Tuesday, May 5, 2015

ಅತ್ಯಾಚಾರ ಮತ್ತು ಕಾರಣಗಳ ಹುಡುಕಾಟ


    ಒಝ್‍ಜೆಕಾನ್ ಅಸ್ಲನ್ ಎಂಬ 20ರ ಹರೆಯದ ಟರ್ಕಿಯ ಮನಃಶಾಸ್ತ್ರ ವಿದ್ಯಾರ್ಥಿನಿಯನ್ನು 2000 ಆಗಸ್ಟ್ ನಲ್ಲಿ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಲಾಗುತ್ತದೆ. ಯುವತಿ ಪ್ರತಿರೋಧ ವ್ಯಕ್ತ ಪಡಿಸುತ್ತಾಳೆ. ಅಪಹರಣಕಾರರ ಮೇಲೆ ಪೆಪ್ಪರ್ ಸ್ಪ್ರೇ ಮಾಡುತ್ತಾಳೆ. ಅಪಹರಣಕಾರರು ಆಕೆಗೆ ಇರಿಯುತ್ತಾರಲ್ಲದೇ ತಲೆಗೆ ಕಬ್ಬಿಣದ ರಾಡ್‍ನಿಂದ ಏಟು ಕೊಟ್ಟು ಕೊಲೆ ಮಾಡುತ್ತಾರೆ. ಈ ಕೃತ್ಯ ಟರ್ಕಿಯಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗುತ್ತದೆ. ಅಂಕಾರ, ಇಸ್ತಾಂಬುಲ್, ಮೆರ್ಸಿನ್‍ಗಳಲ್ಲಿ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಬೀದಿಗಿಳಿಯುತ್ತಾರೆ. ಇದೇ ವೇಳೆ, ಅತ್ಯಾಚಾರದ ಸಂದರ್ಭದಲ್ಲಿ ಮಹಿಳೆ ಪ್ರತಿರೋಧ ತೋರುವುದರಿಂದ ಲಾಭವೋ ನಷ್ಟವೋ ಎಂಬುದರ ಬಗ್ಗೆ ಯುರೋಪಿನಲ್ಲಿ ನಡೆಯುತ್ತಿದ್ದ ಚರ್ಚೆಯು ಟರ್ಕಿಯನ್ನೂ ಆವರಿಸುತ್ತದೆ. 1999ರಲ್ಲಿ ಇಂಗ್ಲೆಂಡಿನಲ್ಲಿ ಈ ಕುರಿತಂತೆ ನಡೆದ ಚರ್ಚೆಯ ಫಲಿತಾಂಶಗಳು ಟರ್ಕಿಯಲ್ಲೂ ಪ್ರತಿಫಲಿಸುತ್ತದೆ. ಸ್ವರಕ್ಷಣಾ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವ ಏರ್ಪಾಡು ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತದೆ. ಎರಡು ಬೆರಳುಗಳಿಂದ ಅತ್ಯಾಚಾರಿಯ ಕಣ್ಣನ್ನು ತಿವಿಯುವುದು ಅಥವಾ ಕೊರಳಿಗೆ ಗುದ್ದುವುದು, ಬೊಬ್ಬೆ ಹಾಕುವುದು, ತಲೆಗೂದಲನ್ನು ಬಲವಾಗಿ ಹಿಡಿದೆಳೆಯುವುದು.. ಸಹಿತ ಪ್ರತಿರೋಧ ವಿಧಾನಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಸಂದರ್ಭಕ್ಕೆ ಹೊಂದಿಕೊಂಡು ಮಹಿಳೆ ಪ್ರತಿರೋಧ ತೋರಬೇಕೆಂದು ಹೇಳುವವರಂತೆಯೇ ಅದರಿಂದಾಗಿ ಅತ್ಯಾಚಾರಿಗಳು ರೊಚ್ಚಿಗೇಳುವ ಅಪಾಯದ ಬಗ್ಗೆಯೂ ಎಚ್ಚರದ ಮಾತುಗಳು ಕೇಳಿಬರುತ್ತವೆ. ಒಂದು ರೀತಿಯಲ್ಲಿ, ಅಸ್ಲನ್ ಟರ್ಕಿಯ ನಿರ್ಭಯ ಆಗುತ್ತಾಳೆ. ಆಕೆಯ ಪ್ರತಿರೋಧ ದೊಡ್ಡ ಮಟ್ಟದ ಪ್ರಶಂಸೆಗೆ ಪಾತ್ರವಾಗುತ್ತದೆ.
    ಹಾಗಂತ, ಅತ್ಯಾಚಾರವನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಯುರೋಪ್‍ನಲ್ಲಿ 90ರ ದಶಕದಲ್ಲೇ ಚರ್ಚೆ ಆರಂಭವಾಗಿತ್ತು.
    ಕ್ರೆಗ್ನಾನ್ ಮತ್ತು ಗ್ರೋವ್ಸ್ ಬರೆದ- ‘ಹರ್ ವಿಟ್ಸ್ ಅಬೌಟ್ ಹರ್: ಸೆಲ್ಫ್ ಡಿಫೆನ್ಸ್ ಸಕ್ಸೆಸ್ ಸ್ಟೋರೀಸ್ ಬೈ ವುಮೆನ್', ಫಿಸ್ನೋಫ್ ಮತ್ತು ಮಾರ್ಗನ್ ಅವರು ಬರೆದ- ‘ರೇಪ್, ಪ್ರಿವೆನ್ಶನ್ ಆಂಡ್ ಸೆಲ್ಫ್ ಡಿಫೆನ್ಸ್’, ಜೆಲ್‍ಮ್ಯಾನ್ ಮತ್ತು ಜೋಸೆಫ್‍ರ- ‘ದಿ ಮೈಂಡ್ ಆಫ್ ದಿ ರೇಪಿಸ್ಟ್’, ಬೆಲ್ ಮತ್ತು ನಪುರ್ಲಾ ನೆಲ್ಸನ್ ಅವರ- ‘ಸ್ಪೀಕಿಂಗ್ ಅಬೌಟ್ ರೇಪ್ ಈಸ್ ಎವ್ರಿ ಒನ್ಸ್ ಬ್ಯುಸಿನೆಸ್’ ಅಥವಾ ಬ್ರೈತ್‍ವೈಟ್ ಮತ್ತು ಬೈಲ್ಸ್ ಅವರು ಬರೆದ- ‘ವುಮೆನ್ ಆ್ಯಸ್ ವಿಕ್ಟಿಮ್ಸ್ ಆಫ್ ಕ್ರೈಮ್..’ ಮುಂತಾದ ಹಲವಾರು ಕೃತಿ-ಲೇಖನಗಳು ಯುರೋಪಿಯನ್ ಆಲೋಚನೆಗಳನ್ನು ಕೆದಕುವ ಪ್ರಯತ್ನ ಮಾಡಿದ್ದುವು. ‘ಅತ್ಯಾಚಾರಿಗಳಿಗೆ ಅನೇಕ ಬಾರಿ ಅತ್ಯಾಚಾರದ ಪರಿಣಾಮ ಗೊತ್ತಿರುವುದಿಲ್ಲ, ಮರಣ ದಂಡನೆಗೆ ಅರ್ಹವಾಗುವಷ್ಟು ಭೀಕರ ಅಪರಾಧ ಎಂಬುದರ ಪ್ರಜ್ಞೆ ಇರುವುದಿಲ್ಲ, ಆದ್ದರಿಂದ ಅತ್ಯಾಚಾರಿಗಳ ಮುಂದೆ ಅದರ ಪರಿಣಾಮಗಳ ಬಗ್ಗೆ ವಿವರಿಸುವ ಮೂಲಕ ಅತ್ಯಾಚಾರದಿಂದ ತಪ್ಪಿಸಿಕೊಳ್ಳಬಹುದು’ ಎಂಬ ಅಭಿಪ್ರಾಯಗಳೂ ಬಂದುವು. 2009 ಡಿಸೆಂಬರ್‍ನಲ್ಲಿ ರೇಪ್ ಇಂಟೆಲಿಜೆನ್ಸ್ ಯುನಿಟ್ ಎಂಬ ವಿಭಾಗವನ್ನು ಬ್ರಿಟನ್‍ನಲ್ಲಿ ಪ್ರಪ್ರಥಮವಾಗಿ ತೆರೆಯಲಾಯಿತು. ಕೆರೋಲಿನ್ ಬೇಟ್ಸ್ ರ ನೇತೃತ್ವದಲ್ಲಿ 400 ವಿಶೇಷ ಅಧಿಕಾರಿಗಳನ್ನು ಒಳಗೊಂಡ ತಂಡವಾಗಿತ್ತು ಅದು. ಜಾನ್‍ವೊರ್ ಬಾಯ್ಸ್ ಎಂಬ ಕ್ಯಾಬ್ ಡ್ರೈವರ್ ಹಾಗೂ ಫುಟ್ಬಾಲ್ ರೆಫ್ರಿಗಳ ಮುಖ್ಯಸ್ಥ ಕಿರ್ಕ್ ರೈಡ್ ಎಂಬಿಬ್ಬರು ನೂರಾರು ಮಹಿಳೆಯರನ್ನು ಅತ್ಯಾಚಾರಕ್ಕೊಳಪಡಿಸಿದ್ದ ಸಂಗತಿ ಬಹಿರಂಗಕ್ಕೆ ಬಂದ ಬಳಿಕ ಈ ತಂಡದ ರಚನೆಯಾಗಿತ್ತು. ಒಂದು ರೀತಿಯಲ್ಲಿ, ಯುರೋಪಿಯನ್ ರಾಷ್ಟ್ರಗಳಲ್ಲಿ 90ರ ದಶಕದಲ್ಲೇ ಆರಂಭವಾದ ಮಹಿಳಾ ಸುರಕ್ಷಿತತೆಯ ಚರ್ಚೆಗಳು ಭಾರತದಲ್ಲಿ ಗಂಭೀರ ಮಟ್ಟದಲ್ಲಿ ಕಾಣಿಸಿಕೊಂಡದ್ದು 2012ರ ನಿರ್ಭಯ ಪ್ರಕರಣದ ನಂತರ. ಅತ್ಯಾಚಾರದ ಹಿಂದಿರುವ ಸತ್ಯಗಳು ಮತ್ತು ಮಿಥ್ಯಗಳು ಒಂದು ಹಂತದ ವರೆಗೆ ನಮ್ಮಲ್ಲಿ ಆ ಬಳಿಕ ಚರ್ಚೆಗೀಡಾದವು. ಹೆಣ್ಣಿನ ಉಡುಪು, ಗಂಡಿನ ಅಮಲು, ಆಧುನಿಕ ಜೀವನ ಕ್ರಮ, ಗಂಡಿನ ಬಲಾಢ್ಯತೆ, ಸಿನಿಮಾ.. ಮುಂತಾದುವುಗಳನ್ನು ಅತ್ಯಾಚಾರಕ್ಕೆ ಕಾರಣವಾಗಿ ಮುಂದಿಡಲಾಯಿತು. ಇವನ್ನು ತಿರಸ್ಕರಿಸುವ ಪ್ರಕ್ರಿಯೆಯೂ ನಡೆದುವು. ನಿಜವಾಗಿ, ನಮ್ಮಲ್ಲಿ ನಡೆದ ಚರ್ಚೆಯಲ್ಲಿ ಕಾಣದೇ ಹೋದುದೇನೆಂದರೆ, ಸ್ವರಕ್ಷಣೆಯ ಬಗ್ಗೆ ಗಂಭೀರ ಮಟ್ಟದ ವಿಶ್ಲೇಷಣೆ ನಡೆಯದೇ ಹೋದುದು. ‘ಪ್ರಚೋದನಾತ್ಮಕ ಉಡುಪು ಧರಿಸುವ ಮಹಿಳೆ ಅಪಾಯವನ್ನು ಆಹ್ವಾನಿಸುತ್ತಾಳೆ' ಎಂಬ ಅಭಿಪ್ರಾಯವನ್ನು ತಿರಸ್ಕರಿಸಿ ನಮ್ಮಲ್ಲಿ ತಿಂಗಳುಗಟ್ಟಲೆ ಚರ್ಚೆಗಳು ನಡೆದಿವೆ. ಅತ್ಯಾಚಾರಿಗಳು ಸುಲಭದ ಗುರಿಯನ್ನು ಇಟ್ಟುಕೊಳ್ಳುತ್ತಾರೆಯೇ ಹೊರತು ಬಟ್ಟೆಯ ಉದ್ದಳತೆಯನ್ನು ನೋಡಿಯಲ್ಲ ಎಂದು ವಾದಿಸಿದವರಿದ್ದಾರೆ. ಮಕ್ಕಳು, ವೃದ್ಧೆಯರ ಮೇಲೆ ನಡೆಯುವ ಅತ್ಯಾಚಾರಗಳಿಗೆ ಯಾವ ಪ್ರಚೋದನೆ ಕಾರಣ’ ಎಂದು ಪ್ರಶ್ನಿಸಿದವರಿದ್ದಾರೆ. ಮಹಿಳೆಯರ ಕುರಿತಾದ ಕೀಳು ಭಾವನೆ, ಪುರುಷ ಶ್ರೇಷ್ಠ ಆಲೋಚನೆಗಳೇ ಅತ್ಯಾಚಾರಕ್ಕೆ ಕಾರಣ ಎಂದೂ ಸಮರ್ಥಿಸಿದವರಿದ್ದಾರೆ. ಈ ವಾದ-ವಿವಾದಗಳೇನೇ ಇರಲಿ, ಅತ್ಯಾಚಾರ ಪ್ರಕರಣಗಳಂತೂ ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಇಂಡಿಯಾಸ್ ಡಾಟರ್‍ನಲ್ಲಿ ಆರೋಪಿ ಮುಖೇಶ್ ಸಿಂಗ್ ತನ್ನ ಕೃತ್ಯದ ಬಗ್ಗೆ ತೀರಾ ಕ್ಯಾಶುವಲ್ ಆಗಿ ಮಾತಾಡುತ್ತಾನೆ. ಅತ್ಯಾಚಾರದ ಇತರ ಪ್ರಕರಣಗಳಿಗೆ ಇಲ್ಲದ ಮಹತ್ವ ನಿರ್ಭಯಳಿಗೇಕೆ ನೀಡಲಾಗುತ್ತಿದೆ ಎಂದು ಪ್ರಶ್ನಿಸುತ್ತಾನೆ. ಸಂಜೆಯ ಬಳಿಕ ಹೆಣ್ಣು ಮನೆಯಿಂದ ಹೊರ ಬರಬಾರದೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ಇಂಥ ಅಭಿಪ್ರಾಯಗಳನ್ನು ಒಟ್ಟು ಸೇರಿಸಿ ಭಾರತದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳಿಗೆ ಇಂಥ ಪುರಾತನ ಆಲೋಚನೆಗಳೇ ಕಾರಣ ಎಂದೂ ಷರಾ ಬರೆಯಬಹುದು. ಆದರೆ ಯುರೋಪಿಯನ್ ರಾಷ್ಟ್ರಗಳು ತೀರಾ ಮುಂದುವರಿದಿದೆಯಲ್ಲವೇ? ಧಾರ್ಮಿಕ ಚಿಂತನೆಗಳಿಗೆ ತೀರಾ ಕಡಿಮೆ ಮಹತ್ವ ಇರುವ ಮತ್ತು ಭಾರತದಂತೆ ಖಾಪ್ ಪಂಚಾಯತ್, ಜಾತಿಗಳು ಮತ್ತು ಕಟ್ಟುಪಾಡುಗಳಿಲ್ಲದ ಅಥವಾ ಆಧುನಿಕ ಚಿಂತನೆಗಳನ್ನು ಅಳವಡಿಸಿಕೊಂಡಿರುವ ರಾಷ್ಟ್ರಗಳಲ್ಲವೆ ಅವು? ಮಾನವ ಹಕ್ಕುಗಳು ಮತ್ತು ಮಹಿಳಾ ಸ್ವಾತಂತ್ರ್ಯದ ವಿಷಯದಲ್ಲಿ ಅಮೇರಿಕ ಜಗತ್ತಿನಲ್ಲಿಯೇ ಮುಂಚೂಣಿಯಲ್ಲೂ ಇದೆಯಲ್ಲವೇ? ಇವೆಲ್ಲ ಇದ್ದೂ ಅಮೇರಿಕದಲ್ಲಿ ಪ್ರತಿವರ್ಷ 92 ಸಾವಿರಕ್ಕಿಂತಲೂ ಅಧಿಕ ಲೈಂಗಿಕ ಹಲ್ಲೆ ಪ್ರಕರಣಗಳು ನಡೆಯುತ್ತಿರುವುದೇಕೆ? 90ರ ದಶಕದಲ್ಲೇ ಬ್ರಿಟನ್ ಸಹಿತ ಯುರೋಪಿಯನ್ ರಾಷ್ಟ್ರಗಳಲ್ಲಿ ಅತ್ಯಾಚಾರವು ಬಹುದೊಡ್ಡ ಚರ್ಚಾ ವಿಷಯವಾಗುವುದಕ್ಕೆ ಕಾರಣಗಳೇನು? ಇವತ್ತು ಯುರೋಪ್, ಅಮೇರಿಕ ಸಹಿತ ಮುಂದುವರಿದ ರಾಷ್ಟ್ರಗಳು ಅತ್ಯಾಚಾರದ ಸಮಸ್ಯೆಯನ್ನು ಎದುರಿಸುತ್ತಿವೆ. ಸ್ವರಕ್ಷಣೆಯ ಬಗ್ಗೆ ಅಲ್ಲಿ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗಾಗುವುದಕ್ಕೆ ಕಾರಣಗಳೇನು? ಮುಖೇಶ್ ಸಿಂಗ್‍ನಂಥ ಮನಸ್ಥಿತಿಯೊಂದೇ ಇದಕ್ಕೆ ಕಾರಣ ಎಂದಾದರೆ ಯುರೋಪಿಯನ್ ರಾಷ್ಟ್ರಗಳು ಮುಂದುವರಿದಿದೆ ಎಂಬುದು ಬೊಗಳೆ ಎಂದಾಗುತ್ತದೆ. ಅದು ಮಾನಸಿಕವಾಗಿ ಭಾರತಕ್ಕಿಂತಲೂ ಹಿಂದಿದೆ ಎನ್ನಬೇಕಾಗುತ್ತದೆ ಅಥವಾ ಈ ಯುರೋಪ್‍ಗಿಂತಲೂ ಗಲ್ಫ್ ರಾಷ್ಟ್ರಗಳು ಸಾಕಷ್ಟು ಮುಂದಿವೆ ಎಂದೂ ಒಪ್ಪಬೇಕಾಗುತ್ತದೆ. ಯಾಕೆಂದರೆ, ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಾಚಾರ ಪ್ರಕರಣ ಗಳು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಒಂದು ಕಡೆ, ಆಧುನಿಕ ಚಿಂತನೆಗಳು ಎಲ್ಲಿ ಅತ್ಯಂತ ಹೆಚ್ಚಿವೆಯೋ ಅಲ್ಲಿ ಮಹಿಳಾ ದೌರ್ಜನ್ಯ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಮೊದಲು ಅಮೇರಿಕ ಮತ್ತಿತರ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿತು. ಉದಾರೀಕರಣದ ಪ್ರಕ್ರಿಯೆಗಳಿಗೆ ಯುರೋಪ್ ತೆರೆದುಕೊಂಡ ಬಳಿಕ ಮಹಿಳಾ ದೌರ್ಜನ್ಯಗಳ ಪ್ರಕರಣಗಳಲ್ಲಿ ತೀವ್ರಗತಿಯ ಏರಿಕೆ ಉಂಟಾಯಿತು. ಸಿನಿಮಾ, ಜಾಹೀರಾತು, ಸಾರ್ವಜನಿಕ ಬದುಕು ಎಲ್ಲದರಲ್ಲೂ ಮಹಿಳೆ ಮತ್ತು ಪುರುಷ ಕಾಣಿಸಿಕೊಳ್ಳುವ ವಿಧಾನ ಬದಲಾಯಿತು. ಪುರುಷ ಮತ್ತು ಮಹಿಳೆಯರ ಸ್ವಾತಂತ್ರ್ಯ, ಹಕ್ಕುಗಳ ವಿಷಯದಲ್ಲಿ ಹೊಸ ಬಗೆಯ ಚಿಂತನೆಗಳು ನಡೆದುವು. ಸ್ತ್ರೀ ಮತ್ತು ಪುರುಷ ಸಮಾನತೆಯ ವಿಷಯದಲ್ಲಿ ಗಂಭೀರ ವಾದ-ವಿವಾದಗಳು ಉಂಟಾದುವು. ವಿಂಬಲ್ಡನ್ ಟೆನ್ನಿಸ್‍ನಲ್ಲಿ ಪುರುಷರಷ್ಟೇ ಬಹುಮಾನ ಮೊತ್ತವನ್ನು ಮಹಿಳೆಗೂ ನೀಡಬೇಕು ಎಂಬ ಕೂಗು ಹುಟ್ಟಿಕೊಂಡದ್ದೂ ಈ ಸಂದರ್ಭದಲ್ಲೇ. ಯುರೋಪಿನ ಈ ಉದಾರೀಕರಣದ ನೀತಿಗೆ ಭಾರತ ತೆರೆದುಕೊಂಡ ಬಳಿಕ ಭಾರತವೂ ವೇಗವಾಗಿ ಯುರೋಪ್ ಆಗತೊಡಗಿತು. ಯುರೋಪಿನ ಅತ್ಯಾಚಾರ ಸಮಸ್ಯೆ ಭಾರತದ್ದೂ ಆಯಿತು. ಅಲ್ಲಿ ಯಾವ ಬಗೆಯ ಚರ್ಚೆಗಳಾಗುತ್ತವೋ ಅವೇ ಬಗೆಯ ಚರ್ಚೆ ದಶಕಗಳ ಬಳಿಕ ಇಲ್ಲೂ ಆಗತೊಡಗಿತು. ಇನ್ನು ಸ್ವರಕ್ಷಣೆಯ ಕಲೆಯ ಬಗ್ಗೆ ನಾವು ಚರ್ಚೆ ನಡೆಸಬೇಕಾಗುತ್ತದೆ. ಈಗಾಗಲೇ ಯುರೋಪ್ ಆ ಕುರಿತಾದ ಚರ್ಚೆಯನ್ನು ಮಾಡಿ ಮುಗಿಸಿದೆ. ಇನ್ನೊಂದು ಕಡೆ, ಯುರೋಪಿಯನ್ ಪ್ರಣೀತ ಸ್ವಾತಂತ್ರ್ಯವನ್ನು ಅನುಮಾನದಿಂದಲೇ ನೋಡುತ್ತಿರುವ ಮತ್ತು ಆಧುನಿಕ ಚಿಂತನೆಗಳನ್ನು ತನ್ನೊಳಗೆ ಇಳಿಸಿಕೊಳ್ಳಲು ಹಿಂಜರಿಯುತ್ತಿರುವ ರಾಷ್ಟ್ರಗಳಲ್ಲಿ ಮಹಿಳಾ ದೌರ್ಜನ್ಯ ತೀರಾ ಕಡಿಮೆ ಪ್ರಮಾಣದಲ್ಲಿದೆ. ಇದನ್ನು ಏನೆಂದು ವಿಶ್ಲೇಷಿಸಬಹುದು?
  
ಅಷ್ಟಕ್ಕೂ, ಸ್ವಾತಂತ್ರ್ಯ ಎಂಬ ಪದ ದೀಪಿಕಾ ಪಡುಕೋಣೆಯ ‘ಮೈ ಚಾಯ್ಸ್'ನ ಬಳಿಕ ಹುಟ್ಟಿಕೊಂಡದ್ದಲ್ಲ. ಅದು ಉದಾರೀಕರಣದ ಮೊದಲೂ ಇತ್ತು ಮತ್ತು ಉದಾರೀಕರಣದ ನಂತರದಲ್ಲೂ ಇರುತ್ತದೆ. ಆದರೆ ಜಾಗತೀಕರಣದ ನಂತರ ‘ಸ್ವಾತಂತ್ರ್ಯ’ ಎಂಬ ಪದಕ್ಕೆ ಪುರುಷ ಮತ್ತು ಮಹಿಳೆ ಇಬ್ಬರೂ ವಿಪರೀತ ಅರ್ಥವನ್ನು ಕಲ್ಪಿಸಿಕೊಂಡಿರುವಂತೆ ಕಾಣಿಸುತ್ತಿದೆ. ಒಂದು ಕಡೆ, ದೀಪಿಕಾ ಪಡುಕೋಣೆಯಿದ್ದರೆ ಇನ್ನೊಂದು ಕಡೆ ಮುಖೇಶ್ ಸಿಂಗ್ ಇದ್ದಾನೆ. ಇವರಿಬ್ಬರೂ ಜಾಗತೀಕರಣಗೊಂಡ ಇಂದಿನ ಜಗತ್ತಿನಲ್ಲಿಯೇ ಬದುಕುತ್ತಿದ್ದರೂ ಸ್ವಾತಂತ್ರ್ಯ ಎಂಬ ಪದವನ್ನು ಇವರು ಅರ್ಥೈಸಿಕೊಂಡ ರೀತಿಯೇ ಬೇರೆ. ದೀಪಿಕಾಳ ಮೈ ಚಾಯ್ಸ್ ಅನ್ನು ವೀಕ್ಷಿಸಿದರೆ ಮುಖೇಶ್‍ಗೆ ಅದು ಅನಾಗರಿಕ ಅನ್ನಿಸಬಹುದು. ಇಂಡಿಯಾಸ್ ಡಾಟರ್‍ನಲ್ಲಿ ಮುಖೇಶ್‍ನನ್ನು ವೀಕ್ಷಿಸಿದ ದೀಪಿಕಾಳಿಗೆ ಆತ ಅನಾಗರಿಕನಾಗಿ ಕಾಣಿಸಬಹುದು. ಬಹುಶಃ ಉದಾರೀಕಣದ ಜಗತ್ತು ಈ ಎರಡು ‘ಉಗ್ರ'ವಾದಗಳ ನಡುವೆ ಸಿಕ್ಕು ಇವತ್ತು ಒದ್ದಾಡುತ್ತಿರುವಂತೆ ಕಾಣಿಸುತ್ತಿದೆ. ಒಂದು ಕಡೆ, ಯುರೋಪ್ ಪ್ರಣೀತ ಸ್ವಾತಂತ್ರ್ಯವು ಹೆಣ್ಣನ್ನು ಮೈ ಚಾಯ್ಸ್ ನಂತೆ ಬೆಳೆಯಲು ಪ್ರಚೋದಿಸುತ್ತದೆ. ಇನ್ನೊಂದು ಕಡೆ ಅದರ ಅಡ್ಡ ಪರಿಣಾಮಗಳ ಬಗ್ಗೆ ಅದು ಗಾಢ ನಿರ್ಲಕ್ಶ್ಯವನ್ನೂ ತಾಳುತ್ತದೆ ಅಥವಾ ಆ ಬಗ್ಗೆ ಚರ್ಚಿಸುವುದು ಮಹಿಳಾ ವಿರೋಧಿ ಎಂಬ ವಾತಾವರಣವನ್ನು ಹುಟ್ಟು ಹಾಕುತ್ತದೆ. ಇದಕ್ಕೆ ಮಾರುಕಟ್ಟೆ ಆಧಾರಿತ ಅದರ ನೀತಿಗಳು ಕಾರಣವೋ ಏನೋ ಆದರೆ ಅದು ಸಮಾಜದ ಒಟ್ಟು ಆಲೋಚನಾ ಪ್ರಕ್ರಿಯೆಯ ಮೇಲೆ ಪರಿಣಾಮವನ್ನಂತೂ ಬೀರುತ್ತಿದೆ. ಒಂದು ರೀತಿಯಲ್ಲಿ, ಉದಾರೀಕರಣದ ಕರಾಳ ಮುಖವಾಗಿ ಮುಖೇಶ್ ಕಾಣಿಸಿದರೆ ಅತಿರೇಕದ ಮುಖವಾಗಿ ದೀಪಿಕಾ ಕಾಣಿಸುತ್ತಾಳೆ. ಇವೆರಡರ ನಡುವೆ ನಾವು ‘ಸ್ವಾತಂತ್ರ್ಯ'ಕ್ಕೆ ಅರ್ಥವನ್ನು ಹುಡುಕಬೇಕಿದೆ. ಪಂಜಾಬ್‍ನ ಮೊಗ್ಗಾದಲ್ಲಿ ನಡೆದ ಘಟನೆಯನ್ನು ಇನ್ನೊಂದು ನಿರ್ಭಯ ಆಗಿ ನೋಡಲಾಗುತ್ತಿರುವ ಈ ಸಂದರ್ಭದಲ್ಲಿ ಇಂಥದ್ದೊಂದು ಹುಡುಕಾಟ ಅಗತ್ಯವೆನಿಸುತ್ತದೆ. 

No comments:

Post a Comment