Saturday, November 25, 2023

‘40 ಶಿಶುಗಳ ಶಿರಚ್ಛೇದ’ ಸುದ್ದಿಯನ್ನು ಉತ್ಪಾದಿಸಿದವರು ಯಾರು?




1. ಇಸ್ರೇಲ್ ಮೊದಲ ಗುರಿ ಮಾತ್ರ: ಜಗತ್ತಿಗೆ ಹಮಾಸ್ ಕಮಾಂಡರ್ ಎಚ್ಚರಿಕೆ

ಜೆರುಸಲೇಂ: ಇಸ್ರೇಲ್ ಮತ್ತು ಗಾಜಾ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ಹಮಾಸ್ ಕಮಾಂಡರ್ ಮಹಮೂದ್ ಅಲ್  ಜಹರ್ ಅವರು ಜಗತ್ತಿಗೆ ದೊಡ್ಡ ಎಚ್ಚರಿಕೆಯನ್ನು ನೀಡಿದ್ದು, ಜಾಗತಿಕ ನಿಯಂತ್ರಣಕ್ಕಾಗಿ ಫೆಲೆಸ್ತೀನ್ ಭಯೋತ್ಪಾದಕ ಗುಂಪಿನ  ಮಹತ್ವಾಕಾಂಕ್ಷೆಗಳ ಮೇಲೆ ಬೆಳಕು ಚೆಲ್ಲುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದೆ. ಇಸ್ರೇಲ್ ಮೊದಲ ಗುರಿ ಮಾತ್ರ.  ಇಡೀ ಗ್ರಹ ನಮ್ಮ ಆಳ್ವಿಕೆಗೆ ಒಳಪಡುತ್ತದೆ ಎಂದು ಜಹರ್ ವೀಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
(ಉದಯವಾಣಿ, ಅಕ್ಟೋಬರ್ 12, 2023)

2. ಇಸ್ರೇಲ್ ಮೊದಲ ಗುರಿ, ಮುಂದೆ ಸಂಪೂರ್ಣ ಭೂಮಿಯಲ್ಲೇ  ನಮ್ಮ ಕಾನೂನು ಇರುತ್ತೆ: ಹಮಾಸ್ ಕಮಾಂಡರ್ ಎಚ್ಚರಿಕೆ
(ಏಶಿಯಾ ನೆಟ್ ಸುವರ್ಣ ನ್ಯೂಸ್: ಅಕ್ಟೋಬರ್ 12, 2023)

3. ಇಡೀ ಜಗತ್ತೇ ನಮ್ಮ ಕಾನೂನಿನ ಮುಷ್ಠಿಯಲ್ಲಿರಲಿದೆ: ಎಚ್ಚರಿಕೆ ನೀಡಿದ ಹಮಾಸ್ ಕಮಾಂಡರ್ ಅಲ್ ಜಹರ್
(ಟಿ.ವಿ. 9, ಅಕ್ಟೋಬರ್ 12, 2023)

4. ಇಸ್ರೇಲ್ ನಮ್ಮ ಮೊದಲ ಟಾರ್ಗೆಟ್ ಅಷ್ಟೇ, ಇಡೀ ಜಗತ್ತನ್ನು ನಮ್ಮ ಕಾನೂನಿನ ವ್ಯಾಪ್ತಿಗೆ ತರುತ್ತೇವೆ- ಹಮಾಸ್ ಉದ್ಧಟತನ
(ಪಬ್ಲಿಕ್ ಟಿ.ವಿ., ಅಕ್ಟೋಬರ್ 12, 2023)

ಈ ಮೇಲಿನ ಮಾಧ್ಯಮ ಸಂಸ್ಥೆಗಳಲ್ಲದೇ, ಎನ್‌ಡಿಟಿವಿ, ಹಿಂದೂಸ್ತಾನ್ ಟೈಮ್ಸ್ ನಂಥ  ಪತ್ರಿಕೆಗಳು ಕೂಡಾ ಇದೇ ರೀತಿಯ ಸುದ್ದಿಯನ್ನು  ಅಕ್ಟೋಬರ್ 12ರಂದು ಪ್ರಕಟಿಸಿವೆ. ಮಾತ್ರವಲ್ಲ, ಎಲ್ಲ ಮಾಧ್ಯಮ ಸಂಸ್ಥೆಗಳೂ ತಮ್ಮ ವೆಬ್ ಪೋರ್ಟಲ್‌ಗಳಲ್ಲಿ ಈ ಸುದ್ದಿಯ ಜೊತೆಗೇ  ಮುಹಮ್ಮದ್ ಅಲ್ ಜಹರ್ ಅವರ ವೀಡಿಯೋವನ್ನೂ ಹಂಚಿಕೊಂಡಿವೆ. ಅಲ್ ಮೇಕ್ ಎಂಬ ಪತ್ರಕರ್ತೆ ತನ್ನ ಟ್ವಿಟರ್(ಎಕ್ಸ್)ನಲ್ಲಿ  ಹಂಚಿಕೊಂಡಿರುವ MEMRI ಟಿ.ವಿ.ಯ ತುಣುಕನ್ನೇ ಬಹುತೇಕ ಎಲ್ಲವೂ ಹಂಚಿಕೊಂಡಿವೆ. ಇದೇ ಸುದ್ದಿಯನ್ನು ಇಸ್ರೇಲ್‌ನ ‘ದ  ಜೆರುಸಲೇಂ ಪೋಸ್ಟ್’ ಪತ್ರಿಕೆಯು Israel is only the first target: Warns Hamas commander ಎಂಬ ಶೀರ್ಷಿಕೆಯಲ್ಲಿ ಅಕ್ಟೋಬರ್ 9ರಂದು ಪ್ರಕಟಿಸಿದೆ. ಇದೇವೇಳೆ, ಇದೇ ಸುದ್ದಿಯ ಸುತ್ತ ಇಂಗ್ಲೆಂಡಿನ ಡೈಲಿ ಮೇಲ್ ಪತ್ರಿಕೆಯು  ಅಕ್ಟೋಬರ್ 10ರಂದು ವರದಿ ಪ್ರಕಟಿಸಿದ್ದು, ಹಮಾಸ್ ನಾಯಕ ಮುಹಮ್ಮದ್ ಅಲ್ ಜಹರ್ 2021 ಡಿಸೆಂಬರ್‌ನಲ್ಲಿ  ಬಿಡುಗಡೆಗೊಳಿಸಿದ್ದ ವೀಡಿಯೋದಲ್ಲಿ ಈ ಮಾತುಗಳನ್ನು ಆಡಿರುವುದಾಗಿ ವಿವರಿಸಿದೆ. (Israel is only the first target: Warns Hamas commander is newly resurfaced video). ಅಂದಹಾಗೆ, ಅರಬಿ ಭಾಷೆಯಲ್ಲಿರುವ ಆ ವೀಡಿಯೋದಲ್ಲಿರುವುದು ಇಷ್ಟು-

510 ದಶಲಕ್ಷ  ಚದರ ಕಿ.ಮೀ. ವಿಸ್ತಾರವುಳ್ಳ ಭೂಮಿಯಲ್ಲಿ ಅನ್ಯಾಯ, ದಬ್ಬಾಳಿಕೆ, ನರಮೇಧ ಸಹಿತ ಯಾವ ಅನ್ಯಾಯಗಳೂ ಇಲ್ಲದ  ಒಂದು ದೇಶ ನಿರ್ಮಾಣವಾಗಲಿದೆ. ಫೆಲೆಸ್ತೀನ್, ಲೆಬನಾನ್, ಸಿರಿಯಾ, ಇರಾಕ್ ಮುಂತಾದ ರಾಷ್ಟ್ರಗಳ ವಿರುದ್ಧ ಈಗ ನಡೆಯುತ್ತಿರುವ  ಅಕ್ರಮಗಳು ಕೊನೆಗೊಳ್ಳಲಿವೆ...

ಅಲ್ಲದೇ,

ಈ ವೀಡಿಯೋವನ್ನು ಮೆಮರಿ ಟಿ.ವಿ. ಪ್ರಸಾರ ಮಾಡಿದ ಕೆಲವೇ ಗಂಟೆಗಳೊಳಗೆ ಇಸ್ರೇಲ್ ಪ್ರಧಾನಿ ಪ್ರತಿಕ್ರಿಯೆ ನೀಡುತ್ತಾರೆ. ಅದು  ಹೀಗಿದೆ-

‘ಹಮಾಸ್ ಅಂದರೆ ಐಸಿಸ್ (ದಾಯಿಶ್) ಆಗಿದೆ ಮತ್ತು ಪ್ರಪಂಚವು ಐಸಿಸ್ ಅನ್ನು ನಾಶ ಮಾಡಿದಂತೆ ನಾವೂ ಅವರನ್ನು ನಾಶ  ಮಾಡುತ್ತೇವೆ.’

ಅಷ್ಟಕ್ಕೂ,

ಈ ಮುಹಮ್ಮದ್ ಅಲ್ ಜಹರ್ ಹಮಾಸ್‌ನ ಕಮಾಂಡರ್ ಅಲ್ಲ. ಹಮಾಸ್‌ನ ರಾಜಕೀಯ ವ್ಯವಹಾರ ಸಮಿತಿ ಸದಸ್ಯ. ಅಲ್ಲದೇ,  ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಮಾಡಿದ ದಾಳಿ ಮತ್ತು ಆ ಬಳಿಕ ಉಂಟಾದ ಘರ್ಷಣೆಯ ಹಿನ್ನೆಲೆಯಲ್ಲಿ  ಮಾಡಲಾದ ವೀಡಿಯೋ ಇದಲ್ಲ. ಲಂಡನ್ನಿನ ಡೈಲಿ ಮೇಲ್ ವಿವರಿಸಿದಂತೆ, ಒಂದು ವರ್ಷದ ಹಿಂದಿನ ವೀಡಿಯೋ. ಆದರೆ ಈ ಸು ದ್ದಿಯನ್ನು ಬಿತ್ತರಿಸಿದ ಭಾರತದ ಯಾವ ಮಾಧ್ಯಮಗಳು ಕೂಡಾ ಈ ಸತ್ಯವನ್ನು ಹೇಳಿಯೇ ಇಲ್ಲ. ಮತ್ತು ಜೆರುಸಲೇಂ ಪೋಸ್ಟ್ ಸಹಿತ  ಬಹುತೇಕ ಎಲ್ಲ ಮಾಧ್ಯಮ ಸಂಸ್ಥೆಗಳೂ ಈ ವೀಡಿಯೋದ ಹಿನ್ನೆಲೆಯನ್ನು ಮುಚ್ಚಿಟ್ಟಿವೆ ಮತ್ತು ಅಕ್ಟೋಬರ್ 7ರ ನಂತರದ ವೀಡಿಯೋ  ಎಂಬಂತೆಯೇ ಬಿಂಬಿಸಿವೆ. ಈ ವೀಡಿಯೋ ಪ್ರಸಾರವಾದ ಮರುಕ್ಷಣವೇ ಇಸ್ರೇಲ್ ಪ್ರಧಾನಿಯ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ  ನೋಡಿ. ಹಮಾಸನ್ನು ಅವರು ಐಸಿಸ್‌ಗೆ ಹೋಲಿಸುತ್ತಾರೆ. ಅದರಂತೆ ಭಯೋತ್ಪಾದನೆ ನಡೆಸುವ ಮತ್ತು ಜಗತ್ತನ್ನು  ಇಸ್ಲಾಮಯಗೊಳಿಸುವ ಉದ್ದೇಶವನ್ನು ಈ ಹಮಾಸ್ ಹೊಂದಿದೆ ಎಂಬಂತೆ ಹೇಳಿಕೆ ಕೊಡುತ್ತಾರೆ. ಹಾಗಂತ,

ಈ ವೀಡಿಯೋದ ಹಿನ್ನೆಲೆ, ಅದರಲ್ಲಿರುವ ವ್ಯಕ್ತಿಯ ಸ್ಥಾನಮಾನ ಇತ್ಯಾದಿಗಳನ್ನು ಕನ್ನಡ ಸಹಿತ ಭಾರತೀಯ ಮಾಧ್ಯಮಗಳು ಹೇಳದೇ  ಇರುವುದಕ್ಕೆ ಅವುಗಳನ್ನು ಸಂಪೂರ್ಣ ಕಟಕಟೆಯಲ್ಲಿ ನಿಲ್ಲಿಸುವಂತೆಯೂ ಇಲ್ಲ. ಇಂಥ ಸುದ್ದಿಗಳನ್ನು ಉತ್ಪಾದನೆ ಮಾಡಿ ಹಂಚುವುದರಲ್ಲಿ  MEMRI ಅಥವಾ ಮಿಡ್ಲೀಸ್ಟ್ ಮೀಡಿಯಾ ರಿಸರ್ಚ್ ಇನ್ಸ್ಟಿಟ್ಯೂಶನ್ ಕುಖ್ಯಾತಿ ಯನ್ನು ಪಡೆದಿದೆ. 1997 ಡಿಸೆಂಬರ್ 1ರಂದು  ಅಮೇರಿಕದ ವಾಷಿಂಗ್ಟನ್‌ನಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯ ಮುಖ್ಯ ರೂವಾರಿ ಇಸ್ರೇಲಿ ಗುಪ್ತಚರ ಸಂಸ್ಥೆಯ ಮಾಜಿ ಅಧಿಕಾರಿ ಇಗಲ್  ಕಾರ್ಮೆನ್ (Yigal Carmen) ಮತ್ತು ಇಸ್ರೇಲ್-ಅಮೇರಿಕನ್ ಚಿಂತಕ ಮೆರಾವ್ ವರ್ಮ್ಸೆರ್ ((Meyrav Wurmser)..  ಜಗತ್ತಿನ ಪ್ರಮುಖ ಮಾಧ್ಯಮಗಳಿಗೆ ಸುದ್ದಿಯನ್ನು ಒದಗಿಸುವ ಹೊಣೆಯನ್ನು ಇದು ವಹಿಸಿಕೊಂಡಿದೆ. ಮುಖ್ಯವಾಗಿ, ಅರಬ್ ರಾಷ್ಟ್ರಗಳ  ಸುದ್ದಿಗಳನ್ನು ಇಂಗ್ಲಿಷ್ ಮತ್ತಿತರ ಭಾಷೆಗಳಿಗೆ ಭಾಷಾಂತರಿಸಿ ಹಂಚುವುದು ಇದರ ಗುರಿ. ಆದರೆ ಇಸ್ರೇಲ್‌ನ ಪಕ್ಷಪಾತಿ ನೀತಿಗಾಗಿ ಇದು  ಸಾಕಷ್ಟು ಟೀಕೆಗೂ ಗುರಿಯಾಗಿದೆ. ಇಸ್ರೇಲ್‌ನ ಹಿತವನ್ನು ಕಾಪಾಡುವ ರೀತಿಯಲ್ಲಿ ಸುದ್ದಿಯನ್ನು ಹೆಣೆಯುವುದು ಇದರ ಗುರಿ ಎಂದು  ಹೇಳಲಾಗುತ್ತಿದೆ. ಅಲ್ ಜಹರ್ ಅವರ ವರ್ಷದ ಹಿಂದಿನ ವೀಡಿಯೋವನ್ನು ಇಸ್ರೇಲ್-ಫೆಲೆಸ್ತೀನ್ ಘರ್ಷಣೆಯ ಬೆನ್ನಿಗೆ ಜಾಗತಿಕ  ಮಾಧ್ಯಮಗಳಿಗೆ ದೊರಕುವಂತೆ ಪ್ರಸಾರ ಮಾಡಿರುವುದರಲ್ಲೂ ಮತ್ತು ಆ ವೀಡಿಯೋದ ಹಿನ್ನೆಲೆಯನ್ನು ಮುಚ್ಚಿಡುವುದರಲ್ಲೂ ಇದೇ  ಜಾಣತನವಿದೆ. ಕನ್ನಡ ಸಹಿತ ಭಾರತೀಯ ಮಾಧ್ಯಮಗಳು ಈ ಸುದ್ದಿಯನ್ನು ಸ್ವಯಂ ಉತ್ಪಾದಿಸಿದ್ದಲ್ಲ. ಅಲ್ಲಿಂದ ಕಡ ತಂದು ಪ್ರಕಟಿಸಿವೆ.  ಆದರೆ ಪ್ರಕಟಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಕ್ಕೆ ವಿಫಲವಾಗಿವೆ. ಮುಖ್ಯವಾಗಿ, ಘರ್ಷಣೆಯಂಥ ಸನ್ನಿವೇಶದಲ್ಲಿ  ಸುಳ್ಳು ಸುದ್ದಿಗಳನ್ನು ಉತ್ಪಾದಿಸಿ ಹಂಚುವುದೂ ಒಂದು ಯುದ್ಧತಂತ್ರ. ಆದ್ದರಿಂದ, ಘರ್ಷಣೆ ನಿರತ ರಾಷ್ಟ್ರಗಳ ಸುತ್ತ ವರದಿಯಾಗುವ  ಸುದ್ದಿಗಳನ್ನು ಪ್ರಕಟಿಸುವ ಮೊದಲು ಎಲ್ಲ ಮಾಧ್ಯಮ ಸಂಸ್ಥೆಗಳೂ ಮೈಯೆಲ್ಲಾ ಕಣ್ಣಾಗಿರಬೇಕು. ಶಶಸ್ತ್ರಾಸ್ತ್ರದಿಂದ  ಮಾಡಬಹುದಾದ ಹಾನಿಗಿಂತ ಹೆಚ್ಚಿನದ್ದನ್ನು ಕೆಲವೊಮ್ಮೆ ಒಂದು ಸುಳ್ಳು ಸುದ್ದಿ ಮಾಡಲು ಸಾಧ್ಯವಿದೆ. ಅಷ್ಟಕ್ಕೂ,

ಅಲ್ ಜಹರ್ ವೀಡಿಯೋದಲ್ಲಿ ಆಘಾತಕಾರಿಯಾದದ್ದೇನೂ ಇಲ್ಲ. ಅಖಂಡ ಭಾರತ್ ಎಂಬ ಪರಿಕಲ್ಪನೆಯನ್ನು ಹೇಗೆ ಈ ದೇಶದಲ್ಲಿ  ಹೇಳಲಾಗುತ್ತೋ ಅದೇ ರೀತಿಯ ಹೇಳಿಕೆ ಅದು. ಅಲ್ ಜಹರ್ ಉಲ್ಲೇಖಿಸಿದ ಲೆಬನಾನ್, ಸಿರಿಯ, ಇರಾಕ್, ಫೆಲೆಸ್ತೀನ್‌ಗಳೆಲ್ಲ  ಒಂದಲ್ಲ ಒಂದು ರೀತಿಯಲ್ಲಿ ಸಂಘರ್ಷ ಪೀಡಿತವಾಗಿವೆ. ಸಾಮ್ರಾಜ್ಯಶಾಹಿ ಶಕ್ತಿಗಳು ಈ ರಾಷ್ಟ್ರಗಳ ಸಾರ್ವ ಭೌಮತೆಯ ಮೇಲೆ ಹಿಡಿತ  ಸಾಧಿಸಿವೆ. ಅವುಗಳಿಂದ ಈ ದೇಶಗಳನ್ನು ವಿಮೋಚನೆಗೊಳಿಸುವುದು ಅವರ ಇಂಗಿತವಾಗಿದೆ. ಇದು ಭಯೋತ್ಪಾದನೆ ಹೇಗಾಗುತ್ತದೆ?  ಅರಬ್ ರಾಷ್ಟçಗಳನ್ನು ಅನ್ಯಾಯ ದಬ್ಬಾಳಿಕೆಯಿಂದ ವಿಮೋಚನೆಗೊಳಿಸುತ್ತೇವೆ ಅನ್ನುವುದು ಹೇಗೆ ಐಸಿಸ್ ಆಗುತ್ತದೆ? ಅಖಂಡ ಭಾರತ  ಎಂಬ ಪರಿಕಲ್ಪನೆಯಲ್ಲಿ ಕಾಣದ ಭಯೋತ್ಪಾದನೆಯು ಫೆಲೆಸ್ತೀನ್, ಲೆಬನಾನ್, ಸಿರಿಯಾವನ್ನು ಅನ್ಯರ ಹಿಡಿತದಿಂದ ಮುಕ್ತಗೊಳಿಸುವುದರಲ್ಲಿ ಹೇಗೆ ಕಾಣಲು ಸಾಧ್ಯ?

ಇನ್ನೂ ಒಂದು ಸುದ್ದಿಯಿದೆ,

1. ಹಸುಳೆಗಳನ್ನೂ ಬಿಡದ ಹೇಡಿಗಳು, ಮಕ್ಕಳ ಮಾರಣಹೋಮ: ರಾಕ್ಷಸ ಹಮಾಸ್
(ಹೊಸದಿಗಂತ ಅಕ್ಟೋಬರ್ 2023)

2. ಇಸ್ರೇಲ್‌ನಲ್ಲಿ ಹಮಾಸ್ ಉಗ್ರರಿಂದ 40 ಶಿಶುಗಳ ಹತ್ಯೆ
(ಕನ್ನಡ ಪ್ರಭ, ಅಕ್ಟೋಬರ್ 10, 2023)

3. 40 ಪುಟ್ಟ ಮಕ್ಕಳ ಶಿರಚ್ಛೇದ ಮಾಡಿದ ಹಮಾಸ್ ಉಗ್ರರು: ಶವ ಕಂಡು ಕಣ್ಣೀರಿಟ್ಟ ಇಸ್ರೇಲ್ ಯೋಧರು
(ಏಶಿಯಾ ನೆಟ್ ಸುವರ್ಣ ನ್ಯೂಸ್ ಅಕ್ಟೋಬರ್ 11, 2023)

4. Israel releases photos of babies murdered, burned by Hamas Monsters
(ಇಂಡಿಯಾ ಟುಡೇ, ಅಕ್ಟೋಬರ್ 12, 2023)

5. Hamas militants killed, beheaded 40 babies and children at Israeli kibbutz
(ಟೈಮ್ಸ್ ಆಫ್ ಇಂಡಿಯಾ, ಅಕ್ಟೋಬರ್ 11, 2023)

ಇವಲ್ಲದೇ, ಲಾಸ್ ಏಂಜಲೀಸ್ ಟೈಮ್ಸ್, ಲಂಡನ್ ಟೈಮ್ಸ್, ಡೈಲಿ ಮೇಲ್ ಮುಂತಾದ ಪ್ರಮುಖ ಪತ್ರಿಕೆಗಳು ಕೂಡಾ ಈ ಸುದ್ದಿಯನ್ನು  ಒತ್ತು ಕೊಟ್ಟು ಪ್ರಕಟಿಸಿದುವು. ವಿಶೇಷ ಏನೆಂದರೆ, ಎಲ್ಲಾ ಸುದ್ದಿಗಳಲ್ಲೂ ಶಿರಚ್ಛೇದ ಎಂಬ ಪದ ಸಾಮಾನ್ಯವಾಗಿತ್ತು. ಅಷ್ಟಕ್ಕೂ, ಶಿಶುಗಳನ್ನು ತಲೆ ಕೊಯ್ದು ಕೊಲ್ಲುವುದು ಎಂಬುದು ಭಯಾನಕ, ಭೀಭತ್ಸ. ಐಸಿಸ್‌ನ ಮೇಲೆ ಮತ್ತು ಅಲ್ ಕಾಯ್ದಾದ ಮೇಲೆ ಇಂಥದ್ದೇ   ಆರೋಪವನ್ನು ಹೊರಿಸಲಾಗುತ್ತದೆ. ಮಕ್ಕಳು ಈ ಜಗತ್ತಿನಲ್ಲಿ ಕರುಣೆಯ ಪ್ರತೀಕ. ಅದರಲ್ಲೂ ಶಿಶುಗಳಂತೂ ಅಸಹಾಯಕರು. ಅವು  ಸ್ವಯಂ ರಕ್ಷಿಸಿಕೊಳ್ಳಲೂ ಅಶಕ್ತ ಮತ್ತು ಪ್ರತೀಕಾರ ತೀರಿಸಲೂ ಅಸಮರ್ಥ. ಇಂಥ ಶಿಶುಗಳ ಶಿರಚ್ಛೇದ ಮಾಡುವುದೆಂದರೆ, ಅದು  ರಾಕ್ಷಸೀಯ ವರ್ತನೆ. ನಮ್ಮ ದೇಶದಲ್ಲೇ  ಮಕ್ಕಳ ಅಪಹರಣಕಾರರು ಎಂಬ ಆರೋಪದಲ್ಲಿ ಹಲವು ಲಿಂಚಿಂಗ್  ಪ್ರಕರಣಗಳು ನಡೆದಿವೆ.  ಹತ್ಯೆಯೂ ನಡೆದಿದೆ. ಅಂದರೆ, ಮಕ್ಕಳ ಬಗ್ಗೆ ಜಗತ್ತಿನಲ್ಲಿ ಅತೀವ ಕಾಳಜಿಯಿದೆ. ಆದ್ದರಿಂದ ಈ ಶಿರಚ್ಛೇದ ಸುದ್ದಿ ಹಮಾಸ್‌ನ ವಿರುದ್ಧ  ಜಗತ್ತನ್ನೇ ಒಂದಾಗಿಸಿತು. ಅಕ್ಟೋಬರ್ 8ರಂದು ಸಿಎನ್‌ಎನ್ ಚಾನೆಲ್ ಈ ಸುದ್ದಿಯನ್ನು ಸ್ಫೋಟಿಸಿತು. ಆ ಬಳಿಕ ಬೆಚ್ಚಿಬಿದ್ದ ಜಾಗತಿಕ  ಮಾಧ್ಯಮಗಳು ಅದನ್ನು ಮುಖ್ಯ ಸುದ್ದಿಯಾಗಿ ಪ್ರಕಟಿಸಿದುವು. ಇದೇ ಸುದ್ದಿಯನ್ನು ಅಮೇರಿಕದ ಅಧ್ಯಕ್ಷ ಜೋ ಬೈಡನ್ ಕೂಡಾ ಪುನರಾವರ್ತಿಸಿದರು. ಈ ಸುದ್ದಿ ಜಗತ್ತಿನಲ್ಲಿಡೀ ಸುತ್ತಿದ ನಾಲ್ಕು ದಿನಗಳ ಬಳಿಕ ಅಕ್ಟೋಬರ್ 12ರಂದು ಸಿಎನ್‌ಎನ್ ಪತ್ರಕರ್ತೆ ಸಾರಾ  ಸಿಡ್ನರ್ ಕ್ಷಮೆ ಯಾಚಿಸಿದರು. ಇಸ್ರೇಲ್ ಒದಗಿಸಿದ ಸುದ್ದಿಯನ್ನು ಪರಿಶೀಲಿಸದೇ ಹಂಚಿಕೊAಡಿದ್ದೆ, ಆದರೆ ಆ ಸುದ್ದಿಯನ್ನು ದೃಢ ಪಡಿಸಲು ಇಸ್ರೇಲ್ ವಿಫಲವಾಗಿದೆ. ಆದ್ದರಿಂದ ನನ್ನನ್ನು ಕ್ಷಮಿಸಿ... ಎಂದಾಕೆ ಟ್ವೀಟ್ ಮಾಡಿದರು.
ಹಾಗಿದ್ದರೆ,

ಈ ಸುದ್ದಿಯನ್ನು ಉತ್ಪಾದಿಸಿದ್ದು ಯಾರು? ಯಾಕೆ? ಶಿಶುಗಳ ಶಿರಚ್ಛೇದ ಎಂಬ ಸುದ್ದಿಯನ್ನೇ ಯಾಕೆ ಅವರು ಉತ್ಪಾದಿಸಿದರು? ಇದ ನ್ನು ಮರುಪರಿಶೀಲಿಸದೆಯೇ ಎಲ್ಲೆಡೆ ಹಂಚಿಕೊಳ್ಳುವAಥ ವಾತಾವರಣ ಸೃಷ್ಟಿ ಮಾಡಿದವರು ಯಾರು? ಸುಳ್ಳು ಸುದ್ದಿ ತಲುಪಿದ ಎಷ್ಟು  ಮಂದಿಗೆ ಆ ಬಳಿಕದ ಸತ್ಯಸುದ್ದಿ ತಲುಪಿರಬಹುದು? ಹಮಾಸ್ ಅಂದರೆ ಶಿಶುಗಳನ್ನು ಬಿಡದೆ ಶಿರಚ್ಛೇದನ ಮಾಡುವ ಪಾಪಿಗಳು  ಎಂದು ಈಗಲೂ ನಂಬಿರುವವರ ಸಂಖ್ಯೆ ಎಷ್ಟಿರಬಹುದು? ಹೀಗೆ ಆಗಬೇಕೆಂದೇ ಈ ಸುದ್ದಿಯನ್ನು ಸೃಷ್ಟಿಸಲಾಗಿತ್ತೇ? ಅಂದಹಾಗೆ,

ರಣಾಂಗಣದಲ್ಲಿ ನಡೆಯುವ ಯುದ್ಧಕ್ಕಿಂತ ಭೀಕರ ಯುದ್ಧವನ್ನು ಇವತ್ತು ಸುದ್ದಿ ಮನೆಗಳಲ್ಲಿ ಉತ್ಪಾದಿಸಲಾಗುತ್ತದೆ. ಆದ್ದರಿಂದ ಓದುಗರು  ಸದಾ ಜಾಗೃತರಾಗಿರಬೇಕು.

No comments:

Post a Comment