Tuesday, March 13, 2012

ತಾಯಿಯ ಎದೆಯಲ್ಲಿ ಮಲಗಿ ಆ ಮಗು ಬೆರಳು ಚೀಪುತ್ತಿತ್ತು..


ಆ ಕಡೆಯಿಂದ ಹೆಣ್ಣಿನ ಧ್ವನಿ
ಸರ್, ಒಂದು ಸಹಾಯ ಮಾಡುತ್ತೀರಾ? ಮಗುವಿನ ಬಗ್ಗೆ ಹೆಚ್ಚಿನ ವಿವರಗಳನ್ನು ಕೊಡಬಹುದಾ?
ಯಾವ ಮಗು? ಯಾವ ವಿವರ?
ಇವತ್ತಿನ ಪತ್ರಿಕೆಯ ಮುಖಪುಟದಲ್ಲಿ ನೀವೊಂದು ಸುದ್ದಿ ಕೊಟ್ಟಿದ್ದೀರಲ್ಲ, 8 ತಿಂಗಳ ಮಗುವಿನದ್ದು. ಅದು, ಅದರ ಬಗ್ಗೆ..
ಸಿಕ್ಕ ವಿವರಗಳನ್ನೆಲ್ಲಾ ಪತ್ರಿಕೆಯಲ್ಲಿ ನೀಡಿದ್ದೇವಲ್ಲಾ..
ಹಾಗಲ್ಲ ಸರ್, ಆ ಮಗುವಿನ ಫೋಟೋ ತೆಗೆದ ವ್ಯಕ್ತಿಯ ಹೆಸರು ನಿಮಗೆ ಗೊತ್ತಿದೆಯಾ ಅಂತ. ಆ ಫೋಟೋಗ್ರಾಫರ್ ಗೆ ವಿವರ ಗೊತ್ತಿರಬಹುದೇನೋ. ಗೊತ್ತಿದ್ದರೆ ಅವರ ಫೋನ್ ನಂಬರ್ ಕೊಡಬಹುದಾ? ಕನಿಷ್ಠ ಆಸ್ಪತ್ರೆಯ ವಿಳಾಸವಾದ್ರೂ...
ಸ್ಸಾರಿ ಮೇಡಮ್. ಆ ಫೋಟೋ ನಮ್ಮ ಛಾಯಾಗ್ರಾಹಕನದ್ದಲ್ಲ. ಪಿ.ಟಿ.ಐ., ಯು.ಎನ್.ಐ. ಮುಖಾಂತರ ಸಿಕ್ಕಿದ್ದು.
ಕ್ಷಣ ಕಾಲ ಮೌನ
ಅಲ್ಲಿರುವ ಬೇರೆ ಯಾರದ್ದಾದರೂ ಫೋನ್ ನಂಬರ್, ಇನ್ನೇನಾದ್ರೂ ಸಿಗಬಹುದಾ?
ಮಧ್ಯಾಹ್ನದ ಬಳಿಕ ನ್ಯೂಸ್ ಎಡಿಟರ್ ಬರ್ತಾರೆ. 4 ಗಂಟೆಗೆಲ್ಲ ಅವರು ಕೆಲಸ ಪ್ರಾರಂಭಿಸುತ್ತಾರೆ. ಆ ಮಗುವಿನ ಬಗ್ಗೆ, ಆ ಫೋಟೋದ ಕುರಿತಂತೆ ಅವರು ಹೆಚ್ಚಿನ ಮಾಹಿತಿ ಕೊಡಬಹುದು. ಮತ್ತೆ ಕರೆ ಮಾಡಿ, ಓ.ಕೆ.
..10 ವರ್ಷಗಳ ಹಿಂದಿನ ಘಟನೆಯೊಂದನ್ನು ಪತ್ರಕರ್ತ ಸವ್ವಾದ್ ರಹ್ಮಾನ್ ಮೆಲುಕು ಹಾಕುತ್ತಾ ಹೋಗುತ್ತಾರೆ..
ಪತ್ರಿಕಾ ಕಚೇರಿಗಳೆಂದರೆ ಹಾಗೆಯೇ. ಸಾವನ್ನೂ ಬದುಕನ್ನೂ ಸುದ್ದಿ ಅನ್ನುವ ಅರ್ಥಕ್ಕೆ ಇಳಿಸಬಯಸುತ್ತಿರುವ ಸವ್ವಾದ್ ರಂಥ ಅಸಂಖ್ಯ ಮಂದಿಯ ತಾಣ ಅದು. ಸಾಮಾನ್ಯ ವ್ಯಕ್ತಿಯಾಗಿದ್ದವ ಪತ್ರಕರ್ತನಾಗಿ ಬದಲಾದಾಗ, ಕೆಲವು ಬದಲಾವಣೆಗಳಿಗೆ ಆತ ಒಗ್ಗಿಕೊಳ್ಳಬೇಕಾಗುತ್ತದೆ. ಸಾವು, ಅಪಘಾತಗಳೆಲ್ಲ ನಿನ್ನೆಯ ವರೆಗೆ ಮನಸ್ಸನ್ನು ಗಾಢವಾಗಿ ತಟ್ಟಿದ, ನಡುಗಿಸಿದ ಘಟನೆಗಳಾಗಿದ್ದರೆ, ಇವತ್ತಿನಿಂದ ಆತನ ಪಾಲಿಗೆ ಅದು ಬರೇ ಸುದ್ದಿಗಳಾಗಿರುತ್ತವೆ. ಒಂದು ದುರಂತದ ಸುದ್ದಿಯನ್ನು ಉತ್ತಮ ಸುದ್ದಿಯಾಗಿ ಹೇಗೆ ಪ್ರಸ್ತುತ ಪಡಿಸಬಹುದು ಎಂಬುದಾಗಿ ಆಲೋಚಿಸುವುದು ಪತ್ರಕರ್ತನ ಸ್ವಭಾವ. ದುರಂತ ಘಟನೆಯೊಂದು ನಡೆದರೆ, ‘ಒಳ್ಳೆಯ ಸುದ್ದಿ ಸಿಕ್ಕಿದೆ, ಮುಖಪುಟದಲ್ಲಿ ಹಾಕುವ’ ಅಂಥ ನ್ಯೂಸ್ ರೂಮಲ್ಲಿ ಹೇಳಿಕೊಳ್ಳುವುದಿದೆ. ಸಾವಲ್ಲೂ, ದುರಂತದಲ್ಲೂ ರೋಚಕತೆಯನ್ನು ಹುಡುಕುವ, ಓದುಗರಿಗೆ ರಸವತ್ತಾಗಿಸಿ ಮುಟ್ಟಿಸಲು ಆತುರ ಪಡುವ ವಿಚಿತ್ರ ಸಮೂಹ ಪತ್ರಕತ್ರರದ್ದು..
2001 ಜನವರಿ 26ರಂದು ಗುಜರಾತ್ನಲ್ಲಿ ಭೂಕಂಪ ಸಂಭವಿಸುತ್ತದೆ. ಮರು ದಿನ ಪತ್ರಿಕಾ ಕಚೇರಿಗೆ ಹೋದಾಗ ಸವ್ವಾದ್ರನ್ನು ಪಿ.ಟಿ.ಐ., ಯು.ಎನ್.ಐ.ಯ ಫೋಟೋಗಳು, ವರದಿಗಳು ಸ್ವಾಗತಿಸುತ್ತವೆ. ಸವ್ವಾದ್ ಕೇರಳೀಯ. ಗುಡ್ಡೆಯಂತೆ ಬಿದ್ದುಕೊಂಡಿದ್ದ ವರದಿಗಳನ್ನು ಮಲೆಯಾಳಮ್ ಭಾಷೆಗೆ ತಜ್ರುಮೆ ಮಾಡುತ್ತಿದ್ದ ಉಪಸಂಪಾದಕರ ಜೊತೆ ಅವರು ಸೇರಿಕೊಳ್ಳುತ್ತಾರೆ. ಮಾನವೀಯ ಸಂದೇಶವುಳ್ಳ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಸಂಪಾದಕರು ಆದೇಶಿಸಿರುವುದರಿಂದ ಅಂಥ ಸುದ್ದಿಗಳನ್ನು ಹೆಕ್ಕಿ, ಬಾಕ್ಸ್ ಐಟಂ ಆಗಿ ಕೊಡುವಲ್ಲಿ ಎಲ್ಲರೂ ಬ್ಯುಸಿಯಾಗಿರುತ್ತಾರೆ. ಇದರ ಮಧ್ಯೆಯೇ ಆ ಮಗುವಿನ ಫೋಟೋವನ್ನು ಸುದ್ದಿ ಸಂಪಾದಕರು ಸವ್ವಾದ್ ರ ಮುಂದೆ ಇಡುತ್ತಾರೆ. ಭುಜ್ ನ ದುರಂತ ಭೂಮಿಯಲ್ಲಿ 4 ದಿನಗಳ ಬಳಿಕ ರಕ್ಷಿಸಲ್ಪಟ್ಟ ಮಗು. ಹೆಸರು ಮುರ್ತಜಾ ಅಲಿ. ವಯಸ್ಸು 8 ತಿಂಗಳು. ತಂದೆ-ತಾಯಿ ಭೂಕಂಪದಲ್ಲಿ ಸಾವಿಗೀಡಾಗಿದ್ದು, ಈ ಸುದ್ದಿಯನ್ನು ಮುಖಪುಟದಲ್ಲಿ ಹಾಕಬಹುದು ಅನ್ನುತ್ತಾರೆ. ಈ ಸುದ್ದಿ ಪ್ರಕಟಗೊಂಡ ಮರುದಿನವೇ ಆರಂಭದಲ್ಲಿ ಹೇಳಿದ ಆ ಮಹಿಳೆ ಸವ್ವಾದ್ ರಿಗೆ ಕರೆ ಮಾಡಿದ್ದು.
ಮತ್ತೆ ಸರಿಯಾಗಿ 4 ಗಂಟೆಗೆ ಫೋನ್ ರಿಂಗಾಗುತ್ತದೆ. ಸವ್ವಾದ್ ಎತ್ತಿಕೊಳ್ಳುತ್ತಾರೆ.
ಸುದ್ದಿ ಸಂಪಾದಕರು 4 ಗಂಟೆಗೆ ಬರ್ತಾರೆ ಎಂದಲ್ಲದೆ ನೀವು ಹೇಳಿದ್ದು? ಮಗುವಿನ ಕುರಿತು ಹೆಚ್ಚಿನ ವಿವರಗಳೇನಾದರೂ ಸಿಕ್ಕಿತ್ತಾ.. ಮಗುವನ್ನು ಕಳಕೊಂಡ ತಾಯಿಯೋರ್ವಳ ದುಗುಡದಂತೆ ಮಾತ್ರ ಸವ್ವಾದ್ ರಿಗೆ ಕೇಳಿಸುತ್ತದೆ. ಅವರು ಕರೆಯನ್ನು ಸುದ್ದಿ ಸಂಪಾದಕರಿಗೆ ವರ್ಗಾಯಿಸುತ್ತಾರೆ . ಫೋನ್ ಇಟ್ಟ ಬಳಿಕ ಸುದ್ದಿ ಸಂಪಾದಕರು ಸವ್ವಾದ್ ರ ಬಳಿ ಬಂದು ಪ್ರಶ್ನಿಸುತ್ತಾರೆ,
ನಿಮಗೆ ಆ ಮಹಿಳೆಯ ಪರಿಚಯ ಇದೆಯಾ?
ಇಲ್ಲ
ಹೆಸರು ಗೊತ್ತಿದೆಯಾ?
ಇಲ್ಲ. ನಾನು ಕೇಳಿದ್ದೂ ಇಲ್ಲ. ಆಕೆ ಹೇಳಿದ್ದೂ ಇಲ್ಲ.
ನಾನು ಹೆಸರು ಕೇಳಿದೆ. ಆ ಮಗು ಸಿಗುವುದಾದರೆ ಮಾತ್ರ ಹೆಸರು ಹೇಳುವುದಾಗಿ ಹೇಳಿದ್ರು. ಮಗು ಇರುವ ಆಸ್ಪತ್ರೆಯ ಹೆಸರು ಹೇಳಿದರೆ ಅಲ್ಲಿಗೆ ಹೋಗಿ ಮಗುವನ್ನು ಅವರು ಪಡಕೊಳ್ಳುತ್ತಾರಂತೆ. ಇಂಥ ಮನುಷ್ಯರೂ ಇದ್ದಾರಾ ಅನ್ನುವ ಭಾವದಲ್ಲಿ ಸುದ್ದಿ ಸಂಪಾದಕರು ಅಲ್ಲಿಂದ ಹೊರಟು ಹೋಗುತ್ತಾರೆ. ಈ ಕಾರಣದಿಂದಲೋ ಏನೋ ಆ ಮಗುವಿನ ಕುರಿತಂತೆ ಒಂದು ಬಗೆಯ ಕುತೂಹಲ ನ್ಯೂಸ್ ರೂಮ್ ಇಡೀ ತುಂಬಿಕೊಳ್ಳುತ್ತದೆ. ಭುಜ್ ನಲ್ಲಿರುವ ಮುಂಬೈ ವರದಿಗಾರರೋರ್ವರನ್ನು ಸಂಪರ್ಕಿಸಿದಾಗ ಮಗುವನ್ನು ಮುಂಬೈಯ ಲೀಲಾವತಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಸುದ್ದಿ ಸಿಗುತ್ತದೆ. ದಿನಾ ಒಂದಕ್ಕಿಂತ ಹೆಚ್ಚು ಬಾರಿ ಆ ಮಹಿಳೆ ಕರೆ ಮಾಡುವುದೂ ಸಿಕ್ಕ ಸುದ್ದಿಯನ್ನು ಅವರಿಗೂ ವರ್ಗಾಯಿಸುವುದೂ ನಡೆಯುತ್ತದೆ. ಈ ಮಧ್ಯೆ ಆ ಮಹಿಳೆಗೆ ಮಕ್ಕಳಿಲ್ಲದೆ ಇರುವುದರಿಂದ ಆ ಮಗುವಿನ ಬಗ್ಗೆ ವ್ಯಾವೋಹ ಹುಟ್ಟಿರಬಹುದು ಅನ್ನುವ ಅನುಮಾನವನ್ನು ಸವ್ವಾದ್ ನ ಮಿತ್ರನೋರ್ವ ವ್ಯಕ್ತಪಡಿಸುತ್ತಾನೆ. ಹಾಗೆ ಆಕೆಯಲ್ಲಿ ಕೇಳಿಯೂ ಬಿಡುತ್ತಾನೆ..
‘ನನಗೆ ಧಾರಾಳ ಮಕ್ಕಳಿದ್ದಾರೆ. ಅವರನ್ನು ಹೇಗೆ ಪ್ರೀತಿಸುತ್ತೇನೋ ಹಾಗೆಯೇ ಈತನನ್ನೂ ಪ್ರೀತಿಸುವೆ. ಅವರಿಗೆ ಏನನ್ನು ಕೊಡುತ್ತೇನೋ ಅದರಲ್ಲಿ ಒಂದು ಅಣುವಿನಷ್ಟೂ ಕಡಿಮೆ ಮಾಡದೆ ಈ ಮಗುವಿಗೂ ಕೊಡುವೆ’ ಅಂತ ಆ ಮಹಿಳೆ ಅಂದಾಗ ಸವ್ವಾದ್ ನ ಮಿತ್ರ ಮೌನವಾಗುತ್ತಾನೆ. ಆದರೆ ಆ ತಾಯಿಯ ಆಸೆ ಕೊನೆಗೂ ಈಡೇರುವುದಿಲ್ಲ. ಬಂಧುಗಳಲ್ಲಿ ಯಾರೋ ಒಬ್ಬರು ಆ ಮಗುವಿನ ಜವಾಬ್ದಾರಿಯನ್ನು ವಹಿಸಿ ಕೊಂಡಿರುವುದಾಗಿ ಸಿಕ್ಕ ಸುದ್ದಿಯನ್ನು ಮಹಿಳೆಗೆ ತಿಳಿಸಿದಾಗ ಒಮ್ಮೆ ಅವರು ಮೌನವಾಗುತ್ತಾರೆ. ‘ಅಲ್ಲಾಹ್ ಆ ಮಗುವನ್ನು ಚೆನ್ನಾಗಿಟ್ಟಿರಲಿ’ ಅನ್ನುತ್ತಾ ಕರೆ ಸ್ಥಗಿತಗೊಳಿಸುತ್ತಾರೆ. ಪತ್ರಿಕಾ ಕಚೇರಿಯನ್ನು ಒಂದು ಬಗೆಯ ಉಲ್ಲಾಸಕ್ಕೆ, ಕುತೂಹಲಕ್ಕೆ ಒಳಪಡಿಸಿದ್ದ ಆ ಮಗು ಮತ್ತು ಆ ತಾಯಿಯು, ‘ಇನ್ನು ಮುಗಿದ ಅಧ್ಯಾಯ’ ಅನ್ನುವುದು ಸವ್ವಾದ್ರಂತೆಯೇ ಅವರ ಮಿತ್ರರನ್ನೂ ವಿಷಣ್ಣಗೊಳಿಸುತ್ತದೆ. ಆದರೆ ಸವ್ವಾದ್ ಅಲ್ಲಿಗೇ ನಿಲ್ಲಿಸುವುದಿಲ್ಲ.
2011 ಡಿಸೆಂಬರ್
ಸುಮಾರು 11 ವಷ್ರಗಳ ಬಳಿಕ ಮುರ್ತಜಾ ಅಲಿಯನ್ನು ತಲೆ ತುಂಬಾ ತುಂಬಿಕೊಂಡು ಸವ್ವಾದ್ ಭುಜ್ ಗೆ ಹೊರಡುತ್ತಾರೆ. 50 ರೂ. ಗೊತ್ತುಪಡಿಸಿ ಆಟೋ ಏರುತ್ತಾರೆ. ಮುರ್ತಜಾ ಎಲ್ಲಿದ್ದಾನೆಂಬುದು ಸವ್ವಾದ್ ಗೆ ಗೊತ್ತಿಲ್ಲ. ಆತನ ಜವಾಬ್ದಾರಿ ಹೊತ್ತುಕೊಂಡವರ ಪರಿಚಯವೂ ಇಲ್ಲ. ಸವ್ವಾದ್ ಆಟೋದವನೊಂದಿಗೆ ಮಾತಿಗಿಳಿಯುತ್ತಾರೆ.
ನಾನು ಮಗುವನ್ನು ಭೇಟಿಯಾಗಲು ಬಂದದ್ದು
ಎಲ್ಲಿದೆ ಮಗು?
ಗೊತ್ತಿಲ್ಲ.. ಮುರ್ತಝಾ ಅಲಿ ಅಂತ ಹೆಸರು.
ಅವನ ತಂದೆಯ ಕೆಲಸ ಏನು?
ಅಪ್ಪ-ಅಮ್ಮ ಭೂಕಂಪದಲ್ಲಿ ತೀರಿ ಹೋಗಿದ್ದಾರೆ.
ಓ ಅಲ್ಲಿ ಲಕ್ಕಿ ಅಲಿ. ಹಾಗೆ ಹೇಳಬೇಡವೇ? ಮುರ್ತಝಾ ಎಂಬುದು ನನಗೆ ಗೊತ್ತಿಲ್ಲ. ಹಾಗಾ ಅವನ ಹೆಸರು?
ಆಟೋದವ ಭಾರೀ ಉತ್ಸಾಹದಿಂದ ಮದೀನಾ ಮಸೀದಿಯ ಪಕ್ಕ ಆಟೋ ನಿಲ್ಲಿಸಿ, ಒಂದು ಅಂಗಡಿ ತೋರಿಸುತ್ತಾನೆ. ಓಜಲಾನಿ ಸಾಬ್ರ ಅಂಗಡಿ. ಅಲಿ ಅಲ್ಲಿದ್ದಾನೆ ಅನ್ನುತ್ತಾ ಸವ್ವಾದ್ ಕೊಟ್ಟ 500 ರೂ.ವನ್ನು ಚಿಲ್ಲರೆ ಮಾಡಿಕೊಂಡು ಬರುತ್ತೇನೆಂದು ಹೋಗುತ್ತಾನೆ. ಸವ್ವಾದ್ಗೆ ಅನುಮಾನ ಪ್ರಾರಂಭವಾಗುತ್ತದೆ. 50 ರೂಪಾಯಿಗಾಗಿ 450 ರೂಪಾಯಿ ಕಳಕೊಂಡೆನೇನೋ ಅಂತ ಯೋಚಿಸುತ್ತಿರುವಾಗಲೇ ಮರಳಿ ಬಂದು ಆತ 470 ರೂ. ಕೊಡುತ್ತಾನೆ. ಸವ್ವಾದ್ ಗೆ ಅಚ್ಚರಿಯಾಗುತ್ತದೆ.
ನೀನು 50 ರೂ. ಬಾಡಿಗೆ ಎಂದು ಹೇಳಿದ್ದಲ್ಲವೇ?
ಹೌದು, ಆದರೆ ಇಲ್ಲಿಗೆ ಇರುವ ನಿಜವಾದ ಚಾಜ್ರು ರೂ. 30. ಹೊರಗಿನಿಂದ ಬಂದವರಿಗೆ ನಾವು ರೂ. 50 ಚಾಜ್ರು ಹಾಕುತ್ತೇವೆ. ಆದರೆ ನಮ್ಮ ಲಕ್ಕಿ ಅಲಿಯನ್ನು ನೋಡಲು ಬಂದ ನಿಮ್ಮಿಂದ ಚಾರ್ಜು ಪಡಕೊಳ್ಳುವುದೇ ಸರಿಯಲ್ಲ.. ಆತ ಕಣ್ಣರಳಿಸಿ ಹೇಳಿದಾಗ ಸವ್ವಾದ್ ಗೆ ತನ್ನ ಬಗ್ಗೆಯೇ ಅಸಹ್ಯವಾಗುತ್ತದೆ.
ಭೂಕಂಪದ 4ನೇ ದಿನ ಬೊಹ್ರಾ ಮುಸ್ಲಿಮರ ನಾಯಕ ಡಾ| ಸೈಯದ್ ಮುಹಮ್ಮದ್ ಬುಹ್ರಾನುದ್ದೀನ್ ರ ನಿರ್ದೇಶನದಂತೆ ಭುಜ್ನಲ್ಲಾದ ನಷ್ಟದ ಅಂದಾಜು ಮಾಡಲು ಬಂದವರಿಗೆ, ಕಟ್ಟಡಗಳ ಸಂದಿನಿಂದ ಮಗು ಅಳುವ ದನಿ ಕೇಳಿಸುತ್ತದೆ. ತಕ್ಷಣ ಸುದ್ದಿಯನ್ನು ಅಲ್ಲೇ ಇದ್ದ ಬಿ.ಎಸ್.ಎಫ್. ಯೋಧ ದಿವಾಕರ್ ಗೆ ತಿಳಿಸಿದಾಗ ಸೇನೆ ಕಾರ್ಯಾಚರಣೆಯಲ್ಲಿ ತೊಡಗುತ್ತದೆ. ಆಗ ಮೃತ ತಾಯಿಯ ಎದೆಯಲ್ಲಿ ಬೆರಳು ಚೀಪುತ್ತಾ ಅಳುತ್ತಿರುವ ಮಗು ಕಾಣಿಸುತ್ತದೆ. ಮಗುವಿನ ತಾಯಿ ಝೈನಬ್, ತಂದೆ ಮುಫದ್ದಲ್ ಸಹಿತ ಕುಟುಂಬದ 7 ಮಂದಿ ಭೂಕಂಪದಲ್ಲಿ ಸಾವಿಗೀಡಾಗಿದ್ದರೂ 102 ಗಂಟೆಗಳ ಬಳಿಕವೂ ಮಗು ಬದುಕುಳಿದದ್ದನ್ನು ಓಜಲಾನಿ ವಿವರಿಸುತ್ತಿರುವಾಗ ಅಲಿ, ಅಂಗಡಿಯ ಕ್ಯಾಶ್ ಟೇಬಲ್ನಲ್ಲಿ ಕೂತು ಆಡುತ್ತಿದ್ದ. ಮುಂಬೈಯ ಲೀಲಾವತಿ ಆಸ್ಪತ್ರೆಯಲ್ಲಿ ದಾದಿಯೋರ್ವರು ಲಕ್ಕಿ ಅಲಿ ಅಂತ ಆತನಿಗೆ ಹೆಸರಿಟ್ಟಿದ್ದಂತೆ. ಸವ್ವಾದ್ ಕ್ಯಾಮರಾ ತಿರುಗಿಸಿದ. ಅಲಿ ನಕ್ಕ..
ಸವ್ವಾದ್ ಲೇಖನಿ ಕೆಳಗಿಟ್ಟರೂ ನನ್ನ ಮನಸು ಮಾತ್ರ ಆ ಗುಂಗಿನಿಂದ ಹೊರಬರಲಿಲ್ಲ..
ಭೂಮಿ ನಡುಗುತ್ತಿದ್ದರೂ ತನ್ನ 8 ತಿಂಗಳ ಪುಟ್ಟ ಕಂದನನ್ನು ಎದೆಗೆ ಅಪ್ಪಿ ಹಿಡಿದು ಏನೂ ಆಗದಂತೆ ರಕ್ಷಿಸಿದ, ಮರಣದ ದೇವಚರನ ಕಾಲ ಸಪ್ಪಳ ಕೇಳುವ ಹೊತ್ತಲೂ ಕಂದನಿಗೆ ಎದೆಹಾಲು ಉಣಿಸಲು ಮುಂದಾದ ಆ ತಾಯಿ ಹಾಗೂ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗೆ ಕೊಟ್ಟದ್ದಕ್ಕಿಂತ ಒಂದು ಅಣುವಿನಷ್ಟೂ ಕಡಿಮೆಗೊಳಿಸದೆ ತನ್ನ ಮಗುವಾಗಿ ಆ ಮಗುವನ್ನು ಬೆಳೆಸುವೆನೆಂದು ಮಾತುಕೊಟ್ಟ ಮತ್ತು ಎಲ್ಲಿದ್ದರೂ ಆ ಮಗು ಸುಖವಾಗಿರಲಿ ಎಂದು ಪ್ರಾರ್ಥಿಸಿದ ಆ ಅಜ್ಞಾತ ತಾಯಿ..
ಕಣ್ಣು ಮಂಜಾಗುತ್ತದೆ, ತಾಯಿಯನ್ನು ಅಪ್ಪಿಕೊಳ್ಳಬೇಕೆನಿಸುತ್ತದೆ..

No comments:

Post a Comment