
'ನಮ್ಮವನನ್ನು ಪೊಲೀಸರು ಬಂಧಿಸಿದರೆ
ಅವನು ನಿರಪರಾಧಿ, ನಾವೆಲ್ಲ ವಕೀಲರು
ಅನ್ಯನನ್ನು ಪೊಲೀಸರು ಬಂಧಿಸಿದರೆ
ಅವನು ಅಪರಾಧಿ, ನಾವೆಲ್ಲ ನ್ಯಾಯಾಧೀಶರು..'
ನಮ್ಮೊಳಗಿನ ಇಬ್ಬಂದಿನಕ್ಕೆ ಕನ್ನಡಿ ಹಿಡಿಯುವ ನಾಲ್ಕು ಸಾಲುಗಳಿವು. ಕೋಮು ಸಂಘರ್ಷ ಎಂಬ ಪದಕ್ಕೂ ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸಕ್ಕೂ ನಡುವೆ ಇರುವ ಸಂಬಂಧವನ್ನು ಟಿಪ್ಪು ಜಯಂತಿ ಮತ್ತೊಮ್ಮೆ ತಾಜಾಗೊಳಿಸಿದೆ. ಇಂಥ ಸಂಘರ್ಷಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಏನು ಕಾರಣ? ಧರ್ಮವೇ, ರಾಜಕೀಯವೇ ಅಥವಾ ಟಿಪ್ಪುವಿನಂತಹ ಐತಿಹಾಸಿಕ ವ್ಯಕ್ತಿತ್ವಗಳೇ? 1947ರ ಭಾರತ ಈಗಿನದಲ್ಲ. ಅಭೂತಪೂರ್ವವೆನ್ನಬಹುದಾದ ಅನೇಕಾರು ಬದಲಾವಣೆಗಳನ್ನು ಈ ದೇಶ ಕಂಡಿದೆ. ಕೃಷಿ ಕ್ರಾಂತಿ, ಕೈಗಾರಿಕಾ ಕ್ರಾಂತಿ, ಅಕ್ಷರ ಕ್ರಾಂತಿ, ಸಂವಹನ ಕ್ರಾಂತಿ, ಕಂಪ್ಯೂಟರ್ ಕ್ರಾಂತಿ, ಮಾಧ್ಯಮ ಕ್ರಾಂತಿ.. ಸಹಿತ ಹಳೆ ತಲೆಮಾರು ಅಚ್ಚರಿಪಡುವಂತಹ ಪಲ್ಲಟಗಳು ನಡೆದಿವೆ. 1947ರ ಆಸುಪಾಸಿನಲ್ಲಿದ್ದದ್ದು ಒಂದು- ರೇಡಿಯೋವಾದರೆ, ಇನ್ನೊಂದು ದೂರದರ್ಶನ. ಇವೆರಡನ್ನು ಬಿಟ್ಟರೆ ಜನರಿಗೆ ಮಾಹಿತಿಯನ್ನು ಕೊಡುತ್ತಿದ್ದುದು ಬಹುತೇಕ ನಗರ ಪ್ರದೇಶದ ಮಂದಿಗೆ ದಕ್ಕುತ್ತಿದ್ದ ಕೆಲವೇ ಕೆಲವು ಪತ್ರಿಕೆಗಳು. ಆವತ್ತೂ ಕೋಮು ಸಂಘರ್ಷಗಳಿದ್ದುವು. ನೂರಾರು ಟಿ.ವಿ. ಚಾನೆಲ್ಗಳು ಮತ್ತು ಸಾವಿರಾರು ಪತ್ರಿಕೆಗಳಿರುವ ಇವತ್ತೂ ಕೋಮು ಸಂಘರ್ಷಗಳಿವೆ. ಹಾಗಂತ, ಇವುಗಳ ಸಂಖ್ಯೆಯಲ್ಲಿ, ಅವನ್ನು ಕಾರ್ಯರೂಪಕ್ಕೆ ತರುವ ವಿಧಾನಗಳಲ್ಲಿ ಮತ್ತು ಸಾವು-ನೋವುಗಳ ಅಂಕಿ-ಸಂಖ್ಯೆಗಳಲ್ಲಿ ವ್ಯತ್ಯಾಸ ಇರಬಹುದು. ಆದರೂ ಈ ಮನುಷ್ಯ ವಿರೋಧಿ ಮತ್ತು ಧರ್ಮವಿರೋಧಿ ಪಿಡುಗೊಂದು ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಪ್ರಾಬಲ್ಯ ಪಡೆಯುತ್ತಿರುವುದು ಯಾಕೆ? ಜನರು ಅಕ್ಷರಸ್ಥರಾದಂತೆಲ್ಲ ಅಜ್ಞಾನ ಕೊನೆಗೊಳ್ಳುತ್ತಾ ಹೋಗುತ್ತದೆ ಎಂಬುದು ಸಾಮಾನ್ಯ ವಾದ. ಅನಕ್ಷರಸ್ಥರಲ್ಲಿ ಕೆಲವು ಸಹಜ ದೌರ್ಬಲ್ಯಗಳಿರುತ್ತವೆ. ಅವರು ಪುಸ್ತಕವನ್ನು ಓದಲಾರರು. ಸಾಹಿತ್ಯವನ್ನು ಅನುಭವಿಸಲಾರರು. ಎಲ್ಲಕ್ಕಿಂತ ಮಿಗಿಲಾಗಿ ತನ್ನ ಧರ್ಮಗ್ರಂಥ ಏನು ಹೇಳುತ್ತದೆ ಎಂಬುದನ್ನು ಓದಿ ತಿಳಿದುಕೊಳ್ಳುವುದು ಅವರಿಂದ ಸಾಧ್ಯವಿಲ್ಲ. ಕಲ್ಬುರ್ಗಿಯನ್ನೋ ಭೈರಪ್ಪ, ಅನಂತಮೂರ್ತಿಯವರನ್ನೋ, ಕುವೆಂಪು, ಬೇಂದ್ರೆ, ಕಾರಂತರನ್ನೋ ಅಥವಾ ಇನ್ನಿತರ ಯಾರನ್ನೇ ಆಗಲಿ ಓದಿ ತಿಳಿಯಲು ಅವಕಾಶವಿರುವುದಿಲ್ಲ. ಇಂಥವರು ಇನ್ನಾರೋ ಹೇಳಿದ ಮಾತನ್ನು ನಂಬಬೇಕಾಗುತ್ತದೆ. ಕುರ್ಆನಿನಲ್ಲಿ ಹಾಗಿದೆ, ಭಗವದ್ಗೀತೆಯಲ್ಲಿ ಹೀಗಿದೆ, ಯಂಗ್ ಇಂಡಿಯಾದಲ್ಲಿ ಗಾಂಧೀಜಿ ಹಾಗೆ ಬರೆದಿದ್ದಾರೆ.. ಎಂದೆಲ್ಲಾ ಯಾರೋ ಹೇಳಿದುದನ್ನು ನಿಜ ಎಂದು ನಂಬಬೇಕಾದ ಪರಿಸ್ಥಿತಿ ಅವರಿಗೆ ಎದುರಾಗುತ್ತದೆ. ಸ್ವಾತಂತ್ರ್ಯಾನಂತರದ ಎರಡ್ಮೂರು ದಶಕಗಳಲ್ಲಿ ನಡೆದ ಕೋಮು ಸಂಘರ್ಷಕ್ಕೆ ನಾವು ಈ ಅನಕ್ಷರತೆಯನ್ನೇ ಕಾರಣವಾಗಿ ಇಟ್ಟು ನೋಡಿದರೂ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ. ಮಾತ್ರವಲ್ಲ, ಈ ಪ್ರಶ್ನೆಗಳು ಎಷ್ಟು ಗಂಭೀರವಾದುದೆಂದರೆ, ಕೋಮು ಸಂಘರ್ಷಕ್ಕೆ ಅಕ್ಷರ-ಅನಕ್ಷರದಲ್ಲಿ ಕಾರಣ ಹುಡುಕುವುದನ್ನೇ ಅಜ್ಞಾನ ಎಂದು ಸಾರುವಷ್ಟು ಪ್ರಮಾಣದಲ್ಲಿರುತ್ತದೆ. ಈ ದೇಶ ಹೆಚ್ಚೆಚ್ಚು ಅಕ್ಷರಸ್ಥ ಆದಂತೆಯೇ ಕೋಮು ಸಂಘರ್ಷದ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಾ ಹೋದುವು. ಅಷ್ಟೇ ಅಲ್ಲ, ಈ ಸಂಘರ್ಷದ ವ್ಯಾಪ್ತಿಯೂ ವಿಸ್ತರಿಸುತ್ತಾ ಹೋದುವು. ತೀರಾ ತೀರಾ ಹಳ್ಳಿ ಪ್ರದೇಶಗಳಲ್ಲೂ ಕೋಮು ಉದ್ವಿಘ್ನ ವಾತಾವರಣ ನಿರ್ಮಾಣವಾದದ್ದೇ ಹಳ್ಳಿಗಳು ಅಕ್ಷರಸ್ಥವಾದ ಬಳಿಕ. ಆದ್ದರಿಂದಲೇ ಕೋಮು ಸಂಘರ್ಷಕ್ಕೆ ಕಾರಣಗಳನ್ನು ಅನಕ್ಷರಸ್ಥತೆಗಿಂತ ಹೊರತಾದುದರಲ್ಲಿ ಹುಡುಕಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾರಣಗಳನ್ನು ಹುಡುಕ ಹೊರಟರೆ ಎರಡೇ ಎರಡು ಸಂಗತಿಗಳು ನಮ್ಮ ಎದುರು ನಿಲ್ಲುತ್ತವೆ. ಒಂದೋ ಧರ್ಮ ಇಲ್ಲವೇ ರಾಜಕೀಯ. ದುರಂತ ಏನೆಂದರೆ, ಜನರು ಹೆಚ್ಚೆಚ್ಚು ಅಕ್ಷರಸ್ಥರಾದಂತೆಲ್ಲ ಅದರ ಸಂಪೂರ್ಣ ಲಾಭ ಪಡೆದದ್ದು ಧರ್ಮವಲ್ಲ, ರಾಜಕೀಯ. ಕೋಮು ಸಂಘರ್ಷ ಎಂದು ನಾವು ಇವತ್ತು ಯಾವುದನ್ನೆಲ್ಲ ಗುರುತಿಸುತ್ತೇವೋ ಅವುಗಳಲ್ಲಿ ಪಾಲುಗೊಂಡವರು ಧರ್ಮಾನುಯಾಯಿಗಳು ಮತ್ತು ಅಕ್ಷರಸ್ಥರೂ ಆಗಿರಬಹುದು. ಆದರೆ ಅವರಲ್ಲಿ ಧರ್ಮಗ್ರಂಥವನ್ನು ಸಂಪೂರ್ಣ ಓದಿರುವವರು ತೀರಾ ಕಡಿಮೆ. ಹಾಗಂತ, ನಿರ್ದಿಷ್ಟ ಧರ್ಮಗಳ ಗುರುತುಗಳು ಬಾಹ್ಯನೋಟಕ್ಕೆ ಅವರಲ್ಲಿ ಗೋಚರವಾಗಬಹುದು. ಗಡ್ಡ, ಟೊಪ್ಪಿ, ನಾಮ, ಅಲ್ಲಾಹು ಅಕ್ಬರ್, ಜೈ ಶ್ರೀರಾಮ್.. ಮುಂತಾದ ಘೋಷಣೆಗಳನ್ನು ಅವರು ಮೊಳಗಿಸುತ್ತಿರಬಹುದು. ಆದರೆ ತಮ್ಮ ಅಕ್ಷರ ಜ್ಞಾನವನ್ನು ಧರ್ಮಗ್ರಂಥಗಳ ಅಧ್ಯಯನಕ್ಕೆ ಅವರು ಬಳಸಿಕೊಂಡಿರುವುದು ತೀರಾ ಅಪರೂಪ. ಕಾನೂರು ಸುಬ್ಬಮ್ಮ ಹೆಗ್ಗಡತಿಯಲ್ಲಿ ಕುವೆಂಪು ಹೀಗೆ ಬರೆದಿದ್ದಾರೆ ಎಂದು ಹೇಳಿದರೆ ಆ ಕಾದಂಬರಿಯನ್ನು ಓದಿ ಅದನ್ನು ದೃಢಪಡಿಸಲು ಮುಂದಾಗುವ ವ್ಯಕ್ತಿ, ಮಂದಿರದಲ್ಲೋ ಮಸೀದಿಯಲ್ಲೋ ತಾನು ಉರ ಹೊಡೆಯುವ ಪದಗಳನ್ನು ಧರ್ಮಗ್ರಂಥದಲ್ಲಿ ಹುಡುಕುವ ಉಮೇದು ತೋರುವುದಿಲ್ಲ. ಭೈರಪ್ಪನವರು ‘ಆವರಣ’ದಲ್ಲೋ ‘ದಾಟು’ವಿನಲ್ಲೋ ಏನು ಹೇಳಿದ್ದಾರೆ ಎಂಬುದನ್ನು ಕುತೂಹಲದಿಂದ ಹುಡುಕುವ ವ್ಯಕ್ತಿಗಳಲ್ಲಿ ಹಿಂದುವೂ ಇರಬಹುದು, ಮುಸ್ಲಿಮನೂ ಇರಬಹುದು. ಅಲ್ಲದೇ, ಅವರು ತಂತಮ್ಮ ಧರ್ಮಗಳನ್ನು ಕರ್ಮಠರಾಗಿ ಅನುಸರಿಸುತ್ತಿರಲೂ ಬಹುದು. ಆದರೆ, ‘ಆವರಣ’ದಲ್ಲಿರುವ ಕುತೂಹಲ ಅವರಿಗೆ ಧರ್ಮಗ್ರಂಥದಲ್ಲಿ ಇರುವುದಿಲ್ಲ. ಅವರು ಧರ್ಮಗ್ರಂಥಗಳ ಬಗ್ಗೆ ಇನ್ನಾರೋ ಹೇಳಿದುದನ್ನು ಅಥವಾ ಕೇಳಿದುದನ್ನೇ ಸ್ವೀಕರಿಸಿಕೊಂಡು ಬಹುತೇಕ ಬಾರಿ ಅದನ್ನೇ ಪರಮ ಸತ್ಯ ಎಂದು ನಂಬಿಕೊಂಡೇ ಬದುಕುತ್ತಾರೆ. ಬಹುಶಃ ಅಕ್ಷರಸ್ಥರ ಇಂಥ ದೌರ್ಬಲ್ಯಗಳೇ ಕೋಮು ಸಂಘರ್ಷಗಳಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಅಷ್ಟಕ್ಕೂ,

ಜಲೀಲ್ ಮುಕ್ರಿಯವರ ಮೇಲಿನ ನಾಲ್ಕು ಸಾಲುಗಳು ನಾಲ್ಕು ದಿಕ್ಕುಗಳಿಗೂ ಹರಡಲಿ.