Tuesday, July 3, 2012

ಅಷ್ಟನ್ನೂ ಅವಳೊಬ್ಬಳೇ ಮಾಡುತ್ತಾಳಲ್ಲ ಎಂದು ನಾವೆಂದಾದರೂ ಆಲೋಚಿಸಿದ್ದೇವಾ?

     ಅವರಿಬ್ಬರು ಮದುವೆಯಾದರು..
ಮದುವೆಗೆ ಆಗಮಿಸಿದ ಎಲ್ಲರೂ ವಧೂ - ವರರನ್ನು ಹೊಗಳಿದ್ದೇ ಹೊಗಳಿದ್ದು. ಅಪರೂಪದ ಜೋಡಿ ಎಂದರು. made for  each other  ಅಂದರು. ಡಿಕ್ಷನರಿಯಲ್ಲಿ, ಪತ್ರಿಕೆ, ಕಾದಂಬರಿಗಳಲ್ಲಿ ಏನೆಲ್ಲ ಆಲಂಕಾರಿಕ ಪದ, ಉಕ್ತಿಗಳನ್ನು ಓದಿದ್ದಾರೋ ಅವೆಲ್ಲವನ್ನೂ ಅವರಿಬ್ಬರ ಮೇಲೆ ಸುರಿಸಿ ಉಬ್ಬಿಸಿದರು. ಜಗತ್ತು ಬಹಳ ಸುಂದರವಾಗಿ ಕಂಡಿತವರಿಗೆ. ತಾವಿಬ್ಬರೂ ಈ ಮೊದಲೇ ಮದುವೆ ಆಗಿದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಂಡರು..
       ಹೀಗೆ ಒಂದೆರಡು ತಿಂಗಳುಗಳು ಕಳೆದುವು.
ಒಂದು ದಿನ ಗಂಡನ ಬಳಿ ಬಂದು ಪತ್ನಿ ಹೇಳಿದಳು,
ದಾಂಪತ್ಯ ಸಂಬಂಧವನ್ನು ಗಟ್ಟಿಗೊಳಿಸುವುದು ಹೇಗೆ ಎಂಬ ಬಗ್ಗೆ ನಾನಿವತ್ತು ಒಂದು ಮ್ಯಾಗಸಿನ್ನಲ್ಲಿ ಓದಿದೆ. ತುಂಬಾ ಹಿಡಿಸಿತು. ನಾವೇಕೆ ಅದನ್ನು ಪ್ರಯೋಗಿಸಿ ನೋಡಬಾರದು?
       ಆತನಿಗೂ ಕುತೂಹಲವಾಯಿತು. 
   ಆಕೆ ಹೇಳಿದಳು,
ನನ್ನಲ್ಲಿ ಇರುವ, ಆದರೆ ನಿಮಗೆ ಇಷ್ಟವಾಗದ ಸ್ವಭಾವಗಳನ್ನು ನೀವು ಒಂದು ಕಾಗದದಲ್ಲಿ ಪಟ್ಟಿ ಮಾಡಬೇಕು. ಹಾಗೆಯೇ ನನಗಿಷ್ಟವಾಗದ ನಿಮ್ಮ ಸ್ವಭಾವಗಳನ್ನು ನಾನೂ ಪಟ್ಟಿ ಮಾಡುವೆ. ಆ ಬಳಿಕ ನಾವಿಬ್ಬರೂ ಒಂದೇ ಟೇಬಲ್ ಮುಂದೆ ಕೂತು ಅದನ್ನು ಓದುವ. ನಮ್ಮನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳುವುದಕ್ಕೆ ಇದು ನೆರವಾಗಬಹುದು ಅಂತ ನನ್ನ ಭಾವನೆ.
   ಆತ ಒಪ್ಪಿದ
ಒಂದು ಬಗೆಯ ಕುತೂಹಲದಿಂದ ಅವರಿಬ್ಬರೂ ಬೇರೆ ಬೇರೆ ಕೋಣೆ ಸೇರಿಕೊಂಡರು. ಬಾಗಿಲು ಮುಚ್ಚಿದರು. ಮದುವೆಯಾದ ದಿನದಿಂದ ಆವರೆಗಿನ ಗಂಡನ ಪ್ರತಿ ವರ್ತನೆಯನ್ನೂ ಆಕೆ ಮರು ಸೃಷ್ಟಿಸಿಕೊಂಡಳು. ಕೆಲವೊಮ್ಮೆ ಆಕೆಗೆ ಸಿಟ್ಟು ಬರುತ್ತಿತ್ತು. ತನ್ನ ಕಲ್ಪನೆಯ ಪತಿ ಮತ್ತು ಈ ನಿಜವಾದ ಪತಿಯ ನಡುವೆ ಇರುವ ಅಂತರವನ್ನು ಬರೆಯುವಾಗ ಭಾವುಕಳಾಗುತ್ತಿದ್ದಳು. ನೀವು ನನ್ನನ್ನು ಅರ್ಥವೇ ಮಾಡುತ್ತಿಲ್ಲ ಅಂತ ಬರೆದಳು. ನೀವು ಅದನ್ನು ಬಿಡಬೇಕು, ಇದನ್ನು ಬಿಡಬೇಕು. ಹಾಗೆ ಮಾತಾಡಬಾರದು, ಹೀಗೆ ಡ್ರೆಸ್ ಮಾಡ ಬಾರದು, ಇಷ್ಟು ಗಂಟೆಗೇ ಬರಬೇಕು.. ಎಂದೆಲ್ಲಾ ಬರೆದಳು. ನನ್ನನ್ನು ಮಾರುಕಟ್ಟೆಗೆ, ಮದುವೆಗೆ, ಔತಣಕ್ಕೆ.. ಕರಕೊಂಡು ಹೋಗುವಾಗ ಹೊಸ ಉಡುಪು ಕೊಡುವ ಬಗ್ಗೆ ನಿಮಗೆ ಗೊಡವೆಯೇ ಇಲ್ಲ ಅಂದಳು. ಆಚೆ ಮನೆಯಲ್ಲಿರುವ ಸೌಲಭ್ಯಗಳ ಬಗ್ಗೆ ಬರೆದು, ನಿಮಗಂತೂ ಆ ಕುರಿತು ಕಾಳಜಿಯೇ ಇಲ್ಲ ಅಂದಳು. ವಾಷಿಂಗ್ ಮೆಶೀನು, ಫ್ರಿಡ್ಜು, ಟಿ.ವಿ., ಕಂಪ್ಯೂಟರು, ಸೋಫಾ.. ಮ್ ಮ್ .. ಎಲ್ಲವುಗಳನ್ನು ಪಡಕೊಳ್ಳಲು ನಿಮ್ಮೊಂದಿಗೆ ಎಷ್ಟು ಹೋರಾಡಿದೆ ಅಂದಳು. ನಾನು ಹೇಳದಿದ್ದರೆ ನೀವು ಏನನ್ನೂ ಮಾಡುವುದಿಲ್ಲ ಎಂದು ಸಿಟ್ಟಾದಳು. ನೀವು ಸಂಜೆ ಮನೆಗೆ ಬಂದು ನೀರು ತಾ ಅನ್ನುತ್ತೀರಿ, ಬಿಸಿ ನೀರು ಕೇಳುತ್ತೀರಿ, ಅದೂ-ಇದೂಗಳ ಬಗ್ಗೆ ಪ್ರಶ್ನಿಸುತ್ತೀರಿ.. ನಾನೇನು ಕೆಲಸದವಳಾ.. ಎಂದು ಕಟುವಾಗಿಯೇ ಬರೆದಳು.. ಪುಟಗಳು ತುಂಬುತ್ತಿದ್ದುವು. ನೀವು ಬದಲಾಗಿ, ನಿಮ್ಮ ಇಷ್ಟು ಸ್ವಭಾವಗಳನ್ನು ತಿದ್ದಿಕೊಳ್ಳಿ.. ಅಷ್ಟನ್ನು ಬಿಟ್ಟು ಬಿಡಿ.. ಹೀಗೆ ಸಾಗಿತ್ತು ಆರೋಪ ಪಟ್ಟಿ..
ಮರುದಿನ ಬೆಳಗ್ಗೆ ಅವರಿಬ್ಬರೂ ಟೇಬಲ್ ಮುಂದೆ ಕುಳಿತು ಕೊಂಡರು.
ಇಬ್ಬರ ಕಣ್ಣುಗಳೂ ಸಂದಿಸಿದುವು. ಇಬ್ಬರಲ್ಲೂ ಒಂದು ರೀತಿಯ ದಿಗಿಲು; ಏನಾಗುತ್ತೋ, ಕಾಗದದಲ್ಲಿ ಏನೇನಿವೆಯೋ ಅನ್ನುವ ಕುತೂಹಲ. ಆತ ನಸುನಕ್ಕ. ಆಕೆಯ ಮುಖದಿಂದ  ಇನ್ನೂ ಸಿಟ್ಟಿನ ಕುರುಹು  ಮಾಸಿರಲಿಲ್ಲ.
ನಾನು ಆರಂಭಿಸಲಾ?
ಆಕೆ ಕೇಳಿದಳು. ಆತ ಹೂಂ ಅಂದ. ಆಕೆ 5 ಪುಟಗಳಷ್ಟಿದ್ದ ಪಟ್ಟಿಯನ್ನು ಓದತೊಡಗಿದಳು.
ಆದರೆ, ಓದಿ ಒಂದು ಪುಟವೂ ಆಗಿರಲಿಲ್ಲ. ಗಂಡನ ಕಣ್ಣಿನಿಂದ ನಿಧಾನವಾಗಿ ಕಣ್ಣೀರು ತೊಟ್ಟಿಕ್ಕುವುದನ್ನು ಆಕೆ ಕಂಡಳು. `ಏನಾದರೂ ತಪ್ಪಾಯಿತೆ..' ಓದುವುದನ್ನು ನಿಲ್ಲಿಸಿ ಪ್ರಶ್ನಿಸಿದಳು. ಆತ ತಲೆ ಅಲ್ಲಾಡಿಸಿದ. ಓದನ್ನು ಮುಂದುವರಿಸು ಅಂದ. ಆಕೆ ಮತ್ತೆ ಓದತೊಡಗಿದಳು. ಸಂಪೂರ್ಣ ಓದಿದ ಬಳಿಕ ಆ ಪಟ್ಟಿಯನ್ನು ಟೇಬಲ್ ಮೇಲೆ ಇಟ್ಟಳು. ಬರೆಯುವುದಕ್ಕೆ ಇನ್ನೂ ಇತ್ತು ಅಂದಳು. ಬಳಿಕ ಅದನ್ನು ಸುರುಳಿಯಾಗಿಸುತ್ತಾ, `ಇನ್ನು ನೀವು ಪ್ರಾರಂಭಿಸಿ, ಆ ನಂತರ ನಮ್ಮಿಬ್ಬರ ಪಟ್ಟಿಯ ಕುರಿತಂತೆ ಚರ್ಚಿಸುವ' ಅಂದಳು. ಆತ ಹೇಳಿದ,
ಓದುವುದಕ್ಕೆ ನನ್ನ ಪಟ್ಟಿಯಲ್ಲಿ ಏನೇನೂ ಇಲ್ಲ. ನನ್ನ ಮಟ್ಟಿಗೆ ನೀನು ಅತ್ಯುತ್ತಮ ಹೆಣ್ಣು. ನೀನು ಈಗ ಏನಾಗಿರುವೆಯೋ ಅದುವೇ ನಂಗಿಷ್ಟ. ನಿನ್ನನ್ನು ಬದಲಿಸುವ ಪ್ರಯತ್ನವನ್ನು ನಾನೆಂದೂ ಮಾಡಲಾರೆ. ನಿನ್ನಂಥ ಹೆಣ್ಣು ನನಗೆ ಸಿಕ್ಕಿರುವುದಕ್ಕಾಗಿ ನಾನು ಯಾವತ್ತೂ ಖುಷಿ ಪಡುತ್ತೇನೆ. ನಿನ್ನಲ್ಲಿ ನನಗಾವ ಕೊರತೆಗಳೂ ಕಾಣಿಸುತ್ತಿಲ್ಲ. ನೀನು ಹೀಗೆಯೇ ಇರು, ನಾನದನ್ನೇ ಇಷ್ಟಪಡುತ್ತೇನೆ.. ಯೂ ಆರ್ ಲವ್ಲೀ ಆಂಡ್ ವಂಡರ್ಫುಲ್..
ಆಕೆ ತಲೆ ಕೆಳಗಾಗಿಸುತ್ತಾಳೆ. ಕೆನ್ನೆ ಒದ್ದೆಯಾಗತೊಡಗುತ್ತದೆ.
ನಿಜವಾಗಿ ಈ ಕತೆಯನ್ನು ಇದೇ ರೂಪದಲ್ಲಿ ಓದಬೇಕೆಂದಿಲ್ಲ. ಪತಿಯ ಜಾಗದಲ್ಲಿ ಪತ್ನಿಯನ್ನೂ ಪತ್ನಿಯ ಜಾಗದಲ್ಲಿ ಪತಿಯನ್ನೂ ಕೂರಿಸಬಹುದು. ಮುಂಜಾನೆ ಎದ್ದು ಪತ್ನಿ ಅಡುಗೆ ಮನೆ ಸೇರುತ್ತಾಳೆ. ಪತಿಗೆ 9 ಗಂಟೆಗೆ ಕಚೇರಿಗೆ ತಲುಪಬೇಕು. ಮಗಳ ಶಾಲಾ ಬಸ್ಸು 8 ಗಂಟೆಗೆ ಬರುತ್ತದೆ. 8 ಗಂಟೆಯೊಳಗೆ ಕರೆಂಟು ಹೋಗುವುದರಿಂದ ಬೇಗ ಗ್ರೈಂಡ್ ಮಾಡಬೇಕು, ಇಸ್ತ್ರಿ ಹಾಕಬೇಕು, ನೀರು ತುಂಬಿಸಬೇಕು, ಅಡುಗೆ ಆಗಬೇಕು, ಮಗಳನ್ನು ಎಬ್ಬಿಸಬೇಕು, ಹಲ್ಲುಜ್ಜಬೇಕು, ಶೂ ಪಾಲಿಶು, ಬ್ಯಾಗು ರೆಡಿ ಮಾಡಬೇಕು. 10 ಗಂಟೆಯ ಸ್ನಾಕ್ಸು, 1 ಗಂಟೆಯ ಬ್ರೇಕ್  ಫಾಸ್ಟನ್ನು ಟಿಫಿನಿನಲ್ಲಿ ತುಂಬಿಸಬೇಕು.. ಇತ್ಯಾದಿ ಒತ್ತಡಗಳೊಂದಿಗೆ ಹೆಚ್ಚಿನ ಮಹಿಳೆಯರು ಅಡುಗೆ ಮನೆಯಲ್ಲಿ ಬ್ಯುಝಿ ಆಗಿರುವಾಗ ಅನೇಕ ಪುರುಷರು ಹಾಸಿಗೆಯಲ್ಲಿ ಆರಾಮ ನಿದ್ರೆಯಲ್ಲಿರುತ್ತಾರೆ. ಮನೆಗೆಲಸವನ್ನು `ಕೆಲಸ' ಎಂದು ಅವರು ಪರಿಗಣಿಸಿರುವುದೇ ಇಲ್ಲ. ಕಚೇರಿಯಲ್ಲಿ ಮಾಡುವುದು ಮಾತ್ರ ಕೆಲಸ ಅನ್ನುವ ನಿಲುವು ಅವರದು. ಆದ್ದರಿಂದಲೇ ಬೆಳಗ್ಗೆ ಎಚ್ಚರವಾಗುವಾಗ ತುಸು ಲೇಟಾದರೂ ಪತ್ನಿಯನ್ನು ತರಾಟೆಗೆ ತೆಗೆದುಕೊಳ್ಳುವವರಿದ್ದಾರೆ. ನನ್ನನ್ನೇಕೆ ಬೇಗ ಎಬ್ಬಿಸಿಲ್ಲ, ಕಚೇರಿಗೆ ಲೇಟಾಯ್ತು ಎಂದು ಪತ್ನಿಯ ಮೇಲೆ ಸಿಟ್ಟಾಗುವವರಿದ್ದಾರೆ. ಅದೇ ವೇಳೆ ತಾನು ಲೇಟಾಗಿ ಎದ್ದರೆ ಪತಿಯನ್ನು ಪತ್ನಿ ಟೀಕಿಸುವುದೇ ಇಲ್ಲ. ತನ್ನ ನಿದ್ದೆಯನ್ನೇ ದೂರುತ್ತಾ, ಅಡುಗೆ ಕೆಲಸ ಸಮಯಕ್ಕೆ ಸರಿಯಾಗಿ ಆಗುತ್ತೋ ಇಲ್ಲವೋ ಅನ್ನುವ ಬಗ್ಗೆ ಭಯ ಪಡುತ್ತಾ ನೂರು ಡಿಗ್ರಿಯಲ್ಲಿ ಕೆಲಸಕ್ಕೆ ತೊಡಗುತ್ತಾರೆ. ಇಷ್ಟಕ್ಕೂ ತಲೆ ನೋವು, ಹೊಟ್ಟೆ ನೋವು ಇದ್ದರೂ ಅದನ್ನು ಒಳಗೊಳಗೇ ನುಂಗಿಕೊಂಡು ಅಡುಗೆ ತಯಾರಿಸಿ ಪತಿ, ಮಕ್ಕಳನ್ನು ಮುಗುಳುನಗೆಯೊಂದಿಗೆ ಕಳುಹಿಸಿಕೊಡುವ ಎಷ್ಟು ಮಹಿಳೆಯರು ನಮ್ಮ ನಡುವೆಯಿಲ್ಲ? ಜ್ವರ ಬಂದರೆ ಪುರುಷರು ಕಚೇರಿಗೆ ರಜೆ ಹಾಕುವಂತೆ ಮಹಿಳೆ ಮನೆಗೆಲಸಕ್ಕೆ ರಜೆ ಹಾಕುವುದಿದೆಯಾ? ಕಷ್ಟನೋ ಇಷ್ಟನೋ ಸಹಿಸಿಕೊಂಡು ಮಾಡಿದ ಅಡುಗೆಯಲ್ಲೂ ಉಪ್ಪು - ಖಾರದ ಕೊರತೆಯನ್ನು ಹುಡುಕುವವರು ನಮ್ಮಲ್ಲಿಲ್ಲವೇ? `ಇವತ್ತು ನೀನು ಆರಾಮ ಮಾಡು, ನಾನು ಅಡುಗೆ ಮಾಡುತ್ತೇನೆ' ಎಂದು ಹೇಳುವುದಕ್ಕೆ ನಮ್ಮಲ್ಲಿ ಎಷ್ಟು ಮಂದಿಗೆ ಸಾಧ್ಯವಾಗುತ್ತದೆ? ದಿನಾ ಚಾನೋ ಕಾಫಿಯೋ ಕೊಡುವ ಪತ್ನಿಯ ಕೈ ಹಿಡಿದು ಕೂರಿಸಿ, `ಇವತ್ತು ನಾನು ಕಾಪಿ ಮಾಡುವೆ' ಎಂದು ಆಕೆಯನ್ನು ರಮಿಸಲು ನಾವು ಮುಂದಾದದ್ದಿದೆಯೇ? ಅಡುಗೆಯಲ್ಲಿ ಸಹಕರಿಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಶೌಚಾಲಯ ಶುಚಿಗೊಳಿಸುವುದು.. ಇಂಥದ್ದನ್ನೆಲ್ಲಾ ಪುರುಷ ಮಾಡಿದರೆ ಅದು ಆತನ ವ್ಯಕ್ತಿತ್ವಕ್ಕೆ ಕಳಂಕ ಎಂದು ಅಂದುಕೊಂಡವರಿಲ್ಲವೇ?
ದ್ವಿತೀಯ ಖಲೀಫ ಉಮರ್ ರ (ರ) ಕಾಲದಲ್ಲಿ ಒಂದು ಘಟನೆ ನಡೆಯುತ್ತದೆ..
ಪತ್ನಿಯ ಕುರಿತು ದೂರು ನೀಡಲಿಕ್ಕಾಗಿ ಓರ್ವರು ಉಮರ್ ರ (ರ) ಮನೆಗೆ ಬರುತ್ತಾರೆ. ಆಗ ಖಲೀಫರ ಜೊತೆ ಅವರ ಪತ್ನಿಯು ಏರಿದ ಧ್ವನಿಯಲ್ಲಿ ಮಾತಾಡುವುದು, ರೇಗಾಡುವುದು ಕೇಳಿಸುತ್ತದೆ. ಖಲೀಫರು ಏನೊಂದೂ ಮಾತಾಡುತ್ತಿರಲಿಲ್ಲ. ಹೊರಗೆ ನಿಂತ ವ್ಯಕ್ತಿಗೆ ಕಸಿವಿಸಿಯಾಗ ತೊಡಗುತ್ತದೆ. ನಿಷ್ಠುರ ವ್ಯಕ್ತಿಯಾಗಿರುವ ಉಮರ್ ರೇ  ಹೀಗಾದರೆ ಮತ್ತೆ ನಾನೇನೂಂತ ಹೇಳುವುದು ಅಂದುಕೊಂಡು ಹೊರಡುವ ಬಗ್ಗೆ ತೀರ್ಮಾನಿಸುತ್ತಾರೆ. ಆಗ ಉಮರ್(ರ) ಹೊರಬರುತ್ತಾರೆ.ಏನೆಂದು  ಪ್ರಶ್ನಿಸುತ್ತಾರೆ. `ನನ್ನ ಪತ್ನಿಯ ಒರಟು ಸ್ವಭಾವ ಹಾಗೂ ರೇಗಾಟದ ಬಗ್ಗೆ ದೂರು ನೀಡಲಿಕ್ಕಾಗಿ ಇಲ್ಲಿಗೆ ಬಂದಿರುವೆ. ಆದರೆ ನಿಮ್ಮ ಪತ್ನಿಯ ವರ್ತನೆ ನನ್ನ ಪತ್ನಿಯ ಹಾಗೆಯೇ ಇದೆ. ಆದ್ದರಿಂದ ನಾನು ಮರಳಿ ಹೋಗುವುದಕ್ಕೆ ತೀರ್ಮಾನಿಸಿದ್ದು' ಅನ್ನುತ್ತಾರೆ. ಆಗ ಉಮರ್ ಹೇಳುತ್ತಾರೆ,
ನನ್ನ ಪತ್ನಿ ನನಗಾಗಿ ಅಡುಗೆ ಮಾಡುತ್ತಾಳೆ, ರೊಟ್ಟಿ ತಯಾರಿಸುತ್ತಾಳೆ, ಬಟ್ಟೆ ಒಗೆಯುತ್ತಾಳೆ. ನನ್ನ ಮಕ್ಕಳಿಗೆ ಎದೆ ಹಾಲು ಕೊಡುತ್ತಾಳೆ.. ನಿಜವಾಗಿ ಇವ್ಯಾವುವೂ ಆಕೆಯ ಕರ್ತವ್ಯಗಳಲ್ಲಿ ಸೇರಿಲ್ಲ. ಆದರೆ ಅವೆಲ್ಲವನ್ನೂ ಮಾಡುವ ಆಕೆಗೆ ರೇಗಾಡುವುದಕ್ಕೆ ಹಕ್ಕಿದೆ..'
ಪತಿ-ಪತ್ನಿ ಎಂದರೆ ಯಜಮಾನ ಮತ್ತು ಕೆಲಸದಾಳು ಖಂಡಿತ ಅಲ್ಲ. ಅವರಿಬ್ಬರೂ ಜೋಡಿಗಳು. ಬದುಕನ್ನು ಸಂತಸ ಅಥವಾ ದುಃಖಮಯಗೊಳಿಸುವ ಎರಡೂ ಆಯ್ಕೆಗಳೂ ಅವರಲ್ಲೇ ಇರುತ್ತವೆ . ಯಾವುದೇ ಒಂದು ತೀರ್ಮಾನ ತೆಗೆದುಕೊಳ್ಳುವುದಕ್ಕಿಂತ ಮೊದಲು ಗೆಳೆಯರಲ್ಲಿ, ಅನುಭವಿಗಳಲ್ಲಿ ಸಮಾಲೋಚನೆ ನಡೆಸುವ ಎಷ್ಟೋ ಪುರುಷರು ತಮ್ಮ ಪತ್ನಿಯಲ್ಲಿ ಆ ಬಗ್ಗೆ ಮಾತನ್ನೇ ಆಡುವುದಿಲ್ಲ. ಅಭಿಪ್ರಾಯ ಕೇಳುವುದಿಲ್ಲ. ಆಕೆಗೇನು ಗೊತ್ತು ಅನ್ನುವ ತಾತ್ಸಾರ ಅನೇಕರಲ್ಲಿದೆ. ಒಂದು ವೇಳೆ ತನಗಿಂತ ಉತ್ತಮವಾದ ಅಭಿಪ್ರಾಯವನ್ನು ಆಕೆ ವ್ಯಕ್ತಪಡಿಸಿದರೂ ಅದನ್ನು ಸ್ವೀಕರಿಸುವುದಕ್ಕೆ ಅನೇಕರಲ್ಲಿ ಮುಜುಗರ ಇರುತ್ತದೆ. ಪತ್ನಿ ಹೇಳಿದಂತೆ ಕೇಳುವವನೆಂಬ ಪಟ್ಟ ಎಲ್ಲಿ ಸಿಗುತ್ತದೋ ಅನ್ನುವ ಭೀತಿಯೂ ಇರುತ್ತದೆ. ನಿಜವಾಗಿ ಒಂದು ಮನೆಯಲ್ಲಿ ಪತಿಯನ್ನು ಅತ್ಯಂತ ಹೆಚ್ಚು ಪ್ರೀತಿಸುವ, ಕಾಳಜಿ ವಹಿಸುವ ಇನ್ನೊಂದು ಜೀವ ಇದ್ದರೆ ಅದು ಪತ್ನಿ ಮಾತ್ರ. ಆತನ ನೋವನ್ನು ಆಕೆ ತನ್ನ ನೋವೆಂದೇ ಪರಿಗಣಿಸುತ್ತಾಳೆ. ಆತನ ಅನಾರೋಗ್ಯ, ಆರ್ಥಿಕ ಮುಗ್ಗಟ್ಟು, ಸಾಲ ಎಲ್ಲವುಗಳ ಬಗ್ಗೆ ಇತರೆಲ್ಲರಿಗಿಂತ ಹೆಚ್ಚು ಚಿಂತಿತಳಾಗುವುದೂ ಆಕೆಯೇ. ಹೀಗಿರುವಾಗ ಆಕೆಯ ಅಭಿಪ್ರಾಯವನ್ನು ಪರಿಗಣಿಸುವುದಕ್ಕೆ ಅಥವಾ ಸಮಾಲೋಚಿಸುವುದಕ್ಕೆ ಅಳುಕಾದರೂ ಯಾಕಿರಬೇಕು? ನಿಜವಾಗಿ ಪತಿ ಮತ್ತು ಪತ್ನಿಯ ನಡುವಿನ ಸಂಬಂಧವನ್ನು ಹೆಚ್ಚು ಬಲಿಷ್ಠಗೊಳಿಸುವುದೇ ಸಮಾಲೋಚನೆಗಳು, ಪರಸ್ಪರ ಹಂಚಿಕೊಳ್ಳುವಿಕೆಗಳು. ತಮಾಷೆ, ಹಾಡು, ಕುಟುಕುವ ಮಾತು, ಮೆಚ್ಚುಗೆಯ ನೋಟ.. ಇಂತಹ ಸಣ್ಣ ಪುಟ್ಟ ಅಂಶಗಳೇ ಬದುಕನ್ನು ಉಲ್ಲಸಿತವಾಗಿಡುವುದು. ಹೊರಗೆಲ್ಲೋ ಕೇಳಿದ, ಓದಿದ ಜೋಕ್ ಅನ್ನು ಮನೆಗೆ ಬಂದು ಪತ್ನಿಯೊಂದಿಗೆ ಹಂಚಿಕೊಳ್ಳುವುದರಿಂದ ಆಕೆಯೂ ಖುಷಿಯಾಗುತ್ತಾಳೆ. ಮರುದಿನ ಆಕೆಯೂ ಪ್ರಯತ್ನಿಸಬಹುದು. ಕಚೇರಿಯಲ್ಲಿ ನಮ್ಮ ಕೆಲಸದ ಸ್ವರೂಪ, ಇರುವ ಒತ್ತಡಗಳ ಕುರಿತಂತೆ ಆಕೆಯೊಂದಿಗೆ ಹೇಳಿಕೊಳ್ಳುವುದು ಆಕೆಯನ್ನು ಹೆಚ್ಚು ಹತ್ತಿರಗೊಳಿಸುತ್ತದೆ. ನಮ್ಮನ್ನು  ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.ಒಂದು ರೀತಿಯಲ್ಲಿ ನಾವು ಪಟ್ಟಿ ಮಾಡಬೇಕಾದದ್ದು ನೆಗೆಟಿವ್ ಗಳನ್ನಲ್ಲ, ಪಾಸಿಟಿವ್ ಗಳನ್ನು. ಹಾಗೇನಾದರೂ ಮಾಡಲು ಪ್ರಯತ್ನಿಸಿದರೆ ಇತರರು ಅಸೂಯೆ ಪಡುವಷ್ಟು ನಮ್ಮ ಬದುಕನ್ನು ಸುಂದರಗೊಳಿಸಬಹುದು. ಇಷ್ಟಕ್ಕೂ ಪ್ರವಾದಿ ಮುಹಮ್ಮದ್ ರು (ಸ ) ಪತ್ನಿ ಆಯಿಷಾರೊಂದಿಗೆ ಓಟದ ಸ್ಪರ್ಧೆ ನಡೆಸುತ್ತಿದ್ದರು. ಆರಂಭದಲ್ಲಿ ಗೆಲ್ಲುತ್ತಿದ್ದ ಆಯಿಷಾ, ಕೊನೆ ಕೊನೆಗೆ ದೇಹ ದಪ್ಪಗಾದ ಕಾರಣ ಸೋಲುತ್ತಿದ್ದರು ಎಂಬುದೆಲ್ಲಾ ನಮಗೆ ಗೊತ್ತು. ಅದನ್ನು ಓದಿಗಷ್ಟೇ ನಾವೇಕೆ ಸೀಮಿತಗೊಳಿಸಬೇಕು? ಪತ್ನಿಯೊಂದಿಗೆ ಶಟ್ಲ್, ಲಗೋರಿ, ಗೋಲಿ, ಕೇರಮ್ ಗಳಂಥ ಆಟವನ್ನು ಆಡಲು ನಮಗೇಕೆ ಸಾಧ್ಯವಾಗುತ್ತಿಲ್ಲ? ನಿಜವಾಗಿ ಆಟದ ಸಂದರ್ಭದಲ್ಲಿ ಬರೇ ಆಟವಷ್ಟೇ ನಡೆಯುವುದಲ್ಲ, ತಮಾಷೆ, ಮೋಸ, ಮಾತುಗಳ ವಿನಿಮಯ, ಸಿಟ್ಟು, ಲಜ್ಜೆ.. ಎಲ್ಲವೂ ಇರುತ್ತದೆ. ಬದುಕನ್ನು ಸುಂದರವಾಗಿಡುವುದೂ ಇವುಗಳೇ..
ಕಳೆದ ಒಂದು ವಾರದಲ್ಲಿ, `ಪತಿಯಿಂದ ಪತ್ನಿಯ ಕೊಲೆ' ಎಂಬ ಶೀರ್ಷಿಕೆಯ ಸುಮಾರು ಹತ್ತರಷ್ಟು ಸುದ್ದಿಗಳನ್ನು ಓದಿದಾಗ ಇವೆಲ್ಲ ನೆನಪಾಯಿತು..

3 comments:

  1. masha allah!!!!!!!!!!!!! realy true story.....

    ReplyDelete
  2. Masha Allah thanx dear bro AK... keep writing such true stories from wich we can learn something.. Insha Allah

    ReplyDelete
  3. Masah Allah very Heart TouchIng LoVe StOrY..................!

    ReplyDelete