Friday, September 1, 2023

ಸೌಜನ್ಯ: ಸಿಬಿಐ ಉತ್ತರಿಸಬೇಕಾದ ಪ್ರಶ್ನೆಗಳು





11 ವರ್ಷಗಳ ಬಳಿಕವೂ ಸೌಜನ್ಯ ಪ್ರಕರಣ ಸಾರ್ವಜನಿಕ ಚಳವಳಿಯಾಗಿ ಮತ್ತು ಮನೆ ಮನೆ ಮಾತಾಗಿ ಉಳಿದುಕೊಂಡಿರುವುದೇಕೆ?  ಪ್ರತಿದಿನ ಅತ್ಯಾಚಾರ-ಹತ್ಯೆ ನಡೆಯುತ್ತಿರುವ ದೇಶದಲ್ಲಿ ಈ ಪ್ರಕರಣ 11 ವರ್ಷಗಳ ಬಳಿಕವೂ ಹೋರಾಟದ ಕಾವು  ಉಳಿಸಿಕೊಂಡಿರುವುದಕ್ಕೆ ಕಾರಣಗಳೇನು? ಸೌಜನ್ಯ ತಾಯಿ ಈ 11 ವರ್ಷಗಳಲ್ಲೂ ಹೋರಾಟ ಕಣದಲ್ಲಿ ಸಕ್ರಿಯರಾಗಿದ್ದಾರೆ. ನ್ಯಾಯ  ಕೊಡಿ ಎಂದು ಊರೂರು ಸುತ್ತುತ್ತಿದ್ದಾರೆ. ಅವರು ಸರಕಾರದಿಂದ ಪರಿಹಾರ ಕೇಳುತ್ತಿಲ್ಲ. ಮನೆ ಕಟ್ಟಿ ಕೊಡಿ ಅನ್ನುತ್ತಿಲ್ಲ ಅಥವಾ ಮಕ್ಕಳ  ವಿದ್ಯಾಭ್ಯಾಸಕ್ಕೆ ಮತ್ತು ಜೀವನ ನಿರ್ವಹಣೆಗೆ ಸಹಾಯ ಮಾಡಿ ಎಂದು ಸರಕಾರವನ್ನಾಗಲಿ ಸಾರ್ವಜನಿಕ ರನ್ನಾಗಲಿ ವಿನಂತಿಸುತ್ತಿಲ್ಲ.  ಅವರ ಆಗ್ರಹ- ಮಗಳನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದವರಿಗೆ ಶಿಕ್ಷೆ ಕೊಡಿ ಅನ್ನೋದು. ಇಲ್ಲೂ ಒಂದು ವಿಶೇಷತೆ ಇದೆ.  ಸಾಮಾನ್ಯವಾಗಿ,


ಯಾವುದೇ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಆರೋಪಿಗಳನ್ನೇ ಸಂತ್ರಸ್ತರು ಮತ್ತು ಸಾರ್ವ ಜನಿಕರು ಅಪರಾಧಿಗಳೆಂದು ಭಾವಿಸುತ್ತಾರೆ. ಅವರಿಗೆ ಶಿಕ್ಷೆಯಾದರೆ ಸಂತ್ರಸ್ತ ಕುಟುಂಬ ನ್ಯಾಯ ಸಿಕ್ಕಿತು ಎಂದು ಹೇಳಿಕೊಳ್ಳುತ್ತದೆ. ದೆಹಲಿಯ ನಿರ್ಭಯ  ಪ್ರಕರಣ ಇದಕ್ಕೊಂದು ಉದಾಹರಣೆ. ಒಂದುವೇಳೆ, ಆರೋಪಿಗಳು ನಿರ್ದೋಷಿಗಳಾಗಿ ಬಿಡುಗಡೆಗೊಂಡರೆ ಸಂತ್ರಸ್ತ ಕುಟುಂಬ ನ್ಯಾಯ  ನಿರಾಕರಣೆಯ ವಿಷಾದಭಾವವನ್ನು ವ್ಯಕ್ತಪಡಿಸುತ್ತದೆ. ಆದರೆ ಸೌಜನ್ಯ ಪ್ರಕರಣದಲ್ಲಿ ಇದಕ್ಕೆ ತದ್ವಿರುದ್ಧ ಬೆಳವಣಿಗೆಗಳು ನಡೆದಿವೆ. ಪೊಲೀಸರು ಆರೋಪಿಯೆಂದು ಬಂಧಿಸಿರುವ ಸಂತೋಷ್ ರಾವ್‌ನನ್ನು ಈ ಕುಟುಂಬ ಅಪರಾಧಿ ಭಾವದಲ್ಲಿ ಕಂಡೇ ಇಲ್ಲ. ಬದಲು, ಆತನನ್ನೇ ಸಂತ್ರಸ್ತನಾಗಿ ಪರಿಗಣಿಸಿದೆ. ಆತನನ್ನು ಸಿಬಿಐ ನ್ಯಾಯಾಲಯ ನಿರ್ದೋಷಿಯೆಂದು ಹೇಳಿ ಬಿಡುಗಡೆಗೊಳಿಸಿರುವುದಕ್ಕೆ ಈ  ಕುಟುಂಬ ಎಂದೂ  ಅಸಮಾಧಾನ ವ್ಯಕ್ತಪಡಿಸಿಲ್ಲ. ತಮ್ಮ ಭಾವನೆಯನ್ನೇ ಸಿಬಿಐ ನ್ಯಾಯಾಲಯ ಪುರಸ್ಕರಿಸಿದೆ ಎಂಬ ಸಮಾಧಾನ ಬಿಟ್ಟರೆ  ಸಂತೋಷ್ ರಾವ್‌ನನ್ನು ಕಟಕಟೆಯಲ್ಲಿ ನಿಲ್ಲಿಸುವ ಮತ್ತು ಆತನಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸುವ ಯಾವ ಆಗ್ರಹವನ್ನೂ ಸೌಜನ್ಯ  ಕುಟುಂಬ ಮಾಡಿಲ್ಲ. ಇದು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಓರ್ವ ತಾಯಿ ಇಷ್ಟು ನಿಷ್ಠುರವಾಗಿ ಮತ್ತು  ಹಠಮಾರಿಯಾಗಿ ನಡಕೊಳ್ಳಲು ಕಾರಣವೇನು? ಅಪರಾಧಿಗಳು ಇಂಥವರೇ ಅನ್ನುವ ಖಚಿತತೆ ಅವರಲ್ಲಿ ಇದೆಯೇ? ಅಂಥದ್ದೊಂದು   ಭಾವ ಅವರಲ್ಲಿ ಹುಟ್ಟಿಕೊಳ್ಳಲು ಮತ್ತು ಅದು ಖಚಿತತೆಯನ್ನು ಪಡೆಯಲು ಕಾರಣವೇನು? ಸೌಜನ್ಯಳಿಗಿಂತ ಮೊದಲು ಆ ಪರಿಸರದಲ್ಲಿ  ನಡೆದ ಹಲವು ಅನುಮಾನಾಸ್ಪದ ಸಾವುಗಳು ಇದಕ್ಕೆ ಕಾರಣವೇ? ಅಂದಹಾಗೆ,

ಕೆಲವು ಪ್ರಶ್ನೆಗಳಿವೆ


1. ಆರೋಪಿ ಸಂತೋಷ್ ರಾವ್‌ನನ್ನು ಧರ್ಮಸ್ಥಳದ ಬಾಹುಬಲಿ ಮೂರ್ತಿಯ ಬೆಟ್ಟದ ಬಳಿಯಲ್ಲಿ ಹಿಡಿದು ಪೊಲೀಸರಿಗೆ  ಒಪ್ಪಿಸಿದವರಲ್ಲಿ ರವಿ ಪೂಜಾರಿ ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಇದನ್ನು ಹತ್ಯೆ ಎಂದು ಸ್ಥಳೀಯರು ಅನುಮಾನಿಸುತ್ತಾರೆ.  ಹಾಗೆಯೇ, ಇನ್ನೋರ್ವ ಗೋಪಾಲಕೃಷ್ಣ ಗೌಡ ಎಂಬವ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಆದರೆ, ಸಿಬಿಐ ಈ ಬಗ್ಗೆ ಯಾವ  ಅನುಮಾನವನ್ನಾಗಲಿ, ಗಮನವನ್ನಾಗಲಿ ನೀಡದಿರಲು ಕಾರಣವೇನು?


2. ಡಿಎನ್‌ಎ ತಜ್ಞ ವಿನೋದ್ ಕೆ. ಲಕ್ಕಪ್ಪ ಅವರು ನೀಡಿರುವ ಹೇಳಿಕೆಯ ಪ್ರಕಾರ, ಸೌಜನ್ಯ ಮೇಲೆ ಒಬ್ಬರಿಗಿಂತ ಹೆಚ್ಚಿನ ಸಂಖ್ಯೆಯ  ವ್ಯಕ್ತಿಗಳಿಂದ ಅತ್ಯಾಚಾರ ನಡೆದಿರಬಹುದು ಎಂದಿದೆ. ಸೌಜನ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಗುರಿಪಡಿಸಿದ ಬೆಳ್ತಂಗಡಿಯ  ತಾಲೂಕು ಜನರಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ   ಕೂಡಾ ಇದನ್ನು ಪುಷ್ಠೀಕರಿಸಿದ್ದಾರೆ. ಆದರೂ ಈ ವಿಷಯದಲ್ಲಿ ಸಿಬಿಐ ತನಿಖೆ  ನಡೆಸುವ ಉಮೇದು ತೋರಿಸದಿರುವುದಕ್ಕೆ ಕಾರಣವೇನು?


3. ಅಕ್ಟೋಬರ್ 10, 2012ರಂದು ಸೌಜನ್ಯಳ ಮೃತದೇಹ ನೇತ್ರಾವತಿ ಸ್ನಾನಭಟ್ಟರ ಪಕ್ಕದ ಮಣ್ಣಸಂಕ ಎಂಬಲ್ಲಿ ಮರದ  ಪೊದೆಯೊಂದರಲ್ಲಿ ಪತ್ತೆಯಾಗಿತ್ತು. ಇಲ್ಲಿಗೆ ಹೋಗಬೇಕಾದರೆ ನೀರಿನ ತೊರೆಯನ್ನು ಹಾಯಬೇಕಿದೆ. ಒಬ್ಬನೇ ಆರೋಪಿ ಆಕೆಯನ್ನು  ಎತ್ತಿಕೊಂಡು ನೀರಿನ ತೊರೆಯನ್ನು ದಾಟುವುದು ಕಷ್ಟ ಸಾಧ್ಯ ಎಂದು ಸನ್ನಿವೇಶಗಳು ಹೇಳುತ್ತವೆ. ಸಂತೋಷ್ ರಾವ್‌ನನ್ನು ನಿರ್ದೋಷಿ  ಎಂದ ನ್ಯಾಯಾಧೀಶರೂ ಇದನ್ನು ಗಮನಿಸಿದ್ದಾರೆ. ಆದರೆ ಸಿಬಿಐ ಈ ಸಾಮಾನ್ಯ ಸಂಗತಿಯ ಬಗ್ಗೆ ತನಿಖೆಯ ವೇಳೆ ಗಮನ ಕೊಡದಿರುವುದಕ್ಕೆ ಕಾರಣವೇನು?


4. ಸೌಜನ್ಯ ಕಾಣೆಯಾದ ದಿನ ಆಸುಪಾಸಿನಲ್ಲಿ ತೀವ್ರ ಮಳೆ ಇತ್ತು ಎಂದು ಸಾಕ್ಷಿಗಳ ಹೇಳಿಕೆಯಲ್ಲಿದೆ. ಆದರೆ, ಹತ್ಯೆಗೀಡಾದ ಸೌಜನ್ಯಳ  ಬಟ್ಟೆಯಾಗಲಿ ಕಾಲೇಜಿನ ಬ್ಯಾಗ್ ಆಗಲಿ ಒದ್ದೆಯಾಗಿಲ್ಲ. ಅಂದರೆ, ಮೃತದೇಹ ಎಲ್ಲಿ ಪತ್ತೆಯಾಗಿತ್ತೋ ಅಲ್ಲಿ ಅತ್ಯಾಚಾರ ಮತ್ತು  ಹತ್ಯೆಯಾಗಿರಲು ಸಾಧ್ಯವಿಲ್ಲ ಎನ್ನುವುದನ್ನು ಇದು ಸ್ಪಷ್ಟಪಡಿಸುತ್ತವೆ. ಆದರೆ, ಈ ಬಗ್ಗೆ ಸಿಬಿಐ ಕುತೂಹಲ ತೋರದಿರಲು ಕಾರಣವೇನು?


5. ಸೌಜನ್ಯಳ ಜೊತೆ ಕಾಲೇಜಿನಿಂದ ಬಸ್‌ನಲ್ಲಿ ಬಂದವರ ಹೇಳಿಕೆಗಳು ಸಿಬಿಐ ದಾಖಲೆಗಳಲ್ಲಿ ಸಿಗುವುದಿಲ್ಲ ಎಂದು ಹೇಳ ಲಾಗುತ್ತಿದೆ.  ಸೌಜನ್ಯ ಜೊತೆ ಕೊನೆವರೆಗೂ ಇದ್ದ ಗೆಳತಿಯರ ಮಾತುಗಳು ತನಿಖೆಯಲ್ಲಿ ಪ್ರಮುಖ ಪಾತ್ರ ನಿಭಾಯಿಸಬಹುದು. ಅಲ್ಲದೇ, ಬೆಳ್ತಂಗಡಿ  ಪೊಲೀಸರು ಮತ್ತು ಸಿಐಡಿ ದಾಖಲಿಸಿದ ಹೇಳಿಕೆಗಳನ್ನು ಸಿಬಿಐ ಮರುಪರಿಶೀಲನೆಗೆ ಒಳಪಡಿಸಿಲ್ಲ ಎಂದೂ
ಹೇಳಲಾಗುತ್ತಿದೆ. ಯಾಕೆ ಹೀಗಾಯಿತು?


6. ಸೌಜನ್ಯ ಮೃತದೇಹ ಸಿಕ್ಕ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಮೊಬೈಲ್ ಸಂಖ್ಯೆಗಳ ಟ್ರೇಸ್ ನಡೆದಿದೆಯೇ? ಇಲ್ಲ ಅನ್ನುತ್ತಿವೆ ಮಾಹಿತಿಗಳು.  ಆರೋಪಿಗಳನ್ನು ಪತ್ತೆ ಹಚ್ಚುವುದಕ್ಕೆ ಇದು ಸುಲಭ ವಿಧಾನ.


7. ಯೋನಿ ದ್ರವ ಅಥವಾ ವೆಜೈನಲ್ ಸ್ವಾಬ್ ಅನ್ನು ಅತ್ಯಾಚಾರದ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತದೆ. ವೈದ್ಯರು ಇದನ್ನು  ಶೇಖರಣೆ ಮಾಡಿ, ಒಣಗಿಸಿ ಪ್ಯಾಕ್ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಆದರೆ, ಇಲ್ಲಿ ಪರೀಕ್ಷೆಗೆ ಕಳುಹಿಸಲಾದ  ವೆಜೈನಲ್ ಸ್ವಾಬ್‌ನಲ್ಲಿ ಫಂಗಸ್ ಬಂದಿತ್ತು ಮತ್ತು ಆ ಕಾರಣದಿಂದ ಪರೀಕ್ಷೆಯಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ ಎಂದು ವರದಿ ಇದೆ.  ಪ್ರಮುಖ ಸಾಕ್ಷ್ಯವಾಗಿದ್ದ ವೆಜೈನಲ್ ಸ್ವಾಬ್‌ನ ಬಗ್ಗೆ ವೈದ್ಯಾಧಿಕಾರಿ ಇಲ್ಲಿ ನಿರ್ಲಕ್ಷ್ಯ  ವಹಿಸಿದ್ದು ಯಾಕೆ?

ಹಾಗಂತ,


ಸಿಬಿಐ ತನಿಖೆಯ ಬಗ್ಗೆ ಹೈಕೋರ್ಟು ಅಸಮಾಧಾನ ವ್ಯಕ್ತ ಪಡಿಸಿತ್ತು. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪ್ರಕರಣ ಮರು ತನಿಖೆ  ನಡೆಸಬೇಕೆಂದು ಸೌಜನ್ಯ ತಂದೆ ಚಂದಪ್ಪ ಗೌಡ ಸಲ್ಲಿಸಿದ್ದ ಅರ್ಜಿಯ ಮೇಲೆ ವಿಚಾರಣೆ ನಡೆಸುತ್ತಾ ನ್ಯಾಯಮೂರ್ತಿ ಅರವಿಂದ್  ಕುಮಾರ್ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ಈ ಪ್ರಕರಣದ ಆರಂಭದಲ್ಲಿ ತನಿಖೆ ನಡೆಸಿದ್ದ ಬೆಳ್ತಂಗಡಿ ಪೊಲೀಸರ ಮುಂದೆ  ಹರೀಶ್ ಮತ್ತು ಗೋಪಾಲ್ ಎಂಬವರು ಸಾಕ್ಷ್ಯ  ನುಡಿದಿದ್ದರು. ಆ ಬಳಿಕ ತನಿಖೆ ಕೈಗೆತ್ತಿಕೊಂಡ ಸಿಬಿಐಯು ಅಧೀನ ನ್ಯಾಯಾಲಯಕ್ಕೆ  ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆದರೆ ಹರೀಶ್ ಮತ್ತು ಗೋಪಾಲ್ ಹೇಳಿಕೆಗಳೂ ಸೇರಿದಂತೆ ಪ್ರಾಥಮಿಕ ಹಂತದಲ್ಲಿ ಪೊಲೀಸರು  ಸಂಗ್ರಹಿಸಿದ್ದ ಹಲವು ಅಂಶಗಳನ್ನು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿರಲಿಲ್ಲ. ಹೀಗಾಗಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪ್ರಕರಣದ ಮರು ತನಿಖೆ ನಡೆಸಬೇಕೆಂದು ಚಂದಪ್ಪ ಗೌಡ ಕೋರಿದ್ದರು. ಇದನ್ನು ಆಲಿಸಿದ ಅರವಿಂದ್ ಕುಮಾರ್  ನೇತೃತ್ವದ ಏಕ ಸದಸ್ಯ ಪೀಠ, ಸಿಬಿಐ ತನಿಖಾ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ‘ಪ್ರತಿಷ್ಠಿತ ತನಿಖಾ ಸಂಸ್ಥೆಯಾಗಿರುವ  ನಿಮ್ಮಿಂದ ಇಂಥ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪೊಲೀಸರ ತನಿಖೆಯಲ್ಲಿ ನ್ಯಾಯ ಸಿಗುವುದಿಲ್ಲ ಎಂಬ ಕಾರಣಕ್ಕೆ ಈ ತನಿಖೆಯನ್ನು ಮೊದಲು ಸಿಐಡಿಗೆ ಮತ್ತು ನಂತರ ಸಿಬಿಐಗೆ ವಹಿಸಲಾಗಿದೆ. ಆದರೆ ಇದೀಗ ಸಿಬಿಐ ತನಿಖೆಯನ್ನೂ ಅನುಮಾನದಿಂದ  ನೋಡುವಂತಾಗಿದೆ. ನಿಮ್ಮಿಂದ ಸಮರ್ಪಕ ತನಿಖೆ ನಡೆಸಲು ಸಾಧ್ಯವಿಲ್ಲ ಎಂದಾದರೆ ನ್ಯಾಯಾಲಯವೇ ವಿಶೇಷ ತನಿಖಾ ತಂಡ ರಚಿಸಲಿದೆ...’ ಎಂದು ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಷ್ಟಕ್ಕೂ,


ಸೌಜನ್ಯ ಪ್ರಕರಣ ಒಂದು ಚಳವಳಿಯಾಗಿ ಬೆಳೆದು ನಿಂತಿರುವುದಕ್ಕೆ ಆಕೆ ಬದುಕಿ ಬಾಳಿದ ಪರಿಸರದಲ್ಲಿ ಈ ಹಿಂದೆ ನಡೆದಿರುವ ಅ ನುಮಾನಾಸ್ಪದ ಸಾವುಗಳೇ ಪ್ರೇರಣೆ ಎಂದು ಅನಿಸುತ್ತೆ. ಹಾಗಂತ, ಆ ಅನುಮಾನಾಸ್ಪದ ಸಾವುಗಳು ಸಹಜ ಸಾವುಗಳೇ ಆಗಿದ್ದಿರಬಹುದು  ಮತ್ತು ಅವು ಹತ್ಯೆ ಆಗಿಲ್ಲದೇ ಇರಬಹುದು. ಆದರೆ, ಇವುಗಳನ್ನು ಸ್ಪಷ್ಟಪಡಿಸಬೇಕಾದ ವ್ಯವಸ್ಥೆ ಅದರಲ್ಲಿ ಎಡವಿದಾಗ ಸಾರ್ವಜನಿಕ ಅನುಮಾನಗಳು ಬಲ ಪಡೆಯುತ್ತಾ ಹೋಗುತ್ತವೆ. ಪದೇ ಪದೇ ಇಂಥವು ನಡೆಯುವಾಗ ಮತ್ತು ಅದಕ್ಕೆ ಯಾವುದೇ ಸ್ಪಷ್ಟೀಕರಣ ಇಲ್ಲದೇ  ಹೋದಾಗ ಜನ ಆಡಿಕೊಳ್ಳತೊಡಗುತ್ತಾರೆ. ಬಳಿಕ ಅವು ಅಸಮಾಧಾನವಾಗಿ ಮಾರ್ಪಡುತ್ತದೆ. ನಂತರ ಅದು ಆಕ್ರೋಶವಾಗುತ್ತದೆ.  ಸೌಜನ್ಯ ಪ್ರಕರಣ 11 ವರ್ಷಗಳ ಬಳಿಕವೂ ಯಾಕೆ ಕಾವು ಉಳಿಸಿಕೊಂಡಿದೆ ಅನ್ನುವು ದಕ್ಕೆ ಇಲ್ಲೆಲ್ಲೋ  ಉತ್ತರ ಇದೆ. ಎಲ್ಲಿಯ  ವರೆಗೆಂದರೆ, ಈ ನ್ಯಾಯ ಬೇಡಿಕೆಯ ಚಳವಳಿಯಿಂದ ಎಡ, ಬಲ, ಮಧ್ಯಮ ಯಾವ ಪಂಥವೂ ಅಂತರ ಕಾಯ್ದುಕೊಳ್ಳದಂಥ ಪರಿಸ್ಥಿತಿ  ನಿರ್ಮಾಣವಾಗಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವ ಸಿಬಿಐಯ ತೀರ್ಪಿನ ವಿರುದ್ಧ ಅಸಮಾಧಾನ ಸೂಚಿಸಿ ಬಿಜೆಪಿ ಶಾಸಕರೇ  ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸುತ್ತಾರೆಂದರೆ ಮತ್ತು ಪ್ರಕರಣದ ಮರು ತನಿಖೆ ಆಗ್ರಹಿಸುತ್ತಾರೆಂದರೆ, ಸೌಜನ್ಯ ಪರ  ಹೋರಾಟ ಸಾರ್ವಜನಿಕವಾಗಿ ಬೀರಿರುವ ಪ್ರಭಾವವನ್ನು ಊಹಿಸಬಹುದು.


ಸದ್ಯದ ಸಮಸ್ಯೆ ಏನೆಂದರೆ, ವಿಶ್ವಾಸಾರ್ಹತೆ ಎಂಬ ಬಹು ಅಮೂಲ್ಯ ಗುಣಕ್ಕೆ ತೀವ್ರ ಹಾನಿ ತಟ್ಟಿರುವುದು. ರಾಜಕಾರಣಿಯಾಗಲಿ,  ಸಾಮಾಜಿಕ ಮುಂದಾಳುವಾಗಲಿ, ಅರ್ಚಕನಾಗಲಿ, ಧರ್ಮ ಪಂಡಿತನಾಗಲಿ, ಮೌಲಾನಾ ಆಗಲಿ... ಯಾರೂ ಇವತ್ತು ಪೂರ್ಣ  ಪ್ರಮಾಣದಲ್ಲಿ ವಿಶ್ವಾಸಯೋಗ್ಯರಾಗಿ ಉಳಿದಿಲ್ಲ. ಜನರು ಒಂದು ಅನುಮಾನದ ಕಣ್ಣಿಟ್ಟುಕೊಂಡೇ ಎಲ್ಲರನ್ನೂ ತೂಗತೊಡಗಿದ್ದಾರೆ.  ವಿಶ್ವಾಸಾರ್ಹತೆ ಎಂಬ ಮೌಲ್ಯ ಕುಸಿದು ಹೋದಾಗ ಎದುರಾಗುವ ಹಲವು ಸವಾಲುಗಳಲ್ಲಿ ಇದೂ ಒಂದು. ಆದರೆ,


ಈ ಎಲ್ಲರ ನಡುವೆ ಸೌಜನ್ಯ ತಾಯಿ ನಕ್ಷತ್ರದಂತೆ ಮಿನುಗು ತ್ತಿದ್ದಾರೆ. ಅವರೆಡೆಗೆ ಕೈಯೆತ್ತಿ ತೋರಿಸಲು ಒಂದು ನರಪಿಳ್ಳೆಗೂ  ಸಾಧ್ಯವಾಗದಂಥ ಪ್ರಾಮಾಣಿಕತೆ ಮತ್ತು ಸಜ್ಜನಿಕೆಯನ್ನು ಪ್ರದರ್ಶಿಸಿದ್ದಾರೆ. ಈ 11 ವರ್ಷಗಳ ಉದ್ದಕ್ಕೂ ಆ ತಾಯಿ ನಡೆದುಕೊಂಡು  ಬಂದ ರೀತಿ, ತೋಡಿಕೊಂಡ ನೋವು ಮತ್ತು ಕಾಲಿಗೆ ಚಕ್ರ ಕಟ್ಟಿಕೊಂಡು ತನ್ನ ಮಗಳಿಗಾಗಿ ಓಡಾಡಿದ ರೀತಿ ಅನನ್ಯ ಮತ್ತು ಓರ್ವ  ತಾಯಿಯಿಂದ ಮಾತ್ರ ನಿರೀಕ್ಷಿಸಬಹುದಾದ ಕೆಚ್ಚೆದೆ ಅದು. ಈ ಹಿಂದೆ ದೆಹಲಿ ನಿರ್ಭಯ ಪ್ರಕರಣದಲ್ಲೂ ಇಂಥದ್ದೇ  ಬೆಳವಣಿಗೆ ನಡೆದಿತ್ತು.  ನಿರ್ಭಯ ತಾಯಿ ಗುರಿ ಮುಟ್ಟುವವರೆಗೆ ಹೋರಾಡಿದ್ದರು. ಅಪರಾಧಿಗಳಿಗೆ ಶಿಕ್ಷೆಯಾಗುವವರೆಗೆ ವಿರಮಿಸಲಾರೆ ಎಂಬಂತೆ   ಸಕ್ರಿಯರಾಗಿದ್ದರು. ಸೌಜನ್ಯ ತಾಯಿಯಲ್ಲೂ ಅದೇ ಖಚಿತತೆ ಮತ್ತು ಹಠ ಎದ್ದು ಕಾಣುತ್ತಿದೆ. ಓರ್ವ ಹೆಣ್ಣು ಪರಿಸ್ಥಿತಿಗೆ ಹೊಂದಿಕೊಂಡು   ಹೇಗೆ ಗೃಹಿಣಿಯೂ ಆಗಬಲ್ಲಳು ಮತ್ತು ಹೋರಾಟಗಾರ್ತಿಯೂ ಆಗಬಲ್ಲಳು ಎಂಬುದಕ್ಕೆ ಸೌಜನ್ಯ ತಾಯಿ ಅತ್ಯುತ್ತಮ ನಿದರ್ಶನ.


ಅತ್ಯಾಚಾರ ಎಂಬುದು ದರೋಡೆ, ಕಳ್ಳತನ, ವಂಚನೆ ಇತ್ಯಾದಿಗಳಂಥಲ್ಲ. ಹೆಚ್ಚಿನ ವೇಳೆ ಅತ್ಯಾಚಾರಿಗಳು ಹೆಣ್ಣನ್ನು ಸಾಯಿಸುತ್ತಾರೆ.  ಒಂದುವೇಳೆ, ಸಾಯಿಸದೇ ಬಿಟ್ಟರೂ ಅತ್ಯಾಚಾರವನ್ನು ಜೀವನಪೂರ್ತಿ ಹೊತ್ತುಕೊಂಡು ಓರ್ವ ಯುವತಿ ಬದುಕುವುದು ಸುಲಭ ಅಲ್ಲ.  ಅತ್ಯಾಚಾರದ ಬಗ್ಗೆ ದೂರು ಕೊಟ್ಟರೆ ಸಾರ್ವಜನಿಕರಿಗೆ ಅತ್ಯಾಚಾರದ ಬಗ್ಗೆ ಗೊತ್ತಾಗುತ್ತದೆ. ಅದರಿಂದಾಗಿ ನೆರೆಕರೆಯವರು ಮತ್ತು  ಕುಟುಂಬಸ್ಥರು ಅತ್ಯಾಚಾರ ಸಂತ್ರಸ್ತೆ ಎಂಬ ಹಣೆಪಟ್ಟಿಯೊಂದನ್ನು ಅಂಟಿಸಿ ಅನುಕಂಪವನ್ನೋ ಅನುಮಾನವನ್ನೋ ನಿತ್ಯ  ಸುರಿಸುತ್ತಿರುತ್ತಾರೆ. ವಿವಾಹದ ಸಂದರ್ಭದಲ್ಲಿ ಸವಾಲು ಎದುರಾಗುತ್ತದೆ. ಅಲ್ಲದೇ, ದೂರು ಕೊಟ್ಟ ಬಳಿಕ ಅಪರಾಧಿಗಳಿಂದ ಜೀವ  ಬೆದರಿಕೆಯನ್ನೂ ಎದುರಿಸಬೇಕಾಗುತ್ತದೆ. ಎಲ್ಲಿ, ಯಾವಾಗ, ಏನಾಗುತ್ತೋ ಎಂಬ ಭಯವೊಂದನ್ನು ಎದೆಯೊಳಗಿಟ್ಟುಕೊಂಡೇ  ನಡೆದಾಡಬೇಕಾಗುತ್ತದೆ. ಇಷ್ಟೆಲ್ಲಾ ಆಗಿಯೂ ಕೇಸು ಬಿದ್ದು ಹೋದರೆ ಸಂಕಟದ ಮೇಲೆ ಸಂಕಟ.


ಕಳೆದು ಹೋದ ಮಗಳಿಗಾಗಿ ದಣಿವರಿಯದೇ ಹೋರಾಡುತ್ತಿರುವ ಆ ತಾಯಿಗೆ ಯಶಸ್ಸು ಸಿಗಲಿ. ಅಪರಾಧಿಗಳಿಗೆ ಶಿಕ್ಷೆಯಾಗಲಿ.

No comments:

Post a Comment