Saturday, March 4, 2017

ತಾತನ ಬೆಕ್ಕು, ಅಲಿಯ ಕುಟುಂಬ ಮತ್ತು ಯುದ್ಧ

ಅರ್ನೆಸ್ಟ್ ಹೆಮಿಂಗ್ವೆ
ಅಬೂ ಅಲಿ
ಇವರಿಬ್ಬರಲ್ಲಿ ಅರ್ನೆಸ್ಟ್ ಹೆಮಿಂಗ್ವೆ ಖ್ಯಾತ ಕತೆಗಾರ. ಅಬೂ ಅಲಿ ಪರಿಣತ ಕಾರ್ ಮೆಕ್ಯಾನಿಕ್. ಹೆಮಿಂಗ್ವೆ ಸ್ವೀಡನ್‍ನವರಾದರೆ, ಅಬೂ ಅಲಿ ಇರಾಕಿನವ. ಹೆಮಿಂಗ್ವೆ ಇವತ್ತು ನಮ್ಮ ಜೊತೆ ಇಲ್ಲ. ಅಬೂ ಅಲಿ ಆದರೋ ಇನ್ನೂ ಬದುಕಿದ್ದಾರೆ. ಇವಿಷ್ಟು ಇವರಿ ಬ್ಬರ ನಡುವೆ ಹೋಲಿಕೆಯಾಗದ ಸಂಗತಿಗಳು. ಆದರೆ ಒಂದು ವಿಷಯದಲ್ಲಿ ಇವರಿಬ್ಬರೂ ಒಂದುಗೂಡುತ್ತಾರೆ. ಅದು- ಯುದ್ಧ.
1936ರಲ್ಲಿ ಸ್ಪೈನ್ ದೇಶದಲ್ಲಿ ಆಂತರಿಕ ಘರ್ಷಣೆಗಳು ನಡೆಯುತ್ತಿದ್ದವು. ಗುಂಡೆಸೆತ, ಬಾಂಬ್ ದಾಳಿ ಮತ್ತು ವೈಮಾನಿಕ ದಾಳಿಗಳೂ ಈ ಘರ್ಷಣೆಗಳ ಭಾಗವಾಗಿದ್ದುವು. ಹೆಮಿಂಗ್ವೆ ಇದನ್ನು ವರದಿ ಮಾಡುತ್ತಿದ್ದರು. ಅವರೊಳಗೆ ಓರ್ವ ಕತೆಗಾರನೂ ಇದ್ದ. ವಿವಿಧ ಸಂದರ್ಭ ಮತ್ತು ಸನ್ನಿವೇಶಗಳಲ್ಲಿ ಆ ಕತೆಗಾರ ಜಾಗೃತವಾಗು ತ್ತಿದ್ದ. ವರದಿಗಾರಿಕೆಯ ಸಮಯದಲ್ಲಿ ಹೆಮಿಂಗ್ವೆ ಏನೆಲ್ಲವನ್ನು ನೋಡು ತ್ತಿದ್ದರೋ ಅವುಗಳ ಆಧಾರದಲ್ಲಿ ಕತೆಯನ್ನೂ ಹೆಣೆಯುತ್ತಿದ್ದರು.
      ‘ಒಂದು ಸೇತುವೆ. ಆ ಸೇತುವೆ ಎಷ್ಟು ಬ್ಯುಸಿ ಅಂದರೆ, ಎತ್ತಿನ ಬಂಡಿಗಳು, ಲಾರಿಗಳು ಸಹಿತ ವಿವಿಧ ಸಾಗಾಟದ ವಾಹನಗಳು ಸ್ಪರ್ಧೆಗೆ ಬಿದ್ದಂತೆ ಚಲಿಸುತ್ತಿದ್ದವು. ಈ ಸೇತುವೆಯ ಒಂದು ತುದಿಯಲ್ಲಿ ಆ ವೃದ್ಧ ಕುಳಿತಿದ್ದ. ಆತನ ಉಡುಪು ತೀರಾ ಕೊಳಕಾಗಿತ್ತು. ಜನರು ಊರು ತೊರೆಯುವ ಧಾವಂತ ದಲ್ಲಿದ್ದರು. ಊರಿನ ಮೇಲೆ ಶತ್ರುಗಳ ದಾಳಿಯಾಗಲಿದೆ ಎಂಬ ಘೋಷಣೆಯನ್ನು ಹೊರಡಿಸಲಾಗಿತ್ತು. ಹೆಚ್ಚಿನ ಜನರೂ ಸೇತುವೆ ಯನ್ನು ದಾಟಿ ಸುರಕ್ಷಿತ ಜಾಗವನ್ನು ಸೇರಿಕೊಂಡಾಗಿತ್ತು. ಆದರೆ, ಆ ವೃದ್ಧ ಮಾತ್ರ ಸೇತುವೆಯ ತುದಿಯಲ್ಲಿ ಕದಲದೇ ಕುಳಿತಿದ್ದ. ಸೇತುವೆಯ ಮತ್ತೊಂದು ತುದಿಯನ್ನು ದಾಟಿ ಶತ್ರುಗಳ ಚಟುವಟಿಕೆಯನ್ನು ಗಮನಿಸುವ ಜವಾಬ್ದಾರಿ ನನ್ನ ಮೇಲಿದ್ದುದರಿಂದ ನಾನು ಚುರುಕಾಗಿದ್ದೆ. ಆದರೂ ವೃದ್ಧ ಚಲಿಸುತ್ತಿಲ್ಲ. ‘ನಿನ್ನ ಊರು ಯಾವುದು ತಾತ?’ ಎಂದು ನಾನು ಪ್ರಶ್ನಿಸಿದೆ. ಸಾನ್ ಕಾರ್ಲೋಸ್ ಅಂದ. ಜೊತೆಗೇ ನಾನು ಕೇಳದೇನೇ, ‘ಅಲ್ಲಿ ನಾನು ಕೆಲವು ಸಾಕು ಪ್ರಾಣಿಗಳ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದೆ..’ ಎಂದೂ ಸೇರಿಸಿದ.
    ಪ್ರಾಣಿಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದೆ. ಯುದ್ಧ ಭೀತಿಯಿಂದಾಗಿ ನನ್ನೂರಿನ ಜನರೆಲ್ಲ ಊರು ಬಿಟ್ಟರು. ಆದರೂ ನನಗೆ ಬಿಡಲಾಗುತ್ತಿಲ್ಲ. ಹುಟ್ಟೂರನ್ನು ಬಿಡುವುದು ಸುಲಭವಾ? ಆ ಭಾವುಕತೆಯೇ ಇನ್ನೂ ನನ್ನನ್ನು ಇಲ್ಲೇ ಕೂರುವಂತೆ ಮಾಡಿದೆ’ ಎಂದು ವೃದ್ಧ ನಿಟ್ಟುಸಿರಿಟ್ಟ.
     ‘ಯಾವೆಲ್ಲ ಪ್ರಾಣಿಗಳನ್ನು ಸಾಕಿಕೊಂಡಿದ್ದೆ..’ ಎಂದು ನಾನು ಪ್ರಶ್ನಿಸಿದೆ. ಹೀಗೆ ಪ್ರಶ್ನಿಸುವಾಗ ನನ್ನ ದೃಷ್ಟಿ ಸೇತುವೆಯ ಇನ್ನೊಂದು ತುದಿಯಲ್ಲೇ ನೆಟ್ಟಿತ್ತು. ಯಾವ ಸಮಯದಲ್ಲೂ ಶತ್ರು ದಾಳಿ ಮಾಡುವ ಸಂಭವವಿತ್ತು. ಚಿಕ್ಕದೊಂದು ಚಲನೆಗೂ ಗುಂಡಿನ ಸುರಿಮಳೆಯಾಗುವ ಭೀತಿ. ಆದರೆ ಈ ತಾತ ಯಾವ ಭಯವೂ ಇಲ್ಲದೇ ಸುಮ್ಮನೆ ಕುಳಿತಿದ್ದಾನೆ. ಆತ ಹೇಳಿದ,
‘ಬಗೆ ಬಗೆಯ ಪ್ರಾಣಿಗಳಿದ್ದುವು ಮಗೂ. ಮುಖ್ಯವಾಗಿ ಮೂರು ಬಗೆಯ ಪ್ರಾಣಿಗಳು. ಎರಡು ಕುರಿಗಳು, ನಾಲ್ಕು ಜೊತೆ ಪಾರಿವಾಳಗಳು, ಮತ್ತೊಂದು ಬೆಕ್ಕು. ಛೆ, ಅವೆಲ್ಲವನ್ನೂ ಬಿಟ್ಟು ಬರಬೇಕಾಯಿತಲ್ಲ. ನಮ್ಮೂರಿನ ಮೇಲೆ ಶತ್ರುಗಳು ದಾಳಿ ಮಾಡುತ್ತಾರೆಂಬ ಖಚಿತ ಮಾಹಿತಿ ನಮ್ಮ ಸೇನೆಗೆ ಸಿಕ್ಕಿದೆಯಂತಲ್ಲ. ಹಾಗಾಗಿ ಊರಿಗೆ ಊರೇ ಖಾಲಿ ಮಾಡಬೇಕೆಂದು ಸೇನಾಧಿಕಾರಿ ಕಟ್ಟಪ್ಪಣೆ ಹೊರಡಿಸಿರುವರಂತಲ್ಲ. ಏನ್ ಮಾಡೋದು. ಎಲ್ಲವನ್ನೂ ಬಿಟ್ಟು ಬರಬೇಕಾಯಿತು..’ ತಾತ ನಿಟ್ಟುಸಿರಿಟ್ಟ.
     ‘ನಿನಗೆ ಪತ್ನಿ-ಮಕ್ಕಳು ಯಾರೂ ಇಲ್ಲವಾ ತಾತ’ ಎಂದು ಪ್ರಶ್ನಿಸಿದೆ ನಾನು.
     ಉಹೂಂ. ಇಲ್ಲ ಮಗೂ. ಬಿಟ್ಟು ಬಂದ ಬೆಕ್ಕಿನ ಬಗ್ಗೆ ನನಗೆ ಚಿಂತೆಯಿಲ್ಲ. ಬೆಕ್ಕುಗಳು ಹೇಗಾದ್ರೂ ಬದುಕಿಕೊಳ್ಳುತ್ತವೆ. ಆದರೆ ಉಳಿದ ಪ್ರಾಣಿಗಳು ಹಾಗಲ್ಲವಲ್ಲ. ಅವುಗಳ ಬಗ್ಗೆಯೇ ಚಿಂತೆ ನನಗೆ..’ ಆತ ವಿಷಾದಿಸಿದ. ನಾನು ಅವಸರಪಟ್ಟೆ. ಬರುತ್ತಿದ್ದ ಲಾರಿಯೊಂದನ್ನು ತೋರಿಸಿ, ‘ನೀನಿದನ್ನು ಹತ್ತಿ ಹೋಗು. ಇಲ್ಲಿ ಹೆಚ್ಚು ಹೊತ್ತು ಕುಳ್ಳಿರುವಂತಿಲ್ಲ. ಇದು ಅಪಾಯಕಾರಿ ಪ್ರದೇಶ’ ಎಂದೆ. ತಾತ ಮಿಸುಕಾಡಲಿಲ್ಲ. ‘ಇರು. ಸ್ವಲ್ಪ ಹೊತ್ತು ಇಲ್ಲೇ ಇದ್ದು ಮತ್ತೆ ಹೋಗುತ್ತೇನೆ. ಆರು ಮೈಲು ದೂರದಿಂದ ನಡೆದುಕೊಂಡು ಬಂದಿದ್ದೇನೆ. ಸುಸ್ತು ಇದೆ’ ಎಂದ. ಬಳಿಕ ಮೊದಲಿನ ಮಾತನ್ನೇ ತುಸು ವಿಸ್ತರಿಸಿ ಹೇಳತೊಡಗಿದ- ‘ನನಗೆ ಬೆಕ್ಕಿನ ಬಗ್ಗೆ ಚಿಂತೆಯಿಲ್ಲ. ಬೆಕ್ಕು ತನ್ನ ಕಾಳಜಿಯನ್ನು ತಾನೇ ವಹಿಸಿಕೊಳ್ಳುತ್ತದೆ. ಆದರೆ ಉಳಿದ ಪ್ರಾಣಿಗಳ ಬಗ್ಗೆಯೇ ನಂಗೆ ಭಯ. ಅವುಗಳು ಸುರಕ್ಷಿತವಾಗಿ ಉಳಿಯಬಲ್ಲವು ಎಂದು ನಿನಗೆ ಅನಿಸುತ್ತಿದೆಯೇ.. ಎಂದು ಕೇಳಿದ ತಾತ. ನನ್ನ ಜವಾಬ್ದಾರಿ ಈ ತಾತನನ್ನು ಊರು ಬಿಡಿಸುವುದೊಂದೇ ಅಲ್ಲವಾದುದರಿಂದ ಸೇತುವೆಯ ಆ ಕಡೆಯ ಬಗ್ಗೆ ಗಮನ ಹರಿಸುತ್ತಲೇ ಮತ್ತು ತಾತನಿಗೆ ಏನಾದರೂ ಉತ್ತರ ಕೊಡಬೇಕೆಂಬ ಉದ್ದೇಶದಿಂದ ‘ಅವು ಸುರಕ್ಷಿತವಾಗಿರಬಲ್ಲವು’ ಎಂದೆ. ಜೊತೆಗೇ, ‘ಇಲ್ಲಿಗೆ ಬರು ವಾಗ ಪಾರಿವಾಳಗಳ ಪಂಜರದ ಬಾಗಿಲನ್ನು ತೆರೆದಿಟ್ಟು ಬಂದಿರು ವೆಯಾ’ ಎಂದು ನಾನು ಪ್ರಶ್ನಿಸಿದೆ. ಆತ ಹೌದು ಎಂಬಂತೆ ತಲೆಯಾಡಿಸಿದ. ಹಾಗಾದರೆ, ಅವು ಹಾರಿ ಹೋಗಿರ್ತವೆ ಅನ್ನು ಅಂದೆ. ಅವುಗಳೇನೋ ಹಾರಿ ಹೋಗಿರ್ತವೆ, ಆದರೆ ಕುರಿಗಳು. ಅಲ್ಲದೇ ನನ್ನದಲ್ಲದ ಅನೇಕ ಪ್ರಾಣಿಗಳೂ ಊರಿನಲ್ಲಿವೆ. ಅವುಗಳ ಬಗ್ಗೆಯೂ ನನಗೆ ನೆನಪಾಗುತ್ತಿದೆ.. ಎಂದ. ನಾನು ಹೇಗಾದರೂ  ಮಾಡಿ ಅಜ್ಜನನ್ನು ಸೇತುವೆಯಿಂದ ಕದಲಿಸಿ ಬಿಟ್ಟೆ. ‘ಛೆ ನಾನು ಪ್ರಾಣಿಗಳನ್ನು ಬಿಟ್ಟು ಬರಬಾರದಿತ್ತು..’ ಎಂದು ತನ್ನಷ್ಟಕ್ಕೇ ಅನ್ನುತ್ತಾ ತಾತ ನಿಧಾನಕ್ಕೆ ಹೊರಟು ಹೋದ. ಎಂಥ ವಿಪರೀತ ಪರಿಸ್ಥಿತಿಯಲ್ಲೂ ಬೆಕ್ಕುಗಳು ತಮ್ಮನ್ನು ತಾವೇ ನಿಭಾಯಿಸಿಕೊಳ್ಳಬಲ್ಲವು ಎನ್ನುವುದೊಂದೇ ಆ ತಾತನಿಗಿದ್ದಿರಬಹುದಾದ ಆಶಾಕಿರಣವೆನ್ನಬಹುದಾಗಿತ್ತು..’
      ಓರ್ವ ಸೈನಿಕನ ಪಾತ್ರದಲ್ಲಿ ತನ್ನನ್ನು ಬಿಂಬಿಸಿಕೊಂಡು ವೃದ್ಧನ ಎದೆಮಿಡಿತದಲ್ಲಿ ಯುದ್ಧದ ಇನ್ನೊಂದು ಮುಖವನ್ನು ‘ಓಲ್ಡ್ ಮ್ಯಾನ್ ಅಟ್ ದ ಬ್ರಿಡ್ಜ್’ ಎಂಬ ಶೀರ್ಷಿಕೆಯ ಈ ಕತೆಯಲ್ಲಿ ಹೆಮಿಂಗ್ವೆ ಬಿಚ್ಚಿಡುತ್ತಾರೆ. ಈ ಕಥೆಯಲ್ಲಿ ಫಿರಂಗಿಗಳಿಲ್ಲ. ಬಾಂಬುಗಳಿಲ್ಲ. ವೈಮಾನಿಕ ದಾಳಿಯ ಸದ್ದುಗಳಿಲ್ಲ ಅಥವಾ ಯುದ್ಧ ಅಂದರೆ ಇವೇ ಅಲ್ಲ. ಇದರಾಚೆಗೆ ಯುದ್ಧದಲ್ಲಿ ಭಾವ ನಾತ್ಮಕ ಅಂಶಗಳಿವೆ. ಸಾಮಾನ್ಯವಾಗಿ, ಬಾಂಬು ದಾಳಿಗೀಡಾಗಿ ಕುಸಿದು ಹೋದ ಕಟ್ಟಡಗಳ ಚಿತ್ರಗಳು ನಮಗೆ ಆರ್ಥಿಕ ನಾಶ-ನಷ್ಟಗಳ ಪ್ರಮಾಣವನ್ನಷ್ಟೇ ತಕ್ಪಣಕ್ಕೆ ಹೇಳಬಲ್ಲವು. ಆದರೆ ಆ ಕುಸಿದ ಕಟ್ಟಡಗಳ ಒಳಗೆ ಇದ್ದಿರಬಹುದಾದ ಮನುಷ್ಯರ ಭಾವನೆ ಗಳು ಏನೇನಿರಬಹುದು? ಅವರು ವಲಸೆ ಹೋಗಿರಬಹುದೇ? ಹೋಗುವಾಗ ಅವರು ಯಾವೆಲ್ಲ ನೆನಪುಗಳನ್ನು ಹೊತ್ತುಕೊಂಡು ಹೋಗಿರಬಹುದು? ತಮ್ಮಿಷ್ಟದ ಏನೆಲ್ಲವನ್ನು ಬಿಟ್ಟು ಹೋಗಬೇಕಾಗಿ ಬಂದಿರಬಹುದು? ಎಷ್ಟು ಬಾರಿ ಕಣ್ಣೀರು ಸುರಿಸಿರಬಹುದು? ಹೂವಿನ ಗಿಡ, ಹಣ್ಣುಗಳ ಮರಗಳು, ಕೈತೋಟ, ಸಾಕು ಪ್ರಾಣಿ ಗಳು, ಇಷ್ಟದ ಡ್ರಾಯಿಂಗ್ ರೂಮ್, ಮಂಚ.. ಇತ್ಯಾದಿಗಳಿಗೆಲ್ಲ ವಿದಾಯ ಕೋರಬೇಕಾದ ಆ ಸಂದರ್ಭಗಳು ಹೇಗಿರಬಹುದು? ಇನ್ನು, ವಲಸೆ ಹೋಗಬೇಕಾದ ದಾರಿಯ ಬಗ್ಗೆ, ತಲುಪಬೇಕಾದ ಗುರಿಯ ಕುರಿತು ಏನೆಲ್ಲ ಆತಂಕಗಳಿರಬಹುದು? ಹೀಗೆ ಬರೇ ಸಾವುಗಳಷ್ಟೇ ಯುದ್ಧವಲ್ಲ ಎಂಬುದನ್ನು ‘ಓಲ್ಡ್ ಮ್ಯಾನ್ ಅಟ್ ದ ಬ್ರಿಡ್ಜ್’ ಎಂಬ ಕತೆ ನವಿರಾಗಿ ಹೇಳುವಾಗ ಅಬೂ ಅಲಿಯ ನೈಜ ಬದುಕು ಯುದ್ಧದ ಇನ್ನೊಂದು ಪಾಶ್ರ್ವವನ್ನು ಹೇಳುತ್ತದೆ.
     ಇರಾಕ್‍ನ ಅಬೂ ಅಲಿ ಕೆಲಸ ಮಾಡುತ್ತಿರುವುದು ಅರಬ್ ರಾಷ್ಟ್ರವೊಂದರಲ್ಲಿ. ಆತ ತಜ್ಞ ಕಾರ್ ಮೆಕ್ಯಾನಿಕ್ ಆಗಿ ಗುರುತಿಸಿ ಕೊಂಡಿದ್ದ. ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿನ ತುಂಬು ಸಂಸಾರ. 2003ರಲ್ಲಿ ಇರಾಕ್‍ನ ಮೇಲೆ ಅಮೇರಿಕ ಯುದ್ಧ ಘೋಷಿಸುವ ಮೊದಲು ಇರಾಕ್‍ನಲ್ಲಿ ಎಲ್ಲವೂ ಸಹಜ ವಾಗಿತ್ತು. ಅಬೂ ಅಲಿಯ ಕುಟುಂಬವೂ ಸುಖವಾಗಿತ್ತು. ಯುದ್ಧ ಕ್ಕಿಂತ ಮೊದಲು ಅತ್ಯಧಿಕ ತಲಾ ಆದಾಯ ಇರುವ ರಾಷ್ಟ್ರಗಳಲ್ಲಿ ಇರಾಕ್ ಮುಂಚೂಣಿಯಲ್ಲಿತ್ತು. ಇರಾಕ್ ದಿನಾರ್ ಎಂಬುದು ಅತ್ಯಧಿಕ ಬೆಲೆಬಾಳುವ ಕರೆನ್ಸಿಯಾಗಿತ್ತು. ಶೈಕ್ಪಣಿಕವಾಗಿಯೂ ಸಾಕಷ್ಟು ಮುಂದುವರಿದಿದ್ದ ದೇಶ ಇರಾಕ್. ಅದಕ್ಕೆ ಸಾಕ್ಷಿ ಎಂಬಂತೆ ಅಬೂ ಅಲಿ ಮತ್ತು ಪತ್ನಿ ಸಮೀರಾ ಪಟಪಟನೆ ಇಂಗ್ಲಿಷ್ ಮಾತಾಡುವುದನ್ನು ಉಲ್ಲೇಖಿಸಬಹುದು. ಆದರೆ, 2003ರ ಯುದ್ಧದಲ್ಲಿ ಅಬೂ ಅಲಿಯ ಸಹೋದರ ಹತ್ಯೆ ಗೀಡಾಗುತ್ತಾರೆ. ಸುಖವಾಗಿದ್ದ ಕುಟುಂಬದ ಮೇಲೆ ಎರಗಿದ ಮೊದಲ ಆಘಾತ ಅದು. ಸಂದರ್ಭಕ್ಕೆ ತಕ್ಕಂತೆ ಅಬೂ ಅಲಿ ತನ್ನ ಕುಟುಂಬವನ್ನು ತನ್ನಲ್ಲಿಗೆ ಕರೆಸಿಕೊಳ್ಳುತ್ತಿದ್ದರು. ಒಂದೆರಡು ತಿಂಗಳು ಇದ್ದು ಕುಟುಂಬ ಮರಳಿ ಹೋಗುತ್ತಿತ್ತು. ಯುದ್ಧದ ಬಳಿಕದ ಇರಾಕ್‍ನಲ್ಲಿ ಬದುಕೆಂಬುದು ದೊಡ್ಡ ಸವಾಲು. ಅಬೂ ಅಲಿ ಇರುವಲ್ಲಿಗೆ ಬರುತ್ತಿದ್ದ ಪತ್ನಿ ಮತ್ತು ಮಕ್ಕಳು ಹಿಂತಿರುಗಿ ಹೋಗಲು ಇಷ್ಟಪಡುತ್ತಿರಲಿಲ್ಲ. ಹಾಗಂತ, 6 ಲಕ್ಪದಷ್ಟು ಜನರನ್ನು ಬಲಿ ಪಡೆದ ಮತ್ತು ಅದಕ್ಕಿಂತಲೂ ಹೆಚ್ಚು ನಾಶನಷ್ಟಗಳಿಗೆ ಕಾರಣವಾದ ಇರಾಕನ್ನು ಯಾರಾದರೂ ವಾಸಸ್ಥಳವಾಗಿ ಆಯ್ಕೆ ಮಾಡಿಕೊಳ್ಳುವುದು ಸಣ್ಣ ಧೈರ್ಯವಲ್ಲವಲ್ಲ. ಅಲ್ ಹಾಯ್ ಮೋಟರ್ಸ್‍ನಲ್ಲಿ ದುಡಿಯುತ್ತಿದ್ದ ಅಬೂ ಅಲಿಯು ಪತ್ನಿ ಮತ್ತು ಮಕ್ಕಳ ಬೇಡಿಕೆಯನ್ನು ಸಂಪೂರ್ಣ ಒಪ್ಪಿಕೊಳ್ಳುವ ಸ್ಥಿತಿಯಲ್ಲೂ ಇರಲಿಲ್ಲ. ಇರಾಕ್ ಯುದ್ಧದ ಮೊದಲು ಒಂದು ಇರಾಕಿ ದಿನಾರ್‍ಗೆ ಸಿಗುತ್ತಿದ್ದ ಪೆಪ್ಸಿಯು ಯುದ್ಧಾನಂತರ 36 ದಿನಾರ್‍ಗೆ ತನ್ನ ಬೆಲೆಯನ್ನು ಏರಿಸಿಕೊಂಡಿತ್ತು ಅಥವಾ ದಿನಾರ್‍ನ ಬೆಲೆ ಅಷ್ಟರ ಮಟ್ಟಿಗೆ ಕುಸಿದು ಹೋಗಿತ್ತು. ಕಳ್ಳತನ, ದರೋಡೆ, ಸುಲಿಗೆಗಳು ಸಾಮಾನ್ಯ ಅನ್ನಬಹುದಾದ ಸ್ಥಿತಿಗೆ ತಲುಪಿದುವು. ಅದರ ಬಿಸಿ ಒಂದು ದಿನ ಅಬೂ ಅಲಿಯ ಕುಟುಂಬಕ್ಕೂ ತಾಗಿತು. ದರೋಡೆ ಕೋರರ ಗುಂಪು ಅಬೂ ಅಲಿಯ ಮನೆಯನ್ನು ಹೊಕ್ಕವು. ಪತ್ನಿ, ಮಕ್ಕಳನ್ನು ಮನೆಯೊಳಗೆ ಆ ಗುಂಪು ಬಂಧಿಯಾಗಿಸಿತು. ಪ್ರತಿಭಟಿಸಿದ ಪತ್ನಿಯ ಅಕ್ಕಳ ಎಡ ಭುಜಕ್ಕೆ ದರೋಡೆಕೋರನೊಬ್ಬ ಗುಂಡು ಹೊಡೆದ. ಮನೆಯಲ್ಲಿದ್ದ ಹಣ, ಆಭರಣ ಎಲ್ಲವನ್ನೂ ಅವರು ಹೊತ್ತೊಯ್ದರು. ಜೀವ ಉಳಿದಿದೆ ಅನ್ನುವುದನ್ನು ಬಿಟ್ಟರೆ ಅಬೂ ಅಲಿಗೆ ನೆಮ್ಮದಿ ಕೊಡಬಹುದಾದ ಇನ್ನಾವುದೂ ಅಲ್ಲಿ ಉಳಿದಿರಲಿಲ್ಲ.
       ನಿಜವಾಗಿ, ಸೇತುವೆಯ ತುದಿಯಲ್ಲಿ ಕುಳಿತು ತನ್ನ ಸಾಕು ಪ್ರಾಣಿಗಳ ಬಗ್ಗೆ ಚಿಂತಿಸುತ್ತಾ ಭಾವುಕನಾದ ‘ಓಲ್ಡ್ ಮ್ಯಾನ್ ಅಟ್ ದ ಬ್ರಿಡ್ಜ್’ ಕತೆಯ ಆ ವೃದ್ಧ ಮತ್ತು ಬೆಂಜ್, ಬಿಎಂಡಬ್ಲ್ಯು, ರಾಲ್ಸ್ ರಾಯ್ ಕಾರುಗಳ ಅಡಿಯಲ್ಲಿ ಸ್ಪಾನರ್ ಮತ್ತಿತರ ಉಪ ಕರಣಗಳನ್ನು ಹಿಡಿದು ತನ್ನ ಪತ್ನಿ-ಮಕ್ಕಳನ್ನು ಧ್ಯಾನಿಸುತ್ತಿರುವ ಅಬೂ ಅಲಿಯು ಯುದ್ಧವೊಂದರ ಬೇರೆ ಬೇರೆ ಮುಖಗಳಾಗಿದ್ದಾರೆ. ಓರ್ವರು ತನ್ನ ಸಾಕು ಪ್ರಾಣಿಯ ಮೂಲಕ ತನ್ನನ್ನು ಅಭಿವ್ಯಕ್ತಿಸಿ ಕೊಂಡರೆ, ಇನ್ನೋರ್ವರು ತನ್ನ ಕುಟುಂಬದ ಮೂಲಕ ತನ್ನೊಳ ಗನ್ನು ಬಿಚ್ಚಿಡುತ್ತಾರೆ. ಅಬೂ ಅಲಿ ಇತ್ತಿತ್ತಲಾಗಿ ಚಿಕ್ಕ ಚಿಕ್ಕ ವಿಷಯಕ್ಕೂ ಕಣ್ಣೀರಾಗುತ್ತಾರೆಂದು ಜೊತೆಗಾರರು ಹೇಳುತ್ತಾರೆ. ಆರ್ಥಿಕ ನಷ್ಟದ ಹೊರತಾಗಿ ಯುದ್ಧವೊಂದು ಯಾಕೆ ಚರ್ಚಿತ ಗೊಳ್ಳಬೇಕು ಎಂಬುದನ್ನು ಸಾರುವ ಎರಡು ಮುಖಗಳು ಇವು. ಊರಲ್ಲಿರುವ ಕುಟುಂಬವನ್ನು ಅಬೂ ಅಲಿ ನೆನೆಯುವಾಗ ಊರಲ್ಲಿ ಬಿಟ್ಟು ಬಂದಿರುವ ಬೆಕ್ಕಿಗಾಗಿ ಆ ವೃದ್ಧ ಹಪಹಪಿಸುತ್ತಾನೆ. ಹಾಗಂತ, ಆ ವೃದ್ಧನಿಗೆ ಹೋಲಿಸಿದರೆ ಅಬೂ ಅಲಿಗೆ ಎಲ್ಲವೂ ಇದೆ. ಊರೂ ಇದೆ. ಕುಟುಂಬವೂ ಇದೆ. ಆದರೂ ಭಯ. ಯಾವಾಗ ಇವರೆಲ್ಲ ಇಲ್ಲವಾಗುತ್ತಾರೋ ಅನ್ನುವ ಭಯ. ತಾತ ನಿಗೋ ತನ್ನವು ಅನ್ನುವ ಎಲ್ಲವೂ ಕಳೆದು ಹೋದುದರ ನೋವು. ಆದ್ದರಿಂದಲೇ, ಯುದ್ಧ ಭೀತಿಯಿಲ್ಲದೇ ಸುಖವಾಗಿ ಬದುಕುತ್ತಿರುವ ಎಲ್ಲರನ್ನೂ ತಟ್ಟಬೇಕಾದ ಎರಡು ಪಾತ್ರಗಳು ಅಬೂ ಅಲಿ ಮತ್ತು ಆ ವೃದ್ಧ. ಒಂದು ವೇಳೆ ಆ ಸ್ಥಿತಿ ನಮಗೂ ಅನಿವಾರ್ಯವಾದರೆ..
       ಕಳೆದವಾರ ಓದಲು ಸಿಕ್ಕ ಆ ತಾತ ಮತ್ತು ಅಬೂ ಅಲಿಯನ್ನು ನಿಮಗೂ ಹೀಗೆ ಪರಿಚಯಿಸಬೇಕೆನಿಸಿತು.

No comments:

Post a Comment