Sunday, December 4, 2016

ಒಂದೇ ವೇದಿಕೆಯಲ್ಲಿ ಒಟ್ಟಾದವರು ಇಳಿದು ಹೋದ ಬಳಿಕ..

         ಶಾಬಾನು
         ಶಾಯರಾ ಬಾನು
        ಭಾರತೀಯ ಮುಸ್ಲಿಮ್ ಸಮುದಾಯದ ವಿವಿಧ ಸಂಘಟನೆಗಳನ್ನು ಮೊಟ್ಟ ಮೊದಲು ಒಂದೇ ವೇದಿಕೆಗೆ ಸೇರಿಸಿದ್ದು ಬಹುಶಃ ಶಾಬಾನು ಎಂಬ ಮಹಿಳೆ. ಆಕೆಯ ಪತಿ ಮುಹಮ್ಮದ್ ಅಹ್ಮದ್ ಖಾನ್ ಎಂಬವರು ಮಧ್ಯಪ್ರದೇಶದಲ್ಲಿ ನ್ಯಾಯ ವಾದಿಯಾಗಿದ್ದರು. ಅವರು ಇನ್ನೊಂದು ಮದುವೆಯೂ ಆದರು. ಇಬ್ಬರು ಪತ್ನಿಯರೊಂದಿಗೆ ವರ್ಷಗಳ ವರೆಗೆ ಸಂಸಾರವನ್ನೂ ನಡೆಸಿದರು. ಆದರೆ, 1978ರಲ್ಲಿ ಶಾಬಾನುಗೆ ತಲಾಕ್ ಹೇಳಿದರು. ಹೀಗೆ ತಲಾಕ್ ಹೇಳುವಾಗ ಪ್ರತಿ ತಿಂಗಳು 200 ರೂಪಾಯಿ ಮಾಸಾಶನ ನೀಡುವುದಾಗಿಯೂ ಭರವಸೆ ನೀಡಿದ್ದರು. ಆದರೆ ಮಾತಿಗೆ ತಪ್ಪಿದರು. ಇದನ್ನು ಪ್ರಶ್ನಿಸಿ ಶಾಬಾನು ಸುಪ್ರೀಮ್ ಕೋರ್ಟ್‍ನ ಮೆಟ್ಟಲೇರಿದಳು. ಕೋರ್ಟ್‍ನ ತೀರ್ಪು ಮುಸ್ಲಿಮ್ ಸಮುದಾಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಯಿತು. ಮುಸ್ಲಿಮರ ವೈಯಕ್ತಿಕ ನಿಯಮದಲ್ಲಿ ಸುಪ್ರೀಮ್ ಕೋರ್ಟ್ ಮಧ್ಯ ಪ್ರವೇಶಿಸಿದ್ದು ತಪ್ಪು ಎಂಬ ಅಭಿಪ್ರಾಯ ಬಲವಾಗಿ ಕೇಳಿ ಬಂತು. ಈ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ವಿವಿಧ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸೇರಿಕೊಂಡು ಪ್ರತಿಭಟಿಸಲು ತೀರ್ಮಾನಿಸಿದುವು. ಅದರ ಬಳಿಕ ಮುಸ್ಲಿಮ್ ಸಮುದಾಯದ ಬೇರೆ ಬೇರೆ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡದ್ದು ಈ 2016ರ ಕೊನೆಯಲ್ಲಿ. ಅದಕ್ಕೆ ಕಾರಣ ಛತ್ತೀಸ್‍ಗಢದ ಶಾಯರಾ ಬಾನು ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ. ಶಾಯರಾ ಬಾನು ತನಗೆ ನೀಡಲಾದ ವಿಚ್ಛೇದನವನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್‍ನ ಮೆಟ್ಟಲೇರಿದಳು. ಕೋರ್ಟು ಕೇಂದ್ರ ಸರಕಾರದ ಅಭಿಪ್ರಾಯವನ್ನು ಕೋರಿ ನೋಟೀಸನ್ನೂ ಜಾರಿ ಮಾಡಿತು. ಸಮಾನ ನಾಗರಿಕ ಸಂಹಿತೆಯ ಕುರಿತು ಚರ್ಚೆಯನ್ನೂ ಹುಟ್ಟು ಹಾಕಿತು. ಕೇಂದ್ರ ಸರಕಾರದ ಕಾನೂನು ಆಯೋಗವು ಈ ಕುರಿತಾಗಿ 16 ಪ್ರಶ್ನೆಗಳನ್ನೂ ಬಿಡುಗಡೆಗೊಳಿಸಿತು. ಈ ಎಲ್ಲ ಚಟುವಟಿಕೆಗಳು ಮುಸ್ಲಿಮ್ ಸಮುದಾಯದಲ್ಲಿ ಮತ್ತೆ ತಲ್ಲಣವನ್ನು ಸೃಷ್ಟಿಸಿದೆ. ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುತ್ತಿದ್ದ ಸಂಘಟನೆಗಳೆಲ್ಲ ಒಟ್ಟಾಗಿವೆ. ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಕಳೆದವಾರ (ನ. 22) ಬೃಹತ್ ಶರೀಯತ್ ಸಂರಕ್ಷಣಾ ಸಭೆ ನಡೆಯಿತು. ಸಾವಿರಾರು ಮಂದಿ ಭಾಗವಹಿಸಿದರು. 30ಕ್ಕಿಂತಲೂ ಅಧಿಕ ಸಂಘಟನೆಗಳ ನಾಯಕರು ವೇದಿಕೆಯಲ್ಲಿ ಒಟ್ಟಾದರು. ವಿಶೇಷ ಏನೆಂದರೆ, ಸಭಿಕರಿಂದ ಅತ್ಯಂತ ಹೆಚ್ಚು ಬಾರಿ ಅಲ್ಲಾಹು ಅಕ್ಬರ್ ಎಂಬ ಘೋಷವಾಕ್ಯ ಕೇಳಿಬಂದದ್ದು ಮತ್ತು ಭಾವುಕವಾಗಿ ಪ್ರತಿಕ್ರಿಯಿಸಿದ್ದು ವೇದಿಕೆಯಿಂದ ಐಕ್ಯತೆಯ ಮಾತುಗಳು ಮೊಳಗುತ್ತಿದ್ದಾಗ. ವೇದಿಕೆಯಲ್ಲಿರುವ ನಾಯಕರು ಐಕ್ಯತೆಯ ಅಗತ್ಯದ ಬಗ್ಗೆ ಹೇಳಿದಾಗಲೆಲ್ಲ ಸಭಿಕರು ಅಪಾರ ಹರ್ಷದಿಂದ ಸ್ವಾಗತಿಸಿದರು. ಇಲ್ಲಿರುವ ಪ್ರಶ್ನೆ ಏನೆಂದರೆ, ಸಭಿಕರ ಈ ಪ್ರತಿಕ್ರಿಯೆಯಲ್ಲಿರುವ ಒಳಾರ್ಥವನ್ನು ವೇದಿಕೆಯಲ್ಲಿರುವ ನಾಯಕರು ಎಷ್ಟಂಶ ಅರ್ಥ ಮಾಡಿಕೊಂಡಿದ್ದಾರೆ  ಮತ್ತು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದು. ಮಂಗಳೂರಿನ ಕಾರ್ಯಕ್ರಮ ಮುಗಿದಿದೆ. ವೇದಿಕೆಯಲ್ಲಿದ್ದ ನಾಯಕರೆಲ್ಲ ವೇದಿಕೆಯಿಂದಿಳಿದು ತಂತಮ್ಮ ಸಂಘಟನೆ ಗಳಿಗೆ ಮರಳಿದ್ದಾರೆ. ನಿಜವಾಗಿ, ವೇದಿಕೆಯಲ್ಲಿ ಒಟ್ಟಾದುದಕ್ಕಿಂತಲೂ ಹೆಚ್ಚಿನ ಜವಾಬ್ದಾರಿ ಇರುವುದು ಮುಂದಿನ ದಿನಗಳಲ್ಲಿ. ಈ ಐಕ್ಯತೆಗೆ ಭಂಗ ಬರದಂತೆ ನೋಡಿ ಕೊಳ್ಳುವುದು ಹೇಗೆ? ಈ ಒಗ್ಗಟ್ಟನ್ನು ಕಾಪಾಡಿಕೊಳ್ಳುವುದು ಹೇಗೆ? ಒಗ್ಗಟ್ಟು ಮುರಿಯದಂಥ ಯಾವೆಲ್ಲ ಧೋರಣೆಗಳನ್ನು ಸಂಘಟನೆಗಳು ಕೈಗೊಳ್ಳಬಹುದು? ಒಗ್ಗಟ್ಟು ಮುರಿಯಬಹುದಾದಂಥ ವಿಷಯಗಳು ಯಾವುವು? ಅವುಗಳ ಬಗ್ಗೆ ಇನ್ನು ಮುಂದಕ್ಕೆ ಯಾವ ನೀತಿಯನ್ನು ಅಳವಡಿಸಿಕೊಳ್ಳಬಹುದು?
     ವೇದಿಕೆಯಿಂದ ಕೆಳಗಿಳಿದ ಸಂಘಟನೆಗಳ ನಾಯಕರು ಆತ್ಮಾವ ಲೋಕನ ನಡೆಸಬೇಕಾದ ಸಂದರ್ಭವಿದು.
        ಮುಸ್ಲಿಮ್ ಸಮುದಾಯಕ್ಕೆ ಸಂಘಟನೆಗಳಿಂದ ತೊಂದರೆ ಆಗಿಲ್ಲ. ಆದರೆ ಅವುಗಳು ತಮ್ಮ ವಿಚಾರವನ್ನು ವ್ಯಕ್ತಪಡಿಸುವ ರೀತಿಯಿಂದ ಸಾಕಷ್ಟು ತೊಂದರೆಗಳಾಗಿವೆ. ಅಂದಹಾಗೆ, ಎಲ್ಲ ಸಂಘಟನೆಗಳಲ್ಲೂ ಒಂದು ಸಮಾನ ಅಂಶ ಇದೆ. ಅದೇನೆಂದರೆ, ಮುಸ್ಲಿಮ್ ಸಮುದಾಯವನ್ನು ಧಾರ್ಮಿಕವಾಗಿ ಹೆಚ್ಚು ಪ್ರಜ್ಞಾವಂತಗೊಳಿಸುವುದು. ಒಂದಕ್ಕಿಂತ ಹೆಚ್ಚು ಸಂಘಟನೆಗಳು ಕೇವಲ ಈ ಏಕ ಅಜೆಂಡಾವನ್ನೇ ಪ್ರಮುಖ ಗುರಿಯಾಗಿಸಿಕೊಂಡು ಕಾರ್ಯಪ್ರವೃತ್ತವಾಗಿವೆ. ಅದರ ಜೊತೆಗೇ ಸಮುದಾಯವನ್ನು ಶೈಕ್ಷಣಿಕವಾಗಿ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿಯೂ ಅಭಿವೃದ್ಧಿಯತ್ತ ಸಾಗಿಸುವ ಮತ್ತು ಸಮಾಜದಲ್ಲಿ ಸೌಹಾರ್ದ ವಾತಾವರಣವನ್ನು ಉಳಿಸುವ ಉದ್ದೇಶದೊಂದಿಗೆ ಕಾರ್ಯ ಪ್ರವೃತ್ತವಾದ ಸಂಘಟನೆಯೂ ಇದೆ. ಇನ್ನು, ಯಾವುದಾದರೊಂದು ನಿಶ್ಚಿತ ಕ್ಷೇತ್ರಕ್ಕೆ ಮಾತ್ರ ಗಮನವನ್ನು ಕೇಂದ್ರೀಕರಿಸಿಕೊಂಡು ಚಟುವಟಿಕೆಯಲ್ಲಿರುವ ಸಂಘಟನೆಗಳೂ ಇವೆ. ಉದಾ: ಶಿಕ್ಷಣ, ಆರೋಗ್ಯ, ಸೇವೆ ಇತ್ಯಾದಿ ಇತ್ಯಾದಿ. ಅಂತೂ ಎಲ್ಲ ಸಂಘಟನೆಗಳ ಮುಖ್ಯ ಗುರಿ ಸಮುದಾಯ, ಸಮುದಾಯದ ಅಭಿವೃದ್ಧಿ ಮತ್ತು ದೇಶದ ಜನರಿಗೆ ಇಸ್ಲಾಮಿನ ನಿಜವಾದ ಮುಖವನ್ನು ಪರಿಚಯಿಸುವುದು ಮತ್ತು ಶಾಂತಿಪೂರ್ಣ ಭಾರತವನ್ನು ಕಟ್ಟುವುದೇ ಆಗಿದೆ. ಪ್ರಶ್ನೆ ಇರುವುದೂ ಇಲ್ಲೇ. ಉತ್ತರ-ದಕ್ಷಿಣ ಎಂದು ಮುಖ ತಿರುಗಿಸಬಹು ದಾದಂತಹ ಮೂಲಭೂತ ವ್ಯತ್ಯಾಸಗಳು ಸಂಘಟನೆಗಳ ನಡುವೆ ಇಲ್ಲದೇ ಇರುವಾಗ ಕನಿಷ್ಠ ತಂತಮ್ಮ ಸಂಘಟನೆಗಳಲ್ಲಿ ಇದ್ದುಕೊಂಡೇ ಮತ್ತು ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಉಳಿಸಿಕೊಂಡೇ ಸಮುದಾಯದ ಅಭಿವೃದ್ಧಿಗಾಗಿ ಒಂದೇ ವೇದಿಕೆ  ಯಲ್ಲಿ ಒಟ್ಟು ಸೇರುವುದಕ್ಕೆ ಯಾಕೆ ಕಷ್ಟವಾಗುತ್ತಿದೆ? 1985ರ ಬಳಿಕ ಮುಸ್ಲಿಮ್ ಸಮುದಾಯದ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡದ್ದು ಮತ್ತು ಒಂದೇ ದನಿಯಲ್ಲಿ ಮಾತಾಡಿದ್ದು ಬಹುಶಃ ಇದೇ ಮೊದಲು. ಹಾಗಂತ, ಕಳೆದ 31 ವರ್ಷಗಳಲ್ಲಿ ಇಂಥ ಒಟ್ಟು ಸೇರುವಿಕೆಯನ್ನು ಅನಿವಾರ್ಯಗೊಳಿಸುವ ಯಾವ ಸಮಸ್ಯೆಗಳೂ ಇರಲಿಲ್ಲವಾ ಅಥವಾ ವೈಚಾರಿಕ ಭಿನ್ನಾಭಿಪ್ರಾಯಗಳು ಸಮುದಾಯದ ಅಗತ್ಯವನ್ನೂ ತಳ್ಳಿ ಹಾಕುವಷ್ಟು ಪ್ರಾಮುಖ್ಯತೆಯನ್ನು ಪಡೆದುವಾ? 1985ರ ಬಳಿಕ ಈ 31 ವರ್ಷಗಳಲ್ಲಿ ಮುಸ್ಲಿಮ್ ಸಮುದಾಯದ ಆಂತರಿಕ ಅಭಿವೃದ್ಧಿ ಮತ್ತು ಧಾರ್ಮಿಕ ಸುಧಾರಣೆಯಲ್ಲಿ ಏನೆಲ್ಲ ಮತ್ತು ಎಷ್ಟೆಲ್ಲ ಬದಲಾವಣೆಗಳಾಗಿವೆ? ತಲಾಕನ್ನೇ ಎತ್ತಿಕೊಳ್ಳಿ. ಇವತ್ತು ಶಾಯರಾ ಬಾನು ಸುಪ್ರೀಮ್ ಕೋರ್ಟ್‍ಗೆ ಹೋಗಿದ್ದೂ ಇದನ್ನೇ ಎತ್ತಿಕೊಂಡು. ಸಮಾನ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆಗೆ ಕಾರಣವಾಗಿದ್ದೂ ಇದೇ ತಲಾಕ್. 1985ರಲ್ಲಿ ಶಾಬಾನುಗೆ ಮಾಸಾಶನ ನೀಡುವ ಬಗ್ಗೆ ಕೋರ್ಟ್‍ನ ನಿಲುವನ್ನು ಪ್ರತಿಭಟಿಸಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಂಘಟನೆಗಳು ಆ ಬಳಿಕ ತಂತಮ್ಮ ವಲಯದಲ್ಲಿ ಈ ಕುರಿತಂತೆ ಯಾವ ರೀತಿಯ ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ? ಸಮುದಾಯದಲ್ಲಿ ಹೇಗೆ ಜಾಗೃತಿಯನ್ನು ಮೂಡಿಸಿವೆ? ನಿಜವಾಗಿ, ಸಮುದಾಯದ
ದೊಡ್ಡ ಆಸ್ತಿಯೆಂದರೆ ಮಸೀದಿಗಳು. ಮಸೀದಿಗಳಿಗೆ ದೊಡ್ಡದೊಂದು ಗೌರವವನ್ನು ಈ ಸಮುದಾಯ ಕೊಟ್ಟಿದೆ. ಒಂದು ಮಸೀದಿಯ ವ್ಯಾಪ್ತಿಯೊಳಗೆ ಬೇರೆ ಬೇರೆ ಸಂಘಟನೆಗಳ ಚಟುವಟಿಕೆಗಳು ನಡೆಯುತ್ತಿರಬಹುದು. ಹಾಗೆಯೇ ಮಸೀದಿ ಆಡಳಿತ ಕಮಿಟಿಯಲ್ಲಿ ಯಾವುದಾದರೊಂದು ಸಂಘಟನೆಗೆ ಪ್ರಾಬಲ್ಯವೂ ಇರಬಹುದು. ಇದು ತಪ್ಪು ಎಂದಲ್ಲ. ಆದರೆ ತನ್ನ ವ್ಯಾಪ್ತಿಯಲ್ಲಿ ಚಟುವಟಿಕೆಯಲ್ಲಿರುವ ವಿವಿಧ ಸಂಘಟನೆಗಳನ್ನು ಒಂದೇ ವೇದಿಕೆಗೆ ಕರೆತಂದು ಅವುಗಳಿಂದ ಸಮುದಾಯದ ಆಮೂಲಾಗ್ರ ಸುಧಾರಣೆಗಾಗಿ ಕೊಡುಗೆಯನ್ನು ನೀಡುವಂತೆ ಮಾಡಲು ಸಾಧ್ಯವಿದೆಯಲ್ಲವೇ? ಒಂದೊಂದು ಸಂಘಟನೆಗೆ ಒಂದೊಂದು ಕ್ಷೇತ್ರದ ಹೊಣೆಗಾರಿಕೆಯನ್ನು ಕೊಟ್ಟು ಅಭಿವೃದ್ಧಿಯ ನೀಲನಕ್ಷೆಯನ್ನು ತಯಾರಿಸುವುದು ಅಸಾಧ್ಯವೇ? ಇವತ್ತು ಸಮುದಾಯ ಆರ್ಥಿಕವಾಗಿ ಮಾತ್ರ ಅಭಿವೃದ್ಧಿ ಹೊಂದಬೇಕಾದುದಲ್ಲ. ವೈಚಾರಿಕವಾಗಿಯೂ ಧಾರ್ಮಿಕವಾಗಿಯೂ ಅಭಿವೃದ್ಧಿಯನ್ನು ಕಾಣಬೇಕಾಗಿದೆ. ಉದಾಹರಣೆಗೆ ಈಗಿನ ಬಹುಚರ್ಚಿತ ತಲಾಕನ್ನೇ ಎತ್ತಿಕೊಳ್ಳಿ. ಇದಕ್ಕೆ ಸುವ್ಯವಸ್ಥಿತವಾದ ಮತ್ತು ಸರ್ವಸಮ್ಮತ ನೀತಿಯೊಂದನ್ನು ಅಳವಡಿಸಿಕೊಳ್ಳಲು ಸಮುದಾಯಕ್ಕೆ ಸಾಧ್ಯ ವಿಲ್ಲವೇ? ನಿಕಾಹ್ ನಡೆಯುವುದು ಎಲ್ಲರ ಎದುರು. ಅದು ಮಸೀದಿಯಲ್ಲಾಗಿರಬಹುದು ಅಥವಾ ಹಾಲ್, ಮನೆ.. ಇತ್ಯಾದಿಗಳಲ್ಲಾಗಿರಬಹುದು. ನಿಕಾಹ್‍ಗೆ ಅನೇಕ ಮಂದಿ ಸಾಕ್ಷ್ಯ ವಹಿಸುತ್ತಾರೆ. ತಲಾಕ್‍ಗೂ ಇಂಥದ್ದೊಂದು ಸುವ್ಯವಸ್ಥಿತ ವಾತಾವರಣ ನಿರ್ಮಿಸಿದರೆ ಹೇಗೆ? ತಲಾಕ್‍ನ ದುರುಪಯೋಗವನ್ನು ತಡೆಯುವುದಕ್ಕಾಗಿ ‘ತಲಾಕ್ ಮಸೀದಿಯಲ್ಲೇ ಆಗಬೇಕು’ ಎಂಬ ನಿಯಮವನ್ನು ಜಾರಿಗೊಳಿಸಬಹುದಲ್ಲವೇ? ಮುಖ್ಯವಾಗಿ ಯಾವ ಪ್ರದೇಶದಲ್ಲಿ ತಲಾಕ್‍ನ ದುರುಪಯೋಗ ಹೆಚ್ಚಿರುತ್ತದೋ ಆಯಾ ಪ್ರದೇಶದ ಮಸೀದಿ ವ್ಯಾಪ್ತಿಯಲ್ಲಿ ಇಂಥದ್ದೊಂದು ನೀತಿಯನ್ನು ಜಾರಿಗೊಳಿಸುವ ಶ್ರಮ ನಡೆಯುತ್ತಿದ್ದರೆ ಸಮುದಾಯವು ಪ್ರಶ್ನಾರ್ಹವಾಗುವುದರಿಂದ ತಡೆಯಬಹುದಿತ್ತಲ್ಲವೇ?
    ಹಾಗಂತ, ತಲಾಕ್ ಒಂದೇ ಮುಸ್ಲಿಮ್ ಸಮುದಾಯದೊಳಗೆ ದುರುಪಯೋಗಗೊಳ್ಳುತ್ತಿರುವುದಲ್ಲ. ಸಮುದಾಯದ ಯೌವನವೂ ದುರುಪಯೋಗವಾಗುತ್ತಿದೆ. ಯುವಕರು ತಪ್ಪು ಕೃತ್ಯಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ವರದಕ್ಷಿಣೆಯಿದೆ. ಬಹುಪತ್ನಿತ್ವದ ದುರುಪಯೋಗವೂ ನಡೆಯುತ್ತಿದೆ. ಮದುವೆಗೆ ಸಂಬಂಧಿಸಿ ಹೆಣ್ಣು ಮತ್ತು ಗಂಡಿನ ಆಯ್ಕೆ ಪ್ರಕ್ರಿಯೆಯಲ್ಲಿ ಶರೀಅತ್‍ಗೆ ವಿರುದ್ಧವಾದ ಧೋರಣೆಗಳು ಚಾಲ್ತಿಯಲ್ಲಿವೆ. ಝಕಾತ್‍ಗೆ ಸಂಬಂಧಿಸಿ ಶರೀಅತನ್ನು ಅನುಸರಿಸುವವರ ಸಂಖ್ಯೆ ಬಹಳ ಕಡಿಮೆ. ಸಮುದಾಯದ ವ್ಯಾಪಾರ ಎಷ್ಟು ಧಾರ್ಮಿಕವಾಗಿದೆ ಎಂದು ಪ್ರಶ್ನಿಸಿದರೆ, ತೃಪ್ತಿದಾಯಕ ಉತ್ತರ ಲಭ್ಯವಾಗುತ್ತಿಲ್ಲ. ಶರೀಅತ್ ಅನ್ನು ಖಂಡಿಸುವ ಅನೇಕಾರು ಕಾರ್ಯಚಟುವಟಿಕೆಗಳಲ್ಲಿ ಸಮುದಾಯದ ಮಂದಿ ಬಹಿರಂಗವಾಗಿಯೇ ಭಾಗಿಯಾಗಿದ್ದಾರೆ. ಒಂದು ರೀತಿಯಲ್ಲಿ, ಶರೀಅತನ್ನು ಪ್ರಶ್ನಿಸುತ್ತಿರುವುದು ಸುಪ್ರೀಮ್ ಕೋರ್ಟೋ, ನರೇಂದ್ರ ಮೋದಿಯವರೋ ಮಾತ್ರ ಅಲ್ಲ; ಇಸ್ಲಾಮ್‍ನಲ್ಲಿ ಭಾರೀ ನಿಷ್ಠೆಯನ್ನು ಸಂದರ್ಭಾನುಸಾರ ವ್ಯಕ್ತಪಡಿಸುವ ಮುಸ್ಲಿಮ್ ಸಮುದಾಯದ ಪ್ರತಿನಿಧಿಗಳೇ ತಮ್ಮ ವರ್ತನೆಗಳ ಮೂಲಕ ಶರೀಅತನ್ನು ಆಗಾಗ ಪ್ರಶ್ನಿಸುತ್ತಿದ್ದಾರೆ. ಅವರ ನಡೆ, ನುಡಿ, ಮದುವೆ, ವ್ಯವಹಾರ, ಜೀವನ ಕ್ರಮ, ಗಳಿಕೆ, ಉಳಿಕೆ, ಖರ್ಚು.. ಎಲ್ಲದರಲ್ಲೂ ಶರೀಅತ್‍ಗೆ ವಿರುದ್ಧವಾದ ಸಾಕಷ್ಟು ಅಂಶಗಳಿವೆ. ಇದನ್ನು ಸರಿಪಡಿಸುವ ಬಗ್ಗೆ ಕಾಳಜಿ ತೋರದೆ, ಬರೇ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದರಿಂದ ಭವಿಷ್ಯವೇನೂ ಉಜ್ವಲವಾಗಲ್ಲ. ನಾಳೆ ಮುಸ್ಲಿಮ್ ಸಮುದಾಯದ ಇನ್ನಾರೋ ವ್ಯಕ್ತಿ ಇನ್ನಾವುದೋ ಕಾರಣವನ್ನು ಮುಂದಿಟ್ಟುಕೊಂಡು ಕೋರ್ಟ್ ಬಾಗಿಲನ್ನು ತಟ್ಟಬಹುದು. ತನ್ನ ಈ ಸಮಸ್ಯೆಗೆ ಶರೀಅತ್ತೇ ಕಾರಣ ಎಂದೂ ಹೇಳಬಹುದು. ಆದ್ದರಿಂದ, ಒಂದೇ ವೇದಿಕೆಯಲ್ಲಿ ಒಟ್ಟು ಸೇರುವುದರಿಂದ ಸಮುದಾಯದ ಸಂಘಟನೆಗಳ ಹೊಣೆಗಾರಿಕೆ ಮುಗಿಯುವುದಿಲ್ಲ. ನಿಜವಾಗಿ, ಹೊಣೆಗಾರಿಕೆ ಆರಂಭವಾಗುವುದೇ ಇಲ್ಲಿಂದ. ವೇದಿಕೆಯಿಂದ ಇಳಿದು ಹೋದ ಬಳಿಕ ತಂತಮ್ಮ ಮಸೀದಿಯಲ್ಲಿ ಹೀಗೆ ಭಿನ್ನ ಸಂಘಟನೆಗಳಲ್ಲಿದ್ದುಕೊಂಡೇ ಒಟ್ಟು ಸೇರಲು ಮತ್ತು ಮಸೀದಿ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಪಟ್ಟಿ ಮಾಡಲು ಇದು ಪ್ರೇರಣೆಯನ್ನು ಒದಗಿಸಬೇಕು. ಸಂಘಟನಾ ಭಿನ್ನಾಭಿಪ್ರಾಯವನ್ನು ಮರೆತು ಸಮುದಾಯದ ಆಮೂಲಾಗ್ರ ಸುಧಾರಣೆಯ ದೃಷ್ಟಿಯಿಂದ ಕಾರ್ಯಪ್ರವೃತ್ತವಾಗಲು ಮುಂದಾಗಬೇಕು. ಯಾವ್ಯಾವ ಸಂಘಟನೆಯಿಂದ ಯಾವ್ಯಾವ ಕೊಡುಗೆಯನ್ನು ನೀಡಲು ಸಾಧ್ಯವೋ ಅವೆಲ್ಲವನ್ನೂ ಪಡಕೊಳ್ಳುವಂತಹ ಚಾತುರ್ಯವನ್ನು ಎಲ್ಲರೂ ಪ್ರದರ್ಶಿಸಬೇಕು. ಅಗತ್ಯ ಬಿದ್ದರೆ ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಒಂದು ವೇದಿಕೆಯನ್ನು ರಚಿಸಿ ಆ ಮೂಲಕ ಕಾರ್ಯಪ್ರವೃತ್ತವಾದರೂ ಆಗಬಹುದು. ಹೀಗೆ ಪ್ರತಿ ಮಸೀದಿಯ ವ್ಯಾಪ್ತಿಯಲ್ಲಿರುವ ಎಲ್ಲ ಮನೆಗಳ ಸಮಸ್ಯೆಗೂ ಕಿವಿಯಾಗುವಂತಹ ಮತ್ತು ಶರೀಅತ್ ಪ್ರಕಾರವೇ ಪ್ರತಿ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಕೊಳ್ಳುವಂತಹ ವಾತಾವರಣ ನಿರ್ಮಾಣವಾಗಬೇಕು. ತಲಾಕ್ ಆಗಲಿ, ಖುಲಾ, ಬಹುಪತ್ನಿತ್ವವೇ ಆಗಲಿ ಯಾವುದೂ ಕದ್ದು ಮುಚ್ಚಿ ನಡೆಯದಂತೆ ನೋಡಿಕೊಳ್ಳುವ ವ್ಯವಸ್ಥೆ ಮಸೀದಿಯ ವತಿಯಿಂದಲೇ ನಡೆಯಬೇಕು. ಮಾನವ ಹಕ್ಕುಗಳು ಮತ್ತು ಮಹಿಳಾ ಹಕ್ಕುಗಳು ಬಹು ಚರ್ಚಿತವಾಗಿರುವ ಇಂದಿನ ದಿನಗಳಲ್ಲಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾದುದು ಅತೀ ಅಗತ್ಯ. ಮುಖ್ಯವಾಗಿ ಧಾರ್ಮಿಕ ವಿಷಯದಲ್ಲಿ ಈ ಎಚ್ಚರ ಇನ್ನೂ ಅಗತ್ಯ. ಶರೀಅತ್ ತನ್ನ ನಿಜವಾದ ಅರ್ಥದಲ್ಲಿ, ನಿಜ ಸ್ಫೂರ್ತಿಯೊಂದಿಗೆ ಪಾಲನೆಯಾಗುವುದಾದರೆ ಯಾವ ಹೆಣ್ಣೂ ಗಂಡೂ ಕೋರ್ಟು ಮೆಟ್ಟಲು ಹತ್ತಲಾರರು. ಇವತ್ತು ಇದಕ್ಕೆ ವ್ಯತಿರಿಕ್ತವಾದುದು ನಡೆಯುತ್ತಿದ್ದರೆ, ಅದರಲ್ಲಿ ಮಸೀದಿ ಹೊಣೆಗಾರರ ಮತ್ತು ಸಂಘಟನೆಗಳ ಪಾತ್ರ ಖಂಡಿತ ಇದೆ. ವೇದಿಕೆಯಲ್ಲಿ ಒಟ್ಟು ಸೇರುವುದು ಮಾತ್ರ ಇದಕ್ಕೆ ಪರಿಹಾರ ಅಲ್ಲ. ವೇದಿಕೆಯಿಂದ ಇಳಿದ ಬಳಿಕದ ನಿಲುವು ಮತ್ತು ಕಾರ್ಯ ಚಟುವಟಿಕೆಗಳೇ ಇದರಲ್ಲಿ ನಿರ್ಣಾಯಕ. ಕಳೆದ 31 ವರ್ಷಗಳ ಬಳಿಕ ಇದೇ ಮೊದಲ ಬಾರಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಂಘಟನೆಗಳೆಲ್ಲ ತಮ್ಮ ಐಕ್ಯವನ್ನು ಸಮುದಾಯದ ಸುಧಾರಣೆಯಲ್ಲೂ ಮುಂದುವರಿಸಿದರೆ ಮತ್ತು ಸಮುದಾಯ ಸುಧಾರಣೆಯೆಂಬ ಬಹುಮುಖ್ಯ ಹೊಣೆಗಾರಿಕೆಯ ಮುಂದೆ ಭಿನ್ನಾಭಿಪ್ರಾಯಗಳನ್ನು ತೃಣವಾಗಿ ಕಾಣುವುದಾದರೆ ಇದು ಅಸಾಧ್ಯವಲ್ಲ. ಅಂದಹಾಗೆ,
       ಶಾಬಾನು ಮತ್ತು ಶಾಯರಾ ಬಾನುರನ್ನು ವಿಮರ್ಶಿಸುವುದೇ ಸಮುದಾಯದ ಸಮಸ್ಯೆಗೆ ಪರಿಹಾರ ಆಗುವುದಿಲ್ಲ. ಆಗಬಾರದು ಕೂಡಾ.




No comments:

Post a Comment