Thursday, December 14, 2023

ಅಲ್ಲಾಹನ ಹೆಸರಲ್ಲಿ ಇ ಮೇಲ್ ಮತ್ತು ಕಟಕಟೆಯಲ್ಲಿ ಮುಸ್ಲಿಮರು




1. ಹಿಂದೂವಿನಿಂದ  ಹಿಂದೂವಿನ ಮೇಲೆ ಹಲ್ಲೆ
2. ಮೇಲ್ಜಾತಿ ವ್ಯಕ್ತಿಯಿಂದ ದಲಿತನ ಮೇಲೆ ಹಲ್ಲೆ
3. ದಲಿತ ವ್ಯಕ್ತಿಯಿಂದ ಮೇಲ್ಜಾತಿ ವ್ಯಕ್ತಿಯ ಮೇಲೆ ಹಲ್ಲೆ
4. ಹಿಂದೂವಿನ ಮೇಲೆ ಮುಸ್ಲಿಮನಿಂದ ಹಲ್ಲೆ
5. ಹಿಂದೂವಿನಿAದ ಮುಸ್ಲಿಮನ ಮೇಲೆ ಹಲ್ಲೆ
6. ಮನುಷ್ಯನಿಂದ ಮನುಷ್ಯನ ಮೇಲೆ ಹಲ್ಲೆ 


ಈ 6 ಸುದ್ದಿಗಳ ಪೈಕಿ ಜನರ ಗಮನವನ್ನೇ ಸೆಳೆಯದ, ಇತರರೊಂದಿಗೆ ಹಂಚಿಕೊಳ್ಳದ ಮತ್ತು ನಿರ್ಲಕ್ಷಿಸಿ ಮುಂದೆ ಹೋಗಬಹುದಾದ  ಸುದ್ದಿ ಯಾವುದಾಗಿರಬಹುದು? ಉತ್ತರ ಕಷ್ಟವೇನೂ ಅಲ್ಲ- 1 ಮತ್ತು 6. ಇನ್ನು, ಅತ್ಯಂತ ಹೆಚ್ಚು ಗಮನ ಸೆಳೆಯುವ, ಟಿ.ವಿ.  ಸಂವಾದಗಳಿಗೆ ಕಾರಣವಾಗುವ, ಸಾರ್ವಜನಿಕ ಪ್ರತಿಭಟನೆ, ರ‍್ಯಾಲಿ, ಲಾಠಿ ಚಾರ್ಜು-ಕರ್ಫ್ಯೂ, ಹಿಂಸೆಗಳಿಗೂ ಕಾರಣವಾಗಬಹುದಾದ  ಸುದ್ದಿ ಯಾವುದು? ಉತ್ತರ ಸುಲಭ- 4. ಇನ್ನು, ಇದಕ್ಕಿಂತ ತುಸು ಕಡಿಮೆ ಗಮನ ಸೆಳೆಯಬಹುದಾದ ಆದರೆ ಸಾರ್ವಜನಿಕ ಚರ್ಚೆ  ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆ-ಟಿಪ್ಪಣಿಗಳಿಗೆ ಒಳಗಾಗಬಹುದಾದ ಸುದ್ದಿ ಯಾವುದೆಂದರೆ ಸಂಖ್ಯೆ 5ರದ್ದು. ಉಳಿದಂತೆ  ಕೆಲವೊಮ್ಮೆ ಪ್ರತಿಭಟನೆಗೂ ಚುನಾವಣೆಯ ಸಂದರ್ಭದಲ್ಲಾದರೆ ರಾಜಕಾರಣಿಗಳ ಕ್ಷಮಾಯಾಚನೆಗೂ ಕಠಿಣ ಕ್ರಮದ ಭರವಸೆಗೂ  ಕಾರಣವಾಗುವ ಸುದ್ದಿಯು ಕ್ರಮ ಸಂಖ್ಯೆ 2ರದ್ದು. ಆದರೆ, ‘ದಲಿತ ವ್ಯಕ್ತಿಯಿಂದ ಮೇಲ್ಜಾತಿ ವ್ಯಕ್ತಿಯ ಮೇಲೆ ಹಲ್ಲೆ ’ ಎಂಬ ಕ್ರಮ ಸಂಖ್ಯೆ  3ರ ಸುದ್ದಿಯು ದೇಶದಲ್ಲಿ ಬಹುತೇಕ ಅಸಂಭವ ಅಥವಾ ಅಪರೂಪದಲ್ಲಿ ಅಪರೂಪದ್ದಾಗಿರುವುದರಿಂದ ಆ ಬಗ್ಗೆ ವಿಶ್ಲೇಷಣೆ  ಅಗತ್ಯವಿಲ್ಲ.
 

ಇನ್ನೊಂದು ಉದಾಹರಣೆ
1. ಪ್ರೀತಿಸಿದ ಯುವಕ-ಯುವತಿಯರಿಬ್ಬರೂ ಪರಾರಿ
2. ಹಿಂದೂ ಯುವಕನೊಂದಿಗೆ ಹಿಂದೂ ಯುವತಿ ಪರಾರಿ
3. ಹಿಂದೂ ಯುವತಿ ಮುಸ್ಲಿಮ್ ಯುವಕನೊಂದಿಗೆ ಪರಾರಿ
4. ಹಿಂದೂ ಯುವಕನೊಂದಿಗೆ ಮುಸ್ಲಿಮ್ ಯುವತಿ ಪರಾರಿ
5. ಮೇಲ್ಜಾತಿ ಯುವಕನೊಂದಿಗೆ ದಲಿತ ಯುವತಿ ಪರಾರಿ
6. ದಲಿತ ಯುವಕನೊಂದಿಗೆ ಮೇಲ್ಜಾತಿ ಯುವತಿ ಪರಾರಿ
ಇವುಗಳ ಪೈಕಿ ಅತ್ಯಂತ ಹೆಚ್ಚು ಗಮನ ಸೆಳೆಯುವ, ಚರ್ಚೆಗೆ ಗ್ರಾಸವಾಗುವ, ಹಿಂಸಾಚಾರ ಮತ್ತು ಪೊಲೀಸ್ ಬಿಗಿ ಬಂದೋಬಸ್ತ್ ಗೆ  ಕಾರಣವಾಗುವ ಹಾಗೂ ಧರ್ಮ ಅಪಾಯದಲ್ಲಿದೆ ಎಂಬ ಕೂಗು ಕೇಳಿ ಬರುವ ಸುದ್ದಿ ಯಾವುದೆಂಬುದನ್ನು ಪತ್ತೆ ಹಚ್ಚುವುದಕ್ಕೆ  ಕಷ್ಟವೇನೂ ಇಲ್ಲ- ಅದು ಸುದ್ದಿ ಸಂಖ್ಯೆ 3. ಇನ್ನು, ಇಷ್ಟು ತೀವ್ರವಾಗಿ ಅಲ್ಲದಿದ್ದರೂ ಚರ್ಚೆ, ಆತಂಕ ಮತ್ತು ಸೋಶಿಯಲ್ ಮೀಡಿಯಾ  ಚರ್ಚೆಗಳಿಗೆ ಕಾರಣವಾಗುವ ಸುದ್ದಿಯೆಂದರೆ ಕ್ರಮ ಸಂಖ್ಯೆ 4ರದ್ದು. ಈ ಸುದ್ದಿiಗಳ ಪೈಕಿ ಅತ್ಯಂತ ಕಡಿಮೆ ಗಮನ ಸೆಳೆಯಬಹುದಾದ  ಮತ್ತು ನಕ್ಕು ಮುಂದೆ ಸಾಗಬಹುದಾದ ಅನಾಕರ್ಷಣೀಯ ಸುದ್ದಿ ಕ್ರಮ ಸಂಖ್ಯೆ 1ರದ್ದು. ಹಾಗೆಯೇ  ಕೆಲವೊಮ್ಮೆ ಅತ್ಯಂತ ಅಪಾಯಕಾರಿ  ತಿರುವನ್ನು ಪಡಕೊಳ್ಳಬಹುದಾದ ಮತ್ತು ಮರ್ಯಾದಾ ಹತ್ಯೆಯಂಥ ಕ್ರೌರ್ಯಕ್ಕೂ ಕಾರಣವಾಗಬಹುದಾದ ಸುದ್ದಿ ಕ್ರಮಸಂಖ್ಯೆ 6ರದ್ದು.  ಸುದ್ದಿ ಸಂಖ್ಯೆ 5 ಸಾಮಾನ್ಯ ಸಂದರ್ಭಗಳಲ್ಲಿ ಅಸಂಭವ ಆಗಿರುವುದರಿಂದ ಅದಕ್ಕಿರುವ ಪ್ರತಿಕ್ರಿಯೆಯ ಬಗ್ಗೆ ಕುತೂಹಲವನ್ನಷ್ಟೇ  ಇಟ್ಟುಕೊಳ್ಳಬಹುದು.


ಇನ್ನೂ ಒಂದು ಉದಾಹರಣೆ ಕೊಡುತ್ತೇನೆ
1. ಅಪರಿಚಿತರಿಂದ ವಿಮಾನ ನಿಲ್ದಾಣಕ್ಕೆ ಬಾಂಬು ಬೆದರಿಕೆ
2. ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಅಲ್ಲಾಹನ ಹೆಸರಲ್ಲಿ ಈ-ಮೇಲ್ ರವಾನೆ
3. ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಆದಿತ್ಯರಾವ್ ಎಂಬಾತನ ಬಂಧನ
4. ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಜೀವಂತ ಬಾಂಬ್: ತಜ್ಞರಿಂದ ಬಾಂಬ್ ನಿಷ್ಕ್ರಿಯ


ನಿಜವಾಗಿ ಇಲ್ಲಿರುವ ನಾಲ್ಕು ಸುದ್ದಿಗಳ ಪೈಕಿ ಅತ್ಯಂತ ಆಘಾತಕಾರಿ ಮತ್ತು ಬೆಚ್ಚಿ ಬೀಳಬೇಕಾದ ಸುದ್ದಿ ಕ್ರಮಸಂಖ್ಯೆ 4ರದ್ದು. ಯಾಕೆಂದರೆ,  ಯಾವ ಗೌಜು-ಗದ್ದಲ, ಬೆದರಿಕೆ, ಈ-ಮೇಲ್‌ಗಳ ರಂಪಾಟವೂ ಇಲ್ಲದೇ ಯಾರೋ ಒಬ್ಬ ಜೀವಂತ ಬಾಂಬ್ ಇಟ್ಟು ಹೋಗಿದ್ದಾನೆ,  ಅದು ಸಕಾಲದಲ್ಲಿ ಪತ್ತೆಯಾಗದೇ ಹೋಗಿರುತ್ತಿದ್ದರೆ ಅನೇಕ ಜೀವಗಳು ಪ್ರಾಣ ಕಳಕೊಳ್ಳುತ್ತಿದ್ದುವು. ವಿಮಾನ ನಿಲ್ದಾಣವೇ  ಸ್ಫೋಟಗೊಳ್ಳುತ್ತಿತ್ತು. ಒಂದೊಮ್ಮೆ ನಿಲ್ದಾಣದಲ್ಲಿ ವಿಮಾನ ಇರುತ್ತಿದ್ದರೆ, ಭಾರಿ ಸಾವು-ನೋವುಗಳಾಗುವ ಸಾಧ್ಯತೆಯೂ ಇತ್ತು. ಅಪಾರ  ನಾಶ-ನಷ್ಟ ಮತ್ತು ಭಾರತದ ವರ್ಚಸ್ಸಿಗೆ ಹಾನಿ ತಟ್ಟಬಹುದಾದ ಕೃತ್ಯ ಇದು. ಆದರೆ, ಟಿ.ವಿ. ಚಾನೆಲ್‌ಗಳು, ಪತ್ರಿಕೆಗಳು, ಸೋಶಿಯಲ್  ಮೀಡಿಯಾದ ಚರ್ಚೆಯಿಂದ ಹಿಡಿದು ಸಾರ್ವಜನಿಕ ಚರ್ಚೆ, ಸಭೆ, ಪ್ರತಿಭಟನೆ, ಆವೇಶದ ಭಾಷಣಗಳ ವರೆಗೆ- ಈ ಎಲ್ಲಕ್ಕೂ  ಕಾರಣವಾಗಬಹುದಾದ ಬಿಗ್ ಬ್ರೇಕಿಂಗ್ ಸುದ್ದಿ ಇದಾಗುವುದಿಲ್ಲ, ಬದಲು ಕ್ರಮ ಸಂಖ್ಯೆ 2ರ ಸುದ್ದಿ ಈ ಎಲ್ಲವನ್ನೂ ಸಾಧ್ಯವಾಗಿಸುತ್ತದೆ.  ಅಷ್ಟಕ್ಕೂ,


ಕ್ರಮ ಸಂಖ್ಯೆ 2ರ ವ್ಯಕ್ತಿ ವಿಮಾನ ನಿಲ್ದಾಣಕ್ಕೆ ಬಾಂಬನ್ನೇ ಹಾಕುವುದಿಲ್ಲ. ಅಲ್ಲಾಹನ ಹೆಸರಲ್ಲಿ ರವಾನಿಸಲಾದ ಈ-ಮೇಲ್‌ನ ಹೊರತಾಗಿ  ಆತ ಯಾರೆಂದೇ ಗೊತ್ತಿರುವುದಿಲ್ಲ. ಆತ ಈ-ಮೇಲ್‌ನಲ್ಲಿ ಬಳಸಿರುವ ಅಲ್ಲಾಹ್, ಬಿಸ್ಮಿಲ್ಲಾಹ್, ಇನ್‌ಶಾ ಅಲ್ಲಾಹ್, ಜಿಹಾದ್, ಕಾಫಿರ್  ಇತ್ಯಾದಿಗಳೇ ಆತನ ಗುರುತು. ಹಾಗಂತ, ಈ ಈ-ಮೇಲನ್ನು ಮುಸ್ಲಿಮ್ ವ್ಯಕ್ತಿಯೇ ರವಾನಿಸಬೇಕಿಲ್ಲ, ಇಂಥ ಪದಗಳನ್ನು ಬಲ್ಲ  ಯಾರೂ ಇಂಥ ಈ-ಮೇಲನ್ನು ರವಾನಿಸಬಹುದು. ಆದರೆ, ಅರೇಬಿಕ್ ಪದಗಳನ್ನು ಮುಸ್ಲಿಮರಿಗೆ ಸಂಬAಧಿಸಿದವು ಮತ್ತು ಮುಸ್ಲಿಮರು  ಮಾತ್ರ ಅಂಥ ಪದಗಳನ್ನು ಬಳಸಬಲ್ಲರು ಎಂದು ತಕ್ಷಣ ತೀರ್ಮಾನಕ್ಕೆ ಬರಲಾಗುತ್ತದಲ್ಲದೇ, ಟಿ.ವಿ. ಆ್ಯಂಕರ್‌ಗಳು ಕೋಟು- ಬೂಟುಗಳನ್ನು ಹಾಕಿಕೊಂಡು ಡಿಬೇಟ್‌ಗೆ ಸಿದ್ಧವಾಗುತ್ತಾರೆ. ಡಿಬೇಟ್ ಆರಂಭವಾಗುವುದಕ್ಕಿಂತ ಮೊದಲೇ ಗುಂಡಿನ ಧ್ವನಿಯೊಂದಿಗೆ  ಮುಖಕ್ಕೆ ಬಟ್ಟೆ ಕಟ್ಟಿದ ಮತ್ತು ಕೈಯಲ್ಲಿ ಬಂದೂಕು ಹಿಡಿದ ಚಿತ್ರಗಳು ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ. ಇವರೆಲ್ಲ ಮುಸ್ಲಿಮರು ಎಂಬುದ ನ್ನು ಸಾರಿ ಹೇಳುವುದಕ್ಕಾಗಿ ಕೆಲವೊಮ್ಮೆ ಹಿನ್ನೆಲೆಯಲ್ಲಿ ಅದಾನ್ ಕೂಡಾ ಕೇಳಿಸುವುದಿದೆ ಅಥವಾ ಮಸೀದಿಯ ಚಿತ್ರ ಹಾದು  ಹೋಗುವುದಿದೆ. ಆ ಬಳಿಕ ಡಿಬೇಟ್‌ನ ಹೆಸರಲ್ಲಿ ಏಕಮುಖ ವಾದಗಳು ಪ್ರಾರಂಭವಾಗುತ್ತವೆ. ಈ ಹಿಂದೆ ಬಂದಿರುವ ಇಂಥದ್ದೇ  ಶೈಲಿಯ ಈ-ಮೇಲ್‌ಗಳು, ಅದರಲ್ಲಿ ಇದ್ದ ಅರೇಬಿಕ್ ಪದಗಳು ಮತ್ತು ಅದರ ಹಿಂದಿರುವ ಮನಸ್ಥಿತಿ, ಜಗತ್ತನ್ನೇ ಇಸ್ಲಾಮ್ ಮಾಡುವ  ಸಂಚು, ಹಿಂಸಾಪ್ರಿಯತೆ, ಹಿಂದೂಗಳಿಗಿರುವ ಅಪಾಯ.. ಇತ್ಯಾದಿಗಳನ್ನೆಲ್ಲ ಹರಡಿಟ್ಟು ಚರ್ಚಿಸಲಾಗುತ್ತದೆ. ಹಾಗಂತ,


ಟಿ.ವಿ.ಗಳಿಂದ ಹೊರಬಂದು ಪತ್ರಿಕೆಗಳನ್ನು ನೋಡಿದರೂ ಸುಖವೇನೂ ಇರುವುದಿಲ್ಲ. ಟಿ.ವಿ.ಯಷ್ಟು ಬೇಜವಾಬ್ದಾರಿತನದಿಂದ ಅಲ್ಲ ದಿದ್ದರೂ, ಶಂಕಿತರು ಮುಸ್ಲಿಮರೇ ಎಂದು ಪರೋಕ್ಷವಾಗಿಯಾದರೂ ಬಿಂಬಿಸುವ ರೀತಿಯಲ್ಲೇ  ಸುದ್ದಿ ಹೆಣೆಯಲ್ಪಟ್ಟಿರುತ್ತದೆ. ಅದಕ್ಕೆ  ಕಾರಣ, ಅಲ್ಲಾಹ್, ಬಿಸ್ಮಿಲ್ಲಾಹ್, ಜಿಹಾದ್, ಕಾಫಿರ್.. ಇತ್ಯಾದಿ ಪದಗಳು. ಇದರ ಆಚೆಗೆ, ರಾಜಕಾರಣಿಗಳು, ಸಂಘಟನೆಗಳ ನಾಯಕರು  ಅದಾಗಲೇ ಅಪರಾಧಿಯನ್ನು ಪತ್ತೆ ಮಾಡಿದವರಂತೆ ಹೇಳಿಕೆ ನೀಡತೊಡಗುತ್ತಾರೆ. ಇಸ್ಲಾಮ್‌ನಿಂದ ಈ ದೇಶಕ್ಕೆ ಇರುವ ಅಪಾಯ,  ಮುಸ್ಲಿಮರನ್ನು ದೂರ ಇಡಬೇಕಾದ ಅಗತ್ಯ ಮತ್ತು ಹಿಂದೂಗಳು ಸಂಘಟಿತರಾಗಬೇಕಾದ ಅನಿವಾರ್ಯತೆಗಳ ಕುರಿತು ಭಾಷಣಗಳನ್ನು  ಮಾಡಲಾಗುತ್ತದೆ. ಮುಸ್ಲಿಮ್ ಧರ್ಮಗುರುಗಳೇಕೆ ಫತ್ವಾ ಹೊರಡಿಸುವುದಿಲ್ಲ, ಈ ಬೆದರಿಕೆಯನ್ನು ಖಂಡಿಸಿ ಮುಸ್ಲಿಮರೇಕೆ ಪ್ರತಿಭಟನೆ  ನಡೆಸುವುದಿಲ್ಲ ಎಂದು ಪ್ರಶ್ನಿಸಲಾಗುತ್ತದೆ. ಅಂದಹಾಗೆ, ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಾಹನ ಹೆಸರಲ್ಲಿ ಈ-ಮೇಲ್ ಕಳಿಸಿದವನ ಬಂಧನವೂ ಆಗಿರುವುದಿಲ್ಲ ಮತ್ತು ಆತನ ಧರ್ಮ ಯಾವುದು ಎಂದೂ ಪತ್ತೆಯಾಗಿರುವುದಿಲ್ಲ. ಆ ಈ-ಮೇಲ್‌ನಲ್ಲಿ ಬಳಸಲಾಗಿರುವ ಪದಗಳೇ  ಒಂದಿಡೀ ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಕಾರಣವಾಗುತ್ತದೆ. ಇದೇವೇಳೆ,


ಕ್ರಮಸಂಖ್ಯೆ 3ರ ಸುದ್ದಿಯ ಆರೋಪಿಯನ್ನು ಬಂಧಿಸಲಾಗಿದ್ದರೂ ಅದಕ್ಕೆ ಈ ಮಟ್ಟದ ಕವರೇಜ್ ಸಿಗುವುದಿಲ್ಲ. ಆ ವ್ಯಕ್ತಿಯನ್ನು ಆತನ  ಧರ್ಮದ ಆಧಾರದಲ್ಲಿ ಟಿ.ವಿ.ಗಳು ವಿಚಾರಣೆ ನಡೆಸುವುದಿಲ್ಲ.  ಆತ ಓದಿದ ಗ್ರಂಥ  ಯಾವುದು, ಅದರಲ್ಲಿ ಆತನಿಗೆ ಇಷ್ಟವಾದ ಅಧ್ಯಾಯ ಯಾವುದು, ಆತ ವೀಕ್ಷಿಸುತ್ತಿದ್ದ ವೀಡಿಯೋ ಎಂಥದ್ದು, ಆತ ಎಲ್ಲೆಲ್ಲಿಗೆಲ್ಲಾ  ತೀರ್ಥಯಾತ್ರೆ ಹೋಗಿದ್ದಾನೆ, ಆತ ಕರ್ಮಠನಾಗಿದ್ದನೆ, ಆತ ಮದುವೆಯಾಗಿದ್ದಾನಾ, ಮಕ್ಕಳಿದ್ದಾರಾ, ಎಷ್ಟನೇ ತರಗತಿಯಲ್ಲಿ ಶಾಲೆ ಖೈದು  ಮಾಡಿದ್ದಾನೆ, ಈ ಮೊದಲು ಇಂಥ ಬೆದರಿಕೆ ಹಾಕಿದ್ದನಾ, ಪಾಸ್‌ಪೋರ್ಟ್ ಇದೆಯಾ, ವಿದೇಶಕ್ಕೆ ಪ್ರಯಾಣಿಸಿದ್ದಾನಾ... ಇತ್ಯಾದಿ ಇತ್ಯಾದಿ  ಮೀಡಿಯಾ ಟ್ರಯಲ್‌ಗಳು ನಡೆಯುವುದಿಲ್ಲ. ಪತ್ರಿಕೆಗಳು ಕೂಡಾ ವಿಷಯದ ಆಳಕ್ಕೆ ಇಳಿಯದೇ ಆತನಿಗೆ ಮಾನಸಿಕ ಸಮಸ್ಯೆ ಇತ್ತಾ,  ಖಿನ್ನತೆಗೆ ಔಷಧಿ ಪಡೆಯುತ್ತಿದ್ದನಾ ಎಂಬಿತ್ಯಾದಿ ಪತ್ತೆ ಕಾರ್ಯಕ್ಕೆ ತೊಡಗುತ್ತವೆ. ರಾಜಕಾರಣಿ ಗಳೂ ಮೌನವಾಗುತ್ತಾರೆ. ಸಂಘಟನೆಗಳಿಗೂ ಇದರಲ್ಲಿ ಆಸಕ್ತಿ ಇರುವುದಿಲ್ಲ. ಆವೇಶದ ಭಾಷಣಗಳೋ ಘೋಷಣೆಗಳೋ ಕೇಳಿ ಬರುವುದೂ ಇಲ್ಲ. ಏನೂ ನಡೆದೇ  ಇಲ್ಲವೋ ಎಂದು ಅನುಮಾನಿ ಸುವಂತೆ ಬಂದಷ್ಟೇ ವೇಗದಲ್ಲಿ ಈ ಸುದ್ದಿ ಸತ್ತೂ ಹೋಗುತ್ತದೆ.


ಅಂದಹಾಗೆ, ಈ ಎಲ್ಲವನ್ನೂ ನೆನಪಿಸಿಕೊಳ್ಳುವುದಕ್ಕೆ ಒಂದು ಕಾರಣ ಇದೆ.


ಬೆಂಗಳೂರಿನ 15  ಶಾಲೆಗಳಿಗೆ ಡಿಸೆಂಬರ್ 1ರಂದು ಈ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾದ ಸುದ್ದಿಯನ್ನು ಗೆಳೆಯರೊಬ್ಬರು  ನನಗೆ ವಾಟ್ಸಾಪ್ ಮಾಡಿದ್ದರು. ಅದರೊಂದಿಗೆ ಮುಸ್ಲಿಮರ ಬಗ್ಗೆ ಅತ್ಯಂತ ನಿರಾಶೆಯ ಭಾವನೆಗಳನ್ನೂ ಹಂಚಿ ಕೊಂಡಿದ್ದರು. ಇವರು  ದೇಶಸೇವೆಗೈದು ನಿವೃತ್ತರಾದ ಯೋಧರು. ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಬಲ್ಲೆ. ‘ಇಸ್ಲಾಮ್‌ಗೆ ಮತಾಂತರವಾಗಿ ಇಲ್ಲವೇ  ಸಾಯಲು ಸಿದ್ಧರಾಗಿ ಎಂದು ಬೆದರಿಸುವುದು, ವಿಗ್ರಹಾರಾಧಕರ ತಲೆ ಕಡಿಯುತ್ತೇವೆ ಅನ್ನುವುದು, 15 ಶಾಲೆಗಳಲ್ಲಿರುವ ಮಕ್ಕಳನ್ನು  ಬಾಂಬ್ ಸ್ಫೋಟಿಸಿ ಹತ್ಯೆ ನಡೆಸುತ್ತೇವೆ..’ ಅನ್ನುವುದೆಲ್ಲ ರಾಕ್ಷಸೀಯ ಮಾತುಗಳು. ಯಾರಲ್ಲೆ  ಆಗಲಿ ಆ ಮಾತುಗಳು ಆಘಾತ ಮತ್ತು  ಆಕ್ರೋಶವನ್ನು ಉಂಟು ಮಾಡಬಲ್ಲುದು. ಈ ಮಾತುಗಳ ನಡುನಡುವೆ ಬಿಸ್ಮಿಲ್ಲಾಹ್ ಮತ್ತು ಅಲ್ಲಾಹು ಅಕ್ಬರ್ ಎಂಬ ಪದಗಳೂ ಇವೆ.  ಈ ಈ-ಮೇಲ್‌ಗೆ ದಿಗಿಲುಗೊಂಡು ಶಾಲೆಗೆ ಧಾವಿಸಿದ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡೂ ಹೋಗಿದ್ದಾರೆ. ಇವೆಲ್ಲ  ಅಸಹಜವೂ ಅಲ್ಲ. ವಿಷಾದ ಏನೆಂದರೆ,

ಒಂದು  ಈ-ಮೇಲ್‌ನಲ್ಲಿರುವ ಪದಗಳನ್ನು ಓದಿಕೊಂಡು ಅದಕ್ಕೆ ಧರ್ಮವನ್ನು ಅಂಟಿಸುತ್ತೇವಲ್ಲ, ಇದು ಎಷ್ಟು ಸರಿ? ಒಂದುವೇಳೆ, ಈ  ಈ-ಮೇಲ್‌ನ ಹಿಂದೆ ಇರುವ ವ್ಯಕ್ತಿ ಮುಸ್ಲಿಮ್ ಎಂದೇ ಇಟ್ಟುಕೊಂಡರೂ ಅದು ಇಸ್ಲಾಮ್‌ನಿಂದ ಪ್ರೇರಿತ ಎಂದು ಅಂದುಕೊಳ್ಳುವುದು  ಏಕೆ? 20 ಕೋಟಿ ಮುಸ್ಲಿಮರು ಈ ದೇಶದಲ್ಲಿ ಹಿಂದೂಗಳೊಂದಿಗೆ ಬೆರೆತು ಬದುಕುತ್ತಿದ್ದರೂ ಅವರ ಮೇಲೆ ವಿಶ್ವಾಸವಿಡುವುದಕ್ಕಿಂತ  ಹೆಚ್ಚು ಓರ್ವ ಭಯೋತ್ಪಾದಕನ ಈ-ಮೇಲ್‌ನ ಮೇಲೆ ನಂಬಿಕೆ ಇಡುವುದೇಕೆ? ಇಂಥದ್ದೊಂದು  ಸಮೂಹಸನ್ನಿ ಭೀತಿಯನ್ನು ಹುಟ್ಟು  ಹಾಕಿದವರು ಯಾರು? ಆ ಈ-ಮೇಲ್‌ನಲ್ಲಿ ಏನೆಲ್ಲಾ ಹೇಳಿವೆಯೋ ಅದುವೇ ಇಸ್ಲಾಮ್ ಮತ್ತು ಅದುವೇ ಮುಸ್ಲಿಮರು ಎಂದು  ನಂಬುವುದಕ್ಕೆ ಈ ದೇಶದಲ್ಲಿ ಏನು ಆಧಾರಗಳಿವೆ? ಮುಸ್ಲಿಮನ ಬುಟ್ಟಿಯಿಂದ ಮೀನು ಖರೀದಿಸುವ ಹಿಂದೂಗಳು, ಹಿಂದೂಗಳ  ಅಂಗಡಿಯಿಂದ  ಹೂವು ಖರೀದಿಸುವ ಮುಸ್ಲಿಮರು ಮತ್ತು ಧರ್ಮ ನೋಡದೇ ಅಕ್ಕಿ-ಸಕ್ಕರೆ, ಬೆಲ್ಲ, ಚಪ್ಪಲಿ, ಮೊಬೈಲು, ಟಿ.ವಿ., ಫ್ರಿಜ್ಜು,  ಕೋಳಿ, ಮಾಂಸ, ತರಕಾರಿ, ಕಾರು, ಬೈಕು, ಹಣ್ಣು-ಹಂಪಲುಗಳನ್ನು ಖರೀದಿಸುವ ಹಿಂದೂ ಮತ್ತು ಮುಸ್ಲಿಮರು ಹಾಗೂ ರಕ್ತದಾನ  ಮಾಡುವ ಮತ್ತು ಕಷ್ಟದಲ್ಲಿರುವವರಿಗೆ ನೆರವಾಗುವ ಈ ಎರಡೂ ಧರ್ಮೀಯರು ಒಂದು ಈ-ಮೇಲ್, ಒಂದು ಹತ್ಯೆ, ಒಂದು ಪ್ರೇಮ  ಪ್ರಕರಣಕ್ಕೆ ತಲ್ಲಣಿಸಿ ಹೋಗುವುದೇಕೆ? ನಿಜಕ್ಕೂ ಈ ಭಯ ಸಜಹವೇ ಅಥವಾ ರಾಜಕೀಯ ಸೃಷ್ಟಿಯೇ? ಅಷ್ಟಕ್ಕೂ,


ಕೊಲ್ಲುವ ಉದ್ದೇಶ ಹೊಂದಿರುವ ವ್ಯಕ್ತಿ ಈ-ಮೇಲ್ ಮಾಡುವುದಿಲ್ಲ. ಈ-ಮೇಲ್ ಮಾಡುವವ ಕೊಲ್ಲುವ ಉದ್ದೇಶವನ್ನು ಹೊಂದಿರುವುದೂ ಇಲ್ಲ. ಈತ ಬರೇ ಭಯೋತ್ಪಾದಕನಷ್ಟೇ ಅಲ್ಲ, ಧರ್ಮದ್ರೋಹಿ, ಮನುಷ್ಯ ದ್ರೋಹಿ ಮತ್ತು ಸೌಹಾರ್ದ ದ್ರೋಹಿ.

No comments:

Post a Comment