Tuesday, September 5, 2023

ಸೌಮ್ಯ, ಗೌರಿ, ಸಲ್ಮಾ ಮತ್ತು ಲವ್





1. ಸೌಮ್ಯ ಭಟ್- ಮಿಲಿಟರಿ ಅಶ್ರಫ್
2. ಶ್ರದ್ಧಾ ವಾಲ್ಕರ್- ಅಫ್ತಾಬ್ ಪೂನಾವಾಲ
3. ಸಲ್ಮಾ ಸುಲ್ತಾನಾ- ಮಧು ಸಾಹು
4. ಗೌರಿ - ಪದ್ಮರಾಜ್

ಪ್ರೀತಿ-ಪ್ರೇಮ, ನಂಬಿಕೆ, ವಿಶ್ವಾಸ ಇತ್ಯಾದಿಗಳ ಸುಳಿಗೆ ಸಿಲುಕಿ ಜೀವ ಕಳಕೊಳ್ಳುತ್ತಿರುವ ಭಾರತೀಯ ಹೆಣ್ಣು ಮಕ್ಕಳ ಪೈಕಿ ನಾಲ್ವರು ಇಲ್ಲಿದ್ದಾರೆ. ಇಲ್ಲಿರುವ ನಾಲ್ಕು ಮಂದಿ ಹೆಣ್ಣು ಮಕ್ಕಳಿ ಗಾಗಲಿ ಅಥವಾ ಇವರನ್ನು ಸಾಯಿಸಿದ ನಾಲ್ಕು ಮಂದಿ ಗಂಡು ಮಕ್ಕಳಿಗಾಗಲಿ  ಹೇಳಿಕೊಳ್ಳುವಂಥ ಕ್ರಿಮಿನಲ್ ಹಿನ್ನೆಲೆ ಇಲ್ಲ. ಕಾಲೇಜು ವಿದ್ಯಾರ್ಥಿನಿ ಸೌಮ್ಯಳನ್ನು 1997ರಲ್ಲಿ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಹತ್ಯೆ ಮಾಡಿದ  ಅಶ್ರಫ್ ಯೋಧನಾಗಿದ್ದ. ಆವರೆಗೂ ಆತನ ಮೇಲೆ ಯಾವೊಂದು ಪ್ರಕರಣವೂ ಪೊಲೀಸು ಠಾಣೆಯಲ್ಲಿ ದಾಖಲಾಗಿರಲಿಲ್ಲ. ಆದರೆ  ಏಕಾಏಕಿ ಒಂದು ಸಂಜೆ ಆತ ಹತ್ಯೆಕೋರನಾಗಿಬಿಟ್ಟ. ಕ್ರಿಮಿನಲ್ ವ್ಯಕ್ತಿಯಾಗಿ ಗುರುತಿಸಿಕೊಂಡ. ನ್ಯಾಯಾಲಯ ಈತನನ್ನು ಈ  ಹತ್ಯೆಯಿಂದ ಖುಲಾಸೆಗೊಳಿಸಿದ್ದರೂ ಸಾರ್ವಜನಿಕವಾಗಿ ಇವತ್ತೂ ಆತನೇ ಅಪರಾಧಿ. ದೆಹಲಿಯ ಅಫ್ತಾಬ್ ಪೂನಾವಾಲನಿಗೂ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. 2022ರಲ್ಲಿ ತನ್ನ ಗೆಳತಿ ಶ್ರದ್ಧಾಳನ್ನು ಹತ್ಯೆ ಮಾಡಿದ. ತುಂಡು ತುಂಡು ಮಾಡಿ ಎಸೆದ. ಚತ್ತೀಸ್‌ಗಢದ ಸಲ್ಮಾ  ಸುಲ್ತಾನ ಮತ್ತು ಮಧು ಸಾಹು ಪ್ರಕರಣ ಕೂಡ ಇದಕ್ಕಿಂತ ಭಿನ್ನ ಅಲ್ಲ. ಸಲ್ಮಾ ಟಿ.ವಿ. ಆ್ಯಂಕರ್. ಮಧು ಜಿಮ್ ಟ್ರೈನರ್. ಲಿವ್ ಇನ್  ಟುಗೆದರ್ ಸಂಬಂಧದಂತೆ  ಜೊತೆಯಾಗಿ ಬದುಕುತ್ತಿದ್ದ ಈಕೆಯನ್ನು 2018ರಲ್ಲಿ ಈತ ಹತ್ಯೆ ಮಾಡಿದ. ಮೊನ್ನೆ 2023ರಲ್ಲಿ ಪ್ರಕರಣ  ಬೆಳಕಿಗೆ ಬಂತು. ಹಾಗಂತ, ಈ ಮಧು ಸಾಹುಗೂ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. ಆದರೆ ಸಲ್ಮಾಳ ಬಗ್ಗೆ ಅನುಮಾನ ಇತ್ತು. ಎಲ್ಲಿ ಕೈತಪ್ಪಿ  ಹೋಗುತ್ತಾಳೋ ಅನ್ನುವ ಭಯ ಇತ್ತು. ಗೌರಿಯಂತೂ ಅದೇ ಸೌಮ್ಯಳ ಪುತ್ತೂರಿನಲ್ಲಿ ನಿನ್ನೆ ಮೊನ್ನೆಯಂತೆ ಹತ್ಯೆಯಾದವಳು. ಪ್ರೇಮ  ನಿರಾಕರಣೆಗೆ ಕುದ್ದು ಹೋದ ಜೆಸಿಬಿ ಚಾಲಕ ಪದ್ಮರಾಜ್ ಇರಿದು ಕೊಂದಿದ್ದಾನೆ. ಈತನಿಗೂ ಕ್ರಿಮಿನಲ್ ಹಿನ್ನೆಲೆ ಇರುವ ಯಾವ  ಮಾಹಿತಿಯೂ ಇಲ್ಲ.

ಮತ್ತೇಕೆ ಹೀಗೆ?

ಇವರನ್ನು ಹಠಾತ್ ಕ್ರಿಮಿನಲ್‌ಗಳಾಗಿಸಿದ್ದು ಯಾವುದು? ಪ್ರೇಮವೇ? ವೀಕ್ಷಿಸಿದ ಸಿನಿಮಾಗಳೇ? ಓದಿದ ಕಾದಂಬರಿಗಳೇ, ಕತೆಗಳೇ?  ನಾಟಕಗಳೇ? ಧರ್ಮಗ್ರಂಥಗಳೇ? ಅಪ್ರಬುದ್ಧತೆಯೇ? ಅಥವಾ ನಾಗರಿಕ ಜೀವನ ವಿಧಾನವೇ?

ಇಲ್ಲಿ ಹತ್ಯೆಕೋರರಾಗಿ ಗುರುತಿಸಿಕೊಂಡಿರುವ ನಾಲ್ವರು ಯುವಕರು ಮತ್ತು ಸಂತ್ರಸ್ತರಾಗಿರುವ ನಾಲ್ವರು ಯುವತಿಯರು 20ರಿಂದ 30  ವರ್ಷ ಪ್ರಾಯದ ಒಳಗಿನವರು. ಇವರಷ್ಟೇ ಅಲ್ಲ, ಇವತ್ತು ಪ್ರೀತಿ-ಪ್ರೇಮದ ಹೆಸರಲ್ಲಿ ಜೀವ ಕಳಕೊಳ್ಳುತ್ತಿರುವ ಮತ್ತು ಕ್ರಿಮಿ ನಲ್‌ಗಳಾಗುತ್ತಿರುವವರಲ್ಲಿ 99% ಮಂದಿ ಕೂಡಾ ಇದೇ ಪ್ರಾಯದವರು. ಪ್ರೇಮ ವೈಫಲ್ಯದ ಹೆಸರಲ್ಲಿ ಮತ್ತು ಮನೆಯವರ ವಿರೋಧದ  ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರೂ ಇದೇ ಪ್ರಾಯದವರೇ. ದುಡಿದು ಹೆತ್ತವರನ್ನು ಸಾಕಬೇಕಾದ ಪ್ರಾಯದ ಮಕ್ಕಳು ಕ್ರಿಮಿನಲ್‌ಗಳಾಗಿ ಜೈಲು ಪಾಲಾಗುವುದು ಮತ್ತು ಬೆಳೆದ ಹೆಣ್ಣು ಮಕ್ಕಳು ಹೆತ್ತವರ ಕಣ್ಣೆದುರೇ ಶವವಾಗಿ ಮಲಗುವುದು ಅತ್ಯಂತ ಆಘಾತಕಾರಿ  ಸನ್ನಿವೇಶ. ಸಾಮಾನ್ಯವಾಗಿ, ಇಂಥ ಘಟನೆ ನಡೆದ ಕೂಡಲೇ ನಾಗರಿಕ ಸಮಾಜ ಅದನ್ನು ಪ್ರೀತಿ-ಪ್ರೇಮ ಎಂದು ಕೇವಲವಾಗಿ  ನೋಡುವುದಿದೆ. ಹತ್ಯೆಕೋರರನ್ನು ಬೈದು, ಯುವತಿಯ ಬಗ್ಗೆ ಅನುಕಂಪದ ನಾಲ್ಕು ಮಾತು ಗಳನ್ನಾಡಿ ಸುಮ್ಮನಾಗುವುದೂ ಇದೆ.  ಲವ್ ಮಾಡುವ ಉಸಾ ಬರಿ ಆಕೆಗೇಕೆ ಬೇಕಿತ್ತು, ಲವ್ ಮಾಡದೇ ಇಷ್ಟು ಹೆಣ್ಣು ಮಕ್ಕಳು ಬದುಕುತ್ತಿಲ್ಲವಾ, ಯುವಕನನ್ನು ದೂರಿ  ಪ್ರಯೋಜನವಿಲ್ಲ ಎಂದು ಯುವತಿಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಕೈತೊಳೆದು ಕೊಳ್ಳುವುದೂ ಇದೆ. ನಿಜವಾಗಿ,

ಇದರಾಚೆಗೆ ನಾಗರಿಕ ಸಮಾಜ ಕೆಲವು ಪ್ರಶ್ನೆಗಳನ್ನು ಸ್ವಯಂ ಕೇಳಿಕೊಳ್ಳಬೇಕಿದೆ.

ಮಕ್ಕಳು ಎಂಥ ಸಮಾಜದಲ್ಲಿ ಬೆಳೆಯುತ್ತಿದ್ದಾರೆ? ಅವರು ವೀಕ್ಷಿಸುತ್ತಿರುವ ಸಿನಿಮಾಗಳು ಹೇಗಿವೆ? ಟಿ.ವಿ.ಯಲ್ಲಿ ವೀಕ್ಷಿಸುತ್ತಿರುವ  ಧಾರಾವಾಹಿಗಳೋ ಕಾರ್ಟೂನ್‌ಗಳೋ ಯಾವ ಸಂದೇಶವನ್ನು ಕೊಡುವಂತಿವೆ? ಅವರು ಮೊಬೈಲ್‌ನಲ್ಲಿ ಏನನ್ನು ವೀಕ್ಷಿಸುತ್ತಿದ್ದಾರೆ?  ಕಂಪ್ಯೂಟರ್‌ನಲ್ಲಿ ಏನನ್ನು ಹುಡುಕುತ್ತಿದ್ದಾರೆ? ಪ್ರೀತಿ-ಪ್ರೇಮ ಆಧಾರಿತ ಸಿನಿಮಾಗಳು ಸಾರುವ ಸಂದೇಶವನ್ನು ವಿಶ್ಲೇಷಣೆ ಮಾಡಿ  ಸ್ವೀಕರಿಸುವಷ್ಟು ಅವರು ಪ್ರಬುದ್ಧರಾಗಿದ್ದಾರಾ ಅಥವಾ ಸಿನಿಮಾ ಸೃಷ್ಟಿಸುವ ಕಲ್ಪನಾಲೋಕವನ್ನೇ ನಂಬುವಂಥ  ಸ್ಥಿತಿಯಲ್ಲಿದ್ದಾರಾ?  ಮೂರು ಗಂಟೆಯೊಳಗೆ ಮುಗಿಯಬೇಕಾದ ಸಿನಿಮಾದ ಕತೆಯನ್ನು ಮತ್ತು ಅದರ ಪಾತ್ರವನ್ನು ಸಿನಿಮಾವಾಗಿ ಜೀರ್ಣಿಸಿಕೊಳ್ಳಲು ಹ ದಿಹರೆಯದ ಎಷ್ಟು ಮಂದಿಗೆ ಸಾಧ್ಯವಾಗುತ್ತಿದೆ? ಮೊಬೈಲ್ ವೀಕ್ಷಣೆಯಿಂದ ಅವರು ಏನನ್ನು ಪಡೆಯುತ್ತಿದ್ದಾರೆ? ಹೆಣ್ಣು ಗಂಡು  ನಡುವಿನ ಪ್ರಕೃತಿದತ್ತ ಆಕರ್ಷಣೆಯನ್ನು ಅರ್ಥಮಾಡಿಕೊಳ್ಳುವ ಮತ್ತು ನಿಭಾಯಿಸುವ ಬಗ್ಗೆ ಹದಿಹರೆಯದಲ್ಲಿ ಎಷ್ಟು ಮಕ್ಕಳಿಗೆ ಮನೆ  ಮತ್ತು ಶಾಲೆಯಲ್ಲಿ ತರಬೇತಿ ಸಿಕ್ಕಿರುತ್ತದೆ? ಶಾಲಾ ಶಿಕ್ಷಕರು ಮತ್ತು ಉಪನ್ಯಾಸಕರು ಪ್ರೀತಿ-ಪ್ರೇಮದ ಬಗ್ಗೆ ಮತ್ತು ಆಕರ್ಷಣೆಯ ಬಗ್ಗೆ  ತಿಳುವಳಿಕೆಯ ಪಾಠ ಮಾಡುತ್ತಾರಾ? ಮನೆಯಲ್ಲಿ ಹೆತ್ತವರು ಮಕ್ಕಳ ಜೊತೆ ಹೇಗೆ ನಡಕೊಳ್ಳುತ್ತಾರೆ? ಯಾರನ್ನಾದರೂ ಪ್ರೀತಿಸುತ್ತಿದ್ದೀಯಾ ಎಂದು ಮಗನಲ್ಲೋ  ಮಗಳಲ್ಲೋ  ಹೆತ್ತವರು ಪ್ರಶ್ನಿಸುವುದಿದೆಯೇ? ಅಥವಾ ಪ್ರೀತಿ-ಪ್ರೇಮದ ಬಗ್ಗೆ ಮಾತಾಡುವುದೇ ಅಪರಾಧ ಎಂಬ ರೀತಿಯಲ್ಲಿ ಬದುಕುತ್ತಿದ್ದಾರೆಯೇ? ಮಕ್ಕಳ ಚಟುವಟಿಕೆಯ ಮೇಲೆ ನಿಗಾ ಇಟ್ಟು ಅವರ ವರ್ತನೆ ಯಲ್ಲಾಗುವ  ಬದಲಾವಣೆಯನ್ನು ಗ್ರಹಿಸಿಕೊಂಡು ಸಂದರ್ಭಾನುಸಾರ ಮಾರ್ಗದರ್ಶನ ಮಾಡುವ ಕ್ರಮ ಹೆತ್ತವರಲ್ಲಿದೆಯೇ?

ಅಂದಹಾಗೆ,

ಹೆಣ್ಣು ಮತ್ತು ಗಂಡು ಮುಕ್ತವಾಗಿ ಬೆರೆಯುವುದಕ್ಕೆ ಪೂರಕವಾದ ವಾತಾವರಣವಿರುವ ದೇಶವೊಂದರಲ್ಲಿ ಅವರು ಪರಸ್ಪರ  ಮಾತಾಡಬಾರದು, ಆಕರ್ಷಣೆಗೆ ಒಳಗಾಗಬಾರದು ಎಂದೆಲ್ಲಾ ಬಯಸುವುದು ಶುದ್ಧ ಮುಗ್ಧತನ ಮತ್ತು ಅತಾರ್ಕಿಕ. ಎಲ್‌ಕೆಜಿಯಿಂದ  ಹಿಡಿದು ಡಿಗ್ರಿಯವರೆಗೆ, ಸರಕಾರಿ ಕಚೇರಿಯಿಂದ ಹಿಡಿದು ರೈಲು, ಬಸ್ಸು, ವಿಮಾನದ ವರೆಗೆ ಮತ್ತು ಸಂತೆಯಿಂದ  ಹಿಡಿದು ಹೊಟೇಲಿನ  ವರೆಗೆ ಎಲ್ಲೆಲ್ಲೂ ಹೆಣ್ಣು-ಗಂಡು ಜೊತೆಯಾಗಿಯೇ ಬದುಕುತ್ತಾರೆ, ಕಲಿಯುತ್ತಾರೆ, ಪ್ರಯಾಣಿಸುತ್ತಾರೆ ಮತ್ತು ಉದ್ಯೋಗ ಮಾಡುತ್ತಾರೆ.  ವೈದ್ಯ ಶಿಕ್ಷಣ, ಇಂಜಿನಿಯರಿಂಗ್  ಶಿಕ್ಷಣದಿಂದ ಹಿಡಿದು ಸೇನಾ ನೇಮಕಾತಿವರೆಗೆ ಹೆಣ್ಣು-ಗಂಡಿನ ನಡುವೆ ಎಲ್ಲೂ ಪರದೆಯಿಲ್ಲ.  ಆದ್ದರಿಂದ ಹರೆಯದ ಮಕ್ಕಳು ಪರಸ್ಪರ ಆಕರ್ಷಿತರಾಗುವುದನ್ನು ಮತ್ತು ಆ ಆಕರ್ಷಣೆ ಪ್ರೀತಿ-ಪ್ರೇಮದತ್ತ ತಿರುಗುವುದನ್ನು ಎಂಟನೇ  ಅದ್ಭುತವಾಗಿ ನೋಡಬೇಕಿಲ್ಲ. ಆದರೆ, ಇಂಥ ವಾತಾವರಣ ಇದ್ದೂ ಗೊತ್ತೇ ಇಲ್ಲದಂತೆ ಹೆತ್ತವರು ಮತ್ತು ಸಮಾಜ ವರ್ತಿಸುವುದು ಮಾತ್ರ  ನಿಜಕ್ಕೂ ಎಂಟನೇ ಅದ್ಭುತ. ಮೊದಲನೆಯದಾಗಿ,

ಹೆಣ್ಣು-ಗಂಡು ಬೆರೆಯುವುದಕ್ಕೆ ಪೂರಕವಾದ ವಾತಾವರಣ ತನ್ನ ಸುತ್ತ-ಮುತ್ತಲೂ ಇದೆ ಎಂಬುದನ್ನು ಪ್ರತಿ ಹೆತ್ತವರೂ ಒಪ್ಪಿಕೊಳ್ಳಬೇಕು.  ಎರಡನೆಯದಾಗಿ, ಜಗತ್ತಿನ ಇತರೆಲ್ಲ ಮಕ್ಕಳು ಪರಸ್ಪರ ಆಕರ್ಷಿತರಾದರೂ ತನ್ನ ಮನೆ ಮಕ್ಕಳು ಮಾತ್ರ ಅದರಿಂದ ಹೊರತಾಗಿರುತ್ತಾರೆ  ಎಂಬ ನಂಬಿಕೆಯಲ್ಲೂ ಇರಬಾರದು. ಯಾವುದು ಸಾಮಾಜಿಕವಾಗಿ ಸಹಜವೋ ಮತ್ತು ಪ್ರಾಕೃತಿಕವಾಗಿಯೂ ಸತ್ಯವೋ ಅದರಿಂದ  ಪೂರ್ಣ ವಿಮುಖಗೊಂಡು ಯಾರೂ ಬದುಕ ಲಾರರು. ಆದರೆ, ಇಂಥ ಸನ್ನಿವೇಶದಲ್ಲಿ ಸ್ವಯಂ ನಿಯಂತ್ರಣ ಹೇರಿಕೊಂಡು ಬದುಕುವ  ಕೋಟ್ಯಂತರ ಹದಿಹರೆಯದವರಿದ್ದಾರೆ. ಅವರಿಗೆ ಪ್ರೀತಿ-ಪ್ರೇಮದ ಬಗ್ಗೆ ಗೊತ್ತಿರುತ್ತದೆ. ಆಕರ್ಷಣೆಯೂ ಇರುತ್ತದೆ. ಆದರೆ ಈ ಪ್ರೀತಿ- ಪ್ರೇಮ, ಆಕರ್ಷಣೆ ಇತ್ಯಾದಿಗಳ ಮಿತಿಯೂ ಗೊತ್ತಿರುತ್ತದೆ. ಹಾಗಂತ, ಇಂಥ ತಿಳುವಳಿಕೆ ಈ ಮಕ್ಕಳಲ್ಲಿ ಬೆಳೆದಿರುವುದಕ್ಕೆ ಅವರೊಬ್ಬರೇ  ಕಾರಣ ಆಗಿರುವುದಿಲ್ಲ. ಹೆತ್ತವರೂ ಕಾರಣ ಆಗಿರುತ್ತಾರೆ. ಕೆಲವೊಮ್ಮೆ ಶಿಕ್ಷಕರು, ಕೆಲವೊಮ್ಮೆ ಗೆಳೆಯರು, ಕೆಲವೊಮ್ಮೆ ಯಾವುದೋ ಪುಸ್ತಕ,  ಯಾರದೋ ಮಾತು ಕೂಡಾ ಕಾರಣ ಆಗಿರುತ್ತದೆ. ಯಾವ ಸಿನಿಮಾದ ಪ್ರೇರಣೆಯಿಂದ ಗೌರಿಯನ್ನು ಪದ್ಮರಾಜ್ ಕೊಂದಿರುತ್ತಾನೋ  ಅಥವಾ ಯಾವ ಘಟನೆ, ಯಾವ ರೀಲ್ಸ್ ಅಥವಾ ಯಾವ ಪುಸ್ತಕರಿಂದ ಪ್ರೇರಿತನಾಗಿ ಆತ ಈ ಹತ್ಯೆ ನಡೆಸಿರುತ್ತಾನೋ ಅದೇ ಸಿನಿಮಾ,  ಪುಸ್ತಕ, ರೀಲ್ಸ್ ಗಳನ್ನ  ಇವರೂ ನೋಡಿರುತ್ತಾರೆ. ಅವನಂಥದ್ದೇ ಪರಿಸ್ಥಿತಿಯನ್ನು ಇವರೂ ಎದುರಿಸಿರುತ್ತಾರೆ. ಆದರೆ, ಅವರು ಯಾಕೆ  ಪದ್ಮರಾಜ್ ಆಗುವುದಿಲ್ಲ ಎಂದರೆ, ಅದರಾಚೆಗೆ ಆಲೋಚಿಸಬಲ್ಲ ಮತ್ತು ತನ್ನನ್ನು ನಿಯಂತ್ರಿಸಿಕೊಳ್ಳಬಲ್ಲ ಮಾರ್ಗದರ್ಶನ ಅವರಿಗೆ  ಸಿಕ್ಕಿರುತ್ತದೆ. ಸದ್ಯದ ಅಗತ್ಯ ಇದು. ಅಷ್ಟಕ್ಕೂ,

15ರಿಂದ 25ರ ವರೆಗಿನ ಪ್ರಾಯ ಅತ್ಯಂತ ಅಪಾಯಕಾರಿಯೂ ಹೌದು, ಪ್ರಯೋಜನಕಾರಿಯೂ ಹೌದು. ಇದು ಹೆಣ್ಣು-ಗಂಡು  ನಡುವಿನ ಆಕರ್ಷಣೆಯ ಪ್ರಾಯ. ತನಗೆಲ್ಲ ಗೊತ್ತಿದೆ ಎಂಬ ಹುಂಬ ವರ್ತನೆಯ ಪ್ರಾಯ. ಹೆತ್ತವರಿಂದ ಒಂದೊಂದನ್ನೇ  ಮುಚ್ಚಿಕೊಳ್ಳಬಯಸುವ ಪ್ರಾಯ. ಈ ಪ್ರಾಯದ ತುಮುಲವನ್ನು ಹೆತ್ತವರು ಗಮನದಲ್ಲಿಟ್ಟುಕೊಂಡು ಸೂಕ್ತ ಮಾರ್ಗದರ್ಶನ ನೀಡುತ್ತಿರಬೇಕು. ಪ್ರೀತಿ-ಪ್ರೇಮದ ಹೆಸರಲ್ಲಿ ನಡೆಯುವ ಹತ್ಯೆ ಮತ್ತು ಆತ್ಮಹತ್ಯೆ ಸುದ್ದಿಗಳನ್ನು ಈ ಪ್ರಾಯದ ಮಕ್ಕಳಿಂದ ಅಡಗಿಸಿಡಬೇಕಾದ  ಅಗತ್ಯ ಇಲ್ಲ. ಸಂದರ್ಭ ನೋಡಿಕೊಂಡು ಮಕ್ಕಳ ಮುಂದೆ ಇಂಥವುಗಳನ್ನು ಪ್ರಸ್ತಾಪ ಮಾಡುವ ಮತ್ತು ಸರಿಯಾದುದನ್ನು ಹೇಳುವ ಆಪ್ತ  ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಅನೇಕ ಬಾರಿ ಇಂಥ ಸುದ್ದಿಗಳು ಹೆತ್ತವರಿಗಿಂತ ಮೊದಲು ಮಕ್ಕಳಿಗೆ ಗೊತ್ತಿರುತ್ತದೆ. ಆದರೆ ಅವರು  ಪ್ರಸ್ತಾಪಿಸುವುದಿಲ್ಲ. ಹೆತ್ತವರು ಪ್ರಸ್ತಾಪಿಸಿದರೆ ಅವರೂ ಆಸಕ್ತಿಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಅಂಥ ಸಂದರ್ಭಗಳಲ್ಲಿ  ತನ್ನ ಮಕ್ಕಳ ಆಲೋಚನಾ ಕ್ರಮ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಹೆತ್ತವರಿಗೆ ಅವಕಾಶ ಒದಗುತ್ತದೆ.

ಅಂದಹಾಗೆ,

ತಂತ್ರಜ್ಞಾನದ ಈ ಯುಗದಲ್ಲಿ ತಾಳ್ಮೆ ಎಂಬ ಪದ ಅರ್ಥವನ್ನೇ ಕಳಕೊಳ್ಳುತ್ತಿದೆ. ಸೋಶಿಯಲ್ ಮೀಡಿಯಾದ ದೆಸೆಯಿಂದಾಗಿ  ಎರಡ್ಮೂರು ನಿಮಿಷಕ್ಕಿಂತ ಹೆಚ್ಚು ಒಂದೇ ಕಡೆ ಗಮನವಿಡಲು ಸಾಧ್ಯವಾಗದಂಥ ಸ್ಥಿತಿಯಿದೆ. ಸಿಟ್ಟು, ಆಕ್ರೋಶ, ಆವೇಶಗಳು ಕ್ಷಣ  ಮಾತ್ರದಲ್ಲಿ ಸ್ಫೋಟಿಸಿ ಏನೇನೋ ಅನಾಹುತಗಳಾಗುವ ಸನ್ನಿವೇಶ ಇವತ್ತಿನದು. ಆದ್ದರಿಂದ ಯುವ ಪ್ರಾಯದವರು ತೆಗೆದುಕೊಳ್ಳುವ  ಯಾವುದೇ ನಿರ್ಧಾರವೂ ಸಮತೂಕದ್ದೋ  ದೀರ್ಘ ಆಲೋಚನೆ ಯಿಂದ ಕೂಡಿದ್ದೋ  ಆಗಿರುವ ಸಾಧ್ಯತೆಗಳು ಕಡಿಮೆ ಇರುತ್ತದೆ.  ಪ್ರೀತಿ-ಪ್ರೇಮದ ವಿಷಯದಲ್ಲಂತೂ ಕ್ಷಣದ ಆವೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವುದೇ ಹೆಚ್ಚು. ಗೆಳೆಯರು, ಹಿತೈಷಿಗಳು ಅಥವಾ  ಹೆತ್ತವರಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಿರುವುದೂ ಕಡಿಮೆ. ನಿಜಕ್ಕೂ, ಈ ಪ್ರೀತಿ-ಪ್ರೇಮ, ಹತ್ಯೆ, ಆತ್ಮಹತ್ಯೆಗಳೆಲ್ಲ ಸಾಮಾಜಿಕ  ಸವಾಲು. ಇದಕ್ಕೆ ಸಮಾಜ ಮುಖಾಮುಖಿಯಾಗದ ಹೊರತು ಪರಿಹಾರ ಸಾಧ್ಯವಿಲ್ಲ. ಪ್ರತಿ ಮನೆಯೂ ಈ ಬಗ್ಗೆ ಜಾಗೃತವಾಗಬೇಕು.  ತಮ್ಮ ಮಕ್ಕಳನ್ನು ಪ್ರಬುದ್ಧವಾಗಿ ಮತ್ತು ಪ್ರೀತಿ-ಪ್ರೇಮದ ಪ್ರಾಯ ಸಹಜ ಸವಾಲನ್ನು ಮೀರಿ ಬೆಳೆಯುವುದಕ್ಕೆ ಪೂರಕವಾಗಿ ಬೆಳೆಸ ಬೇಕು.  ಮೊಬೈಲು ಜಗತ್ತು ಕಟ್ಟಿಕೊಡುವ ಭ್ರಮೆಗಳನ್ನು ಅರ್ಥ ಮಾಡುವ ಸಾಮರ್ಥ್ಯವನ್ನು ಅವರಲ್ಲಿ ಬೆಳೆಸಬೇಕು. ಇದಕ್ಕಾಗಿ ಮಕ್ಕಳೊಂದಿಗೆ  ಆಪ್ತ ಸಂಬಂಧವನ್ನು ಹೆತ್ತವರು ಬೆಳೆಸಿಕೊಳ್ಳುವುದು ಬಹಳ ಅಗತ್ಯ. ರಾತ್ರಿ ಊಟವನ್ನು ಹೆತ್ತವರು ಮಕ್ಕಳ ಜೊತೆ ಮಾಡುವುದು ಮತ್ತು  ಸಂದರ್ಭಾನುಸಾರ ವಿಷಯಗಳನ್ನು ಪ್ರಸ್ತಾಪಿಸಿ ಮಕ್ಕಳನ್ನು ಪ್ರಬುದ್ಧಗೊಳಿಸುವ ಸಂಸ್ಕೃತಿ ಬೆಳೆದು ಬರಬೇಕು. ತಮ್ಮ ಕುಟುಂಬದ ಯ ಶಸ್ವಿ ವ್ಯಕ್ತಿಗಳ ಹಿನ್ನೆಲೆಯನ್ನು ಮಾತಿನ ಭಾಗವಾಗಿಸಬೇಕು. ಅವರ ಕಲಿಕೆ, ಉದ್ಯೋಗ, ಮದುವೆ, ಸಮಾಜ ಸೇವೆ... ಇತ್ಯಾದಿಗಳನ್ನು  ವಿವರಿಸುತ್ತಾ ಮಕ್ಕಳಲ್ಲಿ ಸಕಾರಾತ್ಮಕ ಪ್ರೇರಣೆಯನ್ನು ಉಂಟು ಮಾಡಬೇಕು. ಏನಿದ್ದರೂ,

ಯುವಕ ಮತ್ತು ಯುವತಿಯರು ಪ್ರೀತಿ-ಪ್ರೇಮದ ಹೆಸರಲ್ಲಿ ಒಂದೋ ಕ್ರಿಮಿನಲ್‌ಗಳಾಗುವುದು ಅಥವಾ ಪ್ರಾಣ ಕಳಕೊಳ್ಳುವುದು-  ಎರಡೂ ಆಘಾತಕಾರಿ. ಇದನ್ನು ತಪ್ಪಿಸಲೇಬೇಕಿದೆ. ಬೇರು ಮಟ್ಟದಲ್ಲಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ.

No comments:

Post a Comment