Wednesday, January 31, 2018

ರದ್ದಾಗಬೇಕಾದುದು ಸಬ್ಸಿಡಿಯಲ್ಲ, ವಿಚಾರಧಾರೆ

ಇವನ್ನೆಲ್ಲ ತಪ್ಪು ಎಂದು ಹೇಳುತ್ತಿಲ್ಲ
 1. ಹಿರಿಯ ನಾಗರಿಕರಿಗಾಗಿ 'ಮುಖ್ಯಮಂತ್ರಿ ತೀರ್ಥದರ್ಶನ್ ಯೋಜನಾ' ಎಂಬ ತೀರ್ಥಯಾತ್ರೆ ಯೋಜನೆಯನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‍ರು 2012ರಲ್ಲಿ ಪ್ರಕಟಿಸಿದರು. ಮಥುರಾ, ಸಂತ ಕಬೀರರ ಜನ್ಮಸ್ಥಳ, ಕೇರಳದಲ್ಲಿರುವ ಸೈಂಟ್ ಥಾಮಸ್ ಚರ್ಚ್, ಅಯೋಧ್ಯೆ ಮುಂತಾದ ಕಡೆ ತೀರ್ಥಯಾತ್ರೆ ಕೈಗೊಳ್ಳುವವರಿಗೆ ಈ ಯೋಜನೆಯಡಿ ಸಬ್ಸಿಡಿ (ರಿಯಾಯಿತಿ) ಲಭಿಸುತ್ತದೆ.
        – ಸ್ಕ್ರೋಲ್ ಡಾಟ್ ಇನ್ 2017 ಜನವರಿ 14.
 2. ಚೀನಾದಲ್ಲಿರುವ ಕೈಲಾಸ ಮತ್ತು ಮಾನಸ ಸರೋವರಕ್ಕೆ ತೀರ್ಥಯಾತ್ರೆ ಕೈಗೊಳ್ಳುವವರಿಗೆ ಮಧ್ಯಪ್ರದೇಶ ಸರಕಾರವು 50 ಸಾವಿರ ರೂಪಾಯಿ ಸಬ್ಸಿಡಿಯನ್ನು ನೀಡುತ್ತದೆ. ಅಲ್ಲದೇ, ಪಾಕಿಸ್ತಾನದಲ್ಲಿರುವ ನಂಕಣ ಸಾಯಿಬ್ ಮಂದಿರ ಮತ್ತು ಹಿಂಗಲಜ್ ಮಠ್ ಮಂದಿರ, ಕಾಂಬೋಡಿಯಾದಲ್ಲಿರುವ ಅಂಗ್‍ಕೋರ್ ವಾಟ್, ಶ್ರೀಲಂಕಾದಲ್ಲಿರುವ ಸೀತಾ ಮಂದಿರ ಮತ್ತು ಅಶೋಕ ವಾಟಿಕಾ ತೀರ್ಥಯಾತ್ರೆಗಳಿಗೆ  ಸಬ್ಸಿಡಿಯನ್ನು ನೀಡಿ ಪ್ರೋತ್ಸಾಹಿಸುತ್ತದೆ.
       – ದ ಇಂಡಿಯನ್ ಎಕ್ಸ್ ಪ್ರೆಸ್‍ನಲ್ಲಿ ಮಿಲಿಂದ್ ಘಟ್‍ವಾಯಿ 2015, ಮಾರ್ಚ್ 14
  3. ಗುಜರಾತ್ ಸರಕಾರವು ಕೈಲಾಸ್ – ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಪ್ರತಿಯೋರ್ವ ಯಾತ್ರಿಕನಿಗೆ 50 ಸಾವಿರ ರೂಪಾಯಿ ¸ ಸಬ್ಸಿಡಿಯನ್ನು ನೀಡುತ್ತದೆ. ಅದೇವೇಳೆ, ಕರ್ನಾಟಕ ಸರಕಾರವು 25 ಸಾವಿರ ರೂಪಾಯಿಯನ್ನು ಸಬ್ಸಿಡಿಯಾಗಿ ನೀಡುತ್ತದೆ. ಮಾತ್ರವಲ್ಲ, ಗುಜರಾತ್‍ನ ಮಾದರಿಯಲ್ಲಿ ಈ ಸಬ್ಸಿಡಿ ಮೊತ್ತವನ್ನು 50 ಸಾವಿರಕ್ಕೆ ಹೆಚ್ಚಿಸುವಂತೆ ಮುಜರಾಯಿ ಇಲಾಖೆಯು ಸರಕಾರಕ್ಕೆ ಶಿಫಾರಸು ಮಾಡಿದೆ.
      – ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ 2013, ಫೆಬ್ರವರಿ 5
4. ಉತ್ತರ ಪ್ರದೇಶದಿಂದ ಕೈಲಾಸ – ಮಾನಸ ಸರೋವರಕ್ಕೆ ಯಾತ್ರೆಗೈಯಲು ಸುಮಾರು 1 ಲಕ್ಷ ರೂಪಾಯಿ ಬೇಕಾಗುತ್ತದೆ. ಈ ಮೊತ್ತದ ಅರ್ಧದಷ್ಟು ಹಣವನ್ನು ಸಬ್ಸಿಡಿಯಾಗಿ ನೀಡಲು (50 ಸಾವಿರ ರೂ.) ಸರಕಾರ ನಿರ್ಧರಿಸಿದೆ. ಉತ್ತರ ಪ್ರದೇಶದಿಂದ ಪ್ರತೀ ವರ್ಷ ಈ ಯಾತ್ರೆಗಾಗಿ 16 ತಂಡಗಳು ಹೊರಡುತ್ತವೆ. ಪ್ರತಿಯೊಂದು ತಂಡದಲ್ಲಿ 60 ಮಂದಿ ಇರುತ್ತಾರೆ.
     – ‘ಮೈಲ್ ಆನ್‍ಲೈನ್ ಇಂಡಿಯಾ’ದಲ್ಲಿ ಪಿಯೂಶ್ ಶ್ರೀವಾಸ್ತವ್  2012, ಜನವರಿ 22
5. ತಮಿಳುನಾಡಿನ ಜಯಲಲಿತಾ ಸರಕಾರವು ಚೀನಾದಲ್ಲಿರುವ ಮಾನಸ ಸರೋವರ ಮತ್ತು ನೇಪಾಳದಲ್ಲಿರುವ ಮುಕ್ತಿನಾಥ್ ಯಾತ್ರೆಗೆ  ಸಬ್ಸಿಡಿಯನ್ನು ನೀಡಲು ತೀರ್ಮಾನಿಸಿದೆ. ತಮಿಳುನಾಡಿನಿಂದ ಮಾನಸ ಸರೋವರಕ್ಕೆ ಯಾತ್ರೆಗೈಯಲು ಸುಮಾರು 1.40 ಲಕ್ಷ ರೂಪಾಯಿ  ಬೇಕಾಗುತ್ತದೆ. ಇದರಲ್ಲಿ 40 ಸಾವಿರ ರೂಪಾಯಿಯನ್ನು ಸರಕಾರ ಸಬ್ಸಿಡಿಯಾಗಿ ನೀಡುತ್ತದೆ. ಮುಕ್ತಿನಾಥ್ ಯಾತ್ರೆಗೆ ಸುಮಾರು 25 ಸಾವಿರ ರೂಪಾಯಿ ಖರ್ಚಾಗಲಿದ್ದು, ಇದರಲ್ಲಿ 10 ಸಾವಿರ ರೂಪಾಯಿಯನ್ನು ಸರಕಾರ ಸಬ್ಸಿಡಿ ರೂಪದಲ್ಲಿ ಭರಿಸುತ್ತದೆ. ಅಲ್ಲದೇ ಇಸ್ರೇಲ್‍ನಲ್ಲಿರುವ ಜೆರುಸಲೇಮ್ ಯಾತ್ರೆಗೂ ತಮಿಳುನಾಡು ಸರಕಾರ ಸಬ್ಸಿಡಿಯನ್ನು ನೀಡುತ್ತದೆ.
     – ದಿ ಹಿಂದೂ 2012, ಆಗಸ್ಟ್ 4
6. ಆಗ್ರಾದಲ್ಲಿ ದೀಪಾವಳಿಯನ್ನು ಆಯೋಜಿಸುವುದಕ್ಕಾಗಿ ಉತ್ತರ ಪ್ರದೇಶ ಸರಕಾರವು 165 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿದೆ. ದೀಪಾವಳಿ ಆಚರಣೆಗಾಗಿ ಅಗತ್ಯವಾಗಿರುವ ತಯಾರಿ ಮತ್ತು ಅಲಂಕಾರಕ್ಕಾಗಿ ಈ ಮೊತ್ತವನ್ನು ಬಳಸಲಾಗುತ್ತದೆ.
     – ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ 2017, ಅಕ್ಟೋಬರ್ 17
7. ಮಧ್ಯಪ್ರದೇಶದ ಉಜ್ಜೈನಿಯಲ್ಲಿ 12 ವರ್ಷಗಳಿಗೊಮ್ಮೆ ಸಿಂಹಾಸ್ತ ಕುಂಭಮೇಳ ನಡೆಯುತ್ತದೆ. ಕೇಂದ್ರ ಸರಕಾರವು 2016 ರಲ್ಲಿ ಈ ಕುಂಭಮೇಳಕ್ಕಾಗಿ 100 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿದೆ. ಮಧ್ಯಪ್ರದೇಶದ ಸರಕಾರವಂತೂ 3,400 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. 2014ರಲ್ಲಿ ಕೇಂದ್ರ ಸರಕಾರವು ಉತ್ತರ ಪ್ರದೇಶದ ಅಲಹಾಬಾದ್ ಕುಂಭಮೇಳಕ್ಕೆ 1150 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ ಮತ್ತು ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರಕಾರವು 11 ಕೋಟಿ ರೂಪಾಯಿಯನ್ನು ವ್ಯಯಿಸಿದೆ.
    – ಸ್ಕ್ರೋಲ್ ಡಾಟ್ ಇನ್- 2017 ಜನವರಿ 14
8. 2015 ಜುಲೈ 14ರಂದು ನಡೆದ ನಾಶಿಕ್ ಕುಂಭಮೇಳಕ್ಕೆ ಮಹಾರಾಷ್ಟ್ರ ಸರಕಾರವು 2500 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿದೆ.
     – ದ ಇಂಡಿಯನ್ ಎಕ್ಸ್ ಪ್ರೆಸ್‍ನಲ್ಲಿ ಶುಭಾಂಗಿ ಖಾಪ್ರೆ 2015, ಜುಲೈ 7.
ಇವಲ್ಲದೇ ಛತ್ತೀಸ್‍ಗಢ, ದೆಹಲಿ, ಉತ್ತರಾಖಂಡ ಮತ್ತಿತರ ರಾಜ್ಯಗಳೂ ತೀರ್ಥಯಾತ್ರೆಗಳಿಗೆ ಸಬ್ಸಿಡಿಯನ್ನು ನೀಡಿ ಪ್ರೋತ್ಸಾಹಿಸುತ್ತದೆ. ಹರಿದ್ವಾರ್, ಅಲಹಾಬಾದ್, ನಾಶಿಕ್ ಮತ್ತು ಉಜ್ಜೈನಿಗಳಲ್ಲಿ ನಡೆಯುವ ಮಹಾ ಕುಂಭಮೇಳಗಳಿಗಂತೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ವ್ಯಯಿಸುವ ಮೊತ್ತ ಅಗಾಧವಾದುದು. ಹಾಗಂತ ಇವನ್ನೆಲ್ಲ ತಪ್ಪು ಅನ್ನುತ್ತಿಲ್ಲ. ಆದರೆ, ಇಷ್ಟಿದ್ದೂ ಹಜ್ಜ್ ಸಬ್ಸಿಡಿ ಮಾತ್ರ ಯಾಕೆ ಅಪರಾಧಿ ಎನಿಸಿಕೊಂಡಿದೆ? ತುಷ್ಟೀಕರಣ, ಮುಸ್ಲಿಮ್ ಓಲೈಕೆ, ಓಟ್ ಬ್ಯಾಂಕ್ ರಾಜಕಾರಣ ಎಂಬಿತ್ಯಾದಿ ತಿವಿತಗಳು ಕೇವಲ ಹಜ್ಜ್ ಸಬ್ಸಿಡಿಯನ್ನು ಮಾತ್ರ ಯಾಕೆ ಬೆನ್ನಟ್ಟಿಕೊಂಡು ಬರುತ್ತಿವೆ? 2017ರಲ್ಲಿ ಕೇಂದ್ರ ಸರಕಾರವು ಹಜ್ಜ್ ಸಬ್ಸಿಡಿಯಾಗಿ 450 ಕೋಟಿ ರೂಪಾಯಿಯನ್ನು ನೀಡಿದೆ. ಅಂದರೆ, ಪ್ರತಿಯೊಬ್ಬ ಹಾಜಿಗೆ ತಲಾ 36 ಸಾವಿರ ರೂಪಾಯಿಯನ್ನು ಸರಕಾರವು ಖರ್ಚು ಮಾಡಿದಂತಾಯಿತು. ಹಾಗಂತ, ಇಲ್ಲೂ ಕೆಲವು ಪ್ರಶ್ನೆಗಳಿವೆ. ಸರಕಾರ ನೀಡುವ ಈ ಸಬ್ಸಿಡಿಯಿಂದ ಯಾತ್ರಾರ್ಥಿಗಳಿಗೆ ಆಗುವ ಪ್ರಯೋಜನವೆಷ್ಟು, ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಆಗುವ ಲಾಭವೆಷ್ಟು, ಸಬ್ಸಿಡಿ ಪಡೆದು ಹಜ್ಜ್ ಯಾತ್ರೆ ನಿರ್ವಹಿಸುವುದು ಧರ್ಮಸಮ್ಮತವೇ ಇತ್ಯಾದಿ ಪ್ರಶ್ನೆಗಳು ಹಲವು ಬಾರಿ ಚರ್ಚೆಗೊಳಾಗಾಗಿವೆ. ಮಾತ್ರವಲ್ಲ, ಹಿಂದೂ ಸಮುದಾಯದ ತೀರ್ಥಯಾತ್ರೆಗಳಿಗೆ ಇಲ್ಲಿನ ಸರಕಾರಗಳು ನೀಡುವ ಸಬ್ಸಿಡಿಯ ಎದುರು ಹಜ್ಜ್ ಸಬ್ಸಿಡಿ ಎಂಬುದು ತೀರಾ ತೀರಾ ಜುಜುಬಿ ಎಂದೂ ಸಾಬೀತಾಗಿದೆ.
      ಸದ್ಯ ಈ ಪ್ರಶ್ನೆಗಳು ಮತ್ತು ಈ ಜುಜುಬಿಗಳ ಹೊರಗೆ ನಿಂತು ಈ ಸಬ್ಸಿಡಿ ಚರ್ಚೆಯ ಸುತ್ತ ಪ್ರಾಮಾಣಿಕ ಅವಲೋಕನವೊಂದು ನಡೆಯಬೇಕು. ತೀವ್ರ ಧರ್ಮಶ್ರದ್ಧೆಯುಳ್ಳ ದೇಶವೊಂದರಲ್ಲಿ ತೀರ್ಥಯಾತ್ರೆಗೆ ಸಬ್ಸಿಡಿ ನೀಡುವುದು ಅಪರಾಧವೇ? ತುಷ್ಟೀಕರಣವೇ? ಸೆಕ್ಯುಲರ್ ವಿರೋ ಧಿಯೇ? ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸೆಕ್ಯುಲರ್ ಎಂಬ ಪದಕ್ಕೆ ಇರುವ ವ್ಯಾಖ್ಯಾನವು ಭಾರತದಲ್ಲಿಲ್ಲ. ಅಲ್ಲಿ ಆಡಳಿತ ಮತ್ತು ಧರ್ಮ ಬೇರ್ಪಟ್ಟು ನಿಂತಿದ್ದರೆ ಭಾರತದಲ್ಲಿ ಇವೆರಡೂ ಜೊತೆ ಜೊತೆ ಯಾಗಿಯೇ ಸಾಗುತ್ತಿವೆ. ಧರ್ಮವನ್ನು ಇಲ್ಲಿ ಸೆಕ್ಯುಲರ್‍ವಾದದ ಭಾಗವಾಗಿಯೇ ಸ್ವೀಕರಿಸಲಾಗಿದೆ. ಈ ಕಾರಣದಿಂದಲೇ ಕುಂಭ ಮೇಳಗಳು, ದೀಪಾವಳಿಗಳು ಸಹಿತ ವಿವಿಧ ಧಾರ್ಮಿಕ ಕಾರ್ಯಗಳಿಗೆ ಸರಕಾರಗಳು ಭಾರೀ ಮೊತ್ತದ ಹಣವನ್ನು ಬಿಡುಗಡೆಗೊಳಿಸುತ್ತದೆ. ನಾಗರಿಕರ ಧಾರ್ಮಿಕ ¨ ಭಾವನೆಗಳನ್ನು ಗೌರವಿಸುವುದು ಮತ್ತು ಆರ್ಥಿಕವಾಗಿ ನೆರವಾಗುವುದನ್ನು ತನ್ನ ಕರ್ತವ್ಯವಾಗಿ ಸರಕಾರ ಪರಿಗಣಿಸುತ್ತದೆ ಅನ್ನುವುದೇ ಇದರರ್ಥ. ಆದರೂ ಹಜ್ಜ್ ಸಬ್ಸಿಡಿಯೇಕೆ ತುಷ್ಟೀಕರಣದ ಪಟ್ಟಿಯಲ್ಲಿ ಸೇರಿ ಕೊಂಡಿದೆ ಮತ್ತು ಉಳಿದ ತೀರ್ಥಯಾತ್ರೆಗಳಿಗೆ ನೀಡುವ ಸಬ್ಸಿಡಿಯನ್ನು ಯಾಕೆ ಯಾರೂ ತುಷ್ಟೀಕರಣದ ಪಟ್ಟಿಯಲ್ಲಿಟ್ಟು ನೋಡುತ್ತಿಲ್ಲ? ಹಜ್ಜ್ ಸಬ್ಸಿಡಿ ಸೆಕ್ಯುಲರ್ ವಿರೋಧಿ ಎಂದಾದರೆ ಉಳಿದ ಸಬ್ಸಿಡಿ ಗಳೂ ಸೆಕ್ಯುಲರ್ ವಿರೋಧಿಯೇ ಆಗಬೇಕಲ್ಲವೇ? ಹಜ್ಜ್ ಸಬ್ಸಿಡಿ ಯನ್ನು ರದ್ದು ಮಾಡುವುದರಿಂದ ಉಳಿಕೆಯಾಗುವ ಮೊತ್ತವನ್ನು ಮುಸ್ಲಿಮ್ ಸಮುದಾಯ ಅಭಿವೃದ್ಧಿಗೆ ಬಳಕೆ ಮಾಡು ವಂತೆಯೇ ಕೈಲಾಸ – ಮಾನಸ ಸರೋವರವೂ ಸೇರಿದಂತೆ ವಿವಿಧ ತೀರ್ಥ ಯಾತ್ರೆಗಳಿಗೆ ನೀಡುವ ಸಬ್ಸಿಡಿ ಮೊತ್ತವನ್ನು ರದ್ದುಪಡಿಸಿ ಉಳಿಕೆ ಮೊತ್ತವನ್ನು ಹಿಂದೂ ಸಮುದಾಯದ ಅಭಿವೃದ್ಧಿಗಾಗಿ ಬಳಸಬಹು ದಲ್ಲವೇ? ತುಷ್ಟೀಕರಣ ಅನ್ನುವ ಪದವನ್ನು ಯಾಕೆ ಏಕಮುಖವಾಗಿ ಬಳಸಲಾಗುತ್ತಿದೆ? ಅಂದಹಾಗೆ, ಸಬ್ಸಿಡಿ ಹಣದಲ್ಲಿ ಹಜ್ಜ್ ನಿರ್ವಹಿ ಸುವುದು ನ್ಯಾಯೋಚಿತವಲ್ಲ ಅನ್ನುವ ವಾದದೊಂದಿಗೆ ಮುಸ್ಲಿಮ್ ಸಮುದಾಯ ಸಬ್ಸಿಡಿ ರದ್ಧತಿಯನ್ನು ಸ್ವಾಗತಿಸಿದೆ. ನಿಜವಾಗಿ, ಇಂಥದ್ದೊಂದು ವಾದದೊಂದಿಗೆ ಸಬ್ಸಿಡಿ ರದ್ಧತಿಯನ್ನು ಮುಸ್ಲಿಮರು ಸ್ವಾಗತಿಸ ಬೇಕೆಂಬುದು ರದ್ದುಪಡಿಸಿದವರ ಬಯಕೆಯಾಗಿತ್ತು. ಮುಸ್ಲಿಮ್ ತಜ್ಞರೊಂದಿಗೆ ಸಮಾಲೋಚಿಸದೆಯೇ ತಯಾರಿಸಲಾದ ತ್ರಿವಳಿ ತಲಾಕ್ ಕಾನೂನಿನ ವಿಷಯದಲ್ಲೂ ಕೇಂದ್ರ ಸರಕಾರ ಇಂಥದ್ದೇ ವಾತಾವರಣವನ್ನು ಹುಟ್ಟು ಹಾಕಿತ್ತು. ತ್ರಿವಳಿ ತ ಲಾಕ್ ಇಸ್ಲಾಮ್‍ನಲ್ಲಿಲ್ಲ ಎಂಬುದೇ ಕೇಂದ್ರೀಯ ವಿಷಯವಾಗಿ, ಕಾನೂನಿನ ಅಪದ್ಧಗಳು ಚರ್ಚೆಯಾಗದಂತೆ ನೋಡಿಕೊಳ್ಳುವುದಕ್ಕೆ ಅದು ಶ್ರಮಿಸಿತ್ತು. ಮುಸ್ಲಿಮ್ ಸಮುದಾಯದ ಸುಧಾರಣೆಯ ದೃಷ್ಟಿಯಿಂದ ‘ತಲಾಕ್ ಕಾನೂನ’ನ್ನು ಜಾರಿಗೆ ತರಲಾಗುತ್ತಿದೆ ಎಂದು ಅದು ಸಮರ್ಥಿಸಿತ್ತು. ಈಗ ಸಬ್ಸಿಡಿ ರದ್ದು ಕ್ರಮವನ್ನೂ ಹೆಚ್ಚೂ ಕಡಿಮೆ ಅದೇ ಧಾಟಿಯಲ್ಲಿ ಸಮರ್ಥಿಸಲಾಗುತ್ತಿದೆ. ಸಬ್ಸಿಡಿ ಮೊತ್ತವನ್ನು ಸಮುದಾಯದ ಅಭಿವೃದ್ಧಿಗೆ ಬಳಸ ಲಾಗುವುದು ಎಂದು ಹೇಳುತ್ತಿದೆ. ಅಷ್ಟಕ್ಕೂ, ಕೇಂದ್ರ ಸರಕಾರಕ್ಕೆ ಮುಸ್ಲಿಮ್ ಸಮುದಾಯದ ಅಭಿವೃದ್ಧಿಯ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ಅದನ್ನು ತೋರಿಸಬೇಕಾ ದುದು ಸಾಚಾರ್ ವರದಿಯನ್ನು ಜಾರಿ ಮಾಡುವ ಮೂಲಕ. ಮುಸ್ಲಿಮ್ ಸಮುದಾಯದ ಸ್ಥಿತಿಗತಿಯ ಇಂಚು ಇಂಚು ವಿವರಗಳೂ ವರದಿಯಲ್ಲಿವೆ.
     ತ್ರಿವಳಿ ತಲಾಕ್ ನೀಡುವ ಪುರುಷರು ಮತ್ತು ಸಬ್ಸಿಡಿಯನ್ನು ಬಳಸಿಕೊಂಡು ಹಜ್ಜ್ ಯಾತ್ರೆ ಕೈಗೊಳ್ಳುವವರು ಮುಸ್ಲಿಮ್ ಸಮುದಾಯದ ಅಭಿವೃದ್ಧಿಗೆ ಎಷ್ಟರ ಮಟ್ಟಿಗೆ ಅಡ್ಡಿಯಾಗಿದ್ದಾರೆ ಎಂಬುದನ್ನೂ ಆ ವರದಿಯಿಂದ ಕಂಡುಕೊಳ್ಳಬಹುದು. ನಿಜವಾಗಿ, ತಲಾಕ್, ಬಹುಪತ್ನಿತ್ವ, ಭಯೋತ್ಪಾದನೆ, ಔರಂಗಜೇಬ್, ಘಸ್ನಿ, ಘೋರಿ, ಬಾಬರ್.. ಇತ್ಯಾದಿ ಇತ್ಯಾದಿಗಳ ಮೂಲಕ ಈ ಸಬ್ಸಿಡಿ ರದ್ದುಗೊಳಿಸಿದ ವಿಚಾರಧಾರೆಯು ಮುಸ್ಲಿಮ್ ಸಮುದಾಯ ವನ್ನು ಈ ಮೊದಲಿನಿಂದಲೂ ಹಣಿಯುತ್ತಲೇ ಬರಲಾಗಿದೆ. 15 ಕೋಟಿಯಷ್ಟಿರುವ ಈ ಸಮುದಾಯ ದೇಶದ ರಾಜಕೀಯವನ್ನು ನಿಯಂತ್ರಿಸುತ್ತಿದೆ ಎಂಬ ರೀತಿಯಲ್ಲಿ ಹುಯಿಲು ಎಬ್ಬಿಸುತ್ತಿದೆ. ವ್ಯವಸ್ಥೆಯ ಸರ್ವ ಲಾಭವನ್ನೂ ಪಡೆದುಕೊಂಡು ರಾಜರಂತೆ ಬದುಕುವ ವರ್ಗ ಎಂಬುದಾಗಿ ಅದು ಉದ್ದಕ್ಕೂ ಬಿಂಬಿಸುತ್ತಲೇ ಬಂದಿದೆ. ಈ ನಕಾರಾತ್ಮಕ ಪ್ರಚಾರ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರತೊಡಗಿತೆಂದರೆ, ‘ಆಗಿರಬಹುದು’ ಎಂದು ಸಮಾಜ ಅಂದುಕೊಳ್ಳುವಷ್ಟು. ಅದರ ಪರಿಣಾಮವೇ ಬೀದಿಯಲ್ಲಿ ಥಳಿಸಿ ಕೊಲ್ಲುವ, ಹಿಂಸಿಸುವ, ಅವಮಾನಿಸುವ ಘಟನೆಗಳು ನಡೆದರೂ ಸಂಭಾವಿತ ಮೌನಕ್ಕೆ ಸಮಾಜ ಜಾರುವ ಸ್ಥಿತಿ ನಿರ್ಮಾಣವಾಗಿರುವುದು. ಮುಸ್ಲಿಮ್ ಸಮುದಾಯವಂತೂ ಈ ಬಗೆಯ ನಕಾರಾತ್ಮಕ ಪ್ರಚಾರದಿಂದ ತೀವ್ರ ಆಘಾತಕ್ಕೆ ಒಳಗಾಯಿತು. ಎಲ್ಲಿಯ ವರೆಗೆಂದರೆ, ಸಬ್ಸಿಡಿ ರದ್ದು ಮತ್ತು ತ್ರಿವಳಿ ತಲಾಕ್ ಬಗೆಗಿನ ಕೇಂದ್ರದ ಧೋರಣೆಯನ್ನು ಸ್ವಾಗತಿಸುವಷ್ಟು. ನಿಜವಾಗಿ, ‘ಸಬ್ಸಿಡಿ ಹಣದಿಂದ ಹಜ್ಜ್ ನಿರ್ವಹಿಸುವುದು ಧರ್ಮ ಸಮ್ಮತವಲ್ಲ’ ಎಂಬುದು ಕೇಂದ್ರದ ಸಬ್ಸಿಡಿ ರದ್ದಿಗೆ ಆಧಾರವಲ್ಲ. ಅದೊಂದು ವಿಚಾರಧಾರೆ. ಆ ವಿಚಾರಧಾರೆಯು ಮುಸ್ಲಿಮರಿಗೆ ಸಂಬಂಧಿಸಿದ ಪ್ರತಿಯೊಂದನ್ನೂ ಮ್ಲೇಚ್ಛಗೊಳಿಸಬಯಸುತ್ತದೆ. ಮುಸ್ಲಿಮ್ ಸಮುದಾಯದೊಳಗೆ ಕೀಳರಿಮೆಯನ್ನು ಬೆಳೆಸ ಬಯಸುತ್ತದೆ. ಆ ಬಳಿಕ ಕಾನೂನು ರೂಪಿಸುತ್ತದೆ. ಆ ಮೂಲಕ ರಾಜಕೀಯ ಲಾಭ ಪಡಕೊಳ್ಳುವ ವಾತಾವರಣವನ್ನೂ ಅದು ನಿರ್ಮಿಸುತ್ತದೆ. ಈ ಸಬ್ಸಿಡಿ ರದ್ದಿನ ಹಿಂದಿರುವುದೂ ಇದುವೇ. ತ್ರಿವಳಿ ತಲಾಕ್‍ನ ಹಿಂದಿದ್ದುದೂ ಇದುವೇ. ಆದ್ದರಿಂದಲೇ,
ಅದಕ್ಕೆ ಸಾಚಾರ್ ವರದಿಯೆಂದರೆ ದ್ವೇಷ. 

No comments:

Post a Comment