Tuesday, December 13, 2016

ಪ್ರಧಾನಿಯವರೇ, ರೂ. 2000 ದ ನೋಟನ್ನೇಕೆ ಮುದ್ರಿಸಿದಿರಿ?

       ಪ್ರಧಾನಿ ನರೇಂದ್ರ ಮೋದಿಯವರು ನೋಟು ರದ್ಧತಿ ಮಾಡುವುದಕ್ಕಿಂತ ಮೊದಲು ಈ ದೇಶದಲ್ಲಿ 500 ಮತ್ತು 1000 ಮುಖಬೆಲೆಯ 2100 ಕೋಟಿ ರೂಪಾಯಿ ನೋಟುಗಳಿದ್ದುವು. ಅದೇ ವೇಳೆ, ಈ ದೇಶದಲ್ಲಿರುವ ಒಟ್ಟು ನೋಟು ಮುದ್ರಣಾಲಯ ಗಳು ತಿಂಗಳಿಗೆ ಗರಿಷ್ಠ 300 ಕೋಟಿ ರೂಪಾಯಿಯನ್ನಷ್ಟೇ ಮುದ್ರಣ ಮಾಡಬಹುದಾಗಿತ್ತು. ಈ ಲೆಕ್ಕಾಚಾರದಂತೆ, ಅಮಾನ್ಯ ಗೊಳ್ಳುವ 2100 ಕೋಟಿ ರೂಪಾಯಿಯಷ್ಟು ಹೊಸ ನೋಟುಗಳನ್ನು ಮುದ್ರಣ ಮಾಡಬೇಕಾದರೆ ಕನಿಷ್ಠ 7 ತಿಂಗಳುಗಳಾದರೂ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮುಂದೆ ಎರಡು ಆಯ್ಕೆಗಳಿದ್ದುವು. ಒಂದು- ಹಳೆ ನೋಟುಗಳ ಬದಲಿಗೆ ಹೊಸ ಮಾದರಿಯ ಅಷ್ಟೇ ನೋಟುಗಳನ್ನು ಮುದ್ರಿಸುವುದು. ಈ ನೋಟುಗಳ ಮುದ್ರಣ ಪೂರ್ಣವಾಗುವವರೆಗೆ ಅಂದರೆ 7 ತಿಂಗಳ ವರೆಗೆ ಸಕಲ ಗೌಪ್ಯತೆಯನ್ನೂ ಕಾಪಾಡುವುದು. ಇನ್ನೊಂದು- ಸಾವಿರ ಮುಖಬೆಲೆಯ ನೋಟಿನ ಬದಲು ದುಪ್ಪಟ್ಟು ಮುಖಬೆಲೆಯ ನೋಟುಗಳನ್ನು ಮುದ್ರಿಸುವುದು. ಉದಾಹರಣೆ 2000 ಮುಖಬೆಲೆಯ ನೋಟುಗಳು. ಹೀಗೆ ಮಾಡುವುದರಿಂದ ನೋಟು ಮುದ್ರಣಕ್ಕಿರುವ ಅವಧಿಯು ಕಡಿಮೆಯಾಗುತ್ತದೆ. ಆದರೆ ಇದು ಕೊಡುವ ಸಂದೇಶ ಏನೆಂದರೆ, ಸರಕಾರ ಯಾವುದೋ ತುರ್ತಿನಲ್ಲಿದೆ ಎಂಬುದನ್ನು. ಆ ತುರ್ತು ಯಾವುದು? ಮೂಲ ನೋಟುಗಳಷ್ಟೇ ಹೊಸ ನೋಟುಗಳನ್ನು ಮುದ್ರಿಸಲೂ ಸಮಯವಿಲ್ಲದಷ್ಟು ದಿಢೀರ್ ತುರ್ತುಸ್ಥಿತಿ ನಿರ್ಮಾಣವಾಗಿರುವುದು ಹೇಗೆ, ಯಾಕೆ ಮತ್ತು ಎಲ್ಲಿ? ಇದೇ ವೇಳೆ, ಮೂಲ ನೋಟುಗಳಿಗೆ ಬದಲಿಯಾಗಿ ಹೊಸ ನೋಟುಗಳನ್ನು ಮುದ್ರಿಸುವುದಕ್ಕಿರುವ ಕಾರಣಗಳೂ ಇಲ್ಲಿ ಮುಖ್ಯವಾಗುತ್ತವೆ. ಹೊಸ ನೋಟುಗಳ ಮುದ್ರಣಕ್ಕೆ ಕೇಂದ್ರ ಸರಕಾರ ಕೊಟ್ಟಿರುವ ಎರಡು ಪ್ರಮುಖ ಕಾರಣಗಳಲ್ಲಿ ಒಂದು ನಕಲಿ ನೋಟು. ಪಾಕಿಸ್ತಾನದಲ್ಲಿ ನಕಲಿ ನೋಟು ಮುದ್ರಣ ಕೇಂದ್ರಗಳಿವೆ ಮತ್ತು ಆ ನೋಟುಗಳನ್ನು ಭಾರತದಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸಲು ಬಳಸಲಾಗುತ್ತಿದೆ ಎಂಬುದು ಸರಕಾರದ ಸಮರ್ಥನೆಯಾಗಿತ್ತು. ಹಾಗಾದರೆ ರೂ. 2000 ಮುಖಬೆಲೆಯ ನೋಟುಗಳನ್ನು ಯಾಕೆ ಚಲಾವಣೆಗೆ ತರಲಾಯಿತು? ನೋಟುಗಳ ಮುಖಬೆಲೆ ಹೆಚ್ಚಾದಷ್ಟೂ ನಕಲಿ ನೋಟು ತಯಾರಕರಿಗೆ ಲಾಭವಾಗುತ್ತದೆ. ರೂ. 1000 ಮುಖಬೆಲೆಯ ಎರಡು ನೋಟು ಮುದ್ರಣ ಮಾಡುವಲ್ಲಿ ಅವರು ರೂ. 2000 ಮುಖಬೆಲೆಯ ಒಂದೇ ನೋಟನ್ನು ಮುದ್ರಣ ಮಾಡಿದರೆ ಸಾಕಾಗುತ್ತದೆ. ಇದು ಎಲ್ಲರಿಗೂ ಗೊತ್ತು. ಹೀಗಿರುವಾಗ, ಕೇಂದ್ರ ಸರಕಾರ ಒಂದು ಕಡೆ ನಕಲಿ ನೋಟಿನ ಹಾವಳಿಯನ್ನು ತಡೆಯುತ್ತೇನೆಂದು ಹೇಳುತ್ತಾ ಇನ್ನೊಂದು ಕಡೆ ಪಾಕಿಸ್ತಾನದ ನಕಲಿ ನೋಟು ತಯಾರಕರಿಗೆ ಲಾಭವಾಗಬಹುದಾದ ನಿರ್ಧಾರವನ್ನು ಕೈಗೊಂಡದ್ದೇಕೆ? ನಿಜವಾಗಿ, ಕೇಂದ್ರ ಸರಕಾರದ ಉದ್ದೇಶ ಶುದ್ಧಿ ಪ್ರಶ್ನೆಗೀಡಾಗುವುದೇ ಇಲ್ಲಿ. ಅದು ನೋಟು ರದ್ಧತಿಗೆ ಕೊಟ್ಟಿರುವ ಕಾರಣಗಳನ್ನು ರೂ. 2000 ನೋಟುಗಳು ಖಂಡಿತ ಸಂದೇಹಾಸ್ಪದವಾಗಿಸುತ್ತವೆ. ಬಹುಶಃ, ನರೇಂದ್ರ ಮೋದಿಯವರು ನಿಜಕ್ಕೂ ಕಾಳಧನ ಮತ್ತು ನಕಲಿ ನೋಟಿನ ಹಾವಳಿಯನ್ನು ತಡೆಯುವ ಏಕೈಕ ಸದುದ್ದೇಶದಿಂದಲೇ ನೋಟು ರದ್ಧತಿ ನಿರ್ಧಾರ ಕೈಗೊಳ್ಳುವುದಾದರೆ, ಅದಕ್ಕೆ ನಿಖರವಾದ ಪೂರ್ವ ತಯಾರಿಯನ್ನು ಖಂಡಿತ ಮಾಡಿಕೊಳ್ಳುತ್ತಿದ್ದರು. ಬೇಕಾದರೆ ರೂ. 1000 ಮುಖ ಬೆಲೆಯ ನೋಟನ್ನು ರದ್ದುಗೊಳಿಸುವುದು ಕೂಡ ನಕಲಿ ನೋಟಿನ ಹಾವಳಿಯನ್ನು ತಡೆಯುವುದಕ್ಕೆ ಪೂರಕವಾಗುತ್ತಿತ್ತು. ನೋಟಿನ ಮುಖಬೆಲೆ ಕಡಿಮೆಯಾದಷ್ಟೂ ನಕಲಿ ನೋಟು ತಯಾರಕರಿಗೆ ಸಮಸ್ಯೆ ಜಾಸ್ತಿಯಾಗುತ್ತದೆ. ಮೋದಿಯವರ ಉದ್ದೇಶ ನಿಜವೇ ಆಗಿರುತ್ತಿದ್ದರೆ, ಈಗ ಚಲಾವಣೆಯಲ್ಲಿರುವ ಎಲ್ಲಾ ನೋಟುಗಳಿಗೆ ಬದಲಿಯಾಗಿ ಹೊಸ ನೋಟುಗಳನ್ನು ಸಂಪೂರ್ಣವಾಗಿ ಮುದ್ರಿಸುವವರೆಗೆ ಕಾಯಬೇಕಿತ್ತು. ನೋಟು ರದ್ಧತಿ ಜಾರಿಗೊಂಡ ಕೂಡಲೇ ಪರ್ಯಾಯ ನೋಟುಗಳನ್ನು ಜನರಿಗೆ ಒದಗಿಸುವುದಕ್ಕೆ ಸಾಕಾಗುವಷ್ಟು ನೋಟುಗಳ ಮುದ್ರಣ ನಡೆದಿರಬೇಕಿತ್ತು. ಎಟಿಎಂ ವ್ಯವಸ್ಥೆಯನ್ನು ಸಜ್ಜುಗೊಳಿಸಿ ಇಡಬಹುದಿತ್ತು ಅಥವಾ ಹೀಗೆ ಮಾಡುವುದು ಗೌಪ್ಯತೆಯ ದೃಷ್ಟಿಯಿಂದ ಅಪಾಯಕಾರಿ ಎಂದಾದರೆ ನೋಟು ರದ್ಧತಿಗೊಂಡ ಮರುದಿನವೇ ದೇಶದಾದ್ಯಂತ ಎಟಿಎಂಗಳ ಮರು ಜೋಡಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಇಲ್ಲಿರುವ ಇನ್ನೊಂದು ಪ್ರಶ್ನೆಯೇನೆಂದರೆ, ನವೆಂಬರ್ ತಿಂಗಳಲ್ಲೇ ನೋಟು ರದ್ಧತಿ ಮಾಡಬೇಕೆಂಬ ನಿಯಮವೇನೂ ಇತ್ತೇ? ಎಲ್ಲ ತಯಾರಿ ಮತ್ತು ಗೌಪ್ಯತೆಯೊಂದಿಗೆ ಮುಂದಿನ ವರ್ಷವೂ ನೋಟು ರದ್ಧತಿಯನ್ನು ಮಾಡಬಹುದಿತ್ತಲ್ಲ. ನಿಜವಾಗಿ, ಅಸಲು ವಿಷಯ ಬಹಿರಂಗವಾಗುವುದೇ ಇಲ್ಲಿ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಳಧನ ಮತ್ತು ನಕಲಿ ನೋಟಿಗಿಂತ 2017ರ ಆರಂಭದಲ್ಲಿ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳು ಮುಖ್ಯವಾಗಿದ್ದುವು. ವಿಶೇಷವಾಗಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯನ್ನು ಗೆಲ್ಲಲೇ ಬೇಕಾದ ಒತ್ತಡವೊಂದು ಅವರ ಎದುರಿತ್ತು. ಹಾಗಂತ, ಸಾಧನೆಯನ್ನೇ ಎದುರಿಟ್ಟುಕೊಂಡು ಚುನಾವಣೆಯನ್ನು ಎದುರಿಸುವ ಎಂದರೆ, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಹೇಳಿಕೊಳ್ಳಬಹುದಾದ ಸಾಧನೆಯೇನೂ ಅವರ ಜೊತೆಯಿರಲಿಲ್ಲ. ಕಳೆದ ಚುನಾವಣಾ ಪ್ರಣಾಳಿಕೆಯ ಪ್ರಮುಖ ಭರವಸೆಗಳಲ್ಲಿ ರಾಮಮಂದಿರವೂ ಒಂದಾಗಿತ್ತು. ರಾಮಮಂದಿರ ನಿರ್ಮಾಣಕ್ಕಾಗಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಟ್ಟಿಗೆಗಳನ್ನು ತಂದಿರಿಸಿ ಎರಡೂವರೆ ದಶಕಗಳೇ ಕಳೆದಿವೆ. ರಾಮಮಂದಿರವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದ ಬಳಿಕ ಬಿಜೆಪಿ ನೇತೃತ್ವದ ಎನ್‍ಡಿಎ ಈ ಮೊದಲೂ ಅಧಿಕಾರಕ್ಕೆ ಬಂದಿತ್ತು. ಆದರೆ ಭರವಸೆಯನ್ನು ಈಡೇರಿಸಿರಲಿಲ್ಲ. ಹಾಗಂತ, ಆಗ ಬಹುಮತವಿರಲಿಲ್ಲ ಎಂಬ ಸಬೂಬಾದರೂ ಇತ್ತು. ಈಗ ಅಂಥ ಸಬೂಬನ್ನೂ ಕೊಡುವಂತಿಲ್ಲ. ಪಾರ್ಲಿಮೆಂಟ್‍ನಲ್ಲಿ ವಿಶೇಷ ಮಸೂದೆಯೊಂದನ್ನು ಪಾಸು ಮಾಡಿಕೊಂಡು ಮಂದಿರ ನಿರ್ಮಿಸಬಹುದಲ್ಲವೇ ಎಂದು ಬಿಜೆಪಿಯ ಬೆಂಬಲಿಗರು ಪ್ರಶ್ನಿಸುತ್ತಿರುವುದನ್ನು ನರೇಂದ್ರ ಮೋದಿ ಬಲ್ಲರು. ಎರಡನೆಯದಾಗಿ, ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಪ್ರತಿಯೋರ್ವನ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುವೆನೆಂದು ಮೋದಿಯವರು ಎರಡೂವರೆ ವರ್ಷಗಳ ಹಿಂದೆ ಭಾರತೀಯರಿಗೆ ಭರವಸೆ ನೀಡಿದ್ದರು. ಕಳೆದ ಚುನಾವಣೆಯಲ್ಲಿ ಪಾರ್ಲಿಮೆಂಟ್‍ನಲ್ಲಿ ಬಹುಮತ ಪಡೆದಿರುವುದಕ್ಕೆ ಕಾಳಧನದ ಬಗ್ಗೆ ಅವರು ನೀಡಿದ ಭರವಸೆಯೂ ಒಂದು ಕಾರಣವಾಗಿತ್ತು. ಆದರೆ, ನರೇಂದ್ರ ಮೋದಿಯವರಿಗೆ ಕೊಟ್ಟ ಮಾತನ್ನು ಉಳಿಸಲಾಗಲಿಲ್ಲ ಎಂದು ಮಾತ್ರವಲ್ಲ ದೊಡ್ಡ ದೊಡ್ಡ ಕಾಳಧನಿಕರನ್ನು ಕನಿಷ್ಠ ಭಾರತದಿಂದ ಹೊರಹೋಗದಂತೆ ತಡೆಯಲೂ ಸಾಧ್ಯವಾಗಲಿಲ್ಲ. ಲಲಿತ್ ಮೋದಿ, ವಿಜಯ್ ಮಲ್ಯರು ಈ ಸರಕಾರದ ಮುಂದಿನಿಂದಲೇ ಹೊರದೇಶಕ್ಕೆ ಎದ್ದು ಹೋದರು. ಈ ಮಧ್ಯೆ ಸ್ವಿಸ್ ಬ್ಯಾಂಕ್, ಮಾರಿಷಸ್, ಸಿಂಗಾಪುರ್ ಸಹಿತ ವಿವಿಧ ಬ್ಯಾಂಕ್‍ಗಳಲ್ಲಿರುವ ಕಪ್ಪು ಹಣದ ವಿವರಗಳು ಆಗಾಗ ಮಾಧ್ಯಮಗಳಲ್ಲಿ ಪ್ರಕಟವೂ ಆದುವು. ಪನಾಮಾ ಪೇಪರ್ ಮೂಲಕವೂ ಕಾಳಧನಿಕರು ಬಹಿರಂಗಕ್ಕೆ ಬಂದರು. ಆದರೆ ಹದಿನೈದು ಲಕ್ಷ ಬಿಡಿ, ಹದಿನೈದು ಪೈಸೆಯನ್ನು ಕೂಡ ವಿದೇಶದಿಂದ ಭಾರತಕ್ಕೆ ತರಲು ಅವರಿಂದ ಸಾಧ್ಯವಾಗಲಿಲ್ಲ. ಇದರ ಬದಲು ಕಾಳಧನಿಕರು ಎಂಬ ಅಪವಾದವನ್ನು ಹೊತ್ತಿರುವ ಅಂಬಾನಿ, ಅದಾನಿಗಳೊಂದಿಗೆ ಸಲುಗೆಯ ಸಂಬಂಧವನ್ನಿರಿಸಿಕೊಂಡು ವೈಯಕ್ತಿಕ ವರ್ಚಸ್ಸಿಗೂ ಧಕ್ಕೆ ತಂದುಕೊಂಡರು. ಚುನಾವಣೆಗೆ ಮೊದಲು ಪಾಕಿಸ್ತಾನದ ಬಗ್ಗೆ ನರೇಂದ್ರ ಮೋದಿಯವರ ಮಾತುಗಳು ಎಷ್ಟು ಕಠಿಣವಾಗಿತ್ತೋ ಪ್ರಧಾನಿಯಾದ ಬಳಿಕ ಅವು ತೀರಾ ಮೃದುವಾದಂತೆ ಕಂಡವು. ಪಾಕ್‍ಗೆ ದಿಢೀರ್ ಭೇಟಿ ಕೊಟ್ಟು ನವಾಝï ಶರೀಫ್‍ರನ್ನು ಸಂದರ್ಶಿಸಿದ್ದು, ಅವರ ತಾಯಿಗೆ ಉಡುಗೊರೆ ಕೊಟ್ಟದ್ದು.. ಒಂದು ಹಂತದ ವರೆಗೆ ಅವರ ಕಠಿಣ ವರ್ಚಸ್ಸನ್ನು ತೆಳ್ಳಗಾಗಿಸಿದುವು. ದಾವೂದ್ ಇಬ್ರಾಹೀಮ್‍ನನ್ನು ಭಾರತಕ್ಕೆ ಕರೆ ತರುವ ಬಗ್ಗೆ ಹುಟ್ಟಿಸಿದ್ದ ಭರವಸೆಗಳೂ ಹುಸಿಯಾದುವು. ಕಳೆದ ಎರಡೂವರೆ ವರ್ಷಗಳಲ್ಲಿ ವಿದೇಶ ಯಾತ್ರೆಯ ಹೊರತಾಗಿ ಸಾಧನೆಯ ಕಾರಣಕ್ಕಾಗಿ ನರೇಂದ್ರ ಮೋದಿಯವರು ಗುರುತಿಸಿಕೊಂಡಿದ್ದು ಶೂನ್ಯ ಅನ್ನುವಷ್ಟು ಕಡಿಮೆ. ಮಾತಿನಲ್ಲಿ ಅರಮನೆಯನ್ನು ಕಟ್ಟಿದರೇ ಹೊರತು ನಿರ್ಮಾಣಾತ್ಮಕ ಸಾಧನೆಯ ದೃಷ್ಟಿಯಿಂದ ಅವರು ವಿಫಲ ಪ್ರಧಾನಿ. ಈ ಮಧ್ಯೆ ದಲಿತರ ಮೇಲಿನ ಹಲ್ಲೆ ಮತ್ತು ದೌರ್ಜನ್ಯಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾದುವು. ‘ಉನಾ ಚಳವಳಿ’ ನಡೆಯಿತು. ಮುಸ್ಲಿಮರ ಮೇಲಿನ ದೌರ್ಜನ್ಯಗಳಲ್ಲೂ ಹೆಚ್ಚಳವಾಯಿತು. ಪಟೇಲ್ ಮೀಸಲಾತಿ ಹೋರಾಟ, ಜಾಟ್ ಮೀಸಲಾತಿ ಹೋರಾಟ, ಮರಾಠಾ ಚಳವಳಿ.. ಹೀಗೆ ಒಂದೊಂದು ಸಮುದಾಯವೇ ಬೀದಿಗೆ ಇಳಿದು ಭಾರೀ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದೂ ನಡೆಯಿತು. ಆದ್ದರಿಂದ ಬಿಜೆಪಿಯು ಈಗಿರುವ ಮುಖವನ್ನೇ ಹೊತ್ತುಕೊಂಡು ಉತ್ತರ ಪ್ರದೇಶಕ್ಕೆ ಹೋಗುವುದು ಒಂದು ರೀತಿಯಲ್ಲಿ ಜೂಜೇ ಆಗುತ್ತಿತ್ತು. ಅಲ್ಲದೇ ಉತ್ತರ ಪ್ರದೇಶದಲ್ಲಿ ದಲಿತ-ಹಿಂದುಳಿದ ಮತಗಳೇ ನಿರ್ಣಾಯಕ. ಉನಾ ಘಟನೆಯು ದಲಿತ ಮತ್ತು ಹಿಂದುಳಿದ ವರ್ಗದಲ್ಲಿ ತೀವ್ರ ಅಸಂತೃಪ್ತಿಯನ್ನು ಹುಟ್ಟಿಸಿತ್ತು. ದಲಿತರ ಮೇಲೆ ದೌರ್ಜನ್ಯ ಎಸಗುವವರು ಬಿಜೆಪಿ ಬೆಂಬಲಿಗರು ಎಂಬ ಭಾವನೆ ಬಹುತೇಕ ಸಾಮಾನ್ಯವಾಗಿತ್ತು. ಇವು ಮತ್ತು ಇಂಥ ಬಿಜೆಪಿ ವಿರೋಧಿ ವಾತಾವರಣದ ಹಿನ್ನೆಲೆಯಲ್ಲಿ ದಿಢೀರ್ ಆದ ಏನಾದರೊಂದು ಕ್ರಮವನ್ನು ನರೇಂದ್ರ ಮೋದಿಯವರು ಕೈಗೊಳ್ಳಲೇಬೇಕಿತ್ತು. ಈಗಿನ ರೀತಿಯಲ್ಲೇ ಉತ್ತರ ಪ್ರದೇಶಕ್ಕೆ ಹೋದರೆ ಮಾಯಾವತಿ, ಮುಲಾಯಂ ಸಿಂಗ್, ಕಾಂಗ್ರೆಸ್ ಮತ್ತು ಲಾಲೂ, ನಿತೀಶ್ ಮತ್ತಿತರರ ಎದುರು ಪರಾಭವ ಹೊಂದುವ ಎಲ್ಲ ಸಾಧ್ಯತೆಗಳೂ ಇದ್ದವು. ಈ ಕಾರಣದಿಂದಲೇ ನರೇಂದ್ರ ಮೋದಿಯವರು ದಿಢೀರ್ ಆಗಿ ನೋಟು ರದ್ಧತಿಯನ್ನು ಘೋಷಿಸಿದ್ದಾರೆ. ಈ ದಿಢೀರ್ ಘೋಷಣೆಯಿಂದಾಗಿ ಆಗಬಹುದಾದ ಹಣದ ಕೊರತೆಯನ್ನು ನಿಭಾಯಿಸುವುದಕ್ಕಾಗಿ ರೂ. 2000 ಮುಖಬೆಲೆಯ ನೋಟಿನ ಮುದ್ರಣಕ್ಕೆ ಕೈ ಹಾಕಿದ್ದಾರೆ. ಹೀಗೆ ಮಾಡುವುದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಗಂಭೀರ ವಿಶ್ಲೇಷಣೆ ನಡೆಸದಷ್ಟೂ ಪರಿಸ್ಥಿತಿ ಅವರನ್ನು ಒತ್ತಡಕ್ಕೆ ಸಿಲುಕಿಸಿದೆ. ಒಂದು ವೇಳೆ, ಸಮಸ್ಯೆ ಎದುರಾದರೆ ಅದನ್ನು ಕಪ್ಪು ಹಣದ ವಿರುದ್ಧದ ಸಮರದ ಹೆಸರಲ್ಲಿ ಮತ್ತು ದೇಶಪ್ರೇಮದ ಹೆಸರಲ್ಲಿ ಸಮರ್ಥಿಸಿಕೊಳ್ಳಬಹುದೆಂದು ಅವರು ತೀರ್ಮಾನಿಸಿರಬೇಕು. ಆದ್ದ ರಿಂದಲೇ “ನನ್ನನ್ನು ಸುಟ್ಟರೂ ನಾನು ಹಿಂದಡಿ ಇಡಲಾರೆ..” ಎಂಬ ಭಾವನಾತ್ಮಕ ಮಾತುಗಳ ಮೊರೆ ಹೋಗಿರುವುದು. ಅಷ್ಟಕ್ಕೂ, ಪಾರ್ಲಿಮೆಂಟ್‍ನಲ್ಲಿ ಬಹುಮತ ಇರುವ ಪಕ್ಷದ ನಾಯಕರಾಗಿ ಮತ್ತು ಪಕ್ಷಕ್ಕಿಂತ ಮಿಗಿಲಾದ ವರ್ಚಸ್ಸನ್ನು ಹೊಂದಿರುವ ವ್ಯಕ್ತಿಯಾಗಿ ಮೋದಿಯವರನ್ನು ಸುಡುವವರು ಯಾರು? ಬಿರುಬಿಸಿಲಿಗೆ ಅನ್ನ ನೀರಿಲ್ಲದೆ ಬ್ಯಾಂಕ್‍ನ ಮುಂದೆ ಸರತಿಯಲ್ಲಿ ನಿಂತು ಕಾಯುತ್ತಿರುವ ಬಡವರೇ? ಕೂಲಿ ಕಾರ್ಮಿಕರೇ? ಪ್ಲಂಬರ್, ಪೈಂಟರ್, ಕಸ ಗುಡಿಸುವವರು, ಬೀದಿ ಬದಿ ವ್ಯಾಪಾರಿಗಳೇ? ನಿಜವಾಗಿ,
       ಮೋದಿಯವರ ರಾಜಕೀಯ ಉದ್ದೇಶದ ತೀರ್ಮಾನವು ಇವರೆಲ್ಲರನ್ನೂ ಸುಡುತ್ತಿದೆ.

No comments:

Post a Comment