Wednesday, January 17, 2024

2023: ಒಂದು ತುದಿಯಲ್ಲಿ ಬಿದೂರಿ, ಇನ್ನೊಂದು ತುದಿಯಲ್ಲಿ ಗೌತಮ್ ಗಂಭೀರ್






1. ರಮೇಶ್ ಬಿದೂರಿ
2. ಗೌತಮ್ ಗಂಭೀರ್ 

2023ರಲ್ಲಿ ನಡೆದ ಮುಸ್ಲಿಮ್ ದ್ವೇಷದ ಘಟನಾವಳಿಗಳನ್ನು ಅವಲೋಕಿಸುವಾಗ ಥಟ್ಟನೆ ಎದುರು ಬಂದ ಎರಡು ಹೆಸರುಗಳಿವು.

ಸೆಪ್ಟೆಂಬರ್‌ನಲ್ಲಿ ನಡೆದ ಪಾರ್ಲಿಮೆಂಟ್ ಕಲಾಪದ ವೇಳೆ ಬಿಜೆಪಿ ಸಂಸದ ರಮೇಶ್ ಬಿದೂರಿ ಅತ್ಯಂತ ಅನಾಗರಿಕವಾಗಿ ವರ್ತಿಸಿದರು.  ಬಿ.ಎಸ್.ಪಿ. ಸಂಸದ ದಾನಿಶ್ ಅಲಿಯನ್ನು ಮುಲ್ಲಾ ಆತಂಕ್‌ವಾದಿ, ಉಗ್ರವಾದಿ, ಮುಂಜಿ ಮಾಡಿಕೊಂಡವ, ವೇಶ್ಯಾವಾಟಿಕೆ ನಡೆಸುವವ  ಎಂದೆಲ್ಲಾ ಅಷ್ಟೂ ಸದಸ್ಯರ ಮುಂದೆ ದೂಷಿಸಿದರು. ದಾನಿಶ್ ಅಲಿ ದಿಗ್ಭ್ರಾಂತರಾದರು. ಪಾರ್ಲಿಮೆಂಟ್ ಎತಿಕ್ಸ್ ಸಮಿತಿಯ  ಸದಸ್ಯರಾಗಿರುವ ತನ್ನನ್ನೇ ಆತಂಕ್‌ವಾದಿ, ಕಟುವಾ ಎಂದು ಪಾರ್ಲಿಮೆಂಟ್ ಒಳಗೆಯೇ ಸದಸ್ಯನೋರ್ವ ದೂಷಿಸುವುದಾದರೆ, ಪಾರ್ಲಿಮೆಂಟ್ ಹೊರಗಿನ ವಿಶಾಲ ಭಾರತದಲ್ಲಿ ಸಾಮಾನ್ಯ ಮುಸ್ಲಿಮರು ಎಂತೆಂಥ  ದೂಷಣೆಗಳನ್ನು ಎದುರಿಸುತ್ತಿರಬಹುದು ಎಂದು  ಆತಂಕಪಟ್ಟರು. ಎಲ್ಲೆಡೆ ವಿರೋಧ ವ್ಯಕ್ತವಾದಾಗ ಬಿಜೆಪಿ ಎಂದಿನ ತಂತ್ರವನ್ನು ಹೆಣೆಯಿತು. ಗೋರಕ್ಷಣೆಯ ಹೆಸರಲ್ಲಿ ಗೂಂಡಾಗಿರಿ  ನಡೆಸುವವರು ಹೇಗೆ ತಮ್ಮ ಮೇಲೆಯೂ ಹಲ್ಲೆಯಾಗಿದೆ ಎಂದು ಪ್ರತಿದೂರು ದಾಖಲಿಸಿ ಪ್ರಕರಣ ಇತ್ಯರ್ಥಪಡಿಸುವ ತಂತ್ರ  ಹೆಣೆಯುತ್ತಾರೋ ಅದೇ ವಿಧಾನವನ್ನು ಇಲ್ಲೂ ಬಳಸ
ಲಾಯಿತು. ‘ದಾನಿಶ್ ಅಲಿಯ ಪ್ರಚೋದನಕಾರಿ ಮಾತುಗಳಿಗೆ ಪ್ರತಿಯಾಗಿ ಬಿದೂರಿ ಈ ಪ್ರತಿಕ್ರಿಯೆ ನೀಡಿದ್ದು, ಅದೂ ವಿಚಾರಣೆಗೆ  ಒಳಗಾಗಬೇಕು’ ಎಂದು ಸ್ಪೀಕರ್ ಓಂ ಬಿರ್ಲಾರಿಗೆ ದೂರು ನೀಡಿತು. ಅಂದರೆ, ಯಾರಾದರೂ ಪ್ರಚೋದಿಸಿದರೆ, ಧರ್ಮದ್ವೇಷಿ ಪದಗಳ  ಮೂಲಕ ಪಾರ್ಲಿಮೆಂಟ್ ಒಳಗೆ ನಿಂದಿಸಬಹುದು ಎಂಬುದನ್ನು ಬಿಜೆಪಿ ಪರೋಕ್ಷವಾಗಿ ಸಮರ್ಥಿಸಿತು. ಹಾಗಂತ,

ಬಿದೂರಿಯ ಧರ್ಮದ್ವೇಷಿ ಬೈಗುಳವನ್ನು ಸೆರೆಹಿಡಿದ ಪಾರ್ಲಿಮೆಂಟ್ ಕ್ಯಾಮರಾವು ದಾನಿಶ್ ಅಲಿಯ ಪ್ರಚೋದನೆಯನ್ನು ಯಾಕೆ ಸೆರೆ  ಹಿಡಿದಿಲ್ಲ ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಇದು ಪ್ರಕರಣದ ಗಂಭೀರತೆಯನ್ನು ತಣಿಸುವ ಮತ್ತು ಗಮನ ಬೇರೆಡೆಗೆ  ಸೆಳೆಯುವ ಬಿಜೆಪಿ ತಂತ್ರದ ಭಾಗವೇ ಹೊರತು ಇನ್ನೇನಲ್ಲ. ಈಗ ಈ ಪ್ರಕರಣ ಏನಾಯಿತೆಂದು ಯಾರಿಗೂ ಗೊತ್ತಿಲ್ಲ. ಇದೇವೇಳೆ,  ಇದೇ ಬಿದೂರಿಗೆ ರಾಜಸ್ತಾನದ ಅಸೆಂಬ್ಲಿ ಚುನಾವಣೆಯ ವೇಳೆ ಟೋಂಕ್ ಜಿಲ್ಲೆಯ ಪ್ರಚಾರ ಉಸ್ತುವಾರಿಯನ್ನು ಬಿಜೆಪಿ ವಹಿಸಿಕೊಟ್ಟಿತು.  ಇದು ಮುಸ್ಲಿಮರು ಹೆಚ್ಚಿರುವ ಜಿಲ್ಲೆ. ಮುಸ್ಲಿಮ್ ದ್ವೇಷದ ಮಾತುಗಳನ್ನು ಉದುರಿಸಿ ಧ್ರುವೀಕರಣ ನಡೆಸುವುದರ ಹೊರತಾಗಿ ಇದಕ್ಕೆ  ಬೇರೆ ಯಾವ ಉದ್ದೇಶ ಇರಬಹುದು? ಹಾಗಂತ,

ಮಾಜಿ ಕ್ರಿಕೆಟಿಗ ಮತ್ತು ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್‌ರದ್ದು ಇನ್ನೊಂದು ಬಗೆ. ಪಾಕ್ ಜೊತೆ ಕ್ರಿಕೆಟ್ ಸಂಬಂಧವನ್ನು  ಸಂಪೂರ್ಣ ರದ್ದುಗೊಳಿಸಬೇಕು ಎಂದು ಬಲವಾಗಿ ವಾದಿಸಿದ ವ್ಯಕ್ತಿ ಈ ಗಂಭೀರ್. ತನ್ನ ಈ ನಿಲುವನ್ನು ಅವರು ಅನೇಕ ಬಾರಿ  ಬಹಿರಂಗವಾಗಿ ಸಾರಿದ್ದಾರೆ. ಆದರೆ, ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಇದೇ ಗಂಭೀರ್ ಪಾಕ್ ಕ್ರಿಕೆಟಿಗ ವಾಸಿಂ ಅಕ್ರಮ್ ಪಕ್ಕ  ಕೂತು ಭಾರತ-ಪಾಕ್ ಕ್ರಿಕೆಟ್ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು. ಒಂದುಕಡೆ ಪಾಕ್ ಜೊತೆ ಕ್ರಿಕೆಟ್ ಆಡಬಾರದು ಎನ್ನುತ್ತಾ ಇ ನ್ನೊಂದು ಕಡೆ ವೀಕ್ಷಕ ವಿವರಣೆ ನೀಡುವುದು ಇಬ್ಬಂದಿತನವಲ್ಲವೇ ಎಂಬ ಸೋಶಿಯಲ್ ಮೀಡಿಯಾ ಪ್ರಶ್ನೆಗೆ ಸಿಟ್ಟಾದರು. ಹಣದ  ಮುಂದೆ ಯಾವ ಸಿದ್ಧಾಂತವೂ ನಿಲ್ಲುವುದಿಲ್ಲ ಅನ್ನುವುದನ್ನು ಅವರು ಈ ಮೂಲಕ ತನ್ನ ಬೆಂಬಲಿಗರಿಗೆ ಸ್ಪಷ್ಟಪಡಿಸಿದರು.

2023 ಜನವರಿಯಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶದ ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ  ಜಾಹೀರಾತೊಂದು ಸಾಕಷ್ಟು ಚರ್ಚೆಗೆ ಕಾರಣವಾಯಿತು. ಈ ಜಾಹೀರಾತಿನಲ್ಲಿ ಎರಡು ಚಿತ್ರಗಳಿದ್ದುವು. 2017ಕ್ಕಿಂತ ಮೊದಲು ಮತ್ತು  2017ರ ನಂತರ ಎಂದು ಈ ಎರಡೂ ಚಿತ್ರಗಳಿಗೆ ಒಕ್ಕಣೆ ನೀಡಲಾಗಿತ್ತು. ಕುತ್ತಿಗೆಗೆ ಶಾಲು ಹಾಕಿಕೊಂಡ ಯುವಕ ಕೈಯಲ್ಲಿರುವ  ಪೆಟ್ರೋಲ್ ಬಾಂಬ್ ಎಸೆಯುವ ಚಿತ್ರ 2017ಕ್ಕಿಂತ ಮೊದಲಿನದ್ದಾದರೆ ಅದೇ ಯುವಕ ಕೈ ಮುಗಿದು ಕ್ಷಮೆ ಯಾಚಿಸುವ ಚಿತ್ರ 2017ರ  ನಂತರದ್ದು. ಉತ್ತರ ಪ್ರದೇಶದ ಮುಸ್ಲಿಮರು ಸಾಮಾನ್ಯವಾಗಿ ಕುತ್ತಿಗೆಗೆ ಶಾಲು ಸುತ್ತುವುದು ರೂಢಿ. ಅದನ್ನೇ ಅನ್ವರ್ಥವಾಗಿ ಈ ಚಿತ್ರದಲ್ಲಿ  ಬಳಸಲಾಗಿದೆ. 2017ರಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರನ್ನು ದಮನಿಸಿದ್ದಾರೆ ಎಂದು ಪರೋಕ್ಷ  ಸಂದೇಶ ಸಾರುವ ಈ ಜಾಹೀರಾತನ್ನು ಬಿಜೆಪಿ ಸಮರ್ಥಿಸಿಕೊಂಡಿತು. ಅದರಲ್ಲಿ ಮುಸ್ಲಿಮ್ ಅಂತ ಎಲ್ಲಿದೆ ಎಂಬುದು ಬಿಜೆಪಿಯ ಪ್ರ ಶ್ನೆಯಾಗಿತ್ತು. ಆದರೆ ಈ ಜಾಹೀರಾತಿನ ಒಳಾರ್ಥ ಏನು ಮತ್ತು ಜಾಹೀರಾತು ಯಾರ ಕುರಿತಾಗಿದೆ ಎಂಬುದು ಜನಸಾಮಾನ್ಯರಿಗೂ  ಅರ್ಥವಾಗುವಂತಿತ್ತು. ‘ಕ್ರಿಮಿನಲ್‌ಗಳನ್ನು ಅವರು ಧರಿಸಿರುವ ಬಟ್ಟೆಯಿಂದ ಗುರುತಿಸಬಹುದು’ ಎಂದು ಪ್ರಧಾನಿ ಮೋದಿಯವರು ಈ  ಹಿಂದೆ ಎನ್.ಆರ್.ಸಿ. ಪ್ರತಿಭಟನೆಯ ಸಂದರ್ಭದಲ್ಲಿ ಹೇಳಿದ್ದರು. ಹಾಗಂತ, ಕ್ರಿಮಿನಲ್‌ಗಳಿಗೆ ಯಾವ ಧರ್ಮವನ್ನೂ ಜೋಡಿಸಿಲ್ಲವಾದರೂ ಪ್ರಧಾನಿಯ ಗುರಿ ಯಾರು ಅನ್ನುವುದಕ್ಕೆ ವಿಶೇಷ ವಿವರಣೆಯ ಅಗತ್ಯವಿರಲಿಲ್ಲ. ಮುಸ್ಲಿಮರು ಎಂದು ಹೇಳದೇ ಮುಸ್ಲಿಮರ ನ್ನು ಅಪರಾಧಿಗಳಂತೆ ನಡೆಸಿಕೊಳ್ಳುವ ವಿಧಾನ ಇದು. ಮುಸ್ಲಿಮರು ಕ್ರಿಮಿನಲ್, ದಂಗೆಕೋರರು ಎಂಬೆಲ್ಲಾ ಸಂದೇಶವನ್ನು  ಪರೋಕ್ಷವಾಗಿ ಸಾರುತ್ತಾ ಮುಸ್ಲಿಮ್ ದ್ವೇಷವನ್ನು ಸಾರ್ವತ್ರಿಕವಾಗಿ ಬಿತ್ತುವ ಅಪಾಯಕಾರಿ ತಂತ್ರ ಇದು.

2023 ಜೂನ್‌ನಲ್ಲಿ ಒಡಿಸ್ಸಾದ ಬಾಲಸೋರ್‌ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿತು. ತಕ್ಷಣ ಈ ರೈಲು ಅಪಘಾತಕ್ಕೆ ಮುಸ್ಲಿಮ್  ವ್ಯಕ್ತಿ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಸೃಷ್ಟಿಸಿ ಹಂಚಲಾಯಿತು. ಅಪಘಾತ ನಡೆದ ಸ್ಥಳದ ರೈಲ್ವೇ ಸ್ಟೇಷನ್ ಅಧಿಕಾರಿ ಮುಸ್ಲಿಮ್ ಎಂದು ಈ ಸುದ್ದಿಯಲ್ಲಿ ಹೇಳಲಾಯಿತು. ಭಾರೀ ಸಂಖ್ಯೆಯಲ್ಲಿ ಈ ಸುಳ್ಳು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೆಯಾಯಿತಲ್ಲದೇ, ಕರ್ನಾಟಕದ ಹಳ್ಳಿ ಮೂಲೆಯ ವಾಟ್ಸಾಪ್‌ನಲ್ಲೂ ಪ್ರತ್ಯಕ್ಷವಾಯಿತು. ಆ ಬಳಿಕ ಇನ್ನೊಂದು ಸುಳ್ಳು ಸುದ್ದಿಯನ್ನು  ತೇಲಿಬಿಡಲಾಯಿತು. ಅಪಘಾತ ನಡೆದ ಸ್ಥಳದಲ್ಲಿರುವ ಬಿಳಿ ಕಟ್ಟಡವೊಂದನ್ನು ತೋರಿಸಿ ಇದು ಮಸೀದಿಯಾಗಿದ್ದು, ಇಲ್ಲಿ ನಡೆಸಲಾದ  ಸಂಚಿನಿಂದಲೇ   ಈ ಅಪಘಾತ ನಡೆದಿದೆ ಎಂದು ಹೇಳಲಾಯಿತು. ಮಾತ್ರವಲ್ಲ, ಶುಕ್ರವಾರ ಅಪಘಾತ ನಡೆದಿರುವುದನ್ನೂ ವಿಶೇಷವಾಗಿ  ಉಲ್ಲೇಖಿಸಲಾಯಿತು. ಮಸೀದಿಯಲ್ಲಿ ಶುಕ್ರವಾರ ಸೇರಿದ ಮುಸ್ಲಿಮರು ಈ ರೈಲು ಅಪಘಾತವಾಗುವಂತೆ ಕುತಂತ್ರ ಹೆಣೆದರು ಎಂದು  ಸೂಚಿಸುವುದಕ್ಕಾಗಿಯೇ ಶುಕ್ರವಾರವನ್ನು ವಿಶೇಷವಾಗಿ ಉಲ್ಲೇಖಿಸಲಾಗಿತ್ತು. ಈ ಸುದ್ದಿ ಕೂಡಾ ಭಾರೀ ಪ್ರಮಾಣದಲ್ಲಿ ಸೋಶಿಯಲ್  ಮೀಡಿಯಾದಲ್ಲಿ
ಹಂಚಿಕೆಯಾಯಿತು. ಆ ಬಳಿಕ, ಈ ಬಿಳಿ ಕಟ್ಟಡವು ಹರೇಕಷ್ಣ ಪಂಥದ ಮಂದಿರ ಎಂದು ಬಹಿರಂಗವಾಯಿತು. ಮುಸ್ಲಿಮ್ ದ್ವೇಷ ಈ  ಮಣ್ಣಿನಲ್ಲಿ ಹೇಗೆ ಬೆಳೆಯುತ್ತಿದೆ ಮತ್ತು ಮುಸ್ಲಿಮ್ ಭೀತಿಯನ್ನು ಹೇಗೆಲ್ಲ ಹರಡಲಾಗುತ್ತಿದೆ ಅನ್ನುವುದನ್ನು ಇದು ಸ್ಪಷ್ಟಪಡಿಸುತ್ತದೆ.

ಝೀ ನ್ಯೂಸ್ ಚಾನೆಲ್‌ನಲ್ಲಿ ಸುಧೀರ್ ಚೌಧರಿ ನಡೆಸಿಕೊಡುವ ಬ್ಲ್ಯಾಕ್ ಆಂಡ್ ವೈಟ್ ಪ್ರೈಮ್ ಟೈಮ್ ಶೋನಲ್ಲಿ ಮುಸ್ಲಿಮ್  ತುಷ್ಠೀಕರಣದ ವಿಷಯವನ್ನು ಎತ್ತಿಕೊಂಡರು. ‘ಮುಸ್ಲಿಮರು ವಾಹನ ಖರೀದಿಸಲು ಕರ್ನಾಟಕ ಸರಕಾರವು 50% ಧನಸಹಾಯ ಮತ್ತು  3 ಲಕ್ಷ ರೂಪಾಯಿ ಸಬ್ಸಿಡಿಯನ್ನು ನೀಡುತ್ತಿದೆ’ ಎಂದು ಹೇಳಿದ ಚೌಧರಿ, ಹಿಂದೂಗಳಿಗೆ ಏನೇನೂ ಇಲ್ಲ ಎಂದರು. ಹೇಗೆ ಸಿದ್ದರಾಮಯ್ಯ ಸರಕಾರವು ಮುಸ್ಲಿಮ್ ಓಲೈಕೆಯಲ್ಲಿ ತೊಡಗಿದೆ ಮತ್ತು ಹಿಂದೂ ವಿರೋಧಿಯಾಗಿ ನಡಕೊಳ್ಳುತ್ತಿದೆ ಎಂದು  ಭಾಷಣವನ್ನು ಬಿಗಿದರು. ನಿಜವಾಗಿ, ಇದು ತಿರುಚಿದ ಸತ್ಯವಾಗಿತ್ತು. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆ.ಎಂ.ಡಿ.ಸಿ.)ವು  ಮುಸ್ಲಿಮರೂ ಸೇರಿದಂತೆ ಕ್ರೈಸ್ತರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಈ ಸೌಲಭ್ಯವನ್ನು ಘೋಷಿಸಿದ್ದು ನಿಜ. ಆದರೆ ಈ  ಸೌಲಭ್ಯ ಅಲ್ಪಸಂಖ್ಯಾತರಿಗೆ ಮಾತ್ರ ಇರುವುದಲ್ಲ. ಇದೇ ರೀತಿಯ ಸೌಲಭ್ಯವನ್ನು ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ  ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಡಾ| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಹಿಂದೂಗಳಿಗೂ ನೀಡಲಾಗುತ್ತಿದೆ.  ಆದರೆ, ಸುಧೀರ್ ಚೌಧರಿ ಈ ಸತ್ಯ ಅಡಗಿಸಿಟ್ಟು ಮುಸ್ಲಿಮ್ ದ್ವೇಷವನ್ನು ಬಿತ್ತುವುದಕ್ಕೆ ಪ್ರಯತ್ನಿಸಿದರು. ಇವರ ವಿರುದ್ಧ ಇಲಾಖೆಯ ಶಿವ  ಕುಮಾರ್ ಅವರು ದೂರು ದಾಖಲಿಸಿದರು.

ಜಾಗತಿಕ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ವಿಶ್ವ ಚಾಂಪಿಯನ್ ಆದ ಬಳಿಕ  ಮಾಧ್ಯಮದವರು ಅವರ ತಾಯಿಯನ್ನು ಸಂದರ್ಶಿಸಿದ ಘಟನೆ ನಡೆಯಿತು. ನೀರಜ್ ಅವರ ಆತ್ಮೀಯ ಗೆಳೆಯ ಪಾಕಿಸ್ತಾನದ ಅರ್ಶದ್  ನದೀಮ್ ಈ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದರು. ‘ನಿಮ್ಮ ಮಗ ಪಾಕಿಸ್ತಾನಿಯನ್ನು ಸೋಲಿಸಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು’  ಎಂದು ಪತ್ರಕರ್ತನೋರ್ವ ಆ ತಾಯಿಯಲ್ಲಿ ಪ್ರಶ್ನಿಸಿದರು. ನಿಜವಾಗಿ ಈ ಪ್ರಶ್ನೆಯು ಕುಚೋದ್ಯವಾಗಿತ್ತು. ಪಾಕಿಸ್ತಾನವನ್ನು ದೂಷಿಸುವ  ಮೂಲಕ ಭಾರತೀಯ ಮುಸ್ಲಿಮರನ್ನು ಪರೋಕ್ಷವಾಗಿ ಕಟಕಟೆಯಲ್ಲಿ ನಿಲ್ಲಿಸುವುದು ಇಲ್ಲಿನ ಮಾಧ್ಯಮ ನೀತಿ. ಬಿಜೆಪಿಯೂ ಇದನ್ನೇ  ಮಾಡುತ್ತಿದೆ. ಪಾಕಿಸ್ತಾನವನ್ನು ದೂಷಿಸುವ ಉತ್ತರವೊಂದನ್ನು ನಿರೀಕ್ಷಿಸಿಯೇ ಈ ಪತ್ರಕರ್ತ ಈ ಪ್ರಶ್ನೆ ಕೇಳಿರಬೇಕು ಎಂದೇ ಅನಿಸುತ್ತದೆ.  ಆದರೆ ಆ ತಾಯಿ ಕೊಟ್ಟ ಉತ್ತರವಂತೂ ಜೀವನದಲ್ಲಿ ಇನ್ನೆಂದೂ ಇಂಥ ಪ್ರಶ್ನೆಯನ್ನು ಆ ಪತ್ರಕರ್ತ ಕೇಳಬಾರದೆಂಬಷ್ಟು  ಮಾರ್ಮಿಕವಾಗಿತ್ತು. ಆ ತಾಯಿ ಹೇಳಿದ್ದು ಹೀಗೆ;
“ಆಟಗಾರ ಕೇವಲ ಆಟಗಾರ ಮಾತ್ರ, ಆತ ಯಾವ ದೇಶದವ ಎಂಬುದು ಮುಖ್ಯ ಆಗುವುದಿಲ್ಲ. ಒಂದುವೇಳೆ, ಅರ್ಶದ್ ನದೀಮ್ ಈ  ಚಾಂಪಿಯನ್‌ಶಿಪನ್ನು ಜಯಿಸುತ್ತಿದ್ದರೂ ನಾನು ಸಂತೋಷಪಡುತ್ತಿದ್ದೆ.”

ಇವಲ್ಲದೇ ಇನ್ನೂ ಕೆಲವು ಮುಸ್ಲಿಮ್ ದ್ವೇಷಿ ಘಟನೆಗಳೂ 2023ರಲ್ಲಿ ನಡೆದಿವೆ. ಭಾರತ ಮತ್ತು ಪಾಕ್‌ಗಳ ನಡುವೆ ಕ್ರಿಕೆಟ್ ಪಂದ್ಯಾಟ  ನಡೆಯುತ್ತಿದ್ದಾಗ ಸ್ಟೇಡಿಯಂನಲ್ಲಿದ್ದ ಪಾಕಿಸ್ತಾನಿಯರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಬಾರದು ಎಂದು ಪೊಲೀಸ್‌ನೋರ್ವ  ತಡೆದದ್ದು ಇದರಲ್ಲಿ ಒಂದು. ಚೇತನ್ ಸಿಂಗ್ ಎಂಬ ರೈಲ್ವೇ ಕಾನ್‌ಸ್ಟೇಬಲ್ ಮೂವರು ಮುಸ್ಲಿಮರನ್ನು ಹುಡುಕಿ ಕೊಂದದ್ದು ಮತ್ತು  ಬಳಿಕ ಜೈ ಮೋದಿ, ಜೈ ಯೋಗಿ ಎಂದು ಘೋಷಿಸಿದ್ದೂ ಇದರಲ್ಲಿ ಒಂದು. ಉತ್ತರ ಪ್ರದೇಶದ ಮುಝಫ್ಫರ್ ನಗರ್‌ನಲ್ಲಿ ತೃಪ್ತ ತ್ಯಾಗಿ  ಎಂಬ ಟೀಚರ್ 7 ವರ್ಷದ ಮುಸ್ಲಿಮ್ ವಿದ್ಯಾರ್ಥಿಯ ಕೆನ್ನೆಗೆ ಹಿಂದೂ ವಿದ್ಯಾರ್ಥಿಗಳಿಂದ ಬಾರಿಸಿದ್ದೂ ಇದರಲ್ಲಿ ಒಂದು. ಭಾರತೀಯ  ಕಿಸಾನ್ ಯೂನಿಯನ್ ಮುಖಂಡ ನರೇಶ್ ಟಿಕಾಯಿತ್ ಅಂತೂ ತೃಪ್ತ ತ್ಯಾಗಿ ವಿರುದ್ಧದ ಕೇಸ್ ಹಿಂಪಡೆದುಕೊಳ್ಳುವಂತೆ  ಮುಸ್ಲಿಮ್  ವಿದ್ಯಾರ್ಥಿಯ ಹೆತ್ತವರ ಮೇಲೆ ಒತ್ತಡವನ್ನೂ ತಂದರು. ಗುಜರಾತ್‌ನ ಮೆಹ್ಸಾನಾದಲ್ಲಿ ಇನ್ನೂ ಒಂದು ಆಘಾತಕಾರಿ ಘಟನೆ ನಡೆಯಿತು.  10ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಅರ್ಸಾನ್ ಬಾನುಳನ್ನು ಸನ್ಮಾನಿಸದೇ ದ್ವಿತೀಯ ಸ್ಥಾನಿಯಾದ ಹಿಂದೂ ವಿದ್ಯಾರ್ಥಿ ನಿಯನ್ನು ಕರೆದು ಸನ್ಮಾನಿಸಿತು. ಚಂದ್ರಯಾನ ಯಶಸ್ವಿಯಾದ ಬೆನ್ನಿಗೇ ದೆಹಲಿಯ ಕೈಲಾಶ್ ನಗರದ ಹೇಮಾ ಗುಲಾಠಿ ಎಂಬ ಟೀಚರ್  ವಿವಾದಕ್ಕೆ ಗುರಿಯಾದರು. ‘ದೇಶಭಕ್ತಿ ಪಠ್ಯ’ವನ್ನು ಬೋಧಿಸುತ್ತಿದ್ದ ವೇಳೆ ಮುಸ್ಲಿಮ್ ವಿದ್ಯಾರ್ಥಿಗಳನ್ನುದ್ದೇಶಿಸಿ, ನೀವು ದೇಶದ ಸ್ವಾತಂತ್ರ‍್ಯ  ಹೋರಾಟಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ, ನಿಮಗೆ ಭಾರತದಲ್ಲಿರಲು ಅವಕಾಶವಿಲ್ಲ, ಪಾಕಿಸ್ತಾನಕ್ಕೆ ಹೋಗಿ, ಪ್ರಾಣಿ ಕೊಯ್ದು ತಿನ್ನುವವರು ನೀವು.. ಎಂದೆಲ್ಲಾ ನಿಂದಿಸಿದ್ದು ನಡೆಯಿತು. ಆ ಬಳಿಕ ಅವರ ಮೇಲೆ ಕ್ರಮ ಕೈಗೊಳ್ಳಲಾಯಿತು.

ಇವು 2023ರಲ್ಲಿ ಈ ದೇಶದಲ್ಲಿ ನಡೆದ ಮುಸ್ಲಿಮ್ ದ್ವೇಷದ ಕೆಲವು ಸ್ಯಾಂಪಲ್‌ಗಳಿವು. ಈ ದೇಶದಲ್ಲಿ ಅಧಿಕಾರದಲ್ಲಿರುವವರು ಮತ್ತು  ಮಾಧ್ಯಮಗಳು ಮುಸ್ಲಿಮ್ ದ್ವೇಷವನ್ನು ಉತ್ಪಾದಿಸಿ ಹಂಚುತ್ತಿದೆ ಮತ್ತು ಇದಕ್ಕೆ ವ್ಯಾಪಕ ಮಾರುಕಟ್ಟೆ ಒದಗುವಂತೆಯೂ  ನೋಡಿಕೊಳ್ಳುತ್ತಿದೆ. ನಿಜಕ್ಕೂ ಇದು ವಿಷಾದಕರ.

No comments:

Post a Comment