Tuesday, July 10, 2012

ಹಾಶಿಮ್ ಆಮ್ಲನನ್ನು ಶೇರ್ ಮಾಡುವುದರಲ್ಲೇ ತೃಪ್ತಿ ಹೊಂದಬೇಕೆ?

ಮೈಕೆಲ್ ಜಾನ್ಸನ್
ಕಾರ್ಲ್ ಲೂಯಿಸ್
ಮೈಕೆಲ್ ಫೆಲ್ಪ್ಸ್
ಜೇವಿಯರ್ ಸೊಟೊಮೆಯರ್
ಮೈಕೆಲ್ ಜೋರ್ಡಾನ್
ಉಸೇನ್ ಬೋಲ್ಟ್
ಉಸೇನ್ ಬೋಲ್ಟ್
   ..ಒಲಿಂಪಿಕ್ಸ್ ನ  ಕುರಿತಂತೆ ಚರ್ಚೆ ಆರಂಭವಾದಾಗಲೆಲ್ಲಾ ಮೇಲಿನ ಹೆಸರುಗಳು ಯಾವತ್ತೂ ಉಲ್ಲೇಖಕ್ಕೆ ಒಳಗಾಗುತ್ತವೆ. ಫೆಲ್ಪ್ಸ್ ಇಲ್ಲದ ಈಜು ಕೊಳವನ್ನು ಹೇಗೆ ವೀಕ್ಷಿಸುವುದು ಎಂದು ಅಸಂಖ್ಯ ಮಂದಿ ಟ್ವೀಟ್ ಮಾಡುತ್ತಾರೆ. 100 ಮತ್ತು 200 ಮೀಟರ್ ಓಟದಲ್ಲಿ ಭಾಗವಹಿಸಿ ಬಳಿಕ ಅದೇ ಉತ್ಸಾಹದಲ್ಲಿ ಉದ್ದ ಜಿಗಿತಕ್ಕೆ (ಲಾಂಗ್ ಜಂಪ್) ಸಿದ್ಧವಾಗುವ ಕಾರ್ಲ್ ಲೂಯಿಸ್ ನನ್ನು  ಮಾಧ್ಯಮಗಳು ಮತ್ತೆ ಮತ್ತೆ ಸ್ಮರಿಸುತ್ತವೆ. ಬೆನ್ ಜಾನ್ಸನ್ ಅನ್ನುವ ಕಪ್ಪು ಓಟಗಾರ, 100 ಮೀಟರ್ ಓಟವನ್ನು ವಿಶ್ವದಾಖಲೆಯೊಂದಿಗೆ ಮುಗಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟದ್ದನ್ನೂ ಬಳಿಕ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದು ಪದಕ ಮರಳಿಸಿದ್ದನ್ನೂ ಜಗತ್ತು ಸಂಕಟದಿಂದ ನೋಡುತ್ತದೆ. 1993ರಲ್ಲಿ ಕ್ಯೂಬಾದ ಜೇವಿಯರ್ ಸೊಟೋಮೆಯರ್ ನು  2.45 ಮೀಟರ್ ಎತ್ತರಕ್ಕೆ ಜಿಗಿದು (ಹೈಜಂಪ್) ವಿಶ್ವವನ್ನೇ ದಂಗುಬಡಿಸಿದ್ದನ್ನು ಈಗಲೂ ನೆನಪಿಸಿಕೊಳ್ಳುವವರಿದ್ದಾರೆ. 100 ಮತ್ತು 200 ಮೀಟರ್ ಓಟದಲ್ಲಿ ಎರಡೆರಡು ಬಾರಿ ವಿಶ್ವದಾಖಲೆ ಬರೆದು ಇದೀಗ ಮತ್ತೆ ಓಟಕ್ಕೆ ಸಜ್ಜಾಗಿರುವ ಜಮೈಕಾದ ಉಸೇನ್ ಬೋಲ್ಟ್ ನ  ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರತಿದಿನ ಪ್ರಕಟವಾಗುತ್ತಲೇ ಇವೆ. ಆತ ನಡೆಸುತ್ತಿರುವ ತಯಾರಿಯ ಬಗ್ಗೆ ಪೋಟೋಗಳು ಪ್ರಕಟವಾಗುತ್ತಿವೆ. ಇದೇ ಜುಲೈ 27ರಂದು ಲಂಡನ್ನಿನಲ್ಲಿ ಆರಂಭವಾಗಲಿರುವ ಒಲಿಂಪಿಕ್ಸ್ ಕ್ರೀಡೆಯಲ್ಲಿ 100 ಮೀಟರ್ ಓಟವನ್ನು ಈತ 9.40 ಸೆಕೆಂಡ್ ಗಳೊಳಗೆ ದಾಟಿ ಮತ್ತೆ ಹೊಸ ವಿಶ್ವದಾಖಲೆ ಬರೆಯುತ್ತಾನೆ ಎಂದು ಮೈಕೆಲ್ ಜಾನ್ಸನ್ ಈಗಾಗಲೇ ಹೇಳಿಕೆಯನ್ನೂ ನೀಡಿದ್ದಾರೆ. ಒಂದು ರೀತಿಯಲ್ಲಿ ಇವತ್ತು ಪತ್ರಿಕೆ, ಟಿ.ವಿ., ಫೇಸ್ ಬುಕ್, ಟ್ವೀಟರ್, ಆರ್ಕುಟ್.. ಎಲ್ಲವೂ ಒಲಿಂಪಿಕ್ಸ್ ನ  ಬಗ್ಗೆಯೇ ಮಾತಾಡತೊಡಗಿವೆ. ನಿಜವಾಗಿ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಅತ್ಯಧಿಕ ಚಿನ್ನ ದೋಚಿದ ಚೀನಾ ಮತ್ತು ಅಮೇರಿಕದ ಮಧ್ಯೆ ಈ ಬಾರಿ ತೀವ್ರ ಪೈಪೋಟಿಯಿದೆ. ಬ್ರಿಟನ್, ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ರಶ್ಯಾ.. ಎಲ್ಲವೂ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಗುರಿಯಿಟ್ಟು ಕ್ರೀಡಾಳುಗಳನ್ನು ಸಜ್ಜುಗೊಳಿಸುತ್ತಿವೆ. ಆದರೆ ಇಲ್ಲೆಲ್ಲೂ ಯಾವ ಚರ್ಚೆಯಲ್ಲೂ ಮುಸ್ಲಿಮ್ ರಾಷ್ಟ್ರಗಳ, ಮುಸ್ಲಿಮ್ ಕ್ರೀಡಾಳುಗಳ ಹೆಸರು ಕಾಣಿಸಿಕೊಳ್ಳುತ್ತಲೇ ಇಲ್ಲ, ಯಾಕೆ?
             1896ರಲ್ಲಿ ಅಥೆನ್ಸ್ ನಲ್ಲಿ ನಡೆದ ಮೊದಲ ಒಲಿಂಪಿಕ್ಸ್ ನಲ್ಲಿ ಕೇವಲ 14 ರಾಷ್ಟ್ರಗಳ 241 ಕ್ರೀಡಾಳುಗಳಷ್ಟೇ ಭಾಗವಹಿಸಿದ್ದರು. ಆದರೆ ಈ ಬಾರಿಯ ಲಂಡನ್ ಒಲಿಂಪಿಕ್ಸ್ ನಲ್ಲಿ 207 ರಾಷ್ಟ್ರಗಳು ಪಾಲುಗೊಳ್ಳುವ ಸಾಧ್ಯತೆ ಇದೆ. 13 ಸಾವಿರದಷ್ಟು ಕ್ರೀಡಾಳುಗಳು ಸ್ಪರ್ಧಿಸುತ್ತಿದ್ದಾರೆ. ಹಾಗಿದ್ದೂ ಎಷ್ಟು ಮುಸ್ಲಿಮ್ ರಾಷ್ಟ್ರಗಳು ಪದಕಗಳ ನಿರೀಕ್ಷೆಯಲ್ಲಿವೆ? ಇಟಲಿ, ನೆದರ್ ಲ್ಯಾಂಡ್, ಜಮೈಕಾ, ಕೆನ್ಯಾ, ಬೆಲಾರೂಸ್, ಕ್ಯೂಬಾದಂಥ ಸಣ್ಣ ಪುಟ್ಟ ರಾಷ್ಟ್ರಗಳೂ ಬಂಗಾರವನ್ನು ದೋಚುತ್ತಾ ಪದಕ ಪಟ್ಟಿಯಲ್ಲಿ ಪ್ರಬಲ ರಾಷ್ಟ್ರಗಳಿಗೆ ಸವಾಲೊಡ್ಡುತ್ತಿರುವಾಗ, ಶ್ರೀಮಂತ ಮುಸ್ಲಿಮ್ ರಾಷ್ಟ್ರಗಳ ಪಾಡಾದರೂ ಏನು? ಸೌದಿ ಅರೇಬಿಯಾ, ಈಜಿಪ್ಟ್, ಇರಾಕ್, ಲಿಬಿಯಾ, ಬಂಗ್ಲಾಗಳೆಲ್ಲಾ ಕನಿಷ್ಠ  ಕಂಚಿನ ಪದಕವನ್ನಾದರೂ ಪಡಕೊಳ್ಳುವುದಕ್ಕೆ ಅಸಮರ್ಥವಾಗುತ್ತಿರುವುದೇಕೆ?  2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಮುಸ್ಲಿಮ್ ರಾಷ್ಟ್ರಗಳ ಹೆಸರುಗಳನ್ನು ಓದಬೇಕಾದರೆ ಪಟ್ಟಿಯನ್ನು ತಲೆ ಕೆಳಗಾಗಿಸಿ ಓದಬೇಕು. ಅಲ್ಲೂ ಕಾಣಸಿಗುವುದು ಏಳೆಂಟು ಮುಸ್ಲಿಮ್ ರಾಷ್ಟ್ರಗಳ ಹೆಸರುಗಳು ಮಾತ್ರ. 55 ಮುಸ್ಲಿಮ್ ರಾಷ್ಟ್ರಗಳಲ್ಲಿ ಉಳಿದೆಲ್ಲವೂ ಎಲ್ಲಿಗೆ ಹೋದುವು? ಇಥಿಯೋಪಿಯಾದಂಥ ದಟ್ಟ ದರಿದ್ರ ರಾಷ್ಟ್ರವೇ ಬೀಜಿಂಗ್ ನಲ್ಲಿ 7 ಪದಕಗಳನ್ನು ಪಡೆದಿರುವಾಗ ಶ್ರೀಮಂತ ಮುಸ್ಲಿಮ್ ರಾಷ್ಟ್ರಗಳಿಗೇಕೆ ಅದು ಸಾಧ್ಯವಾಗುತ್ತಿಲ್ಲ? ಒಲಿಂಪಿಕ್ಸ್ ನ  112 ವರ್ಷಗಳ ಇತಿಹಾಸದಲ್ಲಿ ಈವರೆಗೆ 15,100 ಪದಕಗಳನ್ನು ಸ್ಪರ್ಧೆಗಿಡಲಾಗಿದೆ. ಅದರಲ್ಲಿ ಮುಸ್ಲಿಮ್ ರಾಷ್ಟ್ರಗಳು ಗೆದ್ದಿರುವುದು ಬರೇ 1.9%ರಷ್ಟು ಮಾತ್ರ. ಯಾಕಿವೆಲ್ಲ?
 ಇಸ್ಲಾಮೀ  ಇತಿಹಾಸದಲ್ಲಿ ಇಂಥದ್ದೊಂದು ಘಟನೆ ನಡೆಯುತ್ತದೆ..
         ಅಮ್ರ್ ಬಿನ್ ಆಸ್ ರು  ರಾಜ್ಯಪಾಲರಾಗಿದ್ದ ಸಿರಿಯದಲ್ಲಿ ಓಟದ ಸ್ಪರ್ಧೆಯೊಂದು ನಡೆಯುತ್ತದೆ. ಅದರಲ್ಲಿ ಅಬ್ದುಲ್ಲಾ ಅನ್ನುವ ಅವರ ಮಗನೂ ಭಾಗವಹಿಸುತ್ತಾನೆ. ಸ್ಪರ್ಧೆಯಲ್ಲಿ ಕ್ರೈಸ್ತ ಯುವಕ ಗೆಲ್ಲುತ್ತಾನೆ. ಅಬ್ದುಲ್ಲಾನಿಗೆ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಕ್ರೈಸ್ತ ಯುವಕನನ್ನು ಥಳಿಸುತ್ತಾನೆ. ಆತ ಖಲೀಫಾ (ಪ್ರಧಾನಮಂತ್ರಿ) ಉಮರ್ ರಿಗೆ(ರ) ದೂರು ಕೊಡುತ್ತಾನೆ. ವಿಚಾರಣೆ ನಡೆಸಿದ ಅವರು ಅಬ್ದುಲ್ಲಾನಿಗೆ ಮರಳಿ ಹೊಡೆಯುವಂತೆ ಕ್ರೈಸ್ತ ಯುವಕನಿಗೆ ಆಜ್ಞಾಪಿಸುತ್ತಾರಲ್ಲದೆ, ಪ್ರಜೆಗಳು ಆಡಳಿತಗಾರರ ಗುಲಾಮರಲ್ಲ ಎಂದು ಸಾರುತ್ತಾರೆ.. ಇದೊಂದೇ ಅಲ್ಲ,
        ಪ್ರವಾದಿ ಮುಹಮ್ಮದ್ ರು (ಸ) ಕುದುರೆಗಳ ಓಟದ ಸ್ಪರ್ಧೆ, ಈಜು ಸ್ಪರ್ಧೆಗಳನ್ನು ನಡೆಸುತ್ತಿದ್ದರು, ಸೇನೆಗೆ ಯುವಕರನ್ನು ಭರ್ತಿಗೊಳಿಸುವುದಕ್ಕಿಂತ ಮೊದಲು ಕುಸ್ತಿ ಪಂದ್ಯಾಟವನ್ನು ಏರ್ಪಡಿಸುತ್ತಿದ್ದರು, ಹಸ್ಸಾನ್ ಬಿನ್ ಸಾಬಿತ್ ಎಂಬ ಕವಿಯಲ್ಲಿ (ಶಾಇರುರಸೂಲ್) ಸ್ಪರ್ಧಾಮನೋಭಾವವನ್ನು ಹುಟ್ಟುಹಾಕಿದ್ದರು, ಬಿಲ್ವಿದ್ಯೆ ಕಲಿಯುವಂತೆ ಪ್ರೇರೇಪಿಸಿದ್ದರು.. ಎನ್ನುವುದೆಲ್ಲಾ ಐತಿಹಾಸಿಕ ಸತ್ಯ. ಪವಿತ್ರ ಕುರ್ಆನಿನ 6ನೇ ಅಧ್ಯಾಯ ಅಲ್ ಅನ್ಫಾಲ್ ನ 60ನೇ ವಚನವನ್ನು ವ್ಯಾಖ್ಯಾನಿಸುತ್ತಾ, `ಮುಸ್ಲಿಮರು ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಈ ವಚನ ಪುರಾವೆ..' ಎಂದು ವಿಶ್ವವಿಖ್ಯಾತ ವಿದ್ವಾಂಸ ಯೂಸುಫುಲ್ ಕರ್ಝಾವಿಯವರೇ ಹೇಳಿದ್ದಾರೆ. ಇವೆಲ್ಲ ಏನು, ಸ್ಪರ್ಧೆ ಅಸ್ಪøಶ್ಯವಲ್ಲ ಎಂದಲ್ಲವೇ ಇದರರ್ಥ? ಇಷ್ಟಿದ್ದೂ ಮುಸ್ಲಿಮ್ ಜಗತ್ತೇಕೆ ಕ್ರೀಡಾಕೂಟಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ?
       1936ರಲ್ಲಿ ಜರ್ಮನಿಯಲ್ಲಿ ನಡೆದ 11ನೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಹಿಟ್ಲರ್ ಕರಿಯರಿಗೆ ಅವಕಾಶ ಕೊಡಲಿಲ್ಲ. ಜಗತ್ತು ಪ್ರತಿಭಟಿಸಿತು. ಇವತ್ತು ಅದೇ ಕಪ್ಪು ಬಣ್ಣಕ್ಕೆ ಜಾಗತಿಕ ಮನ್ನಣೆ ಸಿಗುತ್ತಿದ್ದರೆ, ಅದಕ್ಕೆ ಈ ಕರಿಯರು ಕ್ರೀಡೆಗಳಲ್ಲಿ ಪ್ರದರ್ಶಿಸುತ್ತಿರುವ ಅಪೂರ್ವ ಪ್ರತಿಭೆಯೇ ಕಾರಣವಲ್ಲವೇ? ಅಷ್ಟಕ್ಕೂ ಅಸಂಖ್ಯ ಬಿಳಿ ಓಟಗಾರರ ಎದುರು ಉಸೇನ್ ಬೋಲ್ಟ್ ಅನ್ನುವ ಕಪ್ಪು ಮನುಷ್ಯ ಸಂಭ್ರಮಿಸುವುದು, ತನ್ನೆರಡೂ ಕೈಗಳನ್ನು ಗಾಳಿಯಲ್ಲಿ ಹಾರಿಸಿ ಖುಷಿ ಪಡುವುದನ್ನು ಒಮ್ಮೆ ಊಹಿಸಿ. ಎಡ-ಬಲಗಳಲ್ಲಿರುವ ಬಿಳಿ ಓಟಗಾರರ ನಡುವೆ ಎತ್ತರದ ಸ್ಥಾನದಲ್ಲಿ ನಿಂತು ಬಂಗಾರದ ಪದಕವನ್ನು ಕೊರಳಲ್ಲಿ ನೇತಾಡಿಸುವುದನ್ನು ನಿಲುಕಿಸಿ. ಅದು ಬಿಳಿ ಜಗತ್ತಿಗೆ ಕೊಡುವ ಮಾರಕ ಏಟೇ ಅಲ್ಲವೇ? ಜಮೈಕಾದಲ್ಲಿ, ಇಥಿಯೋಪಿಯಾ, ಗ್ರೆನೆಡಾ ಮತ್ತು ಇನ್ನಿತರ ಕಪ್ಪು ಮನುಷ್ಯರೇ ಇರುವ ಆಫ್ರಿಕನ್ ರಾಷ್ಟ್ರಗಳಲ್ಲಿ ಅಣುಬಾಂಬು ಇಲ್ಲದೇ ಇರಬಹುದು. ಡ್ರೋನ್ ಕ್ಷಿಪಣಿಗಳನ್ನು ತಯಾರಿಸುವುದು ಅವಕ್ಕೆ ಗೊತ್ತಿಲ್ಲದೇ ಇರಬಹುದು. ಆದರೆ ಅಮೇರಿಕ, ಜರ್ಮನಿ, ಬ್ರಿಟನ್ ನಂಥ ಬಿಳಿ ಮಾನಸಿಕತೆಯ ಜಗತ್ತಿಗೆ ಅಲ್ಲಿನ ಕಪ್ಪು ಮನುಷ್ಯರು ಕ್ರೀಡಾ ಜಗತ್ತಿನಲ್ಲಿ ಒಡ್ಡುತ್ತಿರುವ ಸವಾಲೇನು ಸಣ್ಣದೇ? ಅಂದಹಾಗೆ ಕಪ್ಪು ಮನುಷ್ಯರನ್ನು ಈಗಲೂ ಅತ್ಯಂತ ಅಸಡ್ಡೆಯಿಂದ ನೋಡುತ್ತಿರುವ ಅಮೇರಿಕಕ್ಕೆ ಕ್ರೀಡಾ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಹೆಸರನ್ನು ತಂದುಕೊಟ್ಟಿರುವುದು ಆ ದೇಶದವರೇ ಆದ ಕಾರ್ಲ್ ಲೂಯಿಸ್, ಮುಹಮ್ಮದ್ ಅಲಿ ಕ್ಲೇ, ಮೈಕೆಲ್ ಜಾನ್ಸನ್.. ಮುಂತಾದ ಕಪ್ಪು  ಮನುಷ್ಯರೇ. ಇವರನ್ನು ಹೊರಗಿಟ್ಟು ಇವತ್ತು ಅಮೇರಿಕನ್ ಚರಿತ್ರೆಯನ್ನು ಯಾರಿಗಾದರೂ ಬರೆಯಲು ಸಾಧ್ಯವೇ?
         ಇವತ್ತು ಜಗತ್ತಿನ ವಾತಾವರಣ ಹೇಗಿದೆಯೆಂದರೆ, ಒಬ್ಬ ಕ್ರೀಡಾಳುವಿಗೆ ಜಗತ್ತಿನ ಚರ್ಚೆಯನ್ನೇ ಬದಲಿಸುವ ಸಾಮರ್ಥ್ಯ  ಇದೆ. ಇವತ್ತು ಉದ್ಯಮದ ಸ್ವರೂಪ ಪಡಕೊಂಡಿರುವುದು ಬರೇ ಕ್ರೀಡೆಯಷ್ಟೇ ಅಲ್ಲ, ಕ್ರೀಡಾಳು ಕೂಡಾ. ಒಂದು ವೇಳೆ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವುದಿಲ್ಲ ಎಂದು ಉಸೇನ್ ಬೋಲ್ಟ್ ಘೋಷಿಸುವುದನ್ನೊಮ್ಮೆ ಸುಮ್ಮನೆ ಊಹಿಸಿಕೊಳ್ಳಿ. ಏನಾದೀತು? ಇಡೀ ಬ್ರಿಟನ್ನೇ ತಬ್ಬಿಬ್ಬಾಗದೇ? ಒಲಿಂಪಿಕ್ಸ್ ಸಮಿತಿಯೇ ಆತನ ಕಾಲಡಿಗೆ ಬೀಳುವ ಸಾಧ್ಯತೆ ಇಲ್ಲವೇ? ಯಾಕೆಂದರೆ ಡೌ, ಮೆಕ್ ಡೊನಾಲ್ಡ್, ಕೋಕಕೋಲಾ, ಏಸರ್, ಜನರಲ್ ಎಲೆಕ್ಟ್ರಿಕಲ್ಸ್, ಒಮೆಗಾ, ಸ್ಯಾಮ್ಸಂಗ್, ಪೆನಸಾನಿಕ್.. ಮುಂತಾದ ಬೃಹತ್ ಕಂಪೆನಿಗಳು ಇವತ್ತು ಲಂಡನ್ ಒಲಿಂಪಿಕ್ಸ್ ಗೆ  ಪ್ರಾಯೋಜಕವಾಗಿರುವುದೇ ಇಂಥ ಕ್ರೀಡಾಳುಗಳನ್ನು ಕೇಂದ್ರೀಕರಿಸಿಕೊಂಡು. ಉಸೇನ್ ಬೋಲ್ಟ್, ರೋಜರ್ ಫೆಡರರ್, ನಡಾಲ್ ರನ್ನು ನೋಡುವುದಕ್ಕೆಂದೇ ದೊಡ್ಡದೊಂದು ವೀಕ್ಷಕ ವರ್ಗ ಕ್ರೀಡಾಂಗಣಕ್ಕೆ ಬರುತ್ತದೆ. ಅದಕ್ಕೆ ಪೂರಕವಾಗಿ ಇಂಥ ಕಂಪೆನಿಗಳು ಮಾಧ್ಯಮಗಳಲ್ಲಿ ಚರ್ಚೆಯನ್ನೂ ಹುಟ್ಟು ಹಾಕುತ್ತವೆ. ಕೆವಿನ್ ಬೋರ್ಲಿ, ಕಿರಾನಿ ಜೇಮ್ಸ್, ಶಾನ್ ಮೆರಿಟ್, ಜೊನಾಥನ್ ಬೋರ್ಲಿ.. ಇವರಲ್ಲಿ 400 ಮೀಟರ್ ಓಟವನ್ನು ಗೆಲ್ಲುವವರು ಯಾರು ಎಂದೆಲ್ಲಾ ಮಾಧ್ಯಮಗಳು ಚರ್ಚಿಸುತ್ತಿದ್ದರೆ ಅದರಲ್ಲಿ ಈ ಕಂಪೆನಿಗಳದ್ದೂ ಪಾಲಿದೆ. ಒಂದು ವೇಳೆ ರಫೆಲ್ ನಡಾಲ್ ಭಾರತದವನಾಗಿದ್ದು, ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಡೌ ಕಂಪೆನಿಯ ಪ್ರಾಯೋಜಕತ್ವವನ್ನು ಪ್ರತಿಭಟಿಸಿ ತಾನು ಒಲಿಂಪಿಕ್ಸ್ ನಲ್ಲಿ ಭಾಗವಹಿಸುವುದಿಲ್ಲ ಅನ್ನುತ್ತಿದ್ದರೆ ಏನಾಗುತ್ತಿತ್ತು?  ಒಂದು ವೇಳೆ ಮೈಕೆಲ್ ಫೆಲ್ಪ್ಸ್ ಅನ್ನುವ ಆಸ್ಟ್ರೇಲಿಯದ ಮೀನು ಇರಾಕ್ ನದ್ದಾಗಿದ್ದರೆ ಮತ್ತು ಇರಾಕ್ ಮೇಲಿನ ಅತಿಕ್ರಮಣದಲ್ಲಿ ಬ್ರಿಟನ್ ನ  ಪಾತ್ರವನ್ನು ಖಂಡಿಸಿ ಲಂಡನ್ ಒಲಿಂಪಿಕ್ಸ್ ಗೆ  ಬಹಿಷ್ಕಾರ ಘೋಷಿಸಿರುತ್ತಿದ್ದರೆ ಹೇಗಿರುತ್ತಿತ್ತು? ನಿಜವಾಗಿ, ಅಮೇರಿಕದ ಅತಿಕ್ರಮಣ ನೀತಿಯನ್ನು, ಡೌನಂಥ ಬಹುರಾಷ್ಟ್ರೀಯ ಕಂಪೆನಿಗಳ ಸ್ವಾರ್ಥ ಚಿಂತನೆಯನ್ನು ಪ್ರತಿಭಟಿಸಿ ರಾಲಿ ನಡೆಸಿದರೆ ಎಷ್ಟು ಕವರೇಜು ಸಿಗಬಹುದೋ ಅದಕ್ಕಿಂತ ನೂರು ಪಟ್ಟು ಕವರೇಜು ಮತ್ತು ಪ್ರಭಾವ ಇಂಥ ಐಕಾನ್ ಗಳ ನಿಲುವಿನಿಂದ ಖಂಡಿತ ಸಿಗಬಲ್ಲುದು. ಅವರ ಹೇಳಿಕೆಗಳನ್ನು ಎದುರಿಟ್ಟುಕೊಂಡು ಜಗತ್ತು ಖಂಡಿತ ಚರ್ಚಿಸಬಲ್ಲುದು. ಇಂಥದ್ದೊಂದು ಸಾಧ್ಯತೆಯನ್ನು ಬಳಸಿಕೊಳ್ಳುವುದಕ್ಕೆ ಮುಸ್ಲಿಮ್ ಜಗತ್ತಿಗೆ ಈವರೆಗೂ ಸಾಧ್ಯವಾಗಿಲ್ಲವೇಕೆ?
        ಇವತ್ತು ಮಾಧ್ಯಮಗಳು ಚರ್ಚಿಸುತ್ತಿರುವ ಒಲಿಂಪಿಕ್ಸ್ ನ  ಪ್ರಮುಖ ಕ್ರೀಡಾಳುಗಳ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ನ  ಹೆಸರಿಲ್ಲ. ಆದರೆ ಉದ್ದಕ್ಕೂ ಕಪ್ಪು ಮನುಷ್ಯರ ಹೆಸರಿದೆ. ಈ ಒಲಿಂಪಿಕ್ಸ್ ನ  ಒಟ್ಟು 302 ಪದಕಗಳ ಗೊಂಚಲಿಗೆ ಕಣ್ಣಿಟ್ಟಿರುವವರಲ್ಲಿ ದೊಡ್ಡದೊಂದು ಸಂಖ್ಯೆ ಕಪ್ಪು ಮನುಷ್ಯರದ್ದೇ. ಅವರಿಲ್ಲದೇ ಕ್ರೀಡಾಕೂಟ ಇಲ್ಲ ಅನ್ನುವ ವಾತಾವರಣ ಸದ್ಯ ನಿರ್ಮಾಣವಾಗಿ ಬಿಟ್ಟಿದೆ. ಅಂದಹಾಗೆ ಮುಸ್ಲಿಮ್ ಜಗತ್ತು ಮೈ ಚಳಿ ಬಿಟ್ಟು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದಕ್ಕೆ ಕೆಲವೊಂದು ನಿಯಮಗಳು ಅಡ್ಡಿಯಾಗಿವೆ ಅನ್ನುವುದನ್ನು ಅಲ್ಲ ಗಳೆಯುತ್ತಿಲ್ಲ. ಮುಸ್ಲಿಮ್ ಮಹಿಳೆಯರು ಅನೇಕಾರು ಕ್ರೀಡಾ ಪ್ರಕಾರಗಳಲ್ಲಿ ಭಾಗವಹಿಸಲಾಗದಷ್ಟು ಅವನ್ನು ಕೆಡಿಸಲಾಗಿದೆ ಅನ್ನುವುದೂ ನಿಜ. ಆದರೆ ಪುರುಷರಿಗೆ ಅಂಥ ಸಮಸ್ಯೆ ಇಲ್ಲವಲ್ಲ. ಆದರೂ ಅವರೇಕೆ ಅಪರೂಪವಾಗುತ್ತಿದ್ದಾರೆ? ಕ್ರೀಡೆಯನ್ನು ಅಸ್ಪøಶ್ಯ ರೂಪದಲ್ಲಿ ಮುಸ್ಲಿಮ್ ಜಗತ್ತು ನೋಡುತ್ತಿರುವುದೇಕೆ? ಎಲ್ಲೋ ಒಬ್ಬ ಹಾಶಿಮ್ ಆಮ್ಲಾ ಎಂಬ ಕ್ರಿಕೆಟಿಗ ಮದ್ಯದ ಜಾಹೀರಾತನ್ನು ತನ್ನ ಜೆರ್ಸಿಯಲ್ಲಿ (ಟೀಶರ್ಟ್) ಹಾಕಲು ನಿರಾಕರಿಸಿದ್ದನ್ನು ಓದುತ್ತಾ, ಫೇಸ್ ಬುಕ್ ನಲ್ಲಿ ಶೇರ್ (share ) ಮಾಡುತ್ತಾ ಕಳೆಯುವುದನ್ನೇ ಇನ್ನೂ ನಾವು ಮಾಡುತ್ತಿರಬೇಕೇ?
ಲಂಡನ್ ಒಲಿಂಪಿಕ್ಸ್ ನಲ್ಲಿ ಬಾಂಬ್ ಸ್ಫೋಟಿಸಲು ಸಂಚು ಹೂಡಿದ್ದ 6 ಮಂದಿಯನ್ನು ಬಂಧಿಸಲಾಗಿದೆ ಎಂಬ ಜುಲೈ 5ರ ಮಾಧ್ಯಮ ಸುದ್ದಿಯನ್ನು ಓದುತ್ತಾ ನೋವಾಯಿತು. ಆ ಸುದ್ದಿಯ ಹಿಂದೆ ಪ್ರಚಾರದ ಸ್ಟಂಟ್ ಇದ್ದಿರಬಹುದಾದರೂ ಏನೋ ಶೂನ್ಯ ಭಾವ ಕಾಡಿತು..

1 comment:

  1. ನನ್ನ ಕೆಲವೋ೦ದು ಪ್ರಶ್ನೆಗಳಿಗೆ ಉತ್ತರಿಸುತ್ತೀರಾ?..
    ಇದು ಅರ್ಥಪೂರ್ಣ ಲೇಖನ ಎ೦ದು ಭಾವಿಸುತ್ತೀರಾ ?..
    .........

    ಇಲ್ಲಿ amla ರವರನ್ನು ತು೦ಬಾ ಕೆಲಮಟ್ಟದಲ್ಲಿ ಸ೦ಭೊದಿಸಿದ್ದಿರಿ
    "ಎಲ್ಲೋ ಒಬ್ಬ ಹಾಶಿಮ್ ಆಮ್ಲಾ ಎಂಬ ಕ್ರಿಕೆಟಿಗ ಮದ್ಯದ ಜಾಹೀರಾತನ್ನು ತನ್ನ ಜೆರ್ಸಿಯಲ್ಲಿ (ಟೀಶರ್ಟ್) ಹಾಕಲು ನಿರಾಕರಿಸಿದ್ದನ್ನು ಓದುತ್ತಾ, ಫೇಸ್ ಬುಕ್ ನಲ್ಲಿ ಶೇರ್ (share ) ಮಾಡುತ್ತಾ ಕಳೆಯುವುದನ್ನೇ ಇನ್ನೂ ನಾವು ಮಾಡುತ್ತಿರಬೇಕೇ?"
    hashim amla ಬಗ್ಗೆ ನಿಮಗೆಸ್ಟು ಗೊತ್ತು ?..

    ಇನ್ನೂ ಇದೆ ಇದಕ್ಕೆ ಪ್ರತಿಕ್ರಿಯೆ ಬ೦ದ ನ೦ತ್ರ .......
    [ voice of democracy ]

    ReplyDelete