Tuesday, June 13, 2017

ರಾತ್ರಿ ಬಿಡಿ, ಹಗಲಲ್ಲಾದರೂ ಸಜ್ಜಾಗಬಾರದೇ?

   ಉಚಿತವಾಗಿ ಸಿಗುವ ಎಲ್ಲದರ ಬಗ್ಗೆಯೂ ಸಮಾಜದಲ್ಲಿ ಒಂದು ಬಗೆಯ ನಿರ್ಲಕ್ಷ್ಯ ಇರುತ್ತದೆ. ನೀರು ಆ ಪಟ್ಟಿಯಲ್ಲಿ
ಸೇರುವಂಥದ್ದು. ನೀರನ್ನು ಬಾಟಲಿಯಲ್ಲಿ ತುಂಬಿಸಿ ಮಾರುವ ಸಣ್ಣ ಮತ್ತು ದೊಡ್ಡದಾದ ಕಂಪೆನಿಗಳು ಅಸಂಖ್ಯ ಇವೆ. ಆದರೆ ಈ ಯಾವ ಕಂಪೆನಿಗಳೂ ನೀರನ್ನು ಸ್ವತಃ ಉತ್ಪಾದಿಸಿ ಮಾರುವುದಿಲ್ಲ. ಯಾವ ಕಂಪೆನಿಯೂ ನೀರನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ವೈಜ್ಞಾನಿಕವಾಗಿ ಜಗತ್ತು ಎಷ್ಟೇ ಬೆಳೆದಿದ್ದರೂ ಮತ್ತು ಮಂಗಳ ಗ್ರಹದಲ್ಲಿ ವರ್ಷಗಟ್ಟಲೆ ಉಳಿದುಕೊಂಡು ನೀರಿದೆಯೋ ಎಂದು ಸಂಶೋಧನೆ ನಡೆಸುವ ಸಾಮರ್ಥ್ಯ ಬಂದಿದ್ದರೂ ಒಂದು ಹನಿ ನೀರನ್ನು ಉತ್ಪಾದಿಸುವ ಶಕ್ತಿ ವಿಜ್ಞಾನಕ್ಕಿನ್ನೂ ದಕ್ಕಿಲ್ಲ. ಒಂದೊಮ್ಮೆ ಮಾನವನು ಮಂಗಳ ಗ್ರಹದಲ್ಲಿ ಬದುಕಲು ತೀರ್ಮಾನಿಸಿದನೆಂದಾದರೆ, ಅದಕ್ಕಾಗಿ ಆಮ್ಲಜನಕವನ್ನು ಕೃತಕವಾಗಿ ತಯಾರಿಸಬಹುದು. ಆದರೆ ನೀರನ್ನು ಪ್ರಯೋಗಾಲಯದಲ್ಲಿ ತಯಾರಿಸಲು ಸಾಧ್ಯವಿಲ್ಲವಲ್ಲ. ಆದ್ದರಿಂದ ಮಂಗಳ ಗ್ರಹದಲ್ಲಿ ಜೀವಿಸಬಹುದೇ ಎಂಬುದು ಅಲ್ಲಿ ನೀರು ಲಭ್ಯವಿದೆಯೇ ಎಂಬುದನ್ನು ಹೊಂದಿಕೊಂಡಿದೆ. ನಮ್ಮ ನಡುವೆ ಬಾಟಲಿಯಲ್ಲಿ ನೀರು ತುಂಬುವ ಕಂಪೆನಿಗಳು ಜಾಸ್ತಿಯಾಗುತ್ತಾ ಹೋದಷ್ಟು ಭೂಮಿಯಲ್ಲಿರುವ ನೀರು ಬಸಿಯುತ್ತಾ ಹೋಗುತ್ತದೆ. ಪ್ರಕೃತಿ ಅಥವಾ ದೇವನು ನಿಯಮಿತವಾಗಿ ಮಳೆ ಸುರಿಸುತ್ತಾನೆ. ಭೂಮಿಯ ಒಡಲು ತುಂಬುತ್ತದೆ. ನಮ್ಮ ದಾಹ ಇಂಗುತ್ತದೆ. ಇಂಥದ್ದೊಂದು ಪ್ರಕ್ರಿಯೆಯಲ್ಲಿ ಸದ್ಯ ಜಗತ್ತು ಬದುಕುತ್ತಿದೆ. ವಿಶೇಷ ಏನೆಂದರೆ, ನೀರು ಮಾನವ ನಿರ್ಮಿತ ಅಲ್ಲ ಎಂಬುದನ್ನು ಮತ್ತು ಅದು ಪ್ರಕೃತಿಯ ಅತ್ಯಮೂಲ್ಯ ಕೊಡುಗೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ‘ನೀವು ಸಮುದ್ರದಲ್ಲಿದ್ದರೂ ನೀರನ್ನು ಪೋಲು ಮಾಡಬಾರದು..’ ಎಂದು ಪ್ರವಾದಿ ಮುಹಮ್ಮದ್ ಹೇಳಿದ್ದಾರೆ. ಎಲ್ಲ ಧರ್ಮಾನುಯಾಯಿಗಳೂ ನೀರಿನ ಅವಲಂಬಿತರು. ನೀರಾದರೋ ದೇವನ ಕೊಡುಗೆ ಎಂದು ಅವರೆಲ್ಲರೂ ಒಪ್ಪುತ್ತಾರೆ. ಆದರೂ ನೀರಿನ ಸಂರಕ್ಷಣೆ ಎಂಬುದು ಯಾಕೆ ಧಾರ್ಮಿಕ ಕರ್ತವ್ಯವಾಗಿ ನಮ್ಮ ನಡುವೆ ಪ್ರಚಲಿತವಾಗಿಲ್ಲ? ಈ ದೇಶದಲ್ಲಿರುವಷ್ಟು ಧಾರ್ಮಿಕ ಸಂಘಟನೆಗಳು ಬಹುಶಃ ಜಗತ್ತಿನಲ್ಲಿ ಎಲ್ಲೂ ಇಲ್ಲ. ಹಿಂದೂ-ಮುಸ್ಲಿಮ್-ಕ್ರೈಸ್ತ-ಬೌದ್ಧ-ಸಿಖ್ಖ್... ಹೀಗೆ ಎಲ್ಲರಿಗೂ ಈ ಮಾತು ಅನ್ವಯ. ಹಾಗಿದ್ದ ಮೇಲೂ ಕನಿಷ್ಠ ಈ ಬಿರು ಬೇಸಿಗೆಯಲ್ಲಾದರೂ ಪ್ರಮುಖ ಧಾರ್ಮಿಕ ಸಂಘಟನೆಗಳು ಜಲ ಜಾಗೃತಿ ಅಭಿಯಾನವನ್ನು ಕೈಗೊಳ್ಳುತ್ತಿಲ್ಲವಲ್ಲ ಯಾಕೆ? ಪ್ರತಿದಿನ ನಾವು ಪತ್ರಿಕೆ, ಟಿ.ವಿ.ಗಳಲ್ಲಿ ಧಾರ್ಮಿಕ ಸಭೆಗಳ ಸುದ್ದಿಗಳನ್ನು ಓದುತ್ತಲೂ ಆಲಿಸುತ್ತಲೂ ಇರುತ್ತೇವೆ. ಧರ್ಮ ಜಾಗೃತಿಯ ಹೆಸರಲ್ಲಿ ನಡೆಯುವ ಚಟುವಟಿಕೆಗಳ ವಿವರಗಳನ್ನು ಆಲಿಸುತ್ತಿರುತ್ತೇವೆ. ಧರ್ಮದ ಅವಹೇಳನ, ಧರ್ಮ ರಕ್ಷಣೆ... ಇತ್ಯಾದಿಗಳ ಹೆಸರಲ್ಲಿ ಜಗಳವಾಗುವುದು, ಹಲ್ಲೆ ಹತ್ಯೆಗಳವರೆಗೂ ಆಕ್ರೋಶ ವ್ಯಕ್ತವಾಗುತ್ತಿರುವುದನ್ನು ನೋಡುತ್ತಿರುತ್ತೇವೆ. ಆದರೆ ಎಲ್ಲೂ ನೀರಿನ ಸಂರಕ್ಷಣೆಯ ಹೆಸರಲ್ಲಿ, ನೀರು ಪೋಲು ಮಾಡಿದ ಕಾರಣದ ನೆಪದಲ್ಲಿ ಹಲ್ಲೆಗಳಾದುದನ್ನು ನೋಡಿದ್ದೇವೆಯೇ? ಯಾಕೆ ನೀರು ನಮ್ಮ ಧರ್ಮದ ಭಾಗವಾಗಿಲ್ಲ? ಧರ್ಮ ರಕ್ಷಣೆಯ ಭಾಗವಾಗಿ ನೀರನ್ನು ನಾವು ಪರಿಗಣಿಸದೇ ಇರುವುದಕ್ಕೆ ಕಾರಣಗಳೇನು? ನೀರು ಮುಕ್ತವಾದ ಇಗರ್ಜಿಗಳು, ದೇವಸ್ಥಾನಗಳು, ಮಠಗಳು, ಮಸೀದಿಗಳು ಎಲ್ಲೂ ಇಲ್ಲ. ನೀರಿಲ್ಲದೇ ಮಸೀದಿಗಳೇ ಇಲ್ಲ ಎಂಬುದು ಸ್ಪಷ್ಟ. ಹೆಚ್ಚಿನ ದೇವಸ್ಥಾನಗಳು ನದಿ ತಟದಲ್ಲೋ, ವಿಸ್ತಾರ ಕೊಳಗಳ ಬಳಿಯೋ ನಿರ್ಮಿಸಲ್ಪಟ್ಟಿವೆ. ಧಾರ್ಮಿಕ ಚಟುವಟಿಕೆಗಳು ನೀರನ್ನು ಅವಲಂಬಿಸಿಕೊಂಡಿವೆ ಎಂಬುದಕ್ಕೆ ಇದು ಅತ್ಯುತ್ತಮ ಪುರಾವೆ. ಇಷ್ಟಿದ್ದೂ ಇಂಥ ಮಸೀದಿ-ದೇವಸ್ಥಾನಗಳಿಂದ ಯಾಕೆ ಜಲ ಜಾಗೃತಿ ಅಭಿಯಾನಗಳು ಪ್ರಾರಂಭವಾಗುತ್ತಿಲ್ಲ? ಇಲ್ಲಿರುವ ವಿವಿಧ ಧರ್ಮಗಳು ಮತ್ತು ನೂರಾರು ಸಂಘಟನೆಗಳು ಒಟ್ಟಾಗಿ ಮನೆ ಮನೆ ಜಾಗೃತಿ ಕಾರ್ಯಕ್ರಮಗಳನ್ನು ಯಾಕೆ ಹಮ್ಮಿಕೊಳ್ಳುತ್ತಿಲ್ಲ? ನೀರು ಎಂಬುದು ಯಾವುದೇ ಒಂದು ಧರ್ಮದ ಚಿಹ್ನೆಯನ್ನೋ ಬಣ್ಣವನ್ನೋ ಅಂಟಿಸಿಕೊಂಡು ಬರದ ಅಪ್ಪಟ ದೇವ ಪ್ರತಿನಿಧಿ. ದೇವನಿಗೆ ಹೇಗೆ ನಾವು ನಿರ್ದಿಷ್ಟ ಬಣ್ಣ, ಆಕಾರ, ಭಾಷೆ, ಜಾತಿ, ವೇಷವನ್ನು ತೋಡಿಸಲಾರವೋ ಹಾಗೆಯೇ ನೀರೂ. ಅದು ಸರ್ವವ್ಯಾಪಿ. ದೇವನು ಹೇಗೆ ಯಾರ ಅವಲಂಬಿತನೂ ಅಲ್ಲವೋ ಮತ್ತು ಎಲ್ಲ ಮನುಷ್ಯರೂ ಅವನ ಅವಲಂಬಿತರೋ ಹಾಗೆಯೇ ನೀರೂ ಕೂಡ. ಅದೂ ಯಾರನ್ನೂ ಅವಲಂಬಿಸಿಕೊಂಡಿಲ್ಲ. ಆದರೆ ಜನರೆಲ್ಲ ಅದನ್ನು ಅವಲಂಬಿಸಿಕೊಂಡಿದ್ದಾರೆ. ಹೀಗಿದ್ದೂ ಧರ್ಮದ ಹೆಸರಲ್ಲಿ ಹುಟ್ಟಿಕೊಂಡ ಯಾವ ಪ್ರಮುಖ ಸಂಘಟನೆಗಳೂ ಜಲ ಜಾಗೃತಿಯನ್ನು ಗಂಭೀರವಾಗಿ ಪರಿಗಣಿಸಿರುವುದನ್ನು ನಾವು ಕಾಣುತ್ತಿಲ್ಲ. ಒಂದುವೇಳೆ ಎಲ್ಲ ಸಂಘಟನೆಗಳು ಒಟ್ಟು ಸೇರಿಕೊಂಡು ನೀರಿನ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾದರೆ, ಯಾವ ‘ಎತ್ತಿನ ಹೊಳೆ’ಯೂ ಇಲ್ಲಿ ಅಗತ್ಯವಿರಲಾರದು.
     ಇಂದಿನ ದಿನಗಳ ಬಹುದೊಡ್ಡ ಅಗತ್ಯ ಏನೆಂದರೆ, ನೀರನ್ನು ಧರ್ಮದ ಭಾಗವಾಗಿ ಕಾಣುವುದು. ಹೊಸ ತಲೆಮಾರಿಗೆ ನೀರಿನ ಸಂರಕ್ಷಣೆಯ ಅಗತ್ಯಗಳನ್ನು ಹೇಳಿಕೊಡುವುದು. ನೀರಲ್ಲಿ ದೇವನನ್ನು ಕಾಣು ಎಂದು ಕಲಿಸಿಕೊಡುವುದು. ನೀರು ಧಾರಾಳವಾಗಿ ಲಭ್ಯವಿರುವ ಪ್ರದೇಶದ ಮಂದಿಯೂ ನೀರಿನ ಬರ ಅನುಭವಿಸುತ್ತಿರುವ ಪ್ರದೇಶದ ಮಂದಿಯೂ ನೀರನ್ನು ಮಿತವಾಗಿಯೇ ಮತ್ತು ಪೋಲಾಗದಂತೆಯೇ ಬಳಸಬೇಕಾದ ಅಗತ್ಯ ಇದೆ. ಅದು ಧಾರ್ಮಿಕ ಆದೇಶ. ಸದ್ಯ ನಾವು ಈ ಆದೇಶವನ್ನು ಉಲ್ಲಂಘಿಸಿ ಬದುಕುತ್ತಿರುವುದರಿಂದಲೇ ನೀರಿನ ಲಭ್ಯತೆಯಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಸದ್ಯ ನಮ್ಮ ನಮ್ಮ ಪ್ರದೇಶದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮಳೆ ನೀರನ್ನು ಇಂಗಿಸುವ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಬೇಕು. ಇದೇನೂ ಕಷ್ಟದ್ದಲ್ಲ. ಎಲ್ಲ ದೇವಸ್ಥಾನ, ಮಠ, ಗುಡಿ, ಮಸೀದಿ, ಚರ್ಚ್‍ಗಳು ಮನಸ್ಸು ಮಾಡಿದರೆ ಇದು ತೀರಾ ತೀರಾ ಸುಲಭ. ತಂತಮ್ಮ ವ್ಯಾಪ್ತಿಯಲ್ಲಿರುವ ಮನೆಗೆ- ಆಯಾ ಸಮುದಾಯದ ಜನರ ಗುಂಪಾದರೂ ಸರಿ-ಭೇಟಿ ಕೊಟ್ಟು ನೀರಿನ ಮಿತವ್ಯಯದ ಅಗತ್ಯವನ್ನು ಹೇಳಬೇಕು. ಜೊತೆಗೇ ನೀರಿಂಗಿಸುವ ಬಗೆಗೂ ತರಬೇತಿಯನ್ನು ನೀಡಬೇಕು. ಬೋರ್‍ವೆಲ್‍ಗಳ ಸುತ್ತ ಗುಂಡಿಕೊರೆದು ನೀರಿಂಗಿಸಲು ಒತ್ತಾಯಿಸಬೇಕು. ನಮ್ಮಲ್ಲಿ ಸಾಕಷ್ಟು ಪಾಳುಬಿದ್ದ ಬೋರ್‍ವೆಲ್‍ಗಳಿವೆ. ನೀರು ಬತ್ತಿಹೋದ ಕಾರಣಕ್ಕಾಗಿ ನಿರ್ಲಕ್ಷ್ಯಕ್ಕೊಳಗಾಗಿ ಹೂಳು ತುಂಬಿಕೊಂಡ ಬಾವಿ, ಕೆರೆಗಳಿವೆ. ಇವುಗಳ ಹೂಳು ಎತ್ತುವ ಬಗ್ಗೆ ಪ್ರಯತ್ನಗಳಾಗಬೇಕು. ಪಾಳು ಬೋರ್‍ವೆಲ್‍ಗಳ ಸುತ್ತ ನೀರಿಂಗಿಸುವಿಕೆಗೆ ವ್ಯವಸ್ಥೆ ಮಾಡಬೇಕು. ಸಾಧ್ಯವಾದರೆ ಸಂಘಟನೆಗಳ ಮಂದಿ ಸ್ವತಃ ಇಂಥದ್ದನ್ನು ಮಾಡಬಹುದು. ಹಾಗೆಯೇ ಪ್ರತಿದಿನ ನೀರು ಪೋಲಾಗುವ ಸಂದರ್ಭಗಳನ್ನು ಪಟ್ಟಿ ಮಾಡಿ ವಿವರಿಸಬೇಕು. ನಳ್ಳಿಯನ್ನು ತೆರೆದಿಟ್ಟು ಬ್ರಶ್ ಮಾಡುವುದೂ ಇದರಲ್ಲಿ ಒಂದು. ಶವರ್‍ನ ಬದಲು ಬಕೆಟ್‍ನಲ್ಲಿ ನೀರು ತುಂಬಿಸಿ ಸ್ನಾನ ಮಾಡುವಂತೆ ವಿನಂತಿಸುವುದೂ ಇನ್ನೊಂದು. ಧರ್ಮದ ಚಟುವಟಿಕೆಗಾಗಿ ಅರ್ಧರಾತ್ರಿಯಲ್ಲೂ ಎದ್ದು ಹೋಗುವಷ್ಟು ಧಾರ್ಮಿಕ ಕಳಕಳಿಯಿರುವವರಿರುವ ಈ ದೇಶದಲ್ಲಿ ಧರ್ಮದ್ದೇ ಭಾಗವಾದ ನೀರಿನ ಸಂರಕ್ಷಣೆಗಾಗಿ ಕನಿಷ್ಠ ಹಗಲಲ್ಲಾದರೂ ಎದ್ದು ನಿಂತರೆ, ಅದಕ್ಕಿಂತ ದೊಡ್ಡದಾದ ಧರ್ಮ ಸೇವೆ ಇನ್ನಾವುದೂ ಇರಲಾರದು.


No comments:

Post a Comment