Monday, November 25, 2024

ಹೈದರಾಬಾದ್: ಸಮಾವೇಶದ ಯಶಸ್ಸಿಗೆ ಕಾರಣವಾದ 7 ಅಂಶಗಳು






1. ನೀರು
2. ಶೌಚಾಲಯ
3. ಮೊಬೈಲ್ ಚಾರ್ಜಿಂಗ್
4. ಆಹಾರ ವೈವಿಧ್ಯತೆ
5. ಸಭಾಂಗಣ
6. ಆರೋಗ್ಯ ವ್ಯವಸ್ಥೆ
7. ನಿರ್ವಹಣಾ ತಂಡ
ಸಾವಿರಾರು ಮಂದಿಯನ್ನು ಸೇರಿಸಿ ಮೂರ‍್ನಾಲ್ಕು ದಿನಗಳ ಕಾಲ ನಡೆಸುವ ಯಾವುದೇ ಸಮಾವೇಶದ ಯಶಸ್ಸು ಈ ಮೇಲಿನ 7 ವಿಷಯಗಳನ್ನು ಅವಲಂಬಿ ಸಿರುತ್ತದೆ. ಹತ್ತಿಪ್ಪತ್ತು ಮಂದಿ ಒಂದು ಕಡೆ ಸೇರಿ ಮೂರ‍್ನಾಲ್ಕು ದಿನಗಳ ಕಾಲ ಸಭೆ  ನಡೆಸುವಾಗ ಎದುರಾಗುವ ಸವಾಲುಗಳಿಗೂ 20ರಿಂದ 25 ಸಾವಿರ ಮಂದಿ ಒಂದು ಕಡೆ ಸೇರಿ ಇಂಥದ್ದೇ  ಸಭೆ  ನಡೆಸುವಾಗ ಎದುರಾಗುವ ಸವಾಲುಗಳಿಗೂ ಭೂಮಿ-ಆಕಾಶದಷ್ಟು ಅಂತರವಿರುತ್ತದೆ. ಈ ದೇಶದಲ್ಲಿ 28 ರಾಜ್ಯಗಳು ಮತ್ತು  8 ಕೇಂದ್ರಾಡಳಿತ ಪ್ರದೇಶಗಳಿವೆ. ಭಾಷೆಗಳಾದರೋ ನೂರಾರು. ಕರ್ನಾಟಕದ ಕರಾವಳಿ ಭಾಗದ ಜನರು ಆಡುವ ಮನೆಭಾಷೆ ಬೆಂಗಳೂರಿಗರಿಗೆ ಅರ್ಥವೇ ಆಗುವುದಿಲ್ಲ. ಇದು ಒಂದು ರಾಜ್ಯದ ಒಳಗಿನ ಸ್ಥಿತಿ. ಹೀಗಿರುವಾಗ, 28 ರಾಜ್ಯಗಳಲ್ಲಿ  ಅಸ್ತಿತ್ವದಲ್ಲಿರಬಹುದಾದ ಭಾಷಾ ವೈವಿಧ್ಯತೆ ಹೇಗಿರಬಹುದು? ನಾಗಾಲ್ಯಾಂಡ್, ಒಡಿಸ್ಸಾ, ಜಾರ್ಖಂಡ್, ತ್ರಿಪುರ, ಮಣಿಪುರದಂಥ ರಾಜ್ಯಗಳಿಂದ ಬಂದವರು ಮತ್ತು ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿಗಳಿಂದ ಬಂದವರು ಪರಸ್ಪರ  ಒಂದೇ ಚಪ್ಪರದಡಿಯಲ್ಲಿ ಎದುರು-ಬದುರಾದಾಗ ಏನೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳಬಹುದು? ನಿಜವಾಗಿ,

ಈ ಡಿಜಿಟಲ್ ಯುಗದಲ್ಲಿ ಸಾವಿರಾರು ಮಂದಿಯನ್ನು ಒಂದೇ ಕಡೆ ಸೇರಿಸಿ ಮರ‍್ನಾಲ್ಕು ದಿನಗಳ ಕಾಲ ಸಭೆ ನಡೆಸುವ  ಅಗತ್ಯ ಏನಿದೆ ಎಂಬ ಪ್ರಶ್ನೆಯನ್ನು ಕೆಲವರು ಎಸೆದು ಬಿಡುವುದಿದೆ. ತಂತ್ರಜ್ಞಾನದ ಈ ಯುಗದಲ್ಲಿ ಓಬಿರಾಯನ ಕಾಲದ  ಸಂಪ್ರದಾಯಕ್ಕೆ ಇನ್ನೂ ಜೋತು ಬೀಳುವುದೇಕೆ ಎಂದೂ ಪ್ರಶ್ನಿಸುವವರಿದ್ದಾರೆ. ಹೀಗೆ ಸಭೆ ಸೇರುವುದರಿಂದ ಸಮಯ  ಹಾಳಾಗುತ್ತದೆ, ದುಬಾರಿ ಖರ್ಚಾಗುತ್ತದೆ, ನೀರು ಪೋಲಾಗುತ್ತದೆ ಎಂದು ಹೇಳುವವರಿದ್ದಾರೆ ಮತ್ತು ಆನ್‌ಲೈನ್ ಮೂಲಕ  ಇಂಥ ಸಭೆಗಳನ್ನು ನಡೆಸುವುದೇ ಬುದ್ಧಿವಂತಿಕೆ ಎಂಬ ಉಪದೇಶ ನೀಡುವವರೂ ಇದ್ದಾರೆ. ಆದರೆ,

ಇದೊಂದು ರಮ್ಯ ವಾದವೇ ಹೊರತು ಆಫ್‌ಲೈನ್ ಸಭೆಗೂ ಆನ್‌ಲೈನ್ ಸಭೆಗೂ ನಡುವೆ ಹತ್ತಾರು ವ್ಯತ್ಯಾಸಗಳಿವೆ.  ಸಾವಿರಾರು ಮಂದಿ ಒಂದು ಕಡೆ ಸೇರುವುದೆಂದರೆ ಅದು ಬರೇ ಭೌತಿಕ ಸಮಾಗಮವಷ್ಟೇ ಆಗಿರುವುದಿಲ್ಲ. ಅಲ್ಲೊಂದು   ಭಾವನಾತ್ಮಕ ಸಂಬಂಧ ಏರ್ಪಡುತ್ತದೆ. ಒಡಿಸ್ಸಾದ ಓರ್ವ ವ್ಯಕ್ತಿ ದಕ್ಷಿಣ ಭಾರತದ ಇನ್ನೊಂದು ಮೂಲೆಯ ವ್ಯಕ್ತಿಯೊಂದಿಗೆ  ಸಂಭಾಷಣೆ ನಡೆಸುತ್ತಾರೆ. ಭಾಷಾ ವೈವಿಧ್ಯತೆಗಳು ಅವರ ನಡುವೆ ಹಂಚಿಕೆಯಾಗುತ್ತದೆ. ಬದುಕು, ಭಾವ, ಕೌಟುಂಬಿಕ  ಸಂಗತಿಗಳು, ಉದ್ಯೋಗ, ಆರೋಗ್ಯ ಇತ್ಯಾದಿಗಳು ಪ್ರಸ್ತಾಪಕ್ಕೆ ಬರುತ್ತವೆ. ಆ ಇಬ್ಬರಲ್ಲಿ ಒಬ್ಬರು ಒಳ್ಳೆಯ ವ್ಯಾ ಪಾರಿಯಾಗಿರಬಹುದು, ಶಿಕ್ಷಕ/ಕಿಯಾಗಿರಬಹುದು, ಕಂಪೆನಿಯ ಒಡೆಯರಾಗಿರಬಹುದು, ವೈದ್ಯರೋ ಇಂಜಿನಿಯರೋ  ದಾದಿಯೋ ರಿಕ್ಷಾ ಚಾಲಕರೋ ಇನ್ನೇನೋ ಆಗಿರಬಹುದು. ಅದೇವೇಳೆ, ಇನ್ನೊಬ್ಬರು ಧಾರ್ಮಿಕ ವಿದ್ವಾಂಸರೋ ವಿದೇಶಿ  ಉದ್ಯೋಗಿಯೋ ಸಂಶೋಧನಾ ವಿದ್ಯಾರ್ಥಿಯೋ ಹೋರಾಟಗಾರರೋ ರಾಜಕಾರಣಿಯೋ ಕೂಲಿ ಕಾರ್ಮಿಕರೋ  ಅಥವಾ ರೈತರೋ ಇನ್ನೇನೋ ಆಗಿರಬಹುದು. ಇಂಥ ಭಿನ್ನ ಭಿನ್ನ ಅಭಿರುಚಿಯುಳ್ಳವರು ಮತ್ತು ಬೇರೆ ಬೇರೆ ಕ್ಷೇತ್ರಗಳಲ್ಲಿ  ದುಡಿಯುತ್ತಿರುವವರು ಪರಸ್ಪರ ಒಂದೇ ಕಡೆ ಸೇರಿ ಅಭಿಪ್ರಾಯ ವಿನಿಮಯ ಮಾಡುವುದೆಂದರೆ ಅದು ಹತ್ತು ಹಲವು  ಸಾಧ್ಯತೆಗಳನ್ನು ತೆರೆದಿಡುತ್ತದೆ. ರೈತರಿಗೆ ಆ ಭೇಟಿಯಿಂದ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಐಡಿಯಾ  ಸಿಗಬಹುದು. ರಿಕ್ಷಾ ಚಾಲಕ ತನ್ನ ಮಗನಿಗೆ ವಿದೇಶದಲ್ಲಿ ಉದ್ಯೋಗ ಪಡೆದುಕೊಳ್ಳುವಂತೆ ಮಾಡುವುದಕ್ಕೆ ಸೂಕ್ತ  ಮಾರ್ಗದರ್ಶನ ಸಿಗಬಹುದು. ವಿದ್ವಾಂಸರ ಬೋಧನೆಯಿಂದ ವ್ಯಾಪಾರಿಗೆ ತನ್ನ ವ್ಯಾಪಾರದಲ್ಲಿ ಇನ್ನಷ್ಟು ಸೂಕ್ಷ್ಮತೆಯನ್ನು  ಪಾಲಿಸಲು ನೆರವಾಗಬಹುದು. ಅಂದರೆ,

ಜನರು ಭೌತಿಕವಾಗಿ ಒಂದು ಕಡೆ ಸೇರುವುದೆಂದರೆ, ಅಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಷ್ಟೇ ಆಗಿರುವು  ದಿಲ್ಲ. ಅಲ್ಲೊಂದು  ಸಂವಹನ ಏರ್ಪಡುತ್ತದೆ, ಸಂಬಂಧ ಸೃಷ್ಟಿಯಾಗುತ್ತದೆ. ಸಭೆ ಮುಗಿದು ಊರಿಗೆ ಹಿಂತಿರುಗಿದ ಬಳಿಕವೂ  ಸಂಪರ್ಕದಲ್ಲಿರುವುದಕ್ಕೆ ಬೇಕಾದ ಸನ್ನಿವೇಶ ನಿರ್ಮಾಣ ವಾಗುತ್ತದೆ. ಆದರೆ, ಇಂಥ ಯಾವ ಸಾಧ್ಯತೆಗಳೂ ಆನ್‌ಲೈನ್  ಸಭೆಯಿಂದ ಸಾಧ್ಯವಿಲ್ಲ. ಅಂದಹಾಗೆ,

ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ನೀರು, ಆಹಾರ ಮತ್ತು ಶೌಚಾಲಯ ಮುಖ್ಯವಾಗುತ್ತದೆ. ಸಾವಿರಾರು ಮಂದಿ ಸೇರಿ  ಮೂರ‍್ನಾಲ್ಕು ದಿನಗಳ ಕಾಲ ತಂಗುವ ಸಮಾವೇಶಗಳಲ್ಲಂತೂ ಇವು ಸಮಾವೇಶದ ಯಶಸ್ಸನ್ನು ನಿರ್ಧರಿಸುವಷ್ಟು  ಆದ್ಯತೆಯನ್ನು ಪಡೆಯುತ್ತದೆ. ಈ ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಆಹಾರ ಕ್ರಮಗಳಿವೆ. ಕರಾವಳಿಯ ಇಡ್ಲಿ-ಸಾಂಬಾರ್,  ಕುಚಲಕ್ಕಿ ಊಟ, ನೀರ್‌ದೋಸೆಗಳು ಮಧ್ಯಪ್ರದೇಶ, ಹರ್ಯಾಣ, ಪಂಜಾಬಿ ನಾಗರಿಕರ ಆಹಾರ ಕ್ರಮಗಳಲ್ಲ. ಅಲ್ಲಿನವರ  ಆಹಾರ ವಿಧಾನವು ಕೇರಳ, ತಮಿಳುನಾಡಿನವರ ಆಹಾರ ಕ್ರಮದಂತೆಯೂ ಅಲ್ಲ. ಒಂದೊಂದು ರಾಜ್ಯದ ಒಂದೊಂದು  ಜಿಲ್ಲೆಯಲ್ಲೇ  ಒಂದೊಂದು ರೀತಿಯ ಖಾದ್ಯಗಳಿವೆ, ಉಪಾಹಾರಗಳಿವೆ. ಆದ್ದರಿಂದ ಈ ಎಲ್ಲ ರಾಜ್ಯಗಳ ಮಂದಿ ಒಂದೇ  ಕಡೆ ಸಾವಿರಾರು ಸಂಖ್ಯೆಯಲ್ಲಿ ಸೇರುವಾಗ ಅವರೆಲ್ಲರ ಆಹಾರ ವೈವಿಧ್ಯತೆಯನ್ನು ನಿರಾಕರಿಸಿ ಒಂದೇ ಆಹಾರವನ್ನು  ಬಡಿಸುವುದು ಆರೋಗ್ಯ ಸಮಸ್ಯೆಗೂ ಕಾರಣವಾಗ ಬಹುದು. ಹಾಗೇನಾದರೂ ಆದರೆ, ಕಾರ್ಯಕ್ರಮದ ಮೇಲೆ ಗಮನ  ಕೊಡುವುದಕ್ಕಿಂತ ಆರೋಗ್ಯದ ಬಗ್ಗೆಯೇ ತಲೆ ಕೆಡಿಸಿಕೊಳ್ಳಬೇಕಾದ ಜರೂರತ್ತು ಸೇರಿದವರಿಗೆ ಎದುರಾಗಬಹುದು. ಇದು  ಅಲ್ಲಿ ಸೇರುವಿಕೆಯ ಉದ್ದೇಶವನ್ನೇ ಹಾಳು ಮಾಡಬಹುದು. ಹಾಗಂತ,

ಇಂಥ ಬೃಹತ್ ಜನಸಂಖ್ಯೆಯ ಆಹಾರ ವೈವಿಧ್ಯತೆಯನ್ನು ಗಮನಿಸಿ ಪ್ರತಿಯೊಬ್ಬರಿಗೂ ಪ್ರತ್ಯಪ್ರತ್ಯೇಕ ಆಹಾರ  ತಯಾರಿಕೆಯೂ ಪ್ರಾಯೋಗಿಕವಲ್ಲ. ಇಂಥ ಸಂದರ್ಭಗಳಲ್ಲಿ ಆಹಾರ ಕ್ರಮಗಳಲ್ಲಿ ಬಹುತೇಕ ಸಾಮ್ಯತೆಯಿರುವ ರಾಜ್ಯಗಳ  ಪಟ್ಟಿ ಮಾಡಿ, ಅಂಥ ರಾಜ್ಯಗಳಿಂದ ಬಂದವರಿಗೆ ಒಂದೇ ಕಡೆ ಊಟ ತಯಾರಿಸಿ ಬಡಿಸುವಂಥ ಪ್ರಯೋಗಕ್ಕೆ  ಕೈಹಾಕಬೇಕಾಗುತ್ತದೆ. ಇದಕ್ಕಾಗಿ ಹತ್ತಾರು ಕಿಚನ್‌ಗಳನ್ನು ಪ್ರತ್ಯಪ್ರತ್ಯೇಕ ನಿರ್ಮಿಸಬೇಕಾಗುತ್ತದೆ. ಹೀಗೆ ಗುಂಪುಗಳಾಗಿ  ವಿಭಜಿಸಲ್ಪಟ್ಟ ರಾಜ್ಯಗಳ ಜನರನ್ನು ಒಂದೇ ಕಡೆ ಸೇರುವಂಥ ಟೆಂಟ್‌ಗಳನ್ನು ನಿರ್ಮಿಸಬೇಕಾಗುತ್ತದೆ. ಬಾಹ್ಯ ನೋಟಕ್ಕೆ  ಇವೆಲ್ಲವನ್ನೂ ಹೇಳುವುದು ಸುಲಭವಾದರೂ ಪ್ರಾಯೋಗಿಕವಾಗಿ ಇದು ಸವಾಲಿನ ಕೆಲಸ. ಆದರೆ, ಈ ಸವಾಲನ್ನು  ಎದುರಿಸುವಲ್ಲಿ ಯಶಸ್ವಿಯಾದರೆ ಅದು ಇಡೀ ಸಮಾವೇಶವನ್ನೇ ಯಶಸ್ವಿಗೊಳಿಸಿದಂತೆ. ಯಾಕೆಂದರೆ, ಇಷ್ಟದ ಆಹಾರವೇ  ಹೊಟ್ಟೆ ಸೇರುವುದರಿಂದ ಮಾನಸಿಕವಾಗಿ ವ್ಯಕ್ತಿ ನಿರಾಳವಾಗುತ್ತಾರೆ. ಆಹಾರದ ಬಗ್ಗೆ ಆಲೋಚಿಸದೇ ಕಾರ್ಯಕ್ರಮದ  ಕಡೆಗೆ ಗಮನ ಹರಿಸುತ್ತಾರೆ.

ಯಾವಾಗ ದೇಹಕ್ಕೆ ಒಗ್ಗುವ ಆಹಾರ ಲಭಿಸುತ್ತದೋ ಅದು ಇನ್ನೆರಡು ಬೇಡಿಕೆಗಳನ್ನೂ ಮುಂದಿಡುತ್ತದೆ. ಅದುವೇ ನೀರು  ಮತ್ತು ಶೌಚಾಲಯ. ಇಂಥ ಸಮಾ ವೇಶಗಳಲ್ಲಿ ನೀರಿನ ಕೊರತೆ ಎದುರಾದರೆ ಮತ್ತು ಶೌಚಾಲಯ ಅಸಮರ್ಪಕವಾಗಿದ್ದರೆ  ಅದು ಸೇರಿದವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥ ರನ್ನಾಗಿಸುತ್ತದೆ. ಕಾರ್ಯಕ್ರಮದ ಮೇಲೆ ಇರಬೇಕಾದ  ಗಮನವು ಅಸಮರ್ಪಕ ಶೌಚ ವ್ಯವಸ್ಥೆಯಿಂದಾಗಿ ವಿಚಲಿತಗೊಳ್ಳುತ್ತದೆ. ಇದರ ಜೊತೆಗೇ,
ಸಮಾವೇಶದ ಯಶಸ್ಸಿನಲ್ಲಿ ಪಾಲುದಾರವಾಗಿರುವ ಇನ್ನೆರಡು ಅಂಶಗಳೆಂದರೆ, ಆರೋಗ್ಯ ವ್ಯವಸ್ಥೆ ಮತ್ತು ನಿರ್ವಹಣಾ  ತಂಡ. 

ಸಾವಿರಾರು ಮಂದಿ ಒಂದುಕಡೆ ಸೇರುವುದೆಂದರೆ, ವೈವಿಧ್ಯಮಯ ಆಚಾರ-ವಿಚಾರ, ಸಂಸ್ಕೃತಿ, ಭಾಷೆ, ದೃಷ್ಟಿಕೋನ,  ಸಂಪ್ರದಾಯಗಳು ಒಂದೇ ಕಡೆ ಸಮಾಗಮವಾಗುವುದು ಎಂದೇ ಅರ್ಥ. ಕೇರಳದವರು ಯಾವುದನ್ನು ಶಿಸ್ತು ಎಂದು  ಅಂದುಕೊಳ್ಳುತ್ತಾರೋ ಅದನ್ನೇ ಬಿಹಾರದವರು ನಗಣ್ಯ ಸಂಗತಿಯಾಗಿ ಪರಿಗಣಿಸಬಹುದು. ಪಶ್ಚಿಮ ಬಂಗಾಳದವರು  ಯಾವುದಕ್ಕೆ ಮಹತ್ವ ನೀಡುತ್ತಾರೋ ಪುದುಚೇರಿಯವರು ಅದಕ್ಕೆ ಮಹತ್ವವನ್ನೇ ಕಲ್ಪಿಸದಿರಬಹುದು. ಇಂಥ ಸಮಾವೇಶದಲ್ಲಿ  ಸೇರುವವರಲ್ಲಿ ಒರಟರು, ಅಪಾರ ಸಂಯಮಿಗಳು, ತಿಂಡಿಪೋಕರು, ನಿಧಾನಿಗಳು, ತಕ್ಷಣ ಸಿಟ್ಟು ಬರುವವರು, ಸದಾ  ನೆಗೆಟಿವ್‌ಗಳನ್ನೇ ಉಣ್ಣುವವರು... ಮುಂತಾಗಿ ಅನೇಕ ರೀತಿಯ ಜನರಿರಬಹುದು. ವೈಚಾರಿಕವಾಗಿ ಇವರಲ್ಲಿ ಎಷ್ಟೇ ಏಕತೆ  ಇದ್ದರೂ ಸಂಸ್ಕೃತಿ, ಆಚಾರ, ವರ್ತನೆಗಳಲ್ಲಿ ವ್ಯತ್ಯಾಸಗಳು ಇದ್ದೇ  ಇರುತ್ತವೆ. ಇಂಥವರನ್ನೆಲ್ಲಾ ಒಂದೇ ನಿಯಮದಡಿಗೆ  ತರುವುದು ಸುಲಭವಲ್ಲ. ಇದಕ್ಕೆ ಬಲಿಷ್ಠ ಸ್ವಯಂಸೇವಕರ ಅಗತ್ಯವಿರುತ್ತದೆ. ಎಲ್ಲರನ್ನೂ ಒಂದೇ ನಿಯಮದಡಿಗೆ ತಂದು,  ಇಡೀ ಸಮಾವೇಶವನ್ನು ಶಿಸ್ತು ಬದ್ಧವಾಗಿ ಕೊಂಡೊಯ್ಯಬೇಕಾದ ಇವರು ತಮ್ಮ ಹೊಣೆಗಾರಿಕೆಯಲ್ಲಿ ಅಲ್ಪವೇ  ವಿಫಲವಾದರೂ ಒಟ್ಟು ಸಮಾವೇಶವನ್ನೇ ಅದು ಹಾಳು ಮಾಡಿಬಿಡುತ್ತದೆ. ಇದರ ಜೊತೆಜೊತೆಗೇ ಓದಿಕೊಳ್ಳಬೇಕಾದ ಇನ್ನೊಂದು ಸಂಗತಿಯೆಂದರೆ, ಆರೋಗ್ಯ ವ್ಯವಸ್ಥೆ.

ಇಂಥ ಸಮಾವೇಶಗಳಲ್ಲಿ ಭಾಗಿಯಾಗುವವರಲ್ಲಿ ಹಲವು ರೀತಿಯ ಜನರಿರುತ್ತಾರೆ. ಪೂರ್ಣ ಪ್ರಮಾಣದ ಆರೋಗ್ಯ ಹೊಂದಿದವರು ಒಂದು ವಿಭಾಗವಾದರೆ, ಸಮಾವೇಶದ ಮೇಲಿನ ಆಕರ್ಷಣೆಯಿಂದ ತಮ್ಮ ಅನಾರೋಗ್ಯವನ್ನೂ ಕಡೆಗಣಿಸಿ ಸೇರುವಂಥವರು ಇನ್ನೊಂದು ವಿಭಾಗವಾಗಿರುತ್ತಾರೆ. ಇಂಥವರ ಆರೋಗ್ಯವು ಸಮಾವೇಶದಲ್ಲಿ ಕೈ ಕೊಡುವ ಸಾಧ್ಯತೆ ಇರುತ್ತದೆ.  ತೀವ್ರವಾಗಿ ಅಸ್ವಸ್ಥರಾಗುವವರು ಮತ್ತು ಭಾಗಶಃ ಆರೋಗ್ಯ ಸಂಬಂಧಿ ತೊಂದರೆಗಳಿಗೆ ಈಡಾಗುವವರೂ ಇರಬಹುದು.  ಇಂಥ ಸನ್ನಿವೇಶವನ್ನು ಮುಂಚಿತವಾಗಿ ಅರಿತುಕೊಂಡು ಅದಕ್ಕೆ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳದಿದ್ದರೆ ಅಂಥವರ ಅನಾ  ರೋಗ್ಯವೇ ಒಟ್ಟು ಸಮಾವೇಶದ ವೈಫಲ್ಯಕ್ಕೆ ಕಾರಣವಾಗಬಲ್ಲುದು. ಹಾಗಂತ,

ಇಲ್ಲಿ ಪ್ರಸ್ತಾಪಿಸಲೇಬೇಕಾದ ಇನ್ನೆರಡು ಸಂಗತಿಗಳೆಂದರೆ, ಸಮಾವೇಶದ ಉದ್ದೇಶ, ಗುರಿ, ಮಹತ್ವವನ್ನು ಸ್ಪಷ್ಟಪಡಿಸಬೇಕಾದ  ವೇದಿಕೆಯನ್ನು ಹೇಗೆ ರೂಪಿಸಲಾಗಿದೆ ಮತ್ತು ಸಭಾಂಗಣವನ್ನು ಹೇಗೆ ರಚಿಸಲಾಗಿದೆ ಎಂಬುದು. ಯಾವುದೇ ಸಮಾವೇಶದ ಯಶಸ್ಸು ಜನರ ಸಂಖ್ಯೆಯನ್ನು ಹೊಂದಿಕೊಂಡಿರುವುದಿಲ್ಲ. ಬದಲು ಸಭಿಕ ಸ್ನೇಹಿ ಸಭಾಂಗಣ, ವೇದಿಕೆ ಮತ್ತು ವೇದಿಕೆಯಲ್ಲಿ ಮಂಡಿಸಲಾಗುವ ವಿಚಾರಗಳನ್ನು ಹೊಂದಿಕೊಂಡಿರುತ್ತದೆ. ವೇದಿಕೆ ಮತ್ತು ಸಭಾಂಗಣ ಎಷ್ಟೇ ಅದ್ಭುತವಾಗಿರಲಿ,  ವೇದಿಕೆಯಲ್ಲಿ ಮಂಡಿಸಲಾಗುವ ವಿಚಾರಗಳು ಕಾಲ, ದೇಶ ಮತ್ತು ಪರಿಸ್ಥಿತಿಗೆ ಮುಖಾಮುಖಿಯಾಗುವಂತಿಲ್ಲದಿದ್ದರೆ ಮತ್ತು  ಕಾಲಬಾಹಿರ ಸರಕುಗಳೇ ವಿಚಾರಗಳಾದರೆ, ಅದರಿಂದ ಪ್ರಯೋಜನವೇನೂ ಆಗದು. ಹಾಗೆಯೇ, ವೇದಿಕೆಯಲ್ಲಿ  ಮಂಡಿಸಲಾಗುವ ವಿಚಾರಗಳು ಎಷ್ಟೇ ಪರಿಣಾಮಕಾರಿಯಾಗಿರಲಿ ಸಭಿಕಸ್ನೇಹಿ ವಾತಾವರಣದ ಸಭಾಂಗಣ  ನಿರ್ಮಾಣವಾಗಿಲ್ಲದಿದ್ದರೆ ಅದೂ ಫಲಿತಾಂಶದ ದೃಷ್ಟಿಯಿಂದ ಶೂನ್ಯ ಎನ್ನಬಹುದು. ಇದರ ಜೊತೆಗೇ,

ಎಲ್ಲರ ಬದುಕಿನ ಅನಿವಾರ್ಯ ಸಂಗಾತಿಯಾಗಿರುವ ಮೊಬೈಲ್ ಬಗ್ಗೆಯೂ ಆಧುನಿಕ ಸಮಾವೇಶಗಳಲ್ಲಿ ಗಮನ  ಹರಿಸಬೇಕಾಗುತ್ತದೆ. ಸಾಮಾನ್ಯವಾಗಿ, ಬೃಹತ್ ಸಮಾವೇಶಗಳಲ್ಲಿ ಮೊಬೈಲ್ ಚಾರ್ಜಿಂಗ್‌ಗೆ ಬೇಕಾದ ವ್ಯವಸ್ಥೆ ಮಾಡುವುದು  ಕಡಿಮೆ. ಒಂದುವೇಳೆ ಮಾಡಿದರೂ ಸರ್ವರಿಗೂ ತೃಪ್ತಿಕರವಾದ ಮತ್ತು ಎಟಕುವ ರೀತಿಯಲ್ಲಿ ಚಾರ್ಜಿಂಗ್ ಸೌಲಭ್ಯ  ಒದಗಿಸುವುದು ಬಹುತೇಕ ಶೂನ್ಯ. ಇವತ್ತಿನ ದಿನಗಳಲ್ಲಿ ಊಟ, ಶೌಚದಷ್ಟೇ ಮೊಬೈಲ್ ಬಳಕೆಯೂ ಬದುಕಿನ  ಭಾಗವಾಗಿದೆ. ಮೂರ‍್ನಾಲ್ಕು ದಿನಗಳ ಕಾಲ ನಡೆಯುವ ಸಮಾವೇಶಗಳಲ್ಲಂತೂ ಮೊಬೈಲ್ ಬಳಕೆ ಧಾರಾಳ ನಡೆಯುತ್ತದೆ.  ಕುಟುಂಬದವರನ್ನು ಸಂಪರ್ಕಿಸುವುದರಿಂದ  ಹಿಡಿದು ಮಾಹಿತಿ-ಸುದ್ದಿ-ವಿಶ್ಲೇಷಣೆಗಳ ವರೆಗೆ ಎಲ್ಲದಕ್ಕೂ ಮೊಬೈಲ್  ಅವಲಂಬನೆ ಅನಿವಾರ್ಯವೂ ಆಗಿದೆ. ಇಂಥ ಸಂದರ್ಭಗಳಲ್ಲಿ ಚಾರ್ಜಿಂಗ್‌ಗೆ ಸಮರ್ಪಕ ಸೌಲಭ್ಯ ಇಲ್ಲದೇ ಹೋದರೆ  ಅದು ಸೇರಿದವರ ಆಸಕ್ತಿಯ ಮೇಲೆ ಅಡ್ಡಪರಿಣಾಮ ಬೀರಬಲ್ಲುದು. ಅಂದಹಾಗೆ,

ಹೈದರಾಬಾದ್‌ನಲ್ಲಿ ಮೂರು ದಿನಗಳ ಕಾಲ ನಡೆದ ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯರ ಅಖಿಲ ಭಾರತ ಸಮಾವೇಶವು  ಅಭೂತಪೂರ್ವ ಯಶಸ್ಸು ಕಂಡಿದ್ದರೆ ಅದಕ್ಕೆ ಈ ಮೇಲಿನ 7 ವಿಷಯಗಳಿಗೆ ಕಾರ್ಯಕ್ರಮ ಆಯೋಜಕರು ನೀಡಿದ  ಮಹತ್ವವೇ ಕಾರಣ ಎಂದೇ ಅನಿಸುತ್ತದೆ.

Monday, November 4, 2024

ವಕ್ಫ್: ಕಳೆದುಕೊಂಡ ಭೂಮಿಯನ್ನು ಮರಳಿ ಪಡೆಯುವುದೇ ಪರಿಹಾರವೇ?





1. ವಕ್ಫ್ ಕಾಯ್ದೆ
2. ಭೂ ಸುಧಾರಣಾ ಕಾಯ್ದೆ
3. ಭೂ ಒತ್ತುವರಿ ಕಾಯ್ದೆ
4. ಇನಾಮ್ ರದ್ದಿಯಾತಿ ಕಾಯ್ದೆ
ಸದ್ಯ ರಾಜ್ಯದಲ್ಲಿ ವಕ್ಫ್ ಸುದ್ದಿಯಲ್ಲಿದೆ. ತಿಂಗಳುಗಳ ಹಿಂದೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೊಳಗಾಗಿ ನಿಧಾನಕ್ಕೆ ತಣ್ಣಗಾಗಿದ್ದ ಈ  ಸಂಗತಿಯು ಮತ್ತೆ ರಾಜ್ಯದಲ್ಲಿ ಹೊತ್ತಿಕೊಳ್ಳುವುದಕ್ಕೆ, ರಾಜ್ಯಾದ್ಯಂತ ವಕ್ಫ್ ಅದಾಲತ್ ನಡೆಸಲು ವಕ್ಫ್ ಸಚಿವಾಲಯ ನಿರ್ಧರಿಸಿರುವುದು ಒಂದು ಕಾರಣವಾದರೆ, ಈ ಇಡೀ ಪ್ರಕ್ರಿಯೆಯನ್ನೇ ತಿರುಚಿ ರಾಜಕೀಯ ಲಾಭ ಪಡಕೊಳ್ಳಲು ಬಿಜೆಪಿ  ಪ್ರಯತ್ನಿಸಿರುವುದು ಇದಕ್ಕೆ ಇನ್ನೊಂದು ಕಾರಣ.

‘ರಾಜ್ಯದಲ್ಲಿ 2 ಲಕ್ಷ  ಎಕ್ರೆಗಿಂತಲೂ ಅಧಿಕ ವಕ್ಫ್ ಭೂಮಿಯಿದೆ’ ಎಂದು ಬಿಜೆಪಿ ಮುಖಂಡರಾಗಿದ್ದ ಅನ್ವರ್ ಮಾಣಿಪ್ಪಾಡಿ ಈ  ಹಿಂದೆ ಹೇಳಿದ್ದರು. ಈ ಕುರಿತಂತೆ ಅಧ್ಯಯನ ನಡೆಸಿ ಯಡಿಯೂರಪ್ಪ ಸರಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದರು. ಈ ವರ ದಿಯನ್ನು ವಿಧಾನಸಭೆಯಲ್ಲಿ ಮಂಡಿಸಲು ಸರಕಾರ ಹಿಂದೇಟು ಹಾಕಿದಾಗ ಪ್ರಕರಣವನ್ನು ಸುಪ್ರೀಮ್ ಕೋರ್ಟ್ ವರೆಗೂ  ಕೊಂಡೊಯ್ಯಲಾಗಿತ್ತು. ಮಾತ್ರವಲ್ಲ, ವರದಿಯನ್ನು ಸದನದಲ್ಲಿ ಮಂಡಿಸುವಂತೆ  ಸುಪ್ರೀಮ್ ಕೋರ್ಟೇ ಸರಕಾರಕ್ಕೆ ನಿರ್ದೇ ಶನ ನೀಡಿತ್ತು. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಯಡಿಯೂರಪ್ಪ ಸರಕಾರವು ಸದನದಲ್ಲಿ ಮಂಡಿಸಿದಂತೆ  ನಟಿಸಿ ಕೋರ್ಟ್  ನಿಂದೆ ಕ್ರಮದಿಂದ ತಪ್ಪಿಸಿಕೊಂಡಿತ್ತು.

ಅನ್ವರ್ ಮಾಣಿಪ್ಪಾಡಿ ವರದಿಯ ಮುಖ್ಯ ಭಾಗ ಏನೆಂದರೆ, ಈ ಎರಡು ಲಕ್ಷ ಎಕ್ರೆ ಭೂಮಿಯಲ್ಲಿ ಬಹುಪಾಲನ್ನು  ರಾಜಕಾರಣಿಗಳು ಮತ್ತು ಇನ್ನಿತರರು ಒತ್ತುವರಿ ಮಾಡಿಕೊಂಡಿದ್ದಾರೆ ಅನ್ನುವುದು. ಆ ಮೂಲಕ ಮುಸ್ಲಿಮ್ ಸಮುದಾಯದ  ಅಭಿವೃದ್ಧಿಗೆ ಬಳಕೆಯಾಗಬೇಕಾಗಿದ್ದ ಕೋಟ್ಯಂತರ ರೂಪಾಯಿ ಆದಾಯವು ನಷ್ಟವಾಗಿದೆ ಅನ್ನುವುದು. ಸದ್ಯ,

ರಾಜ್ಯ ವಕ್ಫ್ ಇಲಾಖೆಯ ಅಧೀನದಲ್ಲಿರುವುದು ಕೇವಲ 23 ಸಾವಿರ ಎಕ್ರೆ ಭೂಮಿ ಮಾತ್ರ. ಅಂದರೆ, ಅನ್ವರ್ ಮಾಣಿಪ್ಪಾಡಿ  ವರದಿಯ ಆಧಾರದಲ್ಲಿ ಹೇಳುವುದಾದರೆ, 10ರಲ್ಲಿ ಒಂದು ಭಾಗ ಮಾತ್ರ ವಕ್ಫ್ ಇಲಾಖೆಯ ಅಧೀನದಲ್ಲಿದೆ. ಹಾಗಿದ್ದರೆ,  ಉಳಿದ ಈ 9 ಭಾಗವನ್ನು ವಕ್ಫ್ ಇಲಾಖೆಯ ಅಧೀನಕ್ಕೆ ಒಳಪಡಿಸುವುದು ಹೇಗೆ ಎಂಬ ಪ್ರಶ್ನೆಯ ಜೊತೆಗೇ ಈಗ ವಕ್ಫ್ ನದ್ದೆಂದು  ಹೇಳಲಾಗುವ ಭೂಮಿಯ ದಾಖಲಾತಿ ಹೇಗಿದೆ, ಇದರ ಕಡತವೂ ಸರಿಯಾಗಿದೆಯೇ, ಅವುಗಳಲ್ಲೂ  ಒತ್ತುವಾರಿಯಾಗಿವೆಯೇ, ಬೇರೆಯವರು ಅದನ್ನು ಅನುಭವಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇದರ  ಜೊತೆಗೇ,

ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವುದಕ್ಕೂ ಹೊರಟಿದೆ. ಅದು ಒಂದುವೇಳೆ ಪ್ರಸ್ತಾವಿತ ರೂ ಪದಲ್ಲಿ ಜಾರಿಗೊಂಡರೆ, ದಾಖಲೆ ಇಲ್ಲದ ವಕ್ಫ್ ಆಸ್ತಿಗಳು ಕೈಬಿಟ್ಟು ಹೋಗಲಿವೆ ಎಂದೂ ಹೇಳಲಾಗುತ್ತಿದೆ. ಆದ್ದರಿಂದ ಎಲ್ಲ  ವಕ್ಫ್ ಆಸ್ತಿಗಳಿಗೆ ದಾಖಲೆ ಪತ್ರ ಮಾಡಿಟ್ಟುಕೊಳ್ಳಬೇಕು ಎಂದು ವಕ್ಫ್ ಸಚಿವಾಲಯ ನಿರ್ಧರಿಸಿದೆ. ವಕ್ಫ್ ದಾಖಲೆಗಳನ್ನು  ಸರಿಮಾಡಿಸಿಟ್ಟುಕೊಳ್ಳಿ ಎಂದು ಸರಕಾರವೇ ಸೂಚಿಸಿರಲೂಬಹುದು. ಈ ಕಾರಣಗಳಿಂದ ವಕ್ಫ್ ಸಚಿವಾಲಯ  ಚುರುಕಾಯಿತು. ವಕ್ಫ್ ಆಸ್ತಿಗಳು ಒತ್ತುವರಿಯಾಗಿರುವುದಾಗಿ ಎಲ್ಲೆಲ್ಲಾ  ದೂರುಗಳು ಕೇಳಿ ಬಂದಿವೆಯೋ ಅಲ್ಲೆಲ್ಲಾ  ವಕ್ಫ್  ಅದಾಲತ್ ನಡೆಸಲು ವಕ್ಫ್ ಇಲಾಖೆ ಮುಂದಾಯಿತು. ಇದರ ಭಾಗವಾಗಿ ಬಿಜಾಪುರದಲ್ಲಿ ವಕ್ಫ್ ಅದಾಲತ್ ನಡೆಯಿತು.  1974ರ ಗೆಜೆಟ್ ನೋಟಿಫಿಕೇಶನ್ ಪ್ರಕಾರ ಬಿಜಾಪುರದಲ್ಲಿ 14,201 ಎಕ್ರೆ, 32 ಗುಂಟೆ ವಕ್ಫ್ ಭೂಮಿಯಿದೆ. ಆದರೆ, ಈಗ  ಬಿಜಾಪುರಕ್ಕೆ ಸಂಬAಧಿಸಿ ವಕ್ಫ್ ಅಧೀನದಲ್ಲಿರುವುದು ಬರೇ 773 ಎಕ್ರೆ ಭೂಮಿ ಮಾತ್ರ. ಹಾಗಿದ್ದರೆ, ಉಳಿದ ಭೂಮಿ ಏ ನಾಯಿತು ಎಂಬ ಪ್ರಶ್ನೆ ಸಹಜ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಚುರುಕಾಗಿದೆ. ಪಹಣಿ ಪತ್ರದಲ್ಲಿರುವ ಸಂಖ್ಯೆ 9  ಮತ್ತು 11ನ್ನು ತಪಾಸಣೆಗೆ ಒಳಪಡಿಸಿದೆ. ಪಹಣಿ ಸಂಖ್ಯೆ 9ರಲ್ಲಿ ಮಾಲಿಕನ ಹೆಸರಿದ್ದು 11ರಲ್ಲಿ ವಕ್ಫ್ ಎಂದು ನಮೂ ದಿಸಲಾಗಿರುವ ಆಸ್ತಿಗಳ ಮಾಲಿಕರಿಗೆ ನೋಟೀಸು ಜಾರಿಗೊಳಿಸಿದೆ. ನಿಮ್ಮ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂ ದಿಸಲಾಗಿದ್ದು, ಸೂಕ್ತ ದಾಖಲೆಗಳನ್ನು ಸಲ್ಲಿಸಿ ಈ ಆಸ್ತಿ ನಿಮ್ಮದೆಂದು ದೃಢೀಕರಿಸಿಕೊಳ್ಳಿ ಎಂಬುದು ಈ ನೋಟೀಸಿನ ಅರ್ಥ.  ಹಾಗಂತ, ಇಂಥ ನೋಟೀಸನ್ನು ಎಲ್ಲರಿಗೂ ಕಳುಹಿಸಲಾಗಿಲ್ಲ. ಯಾರ ಪಹಣಿ ಪತ್ರದಲ್ಲಿ ವಕ್ಫ್ ಎಂದು  ನಮೂದಾಗಿದೆಯೋ ಅವರಿಗೆ ಮಾತ್ರ ಕಳುಹಿಸಲಾಗಿದೆ.

ಇದರ ಹಿಂದೆ ಒಂದು ಕತೆಯಿದೆ.

ಭಾರತದಲ್ಲಿ ವಕ್ಫ್ ಕಾಯ್ದೆ ಸ್ವಾತಂತ್ರ‍್ಯ ಪೂರ್ವದಲ್ಲೇ  ಅಸ್ತಿತ್ವದಲ್ಲಿತ್ತು. 1923ರಲ್ಲಿ ಬ್ರಿಟಿಷರು ಅದನ್ನು ಮಾನ್ಯ ಮಾಡಿದ್ದರು.  ಸರಳವಾಗಿ ಹೇಳುವುದಾದರೆ, ವಕ್ಫ್ನ ಅರ್ಥ ದೇವನಿಗೆ ಅರ್ಪಿಸುವುದು ಎಂದಾಗಿದೆ. ಇದು ಮುಸ್ಲಿಮ್ ಸಮುದಾಯದಲ್ಲಿ  ಅನೂಚಾನೂಚವಾಗಿ ನಡೆದುಕೊಂಡು ಬಂದ ಒಂದು ಧಾರ್ಮಿಕ ಪ್ರಕ್ರಿಯೆ. ಪ್ರವಾದಿ ಮುಹಮ್ಮದ್(ಸ)ರ ಕಾಲದಲ್ಲೇ   ಭೂಮಿಯನ್ನು ವಕ್ಫ್ ಮಾಡುವ ಪ್ರಕ್ರಿಯೆ ನಡೆಯುತ್ತಾ ಬಂದಿದೆ. ಮುಸ್ಲಿಮ್ ಸಮುದಾಯದ ಶ್ರೀಮಂತರು ಮಾತ್ರವಲ್ಲ,  ಸಾಮಾನ್ಯ ಜನರೂ ತಮ್ಮಲ್ಲಿನ ಸ್ಥಿರ ಮತ್ತು ಚರ ಆಸ್ತಿಯನ್ನು ವಕ್ಫ್ ಮಾಡುತ್ತಲೇ ಬಂದಿದ್ದಾರೆ. ಹೀಗೆ ವಕ್ಫ್ ಮಾಡಿದ  ಭೂಮಿಯಲ್ಲಿ ಮಸೀದಿ ನಿರ್ಮಾಣ, ಮದ್ರಸ ನಿರ್ಮಾಣ, ಅನಾಥಾಲಯ ನಿರ್ಮಾಣಗಳನ್ನು ಮಾಡಲಾಗುತ್ತದೆ. ಕಬರಸ್ತಾ ನಕ್ಕೆ ಬಳಕೆ ಮಾಡಲಾಗುತ್ತದೆ. ಮಸೀದಿ, ಮದ್ರಸಗಳಿಗೆ ಆದಾಯ ಮೂಲವಾಗಿ ವಾಣಿಜ್ಯ ಕಟ್ಟಡಗಳನ್ನು ಕಟ್ಟುವುದಕ್ಕೆ, ಕೃಷಿ  ಕಾರ್ಯಗಳಿಗೆ ಬಳಸುವುದಕ್ಕೂ ಉಪಯೋಗಿಸಲಾಗುತ್ತದೆ. ಅಂದಹಾಗೆ,
ಮಸೀದಿ ಮತ್ತು ಮದ್ರಸಾಗಳಲ್ಲಿ ಮೌಲ್ವಿಗಳಿರುತ್ತಾರೆ, ಸಹಾಯಕರಿರುತ್ತಾರೆ, ಶಿಕ್ಷಕರಿರುತ್ತಾರೆ, ಸಿಬಂದಿಗಳಿರುತ್ತಾರೆ. ಅವರಿಗೆ  ವೇತನ ನೀಡಬೇಕಾಗುತ್ತದೆ. ಹಾಗೆಯೇ, ಮಸೀದಿಗೆ ಬೇಕಾದ ಉಪಕರಣಗಳು, ವಿದ್ಯುತ್ ಬಿಲ್‌ಗಳು ಸಹಿತ ಇನ್ನಿತರ ಅ ನೇಕ ಖರ್ಚು ವೆಚ್ಚಗಳಿರುತ್ತವೆ. ಅವುಗಳಿಗೂ ಹಣ ಬೇಕಾಗುತ್ತದೆ. ಈ ಎಲ್ಲಕ್ಕೂ ಆದಾಯವಾಗಿ ವಕ್ಫ್ ಭೂಮಿಯನ್ನು  ಬಳಸುವ ಕ್ರಮ ಹಿಂದಿನಿಂದಲೇ ನಡೆಯುತ್ತಾ ಬಂದಿದೆ. ಹೀಗೆ ತಮ್ಮಲ್ಲಿರುವ ಭೂಮಿಯನ್ನು ವಕ್ಫ್ ಮಾಡುವುದು ಬಹಳ  ಪುಣ್ಯದಾಯಕ ಎಂದು ಇಸ್ಲಾಮ್ ಕಲಿಸುತ್ತದೆ. ಹೀಗೆ ವಕ್ಫ್ ಮಾಡುವ ವ್ಯಕ್ತಿಗೆ ಜೀವಂತ ಇರುವಾಗಲೂ ಮತ್ತು ಮೃತಪಟ್ಟ  ಬಳಿಕವೂ ಪುಣ್ಯಗಳು ಸದಾ ಲಭಿಸುತ್ತಿರುತ್ತವೆ ಎಂದೂ ಇಸ್ಲಾಮ್ ಹೇಳುತ್ತದೆ. ಮುಸ್ಲಿಮರು ಮರಣಾನಂತರದ ಜೀವನಕ್ಕೆ  ಅಪಾರ ಪ್ರಾಶಸ್ತ್ಯ ನೀಡುತ್ತಾರಾದ್ದರಿಂದ ಸ್ಥಿತಿವಂತರಲ್ಲದವರೂ ವಕ್ಫ್ ಮಾಡುವ ವಿಷಯದಲ್ಲಿ ಸಾಕಷ್ಟು  ಉದಾರಿಗಳಾಗಿರುತ್ತಾರೆ. ತಮ್ಮಲ್ಲಿನ ಸಣ್ಣದೊಂದು ಅಂಶವನ್ನಾದರೂ ವಕ್ಫ್ ಮಾಡುವುದನ್ನು ಬಹಳವೇ ಇಷ್ಟಪಡುತ್ತಾರೆ. ಈ  ಕಾರಣದಿಂದಲೇ,

ಈ ರಾಜ್ಯದಲ್ಲಿ ಮತ್ತು ದೇಶದಲ್ಲಿ ಅಪಾರ ಪ್ರಮಾಣದ ವಕ್ಫ್ ಭೂಮಿ ಇದೆ. ಈ ವಕ್ಫ್ ಭೂಮಿಯಲ್ಲಿ ಸರಕಾರದ್ದು ಒಂದಿಂಚು ಭೂಮಿಯೂ ಇಲ್ಲ. ಸರಕಾರ ಕಬರಸ್ತಾನಗಳಿಗೆ ಭೂಮಿ ನೀಡಿದ್ದಿದೆ. ಅದು ಮುಸ್ಲಿಮರಿಗೆ ಮಾತ್ರ ಅಲ್ಲ,  ಹಿಂದೂಗಳಿಗೂ ಕ್ರೈಸ್ತರಿಗೂ ನೀಡಿದೆ. ಸಮಸ್ಯೆ ಏನೆಂದರೆ,
ಮುಸ್ಲಿಮ್ ಸಮುದಾಯದ ವ್ಯಕ್ತಿಗಳು ತಮ್ಮಲ್ಲಿನ ಭೂಮಿಯನ್ನು ಹೀಗೆ ವಕ್ಫ್ ಮಾಡುತ್ತಾ ಹೋದರಾದರೂ ಅದರ  ನೋಂದಣಿ ವಿಷಯದಲ್ಲಿ ಗಾಢ ನಿರ್ಲಕ್ಷ್ಯ  ತೋರಿದರು. ಇನ್ನು, ನೋಂದಣಿಯಾಗಿ ಪಹಣಿ ಪತ್ರವಾದ ಭೂಮಿಯನ್ನು  ಸುರಕ್ಷಿತವಾಗಿರಿಸಿಕೊಳ್ಳುವಲ್ಲೂ ವಕ್ಫ್ ಇಲಾಖೆ ವಿಫಲವಾಯಿತು. ಒಂದುಕಡೆ, ತನ್ನ ಭೂಮಿಯನ್ನು ದೇವನಿಗೆ ಅರ್ಪಿಸಿದ್ದೇನೆ  ಎಂದು ಘೋಷಿಸುವಲ್ಲಿಗೆ ತನ್ನ ಜವಾಬ್ದಾರಿ ಮುಗಿಯಿತೆಂದು ವ್ಯಕ್ತಿ ಅಂದುಕೊಳ್ಳುವುದು ನಡೆದರೆ, ಇಂಥ ಭೂಮಿಯನ್ನು  ರಕ್ಷಿಸಿ ಸಮುದಾಯಕ್ಕೆ ನೆರವಾಗಬೇಕಾಗಿದ್ದ ವಕ್ಫ್ ಇಲಾಖೆಯ ವ್ಯಕ್ತಿಗಳೇ ಅವುಗಳನ್ನು ಮಾರಾಟ ಮಾಡುವುದೂ  ನಡೆಯಿತು. ವಕ್ಫ್ ಕಾಯ್ದೆಯನ್ವಯ ನೋಂದಾಯಿತವಾಗದ ಭೂಮಿ ಬಿಡಿ, ನೋಂದಾಯಿತವಾಗಿರುವ ಸಾವಿರಾರು ಎಕ್ರೆ  ಭೂಮಿಯೂ ಹೀಗೆ ಯಾರ‍್ಯಾರದ್ದೋ  ಪಾಲಾಯಿತು. ಇದು ಸಮಸ್ಯೆ ಒಂದು ಮುಖವಾದರೆ ಇನ್ನೊಂದು, ಸಂದರ್ಭಾ ನುಸಾರ ಸರಕಾರವೇ ತಂದಿರುವ ಕಾನೂನುಗಳು. ಅದರಲ್ಲಿ ಭೂಸುಧಾರಣಾ ಕಾಯ್ದೆಯೂ ಒಂದು.

1961ರಲ್ಲಿ ಈ ಭೂಸುಧಾರಣಾ ಕಾಯ್ದೆಯನ್ನು ರೂಪಿಸಲಾಯಿತಲ್ಲದೇ, 1965ರಲ್ಲಿ ಜಾರಿಗೊಳಿಸಲಾಯಿತು. 1974 ಮತ್ತು  2020ರಲ್ಲಿ ಈ ಕಾಯ್ದೆಗೆ ತಿದ್ದುಪಡಿಗಳನ್ನು ತರಲಾಯಿತು. 1964ರಲ್ಲಿ ಭೂ ಒತ್ತುವರಿ ಕಾಯ್ದೆಯನ್ನು ಜಾರಿಗೆ ತರಲಾಯಿತು  ಮತ್ತು 1991ರಲ್ಲಿ ಇದಕ್ಕೆ ತಿದ್ದುಪಡಿಗಳನ್ನು ತಂದು ಮರುಜಾರಿಗೊಳಿಸಲಾಯಿತು. ಇನ್ನೊಂದು, ಇನಾಮ್ ರದ್ದಿಯಾತಿ  ಕಾಯ್ದೆ. 1954ರಲ್ಲಿ ಜಾರಿಗೊಂಡ ಈ ಕಾಯ್ದೆಗೆ 2021ರಲ್ಲಿ ತಿದ್ದುಪಡಿಯನ್ನು ಮಾಡಲಾಯಿತು. ಭೂಸುಧಾರಣಾ  ಕಾಯ್ದೆಯ ಮುಖ್ಯ ಉದ್ದೇಶ ಏನಾಗಿತ್ತೆಂದರೆ,

ಕೃಷಿ ಜಮೀನಿನಲ್ಲಿ ಉಳುಮೆ ಮಾಡಿದ ರೈತನಿಗೆ ಅದರ ಮಾಲಕತ್ವವನ್ನು ನೀಡುವುದು. ಭೂ ಒತ್ತುವರಿ ಕಾಯ್ದೆಯ ಉದ್ದೇಶವೂ ಇದಕ್ಕಿಂತ ಭಿನ್ನವಲ್ಲ. ಭೂಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಾ ಬಂದಿರುವ ರೈತರಿಗೆ ಆ ಒತ್ತುವರಿಯನ್ನು  ಸಕ್ರಮಗೊಳಿಸಿ ಅದರ ಒಡೆತನವನ್ನು ಅವರಿಗೆ ಒಪ್ಪಿಸುವುದು. ಇನಾಮ್ ರದ್ದಿಯಾತಿ ಕಾಯ್ದೆಯೂ ಹೆಚ್ಚು ಕಮ್ಮಿ ಇವೇ  ಉದ್ದೇಶವನ್ನೇ ಹೊಂದಿದೆ. ಇನಾಮ್ ಅಥವಾ ಉಡುಗೊರೆಯಾಗಿ ಸಿಕ್ಕ ಭೂಮಿಗಿದ್ದ ರಕ್ಷಣೆಯನ್ನು ರದ್ದು ಮಾಡುವುದು  ಇದರ ಉದ್ದೇಶ. ಹೀಗೆ ಈ ಕಾಯ್ದೆಗಳಿಂದಾಗಿ ಸಾವಿರಾರು ಎಕ್ರೆ ಭೂಮಿ ವಕ್ಫ್ ಇಲಾಖೆಯ ಕೈತಪ್ಪಿ ಹೋಗಿದೆ. ಕೇವಲ  ಭೂಸುಧಾರಣಾ ಕಾಯ್ದೆಯ ಅನ್ವಯ ರಾಜ್ಯ ಸರಕಾರ 1183 ಎಕ್ರೆ ವಕ್ಫ್ ಭೂಮಿಯನ್ನು ಇತರರಿಗೆ ನೀಡಿರುವುದು ಅ ಧಿಕೃತವಾಗಿ ದಾಖಲಾಗಿದೆ. ಹೀಗೆ ಭೂಮಿ ಪಡಕೊಂಡವರಲ್ಲಿ ಹಿಂದೂಗಳೂ ಇದ್ದಾರೆ. ಮುಸ್ಲಿಮರೂ ಇದ್ದಾರೆ. ಇನಾಮ್  ರದ್ದಿಯಾತಿ ಕಾಯ್ದೆಯ ಮೂಲಕ 1459 ಎಕ್ರೆಗಿಂತಲೂ ಅಧಿಕ ವಕ್ಫ್ ಭೂಮಿಯನ್ನು ಸರಕಾರ ಇತರರಿಗೆ ಹಂಚಿಕೆ  ಮಾಡಿದೆ. ಭೂಒತ್ತುವರಿ ಕಾಯ್ದೆಯನ್ನು ತಂದು 133 ಎಕ್ರೆ ವಕ್ಫ್ ಭೂಮಿಯನ್ನು ಸರಕಾರ ಹಂಚಿಕೆ ಮಾಡಿದೆ. ಇದು  ಕೇವಲ ನಮ್ಮ ರಾಜ್ಯದ ಲೆಕ್ಕಾಚಾರ ಮಾತ್ರ. ಆದರೆ, ಇಂಥ ಕಾಯ್ದೆಗಳು ದೇಶದಾದ್ಯಂತ ಜಾರಿಯಾಗಿವೆ. ಹಾಗಿದ್ದರೆ ಎಷ್ಟು  ದೊಡ್ಡಮಟ್ಟದಲ್ಲಿ ವಕ್ಫ್ ಆಸ್ತಿ ಪರರ ಪಾಲಾಗಿರಬಹುದು ಎಂಬುದನ್ನೊಮ್ಮೆ ಊಹಿಸಿ. ಆದರೆ,

ಇಲ್ಲಿಗೇ ಎಲ್ಲವೂ ಮುಗಿಯಲಿಲ್ಲ.

ವಕ್ಫ್ ಆಸ್ತಿಗೆ ಸಂಬಂಧಿಸಿ 1998ರಲ್ಲಿ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶ ವಿ.ಎನ್. ಖರೆ ಅವರು ಐತಿಹಾಸಿಕ ತೀರ್ಪು  ನೀಡಿದರು. ಒಮ್ಮೆ ವಕ್ಫ್ ಎಂದು ನೋಂದಾಯಿತಗೊಂಡ  ಆಸ್ತಿ ಎಂದೆಂದೂ  ವಕ್ಫ್ ಆಸ್ತಿಯಾಗಿಯೇ ಇರುತ್ತದೆ ಎಂದು ಆ  ತೀರ್ಪಿನಲ್ಲಿ ಹೇಳಲಾಗಿದೆ. Once a Waqf is always a  Waqf  ಎಂಬ ಖರೆ ಅವರ ತೀರ್ಪಿನ ವಾಕ್ಯವು ಆ  ಬಳಿಕ ಜನಜನಿತವಾಗುವಷ್ಟು ಪ್ರಸಿದ್ಧವೂ ಆಯಿತು. ಆಂಧ್ರಪ್ರದೇಶದ ವಕ್ಫ್ ಬೋರ್ಡ್ ಮತ್ತು ಸೈಯದ್ ಅಲಿ ಮತ್ತಿತರರ  ಪ್ರಕರಣದ ವಿಚಾರಣೆಯ ಬಳಿಕ ಸುಪ್ರೀಮ್ ಕೋರ್ಟು ಈ ತೀರ್ಪು ನೀಡಿತ್ತು. ಇನಾಮ್ ರದ್ದಿಯಾತಿ ಕಾಯ್ದೆಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿತ್ತು ಎಂಬ ಹಿನ್ನೆಲೆಯಲ್ಲಿ ಈ ತೀರ್ಪಿಗೆ ಬಹಳ ಮಹತ್ವವಿದೆ. ವಕ್ಫ್ ಭೂಮಿಯಲ್ಲಿ  ಯಾವುದೇ ಕಾಯ್ದೆಯ ಮೂಲಕ ಪರಭಾರೆ ಮಾಡುವುದಕ್ಕೆ ಯಾವುದೇ ಸರಕಾರಕ್ಕೂ ಅಧಿಕಾರ ಇಲ್ಲ ಎಂದು ಈ ತೀರ್ಪು  ಹೇಳುತ್ತದೆ. ವಕ್ಫ್ ನ  ಆಸ್ತಿಯು ಸದಾ ವಕ್ಫ್ ಆಸ್ತಿಯಾಗಿಯೇ ಇರುತ್ತದೆ ಎಂಬುದು ಭೂಸುಧಾರಣೆ ಕಾಯ್ದೆ, ಇನಾಮ್ ರದ್ದಿಯಾತಿ ಕಾಯ್ದೆ, ಭೂ ಒತ್ತುವರಿ ಕಾಯ್ದೆಗಳ ಮೂಲಕ ಸರಕಾರ ನೀಡಿರುವ ವಕ್ಫ್ನ ಎಲ್ಲ ಆಸ್ತಿಗಳೂ ವಕ್ಫ್ ನದ್ದೇ  ಆಗಿ  ಉಳಿಯಲಿದೆ ಎಂಬುದನ್ನೇ ಹೇಳುತ್ತದೆ. ಆ ಕಾರಣದಿಂದಲೂ ಪಹಣಿ ಪತ್ರ ಸಂಖ್ಯೆ 11ರಲ್ಲಿ ವಕ್ಫ್ ಆಸ್ತಿ ಎಂದು  ಉಳಿದುಕೊಂಡಿರುವುದಕ್ಕೆ ಅವಕಾಶ ಇದೆ. ಈಗಿನ ಪ್ರಶ್ನೆ ಏನೆಂದರೆ,

ಹಲವು ದಶಕಗಳಿಂದ ಇಂಥ ಭೂಮಿಯಲ್ಲಿ ಅಸಂಖ್ಯ ಮಂದಿ ವಾಸಿಸುತ್ತಿದ್ದಾರೆ. ಅದರಲ್ಲಿ ಅವರು ಮನೆ  ಕಟ್ಟಿಕೊಂಡಿರಬಹುದು, ಕೃಷಿ ಕಾರ್ಯ ಮಾಡುತ್ತಿರಬಹುದು, ಉದ್ಯಮಗಳನ್ನು ಸ್ಥಾಪಿಸಿರಬಹುದು, ಮಂದಿರವನ್ನೇ  ಕಟ್ಟಿಕೊಂಡಿರಲೂ ಬಹುದು. Once a Waqf is  always a Waqf  ಎಂಬ ಸುಪ್ರೀಮ್ ಕೋರ್ಟಿನ ತೀರ್ಪನ್ನು  ತೋರಿಸಿ ಇವರೆಲ್ಲರನ್ನೂ ಈಗ ಒಕ್ಕಲೆಬ್ಬಿಸಬೇಕಾ? ಅವರಿಂದ ಭೂಮಿಯನ್ನು ವಕ್ಫ್ ಇಲಾಖೆ ವಶಪಡಿಸಿಕೊಳ್ಳಬೇಕಾ?  ಇವರಿಗೆ ಅಥವಾ ಇವರ ಹಿರಿಯರಿಗೆ ಒಂದೋ ಈ ಭೂಮಿಯನ್ನು ಸರಕಾರ ಕೊಟ್ಟಿರಬಹುದು ಅಥವಾ ವಕ್ಫ್  ಇಲಾಖೆಯನ್ನು ದುರುಪಯೋಗಪಡಿಸಿ ಅಲ್ಲಿನ ಅಧಿಕಾರಿಗಳೇ ಮಾರಿರಬಹುದು. ಇವು ಏನಿದ್ದರೂ ಇವು ಇವರಿಗೆ  ಸಂಬಂಧಿಸಿದ್ದಲ್ಲ. ಸರಕಾರ ಮತ್ತು ಮುಸ್ಲಿಮ್ ವ್ಯಕ್ತಿಗಳು ಮಾಡಿರುವ ತಪ್ಪಿಗೆ ಇವರನ್ನು ಹೊಣೆ ಮಾಡುವುದೇ ಸರಿಯೇ?  ಒಂದುವೇಳೆ, ಹೀಗೆ ವಕ್ಫ್ ಭೂಮಿಯ ಮರುವಶ ಅಭಿಯಾನ ನಡೆಸುವುದಾದರೆ ಅದು ಒಟ್ಟು ಸಮಾಜದ ಮೇಲೆ ಬೀರುವ  ಪರಿಣಾಮ ಏನು? ಹೀಗೆ ಮಾಡುವುದು ಪ್ರಾಯೋಗಿಕವೇ? ಆಂತರಿಕ ಸಂಘರ್ಷವೊAದಕ್ಕೆ ಮತ್ತು ಈಗಾಗಲೇ ಇರುವ  ಮುಸ್ಲಿಮ್ ದ್ವೇಷದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯಲು ಇದು ಕೋಮುವಾದಿಗಳಿಗೆ ಸುಲಭ ಅವಕಾಶ ಆಗಲಾರದೇ?  ಇದರ ಬದಲು ಈಗ ಇರುವ ವಕ್ಫ್ ಆಸ್ತಿಯನ್ನಾದರೂ ಸುರಕ್ಷಿತವಾಗಿ ಉಳಿಸಿಕೊಳ್ಳುವುದಕ್ಕೆ ಮತ್ತು ಸಮುದಾಯಕ್ಕೆ  ಪ್ರಯೋಜನವಾಗುವ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ಕಾರ್ಯಯೋಜನೆ ರೂಪಿಸುವುದು ಉತ್ತಮವೇ?

ವಕ್ಫ್ ಇಲಾಖೆಯ ಮುಖ್ಯಸ್ಥರು, ಸಮುದಾಯದ ನಾಯಕರು, ಉಲೆಮಾಗಳು, ಸಂಘಟನೆಗಳು ಜೊತೆ ಸೇರಿ ಈ ಬಗ್ಗೆ  ನಿರ್ಧಾರ ಕೈಗೊಳ್ಳಬೇಕಿದೆ.