Saturday, February 11, 2017

ಸಕಾರಾತ್ಮಕತೆ, ಆಶಾವಾದ ಮತ್ತು ಅವರು..

ನಂದಿತಾ ವೆಂಕಟೇಶನ್
ಪೌಲ್ ಕಲಾನಿಧಿ
ಇವರಿಬ್ಬರೂ ಪ್ರಸಿದ್ಧರಲ್ಲ. ಮಹಾನ್ ಸಾಧಕರಲ್ಲ. ತಂತಮ್ಮ ಗೆಳೆಯರು, ಕುಟುಂಬಿಕರು ಮತ್ತು ಪರಿಚಿತರ ಜಗತ್ತನ್ನು ದಾಟಿ ಬಹುದೂರ ಕೀರ್ತಿ ಪತಾಕೆಯನ್ನು ಹಾರಿಸಿದ ವ್ಯಕ್ತಿಗಳೂ ಇವರಲ್ಲ. ಆದರೆ ಇವರಿಬ್ಬರನ್ನೂ ಓದುತ್ತಾ ಹೋದಂತೆ ಇವರು ಸಣ್ಣವರಲ್ಲ ಎಂದು ಅನಿಸಿತು. ಪೌಲ್ ಕಲಾನಿಧಿಯ ‘When Breath Becomes air’ ಎಂಬ ಕೃತಿಯ ಒಂದು ಭಾಗವನ್ನು ಓದುತ್ತಾ ಹೋದಂತೆ ನನ್ನೊಳಗೆ ಅನೇಕಾರು ಭಾವಗಳು ಮೂಡಿದುವು. ವಿಷಾದ, ಆತ್ಮವಿಶ್ವಾಸ, ನಿರ್ಲಿಪ್ತತೆಯನ್ನು ನಮ್ಮೊಳಗೆ ಉತ್ಪಾದಿಸಿ ಪರಸ್ಪರ ಢಿಕ್ಕಿ ಹೊಡೆಸುವ ವಾಸ್ತವವಾದಿ ಪೌಲ್ ಕಲಾನಿಧಿ. ಬದುಕಿದ್ದು ಬರೇ 37 ವರ್ಷ. ನರತಜ್ಞ. ಪತ್ನಿ ಇದ್ದಾಳೆ. 2 ವರ್ಷದ ಮಗು ಇದೆ. ಇನ್ನೇನು ನರತಜ್ಞನಾಗಿ ಸಾಧನೆಗಳನ್ನು ಮಾಡಬೇಕು ಮತ್ತು ಸುಂದರ ಬದುಕನ್ನು ಸವೆಸಬೇಕು ಎಂದು ಅಂದುಕೊಳ್ಳುವಾಗಲೇ ಸಾವು ಎದುರು ಬಂದು ನಿಲ್ಲುತ್ತದೆ. ಈ ಪೌಲ್‍ಗೆ ಹೋಲಿಸಿದರೆ ನಂದಿತಾ ವೆಂಕಟೇಶನ್‍ಳ ಜೀವನಗಾಥೆ ಭಿನ್ನ. ಆದರೆ ಸಾವು ಎಂಬ ಎರಡಕ್ಷರಕ್ಕೆ ಸಂಬಂಧಿಸಿ ತೀರಾ ತೀರಾ ಹತ್ತಿರ. ಪಿಯು ತರಗತಿಯಲ್ಲಿ ಓದುತ್ತಿರುವಾಗಲೇ ನಂದಿತಾಳಿಗೆ ಸಾವು ಮತ್ತು ಬದುಕಿನ ಬಗ್ಗೆ ಆಲೋಚಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಸಾವನ್ನು ನೆನಪಿಸುವ ಪ್ರಕ್ರಿಯೆಗಳು ಅನುಭವಕ್ಕೆ ಬರುತ್ತವೆ. ನಂದಿತಾ ಬದುಕುವ ಛಲ ತೊಡುತ್ತಾಳೆ.
       2013 ನವೆಂಬರ್‍ನ ಕೊನೆಯ ವಾರ. ಮಧ್ಯಾಹ್ನದ ಬಳಿಕ ನಂದಿತಾ ಅತ್ತಿತ್ತ ನೋಡುತ್ತಾಳೆ. ಅಮ್ಮ, ಅಣ್ಣ ಮತ್ತಿತರರು ಆಕೆಯ ಸುತ್ತು-ಮುತ್ತಲಿದ್ದಾರೆ. ಏನೋ ಮಾತಾಡುತ್ತಿದ್ದಾರೆ. ಆಸ್ಪತ್ರೆಯ ಮಂಚದಲ್ಲಿ ಮಲಗಿರುವ ನಂದಿತಾಳಿಗೆ ಅಮ್ಮ ಮತ್ತು ಅಣ್ಣ ತನಗೇನನ್ನೋ ಹೇಳುತ್ತಿದ್ದಾರೆ, ಆತ್ಮವಿಶ್ವಾಸವನ್ನು ತುಂಬು ತ್ತಿದ್ದಾರೆ ಎಂದನಿಸಿತು. ಆದರೆ ಒಂದೂ ಅರ್ಥವಾಗುತ್ತಿಲ್ಲ. ಕೇವಲ ಶಬ್ದ ಮಾತ್ರ ಕೇಳಿದಂತಾಗುತ್ತಿತ್ತು. ಯಾಕೆ ಹೀಗೆ, ಏನಾಯ್ತು ಎಂದು ನಂದಿತಾ ಸ್ವತಃ ತಳಮಳಗೊಳ್ಳುತ್ತಾಳೆ. ಇವರಿಷ್ಟು ಮೆದುಸ್ವರದಲ್ಲಿ ಯಾಕೆ ಮಾತಾಡ್ತಿದ್ದಾರೆ ಎಂದು ಸಿಟ್ಟಾಗುತ್ತಾಳೆ. ಆದರೆ, ಸಮಸ್ಯೆ ಅವಳೊಳಗೇ ಇತ್ತು. TB (ಟ್ಯುಬರ್‍ಕ್ಯುಲೋಸಿಸ್) ರೋಗಕ್ಕೆ ನೀಡಿದ ಔಷಧದ ಅಡ್ಡ ಪರಿಣಾಮದಿಂದಾಗಿ ಆಕೆ ಬಹುತೇಕ ಕಿವುಡಿಯಾಗಿದ್ದಳು. ನಿಜವಾಗಿ, ಆಕೆ TB ತುತ್ತಾಗಿರುವುದು 2007ರಲ್ಲೇ  ಪತ್ತೆಯಾಗಿತ್ತು. ಆಗ ಆಕೆ ಕಾಲೇಜು ವಿದ್ಯಾರ್ಥಿನಿ. ಆಗಿನಿಂದ ಔಷಧ ಸೇವನೆ ಆರಂಭವಾಗಿತ್ತು. ಮಾತ್ರವಲ್ಲ, TB ಗುಣವಾಯಿತೆಂದೇ ಆಕೆಯೂ ಮನೆಯವರೂ ಭಾವಿಸಿದ್ದರು. ಆದರೆ, 2013ರಲ್ಲಿ ಅದು ಮರುಕಳಿಸಿತು. ಈ ಬಾರಿ ಅದು ಎಷ್ಟು ಪ್ರಬಲವಾಗಿ ಮರಳಿತ್ತೆಂದರೆ, ಹಿಂದಿನ ಯಾವ ಔಷಧಿಗೂ ಬಗ್ಗದಷ್ಟು. ಈ ಬಾರಿ ಕರುಳಿನ ಭಾಗದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಏನನ್ನೂ ತಿನ್ನಲಾಗದ ಸ್ಥಿತಿ. ತಿಂದ ಕೂಡಲೇ ಅದೇ ಸ್ಥಿತಿಯಲ್ಲಿ ವಾಂತಿಯಾಗಿ ಹೊರ ಹೋಗುತ್ತಿತ್ತು. ವಿವಿಧ ಬಗೆಯ ಇಂಜಕ್ಷನ್‍ಗೆ ನಂದಿತಾ ತನ್ನ ದೇಹವನ್ನು ಒಪ್ಪಿಸಬೇಕಾಯಿತು. ಅಪಾರ ನೋವು ಜೊತೆಗೇ ಸೋಂಕು ತಾಗಿದ ಕರುಳಿನ ಭಾಗವನ್ನೇ ಕಿತ್ತು ಹಾಕಬೇಕಾದ ಅನಿವಾರ್ಯತೆ. ನಂದಿತಾ ಇನ್ನೂ ತರುಣಿಯಾದುದರಿಂದ ಒಂದು ಕಡೆ ಭಯ ಮತ್ತು ಇನ್ನೊಂದು ಕಡೆ ಬದುಕುವ ಆಸೆಯಿರುವುದು ಸಹಜವಾಗಿತ್ತು. ಅಲ್ಲದೇ TBಯ ಬಗ್ಗೆ ಅಂಥ ತಿಳುವಳಿಕೆಯೇನೂ ಆಕೆಗಿರಲಿಲ್ಲ. ಏನೇ ಆಗಲಿ, ಒಮ್ಮೆ ಈ ನೋವಿನಿಂದ ಹೊರಬರಲೇಬೇಕು ಎಂಬ ನಿಲುವಿನೊಂದಿಗೆ ಆಕೆ ಸರ್ಜರಿಯೊಂದಕ್ಕೆ ಸಿದ್ಧಳಾದಳು. ಸೋಂಕು ಇರುವ ಕರುಳಿನ ಭಾಗವನ್ನು ಕಿತ್ತು ಹಾಕಿದರೆ ತಾನು ಮೊದಲಿನಂತಾಗಬಹುದಲ್ಲವೇ ಎಂಬ ನಿರೀಕ್ಷೆ ಆಕೆಯದು. ಹೆತ್ತವರ ಮುಂದೆ ಬೇರೆ ಆಯ್ಕೆಯಿರಲಿಲ್ಲ. ಮಗಳು ಮತ್ತೆ ಮೊದಲಿನಂತಾಗಬೇಕು ಎಂಬುದಷ್ಟೇ ಅವರ ಆಸೆಯಾಗಿತ್ತು. ನಂದಿತಾ ಸರ್ಜರಿಗೆ ಸಿದ್ಧವಾದಳು. ‘ಒಂದೇ ಒಂದು ಸರ್ಜರಿ ತಾನೇ, ಆಗಲಿ ಅಮ್ಮ’ ಎಂದು ಹೊರಟಳು. ಆಪರೇಶನ್ ಕೊಠಡಿಗೆ ವೀಲ್‍ಚೇರ್‍ನಲ್ಲಿ ಹೋಗುವಾಗ ಆಕೆಯೊಳಗೆ ತಳಮಳ ಇದ್ದಿರಲಿಲ್ಲ ಎಂದಲ್ಲ. ಇತ್ತು. ಜೊತೆಗೇ ಈ ಕಿರು ಅವಧಿಯ ನೋವನ್ನು ಅನುಭವಿಸಿದರೆ ನೋವಿಗೆ ಶಾಶ್ವತ ವಿದಾಯವನ್ನು ಹೇಳಬಹುದಲ್ಲವೇ ಎಂಬ ಆಶಾವಾದವೂ ಇತ್ತು. ತಾನು ಹಿಂದಿನಂತೆ ರಸ್ತೆಯಲ್ಲಿ ಸಂಚರಿಸುವೆ, ನಾಟ್ಯ ಮಾಡುವೆ, ಗೆಳತಿಯರೊಂದಿಗೆ ಖುಷಿ ಪಡುವೆ.. ಎಂದೆಲ್ಲಾ ಆಕೆ ಆಪರೇಶನ್ ಕೊಠಡಿಯಲ್ಲಿ ಮಲಗಿ ಗ್ರಹಿಸತೊಡಗಿದಳು. ಆದರೆ, ಆ ಒಂದು ಆಪರೇಶನ್ ಮುಂದಿನ ಮೂರು ಆಪರೇಶನ್‍ಗಳಿಗೆ ದಾರಿ ತೆರೆದುಕೊಡುತ್ತದೆ ಎಂದು ಆಕೆಗಾಗಲಿ ಆಕೆಯ ವೈದ್ಯರಿಗಾಗಲಿ ಗೊತ್ತಿರಲಿಲ್ಲ. ಮೊದಲ ಸರ್ಜರಿ ನಡೆದ ಒಂದು ವಾರದ ಬಳಿಕ ನಂದಿತಾ ತೀವ್ರ ಅಸೌಖ್ಯಕ್ಕೆ ತುತ್ತಾದಳು. ದೊಡ್ಡ ಆಸ್ಪತ್ರೆಗೆ ರವಾನೆಯಾದಳು. ಅತ್ಯಂತ ಅಪಾಯಕಾರಿ ಸ್ಥಿತಿಗೆ ಜಾರಿದಳು. ದಿನಗಳು ತಿಂಗಳುಗಳಾದುವು. TBಯ ಸೋಂಕು ದೇಹದ ಇತರ ಅಂಗಗಳಿಗೂ ಹರಡತೊಡಗಿದುವು. ಹೀಗೆ ಒಂದು ಸರ್ಜರಿಗೆಂದು ಆಸ್ಪತ್ರೆಗೆ ದಾಖಲಾದ ನಂದಿತಾ ಮತ್ತೆ ಮೂರು ಸರ್ಜರಿಗೆ ದೇಹವನ್ನು ಒಪ್ಪಿಸಲೇಬೇಕಾದ ಅನಿವಾರ್ಯತೆಗೆ ತುತ್ತಾದಳು. ತಾನು ಬದುಕುಳಿಯುವೆನೇ ಎಂದು ನಂದಿತಾ ಅಸಂಖ್ಯ ಬಾರಿ ಆಲೋಚಿಸಿದಳು. TB ಸೋಂಕು ನಿಂತಲ್ಲೇ ನಿಲ್ಲುತ್ತಿಲ್ಲ. ದೇಹವನ್ನು ಅದು ಮೈದಾನವೆಂಬಂತೆ ಪರಿಗಣಿಸಿದೆ. ಇತರ ಅಂಗಗಳ ಮೇಲೂ ಅದು ಸವಾರಿ ಮಾಡತೊಡಗಿದೆ. ಒಂದು ಕಡೆ ಸರ್ಜರಿ ಮತ್ತು ಇನ್ನೊಂದು ಕಡೆ ಔಷಧದ ಪರಿಣಾಮ.. ಇವೆರಡರ ಮಧ್ಯೆ ನಂದಿತಾ ಅಕ್ಷರಶಃ ಅಪ್ಪಚ್ಚಿಯಾದಳು. ಔಷಧದ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ, ಆಕೆ ಆಲಿಸುವ ಸಾಮರ್ಥ್ಯವನ್ನೇ ಕಳಕೊಳ್ಳತೊಡಗಿದಳು. ಅಣ್ಣ ಮತ್ತು ಅಮ್ಮ ಆಸ್ಪತ್ರೆಯಲ್ಲಿ ಮಾತಾಡಿದಾಗ ಆಕೆಗೆ ಕೇಳಿಸದೇ ಹೋದುದು ಈ ಕಾರಣದಿಂದ. ಆರಂಭದಲ್ಲಿ ಎಡಕಿವಿಗೆ 80% ಮತ್ತು ಬಲಕಿವಿಗೆ 60% ಕಿವುಡುತನ ಬಾಧಿಸಿತಾದರೂ ಕ್ರಮೇಣ ಎರಡೂ ಕಿವಿಗಳೂ 90%ಕ್ಕಿಂತ ಹೆಚ್ಚು ಕಿವುಡುತನಕ್ಕೆ ತುತ್ತಾದುವು. ಪಟಾಕಿ ಸಿಡಿತದಂಥ ಶಬ್ದಗಳನ್ನು ಬಿಟ್ಟರೆ ಇನ್ನಾವುದೂ ಕೇಳಿಸದಷ್ಟು ನಂದಿತಾ ಕಿವುಡಿಯಾದಳು. ಇಷ್ಟೇ ಅಲ್ಲ, ಕುಳಿತುಕೊಳ್ಳುವುದಕ್ಕೂ ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ಕಡಿಮೆ ರಕ್ತದೊತ್ತಡ, ಮಧುಮೇಹದಂಥ ಸಮಸ್ಯೆಗಳನ್ನೂ ಎದುರಿಸಿದಳು. ಪ್ರತಿ ಗಂಟೆಯ ಬಳಿಕ ಸ್ವಲ್ಪ ನೀರನ್ನು ಬಿಟ್ಟರೆ ಇನ್ನಾವುದನ್ನೂ ಸೇವಿಸದಂಥ ಸ್ಥಿತಿಗೆ ತಲುಪಿದಳು. ಸುಮಾರು 23 ಕಿಲೋ ತೂಕವನ್ನು ಕಳೆದುಕೊಂಡಳು. ತಿಂಗಳ ಬಳಿಕ ಆಸ್ಪತ್ರೆಯಲ್ಲಿ ನಂದಿತಾ ಅತ್ತಿತ್ತ ಕಷ್ಟಪಟ್ಟು ನಡೆಯಲು ಆರಂಭಿಸಿದಾಗ ಆಕೆಗೇ ಅಚ್ಚರಿಯಾಗುತ್ತಿತ್ತಂತೆ. ನಡೆದಾಡುವ ಅಸ್ತಿಪಂಜರದಂತೆ ಸ್ವತಃ ಅಂದುಕೊಳ್ಳುತ್ತಿದ್ದಳಂತೆ. ಆಸ್ಪತ್ರೆಯ ಕಿಟಕಿಗೆ ಅಳವಡಿಸಲಾಗಿದ್ದ ಬಾಗಿಲಿನ ಕನ್ನಡಿಯಲ್ಲಿ ತನ್ನ ಪ್ರತಿ ಬಿಂಬವನ್ನು ಕಂಡು ನಂದಿತಾ ಅಚ್ಚರಿಪಟ್ಟಿದ್ದಳಂತೆ.
ನಂದಿತಾ

     ಕ್ರಮೇಣ ನಂದಿತಾ ಈ ವಿಷಾದ ಸ್ಥಿತಿಯಿಂದ ಹೊರಬರಬೇಕೆಂದು ತೀರ್ಮಾನಿಸಿದಳು. ನಾಲ್ಕು ಗೋಡೆಯ ಒಳಗೆ ಕೂರುವುದಕ್ಕಿಂತ ತನ್ನನ್ನು ಹೊರಗೆ ತೋರಿಸಿಕೊಳ್ಳುವುದರಲ್ಲಿ ಆತ್ಮವಿಶ್ವಾಸ ಹೆಚ್ಚಬಹುದೆಂದು ಅಂದುಕೊಂಡಳು. ತಾನಿನ್ನು ತನ್ನ ಸ್ಥಿತಿಯ ಬಗ್ಗೆ ವಿಷಾದ ಪಡಲ್ಲ ಎಂದು ಪ್ರತಿಜ್ಞೆ ಮಾಡಿಕೊಂಡ ನಂದಿತಾ, ಮನೆಯಿಂದ ಹೊರಬಂದಳು. ತನ್ನ ಹಳೆಯ ನಾಟ್ಯ ಜಗತ್ತಿಗೆ ಮರಳಿದಳು. ವಿಶೇಷ ಏನೆಂದರೆ, ನಾಟ್ಯವು ಸಂಗೀತವನ್ನು ಅವಲಂಬಿಸಿಕೊಂಡಿರುತ್ತದೆ. ಸಪ್ತಸ್ವರಕ್ಕೆ ತಕ್ಕುದಾಗಿ ಹೆಜ್ಜೆಯಿಡಬೇಕಾದ ಕ್ಷೇತ್ರ ಅದು. ಆದರೆ, ನಂದಿತಾ ಆ ಸಾಮರ್ಥ್ಯವನ್ನೇ ಕಳಕೊಂಡಿದ್ದಾಳೆ. ಈ ಹಿಂದೆ ತೈ..ತಕಕಿತ.. ಪದಗಳನ್ನು ಆಲಿಸಿ ಅದಕ್ಕೆ ತಕ್ಕಂತೆ ಹೆಜ್ಜೆ ಇಡುತ್ತಿದ್ದ ನಂದಿತಾ ಈಗ ಆ ಪದಗಳನ್ನು ಆಲಿಸದೆಯೇ ಹೇಗೆ ನಾಟ್ಯ ಮಾಡಬಲ್ಲಳು? ನಂದಿತಾ ಇದನ್ನೂ ಮೀರುವ ತೀರ್ಮಾನ ಕೈಗೊಳ್ಳುತ್ತಾಳೆ. ತೈ..ತಕಕಿತ ಎಂಬ ಪದಕ್ಕೆ ಬದಲಾಗಿ 1..1234 ಎಂಬ ಅಂಕಿಯನ್ನು ಬಳಸಿಕೊಂಡು ಹೆಜ್ಜೆ ಇಡಲು ಪ್ರಯತ್ನಿಸುತ್ತಾಳೆ. ಹಳೆಯ ನಾಟ್ಯವನ್ನು ಹೊಸ ರೀತಿಯಲ್ಲಿ ಗ್ರಹಿಸಿಕೊಳ್ಳುತ್ತಾಳೆ. ಲಿಪ್‍ರೀಡ್ ಮಾಡತೊಡಗುತ್ತಾಳೆ. Sign language ಅನ್ನು ಕಲಿಯಲು ಪ್ರಾರಂಭಿಸುತ್ತಾಳೆ. ಒಂದು ಸಂದರ್ಭದಲ್ಲಿ, ವಿಷಾದಭಾವದಲ್ಲಿ ಕಳೆದು ಹೋದಂತಿದ್ದ ನಂದಿತಾ ಪಕ್ಕನೆ ಎಚ್ಚರಗೊಂಡಾಗ ಆದ ಬದಲಾವಣೆ ಇದು. ಆಕೆಯ ಸಕಾರಾತ್ಮಕ ಚಿಂತನೆಯು ಆಕೆಯನ್ನು ಅಪಾರ ಆತ್ಮವಿಶ್ವಾಸದ ಗಣಿಯಂತೆ ಮಾಡುತ್ತದೆ. ಕಳೆದ ವರ್ಷದ ಎಪ್ರಿಲ್‍ನಿಂದ ಆಕೆ ಫೈನಾನ್ಶಿಯಲ್ ನ್ಯೂಸ್ ಪೇಪರ್‍ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾಳೆ. ಇದರ ಜೊತೆಗೇ ಅಲ್ಲಲ್ಲಿ TB ಜಾಗೃತಿ ಕಾರ್ಯಕ್ರಮವನ್ನು ನೀಡುತ್ತಿದ್ದಾಳೆ. ಕಳೆದ ಜನವರಿಯಲ್ಲಿ ಬರ್ಲಿನ್‍ನಲ್ಲಿ ನಡೆದ ಇಂಟರ್‍ನ್ಯಾಶನಲ್ ಗ್ರೂಪ್ ಆಫ್ ಆ್ಯಕ್ಷನ್ ಆರ್ಗ್‍ನ TB ಜಾಗೃತಿ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾಳೆ. ಸದ್ಯ ಪಿಹೆಚ್‍ಡಿ ಮಾಡುತ್ತಲೂ ಇದ್ದಾಳೆ. ಅಂದಹಾಗೆ,
     ನಂದಿತಾಳಂತೆ ಬದುಕಿ ಬಾಳುವ ಭಾಗ್ಯ ಸಿಗಲಿಲ್ಲ ಎಂಬುದನ್ನು ಬಿಟ್ಟರೆ, ಉಳಿದಂತೆ ಪೌಲ್ ಕಲಾನಿಧಿ ಓರ್ವ ಆಶಾವಾದಿ. ನರಶಾಸ್ತ್ರದಲ್ಲಿ ಪರಿಣತಿಯನ್ನು ಪಡೆದುಕೊಂಡ ಬಳಿಕ ಕಲಾನಿಧಿಯಲ್ಲಿ ಹೊಸ ಹುಮ್ಮಸ್ಸೊಂದು ಉದ್ಭವವಾಗಿತ್ತು. ಪಾಸ್ಟರ್ ಆಗಬೇಕೆಂದು ಬಯಸಿದ್ದ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿಯುಳ್ಳವನಾಗಿ ಬೆಳೆದ ಪೌಲ್, ಕೊನೆಗೆ ಆರಿಸಿಕೊಂಡದ್ದು ವೈದ್ಯಕೀಯ ಕ್ಷೇತ್ರವನ್ನು. ಪರಿಣತ ನರತಜ್ಞನೆಂದು ಗುರುತಿಗೀಡಾಗುತ್ತಿದ್ದ ವೇಳೆಯಲ್ಲೇ ಆತ ಕ್ಯಾನ್ಸರ್‍ಗೆ ತುತ್ತಾಗಿರುವುದು ಪತ್ತೆಯಾಗುತ್ತದೆ. ಇದಾಗಿ ಕೇವಲ ಒಂದೇ ವರ್ಷದೊಳಗೆ ಪೌಲ್ ಕೊನೆಯುಸಿರೆಳೆಯುತ್ತಾನೆ. ರೋಗಿಯ ಸುತ್ತ ವೈದ್ಯರು ಮತ್ತು ದಾದಿಯರು ನೆರೆಯುವುದು ಮತ್ತು ರೋಗಿ ಬಿಟ್ಟಗಣ್ಣಿನಿಂದ ಅವರೆಲ್ಲರನ್ನೂ ವೀಕ್ಷಿಸುವ ಸನ್ನಿವೇಶಕ್ಕೆ ಅಸಂಖ್ಯ ಬಾರಿ ಸಾಕ್ಷಿಯಾಗಿದ್ದ ಪೌಲ್, ತಾನೇ ಆ ರೋಗಿಯಾಗುವೆ ಮತ್ತು ತನ್ನ ಜೊತೆಗಾರ ವೈದ್ಯರೇ ತನ್ನ ಸುತ್ತ ನೆರೆಯುತ್ತಾರೆ ಎಂಬುದನ್ನು ಊಹಿಸಿರಲಿಲ್ಲ ಎಂದು ತನ್ನ When Breath Becomes air ಕೃತಿಯಲ್ಲಿ ಹೇಳಿಕೊಳ್ಳುತ್ತಾನೆ. ಊಟ ಮಾಡಲಾಗದ, ಎದ್ದೇಳಲಾಗದ, ಶೌಚಕ್ಕೆ ತೆರಳಲಾಗದ.. ಸ್ಥಿತಿಯು ಎಷ್ಟು ಯಾತನಾಮಯ ಎಂಬುದನ್ನು ಆತ ವಿವರಿಸುತ್ತಾನೆ. ಮೊದಲೆಲ್ಲ ಆತ ಗೆಳೆಯರ ಜೊತೆ ನಡೆಯುತ್ತಾ ಮಾತಾಡುತ್ತಿದ್ದ. ಆ ರೋಗಿ, ಈ ರೋಗಿ ಎಂದು ಅವಸರ ಪಟ್ಟು ಬದುಕುತ್ತಿದ್ದ. ಧರ್ಮ-ಕರ್ಮಗಳ ಬಗ್ಗೆ ಜೊತೆಗಾರರೊಂದಿಗೆ ಚರ್ಚಿಸುತ್ತಿದ್ದ. ಆದರೆ ಈಗ ಗೆಳೆಯರು ಹತ್ತಿರ ಬಂದರೆ ಮಾತ್ರ ಮಾತುಕತೆ. ಇಲ್ಲದಿದ್ದರೆ ಏಕಾಂತತೆ. ಪೌಲ್ ಸ್ವತಃ ವೈದ್ಯ ಆಗಿದ್ದುದರಿಂದ ತನ್ನ ಕಾಯಿಲೆ ಯಾವ ಹಂತದಲ್ಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಂಡಿದ್ದ. ಸಾವನ್ನು ಸಕಾರಾತ್ಮಕವಾಗಿಯೇ ಬರಮಾಡಿಕೊಳ್ಳಬೇಕು ಎಂಬುದು ಆತನ ನಿಲುವಾಗಿತ್ತು. ಆತ ತನ್ನ ಕ್ಯಾನ್ಸರ್ ಬದುಕು ಮತ್ತು ಭಾವನೆ ಗಳನ್ನು ಅಕ್ಷರ ರೂಪಕ್ಕಿಳಿಸಬೇಕೆಂದು ತೀರ್ಮಾನಿಸಿದ. ಯಾವುದೂ ಶಾಶ್ವತವಲ್ಲ ಎಂಬುದು ಆತನ ನಿಲುವಾಗಿತ್ತು. ಆ ಸಕಾರಾತ್ಮಕತೆಯ ಫಲಿತಾಂಶವೇ When Breath Becomes air .
        ಪೌಲ್ ಮತ್ತು ನಂದಿತಾ ಇಬ್ಬರಲ್ಲೂ ಅಪಾರ ಆತ್ಮವಿಶ್ವಾಸವಿತ್ತು. ಸಕಾರಾತ್ಮಕವಾಗಿರಿ (be positive ) ಎಂಬುದು ಅವರ ಧ್ಯೇಯವಾಗಿತ್ತು. ಆದ್ದರಿಂದಲೇ ಕಿವುಡಿಯಾಗಿದ್ದೂ ನಂದಿತಾ ಕಿವುಡುತನವನ್ನು ಮೀರಿದಳು. ಸಾವು ಎದುರಿದ್ದೂ ಪೌಲ್ ಸಾವಿಗೆ ಅಕ್ಷರ ಮಾಲೆ ಪೋಣಿಸಿದನು. ಬಹುಶಃ,
      ‘ಜಗತ್ತು ನಾಳೆ ನಾಶವಾಗುತ್ತದೆ ಎಂದು ನಿಮಗೆ ಖಚಿತವಿದ್ದರೂ ಕೈಯಲ್ಲಿರುವ ಗಿಡವನ್ನು ನೆಡಿ’ ಎಂಬ ಪ್ರವಾದಿ ಮುಹಮ್ಮದ್‍ರ(ಸ) ಮಾತಿನ ತೂಕ ಅರ್ಥವಾಗುವುದು ಇಲ್ಲೇ.

No comments:

Post a Comment