಧಿ ದಂಗೆಗೆ ರಕ್ಷಣಾ ಮಂತ್ರಿಯ ಸಲಹೆಗಾರ ಕಪಿಲ್ ಹೆಂದವಿತರಣ, ಕರ್ನಲ್ ಸುರೇಶ್ ಸಲ್ಲೆ ಮತ್ತು ಗುಪ್ತಚರ ಇಲಾಖೆಯ ಉಪಮುಖ್ಯಸ್ಥ ಚಂದ್ರ ವಾಕಿಷ್ಟರೇ ಕಾರಣ ಎಂದು ಮುಖ್ಯ ವಿರೋಧ ಪಕ್ಷವಾದ ಯುನೈಟೆಡ್ ನ್ಯಾಶನಲ್ ಪಾರ್ಟಿಯ ನಾಯಕ ಮಂಗಳ ಸಮರವೀರ ಆರೋಪಿಸಿದರು. ವಿಶ್ವಸಂಸ್ಥೆಯ ಕಾರ್ಯದರ್ಶಿ ಬಾನ್‍ಕಿ ಮೂನ್, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ  ನವಿಪಿಳ್ಳೆ, ಕೊಲಂಬೋದಲ್ಲಿರುವ ಅಮೇರಿಕ ಮತ್ತು ಕೆನಡಾದ ರಾಯಭಾರಿಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ನಾರ್ವೆ, ಸ್ವೀಡನ್, ತುರ್ಕಿ ಸಹಿತ ಯುರೋಪಿಯನ್ ಯೂನಿಯನ್‍ಗಳ ನಿಯೋಗವೊಂದು ಕೊಲಂಬೋಕ್ಕೆ ಭೇಟಿ ನೀಡಿತು. ಲಂಕಾದ ತಮಿಳರ ಜಾಗದಲ್ಲಿ ಇದೀಗ ಮುಸ್ಲಿಮರನ್ನು ಗುರಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಹಲವಾರು ಮಂದಿ ಎತ್ತಿದರು. ತೀವ್ರ ಬಲಪಂಥೀಯ ವಿಚಾರಧಾರೆಯನ್ನು ಹೊಂದಿರುವ ಬೌದ್ಧ ಸೇನೆಯ ಕಾರ್ಯಕ್ರಮಗಳಲ್ಲಿ ಅಧ್ಯಕ್ಷ ರಾಜಪಕ್ಸೆ ಭಾಗಿಯಾಗುತ್ತಿರುವುದನ್ನು ಅನೇಕರು ಪ್ರಶ್ನಿಸಿದರು.
   ಅಂದಹಾಗೆ, ಗಲಭೆ ನಡೆದ ಜೂನ್ ತಿಂಗಳಿನಲ್ಲಿಯೇ ಲಂಕಾದ ಪಾರ್ಲಿಮೆಂಟ್‍ನ 6 ಮಂದಿ ಸದಸ್ಯರ ಸತ್ಯಶೋಧನಾ ಸಮಿತಿಯೊಂದು ದೇಹಿವಾಲಾ ಮೃಗಾಲಯಕ್ಕೆ ಭೇಟಿ ನೀಡಿತು. ಗಲಭೆಯಿಂದ ತತ್ತರಿಸಿದ ಜನರನ್ನು ಭೇಟಿಯಾಗುವುದಕ್ಕೆ ಸಮಿತಿ ರಚಿಸುವ ಬದಲು ಮೃಗಾಲಯದಲ್ಲಿ ನೀರ್ಗುದುರೆ ಮತ್ತು ಸಿಂಹವು ಸಾವಿಗೀಡಾದುದನ್ನು ಪರಿಶೀಲಿಸಲು ಸಮಿತಿ ರಚಿಸಿದುದಕ್ಕೆ ತೀವ್ರ ಟೀಕೆಗಳು ಎದುರಾದುವು. ಗಲಭೆಗ್ರಸ್ತ ಪ್ರದೇಶಕ್ಕೆ ಭೇಟಿ ನೀಡಿದ ರಾಜಪಕ್ಸೆಯವರು, ಬೌದ್ಧ ಧರ್ಮದ ರಕ್ಷಣೆಯ ಅಗತ್ಯವಿದೆ ಎಂದಿದ್ದೂ ಚರ್ಚೆಗೀಡಾಯಿತು. ಅಷ್ಟಕ್ಕೂ, ಜನಾಂಗ ತಾರತಮ್ಯ ಎಂಬುದು ಲಂಕಾಕ್ಕೆ ಹೊಸತಲ್ಲ.
    1948ರಲ್ಲಿ ಲಂಕಾವು ಬ್ರಿಟಿಷ್ ಪ್ರಭುತ್ವದಿಂದ ಸ್ವತಂತ್ರಗೊಂಡ ಕೂಡಲೇ ಸಿಲೋನ್ ಸಿಟಿಝನ್‍ಶಿಪ್ ಆ್ಯಕ್ಟನ್ನು ಪಾರ್ಲಿಮೆಂಟ್ ಜಾರಿಗೆ ತಂದಿತ್ತು. ಈ ಕಾಯ್ದೆಯು ಭಾರತ ಮೂಲದ ತಮಿಳರಿಗೆ ಪೌರತ್ವವನ್ನೇ ನಿಷೇಧಿಸಿತು. ಆಗ 7 ಲಕ್ಷದಷ್ಟು ತಮಿಳು ನಾಗರಿಕರು ಅತಂತ್ರರಾದರು. ಇವರಲ್ಲಿ 3 ಲಕ್ಷ  ಮಂದಿಯನ್ನು ಭಾರತಕ್ಕೆ ಗಡೀಪಾರು ಮಾಡಲಾಯಿತು. 1956ರಲ್ಲಿ ಪ್ರಧಾನಿ ಭಂಡಾರ ನಾಯಿಕೆಯವರು ಸಿಂಹಳ ಓನ್ಲಿ ಆ್ಯಕ್ಟ್ ಅನ್ನು ಜಾರಿಗೆ ತಂದರು. ಈ ಮೂಲಕ ಲಂಕಾದ ಅಧಿಕೃತ ಭಾಷೆಯಾಗಿ ಇಂಗ್ಲಿಷ್‍ನ ಬದಲು ಸಿಂಹಳವು ಆಯ್ಕೆಯಾಯಿತು. ಮಾತ್ರವಲ್ಲ, ಈ ಕಾಯ್ದೆಯನ್ನು ಬಳಸಿಕೊಂಡು ತಮಿಳರನ್ನು ವ್ಯವಸ್ಥಿತವಾಗಿ ಬಗ್ಗುಬಡಿಯಲಾಯಿತು. ಸರಕಾರಿ ಹುದ್ದೆಗಳಲ್ಲಿ ಭಾಷೆಯ ನೆಪವೊಡ್ಡಿ ತಮಿಳರನ್ನು ಹೊರಗಿಡಲಾಯಿತು. ಸಿಂಹಳ ಭಾಷೆಯಲ್ಲಿ ಪರಿಣತರಾಗಿಲ್ಲ ಎಂಬ ಕಾರಣವೊಡ್ಡಿ ತಮಿಳು ಅಧಿಕಾರಿಗಳನ್ನು ಹುದ್ಧೆಯಿಂದ ಕಿತ್ತುಹಾಕಲಾಯಿತು. ನಿಜವಾಗಿ, 1960ರಲ್ಲಿ ಪ್ರತ್ಯೇಕ ತಮಿಳುರಾಷ್ಟ್ರದ ಬೇಡಿಕೆಯನ್ನು ಮುಂದಿಡುವ ಕರಪತ್ರಗಳು ಪ್ರಕಟವಾಗಲು ಪ್ರಾರಂಭವಾದುದಕ್ಕೆ ಕಾರಣ ಇದುವೇ. ಕೊಲಂಬೋದ ಬ್ರಿಟಿಷ್ ರಾಯಭಾರ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಆ್ಯಂಟನಿ ಬಾಲಸಿಂಘಂ ಅವರು ಪ್ರತ್ಯೇಕತಾವಾದಿಗಳ ಸಭೆಯಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಬಳಿಕ ಅವರು ಇಂಗ್ಲೆಂಡ್‍ಗೆ ತೆರಳಿದರಲ್ಲದೇ ಎಲ್‍ಟಿಟಿಇಯ ಪ್ರಮುಖ ಚಿಂತಕರಲ್ಲಿ ಒಬ್ಬರಾದರು. ಈ ಎಲ್ಲ ಬೆಳವಣಿಗೆಗಳ ಹೊರತಾಗಿಯೂ ಲಂಕಾ ಸರಕಾರವು ತಾರತಮ್ಯ ನೀತಿಯನ್ನು ಸಡಿಲಗೊಳಿಸಲಿಲ್ಲ. 1970ರಲ್ಲಿ ಪಾಲಿಸಿ ಆಫ್ ಸ್ಟಾಂಡರ್‍ಡೈಸೇಶನ್ ಎಂಬ ಕಾಯ್ದೆಯನ್ನು ಜಾರಿಗೊಳಿಸಿತು. ವಿಶ್ವವಿದ್ಯಾಲಯಗಳ ಆಡಳಿತವನ್ನು ಸರಿಪಡಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ರೂಪಿಸಲಾಗಿದೆ ಎಂದು ಸರಕಾರ ಸಮರ್ಥಿಸಿಕೊಂಡರೂ ನಿಜ ಅದಾಗಿರಲಿಲ್ಲ. ಈ ಕಾಯ್ದೆಯನ್ನು ಬಳಸಿಕೊಂಡು ಸಿಂಹಳೀಯ ವಿದ್ಯಾರ್ಥಿಗಳಿಗೆ ಆದ್ಯತೆ ನೀಡ ಲಾಯಿತು. ಈ ಕಾಯ್ದೆಯಂತೆ ವೈದ್ಯಕೀಯ ಸೀಟು ಸಿಗಬೇಕೆಂದರೆ ಸಿಂಹಳೀಯ ವಿದ್ಯಾರ್ಥಿ ಒಟ್ಟು 400 ಅಂಕದಲ್ಲಿ 229 ಅಂಕ ಪಡೆದರೆ ಸಾಕಾಗುತ್ತದೆ. ಆದರೆ ತಮಿಳು ವಿದ್ಯಾರ್ಥಿ 250 ಅಂಕ ಪಡೆಯಬೇಕು. 1978ರಲ್ಲಿ ತಮಿಳು ಮ್ಯಾಗಸಿನ್‍ಗಳ ಆಮದಿಗೆ ನಿಷೇಧ ವಿಧಿಸಲಾಯಿತು. ಹೀಗೆ ಲಂಕಾದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾದ ಸಿಂಹಳೀಯರನ್ನು ಬಿಟ್ಟರೆ ಉಳಿದಂತೆ ಎರಡನೇ ಅತಿದೊಡ್ಡ ಸಮುದಾಯವಾಗಿದ್ದ ತಮಿಳರನ್ನು ವ್ಯವಸ್ಥಿತವಾಗಿ ತುಳಿದುದರ ಫಲಿತಾಂಶವೇ ಎಲ್‍ಟಿಟಿಇಯ ಉಗಮವಾಗಿತ್ತು. 2009 ಮೇ 17ರಂದು ಎಲ್‍ಟಿಟಿಇಯು ಅಂತಿಮವಾಗಿ ಸೋಲೊಪ್ಪಿಕೊಂಡರೂ ಅದು ಹುಟ್ಟುಹಾಕಿದ ಕಾವು ಮತ್ತು ಪ್ರಶ್ನೆಗಳು ಇನ್ನೂ ಬಗೆಹರಿದಿಲ್ಲ. ಇಂಥ ಹೊತ್ತಿನಲ್ಲಿಯೇ ಲಂಕಾವು ಮತ್ತೊಮ್ಮೆ ಜನಾಂಗೀಯ ನಿರ್ಮೂಲನಾ ಆರೋಪಕ್ಕೆ ಗುರಿಯಾಗಿದೆ.
   ಲಂಕಾಕ್ಕೂ ಮುಸ್ಲಿಮರಿಗೂ ಪ್ರವಾದಿ ಮುಹಮ್ಮದ್ ರ ಕಾಲದಿಂದಲೇ ಸಂಬಂಧ ಇದೆ. 7ನೇ ಶತಮಾನದಲ್ಲೇ ಅರಬ್ ವ್ಯಾಪಾರಿಗಳು ಈ ದ್ವೀಪರಾಷ್ಟ್ರಕ್ಕೆ ಕಾಲಿಟ್ಟರಲ್ಲದೇ ಕೃಷಿ ಮತ್ತು ಜಾನುವಾರು ಸಾಕಣೆ ಮಾಡುತ್ತಿದ್ದ ಸಿಂಹಳೀಯ ನಾಡಿಗೆ ವ್ಯಾಪಾರದ ರುಚಿಯನ್ನು ಹತ್ತಿಸಿದರು. ಆದ್ದರಿಂದಲೇ ಬಹುತೇಕ ಜನರಿಗೆ ಮತ್ತು ಆಡಳಿತಕ್ಕೆ ಹತ್ತಿರವಾದರು. ಅವರು ಬಹುಬೇಗ ತಮಿಳು ಕಲಿತರು. ಸ್ಥಳೀಯರೊಂದಿಗೆ ಬೆರೆತು ಅಲ್ಲೇ ನೆಲೆಸಿದರು. ಮುಸ್ಲಿಮ್ ದೊರೆಗಳು ಲಂಕಾವನ್ನು ಆಳಿದ ಇತಿಹಾಸವೂ ಇದೆ. 1344ರಲ್ಲಿ ಲಂಕಾಕ್ಕೆ ಭೇಟಿ ನೀಡಿದ ಖ್ಯಾತ ಇತಿಹಾಸಕಾರ ಇಬ್ನು ಬತೂತ ಈ ಬಗ್ಗೆ ತನ್ನ ಅನುಭವವನ್ನೂ ಹಂಚಿಕೊಂಡಿದ್ದಾರೆ. ಕ್ರಿಸ್ತಪೂರ್ವ 307-267ರ ಸಮಯದಲ್ಲಿ ರಾಜ ಅಶೋಕ್‍ರಿಂದ ಬೌದ್ಧ ಧರ್ಮಕ್ಕೆ ಧರ್ಮಾಂತರವಾದ ಸಿಂಹಳೀಯರು ಲಂಕಾದಲ್ಲಿ ಇವತ್ತೂ ಬಹುಸಂಖ್ಯಾತರೇ. ಮುಸ್ಲಿಮರು ಬರೇ 10%. ಮುಸ್ಲಿಮರನ್ನು ಸಾಮಾನ್ಯವಾಗಿ ಮಾರ್ಸ್ ಮುಸ್ಲಿಮ್ಸ್ ಮತ್ತು ಮಲಯಾ ಮುಸ್ಲಿಮ್ಸ್ ಎಂದು ವಿಭಜಿಸಲಾಗುತ್ತದೆ. ಸಿಂಹಳೀಯರದ್ದು ಪಾಲಿ ಭಾಷೆಗೆ ಹತ್ತಿರದ ನಂಟಿರುವ ಆರ್ಯನ್ ಭಾಷೆಯಾದರೆ ಮುಸ್ಲಿಮರು ಅರಬಿ ಮತ್ತು ತಮಿಳು ಮಿಶ್ರಿತ ಭಾಷೆ ಮಾತಾಡುತ್ತಾರೆ. ಅವರ ಭಾಷೆಯಲ್ಲಿ ಅತ್ಯಧಿಕ ಅರಬಿ ಪದಗಳು ಒಳಗೊಂಡಿವೆ. ಅಲ್ಲಿನ 99% ಮುಸ್ಲಿಮರು ಕೂಡ ಅಕ್ಷರಸ್ಥರೇ. ಸುಮಾರು 800ರಷ್ಟು ಶಾಲೆಗಳನ್ನು ಅವರು ನಡೆಸುತ್ತಿದ್ದಾರೆ. ಮುಸ್ಲಿಮ್ ಯುನಿವರ್ಸಿಟಿಯೂ ಇದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಮುಸ್ಲಿಮರು, ಎಲ್‍ಟಿಟಿಇ ಮತ್ತು ಸರಕಾರದ ನಡುವಿನ ಹೋರಾಟದ ಸಂದರ್ಭದಲ್ಲಿ ಸರಕಾರವನ್ನೇ ಬೆಂಬಲಿಸಿದ್ದರು. ಇದು ಎಲ್‍ಟಿಟಿಇಯ ಮುಖಂಡ ಪ್ರಭಾಕರನ್ ಅವರನ್ನು ತೀವ್ರವಾಗಿ ಸಿಟ್ಟಿಗೆಬ್ಬಿಸಿತ್ತು. 1990ರ ಅವಧಿಯಲ್ಲಿ ಉತ್ತರ ಲಂಕಾದಿಂದ 95 ಸಾವಿರ ಮುಸ್ಲಿಮರನ್ನು ಅವರು ಹೊರಹಾಕಿದ್ದರು. ಮಾತ್ರವಲ್ಲ, ನೂರಾರು ಮಂದಿ ಈ ಸಂದರ್ಭದಲ್ಲಿ ಪ್ರಾಣ ಕಳಕೊಂಡರು. ಈ ಕೃತ್ಯಕ್ಕಾಗಿ 2002ರಲ್ಲಿ ಸ್ವತಃ ಪ್ರಭಾಕರ್ ಅವರೇ ಮುಸ್ಲಿಮರ ಕ್ಷಮೆ ಯಾಚಿಸಿದ್ದರು. ಒಂದು ರೀತಿಯಲ್ಲಿ ತಮಿಳರೊಂದಿಗೆ ಜನಾಂಗೀಯವಾಗಿ ಯಾವ ಸಂಬಂಧ ಇಲ್ಲದಿದ್ದರೂ ಇವತ್ತೂ ತಮಿಳು ಮಾತಾಡುವ ಮುಸ್ಲಿಮರು ಅಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ ಆರಂಭದಲ್ಲಿ ತಮಿಳರ ವಿರುದ್ಧ ನಿಂತ ಅಲ್ಲಿನ ಸರಕಾರ ಮತ್ತು ಬಲಪಂಥೀಯ ಬೌದ್ಧರು ಇವತ್ತು ಮುಸ್ಲಿಮರ ಜನಾಂಗ ನಿರ್ಮೂಲನಕ್ಕಾಗಿ ವಿವಿಧ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ. 2013 ಫೆಬ್ರವರಿಯಲ್ಲಿ ಹಲಾಲ್ ಲೋಗೋದ ನೆಪದಲ್ಲಿ ಬೌದ್ಧ ಸೇನೆಯು ಸರಣಿ ಪ್ರತಿಭಟನೆಯನ್ನು ಹಮ್ಮಿ ಕೊಂಡಿತ್ತು. ಆಲ್ ಸಿಲೋನ್ ಜವಿೂಯತುಲ್ ಉಲೆಮಾ ಎಂಬ ಸಂಘಟನೆಯು ನೀಡುವ ಹಲಾಲ್ (ಧರ್ಮಸಮ್ಮತ) ಸರ್ಟಿಫಿಕೇಟನ್ನು ಅಲ್ಲಿನ ಸಾಕಷ್ಟು ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ಬಳಸಿಕೊಳ್ಳುತ್ತಿವೆ. ಆದರೆ ಇಸ್ಲಾವಿೂ ಕಾನೂನಿನಂತೆ ತಯಾರಾಗುವ ಉತ್ಪನ್ನಗಳು ಲಂಕಾದಲ್ಲಿ ಮಾರಾಟವಾಗುವುದು ಮತ್ತು ಅದು ಬೌದ್ಧರ ಆಹಾರವಾಗಿ ಬಳಕೆಗೀಡಾಗುವುದು ತಪ್ಪು ಎಂದು ಬೌದ್ಧ ಸೇನೆ ವಾದಿಸಿತು. ಬಳಿಕ ಅಂಥ ಸರ್ಟಿಫಿಕೇಟ್ ಕೊಡುವುದನ್ನು ಉಲೇಮಾ ಸಂಘಟನೆಯು ರದ್ದುಪಡಿಸಿತು. ನಿಜವಾಗಿ ಬೌದ್ಧ ಸೇನೆಯ ಸಿಟ್ಟು ಹಲಾಲ್ ಉತ್ಪನ್ನದ  ಮೇಲಾಗಿರಲಿಲ್ಲ. ಹಲಾಲ್ ಉತ್ಪನ್ನದ ಕಂಪೆನಿಗಳು ಲಂಕಾದಲ್ಲಿ ಜನಪ್ರಿಯವಾಗಿದ್ದುವು. 10% ಮುಸ್ಲಿಮರಿದ್ದರೂ ಹಲಾಲ್ ಉತ್ಪನ್ನಗಳು ಮಾರುಕಟ್ಟೆಯ 20%ವನ್ನು ಆಕ್ರಮಿಸಿಕೊಂಡಿದ್ದುವು. ಇದುವೇ ಬೌದ್ಧ ಸೇನೆಯನ್ನು ಕುಪಿತಗೊಳಿಸಿತ್ತು. 2014 ಆಗಸ್ಟ್ ನಲ್ಲಿ ಮಸೀದಿಯ ನಿರ್ಮಾಣದ ವಿರುದ್ಧ ಬೌದ್ಧ ಸೇನೆ ಪ್ರತಿಭಟನೆ ಹಮ್ಮಿಕೊಂಡಿತು. ಬಳಿಕ ಅದು ದೊಡ್ಡ ವಿವಾದಕ್ಕೂ ಕಾರಣವಾಯಿತು.
   ಅಂದಹಾಗೆ, ಮ್ಯಾನ್ಮಾರ್‍ನಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿರುವ ‘969 ಚಳವಳಿ' ಹಾಗೂ ಬೋದೋ ಬಾಲ ಸೇನಾಗಳು ಜೊತೆಯಾಗಿರುವುದಕ್ಕೂ ಭಾರತ ಉಪಖಂಡದಲ್ಲಾದ ಬೆಳವಣಿಗೆಗಳಿಗೂ ಸಂಬಂಧ ಇರಬಹುದೇ? ಭಾರತದಲ್ಲಿ ಬಲಪಂಥೀಯ ವಿಚಾರಧಾರೆಗೆ ರಾಜಕೀಯ ಬಲ ಬಂದಿರುವುದು ಮತ್ತು ಬಲಪಂಥೀಯ ಚಟುವಟಿಕೆಗಳು ಹೆಚ್ಚು ವೇಗ ಪಡೆದಿರುವುದನ್ನು ಮ್ಯಾನ್ಮಾರ್ ಮತ್ತು ಲಂಕಾದ ಬೆಳವಣಿಗೆಗಳಿಗೆ ಹೋಲಿಸಿ ನೋಡಿದರೆ ಏನನಿಸುತ್ತದೆ? ವಿರತ್ತು ಮತ್ತು ಜ್ಞಾನಸರರ ಭೇಟಿಯು ರವಾನಿಸುವ ಸೂಚನೆಗಳೇನು? ಭಾರತದಲ್ಲಿ ಮುಸ್ಲಿಮರ ವಿರುದ್ಧ ಬಲಪಂಥೀಯ ಸಂಘಟನೆಗಳು ಯಾವ ಆರೋಪವನ್ನು ಹೊರಿಸುತ್ತಿವೆಯೋ ಅವೇ ಆರೋಪವನ್ನು ಲಂಕಾದಲ್ಲಿ ಬೌದ್ಧ ಸೇನೆ ಮುಸ್ಲಿಮರ ವಿರುದ್ಧ ಹೊರಿಸುತ್ತಿರುವುದರ ಹಿನ್ನೆಲೆ ಏನು? ‘ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ, ಸಿಂಹಳೀಯ ಮಹಿಳೆಯರನ್ನು ವಿವಾಹವಾಗಿ ಜನಸಂಖ್ಯೆ ಹೆಚ್ಚಿಸುತ್ತಾರೆ, ವ್ಯಾಪಾರದ ಮೂಲಕ ಪ್ರಾಬಲ್ಯ ಪಡೆದು ಆಡಳಿತವನ್ನು ಕೈವಶ ಪಡಿಸಬಯಸುತ್ತಾರೆ ಮತ್ತು ಸಿಂಹಳೀಯ ಅಸ್ಮಿತೆಗೆ ಬೆದರಿಕೆ ಯಾಗಿದ್ದಾರೆ..’ ಮುಂತಾದ ಆರೋಪಗಳೊಂದಿಗೆ ಬೌದ್ಧ ಸೇನೆ ಕಾರ್ಯಪ್ರವೃತ್ತವಾಗಿರುವುದನ್ನು ಏನೆಂದು ವ್ಯಾಖ್ಯಾನಿಸಬಹುದು? ಅದರ ಹಿಂದೆ ಯಾರಿದ್ದಾರೆ? ಅವರ ಉದ್ದೇಶವೇನು?
   ಆಶಿನ್ ವಿರತ್ತು ಮತ್ತು ಜ್ಞಾನಸರರ ನಡುವಿನ ಭೇಟಿ ಮತ್ತು ಅವರ ಧರ್ಮರಕ್ಷಣೆಯ ಪ್ರತಿಜ್ಞೆಯು ಸಹಜವಾಗಿಯೇ ಅನುಮಾನ ಗಳನ್ನು ಹುಟ್ಟುಹಾಕುತ್ತದೆ.



No comments:

Post a Comment