1. 2023 ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಿಂದ ಫೆಲೆಸ್ತೀನ್‌ಗೆ ಆದ ಲಾಭವೇನು?
2. ಗಾಝಾದ ಈಗಿನ ದುರಂತ ಸ್ಥಿತಿಗೆ ಹಮಾಸನ್ನು ಯಾಕೆ ಹೊಣೆಗಾರರನ್ನಾಗಿ ಮಾಡಬಾರದು? ಅದರ ಸಶಸ್ಟ್ರ ಹೋರಾಟವೇ ಗಾಝಾದ ಸರ್ವನಾಶಕ್ಕೆ ಕಾರಣವಲ್ಲವೇ?
3. ಸ್ವತಂತ್ರ ಇಸ್ರೇಲ್ ರಾಷ್ಟ್ರದಂತೆಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೂ ವಿಶ್ವಸಂಸ್ಥೆ ಅವಕಾಶವನ್ನು ಮಾಡಿಕೊಟ್ಟಿ ತ್ತಲ್ಲವೇ? ಅದನ್ನು ಫೆಲೆಸ್ತೀನಿಯರು ತಿರಸ್ಕರಿಸಿದ್ದೇಕೆ?
ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿಟ್ಟ 20 ಅಂಶಗಳ ಕದನ ವಿರಾಮ ಪ್ರಸ್ತಾಪವನ್ನು ಹಮಾಸ್ ಬಹುತೇಕ ಅಂಗೀಕರಿಸಿದ ಬಳಿಕ ಇಂಥದ್ದೊಂದು ಪ್ರಶ್ನೆಗೆ ಪ್ರಸ್ತುತತೆ ಇದ್ದೇ ಇದೆ.
2023 ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿತು. ಸುಮಾರು 1400ರಷ್ಟು ಇಸ್ರೇಲಿಗರು ಈ ದಾಳಿಯಲ್ಲಿ ಹತ್ಯೆಗೀಡಾದರು. ಆ ಬಳಿಕ ಇಸ್ರೇಲ್ ಪ್ರತೀಕಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದರಿಂದಾಗಿ ಸುಮಾರು 70 ಸಾವಿರದಷ್ಟು ಫೆಲೆಸ್ತೀನಿಯರು ಹತ್ಯೆಗೀಡಾದರು. ಲಕ್ಷಕ್ಕಿಂತಲೂ ಅಧಿಕ ಮಂದಿ ಗಾಯಗೊಂಡರು. ಗಾಝಾದ ಸಾಕಷ್ಟು ಮನೆಗಳು, ಆಸ್ಪತ್ರೆಗಳು, ಮೂಲಭೂತ ಸೌಲಭ್ಯಗಳನ್ನು ಇಸ್ರೇಲ್ ನಾಶಪಡಿಸಿತು. ಹೀಗಿರುತ್ತಾ, ಇಂಥ ಪ್ರಶ್ನೆಗಳು ಅಸಹಜ ಅಲ್ಲ. ಹಮಾಸ್ ಇಂಥದ್ದೊಂದು ಅಭೂತಪೂರ್ವ ಕೃತ್ಯಕ್ಕೆ ಕೈ ಹಾಕಿದ್ದರಿಂದಲೇ ಗಾಝಾ ಸರ್ವನಾಶವಾದಂತಾಗಿದೆ ಎಂಬ ವಾದವನ್ನು ತಿರಸ್ಕಾರ ಭಾವದಿಂದ ನೋಡಬೇಕಾಗಿಯೂ ಇಲ್ಲ.
ಆದರೆ,
ಮೊದಲ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ಕೊನೆಯ ಪ್ರಶ್ನೆಯಿಂದ ಅರಂಭಿಸಬೇಕು.
1948 ಮೇ 14ರಂದು ಸ್ವತಂತ್ರ ಇಸ್ರೇಲ್ ರಾಷ್ಟ್ರ ಸ್ಥಾಪನೆ ಯಾಗುವುದಕ್ಕಿಂತಲೂ ಮೊದಲು ಫೆಲೆಸ್ತೀನ್‌ನಲ್ಲಿ ಬ್ರಿಟಿಷ್ ಆಡಳಿತವಿತ್ತು. ಆಗ ಇರ್ಗುನ್ ಮತ್ತು ಲೇಹಿ ಎಂಬ ಪ್ರಮುಖ ಗುಂಪುಗಳು ಭಯೋತ್ಪಾದನಾ ಚಟುವಟಿಕೆಯಲ್ಲಿ ನಿರತವೂ ಆಗಿತ್ತು. ಅವು ಬ್ರಿಟಿಷ್ ಆಡಳಿತದ ವಿರುದ್ಧ ಸಶಸ್ತç ಹೋರಾಟವನ್ನು ನಡೆಸುತ್ತಿತ್ತು. 1947 ನವೆಂಬರ್ ಬಳಿಕ ಅದು ಫೆಲೆಸ್ತೀನಿಯರ ವಿರುದ್ಧ ಬಂದೂಕನ್ನು ತಿರುಗಿಸಿತು. ಅದನ್ನು ಪ್ಲಾನ್ ಡಲೆಟ್ ಎಂದು ಹೇಳಲಾಗುತ್ತದೆ. ಫೆಲೆಸ್ತೀನಿಯರ ಮೇಲೆ ದಾಳಿಗಳನ್ನು ನಡೆಸುತ್ತಾ ಮತ್ತು ಇದು ಯಹೂದಿಯರ ಸುರಕ್ಷತೆಗಾಗಿ ಎಂದು ಸಮರ್ಥಿಸುತ್ತಾ ಅದು ಮುಂದುವರಿಯಿತು. ಹೀಗಿರುತ್ತಲೇ,
1948 ಎಪ್ರಿಲ್‌ನಲ್ಲಿ ಅದು ದೇರ ಯಾಸೀನ್ ಎಂಬ ಪ್ರದೇಶ ದಲ್ಲಿ ಫೆಲೆಸ್ತೀನಿ ಗ್ರಾಮಗಳ ಮೇಲೆ ಸಶಸ್ತç ದಾಳಿ ನಡೆಸಿತು. ಅದು ಬಹುತೇಕ ಕೃಷಿ ಪ್ರದೇಶ. ಅಲ್ಲಿ ರೈತರೇ ಬಹುಸಂಖ್ಯಾತ ರಾಗಿದ್ದರು. ಈ ಇರ್ಗುನ್ ಮತ್ತು ಲೇಹಿ ಎಂಬ ಭಯೋತ್ಪಾದಕ ಗುಂಪುಗಳ ದಾಳಿಯಿಂದ ಈ ರೈತರು ಗ್ರಾಮ ಬಿಟ್ಟು ಓಡಿ ಹೋದರು. ಫೆಲೆಸ್ತೀನಿನ ಇತರ ಪ್ರದೇಶಗಳಿಗೆ ಪಲಾಯನ ಮಾಡಿದರು. ಈ ದಾಳಿಯಲ್ಲಿ ಸುಮಾರು 120ರಷ್ಟು ಮಂದಿ ಹತ್ಯೆಗೀಡಾದರು. ಯಾವಾಗ 1948 ಮೇ 14ರಂದು ಇಸ್ರೇಲ್ ರಾಷ್ಟ್ರ ಸ್ಥಾಪನೆಯಾಯಿತೋ ಈ ಪ್ರದೇಶಗಳನ್ನು ಇಸ್ರೇಲ್ ತನ್ನೊಳಗೆ ಸೇರಿಸಿಕೊಂಡಿತು. ವಿಶ್ವಸಂಸ್ಥೆಯ ಮೂಲ ಗಡಿರೇಖೆಯಲ್ಲಿ ಈ ಪ್ರದೇಶಗಳೇ ಇರಲಿಲ್ಲ. ಇದು ಅರಬ್ ರಾಷ್ಟ್ರಗಳಿಗೆ ಮತ್ತು ಫೆಲೆಸ್ತೀನ್‌ಗೆ ಇಸ್ರೇಲ್ ಮಾಡಿದ ಮಹಾ ಮೋಸವಾಗಿತ್ತು. ಈ ರಾಷ್ಟç ಘೋಷಣೆಯ ಮರುದಿನವೇ 1948 ಮೇ 15ರಂದು ಇಸ್ರೇಲ್ ವಿರುದ್ಧ ಅರಬ್ ರಾಷ್ಟçಗಳು ಯುದ್ಧ ಹೂಡಿದುವು. ಇದಕ್ಕೆ ಪ್ರತಿಯಾಗಿ ಅಮೇರಿಕ ಮತ್ತು ಬ್ರಿಟನ್‌ಗಳು ಇಸ್ರೇಲ್‌ನ ಬೆನ್ನಿಗೆ ನಿಂತವು. 1949ರಲ್ಲಿ ಯುದ್ಧ ಕೊನೆಗೊಂಡಾಗ ಫೆಲೆಸ್ತೀನಿನ ನೂರಾರು ಪಟ್ಟಣ ಮತ್ತು ಗ್ರಾಮಗಳು ಇಸ್ರೇಲ್‌ನ ವಶವಾದುವು. ಏಳೂವರೆ ಲಕ್ಷ ಫೆಲೆಸ್ತೀನಿಯರು ನಿರಾಶ್ರಿತರಾಗಿ ಪಕ್ಕದ ಲೆಬನಾನ್, ಜೋರ್ಡಾನ್, ಸಿರಿಯಾ, ಈಜಿಪ್ಟ್ ಮುಂತಾದ ರಾಷ್ಟçಗಳಿಗೆ ವಲಸೆ ಹೋದರು. ಆ ಇಡೀ ಜಾಗವನ್ನು ಇಸ್ರೇಲ್ ವಶಪಡಿಸಿಕೊಂಡಿತು. ಇದಾದ ಬಳಿಕ 1967ರಲ್ಲಿ ಮತ್ತೊಂದು ಅರಬ್-ಇಸ್ರೇಲ್ ಯುದ್ಧ ನಡೆಯಿತು. ಈ ಸಂದರ್ಭದಲ್ಲಿ ಅಮೇರಿಕ ಮತ್ತು ಯುರೋಪಿಯನ್ ರಾಷ್ಟ್ರಗಳು ಇಸ್ರೇಲ್ ಬೆನ್ನಿಗೆ ನಿಂತವು. ಇದರಿಂದಾಗಿ ಇಸ್ರೇಲ್ ಮೇಲುಗೈಯನ್ನು ಪಡೆಯಿತು ಮತ್ತು ಇನ್ನಷ್ಟು ಫೆಲೆಸ್ತೀನಿ ಭೂಭಾಗಗಳನ್ನು ವಶಪಡಿಸಿಕೊಂಡಿತು.
ನಿಜವಾಗಿ,
ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ತಡೆಯಾಗಿರುವುದು ಫೆಲೆಸ್ತೀನಿಯರಲ್ಲ. ವಿಶ್ವಸಂಸ್ಥೆ ಗುರುತಿಸಿದ ಗಡಿಯನ್ನೇ ಉಲ್ಲಂಘಿಸಿದ ಇಸ್ರೇಲೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ರಚನೆಗೆ ತಡೆಯಾಗಿ ನಿಂತಿದೆ. 1948 ಮೇ 14ರಂದು ವಿಶ್ವಸಂಸ್ಥೆ ಯಾವ ಗಡಿ ಗುರುತನ್ನು ಮಾಡಿದೆಯೋ ಅದೇ ಗಡಿ ಗುರುತಿನೊಂದಿಗೆ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ರಚನೆಗೆ ಫೆಲೆಸ್ತೀನಿಯರು ಸಿದ್ಧರಿದ್ದಾರೆ. ಆದರೆ ಸ್ಥಾಪನೆಯ ದಿನದಂದೇ ಇಸ್ರೇಲ್ ಗಡಿ ಗುರುತನ್ನು ಮೀರಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದಷ್ಟೇ ಅಲ್ಲ, ಅವನ್ನು ಬಿಟ್ಟು ಕೊಡಲು ಒಪ್ಪಿಕೊಳ್ಳುತ್ತಲೂ ಇಲ್ಲ. ಹಾಗಂತ,
ಹಮಾಸ್ ಶಸ್ಟ್ರ ಹಿಡಿದದ್ದು ಸರಿಯೇ?
ಹಮಾಸ್ ಹುಟ್ಟಿಕೊಂಡದ್ದು 1987ರಲ್ಲಿ. ಅಂದರೆ, ಇಸ್ರೇಲ್ ರಾಷ್ಟ್ರ ಸ್ಥಾಪನೆಯಾಗಿ ಬರೋಬ್ಬರಿ 39 ವರ್ಷಗಳು ಕಳೆದ ಬಳಿಕ. ಒಂದುವೇಳೆ, 1948ರಲ್ಲೇ ಹಮಾಸ್ ಸ್ಥಾಪನೆಯಾಗಿರುತ್ತಿದ್ದರೆ ಮತ್ತು ಅದು ಸಶಸ್ತç ಹೋರಾಟದಲ್ಲಿ ನಿರತವಾಗಿರುತ್ತಿದ್ದರೆ, ಈ ಹೋರಾಟ ಮಾದರಿಯನ್ನು ಕಟಕಟೆಯಲ್ಲಿ ನಿಲ್ಲಿಸಬಹುದಿತ್ತು. ಹಮಾಸ್‌ನಿಂದಾಗಿಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯಾಗಿಲ್ಲ ಎಂದು ಹೇಳಬಹುದಿತ್ತು. ಆದರೆ, ಅದು ಸ್ಥಾಪನೆಯಾಗುವುದಕ್ಕಿಂತ ಮೊದಲಿನ 39 ವರ್ಷಗಳಲ್ಲಿ ಯಾಕೆ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯಾಗಲಿಲ್ಲ? ಅದಕ್ಕೆ ಯಾರು ತಡೆಯಾಗಿದ್ದರು? ಯಾಸಿರ್ ಅರಫಾತ್ ಎಂಬ ಫೆಲೆಸ್ತೀನಿನ ಮಣ್ಣಿನ ಮಗನನ್ನು ಪದೇ ಪದೇ ವಂಚಿಸಿದ್ದು ಯಾರು? ಆರಂಭದಲ್ಲಿ ಫತಹ್ ಎಂಬ ಸಂಘಟನೆ ಯನ್ನು ಕಟ್ಟಿ ಯಾಸಿರ್ ಅರಫಾತ್‌ರು ಸಶಸ್ಟ್ರ ಹೋರಾಟವನ್ನೇ ನೆಚ್ಚಿಕೊಂಡಿದ್ದರು. ಇಸ್ರೇಲನ್ನು ಮಣಿಸುವುದಕ್ಕೆ ಸಶಸ್ತç ಹೋರಾಟವೇ ಸರಿಯಾದ ದಾರಿ ಎಂದೇ ತೀರ್ಮಾನಿಸಿದ್ದರು. ಹಾಗೆ ಹೋರಾ ಡಿಯೂ ಇದ್ದರು. ಆದರೆ,
ಆ ಬಳಿಕ ತಮ್ಮ ನಿಲುವಿನಲ್ಲಿ ಬದಲಾವಣೆಯನ್ನು ತಂದರು. ಫೆಲೆಸ್ತೀನ್ ಲಿಬರೇಶನ್ ಆರ್ಗನೈಝೇಶನ್ ಅಥವಾ ಪಿಎಲ್‌ಓ ಜೊತೆ ಸೇರಿಕೊಂಡು ಶಾಂತಿಯುತ ಸ್ವಾತಂತ್ರ‍್ಯ ಹೋರಾಟಕ್ಕೆ ತನ್ನನ್ನು ಅಣಿಗೊಳಿಸಿದರು. ಇಸ್ರೇಲ್‌ಗೆ ಶಾಂತಿಯ ಭಾಷೆ ಅರ್ಥವಾಗುವುದಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದ್ದರೂ ಅವರು ಎದೆಗುಂದಲಿಲ್ಲ. ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯ ನಿಟ್ಟಿನಲ್ಲಿ ಬೆಂಬಲ ಪಡಕೊಳ್ಳುವುದಕ್ಕಾಗಿ ವಿಶ್ವ ರಾಷ್ಟ್ರಗಳ ಪರ್ಯಟನೆ ಮಾಡಿದರು. ಭಾರತಕ್ಕೂ ಬಂದರು. 1991ರಲ್ಲಿ ಇಸ್ರೇಲ್ ಜೊತೆ ಮ್ಯಾಡ್ರಿಡ್ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. 1993ರಲ್ಲಿ ಓಸ್ಲೋ ಶಾಂತಿ ಒಪ್ಪಂದಕ್ಕೂ ಸಹಿ ಹಾಕಿದರು. ಈ ಒಪ್ಪಂದ ಎಷ್ಟು ಮಹತ್ವ ಪೂರ್ಣವಾಗಿತ್ತೆಂದರೆ, ಇದೇ ಒಪ್ಪಂದ ಸಾಧ್ಯವಾಗಿಸಿದ್ದಕ್ಕಾಗಿ ಯಾಸಿರ್ ಅರಫಾತ್‌ರಿಗೆ ನೋಬೆಲ್ ಶಾಂತಿ ಪ್ರಶಸ್ತಿ ಲಭಿಸಿತು. ಇವರ ಜೊತೆಗೆ ಇಸ್ರೇಲ್ ಅಧ್ಯಕ್ಷ ಇಝಾಕ್ ರಬಿನ್ ಮತ್ತು ಪ್ರಧಾನಿ ಸಿಮೋನ್ ಪೆರಿಸ್‌ರಿಗೂ ನೋಬೆಲ್ ಶಾಂತಿ ಪ್ರಶಸ್ತಿ ಲಭಿಸಿತು. ಇದಾದ ಬಳಿಕ ಇಸ್ರೇಲ್ ಉಗ್ರವಾದಿಗಳು ಇಝಾಕ್ ರಬಿನ್‌ರನ್ನು ಗುಂಡು ಹಾರಿಸಿ ಹತ್ಯೆ ಮಾಡಿದರು. ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ಇಸ್ರೇಲ್ ಒಳಗೆ ಎಂಥ ವಿರೋಧ ಇತ್ತು ಎಂಬುದನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಹಾಗಂತ,
ಅರಫಾತ್ ಇಲ್ಲಿಗೇ ನಿಲ್ಲಿಸಲಿಲ್ಲ.
2000ನೇ ಇಸವಿಯಲ್ಲಿ ಕ್ಯಾಂಪ್ ಡೇವಿಡ್ ಶೃಂಗದಲ್ಲಿ ಭಾಗಿಯಾದರು. ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರವನ್ನು ಸ್ಥಾಪಿಸುವುದೇ ಈ ಎಲ್ಲವುಗಳ ಮುಖ್ಯ ಉದ್ದೇಶವಾಗಿತ್ತು. ಆದರೆ, ಒಪ್ಪಂದದ ಮೇಲೆ ಒಪ್ಪಂದಗಳು ನಡೆದರೂ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಗೆ ಇಸ್ರೇಲ್ ತಕರಾರು ನಿಲ್ಲಲೇ ಇಲ್ಲ. ಕೊನೆಗೆ 2002 ರಿಂದ ಅರಫಾತ್ ಅವರನ್ನೇ ಇಸ್ರೇಲ್ ಗೃಹಬಂಧನದಲ್ಲಿ ಇರಿಸಿತು. ಫೆಲೆಸ್ತೀನ್ ಪರ ಅಭಿಪ್ರಾಯ ಒಟ್ಟುಗೂಡಿಸಲು ವಿಶ್ವರಾಷ್ಟ್ರಗಳಿಗೆ ಪ್ರಯಾಣಿಸದಂತೆ ಅವರನ್ನು ತಡೆಹಿಡಿಯಿತು. ಕೊನೆಗೆ 2004ರಲ್ಲಿ ಅವರು ನಿಧನರಾದರು. ಅವರಿಗೆ ರೇಡಿಯಾಲಜಿ ತಂತ್ರಜ್ಞಾನದ ಮೂಲಕ ವಿಷ ನೀಡಲಾಗಿದೆ ಎಂದು ಸ್ವಿಸ್ ವೈದ್ಯರ ತಂಡ ಆ ಬಳಿಕ ಬಹಿರಂಗಪಡಿಸಿತು.
ಇದು ಇಸ್ರೇಲ್ ಶಾಂತಿಯುತ ಹೋರಾಟಕ್ಕೆ ನೀಡಿದ ಗೌರವ.
ಶಸ್ಟ್ರ ಹಿಡಿದಿದ್ದ ಅರಫಾತ್‌ರನ್ನು ನಿಶ್ಶಸ್ಟ್ರ ಹೋರಾಟಕ್ಕೆ ಬರುವಂತೆ ಮಾಡಿ ಆ ಬಳಿಕ ಪದೇ ಪದೇ ಮೋಸಗೊಳಿಸುತ್ತಾ ಹೋಗಿ ಕೊನೆಗೆ ಫೆಲೆಸ್ತೀನಿಯರಲ್ಲೂ ಅವರನ್ನು ಅಸಮರ್ಥರಂತೆ ಬಿಂಬಿಸಿ ಸಾಯಿಸಿದ ಇಸ್ರೇಲ್‌ನ ಕ್ರೌರ್ಯವನ್ನು ಕಂಡು ಫೆಲೆಸ್ತೀನಿ ಯುವಕರು ರೋಸಿ ಹೋದರು. ಅವರಿಗೆ ಈ ನಿಶ್ಶಸ್ಟ್ರ ಹೋರಾಟ ಕ್ಕಿಂತ ಯಾಸಿರ್ ಅರಫಾತ್ ಆರಂಭದಲ್ಲಿ ನೆಚ್ಚಿಕೊಂಡಿದ್ದ ಸಶಸ್ಟ್ರ ಹೋರಾಟವೇ ಸರಿ ಎಂದು ಅನಿಸತೊಡಗಿತು. ಅದಕ್ಕಾಗಿ ಅವರು ಹಮಾಸನ್ನು ಸೇರತೊಡಗಿದರು. ಶಾಂತಿಯ ಭಾಷೆ ಇಸ್ರೇಲ್‌ಗೆ ಅರ್ಥವಾಗುತ್ತಿಲ್ಲ ಮತ್ತು ಸಶಸ್ಟ್ರ ಹೋರಾಟದ ಮೂಲಕವೇ ಫೆಲೆಸ್ತೀನನ್ನು ಸ್ವತಂತ್ರಗೊಳಿಸುತ್ತೇವೆ ಎಂದು ಯುವಕರು ನಿರ್ಧಾರಕ್ಕೆ ಬರತೊಡಗಿದರು. ಹೀಗೆ ಹಮಾಸ್ ಬಲಿಷ್ಠವಾಗಿ ಬೆಳೆಯತೊಡಗಿತು. ಎಲ್ಲಿಯವರೆಗೆಂದರೆ, 2007ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಫೆಲೆಸ್ತೀನಿಯರು ಫತಹ್ ಪಕ್ಷವನ್ನು ಸೋಲಿಸಿ ಹಮಾಸನ್ನು ಅಧಿಕಾರಕ್ಕೆ ತಂದರು.
ಆದ್ದರಿಂದಲೇ,
ಹಮಾಸನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವಾಗ ಪ್ರತಿಯಾಗಿ ಕೆಲವು ಪ್ರಶ್ನೆಗಳೂ ಎದುರುಗೊಳ್ಳುತ್ತವೆ.
ಶಾಂತಿಯ ಭಾಷೆಯನ್ನೇ ಗೌರವಿಸದ ಮತ್ತು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ಅವಕಾಶವೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳುವ ಇಸ್ರೇಲ್‌ನೊಂದಿಗೆ ಹಮಾಸ್ ಬೇರೆ ಯಾವ ರೀತಿ ಯಲ್ಲಿ ಹೋರಾಡಬೇಕಿತ್ತು? ನಿರಪರಾಧಿಗಳ ಹತ್ಯೆ ನಡೆಸುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲದಿದ್ದರೂ ಫೆಲೆಸ್ತೀನಿಯರನ್ನು ಶಾಂತಿ ಮಾತುಕತೆಯಲ್ಲಿ ನಿರಾಶರನ್ನಾಗಿ ಮಾಡಿದ್ದು ಯಾರು? ಅಪಾಯಕಾರಿ ನಿರ್ಧಾರಕ್ಕೆ ಬರುವಂತೆ ಯುವಕರನ್ನು ಪ್ರಚೋದಿಸುತ್ತಿರುವುದು ಯಾರು? ಸ್ವತಂತ್ರ ಇಸ್ರೇಲ್ ರಾಷ್ಟ್ರ ಸ್ಥಾಪನೆಯಾಗಿರುವ ಹಾಗೆಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಯಾಕಾಗಿ ಸ್ಥಾಪನೆಯಾಗಬಾರದು? ಇಸ್ರೇಲ್ ರಾಷ್ಟ್ರ ಸ್ಥಾಪನೆಯಾಗಿ 7 ದಶಕಗಳು ಕಳೆದ ಬಳಿಕವೂ ಫೆಲೆಸ್ತೀನ್‌ಗೆ ಅಂಥದ್ದೊಂದು ಅವಕಾಶ ಯಾಕೆ ಲಭ್ಯವಾಗಿಲ್ಲ?
2023 ಅಕ್ಟೋಬರ್ 7ರ ಹಮಾಸ್ ದಾಳಿಯನ್ನು ಪ್ರಶ್ನಿಸುವಾಗ, ಖಂಡಿಸುವಾಗ ಮತ್ತು ವಿಮರ್ಶಿಸುವಾಗ ಈ ಎಲ್ಲ ಪ್ರಶ್ನೆಗಳೂ ಎದುರಾಗುತ್ತವೆ. ಆ ದಾಳಿಯು ಇಸ್ರೇಲ್‌ಗೆ ಮನಬಂದಂತೆ ವರ್ತಿಸಲು ಅವಕಾಶ ಮಾಡಿಕೊಟ್ಟಿರಬಹುದು. 70 ಸಾವಿರದಷ್ಟು ಫೆಲೆಸ್ತೀನಿಯರ ಹತ್ಯೆ ನಡೆಯುವುದಕ್ಕೆ ಅದು ಕಾರಣವಾಗಿರಬಹುದು. ಫೆಲೆಸ್ತೀನ್ ಧ್ವಂಸದಲ್ಲಿ ಆ ದಾಳಿಯನ್ನೇ ಏಕೈಕ ಕಾರಣವಾಗಿ ಪರಿಗಣಿಸಬಹುದು. ಆದರೆ,
2023 ಅಕ್ಟೋಬರ್ 7ರ ಆ ದಾಳಿಗೆ 2 ವರ್ಷಗಳು ತುಂಬಿದ ಈ ಹೊತ್ತಿನಲ್ಲಿ ಮತ್ತು ಕದನ ವಿರಾಮಕ್ಕೆ ಹಮಾಸ್ ಸಿದ್ಧವಾಗಿರುವ ಈ ಸಮಯದಲ್ಲಿ ಹಲವು ಸಕಾರಾತ್ಮಕ ಅಂಶಗಳೂ ಗೋಚರಿಸುತ್ತಿವೆ. ಇಸ್ರೇಲ್ ತನ್ನ ಆಕ್ರಮಣ ನೀತಿಯನ್ನು ಕೇವಲ ಗಾಝಾಕ್ಕೆ ಮಾತ್ರ ಸೀಮಿತಗೊಳಿಸಲಿಲ್ಲ. ಸಿರಿಯ, ಲೆಬನಾನ್, ಯಮನ್, ಇರಾನ್ ಮತ್ತು ಕತಾರ್ ಮೇಲೂ ದಾಳಿ ನಡೆಸಿತು. ಇರಾನ್ ಮತ್ತು ಕತಾರ್ ಮೇಲಿನ ದಾಳಿಯಂತೂ ಇಸ್ರೇಲ್‌ಗೆ ಇನ್ನಿಲ್ಲದ ತಿರುಗೇಟನ್ನು ನೀಡಿತು. ಅಮೇರಿಕ ನೆರವಿಗೆ ಬರದಿರುತ್ತಿದ್ದರೆ ಇಸ್ರೇಲನ್ನು ಸಂಪೂರ್ಣ ನೆಲಕಚ್ಚಿಸುವ ಸಾಮರ್ಥ್ಯ ಇರಾನ್‌ಗೆ ಇದೆ ಅನ್ನುವುದು ಸಾಬೀತಾಯಿತು. ಇಸ್ರೇಲ್‌ನ ರಕ್ಷಣಾ ಕವಚವಾದ ಐರನ್ ಡೋಮ್‌ಗಳನ್ನು ದಾಟಿ ಇಸ್ರೇಲ್‌ನೊಳಗೆ ನುಗ್ಗುವ ಅತ್ಯಾಧುನಿಕ ಅಸ್ಟ್ರಗಳು ಇರಾನ್‌ನ ಬಳಿ ಇವೆ ಅನ್ನುವುದೂ ಮನದಟ್ಟಾಯಿತು. ಕತಾರ್ ಮೇಲೆ ದಾಳಿ ಮಾಡಿದ ಬಳಿಕವಂತೂ ಇಡೀ ಅರಬ್ ರಾಷ್ಟ್ರಗಳೇ ಒಂದಾದುವು. ಯುರೋಪಿಯನ್ ಒಕ್ಕೂಟದಂತೆ ಅರಬ್ ಒಕ್ಕೂಟ ರಚಿಸುವ ನಿರ್ಧಾರಕ್ಕೆ ಬಂದವು. ಈ ನಡುವೆ,
ಇಸ್ರೇಲ್‌ನ ಪರ ಇದ್ದ ಒಂದೊಂದೇ ರಾಷ್ಟ್ರಗಳು ಫೆಲೆಸ್ತೀನ್ ಪಾಳಯ ಸೇರಿಕೊಳ್ಳತೊಡಗಿದುವು. ಈವರೆಗೂ ಇಸ್ರೇಲ್ ಪರ ಬಲವಾಗಿ ನಿಂತಿದ್ದ ಯುರೋಪಿಯನ್ ರಾಷ್ಟ್ರಗಳೇ ಇಸ್ರೇಲ್‌ನ ಕೈಬಿಟ್ಟವು. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಐದು ಖಾಯಂ ರಾಷ್ಟ್ರಗಳ ಪೈಕಿ ಬ್ರಿಟನ್, ಫ್ರಾನ್ಸ್, ಚೀನಾ ಮತ್ತು ರಷ್ಯಾಗಳು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಗೆ ಬಹಿರಂಗ ಬೆಂಬಲ ಘೋಷಿಸಿದುವು. ಈ ವಿಷಯ ದಲ್ಲಿ ಅಮೇರಿಕ ಒಂಟಿಯಾಯಿತು. ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನಲ್ಲಿ ಇಸ್ರೇಲ್ ತೀವ್ರ ಮುಖಭಂಗ ಅನುಭವಿಸಿತು. ನೇತನ್ಯಾಹು ಅವರ ವಿರುದ್ಧ ಅದು ಬಂಧನ ವಾರಂಟ್ ಹೊರಡಿಸಿತು. ಗಾಝಾದಲ್ಲಿ ಜನಾಂಗ ನಿರ್ಮೂಲನೆ ನಡೆಯುತ್ತಿದೆ ಎಂದು ವಿಶ್ವಸಂಸ್ಥೆಯೇ ಹೇಳಿತು. ಜಗತ್ತಿನ ನಾನಾ ಭಾಗಗಳಲ್ಲಿ ಇಸ್ರೇಲ್ ವಿರುದ್ಧ ಪ್ರತಿಭಟನೆಗಳು ನಡೆದುವು. ಇಸ್ರೇಲ್‌ನ ಜೊತೆ ಹಲವು ರಾಷ್ಟ್ರಗಳು ಸಂಬಂಧ ವನ್ನು ಕಡಿದುಕೊಂಡವು.
ಅಷ್ಟಕ್ಕೂ,
ಮಂದಿನ ದಿನಗಳು ಹೇಗಿದ್ದೀತು ಎಂದು ಈಗಲೇ ಹೇಳುವಂತಿಲ್ಲ. ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಗೆ ತಡೆಯಾಗಿರುವ ನೇತನ್ಯಾಹು ಅವರನ್ನು ಅಮೇರಿಕವೇ ಷಡ್ಯಂತ್ರ ನಡೆಸಿ ಅಧಿಕಾರ ದಿಂದ ಕೆಳಗಿಳಿಸಲೂಬಹುದು. ಇಸ್ರೇಲ್‌ನ ಬಲಪಂಥೀಯರ ಪಾಲಿಗೆ ಹೀರೋ ಆಗಿರುವ ನೇತನ್ಯಾಹು ಅವರೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣಕ್ಕೆ ಅವ ಕಾಶ ಮಾಡಿಕೊಟ್ಟ ತಿಳಿಗೇಡಿ ಪ್ರಧಾನಿ ಎಂದು ಮುಂದೊಂದು ದಿನ ಇಸ್ರೇಲಿ ಇತಿಹಾಸದಲ್ಲಿ ದಾಖಲಾಗಲೂಬಹುದು. ಇವತ್ತು ಪ್ರಶ್ನೆಗೆ ಒಳಗಾಗಿರುವ ಹಮಾಸನ್ನೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಗೆ ಹೋರಾಡಿ ಯಶಸ್ವಿಯಾದ ಸಂಘಟನೆಯಾಗಿ ಮುಂದೊಂದು ದಿನ ಫೆಲೆಸ್ತೀನ್ ಇತಿಹಾಸ ನೆನಪಿಸಿಕೊಳ್ಳಲೂ ಬಹುದು. ಅಥವಾ ಇದಕ್ಕೆ ವ್ಯತಿರಿಕ್ತವೂ ನಡೆಯಬಹುದು.
ಉತ್ತರಕ್ಕಾಗಿ ಕಾಯೋಣ.
No comments:
Post a Comment