Thursday, June 13, 2013

ಭಯೋತ್ಪಾದಕನ ಅಪ್ಪ ನಾನಲ್ಲ ಎಂದು ಸಾಬೀತುಪಡಿಸಬೇಕಿತ್ತು, ಅಷ್ಟೇ

ಗೋಪಿನಾಥ್ ಪಿಳ್ಳೆ
   “ಈ ಕೇಸಿನಲ್ಲಿ ಕಕ್ಷಿಯಾಗಿ ಸೇರಿಕೋ ಎಂದು ನಾನು ನನ್ನ ಮಗಳಲ್ಲಿ ವಿನಂತಿಸಿದೆ. ಮಗಳು ಸಾಜಿದ ಬಿಕ್ಕಿಬಿಕ್ಕಿ ಅತ್ತಳು. ಇಲ್ಲ ಮಾವ, ದಯವಿಟ್ಟು ಕ್ಷಮಿಸಿ. ಅವರನ್ನು ಸಹಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ಮಾವ. ದಯವಿಟ್ಟು...’ ಮಗಳ ಕಣ್ಣೀರಿಗೆ ನಾನು ಕರಗಿ ಬಿಟ್ಟೆ. ಅಷ್ಟಕ್ಕೂ, ಆಕೆಯ ಸ್ಥಾನದಲ್ಲಿ ನಾನಿರುತ್ತಿದ್ದರೆ, ಇದಕ್ಕಿಂತ ಭಿನ್ನವಾಗಿ ಮಾತಾಡುತ್ತಿದ್ದೆನೇ? ಓರ್ವ ಹೆಣ್ಣಾಗಿ ಆಕೆ ಅನುಭವಿಸಿದ ಕಿರುಕುಳಗಳು ಅಂಥ ಮಾತನ್ನಲ್ಲದೇ ಇನ್ನೇನನ್ನು ತಾನೇ ಹೇಳಿಸೀತು? ಇನ್ನೂ ಒಂದು ವರ್ಷ ತುಂಬದ ಪುಟ್ಟ ಮೂಸಾನನ್ನು ಕಂಕುಳಲ್ಲಿ ಇಟ್ಟುಕೊಂಡು ಆಕೆ ಎಷ್ಟು ಬಾರಿ ಗುಜರಾತ್‍ನ ಕ್ರೈಂ ಬ್ರಾಂಚ್ ಪೊಲೀಸ್ ಕಚೇರಿಯ ಮೆಟ್ಟಿಲು ತುಳಿದಿದ್ದಳೋ? ಕಚೇರಿಯ ಹೊರಗೆ ಆಕೆ ಎಷ್ಟೋ ಬಾರಿ ನೆಲದಲ್ಲಿ ಕೂತಿದ್ದಾಳೆ. ಕುಡಿಯಲು ನೀರು ಕೇಳಿದಾಗ ಅವಾಚ್ಯ ಪದಗಳಿಂದ ಪೊಲೀಸರು ಬೈದಿದ್ದರು. ವೇಶ್ಯೆ ಎಂದು ಹಂಗಿಸಿದ್ದರು. ಕೊಡಬಾರದ ಹಿಂಸೆ ಕೊಟ್ಟಿದ್ದರು. ಪುಣೆಯಲ್ಲಿದ್ದ ಆಕೆಯ ಫ್ಲ್ಯಾಟ್‍ಗೆ ನುಗ್ಗಿ ನನ್ನ ಮಗ ದುಬೈಯಿಂದ ತಂದಿದ್ದ ಸೂಟ್ ಕೇಸ್ ಸಹಿತ ವಸ್ತುಗಳನ್ನೆಲ್ಲಾ ನಾಶ ಮಾಡಿ, ಮಕ್ಕಳ ಜನನ ಪ್ರಮಾಣ ಪತ್ರ ಮತ್ತು ರೇಶನ್ ಕಾರ್ಡನ್ನೂ ಕೊಂಡೊಯ್ದಿದ್ದ  ಪೊಲೀಸರು ಆಕೆಯ ಎದೆಯಲ್ಲಿ ಭೀತಿಯನ್ನು ಸೃಷ್ಟಿಸಿದ್ದರೆ ಅದರಲ್ಲಿ ಆಕೆಯದ್ದೇನು ತಪ್ಪಿದೆ..
   ಗೋಪಿನಾಥ ಪಿಳ್ಳೆ ಅಂತರಂಗವನ್ನು ತೆರೆದಿಡುತ್ತಾ ಹೋಗುತ್ತಾರೆ..
2004 ಜೂನ್ 15-16ರಂದು ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯೊಂದು ಪ್ರಕಟವಾಗಿತ್ತು. ಹೆಚ್ಚಿನೆಲ್ಲಾ ಪತ್ರಿಕೆಗಳೂ ಮುಖಪುಟದಲ್ಲೇ ಪೋಟೋವನ್ನು ಪ್ರಕಟಿಸಿದ್ದುವು. ಒಂದು ಹಸಿರು ಟಾಟಾ ಇಂಡಿಕಾ ಕಾರು. ಅದರ ಬಳಿ ಸಾಲಾಗಿ ಮಲಗಿಸಿರುವ 4 ಮೃತ ದೇಹಗಳು. ಆ ಮೃತದೇಹಗಳ ಪಕ್ಕವೇ 4  A.  K . 47 ರೈಫಲ್‍ಗಳು. ಅಲ್ಲದೇ ಗುಜರಾತ್ ಕ್ರೈಂ ಬ್ರಾಂಚ್‍ನ ಮುಖ್ಯಸ್ಥ ವಂಜಾರ ಸಹಿತ ಮತ್ತಿತರ ಅಧಿಕಾರಿಗಳು. 18 ವರ್ಷದ ಇಶ್ರತ್ ಜಹಾಂ, ಅಮ್ಜದಲಿ ಅಕ್ಬರಲಿ ರಾಣಾ, ಅಬ್ದುಲ್ ಗನಿ ಮತ್ತು ಜಾವೇದ್ ಯಾನೆ ಪ್ರಾಣೇಶ್ ಕುಮಾರ್ ಪಿಳ್ಳೆ... ಎಂಬ ಈ ನಾಲ್ಕು ಮಂದಿಯನ್ನು ಬೆಳಗ್ಗಿನ ಜಾವಾ ಎನ್‍ಕೌಂಟರ್‍ನಲ್ಲಿ ಕೊಲೆ ಮಾಡಿ ಮೋದಿಯನ್ನು ಸಂಭಾವ್ಯ ಹತ್ಯೆಯಿಂದ ಪಾರು ಮಾಡಿರುವುದಾಗಿ ವಂಜಾರ ಹೇಳಿಕೊಂಡರು. ಈ ನಾಲ್ವರೂ ಲಷ್ಕರೆ ತ್ವಯ್ಯಿಬದ ಕಾರ್ಯಕರ್ತರು ಅಂದರು. ಮೋದಿಯವರ ಅಹ್ಮದಾಬಾದ್‍ನ ಕಚೇರಿಗಿಂತ 40 ಕಿಲೋ ಮೀಟರ್ ದೂರದ ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ಎನ್‍ಕೌಂಟರ್ ಮಾಡಿರುವುದಕ್ಕಾಗಿ ವಂಜಾರ ತಂಡವನ್ನು ಮಾಧ್ಯಮಗಳು ಹೊಗಳಿದುವು. ಅವರ ಬುದ್ಧಿವಂತಿಕೆ, ಚಾಣಾಕ್ಷತೆಯನ್ನು ಕೊಂಡಾಡಿದುವು. ಆ,  ಜಾವೇದ್ ಯಾನೆ ಪ್ರಾಣೇಶ್ ಪಿಳ್ಳೆಯ ತಂದೆಯೇ ಗೋಪಿನಾಥ್ ಪಿಳ್ಳೆ. ಈ ಘಟನೆಗಿಂತ ಎರಡು ವರ್ಷಗಳ ಮೊದಲಷ್ಟೇ ಹೃದಯದ ಬೈಪಾಸ್ ಚಿಕಿತ್ಸೆಗೆ ಒಳಗಾಗಿದ್ದ ಮತ್ತು ಕೇಂದ್ರ ಸರಕಾರದ ಹೆವಿ ಎಲೆಕ್ಟ್ರಿಕಲ್ಸ್‍ನಲ್ಲಿ ಸೂಪರ್‍ವೈಸರ್ ಆಗಿ ನಿವೃತ್ತರಾಗಿದ್ದ ಗೋಪಿನಾಥರು ತಾನೋರ್ವ ಭಯೋತ್ಪಾದಕನ ತಂದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವೇ ಇರಲಿಲ್ಲ. ನಾನು ನನ್ನ ಮಗನಿಗೆ ಕಲಿಸಿರುವುದು ಒಳಿತುಗಳನ್ನು ಮಾತ್ರ. ಆತ ಉಗ್ರವಾದಿಯಾಗುವುದು ಸಾಧ್ಯವೇ ಇಲ್ಲ. ಆದ್ದರಿಂದ ವಂಜಾರನನ್ನು ನಾನು ನಂಬುವುದಿಲ್ಲ. ನನಗೆ ನ್ಯಾಯ ಕೊಡಿ ಎಂದು ರಾಷ್ಟ್ರಪತಿ ಸಹಿತ ಎಲ್ಲರಲ್ಲೂ ಕೋರಿಕೊಂಡರು. ಉತ್ತರ ಸಿಗದೇ ಹೋದಾಗ ಸುಪ್ರೀಮ್ ಕೋರ್ಟನ್ನು ಸಂಪರ್ಕಿಸಿದರು. ಅಂತಿಮವಾಗಿ ಕೇಸು ಗುಜರಾತ್ ಹೈಕೋರ್ಟಿಗೆ ವರ್ಗಾವಣೆಯಾಯಿತು. ಘಟನೆಯ ತನಿಖೆಗಾಗಿ ಮೆಟ್ರೋಪಾಲಿಟನ್ ಮ್ಯಾಜಿ ಸ್ಟ್ರೇಟ್ ಎಸ್.ಪಿ. ತಮಂಗಿಯವರನ್ನು ಹೈಕೋರ್ಟು ನೇಮಿಸಿತು. ಅವರು ಸಲ್ಲಿಸಿದ 241 ಪುಟಗಳ ವರದಿಯು ಎಷ್ಟು ಭಯಾನಕ ಅಂಶಗಳನ್ನು ಒಳಗೊಂಡಿತ್ತೆಂದರೆ, ವಂಜಾರರಂಥ ಅಧಿಕಾರಿಗಳು ಹೇಗೆ ಇಡೀ ವ್ಯವಸ್ಥೆಯನ್ನೇ ಕುಲಗೆಡಿಸಿ ಬಿಡಬಲ್ಲರು ಎಂಬುದನ್ನು ವಿವರಿಸಿತು. ಆ ಎನ್‍ಕೌಂಟರೇ ನಕಲಿ ಎಂದಿತು. 4 ಮಂದಿಯನ್ನು ಕೂರಿಸಿ ಹತ್ತಿರದಿಂದ ಗುಂಡಿಟ್ಟು ಕೊಲ್ಲಲಾಗಿದೆ ಎಂದು ತಮಂಗಿಯವರು ಹೇಳಿದರಲ್ಲದೇ ಇದಕ್ಕೆ ಪುರಾವೆಯಾಗಿ ಪೋಸ್ಟ್ ಮಾರ್ಟಮ್ ವರದಿಯನ್ನು ದಾಖಲಿಸಿದರು. ಒಂದು ರೀತಿಯಲ್ಲಿ 2002ರಿಂದ 2007ರ ಮಧ್ಯೆ 21 ಮಂದಿಯನ್ನು ಎನ್‍ಕೌಂಟರ್ ಮಾಡಿ ಕೊಂದಿದ್ದ ವಂಜಾರ ತಂಡದ 'ದೇಶಭಕ್ತಿ' ಕವಚವನ್ನು ಮೊತ್ತಮೊದಲ ಬಾರಿ ಅಧಿಕೃತವಾಗಿ ಕಳಚಿ ಹಾಕಿದ್ದು ಈ ತಮಂಗಿಯವರೇ. ಆದ್ದರಿಂದಲೇ ತಮಂಗಿಯವರನ್ನು ಗೋಪಿನಾಥ ಪಿಳ್ಳೆಯವರು ಸಂಬೋಧಿಸುವುದು ‘ಈಶ್ವರ’ ಎಂದೇ. ಒಂದು ವೇಳೆ ಪಿಳ್ಳೆಯವರು ಕೋರ್ಟು ಮೆಟ್ಟಲೇರುವ ಸಾಹಸವನ್ನು ಮಾಡದೇ ಇರುತ್ತಿದ್ದರೆ ಅವರೀಗಲೂ ಭಯೋತ್ಪಾದಕನ ತಂದೆಯಾಗಿಯೇ ಗುರುತಿಸಿಕೊಳ್ಳುತ್ತಿದ್ದರೇನೋ?
   ‘..ನನ್ನ ಮಗ ಪ್ರಾಣೇಶ ನನ್ನ ಮನೆಗೆ ಕೊನೆಯ ಬಾರಿ ಬಂದದ್ದು 2004  ಮೇ 30ರಂದು. ಮಕ್ಕಳಾದ ಅಬೂಬಕರ್, ಮೂಸಾ, ಝೈನಬ ಮತ್ತು ಪತ್ನಿ ಸಾಜಿದಾಳ ಜೊತೆ ಬಂದಿದ್ದ ಆತ ಒಂದು ವಾರ ಇದ್ದು ಪುಣೆಯಲ್ಲಿರುವ ತನ್ನ ಮನೆಗೆ ವಾಪಸಾಗಿದ್ದ. ನನಗಿರುವುದು ಇಬ್ಬರು ಗಂಡು ಮಕ್ಕಳೇ. ಪ್ರಾಣೇಶ ಮತ್ತು ಅರವಿಂದ. ನನ್ನ ಮಕ್ಕಳಿಬ್ಬರನ್ನೂ ಪೂರ್ಣ ಸ್ವಾತಂತ್ರ್ಯ ಕೊಟ್ಟು ಬೆಳೆಸಿದೆ. ನಾನು ನಿವೃತ್ತಿಯಾಗುವ ಸಮಯದಲ್ಲಿ ಪ್ರಾಣೇಶನಿಗೆ ದುಬೈಯಲ್ಲಿ ಒಳ್ಳೆಯ ನೌಕರಿ ದೊರಕಿತ್ತು. ಈ ಮಧ್ಯೆ ಆತ ಸಾಜಿದಾಳನ್ನು ಪ್ರೀತಿಸಿ ಮದುವೆಯಾದ. ಆದರೆ ಒಂದೆರಡು ವರ್ಷಗಳ ವರೆಗೆ ಅದನ್ನು ಮುಚ್ಚಿಟ್ಟಿದ್ದ. ಅಪ್ಪ ಎಲ್ಲಿ ಬೈಯ್ದು ಬಿಡುತ್ತಾರೋ ಅನ್ನುವ ಭೀತಿ. ನಾನು ಪ್ರಾಣೇಶನನ್ನು ಹತ್ತಿರ ಕೂರಿಸಿ ಎಲ್ಲವನ್ನೂ ಕೇಳಿಸಿಕೊಂಡೆ. ಆತ ಜಾವೇದ್ ಆದ ಕತೆಯನ್ನು ನನ್ನೊಂದಿಗೆ ಹಂಚಿಕೊಂಡ. ನಾನು ಆತನನ್ನು ಅಭಿನಂದಿಸಿದೆ. ಹೆಣ್ಣು ಮಗಳಿಲ್ಲದ ನಾನು ಸಾಜಿದಳನ್ನು ನನ್ನ ಮಗಳಾಗಿ ಸ್ವೀಕರಿಸಿದೆ. ನನ್ನ ಮಗ ಎಲ್ಲಿದ್ದರೂ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಿದ್ದ. ಒಂದು ವಾರ ಇಲ್ಲಿದ್ದು ಪುಣೆಗೆ ವಾಪಸಾದ ಆತ, ಅಲ್ಲಿಂದ ಸಾಜಿದಾಳ ಅಕ್ಕ ವಾಸವಿರುವ ಅಹ್ಮದ್ ನಗರಕ್ಕೆ ಕುಟುಂಬ ಸಮೇತ ಹೋದ. ಅಲ್ಲಿ ಮುಂಜಿನ ಮದುವೆಯಿತ್ತು. ಪತ್ನಿ ಮತ್ತು ಮಕ್ಕಳನ್ನು ಅಲ್ಲಿ ಇಳಿಸಿ ಕಾರಿನಲ್ಲಿ ಅಹ್ಮದ್ ನಗರವಾಗಿ ಹಿಂತಿರುಗುವಾಗ ಪೊಲೀಸರಂತೆ ಕಾಣುವ ಇಬ್ಬರು ಕಾರನ್ನು ನಿಲ್ಲಿಸುವಂತೆ ಸೂಚಿಸಿದರು. ಕೆಳಗಿಳಿದ ಈತನನ್ನು ತಮ್ಮ ವಾಹನಕ್ಕೆ ಹತ್ತಿಸಿಕೊಂಡು ಹೋದರು. ಇದಾಗಿ ಐದು ದಿನಗಳ ಬಳಿಕ ಅವನ ಸಹಿತ 4 ಮಂದಿಯ ಮೃತ ದೇಹವನ್ನು ವಂಜಾರ ಪ್ರದರ್ಶಿಸಿದರು.
   ಎನ್‍ಕೌಂಟರ್‍ನ ಬಳಿಕ ವಂಜಾರರ ತಂಡ ಸಾಕಷ್ಟು ಸುಳ್ಳುಗಳನ್ನು ಹೇಳಿದೆ. ಪ್ರಾಣೇಶ್‍ನಿಂದ ಉರುಟು ಧಾನ್ಯದ ರೂಪದಲ್ಲಿ ತಯಾರಿಸಿದ ಸಿಡಿ ಮದ್ದುಗಳನ್ನು (ದಾನೆದಾಲ್ ಬಾರಿದ್) ವಶ ಪಡಿಸಿಕೊಳ್ಳಲಾಗಿದೆ ಎಂಬುದೂ ಅದರಲ್ಲಿ ಒಂದು. ನಿಜವೇನು ಗೊತ್ತೇ? ಜೂನ್‍ನಲ್ಲಿ ಆತ ನನ್ನ ಮನೆಯಿಂದ ಕುಟುಂಬ ಸಮೇತ ಕಾರಿನಲ್ಲಿ ಹೊರಟು ಹೋಗುವಾಗ 4 ಕೆ.ಜಿ. ಕರಿಮೆಣಸನ್ನು ಕೊಂಡೊಯ್ದಿದ್ದ. ದಾನೆದಾಲ್ ಬಾರಿದ್ ಎಂದು ವಂಜಾರ ಹೇಳಿದ್ದು ಇದನ್ನೇ. ಅಲ್ಲದೇ ಇಶ್ರತ್‍ಳನ್ನು ಪ್ರಾಣೇಶ್‍ನ ಪ್ರೇಯಸಿ ಎಂದೂ ವಂಜಾರ ಹೇಳಿದ್ದ. ಅವರ ನಡುವೆ 10 ವರ್ಷಗಳ ಪ್ರೇಮವಿತ್ತಂತೆ. ನಿಜವಾಗಿ, ಎನ್‍ಕೌಂಟರ್‍ಗೀಡಾಗುವಾಗ ಇಶ್ರತ್‍ಳ ವಯಸ್ಸು ಕೇವಲ 18. ಹಾಗಾದರೆ, ವಂಜಾರರ ಊರಿನಲ್ಲಿ ಮಕ್ಕಳು 8 ವರ್ಷಗಳಿರುವಾಗಲೇ ಪ್ರೇಮಿಸಲು ಪ್ರಾರಂಭಿಸುತ್ತಾರಾ? ಸುಳ್ಳು ಹೇಳುವುದಕ್ಕೂ ಒಂದು ಇತಿ-ಮಿತಿ ಬೇಡವೇ? ಪುಣೆಯಲ್ಲಿಯ ನನ್ನ ಮಗನ ಒಂದು ಸಂಸ್ಥೆಯಲ್ಲಿ ಇಶ್ರತ್‍ಳ ತಂದೆ ಕೆಲಸ ಮಾಡುತ್ತಿದ್ದರು. ಒಂದು ದಿನ ಆಯ ತಪ್ಪಿ ಬಿದ್ದ ಅವರಿಗೆ ಗಂಭೀರ ಏಟಾಯಿತು. ತನ್ನ ಕುಟುಂಬದ ಹೊಣೆಯನ್ನು ನೋಡಿ ಕೊಳ್ಳುವಂತೆ ಪ್ರಾಣೇಶ್‍ನಲ್ಲಿ ಸಾಯುವುದಕ್ಕಿಂತ ಮೊದಲು ಅವರು ವಿನಂತಿಸಿದ್ದರು. ಆ ಕಾರಣದಿಂದಾಗಿ ಟ್ರಾವೆಲ್ ಏಜೆನ್ಸಿಯೊಂದನ್ನು ಪ್ರಾರಂಭಿಸಿ ಅದರಲ್ಲಿ ಇಶ್ರತ್‍ಳನ್ನು ನೇಮಿಸಿದ್ದ. ವಂಜಾರ ತಿರುಚಿದ್ದು ಈ ಪರೋಪಕಾರವನ್ನೇ. ಮೂಲಗಳನ್ನು ಆಧರಿಸಿ ಮಾಧ್ಯಮಗಳಲ್ಲಿ ಬರುತ್ತಿದ್ದ ಸುದ್ದಿ ಮತ್ತು ಗುಜರಾತ್ ಪೊಲೀಸರು ನನ್ನೊಂದಿಗೆ ವರ್ತಿಸುತ್ತಿದ್ದ ರೀತಿ, ಈ ಪ್ರಾಯದಲ್ಲೂ ನನ್ನನ್ನು ಕುದಿಯುವಂತೆ ಮಾಡಿತು. ನನ್ನ ಮಗ ಭಯೋತ್ಪಾದಕನಲ್ಲ ಅನ್ನುವುದು ನನಗೆ ನೂರು ಶೇಕಡಾ ಗೊತ್ತು. ಆದರೆ ಅದನ್ನು ಸಾಬೀತುಪಡಿಸಬೇಕಲ್ಲ. ಗುಜರಾತ್ ಪೊಲೀಸರಂತೂ ನಿರಂತರ ಫೋನ್ ಮುಖಾಂತರ ಪೀಡಿಸುತ್ತಿದ್ದರು. ನನ್ನ ಮಗಳಂತಿರುವ ಸಾಜಿದಳನ್ನಂತೂ ಅವರು ಇಂಚಿಂಚಾಗಿ ಕೊಲ್ಲುತ್ತಿದ್ದರು. ಇದಕ್ಕೊಂದು ತಾರ್ಕಿಕ ಅಂತ್ಯ ಸಿಗಲೇಬೇಕೆಂದು ತೀರ್ಮಾನಿಸಿಯೇ ನಾನು ಅಂತಿಮವಾಗಿ ಸುಪ್ರೀಮ್ ಕೋರ್ಟಿನ ಮೆಟ್ಟಲೇರಿದೆ. ಈ ಸಂದರ್ಭದಲ್ಲಿಯೇ ನಾನು ಸಾಜಿದಾಳನ್ನು ದೂರುದಾರಳಾಗಿ ಕೇಸಿನಲ್ಲಿ ಸೇರಿಕೊಳ್ಳುವಂತೆ ವಿನಂತಿಸಿದ್ದು. ಗಂಡನನ್ನು ಕಳಕೊಂಡ ನೋವಿನ ಜೊತೆಗೇ ಪೊಲೀಸರು ಇಂಚಿಂಚಾಗಿ ಕೊಲ್ಲುತ್ತಿರುವ ಅನುಭವಗಳನ್ನು ಹೊಂದಿರುವ ಆ ಮಗಳು, 'ಬೇಡ ಮಾವ' ಎಂದು ಅತ್ತಿದ್ದು ನನ್ನನ್ನು ಕಣ್ಣೀರಾಗಿಸಿತು. ಈ ಮಗಳಿಗಾಗಿಯಾದರೂ ಆ ಕ್ರೂರಿಗಳ ವಿರುದ್ಧ ಹೋರಾಡಲೇಬೇಕು ಎಂದು ತೀರ್ಮಾನಿಸುವಂತೆ ಮಾಡಿತು. ಇಷ್ಟಕ್ಕೂ, ನನ್ನ ಹೋರಾಟದ ಹಾದಿಯೇನೂ ಸುಗಮವಾಗಿರಲಿಲ್ಲ. ನಾನು ವಿಚಾರಣೆಗೆಂದು 18 ಬಾರಿ ಗುಜರಾತ್‍ಗೆ ಪ್ರಯಾಣಿಸಿದೆ. ನನಗೆ ಕೋರ್ಟ್‍ಗೆ ಹಾಜರಾಗಿ ಎಂದು ಗುಜರಾತ್‍ನಿಂದ ಅಂಚೆ ಮೂಲಕ ಸಮನ್ಸ್ ಬರುತ್ತಿದ್ದುದೇ ಎರಡ್ಮೂರು ದಿನಗಳ ಮೊದಲು. ಹೀಗಿರುವಾಗ ರೈಲಿನ ತತ್ಕಾಲ್‍ನಲ್ಲೂ ಟಿಕೇಟು ಸಿಗುತ್ತಿರಲಿಲ್ಲ. ಆದರೂ ನನ್ನ ಮಗ, ಮಗಳಿಗಾಗಿ ನಾನು ಹೋಗಲೇ ಬೇಕಾಗಿತ್ತು. 4 ಬಾರಿ ನಾನು ವಿಮಾನದಲ್ಲಿ ಗುಜರಾತ್‍ಗೆ ಹೋದೆ. ಹಾಗಂತ ನಾನೇನೂ ಯುವಕ ಅಲ್ಲವಲ್ಲ.
   ಗೋಪಿನಾಥ್ ನಿಟ್ಟುಸಿರಿಡುತ್ತಾರೆ..
ಸಾಜಿದಾ ನನ್ನ ಮಗಳು. ಆದ್ದರಿಂದಲೇ ನನ್ನ ಆಸ್ತಿಯನ್ನು ಮಾರಿ ನನ್ನ ಮೂರು ಮೊಮ್ಮಕ್ಕಳಿಗಾಗಿ ಪುಣೆಯಲ್ಲಿ 3 ಫ್ಲಾಟ್‍ಗಳನ್ನು ಖರೀದಿಸಿಕೊಟ್ಟಿದ್ದೇನೆ. ಆದರೆ ಗುಜರಾತ್‍ನ ಅಧಿಕಾರಿಗಳು ಎಷ್ಟು ಸತಾಯಿಸಿದರೆಂದರೆ ಮಗನ ಮರಣ ಪತ್ರಕ್ಕಾಗಿ 6 ವರ್ಷಗಳ ವರೆಗೆ ಅಲೆದಾಡಿಸಿದರು. ಆದರೂ ಕೊಡಲಿಲ್ಲ. ಕೊನೆಗೆ ಪೋಸ್ಟ್ ಮಾರ್ಟಂ ವರದಿಯನ್ನು ಪುರಾವೆಯಾಗಿ ಮಂಡಿಸಿ, ಫ್ಲ್ಯಾಟುಗಳನ್ನು ರಿಜಿಸ್ಟ್ರೇಶನ್ ಮಾಡಿಸಿದೆ. ನಿಜವಾಗಿ, ನನ್ನ ಮಗನನ್ನು ಕೊಲ್ಲುವ ಮೂಲಕ ಹೀರೋ ಆಗಿ ಮೆರೆಯಬಹುದು ಎಂದು ವಂಜಾರ ಭಾವಿಸಿರಬಹುದು. ಲಷ್ಕರೆ ತ್ವಯ್ಯಿಬದವರನ್ನು ಕೊಲ್ಲುವುದೆಂದರೆ ಸಣ್ಣ ಸಂಗತಿ ಅಲ್ಲವಲ್ಲ. ಓರ್ವ ಭಯೋತ್ಪಾದಕನ ತಂದೆಯಾಗಿ ಕದ್ದು ಮುಚ್ಚಿ ಮನೆಯೊಳಗಿರುವಂತೆ ಮಾಡಲು, ಭಯೋತ್ಪಾದಕನ ಪತ್ನಿಯೆಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡು ಯಾರಿಗೂ ಕಾಣದಂತೆ ಕಣ್ಣೀರಿನೊಂದಿಗೆ ಕಳೆದು ಹೋಗಲು ಮತ್ತು ದೇಶದ್ರೋಹಿ ಇಮೇಜಿನೊಂದಿಗೆ ಇಶ್ರತ್‍ಳ ಕುಟುಂಬ ಬದುಕುವಂತೆ ಮಾಡಲು ವಂಜಾರ ತಂಡಕ್ಕೆ ಒಂದು ಹಂತದ ವರೆಗೆ ಸಾಧ್ಯವಾಯಿತು. ಆದರೆ ಅಂತಿಮವಾಗಿ ವಂಜಾರ ಮತ್ತು ಅವರ ತಂಡವೇ ಈ ಎಲ್ಲ ಹಣೆಪಟ್ಟಿಯೊಂದಿಗೆ ಜೈಲಿನಲ್ಲಿ ಈಗ ಕೊಳೆಯುತ್ತಿದೆ. ಗುಜರಾತ್‍ನ ಸೆಂಟ್ರಲ್ ಜೈಲಿನಲ್ಲಿ 2007ರಿಂದ ವಂಜಾರ ವಿವಿಧ ಆರೋಪಗಳನ್ನು ಹೊತ್ತುಕೊಂಡು ಮುಖ ಮುಚ್ಚಿ ಬದುಕುತ್ತಿದ್ದಾರೆ. ಇದಕ್ಕಿಂತಲೂ ವಿಶೇಷ ಏನು ಗೊತ್ತೇ, 2007ರಿಂದ ಈ ವರೆಗೂ ಗುಜರಾತ್‍ನಲ್ಲಿ ಒಂದೇ ಒಂದು ಎನ್‍ಕೌಂಟರ್ ಆಗಿಲ್ಲ. ಪ್ರಾಣೇಶನ ಸಾವು ಎನ್‍ಕೌಂಟರ್‍ಗಳೆಂಬ ಕಗ್ಗೊಲೆಗಳ ಅಂತ್ಯಕ್ಕೇ ಕಾರಣವಾಯಿತು. ನಾನೀಗ ನಿರಾಳ ವ್ಯಕ್ತಿ. ಎಲ್ಲೆಡೆಗೂ ತಲೆ ಎತ್ತಿ ಆತ್ಮವಿಶ್ವಾಸದಿಂದ ನಡೆಯಬಲ್ಲೆ. ಆದರೆ ವಂಜಾರ ಜೈಲಿನ ಒಳಗಷ್ಟೇ ಅಷ್ಟಿಷ್ಟು ನಡೆಯಬಲ್ಲ. ಅದೂ ಮುಖ ಮುಚ್ಚಿಕೊಂಡು...  
  
ಪತ್ರಕರ್ತ ಮಿತ್ರನಲ್ಲಿ ಹೇಳುತ್ತಾ ಗೋಪಿನಾಥರು ನಿರಾಳವಾಗುತ್ತಾರೆ. ಬಹುಶಃ ಎಲ್ಲ ಮಕ್ಕಳೂ, ತಮಗೆ ಇಂಥ ಅಪ್ಪ ಬೇಕು ಎಂದು ಬಯಸುವಷ್ಟು ಹತ್ತಿರವಾಗುತ್ತಾರೆ.

No comments:

Post a Comment