Friday, December 29, 2023

ಗೆಲ್ಲಲು ಕಾಂಗ್ರೆಸ್ ಏನೇನು ಮಾಡಬಹುದು?





1. ಮೃದು ಹಿಂದುತ್ವ
2. ಗ್ಯಾರಂಟಿಗಳ ಮೇಲೆ ಅತಿಯಾದ ಅವಲಂಬನೆ
3. ಮೈತ್ರಿ ಪಕ್ಷಗಳ ಕಡೆಗಣನೆ
4. ಆಕ್ರಮಣಕಾರಿ ಮನೋಭಾವದ ಕೊರತೆ
5. ಸೇವಾದಳದ ನಿರ್ಲಕ್ಷ್ಯ 

ಮಧ್ಯಪ್ರದೇಶ, ರಾಜಸ್ತಾನ ಚತ್ತೀಸ್‌ಗಢಗಳಲ್ಲಿ ಕಾಂಗ್ರೆಸ್ ಸೋಲಲು ಕಾರಣವೇನು ಅನ್ನುವ ವಿಶ್ಲೇಷಣೆಗಳು ನಡೆಯುತ್ತಿವೆ.  ತೆಲಂಗಾಣವೂ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಒಟ್ಟಾರೆ 4 ಕೋಟಿ 81 ಲಕ್ಷ   ಮತಗಳನ್ನು ಪಡೆದರೆ ಕಾಂಗ್ರೆಸ್ 4 ಕೋಟಿ 90  ಲಕ್ಷ  ಮತಗಳನ್ನು ಪಡೆದಿದೆ. ಒಂದುರೀತಿ ಯಲ್ಲಿ, 9 ಲಕ್ಷದಷ್ಟು ಹೆಚ್ಚುವರಿ ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸಮಾಧಾನ ಪಡಲಾಗುತ್ತಿದೆ. ಆದರೆ ಈ ಸಮಾಧಾನ ಪೂರ್ಣ ಪ್ರಾಮಾಣಿಕವಲ್ಲ. ಯಾಕೆಂದರೆ,  ತೆಲಂಗಾಣದಲ್ಲಿ ಸ್ಪರ್ಧೆಯಿದ್ದುದೇ ಕಾಂಗ್ರೆಸ್ ಮತ್ತು ಭಾರತ್ ರಾಷ್ಟ್ರ  ಸಮಿತಿ (ಬಿಆರ್‌ಎಸ್) ನಡುವೆ. ಆದ್ದರಿಂದ, ಅಲ್ಲಿ ಬಿಜೆಪಿ ಮತ್ತು  ಕಾಂಗ್ರೆಸ್ ನಡುವೆ ಚಲಾವಣೆಯಾದ ಮತಗಳನ್ನು ಉಳಿದ ಮೂರು ರಾಜ್ಯಗಳ ಜೊತೆಗೆ ಸೇರಿಸಿಕೊಂಡು ಲೆಕ್ಕ ಹಾಕುವುದು ತಪ್ಪಾಗುತ್ತದೆ.  ಆದರೂ ತೆಲಂಗಾಣದಲ್ಲಿ ಬಿಜೆಪಿ ಮಹತ್ವದ ಮುನ್ನಡೆಯನ್ನು ಪಡೆದಿದೆ. ಈ ಹಿಂದೆ ಏಕೈಕ ಶಾಸಕರನ್ನು ಹೊಂದಿದ್ದ ಬಿಜೆಪಿಯು ಈ  ಬಾರಿ 8 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಒಟ್ಟಾರೆ 14 ಲಕ್ಷ  ಮತಗಳನ್ನು  ಪಡೆದಿತ್ತು. ಈ ಬಾರಿ 32 ಲಕ್ಷ  ಮತಗಳನ್ನು ಪಡೆದಿದೆ. ಮಾತ್ರವಲ್ಲ, ಸುಮಾರು 15ಕ್ಕಿಂತಲೂ ಅಧಿಕ ಕ್ಷೇತ್ರಗಳಲ್ಲಿ ಎರಡನೇ ಸ್ಥಾನ  ಪಡೆದುಕೊಂಡಿದೆ. ಆದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮತ ಹಂಚಿಕೆಯನ್ನು ಮಧ್ಯಪ್ರದೇಶ, ರಾಜಸ್ತಾನ ಮತ್ತು  ಛತ್ತೀಸ್‌ಗಢಗಳಿಗೆ ಸೀಮಿತಗೊಳಿಸಿ ನೋಡುವುದೇ ಸರಿಯಾದ ವಿಧಾನ. ಈ ಹಿನ್ನೆಲೆಯಲ್ಲಿ ಲೆಕ್ಕ ಹಾಕಿದರೆ, 

ಈ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ 3 ಕೋಟಿ 98  ಲಕ್ಷ ಕ್ಕಿಂತಲೂ ಅಧಿಕ ಮತಗಳನ್ನು ಪಡೆದಿದೆ. ಬಿಜೆಪಿ ಪಡೆದಿರುವ ಮತಗಳು 4 ಕೋಟಿ 48 ಲಕ್ಷಕ್ಕಿಂತಲೂ ಅಧಿಕ. ಅಂದರೆ,  ಕಾಂಗ್ರೆಸ್‌ಗಿAತ ಬಿಜೆಪಿ ಸುಮಾರು 50 ಲಕ್ಷಕ್ಕಿಂತಲೂ ಅಧಿಕ ಮತಗಳನ್ನು ಪಡೆದಿದೆ. 2018ರ ಚುನಾವಣೆಯಲ್ಲಿ ಈ ಮೂರೂ  ರಾಜ್ಯಗಳಲ್ಲಿ ಕಾಂಗ್ರೆಸ್ 3 ಕೋಟಿ 57 ಲಕ್ಷಕ್ಕಿಂತಲೂ ಅಧಿಕ ಮತಗಳನ್ನು ಪಡೆದಿತ್ತು ಮತ್ತು ಬಿಜೆಪಿ 3 ಕೋಟಿ 41 ಲಕ್ಷಕ್ಕಿಂತಲೂ ಅಧಿಕ  ಮತಗಳನ್ನು ಪಡೆದಿತ್ತು. ಅಂದರೆ ಬಿಜೆಪಿಗಿಂತ ಕಾಂಗ್ರೆಸ್ 16 ಲಕ್ಷಕ್ಕಿಂತಲೂ ಅಧಿಕ ಹೆಚ್ಚು ಮತಗಳನ್ನು ಪಡೆದಿತ್ತು.

ಇನ್ನೂ ಒಂದು ಲೆಕ್ಕಾಚಾರ ಇದೆ

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಮಧ್ಯ ಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ತಾನಗಳಲ್ಲಿ ಅಧಿಕಾರ ಕಳ ಕೊಂಡಿತ್ತು.  ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆ ಬಳಿಕ ಮಧ್ಯ ಪ್ರದೇಶದಲ್ಲಿ ಆಪರೇಶನ್ ಕಮಲ ನಡೆದು, ಕಮಲನಾಥ್ ನೇತೃತ್ವದ ಕಾಂಗ್ರೆಸ್  ಸರಕಾರ ಕುಸಿದು ಬಿದ್ದುದು ಬೇರೆ ವಿಷಯ. ಆದರೆ, 2019ರ ಲೋಕಸಭಾ ಚುನಾವಣೆಯ ವೇಳೆ ಸಂಪೂರ್ಣ ಚಿತ್ರಣವೇ  ಬದಲಾಯಿತು. ಮಧ್ಯಪ್ರದೇಶದ 28 ಲೋಕಸಭಾ ಸ್ಥಾನಗಳ ಪೈಕಿ 27 ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡಿತು. ರಾಜಸ್ತಾನದ 25 ಸ್ಥಾನಗಳನ್ನೂ ಬಿಜೆಪಿಯೇ ಗೆದ್ದುಕೊಂಡಿತು. ಛತ್ತೀಸ್‌ಗಢದ ಪರಿಸ್ಥಿತಿಯೂ ಭಿನ್ನವಲ್ಲ. ಒಟ್ಟು 11 ಸ್ಥಾನಗಳ ಪೈಕಿ ಬಿಜೆಪಿ 9ನ್ನೂ  ಗೆದ್ದುಕೊಂಡಿತು.

ಇನ್ನೂ ಒಂದು ಅಂಕಿ ಅಂಶವನ್ನು ಇಲ್ಲಿ ಪರಿಗಣಿಸಬಹುದು.

2013ರಲ್ಲಿ ಈ ಮೂರೂ ರಾಜ್ಯಗಳಲ್ಲಿ ನಡೆದ ಚುನಾವಣೆಯನ್ನು ಬಿಜೆಪಿಯೇ ಗೆದ್ದುಕೊಂಡಿತ್ತು. ಮಾತ್ರವಲ್ಲ, 2014ರ ಲೋಕಸಭಾ ಚು ನಾವಣೆಯಲ್ಲೂ ಬಿಜೆಪಿಗೆ ಗೆಲುವಾಯಿತು. ಹಾಗೆಯೇ 2003ರಲ್ಲಿ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿಗೇ ಅಭೂತಪೂರ್ವ ಗೆಲುವು  ಲಭ್ಯವಾಗಿತ್ತು. ಇದೇ ಉತ್ಸಾಹದಲ್ಲಿ ಆಗಿನ ಪ್ರಧಾನಿ ವಾಜಪೇಯಿಯವರು ಇಂಡಿಯಾ ಶೈನಿಂಗ್ ಎಂಬ ಘೋಷಣೆ ಯನ್ನು  ಹೊರಡಿಸಿದ್ದರು. ಅದರ ಮೇಲೆಯೇ 2004ರಲ್ಲಿ ಲೋಕಸಭಾ ಚುನಾವಣೆಯನ್ನೂ ಎದುರಿಸಿದರು ಮತ್ತು ಆಘಾತಕಾರಿ ಸೋಲನ್ನೂ  ಅನುಭವಿಸಿದರು.

ನಿಜವಾಗಿ, ಬಿಜೆಪಿಯ ಮತ ಗಳಿಕೆಯ ಹೆಚ್ಚಳದಲ್ಲಿ ಇತರ ಸಣ್ಣ-ಪುಟ್ಟ ಪಕ್ಷಗಳ ಪಾಲು ಅಧಿಕವಿದೆ ಎಂದು ಹೇಳಲಾಗುತ್ತಿದೆ.  ಮಾಯಾವತಿಯ ಬಿಎಸ್‌ಪಿಯು ಮಧ್ಯಪ್ರದೇಶದಲ್ಲಿ ಕಳೆದ ಬಾರಿಗಿಂತ ಈ ಬಾರಿ 1.6% ಮತಗಳನ್ನು ಕಳಕೊಂಡಿದೆ. ಹಾಗೆಯೇ  ರಾಜಸ್ತಾನದಲ್ಲಿ 2.3%, ಛತ್ತೀಸ್‌ಗಢದಲ್ಲಿ 1.8% ಮತ್ತು ತೆಲಂಗಾಣದಲ್ಲಿ 0.7% ಮತಗಳನ್ನು ಕಳಕೊಂಡಿದೆ. ಹಾಗೆಯೇ, 2018ರಲ್ಲಿ ಜನತಾ  ಕಾಂಗ್ರೆಸ್ ಛತ್ತೀಸ್‌ಗಢ ಎಂಬ ಪಕ್ಷವು ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡು 7.6% ಮತ ಪ್ರಮಾಣದೊಂದಿಗೆ 5 ಸ್ಥಾನಗಳನ್ನು  ಪಡೆದುಕೊಂಡಿತ್ತು. ಆದರೆ ಈ ಬಾರಿ ಸೊನ್ನೆ ಸುತ್ತಿದೆ. ಇದೇ ರೀತಿ, ಈ ನಾಲ್ಕು ರಾಜ್ಯಗಳಲ್ಲಿ ಸ್ಪರ್ಧಿಸಿರುವ ಇತರ ಪಕ್ಷಗಳು ಮತ್ತು  ಪಕ್ಷೇತರರ ಶೇಕಡಾವಾರು ಮತಗಳೂ ಕುಸಿದಿದ್ದು, ಇವೆಲ್ಲ ವನ್ನೂ ಬಿಜೆಪಿ ಸೆಳೆದುಕೊಂಡಿದೆ ಎಂದು ಲೆಕ್ಕಾಚಾರ ಹೇಳುತ್ತಿದೆ.

ಅಷ್ಟಕ್ಕೂ,

ಕಾಂಗ್ರೆಸ್‌ನ ಈ ವೈಫಲ್ಯಕ್ಕೆ ಕಾರಣವೇನು? ಮೃದು ಹಿಂದುತ್ವವೇ? ಈ ಮೃದು ಹಿಂದುತ್ವ ಅಂದರೇನು? ರಾಹುಲ್ ಗಾಂಧಿ, ಪ್ರಿಯಾಂಕಾ  ಗಾಂಧಿ ದೇವಸ್ಥಾನಕ್ಕೆ ಹೋಗುವುದು ಅಥವಾ ದೇವಸ್ಥಾನದಿಂದಲೇ ಚುನಾವಣಾ ಪ್ರಚಾರ ಆರಂಭಿಸುವುದು ಮೃದು ಹಿಂದುತ್ವವೇ?  ಹಣೆಗೆ ನಾಮ ಹಾಕಿಕೊಳ್ಳುವುದು ಅಥವಾ ತಾನು ಶಿವನ ಆರಾಧಕ ಎಂದು ಹೇಳುವುದು ಮೃದು ಹಿಂದುತ್ವವೇ? ಸನಾತನ ಧರ್ಮವನ್ನು  ಟೀಕಿಸಿದ ಡಿಎಂಕೆ ಜೊತೆ ಅಸಹಮತವನ್ನು ತೋರುವುದು ಮೃದು ಹಿಂದುತ್ವವೇ? ಛತ್ತೀಸ್ ಗಢದ ಚಂಪಾರಣ್‌ನಲ್ಲಿ ಕಾಂಗ್ರೆಸ್  ಮುಖ್ಯಮಂತ್ರಿ ಬಘೇಲ್ ಅವರು ರಾಮನ ಬೃಹತ್ ಪ್ರತಿಮೆಯನ್ನು ಚುನಾವಣೆಗಿಂತ ಮೊದಲು ಅನಾವರಣಗೊಳಿಸಿದರು. ರಾಮ ವ ನವಾಸಕ್ಕೆಂದು ನಡೆದು ಹೋದ ಮಾರ್ಗವನ್ನು ‘ರಾಮ ವನ ಗಮನ ಪಥ’ ಎಂಬ ಹೆಸರಿನ ಯೋಜನೆಯೊಂದಿಗೆ ಜಾರಿಗೆ ತಂದರು.  ಇದನ್ನು ಮೃದು ಹಿಂದುತ್ವವೆಂದು  ಟೀಕಿಸಲಾಗುತ್ತದೆ. ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಧಾರ್ಮಿಕವಾಗಿ ಗುರುತಿಸಿಕೊಳ್ಳುವುದನ್ನು, ಕೇಸರಿ  ರುಮಾಲು ಹಾಕುವುದನ್ನು ಮೃದು ಹಿಂದುತ್ವ ಎಂದು ಕರೆಯ ಲಾಗುತ್ತಿದ್ದು, ಇದರಿಂದಾಗಿ ಕಾಂಗ್ರೆಸ್ ಚುನಾವಣೆಯಲ್ಲಿ ನೆಲ ಕಚ್ಚುತ್ತಿದೆ  ಎಂದು ವ್ಯಾಖ್ಯಾನಿಸಲಾಗುತ್ತಿದೆ. ನಿಜಕ್ಕೂ ಇದು ಎಷ್ಟು ತರ್ಕಬದ್ಧ? ಕಾಂಗ್ರೆಸ್ ನಾಯಕರು ಧಾರ್ಮಿಕವಾಗಿ ಗುರುತಿಸಿಕೊಳ್ಳು ವುದರಿಂದ  ವಿಚಲಿತರಾಗಿ ಬಿಜೆಪಿಗೆ ಮತ ಹಾಕುತ್ತಿರುವ ಕಾಂಗ್ರೆಸ್ ಮತದಾರರು ಯಾರು? ಅವರು ಈ ವರೆಗೆ ಬಿಜೆಪಿಗೆ ಮತ ಹಾಕದೇ  ಇರುವುದಕ್ಕೆ ಈ ಒಂದು ವ್ಯತ್ಯಾಸ ಮಾತ್ರ ಕಾರಣವೇ? ಹಿಂದೂ ಧರ್ಮವನ್ನು ಬಿಜೆಪಿ ಪ್ರತಿಪಾದಿಸುತ್ತಿರುವ ರೀತಿ ಮತ್ತು ಕಾಂಗ್ರೆಸ್ ಪ್ರತಿ ಪಾದಿಸುತ್ತಿರುವ ರೀತಿ ಹೇಗಿದೆ? ಸಮಾನವೇ? ಹಿಂದೂಯೇತರರನ್ನು ಮುಖ್ಯವಾಗಿ ಮುಸ್ಲಿಮರನ್ನು ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿ  ಹೇಗಿದೆ? ಕಾಂಗ್ರೆಸ್ ಹೇಗೆ ನಡೆಸಿಕೊಳ್ಳುತ್ತಿದೆ? ಚುನಾವಣಾ ಗೆಲುವಿಗಾಗಿ ಧಾರ್ಮಿಕ ಧ್ರುವೀಕರಣ ಮಾಡುವ ಬಿಜೆಪಿಗೂ ಧರ್ಮವನ್ನು  ಆಧ್ಯಾತ್ಮಿಕ ಸುಖದ ಭಾಗವಾಗಿ ನೋಡುವ ಕಾಂಗ್ರೆಸ್‌ಗೂ ವ್ಯತ್ಯಾಸ ಇಲ್ಲವೇ? ಈ ವರೆಗೆ ಕಾಂಗ್ರೆಸ್‌ಗೆ ಓಟು ಹಾಕುತ್ತಿದ್ದವರು ಈಗ  ಬಿಜೆಪಿಗೆ ಓಟು ಹಾಕುವುದಾದರೆ ಅದು ಕಾಂಗ್ರೆಸ್‌ನ ಮೃದು ಹಿಂದುತ್ವದಿಂದ ಬೇಸತ್ತೇ? ಕಾಂಗ್ರೆಸ್ ಅಲ್ಲದಿದ್ದರೆ ಇವರಿಗೆಲ್ಲ ಬಿಜೆಪಿ  ಪರ್ಯಾಯವಾದುದು ಹೇಗೆ? ಒಂದುರೀತಿಯಲ್ಲಿ,

ಮೃದು ಹಿಂದುತ್ವದಿಂದಾಗಿ ಕಾಂಗ್ರೆಸ್‌ಗೆ ಸೋಲಾಗುತ್ತಿದೆ ಎಂಬುದು ಒಂದು ಊಹೆಯೇ ಹೊರತು ಇದು ಬಹುತೇಕ ನಿಜವಲ್ಲ.  ಧರ್ಮವನ್ನು ಸಂಪೂರ್ಣ ನಿರಾಕರಿಸುವ ಧಾಟಿಯಲ್ಲಿ ಮಾತನಾಡಿದ ಕಮ್ಯುನಿಸ್ಟ್ ಪಕ್ಷಗಳು ಇವತ್ತು ಅಸ್ತಿತ್ವಕ್ಕಾಗಿ ಹೋರಾ ಡುತ್ತಿವೆ.  ಒಂದು ಕಾಲದಲ್ಲಿ ಪಶ್ಚಿಮ ಬಂಗಾಲದಂಥ  ದೊಡ್ಡ ರಾಜ್ಯವೂ ಸೇರಿ ತ್ರಿಪುರಾದಲ್ಲೂ ದೀರ್ಘಕಾಲ ಆಡಳಿತ ನಡೆಸಿದ್ದ ಮತ್ತು  ಲೋಕಸಭೆಯಲ್ಲಿ 50ಕ್ಕಿಂತಲೂ ಅಧಿಕ ಸ್ಥಾನಗಳನ್ನು ಪಡೆದಿದ್ದ ಕಮ್ಯುನಿಸ್ಟ್ ಪಕ್ಷಗಳು ಇವತ್ತು ಕೇರಳಕ್ಕೆ ಸೀಮಿತಗೊಳ್ಳಲು ಕಾರಣವೇನು?  ಧರ್ಮದಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳುವುದೇ ಅದರ ಯಶಸ್ಸಿಗೆ ಕಾರಣವಾಗಿದ್ದರೆ, ಮತ್ತೇಕೆ ಇವತ್ತು ಅದು ಈ ಮಟ್ಟದಲ್ಲಿ  ಪತನಮುಖಿಯಾಗಿದೆ? ನಿಜವಾಗಿ,

ಕಾಂಗ್ರೆಸ್‌ನ ವೈಫಲ್ಯಕ್ಕೆ ಅದು ಧಾರ್ಮಿಕವಾಗಿ ಗುರುತಿಸಿಕೊಂಡಿರುವುದು ಕಾರಣ ಅಲ್ಲ. ಅದರಿಂದಾಗಿ ಕಾಂಗ್ರೆಸ್ ಮತದಾರರು ದೂರ  ಸರಿದುದೂ ಅಲ್ಲ. ಬಿಜೆಪಿಯ ಯಶಸ್ಸಿನಲ್ಲಿ ಅದರ ಪ್ರಚಾರ ತಂತ್ರಕ್ಕೆ ಬಹಳ ದೊಡ್ಡ ಪಾತ್ರ ಇದೆ. ದ್ವೇಷ ರಾಜಕೀಯವನ್ನು ಅದು  ತಳಮಟ್ಟದಲ್ಲಿ ಯಶಸ್ವಿಯಾಗಿ ಬಿತ್ತಿದೆ. ಈ ದ್ವೇಷವು ಆಂತರಿಕವಾಗಿಯಷ್ಟೇ ಅಲ್ಲ, ಬಹಿರಂಗವಾಗಿಯೂ ಅದರ ನಾಯಕರಿಂದ  ಬಿತ್ತರವಾಗುತ್ತಿರುತ್ತದೆ. ಇದನ್ನು ಕಾಂಗ್ರೆಸ್ ಎದುರಿಸಬೇಕಾದರೆ ಬೇರುಮಟ್ಟದಲ್ಲಿ ಜನರನ್ನು ತಲುಪುವ ಪ್ರಬಲ ಸಂಘಟನಾ ಬಲ  ಇರಬೇಕು. ‘ಸೇವಾದಳ’ವನ್ನು ಕಾಂಗ್ರೆಸ್ ಸ್ಥಾಪಿಸಿರುವುದು ಇದೇ ಕಾರಣಕ್ಕೆ. ಇದು ಬಲಿಷ್ಠವಾಗಿರುವ ಕಾಲದ ವರೆಗೆ ಕಾಂಗ್ರೆಸ್ಸೂ ಬಲಿಷ್ಠವಾಗಿತ್ತು. ಸೇವಾದಳದ ನಾಯಕರು ವೇದಿಕೆಯಲ್ಲಿರುವಾಗ ಕಾಂಗ್ರೆಸ್ ಜನಪ್ರತಿನಿಧಿಗಳು ಸಭಿಕರಾಗಿ ಎದುರಲ್ಲಿ ಕುಳಿತುಕೊಳ್ಳಬೇಕಿತ್ತು.  ಸೇವಾದಳದ ನಿರ್ದೇಶಗಳನ್ನು ಜನಪ್ರತಿನಿಧಿಗಳು ಅನುಸರಿಸಬೇಕಿತ್ತು. ಸೇವಾದಳವು ಬೇರುಮಟ್ಟದಲ್ಲಿ ಜನರನ್ನು ಸಂಪರ್ಕಿಸಿ ಮತವನ್ನು  ಒಗ್ಗೂಡಿಸುತ್ತಿತ್ತು. ಈ ಸೇವಾದಳದಿಂದಲೇ ಕಾಂಗ್ರೆಸ್ ನಾಯಕರೂ ಬೆಳೆಯುತ್ತಿದ್ದರು. ಕಾರ್ಯಕರ್ತರು ತಯಾರಾಗುತ್ತಿದ್ದುದೇ ಈ  ಸೇವಾದಳದಿಂದ. ಆದರೆ ಇವತ್ತು ಸೇವಾದಳ ಪರಿಣಾಮಶೂನ್ಯ ಸ್ಥಿತಿಯಲ್ಲಿದೆ. ಸೇವಾದಳದ ಸಭೆಯಲ್ಲಿ ಸಭಿಕರಾಗಿ ಕಾಣಿಸಿಕೊಳ್ಳಬೇಕಿದ್ದ  ಜನ ಪ್ರತಿನಿಧಿ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ/ಳೆ. ಆತನ ಅಣತಿ ಯಂತೆ ಸಭೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಸಂಘಟ ನೆಯನ್ನು ಹೀಗೆ ಜನಪ್ರತಿನಿಧಿಗಳು ಹೈಜಾಕ್ ಮಾಡಿರುವ ಕಾರಣದಿಂದಾಗಿ ಸಂಘಟನೆಯ ಮಹತ್ವವೇ ಕಳೆದುಹೋಗಿದೆ. ಅದೇರೀತಿ,

ಗ್ಯಾರಂಟಿಗಳ ಮೇಲೆಯೇ ಅತಿಯಾದ ಭಾರ ಹಾಕಬಾರದು. ದಕ್ಷಿಣ ಭಾರತದಲ್ಲಿ ಒಂದೊಮ್ಮೆ ಈ ತತ್ವ ಫಲಿಸಬಹುದಾದರೂ ಹಿಂದಿ  ನಾಡಿನಲ್ಲಿ ದ್ವೇಷ ರಾಜಕೀಯದ ಪ್ರಭಾವವೇ ಮುಂಚೂಣಿಯಲ್ಲಿದೆ. ಯಾವುದೇ ಗ್ಯಾರಂಟಿಯನ್ನು ಕಾಲ ಕಸವಾಗಿಸುವಷ್ಟು ದ್ವೇಷವನ್ನು  ಪ್ರತಿದಿನವೆಂಬಂತೆ  ತುಂಬಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿಗಳ ಜೊತೆಗೇ ಈಗಾಗಲೇ ಇಂಡಿಯಾ ಕೂಟದಿಂದ ಹೊರಗಿರುವ  ಪಕ್ಷಗಳನ್ನು ಕೂಟದೊಳಗೆ ಸೇರಿಸುವ ಮತ್ತು ಈಗಿಂದೀಗಲೇ ಲೋಕಸಭಾ ಸೀಟು ಹಂಚಿಕೆಯ ಸ್ಪಷ್ಟ ನಿರ್ಧಾರ ವನ್ನು ಕೈಗೊಳ್ಳಬೇಕು.  ಬಿಎಸ್‌ಪಿಯಂಥ ಪಕ್ಷಕ್ಕೆ ಗೆಲ್ಲುವ ಸಾಮರ್ಥ್ಯ ಕಡಿಮೆಯಿದ್ದರೂ ಬಿಜೆಪಿಯನ್ನು ಗೆಲ್ಲಿಸುವ ಸಾಮರ್ಥ್ಯ ಹಿಂದಿ ನಾಡಿನಲ್ಲಿ ಸಾಕಷ್ಟಿದೆ  ಎಂಬುದು ಇಂಡಿಯಾ ಒಕ್ಕೂಟಕ್ಕೆ ಗೊತ್ತಿರಬೇಕು. ಈಗಿಂದೀಗಲೇ ಇಂಡಿಯಾ ಒಕ್ಕೂಟ ಸೀಟು ಹಂಚಿಕೆಯನ್ನು ಗಂಭೀರವಾಗಿ  ಪರಿಗಣಿಸಿ ಒಮ್ಮತಕ್ಕೆ ಬರದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಅಸಾಧ್ಯ. ಜೊತೆಗೇ, ಇಂಡಿಯಾ ಒಕ್ಕೂಟವು ಸಾಮಾನ್ಯ ಕನಿಷ್ಠ  ಕಾರ್ಯಕ್ರಮಕ್ಕೆ ತಕ್ಷಣ ರೂಪು ನೀಡಬೇಕು. ಹಾಗಂತ,

ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಕಾನೂನಿನ ಕಠಿಣ ಭಾಷೆಯಲ್ಲೇ  ಉತ್ತರವನ್ನು ನೀಡಬೇಕು. ಇಂಥ ಸಂದರ್ಭಗಳಲ್ಲಿ  ಆಕ್ರಮಣಕಾರಿಯಾಗಿ ವರ್ತಿಸುವುದೇ ಸರಿಯಾದ ವಿಧಾನ. ನ್ಯಾಯ ಮತ್ತು ಸಂವಿಧಾನಕ್ಕೆ ಬದ್ಧವಾಗುವ ವಿಷಯದಲ್ಲಿ  ಆಕ್ರಮಣಕಾರಿಯಾಗುವುದು ಈಗಿನ ಅನಿವಾರ್ಯತೆ. ಬರೇ ಅಭಿವೃದ್ಧಿಯೊಂದೇ ಬಿಜೆಪಿಗಾಗಲಿ ಕಾಂಗ್ರೆಸ್‌ಗಾಗಿ ಓಟು ತರಲಾರದು.  ಆದ್ದರಿಂದಲೇ, ಬಿಜೆಪಿ ಅಭಿವೃದ್ಧಿಗಿಂತ ಹೆಚ್ಚು ಗಮನವನ್ನು ಅಭಿವೃದ್ಧಿ ಹೊರತಾದ ಧರ್ಮ ಧ್ರುವೀಕರಣಕ್ಕೆ ನೀಡುತ್ತಿದೆ. ಅದರ ಜೊತೆಗೇ  ಗ್ಯಾರಂಟಿಗಳ ಮೊರೆಯೂ ಹೋಗಿದೆ. ಬರೇ ಧರ್ಮ ಧ್ರುವೀಕರಣವೊಂದೇ ಓಟು ತಂದು ಕೊಡಲಾರದು ಎಂಬ ಭಯ ಬಿಜೆಪಿಗಿದೆ  ಎಂಬುದನ್ನೇ ಇದು ಸೂಚಿಸುತ್ತದೆ. ಇದು ನಿಜಕ್ಕೂ ಕಾಂಗ್ರೆಸ್‌ನ ಪಾಲಿಗೆ ಬಹುದೊಡ್ಡ ಆಶಾವಾದ. ಧರ್ಮ ಧ್ರುವೀಕರಣದ ಮೇಲೆ ಸ್ವತಃ  ಬಿಜೆಪಿಗೇ ಸಂಪೂರ್ಣ ವಿಶ್ವಾಸ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಜನರು ಸದಾಕಾಲ ದ್ವೇಷ ರಾಜಕಾರಣವನ್ನು ಬೆಂಬಲಿಸಲ್ಲ.  ಇಂಥ ರಾಜಕಾರಣದ ವ್ಯಾಲಿಡಿಟಿ ಹೃಸ್ವವಾದುದು. ಅಂತಿಮ ಗೆಲುವು ಸರ್ವರನ್ನೂ ಒಳಗೊಳ್ಳುವ ಸರ್ವಹಿತ ಸಿದ್ಧಾಂತದ್ದೇ. ಒಕ್ಕೂಟ  ಪಕ್ಷಗಳನ್ನು ವಿಶ್ವಾಸಕ್ಕೆ ಪಡಕೊಂಡು ಕಾಂಗ್ರೆಸ್ ಈಗಿಂದೀಗಲೇ ಸ್ಪಷ್ಟ ಗುರಿಯೊಂದಿಗೆ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿದರೆ  ಗೆಲುವು ಅಸಾಧ್ಯವಲ್ಲ.

No comments:

Post a Comment