Tuesday, October 27, 2015

ಇಂಥ ಸ್ಥಿತಿಯಲ್ಲಿ ಚರ್ಚೆಗೊಳಗಾಗಬೇಕಾದ್ದು ಗೋವೋ ಅಲ್ಲ ಹೆಣ್ಣೋ?

      ಅವರು ಆಲಿಸುತ್ತಿದ್ದರು, ಆತ ಹೇಳುತ್ತಿದ್ದ..      “ನನಗೋರ್ವ ಮಗಳಿದ್ದಳು. ನನ್ನ ಪತ್ನಿ ಆ ಮಗುವನ್ನು ಬೆಳೆಸಿದ್ದೇ ನೆರೆಕರೆ ಮತ್ತು ಸಮಾಜದಿಂದ ಅಡಗಿಸಿ. ಆಕೆ ಆ ಮಗುವನ್ನು ತುಂಬಾ ಪ್ರೀತಿಸುತ್ತಿದ್ದಳು. ‘ಹೆಣ್ಣು ಮಗು ಕುಲಕ್ಕೆ ಕಳಂಕ’ ಎಂದು ನಂಬಿದ್ದ ಸಮಾಜದಲ್ಲಿ ಹೆಣ್ಣು ಮಗುವನ್ನು ಹೆರುವುದು ಮತ್ತು ಬೆಳೆಸುವುದು ಸಣ್ಣ ಸಾಹಸ ಆಗಿರಲಿಲ್ಲ. ನನ್ನ ಪತ್ನಿ ಆ ಸಾಹಸಕ್ಕೆ ಕೈ ಹಾಕಿದ್ದಳು. ಪರಿಸರದ ಕುಹಕವನ್ನು ಸಹಿಸಿಕೊಂಡು ಮಗುವನ್ನು ಪ್ರೀತಿಸಿದ್ದಳು. ಹೆಣ್ಣು ಮಗುವನ್ನು ಹುಟ್ಟಿದ ಕೂಡಲೇ ಹೂಳುವ ಸಂಪ್ರದಾಯವೊಂದು ನಮ್ಮ ಸಮಾಜದಲ್ಲಿತ್ತಲ್ಲವೇ? ಅದಕ್ಕೆ ಕಾರಣವೂ ಇತ್ತು. ಒಂದು: ಬಡತನ. ಉಣ್ಣುವವರ ಸಂಖ್ಯೆಯನ್ನು ಕಡಿಮೆಗೊಳಿಸಲೇಬೇಕಿತ್ತು. ಎರಡನೆಯದಾಗಿ, ಬುಡಕಟ್ಟು ಜನಾಂಗಗಳಾದ ನಮ್ಮ ನಡುವೆ ಸದಾ ಯುದ್ಧದಂತಹ ಘರ್ಷಣೆಗಳು ನಡೆಯುತ್ತಿದ್ದವು. ಆದ್ದರಿಂದ ಗಂಡು ಮಕ್ಕಳ ಅಗತ್ಯ ಧಾರಾಳವಿತ್ತು. ಮೂರನೆಯದಾಗಿ, ಹೀಗೆ ನಡೆಯುವ ಯುದ್ಧಗಳಲ್ಲಿ ಸೋಲುವ ಗುಂಪಿನ ಸಂಪತ್ತುಗಳನ್ನಷ್ಟೇ ದೋಚುತ್ತಿದ್ದುದಲ್ಲ, ಅವರ ಹೆಣ್ಣು ಮಕ್ಕಳು ಮತ್ತು ಮಹಿಳೆಯರನ್ನೂ ಸೆರೆ ಹಿಡಿದು ದಾಸಿಯರನ್ನಾಗಿ ಇಟ್ಟುಕೊಳ್ಳುತ್ತಿದ್ದರು. ಇದು ನಮ್ಮ ಪಾಲಿಗೆ ಸಹಿಸಲಸಾಧ್ಯ ಅವಮಾನವಾಗಿತ್ತು. ನಾನಾದರೋ ವ್ಯಾಪಾರದ ಉದ್ದೇಶದಿಂದ ತಿಂಗಳುಗಟ್ಟಲೆ ಪರ ಊರಿಗೆ ಹೋಗುತ್ತಿದ್ದೆ. ಹೀಗೆ ಒಂದು ದಿನ ಮರಳಿ ಬಂದಾಗ ಪರಿಸರದಿಂದ ಕುಹಕದ ಮಾತುಗಳು ಕೇಳಿ ಬಂದುವು. ನನ್ನ ಮನೆಯಲ್ಲಿ ಹೆಣ್ಣು ಮಗು ಬೆಳೆಯುತ್ತಿರುವುದನ್ನು ಬೊಟ್ಟು ಮಾಡಿ ನಿಂದಿಸಲಾಯಿತು. ತಮಾಷೆ ಮಾಡಲಾಯಿತು. ಕೊನೆಗೆ ಹೆಣ್ಣಿನ ಅಪ್ಪ ಎಂಬ ಕಳಂಕದಿಂದ ಶಾಶ್ವತವಾಗಿ ಮುಕ್ತಿ ಪಡೆಯಬೇಕೆಂದು ನಾನು ನಿರ್ಧರಿಸಿದೆ. ಒಂದು ದಿನ ನನ್ನ ಮಗುವನ್ನು ಪೇಟೆಗೆ ಕರೆದುಕೊಂಡು ಹೋಗುವುದಾಗಿ ಪತ್ನಿಯೊಂದಿಗೆ ಹೇಳಿದೆ. ಆಕೆ ಮಗುವಿಗೆ ಬಟ್ಟೆ ತೊಡಿಸಿದಳು. ಮಗುವಂತೂ ತುಂಬಾ ಖುಷಿಯಿಂದ ನನ್ನೊಂದಿಗೆ ಹೊರಟು ನಿಂತಿತು. ಅಪ್ಪನೊಂದಿಗೆ ಮೊದಲ ಬಾರಿ ಪೇಟೆ ನೋಡುವ ಧಾವಂತವೊಂದು ಮಗುವಿನ ಮುಖದಲ್ಲಿತ್ತು. ನಾನು ಮಗುವಿನ ಕೈ ಹಿಡಿದುಕೊಂಡು ಹೊರಟೆ. ಜೊತೆಗೇ ಕೈಯಲ್ಲೊಂದು ಗುದ್ದಲಿಯನ್ನೂ ಹಿಡಿದುಕೊಂಡೆ. ತಲುಪಿದ್ದಾದರೋ ಒಂದು ಬೋರು ಗುಡ್ಡೆಗೆ. ಮಗುವಿಗಂತೂ ನನ್ನ ಜೊತೆ ಅತ್ಯಂತ ಹೃದ್ಯ ಒಡನಾಟವಿತ್ತು. ನನ್ನನ್ನು ಮಗು ತೀವ್ರವಾಗಿ ಹಚ್ಚಿಕೊಂಡಿತ್ತು. ಆದ್ದರಿಂದಲೇ, ಮಗು ದಾರಿಯುದ್ದಕ್ಕೂ ನನ್ನೊಂದಿಗೆ ಮಾತಾಡುತ್ತಲೇ ಸಾಗಿತ್ತು. ನಾನು ಗುಡ್ಡಕ್ಕೆ ತಲುಪಿದ್ದೇ ತಡ, ಗುಂಡಿ ತೋಡಲು ಪ್ರಾರಂಭಿಸಿದೆ. ಮಗು ಆಗಾಗ ನನ್ನ ಉದ್ದೇಶದ ಬಗ್ಗೆ ಪ್ರಶ್ನಿಸುತ್ತಿತ್ತು. ನನ್ನ ಬಟ್ಟೆಯ ಮೇಲೆ ಬೀಳುತ್ತಿದ್ದ ಮಣ್ಣನ್ನು ಕೈಯಾರೆ ಸರಿಸುತ್ತಿತ್ತು. ಕೊನೆಗೆ ನಾನು ಗುಂಡಿ ಅಗೆಯುವುದನ್ನು ನಿಲ್ಲಿಸಿ ಮಗುವನ್ನು ಗುಂಡಿಯೊಳಕ್ಕೆ ಎಸೆದೆ. ಅದನ್ನು ನಿರೀಕ್ಷಿಸದಿದ್ದ ಮಗು ಅಪ್ಪಾ.. ಅಪ್ಪಾ.. ಎಂದು ಕೂಗಾಡಿತು. ನಾನು ಒಂದು ಭಾರ ಕಲ್ಲನ್ನು ಎತ್ತಿ ಮಗುವಿನ ಮೇಲೆ ಹಾಕಿದೆ..”   
      ಆಲಿಸುತ್ತಿದ್ದ ಪ್ರವಾದಿ ಮುಹಮ್ಮದ್‍ರ ಕಣ್ಣಾಲಿಗಳು ತುಂಬಿಕೊಂಡಿದ್ದವು. ಮಗುವನ್ನು ಸ್ಮರಿಸಿ ಅವರು ದುಃಖಿಸಿದರು. 'ಹೆಣ್ಣು ಮಗುವನ್ನು ಸಾಕಿ, ಸಂಸ್ಕಾರಯುತವಾಗಿ ಬೆಳೆಸುವ ಹೆತ್ತವರಿಗೆ ಸ್ವರ್ಗವಿದೆ' ಎಂಬ ಆಶ್ವಾಸನೆ ಕೊಟ್ಟರು. 'ಯಾರಾದರೂ ಹೆಣ್ಣು ಮಗುವನ್ನು ಕೊಂದರೆ, ಪುನರುತ್ಥಾನ ದಿನದಂದು ಆ ಮಗುವಿನಲ್ಲೇ ‘ನಿನ್ನನ್ನು ಯಾವ ಕಾರಣಕ್ಕಾಗಿ ಕೊಲ್ಲಲಾಯಿತು ಮಗು' (ಪವಿತ್ರ ಕುರ್‍ಆನ್ 81:9) ಎಂದು ಪ್ರಶ್ನಿಸಿ ದುಷ್ಟ ಹೆತ್ತವರನ್ನು ಶಿಕ್ಷಿಸಲಾಗುತ್ತದೆ' ಎಂದು ಸಮಾಜವನ್ನು ಎಚ್ಚರಿಸಿದರು. ತಾಯಿಯ ಪಾದದಡಿ ಸ್ವರ್ಗವಿದೆ ಎಂದರು. ಎಷ್ಟೇ ದೊಡ್ಡ ಧರ್ಮಭಕ್ತನಾದರೂ ತಾಯಿಯ ವಿರೋಧ ಕಟ್ಟಿ ಕೊಂಡಿದ್ದರೆ ಸ್ವರ್ಗ ಪ್ರವೇಶಿಸಲಾರ ಎಂದು ಉಪದೇಶಿಸಿ ಸಮಾಜದಲ್ಲಿ ಹೆಣ್ಣಿನ ಸ್ಥಾನವನ್ನು ಉನ್ನತ ಗೊಳಿಸಿದರು. ಹೆಣ್ಣಿಗೆ ಆಸ್ತಿಯಲ್ಲಿ ಪಾಲು (ಪವಿತ್ರ ಕುರ್‍ಆನ್ 4: 11-12) ನೀಡಿದರು. ವಿವಾಹ ಧನವನ್ನು ನೀಡಿ ಹೆಣ್ಣನ್ನು ವರಿಸಬೇಕೆಂದು (ಪವಿತ್ರ ಕುರ್‍ಆನ್ 4:4) ಗಂಡಿಗೆ ಆದೇಶಿಸಿದರು. ಮುಟ್ಟು ಅಮಂಗಲವಲ್ಲ, ಪ್ರಕೃತಿ ಸಹಜ ಕ್ರಿಯೆ ಎಂದು ಸಾರಿದರು. ದುರಂತ ಏನೆಂದರೆ, ಇವತ್ತು ಹೆಣ್ಣು ಸಂತಾನವನ್ನು ಎಷ್ಟು ನಾಜೂಕಾಗಿ ಹತ್ಯೆ ಮಾಡಲಾಗುತ್ತಿದೆಯೆಂದರೆ, ಇಂಥದ್ದೊಂದು ಭಾವುಕ ಘಟನೆ ಹುಟ್ಟಿಕೊಳ್ಳುವುದಕ್ಕೆ ಅವಕಾಶವನ್ನೇ ನೀಡಲಾಗುತ್ತಿಲ್ಲ. ಮಗು ಮಾತಾಡುವುದಕ್ಕಿಂತ ಮೊದಲೇ, ಹೊಟ್ಟೆಯಲ್ಲೇ ತಣ್ಣಗೇ ಸಾಯಿಸಿ ಬಿಡುವ ತಂತ್ರಜ್ಞಾನವು ನಮ್ಮಲ್ಲಿದೆ. ಇತ್ತೀಚೆಗೆ ಕೇಂದ್ರ ಸರಕಾರ ಬಿಡುಗಡೆಗೊಳಿಸಿದ 2011ರ ಜನಗಣತಿಯ ವಿವರಗಳು ಹೇಳುವುದು ಇದನ್ನೇ. ಆದರೆ ಇಲ್ಲಿ ಚರ್ಚೆ ನಡೆದದ್ದೇ ಬೇರೆ. ಜನಗಣತಿಯ ವಿವರವನ್ನು ಇಲ್ಲಿನ ಕೆಲವು ಮಾಧ್ಯಮಗಳು ಮತ್ತು ಬಲಪಂಥೀಯ ವಿಚಾರಧಾರೆಯ ಪಕ್ಷ -ಪರಿವಾರಗಳು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿದುವು. ಹಿಂದೂಗಳ ಜನಸಂಖ್ಯೆ ಕುಸಿಯುತ್ತಿದೆಯೆಂದೂ ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಏರುಗತಿ ಕಾಣುತ್ತಿದೆಯೆಂದೂ ಹೇಳಲಾಯಿತಲ್ಲದೇ ಅಲ್ಪಸಂಖ್ಯಾತ ಎಂಬ ಪದದೊಳಗೆ ಬರುವ ಜೈನ, ಬೌದ್ಧ, ಕ್ರೈಸ್ತ, ಫಾರ್ಸಿ ಸಹಿತ ಎಲ್ಲ ಗುಂಪುಗಳನ್ನೂ ಕಡೆಗಣಿಸಿ ಅಲ್ಪಸಂಖ್ಯಾತವೆಂದರೆ ‘ಮುಸ್ಲಿಮ್' ಎಂದು ವ್ಯಾಖ್ಯಾನಿಸಿ ಭಯ ಹುಟ್ಟಿಸಲಾಯಿತು. ನಿಜವಾಗಿ 2001ರಿಂದ 2011ರ ವರೆಗಿನ 10 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯಾ ಬೆಳವಣಿಗೆಯ ದರ 5% ಕುಸಿತ ಕಂಡಿದ್ದರೆ ಹಿಂದೂಗಳ ಜನಸಂಖ್ಯಾ ಬೆಳವಣಿಗೆ 3%ವಷ್ಟೇ ಕುಸಿತ ಕಂಡಿದೆ. ಈ ಸತ್ಯ ಎಲ್ಲೂ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಚರ್ಚೆಯಾಗಲೇ ಇಲ್ಲ. ಅಷ್ಟಕ್ಕೂ, ಜನಗಣತಿ ಎಂಬುದು ಹಿಂದೂಗಳೆಷ್ಟು ಮುಸ್ಲಿಮರೆಷ್ಟು ಎಂಬುದನ್ನು ಲೆಕ್ಕ ಹಾಕುವುದಕ್ಕಾಗಿ ಮಾಡುವ ಕಸರತ್ತಲ್ಲ. ಅದು ಒಂದು ಜನತೆ ಮತ್ತು ಸಮಾಜಕ್ಕೆ ಸಂಬಂಧಿಸಿ ಲಕ್ಷಾಂತರ ಕಾರ್ಯಕರ್ತರು ಹತ್ತಾರು ವಿವರಗಳನ್ನು ಕಲೆ ಹಾಕುವ ದಾಖಲೆ ಪತ್ರ. ಈ ದಾಖಲೆ ಪತ್ರ ಹಿಂದೂ-ಮುಸ್ಲಿಮರ ಜನಸಂಖ್ಯೆಯ ವಿವರವನ್ನಷ್ಟೇ ನೀಡುವುದಲ್ಲ. ಕುಸಿಯುತ್ತಿರುವ ಲಿಂಗಾನುಪಾತದ ಭೀಕರ ಚಿತ್ರಣವನ್ನೂ ದೇಶದ ಮುಂದಿಟ್ಟಿದೆ. ಆದರೂ, ಜನಸಂಖ್ಯೆಯ ಹೆಸರಲ್ಲಿ ಮುಸ್ಲಿಮರನ್ನು ಟೀಕಿಸಿದ ಯಾವ ಬಲಪಂಥೀಯ ಪಕ್ಷಗಳೂ ಕುಸಿಯುತ್ತಿರುವ ಹೆಣ್ಣು ಶಿಶುಗಳ ಅನುಪಾತದ ಬಗ್ಗೆ ಏನನ್ನೂ ಹೇಳದಿರುವುದಕ್ಕೆ ಏನೆನ್ನಬೇಕು? ದಲಿತರು ಮತ್ತು ಆದಿವಾಸಿಗಳನ್ನು ಹೊರತುಪಡಿಸಿದ ಹಿಂದೂ ಸಮುದಾಯದಲ್ಲಿ ಹೆಣ್ಣು ಶಿಶುಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಆಗುತ್ತಿದೆಯೆಂದು ಜನಗಣತಿ ವಿವರಗಳು ಬಹಿರಂಗಪಡಿಸಿದುವು. ವಿಶೇಷ ಏನೆಂದರೆ, ಆರ್ಥಿಕವಾಗಿ ಅತ್ಯಂತ ಮುಂದುವರಿದ ಪಂಜಾಬ್ ಮತ್ತು ಹರ್ಯಾಣಗಳು ಅತೀ ಕಡಿಮೆ ಲಿಂಗಾನುಪಾತ ದಾಖಲಿಸಿದುವು. 2011ರ ಜನಗಣತಿ ವರದಿಯಲ್ಲಿ ದೇಶದ ಒಟ್ಟು ಲಿಂಗಾನುಪಾತ ದರ 1000 ಪುರುಷರಿಗೆ 940 ಮಹಿಳೆಯರಾದರೆ, ಹರ್ಯಾಣದಲ್ಲಿ ಇದು 1000 ಪುರುಷರಿಗೆ 830 ಮಹಿಳೆಯರು. ಪಂಜಾಬ್‍ನಲ್ಲಂತೂ 846 ಮಹಿಳೆಯರು. 2001ರಲ್ಲಿ ದೇಶದಲ್ಲಿ ಒಟ್ಟು ಲಿಂಗಾನುಪಾತ ದರ 1000 ಪುರುಷರಿಗೆ 933 ಮಹಿಳೆಯರಿದ್ದರು. ಒಂದು ವೇಳೆ, ಮುಸ್ಲಿಮರನ್ನು ಮಾತ್ರ ಇಲ್ಲಿ ಪ್ರತ್ಯೇಕಿಸಿ ನೋಡುವುದಾದರೆ 2001ರಲ್ಲಿ 1000 ಮುಸ್ಲಿಮ್ ಪುರುಷರಿಗೆ 936 ಮಹಿಳೆಯರಿದ್ದರು. ಇದೇ ಸಂದರ್ಭದಲ್ಲಿ ಹಿಂದೂ ಮಹಿಳೆಯರ ಅನುಪಾತ 931. 2011ರಲ್ಲಿ ಮುಸ್ಲಿಮರಲ್ಲಿ ಲಿಂಗಾನುಪಾತ ದರ 1000 ಪುರುಷರಿಗೆ 951 ಮಹಿಳೆಯರಾದರೆ ಹಿಂದೂಗಳಲ್ಲಿ ಇದು 939. ಹಾಗಂತ, ಇಡೀ ದೇಶದಲ್ಲಿ 6 ವರ್ಷಕ್ಕಿಂತ ಕೆಳಗಿನ ಮಕ್ಕಳ ಬಗ್ಗೆ ಹೇಳುವುದಾದರೆ, 2001ರಲ್ಲಿ 1000 ಗಂಡು ಮಕ್ಕಳಿಗೆ 927 ಹೆಣ್ಣು ಮಕ್ಕಳಿದ್ದರೆ 2011ರಲ್ಲಿ ಅದು 914ಕ್ಕೆ ಕುಸಿದಿದೆ. ಅಷ್ಟಕ್ಕೂ, 2001ರಿಂದ 2011ರ ಮಧ್ಯೆ ಈ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೇಂದ್ರಿತ ಬೆಳವಣಿಗೆಗಳು ನಡೆದಿವೆ. ಮೊಬೈಲ್‍ನಲ್ಲಿ, ವಾಹನಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಶೈಕ್ಷಣಿಕವಾಗಿಯೂ ದೇಶ ಬೆಳೆದಿದೆ. ತಂತ್ರಜ್ಞಾನದ ಬಳಕೆಯಲ್ಲಿ ಸಾಕಷ್ಟು ಏರುಗತಿ ಕಂಡುಬಂದಿದೆ. 2011ರ ಕ್ರಿಕೆಟ್ ವಿಶ್ವಕಪ್ ಅನ್ನು ಗೆದ್ದದ್ದೂ ಭಾರತವೇ. ಅಲ್ಲದೇ 1961ರಲ್ಲಿಯೇ ವರದಕ್ಷಿಣೆ ವಿರೋಧಿ ಕಾಯ್ದೆಯನ್ನು ಈ ದೇಶದಲ್ಲಿ ಜಾರಿಗೊಳಿಸಲಾಗಿದೆ. 1994ರಲ್ಲಿ ಲಿಂಗಪತ್ತೆ ಪರೀಕ್ಷೆಯನ್ನು ನಿಷೇಧಿಸಲಾಗಿದೆ. ಅಲ್ಟ್ರಾ ಸೋನೋಗ್ರಾಫಿ ಯಂತ್ರಗಳು ಕಡ್ಡಾಯವಾಗಿ ನೋಂದಣಿಗೊಳ್ಳ ಬೇಕೆಂದು ಕಾನೂನು ರೂಪಿಸಲಾಗಿದೆ. ಇಷ್ಟೆಲ್ಲಾ ಇದ್ದೂ ಹೆಣ್ಣು ಶಿಶುವನ್ನು ಪ್ರೀತಿಸದಂಥ ಮನಸ್ಥಿತಿಯೊಂದು ಇಲ್ಲಿ ಉಳಿದುಕೊಂಡಿರುವುದಕ್ಕೆ ಕಾರಣಗಳೇನು? ಅದರಲ್ಲೂ ಆರ್ಥಿಕವಾಗಿ ಮುಂದುವರಿದ ರಾಜ್ಯಗಳಲ್ಲೇ ಹೆಣ್ಣು ಶಿಶು ಕಣ್ಮರೆಯಾಗುತ್ತಿರುವುದನ್ನು ಏನೆಂದು ವಿಶ್ಲೇಷಿಸಬಹುದು? ಹೆಣ್ಣು-ಗಂಡು ಅನುಪಾತನದಲ್ಲಿ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಮ್, ದಲಿತ, ಆದಿವಾಸಿಗಳಲ್ಲಿ ಇರುವ ಸಮತೋಲನವು ಹಿಂದೂ ಸಮುದಾಯದಲ್ಲಿ ಇಲ್ಲ ಎಂಬುದನ್ನು ಜನಗಣತಿ ವರದಿಯೇ ಹೇಳಿರುವಾಗ, ಆ ಬಗ್ಗೆ ಅದರ ವಕ್ತಾರರು ಮಾತಾಡುತ್ತಿಲ್ಲವೇಕೆ? ಹರ್ಯಾಣ, ರಾಜಸ್ತಾನ, ಪಂಜಾಬ್, ಗುಜರಾತ್, ಉತ್ತರ ಪ್ರದೇಶದಂಥ ರಾಜ್ಯಗಳ ಕೆಲವೊಂದು ಗ್ರಾಮಗಳಲ್ಲಿ ವರ್ಷಗಳಿಂದ ಹೆಣ್ಣು ಮಕ್ಕಳೇ ಜನಿಸಿಲ್ಲ ಎಂದು ಹೇಳುವಷ್ಟು ಅಪರೂಪವಾಗಿ ಹೆಣ್ಣು ಶಿಶುಗಳು ನೋಂದಣಿಯಾಗಿವೆ ಎಂದು ಹೇಳಿರುವ ವರದಿಯನ್ನು ಎತ್ತಿಕೊಂಡು ಅವು ಚರ್ಚಿಸಿಲ್ಲವೇಕೆ? ಆಸ್ತಿಯಲ್ಲಿ ಪಾಲು ಕೊಡಬೇಕಾದೀತೆಂದೋ ವರದಕ್ಷಿಣೆ ನೀಡಬೇಕಾದೀತೆಂದೋ ಭಯಪಟ್ಟು ಮಾಡಲಾಗುವ ಈ ಹತ್ಯಾ ಸರಣಿಯ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನಗಳು ಈ ವರೆಗೂ ನಡೆದಿಲ್ಲವೇಕೆ? ಈ ಹತ್ಯೆಗಿರುವ ಸಾಂಸ್ಕೃತಿಕ, ಸೈದ್ಧಾಂತಿಕ ಹಿನ್ನೆಲೆಗಳನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಿಲ್ಲವೇಕೆ?
      ಜನಗಣತಿ ವರದಿಯನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿ ಚರ್ಚೆಗೊಳಪಡಿಸಿರುವುದರ ಹಿಂದೆ ಲಿಂಗಾನುಪಾತ ಕುಸಿತವು ಚರ್ಚೆಗೊಳಗಾಗದಂತೆ ತಡೆಯುವ ಹುನ್ನಾರವೊಂದು ಇದ್ದಂತೆ ತೋರುತ್ತಿದೆ. ಹೆಣ್ಣು ಶಿಶು ಹತ್ಯೆಯ ಕುರಿತಂತೆ ಗಂಭೀರ ಚರ್ಚೆಯೊಂದಕ್ಕೆ ದೇಶ ತೆರೆದುಕೊಂಡದ್ದೇ ಆದರೆ ಅದು ಪಡಕೊಳ್ಳುವ ತಿರುವು ಹಲವು ರೀತಿಯದ್ದು. ಆ ಚರ್ಚೆ ಕೇವಲ ಅಂಕಿ-ಸಂಖ್ಯೆಗಳಲ್ಲಿ ಕಳೆದು ಹೋಗುವುದಕ್ಕೆ ಸಾಧ್ಯವಿರಲಿಲ್ಲ. ಮನುಸ್ಮೃತಿಯಿಂದ ಹಿಡಿದು ಸತಿಪದ್ಧತಿಯ ವರೆಗೆ ಅಥವಾ ಪುರಾತನ ಇತಿಹಾಸದ ಮಹಿಳಾ ಶೋಷಣೆಯಿಂದ ಹಿಡಿದು ದೇವದಾಸಿ ಪದ್ಧತಿಯ ವರೆಗೆ ಪ್ರತಿಯೊಂದೂ ವಿಶ್ಲೇಷಣೆಗೆ ಒಳಪಡುವ ಸಾಧ್ಯತೆ ಇತ್ತು. ಹಾಗೊಂದು ವೇಳೆ ಚರ್ಚೆ ಆಗಿದ್ದೇ ಆದಲ್ಲಿ ಜನಗಣತಿ ವರದಿಯನ್ನು ಬಿಡುಗಡೆ ಗೊಳಿಸಿದ ಪಕ್ಷಕ್ಕೆ ಅದರಿಂದ ರಾಜಕೀಯವಾಗಿಯೂ ಸಾಮಾಜಿಕವಾಗಿಯೂ ಯಾವ ಲಾಭವೂ ಇರಲಿಲ್ಲ. ನಿಜವಾಗಿ, ಜನಗಣತಿ ವರದಿಯನ್ನು ಬಿಡುಗಡೆಗೊಳಿಸುವುದರ ಹಿಂದೆ ಇದ್ದ ಉದ್ದೇಶವೇ ಹಿಂದೂ-ಮುಸ್ಲಿಮ್ ಜನಸಂಖ್ಯೆ ಚರ್ಚೆಗೊಳ್ಳಬೇಕೆಂಬುದು. ಮುಸ್ಲಿಮರ ಜನಸಂಖ್ಯೆ ಏರುಗತಿಯಲ್ಲಿದೆ ಎಂಬ ಸುದ್ದಿಯನ್ನು ಹಬ್ಬಿಸಿ ಧಾರ್ಮಿಕ ಧ್ರುವೀಕರಣ ನಡೆಸಬೇಕೆಂಬುದು. ಅಷ್ಟಕ್ಕೂ,
       ಹೆಣ್ಣು ಮಕ್ಕಳನ್ನು ಪ್ರೀತಿಸದ ಮತ್ತು ಅವರನ್ನು ಹೊಟ್ಟೆಯಲ್ಲೇ ಸಾಯಿಸುವ ಅಪಾಯಕಾರಿ ಮನಸ್ಥಿತಿಯು ವ್ಯಾಪಕವಾಗಿರುವ ದೇಶವೊಂದರಲ್ಲಿ ಚರ್ಚೆಗೊಳಗಾಗಬೇಕಾದದ್ದು ಗೋವುಗಳೋ, ಹೆಣ್ಣು ಮಕ್ಕಳೋ? 1000 ಗಂಡು ಮಕ್ಕಳಿಗೆ 830 ಹೆಣ್ಣು ಮಕ್ಕಳನ್ನು ಹೊಂದಿರುವ ರಾಜ್ಯವು ಯಾವ ವಿಷಯಕ್ಕಾಗಿ ಸುದ್ದಿಗೊಳಗಾಗಬೇಕು, ದಲಿತರ ಹತ್ಯೆಗೋ ಅಥವಾ ಹೆಣ್ಣು ಶಿಶು ಹತ್ಯೆ ವಿರೋಧಿ ಚಳವಳಿಗೋ? 1000 ಗಂಡು ಮಕ್ಕಳಿಗೆ 914 ಹೆಣ್ಣು ಮಕ್ಕಳಿರುವ ದೇಶಕ್ಕೆ ಯಾವುದರ ತುರ್ತು ಅಗತ್ಯ ಇದೆ, ಗೋವೋ, ಹೆಣ್ಣೋ?
       ಕಣ್ಣೀರಾದ ಪ್ರವಾದಿ ನೆನಪಾಗುತ್ತಾರೆ..No comments:

Post a Comment