Monday, March 26, 2012

ದೂರದರ್ಶನದ ನಿರೂಪಕನೇ ಭಯೋತ್ಪಾದಕನಾಗುವಾಗ, ಇನ್ನು ಜನಸಾಮಾನ್ಯ ಉಳಿಯುತ್ತಾನಾ?


ಫೆ. 15, 2012
‘ಇರಾನಿನ ಅಣು ಸಾಮರ್ಥ್ಯ ಮತ್ತು ಅದರ ಪ್ರತಿಕ್ರಿಯೆಗಳು..’ ಅನ್ನುವ ವಿಷಯದಲ್ಲಿ ಫೆ. 15ರಂದು ಎನ್.ಡಿ.ಟಿ.ವಿ.ಯಲ್ಲಿ ಚರ್ಚೆಯೊಂದು ನಡೆಯುತ್ತಿತ್ತು. ದೂರದರ್ಶನದಲ್ಲಿ (ಡಿ.ಡಿ. ) ಉರ್ದು ಕಾರ್ಯಕ್ರಮದ ನಿರೂಪಕರಾಗಿ (ಯಾಂಕರ್ ಆಗಿ) ಚಿರಪರಿಚಿತರಾಗಿರುವ ಹಿರಿಯ ಪತ್ರಕತ್ರ ಮುಹಮ್ಮದ್ ಅಹ್ಮದ್ ಕಾಸ್ಮಿಯವರು ಚರ್ಚೆಯಲ್ಲಿ ಪಾಲ್ಗೊಂಡು ಇರಾನನ್ನು ಬೆಂಬಲಿಸಿ ಬಲವಾಗಿ ವಾದಿಸಿದರು. ಇರಾನಿನಲ್ಲಿ ಶಿಯಾ-ಸುನ್ನಿ ಜಗಳ ಇದೆ, ಅವರು ಪರಸ್ಪರ ಬೇರ್ಪಟ್ಟು (divide) ಹೋಗಿದ್ದಾರೆ ಅನ್ನುವ ಮಾತುಗಳನ್ನೆಲ್ಲಾ ಕಾಸ್ಮಿ ಪುರಾವೆ ಸಮೇತ ತಳ್ಳಿ ಹಾಕಿದರು. ಅದು ಅಮೇರಿಕದ ಅಪಪ್ರಚಾರ ಅಂದರು. ಇರಾಕಿನಲ್ಲಿ 40% ಮದುವೆಗಳು ನಡೆಯುತ್ತಿರುವುದೇ ಶಿಯಾ-ಸುನ್ನಿಗಳ ಮಧ್ಯೆ ಅಂದರು. ಇರಾನ್ ಈ ವರೆಗೆ ತಾನೇ ಮೊದಲಾಗಿ ಯಾರ ವಿರುದ್ಧವೂ ದಾಳಿಯನ್ನೇ ಮಾಡಿಲ್ಲ, ಯುದ್ಧದ ವಿರುದ್ಧ ಅಹ್ಮದಿ ನೆಜಾದ್ ಹೊರಡಿಸಿರುವ ಫತ್ವವನ್ನು ಅಡಗಿಸಿಟ್ಟಿರುವ ಪಶ್ಚಿಮವು, ಇರಾನನ್ನು ಅಪಾಯಕಾರಿಯೆಂದು ಸುಳ್ಳು ಸುಳ್ಳೇ ಬಿಂಬಿಸುತ್ತಿದೆ ಅಂತ ಟೀಕಿಸಿದರು..
ಚರ್ಚೆಯ 21 ದಿನಗಳ ಬಳಿಕ ಮಾರ್ಚ್ 7ರ0ದು, ದೂರದರ್ಶನ ಹೊಸ ಬುಲೆಟಿನ್ ಗೆ ಯಾಂಕರ್ ಆಗಿ ಕೆಲಸ ನಿಭಾಯಿಸಿ ಬೆಳಿಗ್ಗೆ ಹೊರಬಂದ ಕಾಸ್ಮಿಯನ್ನು ದೆಹಲಿ ಪೊಲೀಸರು ಬಂಧಿಸಿದರು. ಫೆ. 13ರಂದು ಇಸ್ರೇಲಿ ರಾಯಭಾರಿಯ ಕಾರನ್ನು ಸ್ಫೋಟಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಯಿತು .
ಮಾರ್ಚ್ 11. 2012
1. ಸಈದ್ ನಖ್ವಿ
2. ಎಸ್.ಕೆ. ಪಾಂಡೆ
3. ಮನೀಶ್ ಸೇಥಿ
4. ಶಬ್ನಮ್ ಹಾಶ್ಮಿ
5. ಸೀಮಾ ಮುಸ್ತಫಾ
6. ಪಾಂಚೋಲಿ
7. ಸುಕುಮಾರ್ ಮುರಳೀಧರನ್..
ಸಹಿತ ಖ್ಯಾತ ಪತ್ರಕರ್ತರು ಮತ್ತು ಚಿಂತಕರು ಮಾರ್ಚ್ 11ರಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಕಾಸ್ಮಿಯ ಬಂಧನವನ್ನು ಖಂಡಿಸಿದರು. ಇರಾನ್ ಗೆ ಭೇಟಿ ಕೊಡುವುದು, ಪರ್ಷಿಯನ್ ಭಾಷೆ ತಿಳಿದಿರುವುದು ಇಲ್ಲವೇ ಇರಾನ್ ಪರ ನಿಲುವನ್ನು ಹೊಂದುವುದೆಲ್ಲ ಓರ್ವ ವ್ಯಕ್ತಿ ಭಯೋತ್ಪಾದಕ ಅನ್ನುವುದಕ್ಕೆ ಪುರಾವೆಯಾಗುತ್ತದೆಯೇ ಎಂದು ಅವರೆಲ್ಲ ಪ್ರಶ್ನಿಸಿದರು. ಕಾಸ್ಮಿ 28 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದಾರೆ. ಈ ವರೆಗೆ ಒಂದೇ ಒಂದು ಆರೋಪವೂ ಅವರ ಮೇಲಿಲ್ಲ. ಹೀಗಿರುವಾಗ ಕಾಸ್ಮಿಯನ್ನು ಏಕಾಏಕಿ ಬಂಧಿಸಿ ಇಸ್ರೇಲ್ ವಿರುದ್ಧದ ಸಂಚಿನಲ್ಲಿ ಭಾಗಿ ಎಂಬ ಹಣೆಪಟ್ಟಿ ಹಚ್ಚುವುದನ್ನು ಹೇಗೆ ನಂಬುವುದು, ತನ್ನ ವಿರೋಧಿಯ ವಿರುದ್ಧ ಮೊಸಾದ್ ಹೆಣೆದಿರುವ ಸಂಚು ಇದು ಯಾಕೆ ಆಗಿರಬಾರದು ಎಂದೆಲ್ಲಾ ಅವರು ಅನುಮಾನಗಳನ್ನು ವ್ಯಕ್ತಪಡಿಸಿದರು.

ಒಂದು ರೀತಿಯಲ್ಲಿ ಆ ಅನುಮಾನಗಳಿಗೆ ಬಲವಾದ ಕಾರಣವೂ ಇತ್ತು.

1983ರಲ್ಲಿ ಕಾಸ್ಮಿ ಪತ್ರಿಕೋದ್ಯಮವನ್ನು ಪ್ರಾರಂಭಿಸಿದ್ದೇ ದೆಹಲಿಯಲ್ಲಿರುವ ಇರಾನ್ ಪಬ್ಲಿಕ್ ನ್ಯೂಸ್ ಏಜೆನ್ಸಿಯಲ್ಲಿ (ಇರ್ನಾ ) ನ್ಯೂಸ್ ಆಪರೇಟರ್ ಆಗಿ ಸೇರಿಕೊಳ್ಳುವ ಮೂಲಕ. ಪಶ್ಚಿಮೇಶ್ಯದ ಕುರಿತಂತೆ ಅವತ್ತೇ ಕಾಸ್ಮಿಗೆ ಒಂದು ಬಗೆಯ ವಿಶೇಷ ಕುತೂಹಲವಿತ್ತು. ಇರಾನ್, ಇರಾಕ್, ಇಸ್ರೇಲ್ ಗಳು ಅವರ ಆಸಕ್ತಿಯ ವಿಷಯವಾಗಿತ್ತು. ಅರೆಬಿಕ್, ಪರ್ಷಿಯನ್, ಉರ್ದು ಭಾಷೆಯನ್ನು ಚೆನ್ನಾಗಿ ತಿಳಿದಿದ್ದ ಅವರು, 7 ವರ್ಷಗಳ ಬಳಿಕ ಪಶ್ಚಿಮೇಶ್ಯದ ಸುದ್ದಿಗಳನ್ನು ಪ್ರಕಟಿಸುವ ಮೀಡಿಯಾ ಸ್ಟಾರನ್ನು ಪ್ರಾರಂಭಿಸಿದರು. 1993ರಲ್ಲಿ ದೂರದರ್ಶನದಲ್ಲಿ ಯಾಂಕರ್ ಆಗಿ ಸೇರಿಕೊಂಡರು. ಡಿಡಿಯಲ್ಲಿ ಉರ್ದು ನ್ಯೂಸ್ ಬುಲೆಟಿನ್ ವೀಕ್ಷಿಸುವವರಿಗೆ ಕಾಸ್ಮಿ ಅತ್ಯಂತ ಚಿರಪರಿಚಿತ. 2003ರಲ್ಲಿ ಇರಾಕ್ ನ ಮೇಲೆ ಅಮೇರಿಕ ಅತಿಕ್ರಮಣ ನಡೆಸಿದಾಗ ಇರಾಕ್ ಗೆ ತೆರಳಿ ದೂರದರ್ಶನಕ್ಕಾಗಿ ಪ್ರತ್ಯಕ್ಷ ವರದಿಯನ್ನು ಮಾಡಿದ್ದು ಕಾಸ್ಮಿಯೇ. ಅಮೇರಿಕದ ದುರಾಸೆಯನ್ನು, ದೌಜ್ರನ್ಯವನ್ನು, ಇಸ್ರೇಲ್ ನ ಸಂಚನ್ನು ಅತ್ಯಂತ ಪರಿಣಾಮಕಾರಿಯಾಗಿ, ಒಂದಷ್ಟು ಸಿಟ್ಟಿನಿಂದಲೇ ಕಾಸ್ಮಿ ವರದಿ ಮಾಡಿದ್ದರು. ಮನುಷ್ಯರನ್ನು ಇರಾಕ್, ಅಮೇರಿಕ, ಇಸ್ರೇಲ್, ಭಾರತ ಎಂದು ವಿಭಜಿಸದೆ ಅಪ್ಪಟ ಮನುಷ್ಯರಾಗಿ ಕಂಡು, ಅವರಲ್ಲಿ ಯಾರ ಸಾವನ್ನೂ ಮನುಷ್ಯರ ಸಾವು ಎಂದೇ ವಿವರಿಸುತ್ತಿದ್ದ, ಆ ಸಾವಿಗೆ ಕಾರಣರಾದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಕಾಸ್ಮಿಯನ್ನು ಇಸ್ರೇಲ್ ದ್ವೇಷಿಸುವುದಕ್ಕೆ ಹತ್ತಾರು ಕಾರಣಗಳಿವೆ. ಅಮೇರಿಕಕ್ಕೂ ಕಾಸ್ಮಿ ಇಷ್ಟವಾಗುವುದಕ್ಕೆ ಅವಕಾಶವೇ ಇಲ್ಲ. ಭಾರತದ ಪರಮಾಪ್ತ ರಾಷ್ಟ್ರಗಳಾಗಿರುವ ಅಮೇರಿಕ ಮತ್ತು ಇಸ್ರೇಲ್ ನ ವಿರುದ್ಧ ದೂರದರ್ಶನದಲ್ಲಿ ನಿಂತು ಕಾಸ್ಮಿ ಮಾತಾಡುವುದನ್ನು, ಇರಾನ್ ಪರ ಪುರಾವೆಗಳನ್ನು ಮುಂದಿಟ್ಟು ವಾದಿಸುವುದನ್ನು ಅವು ಸಹಿಸುವುದಾದರೂ ಹೇಗೆ? 2005ರಿಂದ ದೂರದರ್ಶನದಲ್ಲಿ ಪ್ರಸಾರವಾಗಲು ಪ್ರಾರಂಭವಾದ world views india ತಂಡದಲ್ಲೂ ಕಾಸ್ಮಿ ಇದ್ದರು. ಇರಾನ್ನೊಂದಿಗೆ 2 ದಶಕಗಳಿಂದ ಸಂಬಂಧ ಇಟ್ಟುಕೊಂಡ ವ್ಯಕ್ತಿಯೊಬ್ಬ ಇಸ್ರೇಲ್ ಮತ್ತು ಅಮೇರಿಕದ ಸುಳ್ಳುಗಳನ್ನು ದೂರದರ್ಶನದಲ್ಲಿ ಬಹಿರ0ಗಪಡಿಸುವುದನ್ನು ಅವು ಇಷ್ಟಪಡಲು ಸಾಧ್ಯವಾ? ಭಾರತದಲ್ಲಿ ಉರ್ದು ಭಾಷಿಗರ ದೊಡ್ಡದೊಂದು ವಲಯವಿದೆ. ಅವರೆಲ್ಲರ ಮೇಲೆ ಕಾಸ್ಮಿಯ ವಿಚಾರಗಳಿಗೆ ಬಲವಾದ ಹಿಡಿತವಿದೆ. ಹೀಗಿರುವಾಗ ಕಾಸ್ಮಿಯನ್ನು ಬಾಂಬ್ ಸ್ಫೋಟದಲ್ಲಿ ಸಿಲುಕಿಸಿ, ಅವರ ಇಮೇಜನ್ನು ಹಾಳು ಮಾಡುವ ಸಂಚಿಗೆ ಇಸ್ರೇಲ್ ಯತ್ನಿಸಿರಲಿಕ್ಕಿಲ್ಲ ಎಂದು ಹೇಗೆ ಹೇಳುವುದು?

ಫೆ. 13ರ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಯಾರನ್ನೇ ಆಗಲಿ, ಕೆಲವೊಂದು ಅನುಮಾನುಗಳು ಕಾಡಿಯೇ ಕಾಡುತ್ತವೆ.

‘ಇಸ್ರೇಲ್ ರಾಯಭಾರಿಯ ಪತ್ನಿ ತಾಲಿ ಯಹೋಶ್ವಾ ಕೋರೆ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಔರಂಗಝೇಬ್ ರಸ್ತೆ ಕ್ರಾಸಿಂಗ್ ನಲ್ಲಿ 30-40 ಸೆಕೆಂಡ್ ನಿಂತಿತ್ತು. ಆಗ ಅಲ್ಲಿಗೆ ಬೈಕಲ್ಲಿ ಬಂದ ಇಬ್ಬರು ಕಾರಿನ ಡೀಸೆಲ್ ಟಾಂಕಿಯ ವಿರುದ್ಧ ಭಾಗದಲ್ಲಿ ಸ್ಟಿಕ್ಕರ್ ಬಾಂಬನ್ನು ಅಳವಡಿಸಿದರು. ಬಾಂಬ್ ಸ್ಫೋಟಗೊಂಡು ಕಾರು ಛಿದ್ರವಾಯಿತು..’ ಹಾಗಂತ ಮಾಧ್ಯಮಗಳು ಸುದ್ದಿ ಪ್ರಕಟಿಸಿದುವು. ನಿಜವಾಗಿ, ಕಾರು ಛಿದ್ರವಾಗಿಯೇ ಇಲ್ಲ. ಉರಿಯುತ್ತಿರುವ ಮತ್ತು ಢಿಕ್ಕಿ ತೆರೆದುಕೊಂಡ ಸ್ಥಿತಿಯಲ್ಲಿರುವ ಕಾರನ್ನೇ ಟಿ.ವಿ. ಮತ್ತು ಪತ್ರಿಕೆಗಳು ತೋರಿಸಿರುವುದು. ಇನ್ನು, ಸುರಕ್ಷತೆಗೆ ಅತ್ಯಂತ ಹೆಚ್ಚು ಒತ್ತು ಕೊಡುವ ರಾಷ್ಟ್ರ ಇಸ್ರೇಲ್. ಯಾವುದೇ ದೇಶದಲ್ಲಿರುವ ಅದರ ರಾಯಭಾರಿ, ಬುಲೆಟ್ ಪ್ರೂಫ್ ಇಲ್ಲದ ಕಾರಿನಲ್ಲಿ ರಸ್ತೆಗೆ ಇಳಿಯುವುದೇ ಇಲ್ಲ. ಹೀಗಿರುವಾಗ ಮಧ್ಯಮ ವರ್ಗ ಉಪಯೋಗಿಸುವ ಸಾಮಾನ್ಯ ಇನ್ನೋವಾ ಕಾರನ್ನು ತಾಲಿ ಯಹೋಶ್ವಾ ಉಪಯೋಗಿಸಿದ್ದಾದರೂ ಯಾಕೆ? ಭಯೋತ್ಪಾದಕರು ಕಪ್ಪು ಬೈಕಿನಲ್ಲಿ ಬಂದಿರುವರೆಂದು ಯಹೋಶ್ವಾ ಹೇಳಿದರೆ ಕೆಂಪು ಬೈಕಿನಲ್ಲೆಂದು ದೆಹಲಿ ಪೋಲೀಸರ ಪ್ರತ್ಯಕ್ಷ ದರ್ಶಿ ಸಾಕ್ಷಿ ಗೋಪಾಲ್ ಹೇಳುತ್ತಾರೆ. ಘಟನೆಯ ದೃಶ್ಯಗಳು CCTVಯಲ್ಲಿ ದಾಖಲಾಗಿಲ್ಲ. ಎಲ್ಲ ವಿವರಗಳೂ ಪ್ರತ್ಯಕ್ಷ ದರ್ಶಿಗಳನ್ನು ಅವಲಂಬಿಸಿಕೊಂಡಿವೆ ( we dont have CCTV footage of the incident. all the ದೆತೈಲ್ಸ್ are based oneye witness accounts) ಅಂತ ದೆಹಲಿ ಪೋಲೀಸರ ವಕ್ತಾರ ರಾಜೇಶ್ ಭಗತ್ ಹೇಳಿರುವುದಾಗಿ ಫೆ. 14ರಂದು ತೆಹಲ್ಕಾ, ಮುಂಬೈ ಮಿರರ್ ಸಹಿತ ಎಲ್ಲ ಪತ್ರಿಕೆಗಳೂ ವರದಿ ಮಾಡುತ್ತವೆ. ಪ್ರಧಾನ ಮಂತ್ರಿ ನಿವಾಸದ ಹತ್ತಿರ ಇರುವ, ಹೈಸೆಕ್ಯೂರಿಟಿ ವಲಯದಲ್ಲಿ ನಡೆದ ಈ ಘಟನೆಯೇ CCTVಯಲ್ಲಿ ದಾಖಲಾಗಿಲ್ಲ ಅಂದರೆ ಏನರ್ಥ? ಅಂದಹಾಗೆ, ಭಯೋತ್ಪಾದಕರು ಡೀಸೆಲ್ ಟಾಂಕಿಯ ಭಾಗದಲ್ಲಿ ಬಾಂಬ್ ಅಳವಡಿಸದೇ ವಿರುದ್ಧ ಭಾಗದಲ್ಲಿ ಬಾಂಬ್ ಅಳವಡಿಸಿದ್ದೇಕೆ? ಯಹೋಶ್ವಾರನ್ನು ಕೊಲ್ಲುವ ಉದ್ದೇಶವೇ ಅವರದ್ದಾಗಿದ್ದರೆ ಅವರು ಟಾಂಕಿಯ ಭಾಗದಲ್ಲೇ ಬಾಂಬ್ ಅಳವಡಿಸಬೇಕಿತ್ತಲ್ಲವೇ? ಬರೇ ಕಾರನ್ನು ಉರಿಸಿ, ಯಹೋಶ್ವಾರಿಗೆ ಏನೂ ಆಗದಂತೆ ನೋಡಿಕೊಳ್ಳುವುದು ಭಯೋತ್ಪಾದಕರ ಉದ್ದೇಶವಾಗಿತ್ತೆಂಬುದನ್ನು ನಂಬುವುದು ಹೇಗೆ? ಭಯೋತ್ಪಾದಕರಿಗೆ ಯಹೋಶ್ವಾದಲ್ಲಿ ಇಷ್ಟೊಂದು ಕರುಣೆ ಉಕ್ಕಲು ಕಾರಣವಾದರೂ ಏನು? ಯಹೋಶ್ವಾ ಆ ಬಳಿಕ ಇಸ್ರೇಲ್ ಗೆ ಹೊರಟು ಹೋದರು. ಅವರಿಗೆ ಏನೂ ಆಗಿಲ್ಲ ಅನ್ನುತ್ತವೆ ಕೆಲವು ವರದಿಗಳು. ಇವೆಲ್ಲ ಏನು?

ಅತ್ಯಂತ ಪ್ರಬಲ ಗುಪ್ತಚರ ವ್ಯವಸ್ಥೆಯನ್ನು ಹೊಂದಿದ, ತನ್ನ ಹಿತಾಸಕ್ತಿಯನ್ನು ಕಾಪಾಡಿ ಕೊಳ್ಳುವುದಕ್ಕಾಗಿ ಯಾವ ಮಟ್ಟಕ್ಕಿಳಿಯಲೂ ಹೇಸದ ರಾಷ್ಟ್ರವೊಂದಿದ್ದರೆ ಅದು ಇಸ್ರೇಲ್ ಮಾತ್ರ.

ವಾಜಪೇಯಿಯವರ ಎನ್. ಡಿ. ಏ. ಅಧಿಕಾರದಲ್ಲಿದ್ದ ಸಮಯದಲ್ಲಿ ಬಾಂಗ್ಲಾದೇಶ ಜಮಾಅತೆ ಇಸ್ಲಾಮಿಯು ರಾಜಧಾನಿ ಢಾಕಾದಲ್ಲಿ ಬೃಹತ್ ಸಭೆಯನ್ನು ಆಯೋಜಿಸಿತ್ತು. ಆಗ ಇಸ್ರೇಲ್ ಪೌರತ್ವವನ್ನು ಹೊಂದಿದ್ದ 4 ಮಂದಿ ಅಫಘಾನಿಯರನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಯಿತು. ಜಮಾಅತೆ ಇಸ್ಲಾಮಿಯ ಸಭೆಯಲ್ಲಿ ಬಾಂಬ್ ಹಾಕುವ ಯೋಜನೆಯೊಂದಿಗೆ ಬಂದಿದ್ದ ಅವರನ್ನು ಆ ಬಳಿಕ ಅಲ್ಲಿಂದ ನೇರ ಇಸ್ರೇಲ್ ಗೆ ರವಾನಿಸಲಾಯಿತು. ಇಸ್ರೇಲ್ ನ ಪೌರತ್ವ ಹೊಂದಿದ ಅಫಘಾನಿಗಳು ಇದ್ದಾರೆಂದ ಮೇಲೆ ಇನ್ನು ಇಸ್ರೇಲ್ ಸಾಕಿ ಬೆಳೆಸಿದ ಇರಾನಿಗಳು ಇರಲಾರರೆಂದು ಹೇಳಲು ಸಾಧ್ಯವೇ? ತನ್ನ ಕಾರ್ಯ ಸಾಧನೆಗಾಗಿ ಇಸ್ರೇಲ್ ಜಗತ್ತಿನ ಬೇರೆ ಬೇರೆ ದೇಶಗಳಿಂದ ಜನರನ್ನು ಖರೀದಿಸುತ್ತದೆ. ಸಂದರ್ಭಕ್ಕೆ ತಕ್ಕಂತೆ ಅವರನ್ನು ಉಪಯೋಗಿಸುತ್ತದೆ. ಹೀಗಿರುವಾಗ ಒಂದು ವೇಳೆ ಇಸ್ರೇಲಿ ರಾಯಭಾರಿಯ ಕಾರಿಗೆ ಬಾಂಬಿಟ್ಟದ್ದು ನಿಜವೇ ಆಗಿದ್ದರೂ ಮತ್ತು ಅದಕ್ಕೆ ಕಾರಣ ಇರಾನಿಗಳೇ ಆಗಿದ್ದರೂ ಅವರನ್ನು ಅಹ್ಮದಿ ನೆಜಾದ್ ರ ಅನುಯಾಯಿಗಳೆಂದು ಹೇಳಲಾಗುತ್ತಾ? ಇರಾನಿಗಳ ಕೈಯಲ್ಲಿ ಇಸ್ರೇಲ್ ಅಂಥದ್ದೊಂದು ಷಡ್ಯಂತ್ರದ ಯೋಜನೆ ಹಾಕಲಾರದೆಂದು ನಂಬುವ ಸ್ಥಿತಿ ಇವತ್ತಿದೆಯೇ?
ಫೆ. 19ರ ಟೈಮ್ಸ್ ಆಫ್ ಇಂಡಿಯಾದ ವರದಿಯನ್ನೇ ನೋಡಿ
‘ಲೆಬನಾನ್ ಇಲ್ಲವೇ ಇರಾನಿನ ಶಿಯಾ ವಿಭಾಗಕ್ಕೆ ಸೇರಿದ ವ್ಯಕ್ತಿಗಳೇ ದೆಹಲಿಯಲ್ಲಿ ಬಾಂಬ್ ಸ್ಫೋಟಿಸಿದ್ದಾರೆ, ಅವರ ವಿವರಗಳನ್ನು ವಿದೇಶಾಂಗ ಇಲಾಖೆಯಿಂದ ಸಂಗ್ರಹಿಸಲಾಗುತ್ತಿದೆ, ಇವರಿಗೆ ಭಾರತದಲ್ಲಿರುವ ವ್ಯಕ್ತಿಗಳು ಸಹಕರಿಸಿದ್ದಾರೆ ಎಂದು ಇಸ್ರೇಲ್ ನ ಮೊಸಾದ್ ಅಭಿಪ್ರಾಯ ಪಟ್ಟಿದೆ..’
ಈ ಸುದ್ದಿಯ ಸ್ವರೂಪವನ್ನೊಮ್ಮೆ ನೋಡಿ. ಕಾಸ್ಮಿಯನ್ನೂ ಭಾರತ ಮತ್ತು ಇರಾನ್ ನಡುವಿನ ಸಂಬಂಧವನ್ನೂ ಒಂದೇ ಏಟಿಗೆ ಧರಾಶಾಹಿಯಾಗಿಸುವ ಸೂಚನೆಯೊಂದು ಇದರಲ್ಲಿಲ್ಲ ಅನ್ನುತ್ತೀರಾ? ದೆಹಲಿ ಪೋಲೀಸರ ವಿಶೇಷ ದಳದ ಹೊರತು ಬೇರೆ ಯಾವ ತನಿಖಾ ಇಲಾಖೆಗೂ ಘಟನಾ ಸ್ಥಳಕ್ಕೆ ಹೋಗಲು ಮೊಸಾದ್ ಅನುಮತಿ ನೀಡಲಿಲ್ಲ. ಇಸ್ರೇಲ್ನಿಂದ ಧಾವಿಸಿ ಬಂದ ಮೊಸಾದ್, ಘಟನಾ ಸ್ಥಳಕ್ಕೆ ತೆರಳಿ ಕೃತ್ಯ ಯಾರದ್ದೆಂದೂ ಹೇಗೆ ನಡೆಯಿತೆಂದೂ ಮಾಧ್ಯಮಗಳ ಮುಂದೆ ವಿವರಣೆ ನೀಡಿತು. ಯಾಕೆ ಹೀಗೆ? ಇಸ್ರೇಲ್ ನಲ್ಲಿ ಇಂಥದ್ದೇ ಒಂದು ದುರಂತ ಸಂಭವಿಸಿದ್ದರೆ ಭಾರತದ ಗುಪ್ತಚರ ಇಲಾಖೆಯನ್ನು ಇಸ್ರೇಲ್ ಸ್ವಾಗತಿಸುತ್ತಿತ್ತೇ? ತನಿಖೆಯ ಹೊಣೆಯನ್ನು ‘ರಾ’ಗೆ ವಹಿಸಿ ಕೊಡುತ್ತಿತ್ತೇ?
ಕಾಸ್ಮಿಯಂಥ ಪ್ರಸಿದ್ಧ ಪತ್ರಕರ್ತನೇ ಸಂಚಿಗೆ ಬಲಿಯಾಗುವ ಸಾಧ್ಯತೆ ಇದೆಯೆಂದ ಮೇಲೆ ಇನ್ನು ಜನಸಾಮಾನ್ಯರ ಬಗ್ಗೆ ಹೇಳುವಂಥದ್ದೇನೂ ಇಲ್ಲ. ನಿಮ್ಮಲ್ಲಿ ಇಸ್ರೇಲನ್ನೋ ಅಮೇರಿಕವನ್ನೋ ಅಥವಾ ಅದರ ಭಯೋತ್ಪಾದನಾ ವಿರೋಧಿ ಹೋರಾಟವನ್ನೋ ಟೀಕಿಸುವ ಗುಣ ಇದೆಯೆಂದಾದರೆ ಭಯೋತ್ಪಾದಕರೆನಿಸಿಕೊಳ್ಳುವುದಕ್ಕೂ ಸಿದ್ಧರಾಗಬೇಕು. ಇಲ್ಲದಿದ್ದರೆ ಬಾಯ್ಮುಚ್ಚಿಕೊಂಡು ಸುಮ್ಮನಾಗಿ. ಕಾಸ್ಮಿ ಪ್ರಕರಣ ಕೊಡುವ ಎಚ್ಚರಿಕೆ ಇದು.

No comments:

Post a Comment