Wednesday, April 9, 2025

ವಕ್ಫ್ ತಿದ್ದುಪಡಿ ಕಾಯ್ದೆಯನ್ನೇಕೆ ವಿರೋಧಿಸುತ್ತೀರಿ? ಇಲ್ಲಿದೆ ೧೦ ಕಾರಣಗಳು




ವಕ್ಫ್ ತಿದ್ದುಪಡಿ ಮಸೂದೆ ಪಾರ್ಲಿಮೆಂಟಲ್ಲಿ ಅಂಗೀಕಾರಗೊಂಡ ಬೆನ್ನಿಗೇ ಒಂದು ಬರಹ ಓದಿದೆ. ‘ಸಿಕ್ಕಸಿಕ್ಕ ಭೂಮಿಯನ್ನು ವಕ್ಫ್ ಭೂಮಿ  ಎಂದು ಇನ್ನು ಮುಂದೆ ಹೇಳಕ್ಕಾಗಲ್ಲ, ಥ್ಯಾಂಕ್ಸ್ ಕೇಂದ್ರ ಸರಕಾರ...’ ಎಂದಾತ ಬರಕೊಂಡಿದ್ದ. ಇದು ನಿಜವಾ? ಸಿಕ್ಕಸಿಕ್ಕ ಭೂಮಿಯನ್ನು  ವಕ್ಫ್ ಭೂಮಿ ಎಂದು ಹೇಳಿದರೆ ಅದು ವಕ್ಫ್ ಭೂಮಿ ಆಗುತ್ತಾ? ಮುಸ್ಲಿಮರ ಪಾಲಾಗುತ್ತಾ? ಇಂಥದ್ದೊಂದು  ಸುಳ್ಳು ಹುಟ್ಟಿಕೊಂಡದ್ದು  ಹೇಗೆ? ಪ್ರಚಾರ ಪಡೆದದ್ದು ಹೇಗೆ... ಅನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ ಹೋದರೆ ಪ್ರಶ್ನೆ ಕೇಂದ್ರ ಅಲ್ಪಸಂಖ್ಯಾತ ಖಾತೆಯ ಸಚಿವ  ಕಿರಣ್ ರಿಜಿಜು ಅವರ ಬಳಿಗೆ ಹೋಗಿ ನಿಲ್ಲುತ್ತದೆ. ಈ ತಿದ್ದುಪಡಿ ಮಸೂದೆಯನ್ನು ಆರಂಭದಲ್ಲಿ ಪಾರ್ಲಿಮೆಂಟಲ್ಲಿ ಮಂಡಿಸುವಾಗ ಅವರು  ಕೆಲವು ಕಥೆಗಳನ್ನು ಹೇಳಿದ್ದರು. ಅದರಲ್ಲಿ ಒಂದು, ತಮಿಳುನಾಡಿನ ತಿರುಚುರಯ್ ಎಂಬ ಗ್ರಾಮದ ಕಥೆ. ಸಾವಿರಾರು ಎಕರೆ ವಿಸ್ತಾರವಿರುವ  ಈ ಗ್ರಾಮಕ್ಕೆ ಗ್ರಾಮವೇ ವಕ್ಫ್ ಎಂದು ನಮೂದಾಗಿದೆ ಎಂದವರು ಪಾರ್ಲಿಮೆಂಟಲ್ಲಿ ಎಲ್ಲ ಸದಸ್ಯರ ಎದುರು ಹೇಳಿದ್ದರು.

ಆ ಬಳಿಕ ಆ ಗ್ರಾಮಕ್ಕೆ ಜಂಟಿ ಪಾರ್ಲಿಮೆಂಟ್ ಸಮಿತಿಯ (JPC) ಸದಸ್ಯರು ಭೇಟಿ ಕೊಟ್ಟಿದ್ದರು. ಅಲ್ಲಿಯ ಜಿಲ್ಲಾಧಿಕಾರಿ ಭೇಟಿ ನೀಡಿದ್ದರು. ವಿವಿಧ  ಅಧಿಕಾರಿಗಳು ಗ್ರಾಮಕ್ಕೆ ಹೋಗಿ ಪರಿಶೀಲಿಸಿದ್ದರು. ಆದರೆ ಪಾರ್ಲಿಮೆಂಟಲ್ಲಿ ನಿಂತು ಕಿರಣ್ ರಿಜಿಜು ಹೇಳಿದ್ದು ಅಪ್ಪಟ ಸುಳ್ಳು ಅನ್ನುವುದು  ಪರಿಶೀಲನೆಯಿಂದ ಗೊತ್ತಾಗಿತ್ತು. ಇದನ್ನೇ ಮೊನ್ನೆ ಮಸೂದೆಯ ಮೇಲಿನ ಚರ್ಚೆಯಲ್ಲಿ ಸಂಸದ ಡಿ. ರಾಜ ಅವರು ಕಿರಣ್ ರಿಜಿಜು ಅವರ  ಮುಖಕ್ಕೆ ಮುಖ ಕೊಟ್ಟು ಹೇಳಿದರು.
ನಿಜವಾಗಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಪ್ರಶ್ನಿಸುವುದಕ್ಕೆ ಕೆಲವೊಂದಿಷ್ಟು ಕಾರಣಗಳಿವೆ.

1. ಈ ಹಿಂದಿನ ಕಾಯ್ದೆಯಲ್ಲಿ ವಕ್ಫ್ ಬೈ ಯೂಸರ್ಸ್ ಅನ್ನುವ ನಿಯಮ ಇತ್ತು. ಅದರ ಪ್ರಕಾರ ಸರ್ಕಾರಿ ಭೂಮಿಯಲ್ಲಿ ವರ್ಷಗಳಿಂದ  ಮಸೀದಿ ಅಥವಾ ಕಬರಸ್ತಾನ ಇದ್ದರೆ ಮತ್ತು ಜನರಿಗೆ ಅದರಿಂದ ಭಾರಿ ಪ್ರಯೋಜನ ಆಗುತ್ತಿದ್ದರೆ ಅದನ್ನು ವಕ್ಫ್ ಭೂಮಿ ಎಂದೇ  ಪರಿಗಣಿಸಬಹುದಿತ್ತು. ಹಾಗಂತ, ಈ ಅವಕಾಶ ಕೇವಲ ಮುಸ್ಲಿಮರಿಗೆ ಸಂಬಂಧಿಸಿ ಮಾತ್ರ ಇರುವುದಲ್ಲ. ಇತರ ಎಲ್ಲಾ ಧಾರ್ಮಿಕ  ಟ್ರಸ್ಟ್ ಗಳಿಗೂ, ಸಂಪ್ರದಾಯ ಮತ್ತು ಬಳಕೆಯ ಆಧಾರದ ಮೇಲೆ ಯಾವುದೇ ದಾಖಲೆ ಇಲ್ಲದೆ ಹೀಗೆ ಬಳಸುವ ಅವಕಾಶ ಇತ್ತು. ಸಂವಿಧಾ ನದ ಆರ್ಟಿಕಲ್ 13ರ ಮೂರನೇ ಪರಿಚ್ಛೇದದಲ್ಲಿ ಇದಕ್ಕೆ ಕಾನೂನು ಮಾನ್ಯತೆಯನ್ನು ನೀಡಲಾಗಿದೆ. ಆದರೆ ಇದೀಗ ಮುಸ್ಲಿಮರಿಂದ ಈ  ಅವಕಾಶವನ್ನು ಕಿತ್ತುಕೊಳ್ಳಲಾಗಿದೆ. ಈ ಮೂಲಕ ಸರಕಾರಿ ಜಾಗ ಎಂದು ಹೇಳಿ ನೂರಾರು ವರ್ಷಗಳಿಂದ ಮುಸ್ಲಿಂ ಸಮುದಾಯ ಬಳಸುತ್ತಾ  ಬರುತ್ತಿರುವ ಕಬರಸ್ತಾನ ಮತ್ತು ಮಸೀದಿಯನ್ನು ಏಕಾಏಕಿ ಸರಕಾರಿ ಜಾಗವೆಂದು ಹೇಳಿ ಅದನ್ನು ವಶಕ್ಕೆ ಪಡೆದುಕೊಳ್ಳಲು ಜಿಲ್ಲಾಧಿಕಾರಿಗೆ  ಅವಕಾಶ ಸಿಗಲಿದೆ. ಇದೇ ವೇಳೆ ಇತರ ಸಮುದಾಯಗಳಿಂದ ಈ ಅವಕಾಶವನ್ನು ಕಿತ್ತುಕೊಳ್ಳಲಾಗಿಲ್ಲ.

2. ಈ ಹಿಂದಿನ ಕಾಯ್ದೆಯ ಪ್ರಕಾರ ವಕ್ಫ್ ಆಸ್ತಿಯನ್ನು ಅತಿಕ್ರಮಣ ಮಾಡಿದವರ ವಿರುದ್ಧ ಯಾವಾಗ ಬೇಕಾದರೂ ನ್ಯಾಯಾಲಯಕ್ಕೆ  ದೂರು ಸಲ್ಲಿಸಬಹುದಿತ್ತು. ಆದರೆ ಈ ಹೊಸ ಕಾಯ್ದೆಯಲ್ಲಿ ಇದಕ್ಕೆ ಮಿತಿಯನ್ನು ಹೇರಲಾಗಿದೆ. 12 ವರ್ಷಗಳಿ ಗಿಂತ ಹೆಚ್ಚು ಸಮಯದಿಂದ  ವಕ್ಫ್ ಆಸ್ತಿಯನ್ನು ಅತಿಕ್ರಮಣ ಮಾಡಿ ಅದನ್ನು ಬಳಸುತ್ತಿರುವ ವ್ಯಕ್ತಿಯ ವಿರುದ್ಧ ನ್ಯಾಯಾಲಯಕ್ಕೆ ಹೋಗುವಂತಿಲ್ಲ. 12 ವರ್ಷಗಳ ಒಳಗೆ  ಇಂಥ ಅತಿಕ್ರಮಣ ನಡೆದಿದ್ದರೆ ಮಾತ್ರ ದೂರು ಸಲ್ಲಿಸುವುದಕ್ಕೆ ಅವಕಾಶ ಇದೆ. ಇದು ವಕ್ಫ್ ಭೂಮಿ ಅತಿಕ್ರಮಣಕಾರರಿಗೆ ಭಾರೀ  ಪ್ರಯೋಜನವನ್ನು ನೀಡಲಿದೆ. ಈ ದೇಶದಲ್ಲಿ 15, 20, 30, 40, 50... ಹೀಗೆ ಹಲವು ವರ್ಷಗಳಿಂದ ವಕ್ಫ್ ಭೂಮಿಯನ್ನು ಅತಿಕ್ರಮಿಸಿ  ಅದರಲ್ಲಿ ಬಂಗಲೆ ಕಟ್ಟಿದವರು, ಹೋಟೆಲ್ ಕಟ್ಟಿದವರು, ವಿವಿಧ ಫ್ಲಾಟ್ ಗಳನ್ನು  ಕಟ್ಟಿದವರು ಇದ್ದಾರೆ. ಅವರೆಲ್ಲರನ್ನೂ ಈ ಕಾಯ್ದೆ  ಸುರಕ್ಷಿತಗೊಳಿಸುತ್ತದೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಯಾವುದೇ ಅವಕಾಶವನ್ನೂ ಇಲ್ಲದಂತೆ ಮಾಡುತ್ತದೆ. ಇದೇ  ವೇಳೆ, ಇತರ ಧರ್ಮಗಳ ಧಾರ್ಮಿಕ ಟ್ರಸ್ಟ್ ಗಳಿಗೆ ಇಂಥದ್ದೊಂದು  ಕಾನೂನೇ ಇಲ್ಲ. ಅವರು ಯಾವಾಗ ಬೇಕಾದರೂ ನ್ಯಾಯಾಲಯಕ್ಕೆ  ಹೋಗಬಹುದು.

3. ನೀವೀಗ ವಕ್ಫ್ ಬೈ ಯೂಸರ್ಸ್ ಮತ್ತು ಈ 12 ವರ್ಷಗಳ ಬಳಿಕ ಕೇಸು ದಾಖಲಿಸುವಂತಿಲ್ಲ ಎಂಬ ಕಾನೂನನ್ನು ಒಟ್ಟಿಗೆ ಓದಿದರೆ  ಮುಸ್ಲಿಮ್ ಸಮುದಾಯದಿಂದ ಸಾವಿರಾರು ಎಕರೆ ಭೂಮಿ ಕೈ ತಪ್ಪುವುದು ನಿಶ್ಚಿತ ಅನ್ನುವುದು ಸ್ಪಷ್ಟವಾಗುತ್ತದೆ.

4. ವಕ್ಫ್ ಮಂಡಳಿಗೆ ಇಬ್ಬರು ಮುಸ್ಲಿಮೇತರನ್ನು ಸೇರಿಸುವುದು ಈ ತಿದ್ದುಪಡಿ ಮಸೂದೆಯ ಇನ್ನೊಂದು ನಿಯಮ. ಆದರೆ ಹಿಂದೂ  ಸಹಿತ ಇನ್ನಾವುದೇ ಧಾರ್ಮಿಕ ಸಂಸ್ಥೆಗಳು ಮತ್ತು ಮಂಡಳಿಗಳಿಗೆ ಇಂತಹ ನಿಯಮ ಇಲ್ಲವೇ ಇಲ್ಲ. ಕನಿಷ್ಠ ರಾಮ ಜನ್ಮಭೂಮಿ ಟ್ರಸ್ಟಿಗೆ  ಇಬ್ಬರು ಮುಸ್ಲಿಮರನ್ನು ಸೇರಿಸುವ ಯಾವುದೇ ಪ್ರಾವಿಷನ್ ಕೂಡ ಇಲ್ಲ. ಎಲ್ಲಿಯವರೆಗೆ ಎಂದರೆ ರಾಮಜನ್ಮ ಭೂಮಿ ಟ್ರಸ್ಟ್ ನ  ಸಭೆಯಲ್ಲಿ  ಸ್ಥಳೀಯ ಜಿಲ್ಲಾಧಿಕಾರಿ ಇರಬೇಕಾಗುತ್ತದೆ. ಆದರೆ ಆತ ಕೂಡ ಹಿಂದುವೇ ಆಗಿರಬೇಕು ಅನ್ನುವ ನಿಯಮ ಮಾಡಲಾಗಿದೆ. ಅಲ್ಲದೇ ತಿರುಪತಿ ತಿರುಮಲ ದೇವಸ್ಥಾನದ ಟ್ರಸ್ಟ್ ನ ಸದಸ್ಯರು ಬಿಡಿ, ಗುಡಿಸುವವರೂ ಹಿಂದೂಗಳೇ ಆಗಿರಬೇಕು ಎಂಬ ನಿಯಮ ಇದೆ. ಆದರೆ, ಇದರ ಬಗ್ಗೆ ಕೇಂದ್ರ ಸರ್ಕಾರ ಗಾಢ ಮೌನವನ್ನು ತಾಳಿದೆ. ಅಂದಹಾಗೆ,

ನಿಮಗೆ ಗೊತ್ತಿರಲಿ. ವಕ್ಫ್ ಆಸ್ತಿಗಳು ಸಾರ್ವಜನಿಕ ಸ್ವತ್ತಲ್ಲ. ಅದು ಖಾಸಗಿ ಸ್ವತ್ತು.  ವಕ್ಫ್ ಮಾಡಿದ ಸ್ವತ್ತನ್ನು ಮಾರಾಟ ಮಾಡುವಂತಿಲ್ಲ.  ವಕ್ಫ್ ಮಂಡಳಿ ಈ ಆಸ್ತಿಗಳ ದಣಿಯೂ ಅಲ್ಲ. ಅದು ರೆಗುಲೇಟರಿ ಬಾಡಿ. ವಕ್ಫ್ ಆಸ್ತಿಗಳ ನಿರ್ವಹಣೆಯಷ್ಟೇ ಅದರ ಕೆಲಸ.  ನಾವು ಹೇಗೆ ಕಂದಾಯ ಇಲಾಖೆಯಲ್ಲಿ ನಮ್ಮ ಆಸ್ತಿಯನ್ನು ನೋಂದಾಯಿಸುತ್ತೇವೆಯೋ ಹಾಗೆಯೇ ವಕ್ಫ್ ಮಾಡಲಾದ ಆಸ್ತಿಯನ್ನು ಈ ಮಂಡಳಿಯಲ್ಲಿ ನೋಂದಾಯಿಸಬೇಕು. ಅದು ಕಚೇರಿಯ ಹಾಗೆ ಕೆಲಸ ನಿರ್ವಹಿಸುತ್ತದೆ. ಮಸೀದಿಗಳೇ ವಕ್ಫ್ ಆಸ್ತಿಯ ಧಣಿಗಳು. ಆದರೆ ಈ ಆಸ್ತಿಯ ಫಲಾನುಭವಿಗಳು ಮುಸ್ಲಿಮರೇ ಆಗಬೇಕೆಂದಿಲ್ಲ.  ಉದಾಹರಣೆಗೆ ಓರ್ವ ವ್ಯಕ್ತಿ ತನ್ನ ಭೂಮಿಯ ಒಂದು ಭಾಗವನ್ನು ಮಸೀದಿಗೆ ವಕ್ಫ್ ಮಾಡುವಾಗ ಇದರಲ್ಲಿ ಒಂದು ಬಾವಿಯನ್ನು ಕೊರೆದು ಧರ್ಮಭೇದವಿಲ್ಲದೆ ಎಲ್ಲರಿಗೂ ನೀರು ಒದಗಿಸಬೇಕು ಎಂಬ ಶರತ್ತನ್ನು ವಿಧಿಸಿದರೆ ಹಾಗೆ ನಡಕೊಳ್ಳಬೇಕಾದುದು ಆ ಮಸೀದಿಯ ಹೊಣೆಗಾರಿಕೆ. ಅದನ್ನು ಬದಲಿಸಲು ಆಗದು. ಆದರೆ ಈ ಆಸ್ತಿ ಸಾರ್ವಜನಿಕ ಅಲ್ಲ. ಅದರ ಫಲಾನುಭವಿಗಳಷ್ಟೇ ಸಾರ್ವಜನಿಕರು. 

 ನಮ್ಮಲ್ಲಿ ಮುಜರಾಯಿ ಇಲಾಖೆ ಇದೆ. ವಕ್ಫ್ ಮಂಡಳಿ ಎಂಬುದು ಬಹುತೇಕ ಈ ಮುಜರಾಯಿ ಇಲಾಖೆಯನ್ನೇ ಹೋಲುತ್ತದೆ. ಈ ಮುಜರಾಯಿ ಇಲಾಖೆಯ ಚೇರ್ಮನ್ ಜಿಲ್ಲಾಧಿಕಾರಿ ಆಗಿರಬೇಕು ಮತ್ತು ಅವರು ಹಿಂದುವೇ ಆಗಿರಬೇಕು ಎಂಬ ನಿಯಮ ಇದೆ. ಈ ನಿಯಮವನ್ನು ಬದಲಿಸದ  ಸರ್ಕಾರವು ವಕ್ಫ್ ಇಲಾಖೆಯಲ್ಲಿ ಇಬ್ಬರೂ ಮುಸ್ಲಿಮೇತರರು ಕಡ್ಡಾಯವಾಗಿ ಇರಲೇಬೇಕು ಎಂದು ನಿಯಮ ಮಾಡಿರುವುದು ಏಕೆ? ಕನಿಷ್ಠ ಮುಜರಾಯಿ ಇಲಾಖೆಯಲ್ಲಿ ಈ ತಿದ್ದುಪಡಿಯನ್ನು ಮೊದಲಾಗಿ ತಂದು ಸಾರ್ವಜನಿಕರ ವಿಶ್ವಾಸವನ್ನು ಗಳಿಸಿಕೊಂಡು ಆ ಬಳಿಕ ವಕ್ಫ್ ಇಲಾಖೆಯಲ್ಲಿ ಇಂಥದ್ದೊಂದು ಪರಿವರ್ತನೆ ತರಬಹುದಿತ್ತಲ್ಲವೇ?  ಮುಸ್ಲಿಮರಿಗೆ ಸಂಬಂಧಿಸಿದ ಖಾಸಗಿ ಆಸ್ತಿಯನ್ನು ನಿರ್ವಹಿಸುವುದಕ್ಕೂ ಮುಸ್ಲಿಮರಿಗೆ ಬಿಡದೆ ಅದರಲ್ಲೂ ಮುಸ್ಲಿಮೇತರರು ಇರಬೇಕು ಎಂದು ನಿಯಮ ಮಾಡುವುದು ಮತ್ತು  ಮುಸ್ಲಿಮರ ಹಿತರಕ್ಷಣೆಗಾಗಿಯೇ ಇದನ್ನು ಮಾಡುತ್ತಿದ್ದೇವೆ ಎಂದು  ಸಮರ್ಥಿಸಿಕೊಳ್ಳುವುದೆಲ್ಲ ಎಷ್ಟು ಸರಿ? ಒಂದು ದೇಶ ಒಂದೇ ಕಾನೂನು ಎಂದು  ವಾದಿಸುವ ಸರ್ಕಾರವೇ ಹೀಗೆ ಮಾಡಿದರೆ ಹೇಗೆ?

5. ತಮಾಷೆ ಏನಂದರೆ, ವಕ್ಫ್ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರರು ಇರಬೇಕು ಎಂದು ನಿಯಮ ಮಾಡಿರುವ ಇದೇ ಸರ್ಕಾರ, ತನ್ನ  ಆಸ್ತಿಯನ್ನು ವಕ್ಫ್ ಗೆ  ಬರೆದುಕೊಡುವ ವ್ಯಕ್ತಿ ಪ್ರಾಕ್ಟಿಸಿಂಗ್ ಮುಸ್ಲಿಮ್ ಆಗಿರಬೇಕು ಎಂಬ ನಿಯಮವನ್ನೂ ಮಾಡಿದೆ. ಅಂದರೆ ಕನಿಷ್ಠ ಐದು  ವರ್ಷಗಳಿಂದ ತಾನು ಇಸ್ಲಾಮ್‌ನಂತೆ ಬದುಕುತ್ತಾ ಇದ್ದೇನೆ ಅನ್ನುವ ಸರ್ಟಿಫಿಕೇಟ್ ಅನ್ನು ಆತ  ತೋರಿಸಬೇಕಾಗುತ್ತದೆ.  ಅಂದರೆ ಮುಸ್ಲಿಮೇತರರು ವಕ್ಫ್ ಮಾಡಬಾರದು ಎಂಬುದು ಇದರ ಉದ್ದೇಶ. ಆದರೆ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರು ಬೇಕು  ಎಂದು ಇದೇ ಸರಕಾರ ನಿಯಮವನ್ನು ಮಾಡಿದೆ. ಹಾಗಂತ, ಹಿಂದೂ ಮಂದಿರಕ್ಕೆ ಓರ್ವ ಮುಸ್ಲಿಂ ವ್ಯಕ್ತಿ ತನ್ನ ಭೂಮಿಯನ್ನು ದಾನ ಮಾಡಬೇಕು ಎಂದು ಬಯಸಿದರೆ ಅದಕ್ಕೆ ಯಾವ ಅಡ್ಡಿಯೂ ಇಲ್ಲ. ಮುಸ್ಲಿಂ ಬಿಡಿ, ಹಿಂದೂ ವ್ಯಕ್ತಿ ಹಿಂದೂ ಮಂದಿರಕ್ಕೆ ತನ್ನ ಭೂಮಿಯನ್ನು ದಾನ ಮಾಡಬೇಕಾದರೆ ಆತನಿಗೂ ಯಾವ ಅಡ್ಡಿಯೂ ಇಲ್ಲ. ಮುಸ್ಲಿಮರಂತೆ ಆತ ಐದು ವರ್ಷಗಳ ಕಾಲ ಪ್ರಾಕ್ಟಿಸಿಂಗ್ ಹಿಂದೂ ಆಗಿರಬೇಕು ಎಂಬ ಸರ್ಟಿಫಿಕೇಟ್ ಒಪ್ಪಿಸಬೇಕಾಗಿಲ್ಲ.  ಈ ದ್ವಂದ್ವಕ್ಕೆ ಏನೆನ್ನಬೇಕು?

6. ಈ ಹಿಂದಿನ ಕಾಯ್ದೆಯ ಪ್ರಕಾರ ವಕ್ಫ್ ಮಂಡಳಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಕ್ಕೆ ಅವಕಾಶ ಇತ್ತು. ಆದರೆ ಈ  ಮಸೂದೆಯಲ್ಲಿ ರಾಜ್ಯ ಸರಕಾರದಿಂದ ಲೆಕ್ಕಪರಿಶೋಧನೆಗೆ ಒಳಪಡಿಸುವ ನಿಯಮವಿದೆ. ಇದರಿಂದಾಗಿ ವಕ್ಫ್ ಮಂಡಳಿಗಳ ಸ್ವಾತಂತ್ರ‍್ಯ  ಕಡಿಮೆಯಾಗಿ ಸರಕಾರಿ ಹಸ್ತಕ್ಷೇಪ ಹೆಚ್ಚಾಗಲಿದೆ. ಅಲ್ಲದೆ ವಕ್ಫ್ ಆಸ್ತಿಗಳ ಸರ್ವೆ ಮತ್ತು ವಿವಾದಗಳ ನಿರ್ವಹಣೆಯ ಜವಾಬ್ದಾರಿಯನ್ನು ಈ  ಮಸೂದೆಯಲ್ಲಿ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಈ ಹಿಂದಿನ ಕಾಯ್ದೆಯ ಪ್ರಕಾರ, ಈ ವಿವಾದವನ್ನು ವಕ್ಫ್ ನ್ಯಾಯ ಮಂಡಳಿಗಳು  ಪರಿಹರಿಸುತ್ತಿದ್ದವು. ಇದೀಗ ಈ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಿರುವುದರಿಂದ ನ್ಯಾಯ ಮಂಡಳಿಗಳ ಅಧಿಕಾರ ಮೊಟಕುಗೊಳ್ಳಲಿದೆ.  ಜಿಲ್ಲಾಧಿಕಾರಿಯವರು ಪರಿಶೀಲಿಸಿದ ನಂತರವೇ ನ್ಯಾಯಾಲಯಕ್ಕೆ ಹೋಗಬೇಕು ಎಂಬ ಹೊಸ ನಿಯಮವನ್ನು ಈ ಮಸೂದೆಯ  ಮೂಲಕ ಮಾಡಲಾಗಿದೆ. ಇದರಿಂದಾಗಿ ನ್ಯಾಯ ಮಂಡಳಿಗಳು ಇದ್ದೂ ಇಲ್ಲದಂತಹ ಪರಿಸ್ಥಿತಿ ಉಂಟಾಗಬಹುದು.

7. ಇನ್ನು ಮುಂದೆ ಕೇಂದ್ರ ಸರ್ಕಾರದ ವಕ್ಫ್ ಖಾತೆಯ ಸಚಿವರೇ ಕೇಂದ್ರ ವಕ್ಫ್ ಮಂಡಳಿಯ ಚೇರ್ಮನ್ ಆಗಿರುತ್ತಾರೆ. ಉದಾಹರಣೆಗೆ, ಈ ಬಾರಿ  ಕೇಂದ್ರ ಸಚಿವ ಕಿರಣ್ ರಿಜಿಜು ವಕ್ಫ್ ಮಂಡಳಿಯ ಚೇರ್ಮನ್ ಆಗುತ್ತಾರೆ. ಇದರಿಂದ ನೇರ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಮತ್ತು ಕೇಂದ್ರದಲ್ಲಿ ಯಾವ ಸರ್ಕಾರ ಇರುತ್ತದೋ ಅದರ ಮರ್ಜಿಯಂತೆ ವಕ್ಫ್ ಮಂಡಳಿ ನಡಕೊಳ್ಳಬೇಕಾಗುತ್ತದೆ. 

8. ಈಗಿನ ಮಸೂದೆಯ ಪ್ರಕಾರ ಕೇಂದ್ರ ವಕ್ಫ್ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರು, ಇಬ್ಬರು ಮಹಿಳಾ ಸದಸ್ಯರು ಇಬ್ಬರು  ಲೋಕಸಭಾ ಸದಸ್ಯರು ಮತ್ತು ಒಬ್ಬರು ರಾಜ್ಯಸಭಾ ಸದಸ್ಯರು ಇರುತ್ತಾರೆ. ಅಲ್ಲದೆ, ಓರ್ವ ಆರ್ಥಿಕ ತಜ್ಞ, ಓರ್ವ ಕಾನೂನು ತಜ್ಞ, ಓರ್ವ ಆರೋಗ್ಯ ತಜ್ಞ ಮತ್ತು ಓರ್ವ ಎಂಜಿನಿಯರ್ ಇರುತ್ತಾರೆ. ಹಾಗೆಯೇ.  ಮುಸ್ಲಿಮ್ ಸಂಘಟನೆಗಳ ಪ್ರತಿನಿಧಿಗಳು, ಶಿಯಾ ಮತ್ತು  ಸುನ್ನಿ, ಪ್ರತಿನಿಧಿಗಳು ಮುಂತಾದವರು ಇರುತ್ತಾರೆ. ಒಟ್ಟು 20 ರಿಂದ 22 ಮಂದಿ ಸದಸ್ಯರು ಇರುತ್ತಾರೆ ಎಂದು  ಅಂದುಕೊಳ್ಳಲಾಗಿದೆ. ಒಟ್ಟಾರೆಯಾಗಿ ನೋಡುವುದಾದರೆ ಇಡೀ ಮಂಡಳಿ ಕೇಂದ್ರ ಸರಕಾರದ ಮುಷ್ಟಿಗೆ ಬರುವಂತೆ ಕಾನೂನನ್ನು  ರಚಿಸಲಾಗಿದೆ. ರಾಜ್ಯ ವಕ್ಫ್ ಮಂಡಳಿಗೂ ಬಹುತೇಕ ಇವೇ ನಿಯಮಗಳು ಅನ್ವಯಿಸುತ್ತವೆ.

9. ಸೆಕ್ಷನ್ 40ನ್ನು ಈಗಿನ ತಿದ್ದುಪಡಿಯಲ್ಲಿ ಕಿತ್ತು ಹಾಕಲಾಗಿದೆ. ಈ ಸೆಕ್ಷನ್ 40 ಏನಂದರೆ, ಒಂದು ಸಂಸ್ಥೆಯ ಅಧೀನದಲ್ಲೋ ಸೊಸೈಟಿಯ  ಅಧೀನದಲ್ಲೊ ಮಸೀದಿ, ಕಬರ್‌ಸ್ತಾನಗಳು ಇದ್ದು ಅದು ಇನ್ನೂ ವಕ್ಫ್ ಆಗಿ ರಿಜಿಸ್ಟ್ರೇಷನ್ ಆಗಿಲ್ಲದೆ ಇದ್ದರೆ ಆ ಬಗ್ಗೆ ಆ ಸಂಸ್ಥೆಗೆ ಮತ್ತು  ಸೊಸೈಟಿಗೆ ನೋಟಿಸು ಕಳುಹಿಸುವ ಅಧಿಕಾರ ವಕ್ಫ್ ಮಂಡ ಳಿಗೆ ಇದೆ. ನೀವು ಯಾಕೆ ಇದನ್ನು ರಿಜಿಸ್ಟ್ರೆಷನ್ ಮಾಡಿಲ್ಲ ಎಂದು ವಕ್ಫ್  ಬೋರ್ಡ್ ಅಂತಹ ಸೊಸೈಟಿ ಮತ್ತು ಸಂಸ್ಥೆಗಳಗೆ ನೋಟಿಸು ಕಳುಹಿಸಬಹುದು. ಅವರು ರಿಜಿಸ್ಟ್ರೇಷನ್ ಮಾಡದೆ ಇದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವೂ ಮಂಡಳಿಗೆ ಇದೆ. ಈಗ ಅದನ್ನು ತೆಗೆದು ಹಾಕಲಾಗಿದೆ. ಈ ಮೂಲಕ ಯಾವುದೇ ಸೊಸೈಟಿ,  ಸಂಸ್ಥೆಗಳು ವಕ್ಫ್ ಮಂಡಳಿಯ ಕಾನೂನು ವ್ಯಾಪ್ತಿಯಿಂದ ಹೊರಗೆ ನಿಲ್ಲುತ್ತದೆ ಮತ್ತು ಮಸೀದಿಗಳು, ಕಬರಸ್ತಾನಗಳೆಲ್ಲ ವೈಯಕ್ತಿಕವಾಗಿ  ಪರಿಗಣಿಸುವುದಕ್ಕೆ ಅವಕಾಶ ಒದಗುತ್ತದೆ. ಈ ಮೂಲಕ ಮಂಡಳಿಯನ್ನು ಹಲ್ಲಿಲ್ಲದ ಹಾವಾಗಿ ಮಾರ್ಪಡಿಸಲಾಗಿದೆ. ವಕ್ಫ್ ವ್ಯವಸ್ಥೆಯನ್ನೇ  ಈ ಮೂಲಕ ನಾಶಮಾಡುವ ಸಂಚು ನಡೆಯುತ್ತಿದೆ. ಯಾವಾಗ ಸಂಸ್ಥೆಗಳು ಮತ್ತು ಸೊಸೈಟಿಗಳು ಮಸೀದಿಯನ್ನು ಮತ್ತು ಕಬರಸ್ತಾನವನ್ನು  ನಿರ್ವಹಿಸುವುದಕ್ಕೆ ಮುಂದಾಗುತ್ತವೆಯೋ ವಕ್ಫ್ ಆಸ್ತಿ ಎಂಬುದೇ ನಿಧಾನಕ್ಕೆ ಇಲ್ಲವಾಗುತ್ತಾ ಬರುತ್ತದೆ ಮತ್ತು ವಕ್ಫ್ನ ಅಸ್ತಿತ್ವವೇ ಕೊನೆಗೊಳ್ಳುತ್ತದೆ. ಅಲ್ಲದೆ, ವಕ್ಫ್ ಆಸ್ತಿಯನ್ನು ಯಾವ ಕಾರಣಕ್ಕೂ ಮಾರಾಟ ಮಾಡಲು ಆಗುವುದಿಲ್ಲ. ಆದರೆ ಟ್ರಸ್ಟ್ ನ ಅಧೀನದಲ್ಲಿರುವ ಆಸ್ತಿಯನ್ನು ಮಾರಾಟ ಮಾಡಲು ಅವಕಾಶ ಇರುತ್ತದೆ. ಮಾರಾಟ ಮಾಡಬಾರದೆಂದು ಬೈಲಾ ಮಾಡಬಹುದಾದರೂ ವಕ್ಫ್ ನಂತೆ ಅದು ಬಲಶಾಲಿಯಲ್ಲ. 

೧೦. ಈ ಹಿಂದಿನ ಕಾಯ್ದೆಯಂತೆ ವಕ್ಫ್ ಮಂಡಳಿಯ ಚೇರ್ಮನ್ ಅನ್ನು ಪ್ರಜಾತಾಂತ್ರಿಕವಾಗಿ ಆಯ್ಕೆ ಮಾಡಲಾಗುತ್ತಿತ್ತು. ಯಾರಿಗೆ ಹೆಚ್ಚು ಮತ ಸಿಗುತ್ತೋ ಅವರೇ ಚೇರ್ಮನ್. ಈಗಿನ ಕಾಯ್ದೆಯಲ್ಲಿ ಈ ಪ್ರಜಾತಾಂತ್ರಿಕ ವಿಧಾನವನ್ನೇ ಕೊನೆಗೊಳಿಸಲಾಗಿದೆ. ಚೇರ್ಮನ್ ಸಹಿತ ಎಲ್ಲ ೨೨ ಮಂದಿಯನ್ನೂ  ಕೇಂದ್ರ ಸರ್ಕಾರವೇ ನೇಮಕ ಮಾಡುತ್ತದೆ. ಮುಸ್ಲಿಂ ಸಂಘಟನೆಗಳಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದೂ ಕೇಂದ್ರ ಸರ್ಕಾರವೇ. ಹೀಗಿರುವಾಗ ತಾನು ಹೇಳಿದಂತೆ ಕೇಳುವವರನ್ನೇ ಕೇಂದ್ರ ಸರ್ಕಾರ ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ. 

ಅಂದಹಾಗೆ, ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತವಾಗುತ್ತಿರುವುದು ಇವೇ  ಕಾರಣಕ್ಕೆ.