Tuesday, October 13, 2015

ಕಲ್ಲಂಗಡಿ ಹಣ್ಣುಗಳಲ್ಲಿ ಕಲ್ಲುಗಳಿಲ್ಲ...

ಮೂರು ಆಯ್ಕೆಗಳಿವೆ
     1. ಒಂದು ಗ್ರಾಮದಲ್ಲಿ 300ರಷ್ಟು ಗೋವುಗಳಿವೆಯೆಂದಾದರೆ ಅಷ್ಟೇ ಸಂಖ್ಯೆಯಲ್ಲಿ ಅಥವಾ ಅದರ ಆಸುಪಾಸಿನಲ್ಲಿ ಎತ್ತುಗಳೂ ಇರಬೇಕಾಗುತ್ತದೆ. ಇವುಗಳಲ್ಲಿ ಹಾಲು ಕೊಡದ (ಗೊಡ್ಡು) ಹಸುಗಳು ಮತ್ತು ಮುದಿ ಎತ್ತುಗಳೂ ಇರಬಹುದು. ಗೋವೇನೂ ಜೀವನಪೂರ್ತಿ ಹಾಲು ಕೊಡುವುದಿಲ್ಲವಲ್ಲ. ಎತ್ತುಗಳೂ ಅಷ್ಟೇ, ಜೀವನಪೂರ್ತಿ ದುಡಿಯುವುದಿಲ್ಲ. ಹಾಲು ನೀಡುವುದನ್ನು ನಿಲ್ಲಿಸಿದ ಬಳಿಕ ಸುಮಾರು 10 ವರ್ಷಗಳ ತನಕ ಗೋವು ಬದುಕಿರುತ್ತದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಹೀಗೆ ಸೃಷ್ಟಿಯಾಗುವ ಮುದಿ ಆಕಳು ಮತ್ತು ಎತ್ತುಗಳ ಸಂಖ್ಯೆಗೆ ತಕ್ಕಂತೆ ಗೋಶಾಲೆಗಳ ನಿರ್ಮಾಣವಾಗಬೇಕು. ಪ್ರತಿ ಹಳ್ಳಿ, ಗ್ರಾಮ, ಪಟ್ಟಣಗಳಲ್ಲಿ ಇಂಥ ಗೋಶಾಲೆಗಳು ಧಾರಾಳ ಸಂಖ್ಯೆಯಲ್ಲಿ ತಲೆ ಎತ್ತಬೇಕು. ಅವುಗಳಿಗೆ ಹುಲ್ಲು, ಹಿಂಡಿ, ನೀರು ಮತ್ತಿತರ ಸಕಲ ಸೌಲಭ್ಯಗಳೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಅವುಗಳೆಲ್ಲವೂ ಮುದಿ ಪ್ರಾಯಕ್ಕೆ ತಲುಪಿರುವುದರಿಂದಾಗಿ ಆರೋಗ್ಯ ಸಮಸ್ಯೆಯೂ ಆಗಾಗ ಕಾಡುತ್ತಿರಬಹುದು. ಸೂಕ್ತ ವೈದ್ಯರು ಗಳನ್ನು ತಪಾಸಣೆಗಾಗಿ ನೇಮಿಸಬೇಕು. ಅವುಗಳ ಯೋಗಕ್ಷೇಮ ನೋಡಿಕೊಳ್ಳುವುದಕ್ಕಾಗಿ ಕೆಲಸಗಾರರ ನೇಮಕವಾಗಬೇಕು. ಸಹಜ ಸಾವಿಗೆ ಒಳಗಾಗುವ ಹಸು-ಎತ್ತುಗಳ ದಫನ ಕ್ರಿಯೆಗೆ ವ್ಯವಸ್ಥೆಯಾಗಬೇಕು. ಮಾತ್ರವಲ್ಲ, ಈ ಎಲ್ಲವನ್ನೂ ನಿಭಾಯಿಸುವುದಕ್ಕಾಗಿ ದೊಡ್ಡ ಮಟ್ಟದ ಹಣಕಾಸಿನ ಏರ್ಪಾಟೂ ಆಗಬೇಕು. ಅಲ್ಲದೇ, ಇವೆಲ್ಲದರ ಹೊರತಾಗಿಯೂ ಗೋ ಶಾಲೆಯ ಪೋಷಕರು ಯಾವ ಆದಾಯವನ್ನು ಬಯಸಬಾರದು.
    2.  ಗೋವನ್ನು ಪವಿತ್ರವೆಂದು ಸಾರಬೇಕಲ್ಲದೇ ಅದನ್ನು ಆಹಾರವಾಗಿ ಬಳಕೆ ಮಾಡುವುದನ್ನು ಖಂಡಿಸಬೇಕು. ಅದು ಭಾವನಾತ್ಮಕ ಪ್ರಾಣಿಯಾಗಬೇಕು. ಕಸಾಯಿಖಾನೆಗಳನ್ನು ಮುಚ್ಚುವಂತೆ ಆಗ್ರಹಿಸಬೇಕು. ಮುದಿ ಆಕಳು ಮತ್ತು ಎತ್ತನ್ನು ಕಸಾಯಿಖಾನೆಗೆ ಮಾರದಂತೆ ರೈತರನ್ನು ಬೆದರಿಸಬೇಕು. ಇದರ ಹೊರತಾಗಿಯೂ ಯಾರಾದರೂ ಗೋಮಾಂಸ ಸೇವಿಸಿದರೆ ಅಥವಾ ಮುದಿ ಎತ್ತು-ಗೋವಿನ ಮಾರಾಟ-ಸಾಗಾಟದಲ್ಲಿ ತೊಡಗಿದರೆ ಅವರನ್ನು ಥಳಿಸಬೇಕು. ಮಾತ್ರವಲ್ಲ, ಆ ಥಳಿತವನ್ನು ಗೋರಕ್ಷಣೆಯ ಹೆಸರಲ್ಲಿ ಸಮರ್ಥಿಸಿಕೊಳ್ಳಬೇಕು. ಹಾಗಂತ, ಮುದಿ ಎತ್ತು ಮತ್ತು ಗೋವುಗಳ ಬಗ್ಗೆ ಹಾಗೂ ಅವುಗಳ ಸಾಕಾಣಿಕೆಯ ಬಗ್ಗೆ   ಥಳಿಸಿದವರು ಮಾತಾಡಬೇಕಿಲ್ಲ. ಅವುಗಳನ್ನು ಅವರು ಖರೀದಿಸಬೇಕಿಲ್ಲ. ಅವುಗಳಿಂದ ರೈತನಿಗೆ ಆಗುವ ಆರ್ಥಿಕ ಹೊರೆಯ ಬಗ್ಗೆ ಅವರು ಉತ್ತರಿಸಬೇಕಿಲ್ಲ. ಬೀದಿಯಲ್ಲಿ ತಿರುಗಾಡುತ್ತಲೋ ಪ್ಲಾಸ್ಟಿಕ್ಕೋ ಇನ್ನೇನನ್ನೋ ತಿನ್ನುತ್ತಲೋ ಸರಿಯಾದ ಆರೈಕೆಯೂ ಇಲ್ಲದೇ ಅವು ಸಾವಿಗೀಡಾದರೆ ಅವರು ಅದರ ಹೊಣೆಗಾರರೂ ಆಗಬೇಕಿಲ್ಲ. 
     3.  ರೈತರ ಗದ್ದೆಯ ಪಕ್ಕವೇ ಕಸಾಯಿಖಾನೆಯನ್ನು ನಿರ್ಮಿಸುವುದು. ಸರಕಾರದ ಪರವಾನಿಗೆಯನ್ನು ಪಡೆದು ತಮ್ಮ ಮುದಿ ಎತ್ತು-ಗೋವುಗಳನ್ನು ರೈತರೇ ವಧಿಸುವಂತೆ ನೋಡಿಕೊಳ್ಳುವುದು. ಯಾವುದೇ ಕಾನೂನುಬಾಹಿರ ವಧೆ ನಡೆಯದಂತೆ ಜಾಗರೂಕತೆ ಪಾಲಿಸುವುದು.
     ಈ ಮೂರು ಆಯ್ಕೆಗಳಲ್ಲಿ ಆಯ್ಕೆ ಸಂಖ್ಯೆ 1 ಅತ್ಯಂತ ತುಟ್ಟಿಯಾದುದು. ತಾಲೂಕಿಗೊಂದು ಗೋಶಾಲೆಗಳೂ ಇಲ್ಲದ ಇಂದಿನ ದಿನಗಳಲ್ಲಿ ಪ್ರತಿ ತಾಲೂಕುಗಳಲ್ಲಿ ಹತ್ತಾರು ಗೋಶಾಲೆಗಳನ್ನು ತೆರೆಯುವುದು ಮತ್ತು ದೊಡ್ಡ ಮಟ್ಟದ ಖರ್ಚು-ವೆಚ್ಚಗಳನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಇವತ್ತಿನ ಸ್ಥಿತಿ ಹೇಗಿದೆಯೆಂದರೆ, ಅಲ್ಲೊಂದು ಇಲ್ಲೊಂದು ಇರುವ ಗೋಶಾಲೆಗಳೇ ಸರಿಯಾಗಿ ಉಸಿರಾಡುತ್ತಿಲ್ಲ. ಆದ್ದರಿಂದ ಇವುಗಳಿಗೆ ಇನ್ನಷ್ಟು ಸಂಖ್ಯೆಯಲ್ಲಿ ಗೋಶಾಲೆಗಳು ಸೇರ್ಪಡೆಯಾದರೆ, ಗೋಶಾಲೆಗಳೇ ಸುದ್ದಿಯಾದಾವು. ಇನ್ನು, ಆಯ್ಕೆ 3ರಲ್ಲೂ ಒಂದು ಪ್ರಮುಖ ಸಮಸ್ಯೆ ಇದೆ. ಅದರಲ್ಲಿ ‘ವಧೆ’ ನಡೆಯುತ್ತದೆ. ವಧಿಸುವುದು ರೈತನೇ ಆದರೂ ಎತ್ತು ಮತ್ತು ಗೋವು ವಧೆಗೆ ಒಳಗಾಗುವುದರಿಂದ ಈ ಆಯ್ಕೆಯೂ ಸೂಕ್ತವಲ್ಲ. ಹೀಗಿರುವಾಗ ಅತ್ಯಂತ ಸುಲಭ ಮತ್ತು ರಿಸ್ಕ್ ರಹಿತ ಆಯ್ಕೆಯೆಂದರೆ ಸಂಖ್ಯೆ  2. ಈ ಆಯ್ಕೆಯಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತದೆ. ಸಾರ್ವಜನಿಕವಾಗಿ ಸದಾ ಸುದ್ದಿಯಲ್ಲಿರುವುದಕ್ಕೆ ಅವಕಾಶವಿರುತ್ತದೆ. ಭಾವನೆಗಳ ಹೆಸರಲ್ಲಿ ಸಮಾಜವನ್ನು ಕಟ್ಟಿಹಾಕಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಸಮಾಜವನ್ನು ಗೋಮಾಂಸ ಭಕ್ಷಕರು ಮತ್ತು ರಕ್ಷಕರು ಎಂದು ಪ್ರತ್ಯೇಕಿಸುವುದಕ್ಕೆ ಅವಕಾಶ ಲಭಿಸುತ್ತದೆ. ಗೋಶಾಲೆಯನ್ನು ನಿರ್ಮಿಸುವುದೋ, ಮುದಿ ಗೋವು-ಎತ್ತುಗಳನ್ನು ರೈತರಿಂದ ಖರೀದಿಸುವುದೋ, ಗೋಶಾಲೆಗಳ ನಿರ್ವಹಣೆಗೆ ಅಗತ್ಯ ವ್ಯವಸ್ಥೆ ಗಳನ್ನು ಏರ್ಪಾಡು ಮಾಡುವುದೋ.. ಯಾವುದರ ಹೊಣೆಯನ್ನೂ ವಹಿಸಿಕೊಳ್ಳದೆಯೇ ಗೋರಕ್ಷಕರಾಗಿ ಮತ್ತು ಆ ಮೂಲಕ ಧಾರ್ಮಿಕ ಕರ್ತವ್ಯವೊಂದನ್ನು ನಿಭಾಯಿಸಿದವರಾಗಿ ಗುರುತಿಸಿ ಕೊಳ್ಳುವುದಕ್ಕೂ ಸಂದರ್ಭ ಒದಗುತ್ತದೆ. ಉತ್ತರ ಪ್ರದೇಶದ ಅಖ್ಲಾಕ್‍ನನ್ನು ಕೊಂದದ್ದು ಈ ಆಯ್ಕೆ ಸಂಖ್ಯೆ 2ರ ಆಧಾರದಲ್ಲೇ. ದೇಶದಲ್ಲಿ ನಡೆಯುತ್ತಿರುವ ಗೋ ಸಂಬಂಧಿ ಹೇಳಿಕೆ, ಘೋಷಣೆ, ದಾಳಿ, ಥಳಿತಗಳೆಲ್ಲ ಈ 2ನ್ನೇ ಆಧಾರವಾಗಿ ನೆಚ್ಚಿಕೊಂಡಿದೆ. ನಿಜವಾಗಿ, ಗೋವುಗಳು ವಧಾ ಗೃಹಕ್ಕೆ ತಲುಪಬಾರದು ಎಂದಾದರೆ, ಆಯ್ಕೆ ಸಂಖ್ಯೆ 1ನ್ನು ಎತ್ತಿಕೊಳ್ಳಬೇಕಾಗಿದೆ. ಅದರಲ್ಲಿ ಗೋವಿನ ಮಾಲಕರಿಗೆ ಭದ್ರತೆಯಿದೆ. ಮುದಿ ಗೋವುಗಳನ್ನು ಖರೀದಿಸುವ ವ್ಯವಸ್ಥೆಯೊಂದು ಜಾರಿಯಲ್ಲಿರುವಾಗ ಗೋವಿನ ಮಾಲಕ ಕಸಾಯಿಗಳತ್ತ ನೋಡಬೇಕಾದ ಅಗತ್ಯ ಇರುವುದಿಲ್ಲ. ಹೈನುದ್ಯಮ ನಡೆಸುತ್ತಿರುವ ವ್ಯಕ್ತಿಯೋರ್ವ ತನ್ನ ಹಟ್ಟಿಯಲ್ಲಿರುವ ಗಂಡು ಕರುವನ್ನು ಕಸಾಯಿಗಳಿಗೆ ಮಾರುವ ಬದಲಾಗಿ ಅದನ್ನು ಗೋರಕ್ಷಕರಿಗೆ ಮಾರುವ ಭರವಸೆಯೊಂದಿಗೆ ಸಾಕಬಲ್ಲ. ಹೀಗಾದಾಗ ಕಸಾಯಿಖಾನೆಗಳು ಪರವಾನಿಗೆ ಇದ್ದರೂ `ಮಾಲು’ ಇಲ್ಲದೇ ಭಣಗುಟ್ಟುವ ಸಂದರ್ಭ ಎದುರಾಗ ಬಹುದು. ಸಾರ್ವಜನಿಕರು ಕಸಾಯಿಖಾನೆಗಳಿಗಿಂತ ಗೋರಕ್ಷಕರನ್ನು ಮೆಚ್ಚಿಕೊಳ್ಳುವುದಕ್ಕೂ ಕಾರಣವಾಗಬಹುದು. ಆದರೆ, ಸದ್ಯದ ಗೋರಕ್ಷಣಾ ಚಳವಳಿ ಎಷ್ಟು ಅಪ್ರಾಯೋಗಿಕವಾಗಿದೆಯೆಂದರೆ, ಅದು ಮಾಲಕ ಸ್ನೇಹಿಯೂ ಅಲ್ಲ, ಗೋ ಸ್ನೇಹಿಯೂ ಅಲ್ಲ. ಅದು ಇವೆರಡರ ಹೊರತಾದ ಇನ್ನಾ ವುದೋ ಗುರಿಯನ್ನು ಹೊಂದಿರುವಂತೆ ಕಾಣಿಸುತ್ತಿದೆ. ಗಾಂಧಿ ಪೀಸ್ ಫೌಂಡೇಶನ್‍ನ ಸ್ಟಪನ್ ಜೋಶಿ ತನ್ನ Why is the cow a political animal? (ಗೋವು ಏಕೆ ರಾಜಕೀಯ ಪ್ರಾಣಿ) ಎಂಬ ತಮ್ಮ ದೀರ್ಘ ಬರಹದಲ್ಲಿ ಹೇಳಿಕೊಂಡಿರುವಂತೆ, ‘ಧರ್ಮಕ್ಕೂ ಇವತ್ತಿನ ಗೋ ಚಳವಳಿಗೂ ಸಂಬಂಧ ಇಲ್ಲವೇ ಇಲ್ಲ. ಇವತ್ತಿನ ಗೋ ಚಳವಳಿ ಸಂಪೂರ್ಣ ರಾಜಕೀಯ ಪ್ರೇರಿತ. ಅದರ ಮುಂದೆ ಒಂದು ಅಜೆಂಡಾ ಇದೆ. ಆ ಅಜೆಂಡಾ ರಾಜಕೀಯ ಅಧಿಕಾರವನ್ನು ಪಡೆಯುವ ಆಕಾಂಕ್ಷೆಯದ್ದು...’
    ನಿಜವಾಗಿ, ಅಖ್ಲಾಕ್‍ನನ್ನು ಮಾಂಸದ ತುಂಡಿಗಾಗಿ ಕೊಂದಿಲ್ಲ. ಗೋಮಾಂಸ ಸೇವನೆಗೆ ನಿಷೇಧವೇ ಇಲ್ಲದ ರಾಜ್ಯದಲ್ಲಿ ಓರ್ವನ ಮನೆಯಲ್ಲಿ ಗೋಮಾಂಸವಿರುವುದಕ್ಕಾಗಿ ದಾಳಿ ನಡೆಯುತ್ತದೆ ಅನ್ನುವುದನ್ನು ಹೇಗೆ ಒಪ್ಪಲು ಸಾಧ್ಯ? ಗೋಹತ್ಯಾ ನಿಷೇಧಕ್ಕಾಗಿ ಒತ್ತಾಯಿಸುತ್ತಿರುವ ಮತ್ತು ಅಖ್ಲಾಕ್‍ನ ಹತ್ಯೆಯನ್ನು ಗೋವಿನ ಹೆಸರಲ್ಲಿ ಭಾಗಶಃ ಸಮರ್ಥಿಸಿರುವ ಸಂಗೀತ್ ಸೋಮ್ ಎಂಬ ಬಿಜೆಪಿಯ ಶಾಸಕ ಸ್ವತಃ ಅಲ್ ದುವಾ ಎಂಬ ಗೋಮಾಂಸ ರಫ್ತು ಕಾರ್ಖಾನೆಯ ನಿರ್ದೇಶಕರಾಗಿದ್ದಾರೆ ಎಂಬುದನ್ನು ಇದರ ಜೊತೆಗಿಟ್ಟು ನೋಡಿದರೆ ಇದು ಇನ್ನೂ ಹೆಚ್ಚು ಸ್ಪಷ್ಟಗೊಳ್ಳುತ್ತದೆ. ಮೈಸೂರ್ ಪಾಕ್‍ನಲ್ಲಿ ಮೈಸೂರು ಇಲ್ಲದಿರುವಂತೆಯೇ ಅಥವಾ ಕಲ್ಲಂಗಡಿ ಹಣ್ಣುಗಳಲ್ಲಿ ಕಲ್ಲುಗಳಿಲ್ಲದಿರುವಂತೆಯೇ ಗೋರಕ್ಷಣಾ ಚಳವಳಿಗಳಲ್ಲಿ ಗೋವುಗಳಿಲ್ಲ. ಅವು ಗೋವುಗಳಿಗಾಗಿ ನಡೆಯುತ್ತಿರುವ ಹೋರಾಟಗಳೂ ಅಲ್ಲ. ಗೋಶಾಲೆಗಳನ್ನು ನಿರ್ಮಿಸದೆಯೇ, ಮುದಿ ಗೋವುಗಳನ್ನು ಖರೀದಿಸುವುದಕ್ಕೆ ವ್ಯವಸ್ಥಿತವಾದ ನೀಲ ನಕಾಶೆಯನ್ನು ರಚಿಸದೆಯೇ, ಪ್ರತಿ ಹಳ್ಳಿ, ಗ್ರಾಮ, ಪಟ್ಟಣಗಳಲ್ಲಿ ಗೋ ಸರ್ವೇ ನಡೆಸದೆಯೇ ಮತ್ತು ಗೋ ಮಾಲಕಸ್ನೇಹಿ ಯೋಜನೆಯೊಂದನ್ನು ಸಮಾಜದ ಮುಂದಿಡದೆಯೇ ಗೋ ಹತ್ಯೆಯನ್ನು ನಿಷೇಧಿಸಿ ಎಂದು ಆಗ್ರಹಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸುವುದು ಹೇಗೆ? ಅಖ್ಲಾಕ್‍ನನ್ನು ಹತ್ಯೆ ನಡೆಸುವುದಕ್ಕಿಂತ ಮೊದಲು ವಾಟ್ಸಪ್‍ನಲ್ಲಿ ದಾದ್ರಿಯ ಆಸುಪಾಸಿನಲ್ಲಿ ವೀಡಿಯೋವೊಂದು ಪ್ರಸಾರವಾಗಿತ್ತು. ವ್ಯಕ್ತಿಯೋರ್ವ ಗೋಹತ್ಯೆ ನಡೆಸುತ್ತಿರುವ ವೀಡಿಯೋ ಅದು. ವಂದನಾ ರಾಣಾ ಎಂಬ ಯುವತಿ (ಅಖ್ಲಾಕ್‍ನನ್ನು ಹತ್ಯೆಗೈದ ಆರೋಪಿ ವಿಶಾಲ್ ರಾಣಾನ ಸಹೋದರಿ ಈಕೆ. ಇವರಿಬ್ಬರೂ ಸ್ಥಳೀಯ ಬಿಜೆಪಿ ಕಾರ್ಯಕರ್ತ ಸಂಜಯ್ ರಾಣಾನ ಮಕ್ಕಳು) ಇದನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾಳೆ. ಮುಝಫ್ಫರ್ ನಗರ್ ಕೋಮು ಹಿಂಸಾಚಾರಕ್ಕಿಂತಲೂ ಮೊದಲು ಇಂಥದ್ದೇ ವೀಡಿಯೋ ವಾಟ್ಸಾಪ್‍ನಲ್ಲಿ ಪ್ರಸಾರವಾಗಿತ್ತು. ಗುಂಪೊಂದು ಇಬ್ಬರು ಯುವಕರನ್ನು ಥಳಿಸಿ ಕೊಲ್ಲುವ ವೀಡಿಯೋ. ಅದನ್ನು ಬಿಜೆಪಿಯ ಶಾಸಕರೇ ಸಾಮಾಜಿಕ ಜಾಲತಾಣಕ್ಕೆ ಅಪ್‍ಲೋಡ್ ಮಾಡಿದ್ದರು. ಈ ಎರಡೂ ಹಿಂಸಾ ಪ್ರಕರಣಗಳಲ್ಲಿ ಬಿಜೆಪಿ ಒಂದಲ್ಲ ಒಂದು ರೀತಿಯಲ್ಲಿ ಭಾಗಿಯಾಗಿದೆ. ಹಾಗಾದರೆ ಅಂಥದ್ದೊಂದು ವೀಡಿಯೋ ಹುಟ್ಟಿಕೊಂಡದ್ದು ಹೇಗೆ? ಅದನ್ನು ಚಿತ್ರೀಕರಿಸಿದ್ದು ಎಲ್ಲಿ ಮತ್ತು ಯಾರು? ಒಂದು ವೀಡಿಯೋಕ್ಕೆ ಪ್ರಚೋದನೆಗೊಳ್ಳುವಂತಹ ಕಾರ್ಯಕರ್ತ ಪಡೆಯನ್ನು ತಯಾರಿಸಲು ಎಷ್ಟು ಸಮಯ ತಗಲಿದೆ? ಅಂಥದ್ದೊಂದು ತರಬೇತಿಯನ್ನು ಯಾರು ಕೊಟ್ಟಿದ್ದಾರೆ? ಯಾವಾಗ ಮತ್ತು ಎಷ್ಟು ಸಮಯದಿಂದ ಇಂಥ ತರಬೇತಿಗಳು ನಡೆಯುತ್ತಿವೆ? ಸಣ್ಣದೊಂದು ವೀಡಿಯೋಗೆ ಇದ್ದಕ್ಕಿದ್ದಂತೆ ಕಾನೂನು, ನ್ಯಾಯ, ಸತ್ಯ, ಮನುಷ್ಯತ್ವ.. ಮುಂತಾದ ಮೌಲ್ಯಗಳನ್ನೆಲ್ಲ ನಿರ್ಲಕ್ಷಿಸಿ ಕೊಲೆಗೆ ಸಿದ್ಧವಾಗುವ ಗುಂಪೊಂದನ್ನು ಸೇರಿಸಲು ಸಾಧ್ಯವೇ? ಅದರ ಹಿಂದೆ ತಕ್ಷಣದ ಪ್ರಚೋದನೆಯ ಹೊರತಾದ ಇನ್ನಾವುದೂ ಇಲ್ಲವೇ? ಅಖ್ಲಾಕ್‍ನ ಹತ್ಯೆಗೆ ನಿಜವಾಗಿಯೂ ಕಾರಣವಾಗಿರುವುದು ಗೋವೋ ಅಥವಾ ರಾಜಕೀಯವೋ? ಅಂದಹಾಗೆ, ಗೋವುಗಳ ರಕ್ಷಣೆಗೆ ಯಾವೊಂದು ಯೋಜನೆಯನ್ನೂ ರೂಪಿಸದೆಯೇ ಅಖ್ಲಾಕ್‍ನನ್ನೋ ಇನ್ನಾರನ್ನೋ ಕೊಲ್ಲುವುದು ಗೋವುಗಳ ರಕ್ಷಣೆಯಲ್ಲಿ ಪರಿಣಾಮವನ್ನು ಬೀರಬಹುದೇ? ನಿಜವಾಗಿ, ಗೋವಿನ ಹೆಸರಲ್ಲಿ ನಡೆಯುವ ಪ್ರತಿ ಹಲ್ಲೆ ಮತ್ತು ಹತ್ಯೆಯಲ್ಲೂ ಸಮಾಜದಲ್ಲೊಂದು ಧ್ರುವೀಕರಣ ನಡೆಯುತ್ತದೆ. ಹಿಂದೂ-ಮುಸ್ಲಿಮರ ನಡುವೆ ಅನುಮಾನಗಳ ಪ್ರಮಾಣದಲ್ಲಿ ವೃದ್ಧಿಯಾಗುತ್ತದೆ. ಯಾವಾಗ ಕೋಮು ಸಂಘರ್ಷ ನಡೆಯುತ್ತದೋ ಎಂಬ ಭೀತಿಯೊಂದು ಸಮಾಜವನ್ನು ಕಾಡತೊಡಗುತ್ತದೆ. ಇದರ ಜೊತೆ ಜೊತೆಗೇ ಬಿಜೆಪಿಗೆ ಬೀಳುವ ಓಟಿನ ಅನುಪಾತದಲ್ಲಿ ವೃದ್ಧಿಯಾಗುತ್ತಲೂ ಇರುತ್ತದೆ. ಹಾಗಂತ, ಈ ಥಳಿತ, ಹತ್ಯೆಯ ಹೊರತಾಗಿ ಗೋವುಗಳ ರಕ್ಷಣೆಗಾಗಿ ಬಿಜೆಪಿಯಿಂದ ಯಾವುದಾದರೂ ದೀರ್ಘಾವಧಿ ಕಾರ್ಯಯೋಜನೆ ರಚನೆಗೊಂಡದ್ದು ಈ ವರೆಗೂ ನಡೆದಿಲ್ಲ. ರಾಜಕೀಯವಾಗಿ ಸದಾ ಸುದ್ದಿಯಲ್ಲಿರುವುದಕ್ಕೆ ಅದು ಗೋವನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವಂತೆ ಅನ್ನಿಸುತ್ತದೆ. ಅಷ್ಟಕ್ಕೂ,
    ಅಖ್ಲಾಕ್‍ನ ಹತ್ಯೆಗೆ ಕಾರಣವಾದ ವೀಡಿಯೋದ ಮೂಲವನ್ನು ಪತ್ತೆ ಹಚ್ಚುವ ಬದಲು ಫ್ರೀಜರ್‍ನಲ್ಲಿದ್ದ ಮಾಂಸವನ್ನು ಫಾರೆನ್ಸಿಕ್ ಪರೀಕ್ಷೆಗೆ ಒಪ್ಪಿಸಿದ ಅಖಿಲೇಶ್ ಯಾದವ್‍ರನ್ನು ಏನೆಂದು ಕರೆಯಬೇಕು?

No comments:

Post a Comment