Monday, June 3, 2013

'ಪದ್ಮಭೂಷಣ'ವನ್ನೇ ಜೋಕರ್ ಆಗಿಸಿದವರು, ಇನ್ನು ಈ ಹೋರಾಟಗಾರರನ್ನು ಬಿಡುತ್ತಾರಾ?

ಕುಡಂಕುಲಂ ಪ್ರತಿಭಟನೆ
1. ನರ್ಮದಾ ಬಚಾವೋ ಆಂದೋಲನ್
2. ಫೋಸ್ಕೊ ಪ್ರತಿರೋಧ್ ಸಂಗ್ರಾಮ್ ಸಮಿತಿ
3. ಪೀಪಲ್ಸ್ ಮೂವ್‍ಮೆಂಟ್ ಅಗೈನ್‍ಸ್ಟ್ ಕುಡಂಕುಲಮ್ ನ್ಯೂಕ್ಲಿಯರ್ ಪ್ರೊಜೆಕ್ಟ್
4. ಜೈತಾಪುರ್ ಜನಹಿತ್ ಸೇವಾ ಸಮಿತಿ
5. ಮಂಗಳೂರು ಕರಾವಳಿ ಜನಾಭಿವೃದ್ಧಿ ವೇದಿಕೆ
   ಇವೆಲ್ಲ ಇವತ್ತು ಏನಾಗಿವೆ? ಎಷ್ಟಂಶ ಜೀವಂತವಿವೆ? ಸರಕಾರದ ಜನವಿರೋಧಿ ಯೋಜನೆಗಳನ್ನು ಪ್ರತಿಭಟಿಸುವುದಕ್ಕೆಂದು ಹುಟ್ಟಿಕೊಂಡ ಈ ಸಂಘಟನೆಗಳೆಲ್ಲ ಉದ್ದೇಶಿತ ಗುರಿಯನ್ನು ಮುಟ್ಟದೇ ಇರುವುದಕ್ಕೆ ಏನು, ಯಾರು ಕಾರಣ? ಜನರೇ, ನಾಯಕರೇ, ಸರಕಾರವೇ ಅಥವಾ ಕಾರ್ಪೋರೇಟ್ ಸಂಸ್ಥೆಗಳೇ? ಒಂದು ಕಡೆ, ಜನರು ಹೆಚ್ಚೆಚ್ಚು ಪ್ರಜ್ಞಾವಂತರಾಗುತ್ತಿದ್ದಾರೆ. ಪ್ರತಿಯೊಂದನ್ನೂ ಸಂದೇಹದ ದೃಷ್ಟಿಯಲ್ಲಿ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರಕಾರ ಯಾವ ಯೋಜನೆಯನ್ನು ಘೋಷಿಸಿದರೂ ತಕ್ಷಣಕ್ಕೆ ಒಪ್ಪಿಕೊಳ್ಳದೇ ಇರುವ, ಸಂದೇಹಿಸುವ ಮನಃಸ್ಥಿತಿ ವ್ಯಾಪಕವಾಗುತ್ತಿದೆ. ಹೀಗಿರುವಾಗ, ಪ್ರತಿಭಟನೆಗಳನ್ನು ಅಸಹಜ ಅನ್ನುವಂತಿಲ್ಲ. ಗುಟ್ಕಾ ನಿಷೇಧವನ್ನು ಅಡಕೆ ಬೆಳೆಗಾರರು ಅನುಮಾನದಿಂದ ನೋಡುತ್ತಿರುವುದು ಈ ಕಾರಣದಿಂದಲೇ. ಆದರೆ, ಈ ಮನಃಸ್ಥಿತಿ ಅಂತಿಮವಾಗಿ ಪ್ರತಿಭಟನಾ ಚಳವಳಿಗಳ ಮೇಲೂ ಅಡ್ಡ ಪರಿಣಾಮ ಬೀರುತ್ತಿದೆಯೇ? ಪ್ರತಿಭಟನೆಗಳನ್ನೇ ಅನುಮಾನಿಸುತ್ತಾ, ಅದರ ನಾಯಕರ ಪ್ರಾಮಾಣಿಕತೆಯನ್ನು, ಬದ್ಧತೆಯನ್ನೇ ಸಂದೇಹಿಸುತ್ತಾ ತಿರುಗುವವರ ಹುಟ್ಟಿಗೆ ಇಂಥ ಮನಸ್ಥಿತಿಗಳು ಕಾರಣವಾಗುತ್ತಿದೆಯೇ?
   2005 ಜೂನ್‍ನಲ್ಲಿ ಕೊರಿಯಾದ ಫೋಸ್ಕೊ ಕಂಪೆನಿಯು ಬೃಹತ್ ಸ್ಟೀಲ್ ಉದ್ದಿಮೆಯನ್ನು ಸ್ಥಾಪಿಸುವ ಕುರಿತಂತೆ ಒಡಿಸ್ಸಾ ಸರಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ. ಕಂಪೆನಿಯ ಆಡಳಿತ ನಿರ್ದೇಶಕ ಯಂಗ್ ವೋನ್ ಯೂನ್‍ರು ಇಡೀ ಉದ್ದಿಮೆಯ ಬಗ್ಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್‍ರಿಗೆ ಮಾಹಿತಿ ನೀಡುತ್ತಾರೆ. ಒಟ್ಟು 8500 ಎಕ್ರೆಯಷ್ಟು ವಿಸ್ತಾರ ಭೂಮಿಯಲ್ಲಿ ಸ್ಟೀಲ್ ಪ್ಲಾಂಟ್, ಇನ್‍ಫ್ರಾಸ್ಟ್ರಕ್ಚರ್, ಮೈನಿಂಗ್‍ಗಳು ನಡೆಯುವ ನೀಲನಕ್ಷೆಯನ್ನು ಮುಂದಿಡುತ್ತಾರೆ. ಅಪಾರ ಖನಿಜ ಮತ್ತು ಅರಣ್ಯ ಸಂಪತ್ತು ಇರುವ ಒಡಿಸ್ಸಾದಲ್ಲಿ ಈ ಒಪ್ಪಂದ ಕಿಚ್ಚು ಹಚ್ಚುತ್ತದೆ. ಪ್ರತಿಭಟನೆಯ ಕಾವು ಎಷ್ಟು ಜೋರಾಗಿತ್ತೆಂದರೆ, ಪರಿಸರ ಮತ್ತು ಅರಣ್ಯ ಇಲಾಖೆಯು 2008ರಲ್ಲಿ ತನಿಖೆಗೆ ಆದೇಶಿಸುತ್ತದೆ. ಈ ಕಾರಣದಿಂದಲೇ ಎನ್.ಸಿ. ಸಕ್ಸೇನಾ ನೇತೃತ್ವದ 19 ಮಂದಿಯ ತಂಡ ಅಲ್ಲಿಗೆ ಭೇಟಿ ಕೊಡುತ್ತಲ್ಲದೇ ಫೋಸ್ಕೊದ ವಿರುದ್ಧ ಅಸಮಾಧಾನ ಸೂಚಿಸುತ್ತದೆ. ಉದ್ದಿಮೆಗೆ ನೀಡಲಾಗಿರುವ ಅರಣ್ಯ ಪ್ರದೇಶಗಳು ನಾಜೂಕಿನವು ಮತ್ತು ಕಾಪಾಡಿಕೊಳ್ಳಲೇಬೇಕಾದಂಥವು ಅನ್ನುತ್ತದೆ. ಈ ವರದಿಯನ್ನು ಪರಿಗಣಿಸಿ ಪರಿಸರ ಇಲಾಖೆಯು ಅರಣ್ಯ ಭೂಮಿಯ ವರ್ಗಾವಣೆಗೆ ತಡೆ ವಿಧಿಸುತ್ತದೆ. ಒಂದು ರೀತಿಯಲ್ಲಿ ಫೋಸ್ಕೋ ವಿರೋಧಿ ಚಳವಳಿಗೆ ಭಾರೀ ಉತ್ತೇಜನ ಕೊಟ್ಟ ಸಂದರ್ಭವಿದು. ಬಳಿಕ ಸರಕಾರವು ಮೀನಾ ಗುಪ್ತಾ ನೇತೃತ್ವದ 4 ಮಂದಿಯ ಸಮಿತಿಯನ್ನು ರಚಿಸುತ್ತದೆ. 2010 ಅಕ್ಟೋಬರ್‍ನಲ್ಲಿ ಅದು ಸಲ್ಲಿಸಿದ ವರದಿ ಎಷ್ಟು ಭಿನ್ನವಾಗಿತ್ತೆಂದರೆ, ಸಂಪೂರ್ಣ ಉದ್ದಿಮೆಯನ್ನು ಪರಿಸರ ಸಹ್ಯ ಅನ್ನುತ್ತದೆ. ರಾಜ್ಯ ಹೈಕೋರ್ಟೂ ಯೋಜನೆಯ ಪರ ನಿಲ್ಲುತ್ತದೆ. ಪ್ರತಿಭಟನಾಕಾರರ ಸಂಖ್ಯೆಯಲ್ಲಿ ದಿನೇ ದಿನೇ ಕುಸಿತವಾಗತೊಡಗುತ್ತದೆ. ಆರಂಭದಲ್ಲಿ 8 ಜಿಲ್ಲೆಗಳಿಗೆ ವ್ಯಾಪಿಸಿಕೊಂಡಿದ್ದ ಪ್ರತಿಭಟನೆ ಕ್ರಮೇಣ ಯೋಜನೆಯಿಂದ ಸಂಪೂರ್ಣ ಕಣ್ಮರೆಯಾಗಲಿರುವ ಗಡಕುಜಂಗ್ ಮತ್ತು ಧಿಂಕಿಯಾ ಗ್ರಾಮಗಳಿಗೆ ಮಾತ್ರ ಸೀಮಿತಗೊಳ್ಳುತ್ತದೆ. ಸಂತ್ರಸ್ತರು ಸರಕಾರದ ಪರಿಹಾರವನ್ನು ಪಡಕೊಂಡು ಸುಮ್ಮನಾಗತೊಡಗುತ್ತಾರೆ. ಈ ಮಧ್ಯೆ 2011 ಜೂನ್ 14ರಂದು ಧಿಂಕಿಯಾ ಗ್ರಾಮವನ್ನು ಫೋಸ್ಕೋಗೆ ಹಸ್ತಾಂತರಿಸುವ ಉಪಕ್ರಮಕ್ಕೆ ನವೀನ್ ಪಟ್ನಾಯಕ್ ಚಾಲನೆ ಕೊಡುತ್ತಾರೆ. ಅಲ್ಲದೇ ಫೋಸ್ಕೋ ಪ್ರತಿರೋಧ್ ಸಂಗ್ರಾಮ್ ಸಮಿತಿಯನ್ನು ಹುಟ್ಟು ಹಾಕಿ ಅದಕ್ಕೆ ನೇತೃತ್ವ ಕೊಟ್ಟಿದ್ದ ಅಭಯ್ ಸಾಹುರನ್ನು ವರದಕ್ಷಿಣೆ, ಕೊಲೆ ಸಹಿತ ಕೆಲವು ಕ್ರಿಮಿನಲ್ ಆರೋಪಗಳನ್ನು ಹೊರಿಸಿ ಬಂಧಿಸಲಾಗುತ್ತದೆ. ಫೋಸ್ಕೋವನ್ನು ವಿರೋಧಿಸುವವರಂತೆ ಬೆಂಬಲಿಸುವ ಆದಿವಾಸಿಗಳ ಗುಂಪೂ ಹುಟ್ಟಿಕೊಳ್ಳುತ್ತದೆ. ನಿಧಾನವಾಗಿ ಫೋಸ್ಕೋ ಪ್ರಬಲವಾಗುತ್ತಾ, ಪ್ರತಿಭಟನೆಗಳು ಕ್ಷೀಣವಾಗುತ್ತಾ ಸಾಗುತ್ತವೆ..
   ಇಷ್ಟಕ್ಕೂ, ತನಗೆ ಎದುರಾಗಬಹುದಾದ ಅಡೆ-ತಡೆಗಳ ಬಗ್ಗೆ ಯಾವುದೇ ಕಂಪೆನಿ ಮೊದಲೇ ಲೆಕ್ಕ ಹಾಕದೇ ಇರುತ್ತದೆಯೇ? ಅದನ್ನು ಎದುರಿಸುವುದಕ್ಕೆ ತಂತ್ರಗಳನ್ನು ಹೆಣಿಯದಿರುತ್ತದೆಯೇ? ತಮಿಳ್ನಾಡಿನ ತಿರುನೇಲ್ವಲಿ ಜಿಲ್ಲೆಯಲ್ಲಿ ಸ್ಥಾಪನೆಗೊಂಡಿರುವ ಕುಡಂಕುಲಮ್ ಅಣು ವಿದ್ಯುತ್ ಯೋಜನೆಗೆ 1988ರಲ್ಲೇ ರಾಜೀವ್ ಗಾಂಧಿ ಮತ್ತು ಅಂದಿನ ರಷ್ಯಾದ ಅಧ್ಯಕ್ಷ  ಮಿಖಾಯಿಲ್ ಗೋರ್ಬಚೇವ್‍ರು ಸಹಿ ಹಾಕಿದ್ದರು. ಆದರೆ ಆ ಬಳಿಕ ರಷ್ಯಾ ಹೋಳಾದದ್ದು ಮತ್ತು ಅಮೇರಿಕದ ವಿರೋಧದಿಂದಾಗಿ ಯೋಜನೆ ತಡವಾಗಿ 2001ರಲ್ಲಿ ಆರಂಭಗೊಂಡಿತು. ಇಷ್ಟಿದ್ದೂ, ಇಡೀ ಯೋಜನೆಯು ಜನರ ಗಮನಕ್ಕೆ ಬಂದದ್ದು ಎರಡ್ಮೂರು ವರ್ಷಗಳ ಹಿಂದೆ. ಅಣು ರಿಯಾಕ್ಟರ್‍ನ 30 ಕಿಲೋ ಮೀಟರ್ ಸುತ್ತ ಮುತ್ತ ವಾಸಿಸುತ್ತಿರುವ ಒಂದು ಮಿಲಿಯನ್ ಮಂದಿಯ ಆರೋಗ್ಯವು ಗಂಭೀರ ಚರ್ಚೆಗೆ ಒಳಪಟ್ಟದ್ದೂ ಇತ್ತೀಚೆಗೆ. ಯೋಜನೆಯ ನಕ್ಷೆಯನ್ನು ರೂಪಿಸಿದ್ದ (ಡಿಸೈನರ್) ಸೆರ್ಗೆಯಿ  ರಿಸೋವ್‍ರು 2011ರಲ್ಲಿ ವಿಮಾನಾಪಘಾತದಲ್ಲಿ ಸಾವಿಗೀಡಾಗದೇ ಇರುತ್ತಿದ್ದರೆ ಯೋಜನೆ ಈಗಿನಷ್ಟೂ ಪ್ರಚಾರಕ್ಕೆ ಬರುತ್ತಿರಲಿಲ್ಲವೋ ಏನೋ. ಅಲ್ಲದೇ ಸುನಾಮಿಯಿಂದಾಗಿ ಜಪಾನ್‍ನಲ್ಲಿ ನಡೆದ ಅಣು ದುರಂತ ಮತ್ತು ತನ್ನ 17 ಅಣು ರಿಯಾಕ್ಟರುಗಳನ್ನು ಮುಚ್ಚಲು ಜರ್ಮನಿ ತೀರ್ಮಾನಿಸಿರದಿರುತ್ತಿದ್ದರೆ ಕುಡಂಕುಲಮ್‍ನ ಪೀಪಲ್ಸ್ ಮೂವ್‍ಮೆಂಟ್‍ಗೆ ಈಗಿನಷ್ಟು ಜನಬೆಂಬಲ ಸಿಗುವುದಕ್ಕೂ ಸಾಧ್ಯವಿರಲಿಲ್ಲ. ನಿಜವಾಗಿ, 1988ರಿಂದ 2001ರ ವರೆಗಿನ ಈ 13 ವರ್ಷಗಳ ಅವಧಿಯಲ್ಲಿ ಅಣು ವಿದ್ಯುತ್ ಸಂಸ್ಥೆಯು ಸುಮ್ಮನಿತ್ತು ಎಂದು ಹೇಳುವಂತಿಲ್ಲ. ಅದು ಇಡೀ ಯೋಜನೆಗೆ ಎದುರಾಗಬಹುದಾದ ಪ್ರತಿರೋಧ ಮತ್ತು ಸವಾಲುಗಳನ್ನು ನಿರ್ವ ಹಿಸುವುದಕ್ಕೆ ತಕ್ಕ ಏರ್ಪಾಟು ಮಾಡಿಕೊಂಡಿರಬಹುದು. ಜನರಿಗೆ ಗೊತ್ತಾಗದಂತೆ, ಗೊತ್ತಾದರೂ ವಿದ್ಯುತ್ ಕೊರತೆಯನ್ನು ಮುಂದಿಟ್ಟು ಸಮರ್ಥಿಸಿಕೊಳ್ಳುವಂತೆ ಮಾಡುವುದಕ್ಕೆ ಸಕಲ ಏರ್ಪಾಟುಗಳನ್ನೂ ಮಾಡಿರಬಹುದು. ಯೋಜನೆಗೆ ಪೂರಕವಾದ ಮಾಹಿತಿಗಳು ಮಾಧ್ಯಮಗಳಲ್ಲೂ ಬರುವಂತೆ ನೋಡಿಕೊಳ್ಳಲು ತಂಡ ರಚಿಸಿರಬಹುದು. ಹಾಗಂತ ಇವೆಲ್ಲ ಅವಕಾಶಗಳು ಪ್ರತಿಭಟನಾಕಾರರಿಗೆ ಎಲ್ಲಿರುತ್ತದೆ ಹೇಳಿ? ಅವರಿಗೆ ಯೋಜನೆಯ ಬಗ್ಗೆ ಗೊತ್ತಾಗುವಾಗಲೇ ಅಥವಾ ಜನರನ್ನು ಸಂಘಟಿಸುವಾಗಲೇ ವಿದ್ಯುತ್ ಕಂಪೆನಿಯ ಅರ್ಧ ಕೆಲಸ ಮುಗಿದಿರುತ್ತದೆ. ಆ ಕೆಲಸವನ್ನೇ ತೋರಿಸಿ ಯೋಜನೆಯನ್ನು ಮುಂದುವರಿಸುವುದಕ್ಕೆ ಅದು ಕೋರ್ಟು, ಸರಕಾರದೊಂದಿಗೆ ಅನುಮತಿ ಕೇಳುತ್ತದೆ. ಸರಕಾರವಂತೂ ಒಂದೆರಡು ಆಯೋಗಗಳನ್ನು ರಚಿಸಿ ಅದೂ-ಇದೂ ಮಾತಾಡಿ, ಕೆಲವು ಷರತ್ತುಗಳನ್ನು ವಿಧಿಸಿದಂತೆ ಮಾಡಿ ಯೋಜನೆ ಮುಂದುವರಿಸುವುದಕ್ಕೆ ಅನುಮತಿ ಕೊಡುತ್ತದೆ. ಮತ್ತೂ ಪ್ರತಿಭಟಿಸಿದರೆ ಕೇಸು ದಾಖಲಾಗುತ್ತದೆ. ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆ, ಮಹಾರಾಷ್ಟ್ರದ ಜೈತಾಪುರ್ ಅಣು ವಿದ್ಯುತ್ ಅಥವಾ ಸರ್ದಾರ್ ಸರೋವರ್ ಯೋಜನೆಗಳ ವಿರುದ್ಧ ಎದ್ದ ಪ್ರತಿಭಟನೆಗಳೆಲ್ಲ ನಿಧಾನವಾಗಿ ಸಾಗಿ ಬಂದದ್ದು ಇದೇ ರೀತಿಯಲ್ಲಿ. 1979ರ ಸರ್ದಾರ್ ಸರೋವರ್ ಯೋಜನೆಯ ವಿರುದ್ಧ ಮೇಧಾ ಪಾಟ್ಕರ್‍ ನೇತೃತ್ವದಲ್ಲಿ ನರ್ಮದಾ ಬಚಾವೋ ಆಂದೋಲನ್ ಹುಟ್ಟಿಕೊಂಡದ್ದೇ 10 ವರ್ಷಗಳ ಬಳಿಕ, 1989ರಲ್ಲಿ. ನಿಜವಾಗಿ, ವ್ಯವಸ್ಥೆಯು ಜನರನ್ನು ಬಹುತೇಕ ಬಾರಿ ಕತ್ತಲಲ್ಲಿರಿಸಿಯೇ ಜನವಿರೋಧಿ ಯೋಜನೆಗಳಿಗೆ ಚಾಲನೆ ಕೊಡುತ್ತದೆ. ಅದು ಜನರ ಗಮನಕ್ಕೆ ಬಂದು ಪ್ರತಿಭಟನೆಗೆ ಮುಂದಾಗುವಾಗ ಯೋಜನೆಯ ದೊಡ್ಡದೊಂದು ಭಾಗ ಪೂರ್ಣವಾಗಿರುತ್ತದೆ. ಇಂಥ ಹೊತ್ತಲ್ಲಿ, ಪ್ರತಿಭಟನಾಕಾರರು ಮಾಡುವುದಾದರೂ ಏನನ್ನು? ಕೆಲಸಕ್ಕೆ ರಜೆ ಹಾಕಿ ಎಷ್ಟು ದಿನಾಂತ ಅವರು ಪ್ರತಿಭಟಿಸಿಯಾರು? ಪ್ರತಿಭಟನೆಯಿಂದಲೋ, ಕೋರ್ಟು ಕಲಾಪದಿಂದಾಗಿಯೋ ಯೋಜನೆ ಮುಂದೂಡಲ್ಪಟ್ಟರೆ ಸರಕಾರಿ ಸಬ್ಸಿಡಿ ಅಥವಾ ಇನ್ನೇನೋ ಒಳವ್ಯವಹಾರದ ಮೂಲಕ ಕಂಪೆನಿಗಳು ಬದುಕಬಹುದು. ಹಾಗಂತ ಪ್ರತಿಭಟನಾಕಾರರಿಗೆ ಸರಕಾರ ಊಟ ಕೊಡುವುದಿಲ್ಲವಲ್ಲ?
   ಅಷ್ಟಕ್ಕೂ, ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನೇ ಎತ್ತಿಕೊಳ್ಳಿ.
ಇತ್ತೀಚೆಗೆ ಇಂಡಿಯಾ ಟುಡೇ ಪತ್ರಿಕೆ ಬಿಡುಗಡೆಗೊಳಿಸಿದ ಭಾರತದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಅಣ್ಣಾ ಹಜಾರೆಯ ಹೆಸರೇ ಇಲ್ಲ. 2012ರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ವ್ಯಕ್ತಿ, ಕೇವಲ 12 ತಿಂಗಳೊಳಗೆ ಕಾಣೆಯಾಗಿರುವುದಕ್ಕೆ ಏನು ಕಾರಣ? ತನ್ನ ಗ್ರಾಮವಾದ ರಾಲೇಗಾಂವ್ ಸಿದ್ದಿಯನ್ನು ಮದ್ಯ, ತಂಬಾಕು ರಹಿತವಾಗಿಸಿರುವ; ಬಡವರಿಗಾಗಿ ಬ್ಯಾಂಕು, ನೀರಾವರಿ ಯೋಜನೆ ಸಹಿತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾದರಿ ಗ್ರಾಮವನ್ನು ಸೃಷ್ಟಿಸಿರುವ ಮತ್ತು ಅದಕ್ಕಾಗಿಯೇ 1992ರಲ್ಲಿ ಪದ್ಮಭೂಷಣ್ ಪ್ರಶಸ್ತಿಯನ್ನು ಪಡಕೊಂಡ ಅಣ್ಣಾ ಹಜಾರೆ, ಅನನುಭವಿಯೇನಲ್ಲ. ಆದರೆ ರಾಷ್ಟ್ರಮಟ್ಟದಲ್ಲಿ ಅವರು ಹುಟ್ಟು ಹಾಕಿದ ಚಳವಳಿ ಅಷ್ಟು ಬೇಗ ಕಾವು ಕಳಕೊಂಡಿತೇಕೆ? ರಾಮಲೀಲಾ ಮೈದಾನದಲ್ಲಿ 24 ಗಂಟೆ ಟೆಂಟು ಹಾಕಿ ಕುಳಿತುಕೊಂಡಿದ್ದ ಮಾಧ್ಯಮಗಳು ಕವರೇಜ್‍ನ ನೆಪದಲ್ಲಿ ಚಳವಳಿಯನ್ನೇ ಕೊಂದವೇ? ಅವುಗಳೊಂದಿಗೆ ವ್ಯವಸ್ಥೆಯೂ ಕೈ ಜೋಡಿಸಿತೇ? ಅಲ್ಲದೇ, ಅಣ್ಣಾ ಚಳವಳಿಯನ್ನು ಪ್ರಸಾರ ಮಾಡುವಾಗ 2ಜಿ ಹಗರಣದಲ್ಲಿ ಹೆಸರು ಕೆಡಿಸಿಕೊಂಡಿದ್ದ ಕಂಪೆನಿಗಳ ಜಾಹೀರಾತುಗಳನ್ನು ಟಿ.ವಿ. ಚಾನೆಲ್‍ಗಳು ಬಳಸಿಕೊಳ್ಳುತ್ತಿದ್ದುದರ ಉದ್ದೇಶವೇನು? ಅಣ್ಣಾ ಹಜಾರೆಯನ್ನು ಕೆಲವರು ತಮ್ಮ ನಿಗೂಢ ಉದ್ದೇಶಕ್ಕಾಗಿ ಬಳಸಿಕೊಂಡರೇ? ಅವರಿಂದ ಸಂವಿಧಾನಕ್ಕೆ ಅನುಗುಣವಲ್ಲದ ಹೇಳಿಕೆಗಳನ್ನು ಹೊರಡಿಸಿ ಜೋಕರ್ ಆಗಿಸಿದರೇ? ‘ಬದುಕಿನಲ್ಲಿ ವೈಫಲ್ಯವನ್ನೇ ಕಾಣದ ವ್ಯಕ್ತಿ’ ಎಂದು ಕಿರಣ್ ಬೇಡಿಯಿಂದ ಹೊಗಳಿಸಿಕೊಂಡ ಅಣ್ಣಾ, ಏಳೆಂಟು ತಿಂಗಳೊಳಗೆ ಕುರುಹೂ ಇಲ್ಲದಷ್ಟೂ ಅಪರಿಚಿತರಾಗಿ ಹೋದರೇಕೆ? ಅವರು ಹುಟ್ಟು ಹಾಕಿದ, 'ಎರಡನೇ ಸ್ವಾತಂತ್ರ್ಯ ಸಂಗ್ರಾಮ' ನಿರೀಕ್ಷಿತ ಪರಿಣಾಮ ಬೀರದಿರಲು ಏನು ಕಾರಣ, ಯಾರು ಕಾರಣ, ಯಾವುದು ಕಾರಣ? ಒಂದು ಜನಪರ ಧ್ವನಿಯನ್ನು ಮಟ್ಟ ಹಾಕುವುದಕ್ಕೆ ವ್ಯವಸ್ಥೆ, ಮಾಧ್ಯಮಗಳು, ಕಾರ್ಪೋರೇಟ್ ಸಂಸ್ಥೆಗಳು ಜೊತೆಯಾಗಿ ಶ್ರಮಿಸಿದರೆ ಏನಾಗಬಹುದು ಎಂಬುದಕ್ಕೆ ಅಣ್ಣಾ ಮತ್ತು ಅವರ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ಉದಾಹರಣೆಯಾಗಿ ಯಾಕೆ ಎತ್ತಿಕೊಳ್ಳಬಾರದು? ಅಂದಹಾಗೆ, ಅಣ್ಣಾ ಹಜಾರೆಯವರು ಮಾಧ್ಯಮಗಳಲ್ಲಿ ಈಗ ತಿಂಗಳಿಗೊಮ್ಮೆಯಾದರೂ ಕಾಣಿಸಿ
ಕೊಳ್ಳುತ್ತಿಲ್ಲವಲ್ಲ, ಯಾಕೆ? ಅವರನ್ನು ವ್ಯವಸ್ಥಿತವಾಗಿ ಮುಗಿಸಲಾಯಿತೇ?
  
ಅಣ್ಣಾ ಹಜಾರೆ 
ಜನವಿರೋಧಿ ಯೋಜನೆಗಳ ವಿರುದ್ಧ ಹುಟ್ಟಿಕೊಂಡ ಚಳವಳಿಗಳೆಲ್ಲ ಧ್ವನಿ ಕಳಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಇಂಥದ್ದೊಂದು ಅನುಮಾನ ಕಾಡುವುದರಲ್ಲಿ ಅಚ್ಚರಿಯೇನೂ ಇಲ್ಲ.

No comments:

Post a Comment