Thursday, July 20, 2023

50 ಲಕ್ಷ ಅಭಿಪ್ರಾಯಗಳು ಮತ್ತು ಸಮಾನ ನಾಗರಿಕ ಸಂಹಿತೆ

ಏ ಕೆ ಕುಕ್ಕಿಲ 
1. 1985 - ಶಾಬಾನೋ ಪ್ರಕರಣ
2. 1998 - ಸರಳಾ ಮುದ್ಗಲ್ ಪ್ರಕರಣ
3. 2003 - ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶರ ಪೀಠದ ಹೇಳಿಕೆ

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಸುಪ್ರೀಮ್ ಕೋರ್ಟು ಈ ಮೂರೂ ಸಂದರ್ಭಗಳಲ್ಲಿ ಹೇಳಿರು ವುದನ್ನು  ನಾಗರಿಕ ಸಂಹಿತೆಯ ಸಮರ್ಥಕರು ತಮ್ಮ ವಾದಕ್ಕೆ ಆಧಾರವಾಗಿ ನೀಡುತ್ತಿದ್ದಾರೆ. ಅಲ್ಲದೇ, ಸಂವಿಧಾನದ ಮಾರ್ಗ ದರ್ಶಿ ಸೂತ್ರಗಳಲ್ಲಿ  ಈ ಬಗ್ಗೆ ಒತ್ತಿ ಹೇಳಲಾಗಿದೆ ಎಂಬ ಕಡೆಗೂ ಬೊಟ್ಟು ಮಾಡುತ್ತಾರೆ. ಇದೂ ನಿಜವೇ.
ಸಂವಿಧಾನದ 4ನೇ ಭಾಗದಲ್ಲಿ 36ನೇ ಅನುಚ್ಛೇದದಿಂದ 51ನೇ ಅನುಚ್ಛೇದದ ವರೆಗೆ ‘ಕಾನೂನಿನ ಮೂಲಕ ಅನುಷ್ಠಾನ ಗೊಳಿಸಬೇಕಾದ  ಮೌಲ್ಯಗಳ ಬಗ್ಗೆ’ ಹೇಳಲಾಗಿದೆ. ಅದರಲ್ಲಿ ಏಕರೂಪ ನಾಗರಿಕ ಸಂಹಿತೆಯೂ ಒಂದು. ಹಾಗಂತ, ಅದುವೇ ಏಕೈಕ ಅಲ್ಲ. ಈ 36ರಿಂದ  51ರ ವರೆಗಿನ ಅನುಚ್ಛೇದದಲ್ಲಿ ಪಾನ ನಿಷೇಧದ ಬಗ್ಗೆಯೂ ಸೂಚಿಸಲಾಗಿದೆ. ಅಸಮಾನತೆಯ ನಿರ್ಮೂಲನೆ, ಸಮಾನ ಮತ್ತು ಉಚಿತ  ನ್ಯಾಯ, ಸಮಾನ ವೇತನ, ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಮಾಲಕರೊಂದಿಗೆ ಸಹಭಾಗಿತ್ವ.. ಇತ್ಯಾದಿಗಳ ಬಗ್ಗೆಯೂ ಸೂಚಿಸಲಾಗಿದೆ.  ಆದರೆ, ಏಕರೂಪ ನಾಗರಿಕ ಸಂಹಿತೆಯ ಹೊರತಾಗಿ ಸಂವಿಧಾನ ಮಾರ್ಗದರ್ಶಿ ಸೂತ್ರಗಳಲ್ಲಿ ಬೇರೇನೂ ಹೇಳಿಯೇ ಇಲ್ಲ ಎಂಬಂತೆ   ನಟಿಸುತ್ತಿರುವವರ ದ್ವಂದ್ವವನ್ನು ಪಕ್ಕಕ್ಕಿಟ್ಟು ನೋಡಿದರೆ, ಪ್ರಸ್ತಾವಿತ ಈಗಿನ ಏಕರೂಪ ನಾಗರಿಕ ಸಂಹಿತೆಯು 2024ರ ಲೋಕಸಭಾ  ಚುನಾವಣೆಯ ಸರಕಲ್ಲದೇ ಮತ್ತೇನಲ್ಲ ಎಂದು ಅನಿಸುತ್ತದೆ.

 ಅಷ್ಟಕ್ಕೂ,

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದೇ ಆದರೆ, ಅದರ ಸ್ವರೂಪ ಏನು? ದೇಶದಲ್ಲಿ ಈಗ ಭಾರತೀಯ  ವಾರಸುದಾರಿಕೆ ಕಾಯ್ದೆ, ಹಿಂದೂ ವಾರಸುದಾರಿಕೆ ಕಾಯ್ದೆ, ಕ್ರೈಸ್ತ ವಾರಸುದಾರಿಕೆ ಕಾಯ್ದೆ, ಜೈನ ವಾರಸುದಾರಿಕೆ ಕಾಯ್ದೆ ಅಸ್ತಿತ್ವದಲ್ಲಿದೆ.  ಬೌದ್ಧರು, ಸಿಕ್ಖರು ಹಿಂದೂ ವಾರಸುದಾರಿಕೆ ಕಾಯ್ದೆಯಡಿಯಲ್ಲಿ ಬರುವಾಗ ಬುಡಕಟ್ಟುಗಳು, ಪರಿಶಿಷ್ಟ ಜಾತಿ-ಪಂಗಡಗಳು ಭಾರತೀಯ  ವಾರಸುದಾರಿಕೆ ಕಾಯ್ದೆಯಡಿಯಲ್ಲಿ ಬರುತ್ತಾರೆ ಎಂದು ಹೇಳಲಾಗುತ್ತಿದೆ. ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿಯೂ ಇವೆರಡೂ  ಕಾಯ್ದೆಗಳಲ್ಲಿ ಕೇಂದ್ರ ಸರಕಾರ ತರಬಯಸುವ ಏಕರೂಪ ಯಾವುದು ಎಂಬ ಪ್ರಶ್ನೆಯಿದೆ. ಇದು ಕೇವಲ ಮುಸ್ಲಿಮರಿಗೆ ಸಂಬಂಧಿಸಿದ  ವಿಷಯವಲ್ಲ. ಆದ್ದರಿಂದಲೇ, ನಾಗಾಲ್ಯಾಂಡ್, ಮೇಘಾಲಯ, ಛತ್ತೀಸ್‌ಗಢ್ ಸಹಿತ ಈಶಾನ್ಯ ಭಾರತದ ಬುಡಕಟ್ಟು ಸಮುದಾಯಗಳು  ಏಕರೂಪ ನಾಗರಿಕ ಸಂಹಿತೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಕ್ರೈಸ್ತರೂ ವಿರೋ ಧಿಸುತ್ತಿದ್ದಾರೆ. 

ಅಂದಹಾಗೆ,

ಹಲವು ಧರ್ಮ, ಸಂಸ್ಕೃತಿ, ಆಚರಣೆಗಳುಳ್ಳ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆಯ ಅಗತ್ಯವಿದೆಯೇ, ಅದು ಪರಿ ಣಾಮಕಾರಿಯೇ  ಮತ್ತು ರಾಷ್ಟ್ರೀಯತೆಯ ಭಾವನೆಯನ್ನು ಆ ಮೂಲಕ ಬೆಳೆಸಬಹುದೇ ಎಂಬ ಪ್ರಶ್ನೆ ಮತ್ತು ಚರ್ಚೆ ಈ 2023ರಲ್ಲಿ ದುತ್ತನೆ  ಆರಂಭವಾದದ್ದಲ್ಲ. ಅಂಬೇಡ್ಕರ್ ಅವರೇ ಈ ಏಕರೂಪ ನಾಗರಿಕ ಸಂಹಿತೆಯ ಪರ ಮಾತಾಡಿದ್ದರು. ಸಂವಿಧಾನದ ಮಾರ್ಗದರ್ಶಿ  ಸೂತ್ರಗಳಲ್ಲಿ ಅದಕ್ಕೆ ಜಾಗವನ್ನೂ ಕೊಟ್ಟಿದ್ದರು. ಮಾತ್ರವಲ್ಲ, 1940ರಿಂದ 1973ರ ವರೆಗೆ ದೀರ್ಘ 33 ವರ್ಷಗಳ ಕಾಲ ಆರೆಸ್ಸೆಸ್  ಸರಸಂಘ ಚಾಲಕರಾಗಿದ್ದ ಮಾಧವ್ ಸದಾಶಿವ್ ಗೋಲ್ವಾಲ್ಕರ್ ಅವರನ್ನೂ ಈ ಚರ್ಚೆಯ ಕಾವು ತಟ್ಟಿತ್ತು. 1972 ಆಗಸ್ಟ್ 23ರ  ಸಂಚಿಕೆಯಲ್ಲಿ ಆರೆಸ್ಸೆಸ್ ಮುಖವಾಣಿ ಆರ್ಗನೈಝರ್ ಪತ್ರಿಕೆ ಅವರ ಸಂದರ್ಶನವನ್ನೂ ಪ್ರಕಟಿಸಿತ್ತು. ಸಂದರ್ಶನ ನಡೆಸಿದವರು ಸಂಪಾದಕ ಕೆ.ಆರ್. ಮಲ್ಕಾನಿ. ಆ ಸಂದರ್ಶನದ ಒಂದು ಪ್ರಶ್ನೆ ಮತ್ತು ಉತ್ತರ ಹೀಗಿತ್ತು:

ಮಲ್ಕಾನಿ: Dont you agree that uniformity is needed to promote national unity?- ರಾಷ್ಟ್ರೀಯ  ಏಕತೆಯನ್ನು ಉತ್ತೇಜಿಸುವುದಕ್ಕಾಗಿ ಏಕರೂಪತೆ ಅಗತ್ಯ ಎಂಬುದನ್ನು ನೀವು ಒಪ್ಪುವುದಿಲ್ಲವೇ?

ಗೋಲ್ವಾಲ್ಕರ್: Harmony and uniformity are two different things. For harmony, uniformity is not necessary. There ಹಾವೇ alwayas been limitless diversities in India. Inspite of this our nation has remined strong and well organised since ancient time. For unity, we need harmony, not uniformity - ಮತ್ತು ಏಕರೂಪ- ಇವೆರಡೂ  ಬೇರೆ ಬೇರೆ ವಿಷಯಗಳು. ಸಾಮರಸ್ಯಕ್ಕೆ ಏಕರೂಪದ ಅಗತ್ಯವಿಲ್ಲ. ಭಾರತವು ಅಗಣಿತದ ವೈವಿಧ್ಯತೆಯನ್ನು ಹೊಂದಿರುವ ದೇಶ. ಇದರ  ಹೊರತಾಗಿಯೂ ದೇಶವು ಪುರಾತನ ಕಾಲದಿಂದಲೇ ಬಲಿಷ್ಠವಾಗಿಯೇ ಉಳಿದಿದೆ. ಏಕತೆಗಾಗಿ ಸಾಮರಸ್ಯದ ಅಗತ್ಯವಿದೆಯೇ ಹೊರತು  ಏಕರೂಪ ಅಲ್ಲ. (Guruji Golwalkar- Collected works volume 9, Page 165) ಈ ಕುರಿತಾದ  ಪೂರ್ಣ ಸಂದರ್ಶನದ ವಿವರವನ್ನು ದಿ ಕ್ವಿಂಟ್ ಅಂತರ್ಜಾಲ ಪತ್ರಿಕೆಯು 2020 ಫೆಬ್ರವರಿಯಲ್ಲಿ ಪ್ರಕಟಿಸಿತ್ತು ಮತ್ತು 2023 ಜುಲೈ  2ರಂದು ಮರು ಪ್ರಕಟಿಸಿದೆ. ಅಂದಹಾಗೆ,

ಈ ಕಾಯ್ದೆಯನ್ನು ಬೆಂಬಲಿಸುವವರಲ್ಲಿ ಎರಡು ವರ್ಗವಿದೆ.

1. ಇದು ಮುಸ್ಲಿಮ್ ವಿರೋಧಿ ಕಾಯ್ದೆ ಎಂದು ಭಾವಿಸಿರುವ ಮತ್ತು ಮುಸ್ಲಿಮರಿಗೆ ತಕ್ಕ ಶಾಸ್ತಿ ಆಗಲೇಬೇಕು ಎಂದು  ಅಂದುಕೊಂಡಿರುವ ವರ್ಗ.

2. ತಾವು ಬೆಂಬಲಿಸುವ ಪಕ್ಷ  ಜಾರಿಗೆ ತರುವ ಯಾವುದೇ ಕಾಯ್ದೆಯು ದೇಶದ ಹಿತದಿಂದಲೇ ಕೂಡಿರುತ್ತದೆ ಮತ್ತು ಅದನ್ನು ಬೆಂಬಲಿಸಲೇಬೇಕು ಎಂದು ನಂಬಿರುವ ವರ್ಗ.

ನಿಜವಾಗಿ, ಏಕರೂಪ ನಾಗರಿಕ ಸಂಹಿತೆಯ ಕರಡು ಪ್ರತಿ ಇನ್ನೂ ರಚನೆಯಾಗಿಲ್ಲದಿದ್ದರೂ ಅದು ಮುಖ್ಯವಾಗಿ ವಿವಾಹ, ವಿಚ್ಛೇದನ,  ವಾರಸುದಾರಿಕೆ, ದತ್ತು ಸ್ವೀಕಾರ.. ಇತ್ಯಾದಿಗಳನ್ನು ಒಳಗೊಂಡಿರಲಿದೆ ಎಂಬ ಅಂಶವನ್ನು ತೇಲಿ ಬಿಡಲಾಗಿದೆ. ಏಕರೂಪ ನಾಗರಿಕ  ಸಂಹಿತೆಯ ಬಗ್ಗೆ ರಾಷ್ಟ್ರೀಯ ಕಾನೂನು ಆಯೋಗವು ಸಾರ್ವಜನಿಕರು, ಧಾರ್ಮಿಕ ಸಂಸ್ಥೆಗಳು ಮತ್ತಿ ತರರಿಂದ ಅಭಿಪ್ರಾಯ  ಸಂಗ್ರಹಕ್ಕೂ ಇಳಿದಿದೆ. ಈಗಾಗಲೇ 50 ಲಕ್ಷಕ್ಕಿಂತಲೂ ಅಧಿಕ ಅಭಿಪ್ರಾಯಗಳು ಸಲ್ಲಿಕೆಯಾಗಿವೆ. ಹಾಗಂತ, ಈ ಅಭಿಪ್ರಾಯಗಳನ್ನು  ಆಧರಿಸಿ ಏಕರೂಪ ನಾಗರಿಕ ಸಂಹಿ ತೆಯ ಕರಡನ್ನು ರಚಿಸಲಾಗುತ್ತದೋ ಅಥವಾ ಮುಚ್ಚಿದ ಕೋಣೆಯಲ್ಲಿ ಈಗಾಗಲೇ  ರಚಿಸಲಾಗಿರುವ ಕರಡು ಪ್ರತಿಗೆ ಅಧಿಕೃತ ಮೊಹರು ಒತ್ತಲು ಈ ಅಭಿಪ್ರಾಯವನ್ನು ಅಪೇಕ್ಷಿಸಲಾಗಿದೆಯೋ, ಗೊತ್ತಿಲ್ಲ. 

ಒಂದುವೇಳೆ,

ಸಾರ್ವಜನಿಕ ಅಭಿಪ್ರಾಯವನ್ನು ಆಧರಿಸಿಯೇ ಈ ಏಕರೂಪ ನಾಗರಿಕ ಸಂಹಿತೆಯ ಕರಡನ್ನು ರಚಿಸಲಾಗುವುದಾದರೆ ಅದು ದೇಶವನ್ನು  ಆಂತರಿಕ ಸಂಘರ್ಷಕ್ಕೆ ದೂಡುವುದು ನಿಶ್ಚಿತ. ಯಾಕೆಂದರೆ, ಸಮಾಜದ ಸೌಖ್ಯಕ್ಕೆ ಇವತ್ತು ಸವಾಲಾಗಿರುವುದು ಮುಸ್ಲಿಮರ ಮದುವೆ,  ವಿಚ್ಛೇದನ, ವಾರೀಸು ಸೊತ್ತು ವಿತರಣೆಗಳಲ್ಲ. ಅದು ಸಾರ್ವಜನಿಕವಾಗಿ ಇವತ್ತು ಸುದ್ದಿಯಲ್ಲೇ  ಇಲ್ಲ. ಕೋರ್ಟು-ಕಚೇರಿಗಳಲ್ಲೂ  ಇವುಗಳಿಗೆ ಸಂಬಂಧಿಸಿದಂತೆ  ಅತ್ಯಂತ ವಿರಳ ದಾವೆಗಳಷ್ಟೇ ಇವೆ. ಆದರೆ, ದೇಶದಲ್ಲಿ ಪ್ರತಿ ನಿತ್ಯವೆಂವೆಂಬ ಒಂದಲ್ಲ ಒಂದು ಕಡೆ  ಅಸಮಾನತೆ, ಅಸ್ಪೃಶ್ಯತೆ ಯನ್ನು ಪ್ರಶ್ನಿಸಿ ಪ್ರತಿಭಟನೆ ನಡೆಯುತ್ತಿದೆ. ಪ್ರಕರಣಗಳು ದಾಖಲಾಗುತ್ತಿವೆ. ಮಂದಿರ ಪ್ರವೇಶಕ್ಕೆ ನಿರಾಕರಣೆ, ದ ಲಿತರ ಶವ ಸಂಸ್ಕಾರಕ್ಕೆ ಅಡ್ಡಿ, ದಲಿತ ಮದುಮಗ ಕುದುರೆ ಮೇಲೆ ಸಾಗುವುದಕ್ಕೆ ವಿರೋಧ, ಅಂತರ್ಜಾತಿ ವಿವಾಹಕ್ಕೆ ತಡೆ-ಹತ್ಯೆ, ದಲಿತರಿಗೆ ಆರ್ಥಿಕ-ಸಾಮಾಜಿಕ ಬಹಿಷ್ಕಾರ.. ಇತ್ಯಾದಿ ಘಟನೆ ಗಳು ದಿನನಿತ್ಯ ವರದಿಯಾಗುತ್ತಿವೆ. ಮೀಸಲಾತಿಯನ್ನೇ ಕಿತ್ತು ಹಾಕಬೇಕು  ಎಂದು ವಾದಿಸುವ ಗುಂಪೂ ದೇಶದಲ್ಲಿದೆ. ತಮ್ಮದೇ ಆದ ವಿವಾಹ, ವಿಚ್ಛೇದನ, ವಾರೀಸುದಾರಿಕೆಯನ್ನು ಹೊಂದಿರುವ ಬುಡಕಟ್ಟುಗಳು,  ಪರಿಶಿಷ್ಟ ಜಾತಿ-ಪಂಗಡಗಳು ಈ ದೇಶದ ಉದ್ದಕ್ಕೂ ಇವೆ. ಮಲೆಕುಡಿಯ ಎಂಬ ಅತಿ ಹಿಂದುಳಿತ ಕರಾವಳಿ ಭಾಗದ ಸಮುದಾಯದ  ಒಟ್ಟು ಜೀವಿತಾವಧಿ 45-50 ವರ್ಷಗಳ ಒಳಗಿದ್ದು, ಇವರಿಗೆ ಮದುವೆಯ ವಯಸ್ಸಿನಲ್ಲಿ ರಿಯಾಯಿತಿ ಕೊಡದಿದ್ದರೆ ಆ  ಸಮುದಾಯವೇ ಅಳಿದು ಹೋಗಬಹುದು ಎಂಬ ಬೇಡಿಕೆ ಬಲವಾಗಿಯೇ ಇದೆ. ಹೆಣ್ಣಿಗೆ 18 ಮತ್ತು ಗಂಡಿಗೆ 21 ಎಂಬ ಈಗಿನ  ಮದುವೆ ವಯಸ್ಸಿನ ಮಿತಿಯನ್ನು ಮಲೆ ಕುಡಿಯರಿಗೆ ಕಡ್ಡಾಯವಾಗಿಸದೇ ಬೇಗನೇ ಮದುವೆಯಾಗುವ ಮತ್ತು ಆ ಮೂಲಕ ಸಂತಾನ  ವೃದ್ಧಿ ಮಾಡುವ ಅವಕಾಶ ನೀಡಬೇಕು ಎಂಬ ಬೇಡಿಕೆಗೆ ತಜ್ಞರ ಬೆಂಬಲವೂ ಇದೆ.

ಇದೇವೇಳೆ,

ಮೀಸಲಾತಿಗೆ ಸಮಾಜದ ಒಂದು ವರ್ಗದಿಂದ ಇರುವ ವಿರೋಧವೂ ಗುಟ್ಟೇನಲ್ಲ. ಮಣಿಪುರವನ್ನು ಹೊತ್ತಿ ಉರಿಸಿರುವುದರ ಹಿಂದೆ ಈ  ಮೀಸಲಾತಿಗೂ ಪಾತ್ರವಿದೆ. ಸ್ವಾತಂತ್ರ‍್ಯದ 75 ವರ್ಷಗಳ ಬಳಿಕವೂ ಈ ಮೀಸಲಾತಿಯನ್ನು ಉಳಿಸಿಕೊಳ್ಳುವುದಕ್ಕೆ ಅರ್ಥವಿಲ್ಲ ಎಂದು  ಟೀಕಿಸುವವರ ಸಂಖ್ಯೆ ಸಣ್ಣದೇನಲ್ಲ. ಶೈಕ್ಷಣಿಕ ವ್ಯವಸ್ಥೆಯ ಕುರಿತೂ ಸಾರ್ವಜನಿಕವಾಗಿ ಅಸಮಾಧಾನವಿದೆ. ಬಡವರು-ಹಿಂದುಳಿದವರು  ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದರೆ, ಶ್ರೀಮಂತರು ದುಬಾರಿ ಫೀಸು ತೆತ್ತು ಸಕಲ ಸೌಲಭ್ಯಗಳುಳ್ಳ ಉನ್ನತ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.  ಹಾಗೆಯೇ, ಹಿಂದೂ-ಮುಸ್ಲಿಮ್, ಕ್ರೈಸ್ತ, ಜೈನ, ಸಿಕ್ಖ್ ಮಾಲಿಕತ್ವದ ಶಾಲೆಗಳನ್ನು ಆಯಾ ಧರ್ಮದ ಮಂದಿ ಆಯ್ಕೆ  ಮಾಡಿಕೊಳ್ಳುತ್ತಿರುವುದೂ ನಡೆಯುತ್ತಿದೆ. ಇದು ಸಮಾಜವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಧಾರ್ಮಿಕವಾಗಿ ವಿಭಜಿಸುತ್ತಿದೆ  ಎಂಬ ಭಾವವೂ ಜನರಲ್ಲಿದೆ. ಆರೋಗ್ಯಕ್ಕೆ ಸಂಬಂಧಿಸಿಯೂ ಈ ಅಸಮಾಧಾನವನ್ನು ವಿಸ್ತರಿಸಿ ನೋಡಬಹುದು. ಬಡವರು,  ಹಿಂದುಳಿದವರು, ದುರ್ಬಲರು ಸರಕಾರಿ ಆಸ್ಪತ್ರೆಗಳನ್ನು ಅವಲಂಬಿಸುವಾಗ ಶ್ರೀಮಂತರು ದುಬಾರಿ, ಐಶಾರಾಮಿ ಶಾಸಗಿ ಆಸ್ಪತ್ರೆ ಗಳನ್ನು  ಅವಲಂಬಿಸುತ್ತಾರೆ. ಸರಕಾರಿ ಆಸ್ಪತ್ರೆಗಳ ಸೇವೆ ಮತ್ತು ಸೌಲಭ್ಯಗಳಿಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳು ಎಷ್ಟೋ ಮಿಗಿಲು.  ಆದ್ದರಿಂದಲೇ, ಬಡವರು ಮತ್ತು ಹಿಂದುಳಿದವರು ಸರಿಯಾದ ಚಿಕಿತ್ಸೆ ದೊರೆಯದೇ ಸರಕಾರಿ ಅಸ್ಪತ್ರೆಗಳಲ್ಲಿ ಸಾವನ್ನಪ್ಪುವಾಗ  ಶ್ರೀಮಂತರು ಸುಖವಾಗಿರುತ್ತಾರೆ. ದೇಶದಲ್ಲಿ ನಡೆಯುವ ಹೆರಿಗೆ ಸಾವುಗಳಲ್ಲಿ ಅತ್ಯಧಿಕವೂ ಸರಕಾರಿ ಆಸ್ಪತ್ರೆಗಳಲ್ಲೇ  ನಡೆಯುತ್ತಿದೆ ಎಂಬ  ವಾದವೂ ಇದೆ. 

ಒಂದುವೇಳೆ,

ತನಗೆ ಸಲ್ಲಿಕೆಯಾದ ಸಾರ್ವಜನಿಕ ಅಭಿಪ್ರಾಯಗಳ ಆಧಾರದಲ್ಲೇ  ರಾಷ್ಟ್ರೀಯ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯ  ಕರಡನ್ನು ರೂಪಿಸಲು ಹೊರಡುವುದಾದರೆ ಇಂಥ ಅಸಮಾನತೆಯನ್ನು ಪ್ರಶ್ನಿಸುವ ಮತ್ತು ಇವುಗಳಲ್ಲಿ ಸಮಾನತೆ ಯನ್ನು ತರುವಂತೆ  ಆಗ್ರಹಿಸುವ ಅತೀ ಹೆಚ್ಚು ಅಭಿಪ್ರಾಯಗಳಿಗೆ ಮುಖಾಮುಖಿಯಾಗಬೇಕಾದುದು ಖಂಡಿತ. ಈಗ ಆಯೋ ಗಕ್ಕೆ ಸಲ್ಲಿಕೆಯಾಗಿರುವ 50  ಲಕ್ಷ ಅಭಿಪ್ರಾಯಗಳಲ್ಲಿ ವಿವಾಹ, ವಿಚ್ಛೇದನ, ವಾರಿಸುದಾರಿಕೆಗಳಿಗೆ ಸಂಬಂಧಿಸಿದಂತೆ  ಸಮಾನತೆ ಯನ್ನು ಜಾರಿಗೊಳಿಸಿ ಎಂದು  ಆಗ್ರಹಿಸಿದ ಅಭಿಪ್ರಾಯಗಳು ಒಂದು ಶೇಕಡಾ ಕೂಡಾ ಇರಲಾರದು. ಯಾಕೆಂದರೆ, ನಿತ್ಯದ ಬದುಕಿನಲ್ಲಿ ಇವು ಇವತ್ತು ಸವಾಲುಗಳೇ ಅಲ್ಲ. ಮುಸ್ಲಿಮರ ವೈಯಕ್ತಿಕ ಕಾನೂನುಗಳಿಂದ ತಮಗೆ  ತೊಂದರೆಯಾಗಿದೆ ಎಂದು ಹೇಳಿ ಹಿಂದೂ ಗಳೋ ಕ್ರೈಸ್ತರೋ ಜೈನರೋ ಪ್ರತಿಭಟಿಸಿದ್ದು ಈ ವರೆಗೂ ನಡೆದಿಲ್ಲ. ಹಿಂದೂ  ವಾರಸುದಾರಿಕೆ ಕಾಯ್ದೆ ಅಥವಾ ಕ್ರೈಸ್ತ ವಾರಸುದಾರಿಕೆ ಕಾಯ್ದೆಯಿಂದ ತಮಗೆ ಅನನುಕೂಲವಾಗಿದೆ ಎಂದು ಹೇಳಿ ಮುಸ್ಲಿಮರೂ  ಪ್ರತಿಭಟಿಸಿದ್ದಿಲ್ಲ. ಆದರೆ, ಈ ದೇಶದಲ್ಲಿರುವ ಅಸ್ಪೃಶ್ಯತೆ, ಉಳ್ಳವರಿಗೆ ಸುಲಭವಾಗಿ ಎಟಕುವ ದುಬಾರಿ ನ್ಯಾಯ ಪ್ರಕ್ರಿಯೆ, ಅಸಮಾನ ಶಿಕ್ಷಣ  ಮತ್ತು ಆರೋಗ್ಯ ನೀತಿ ಇತ್ಯಾದಿಗಳ ಬಗ್ಗೆ ಈ ದೇಶದಲ್ಲಿ ಪ್ರತಿಭಟನೆ ಮತ್ತು ಧರಣಿ ನಡೆಸಿರುವುದಕ್ಕೆ ಲೆಕ್ಕಮಿತಿಯಿಲ್ಲ. ಆದ್ದರಿಂದ  ಸಾರ್ವಜನಿಕ ಅಭಿಪ್ರಾಯಗಳನ್ನೇ ಆಧರಿಸಿ ರಾಷ್ಟ್ರೀಯ ಕಾನೂನು ಆಯೋಗವು ಕರಡು ರೂಪಿಸುವುದಾದರೆ, ಅದು ಯಾರ ವೈಯಕ್ತಿಕ  ಕಾನೂನುಗಳನ್ನು ಸ್ಪರ್ಶಿ ಸದೇ, ಒಟ್ಟು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗೆ ಸಂಬಂಧಿಸಿ ಏಕರೂಪವನ್ನು ತರಲೇಬೇಕಾದ  ಒತ್ತಡಕ್ಕೆ ಖಂಡಿತ ಸಿಲುಕುತ್ತದೆ. ಈ ಹಿನ್ನೆಲೆಯಲ್ಲೇ ,

ರಾಷ್ಟ್ರೀಯ ಕಾನೂನು ಆಯೋಗವು ಸಾರ್ವಜನಿಕರಿಂದ ಅಪೇಕ್ಷಿಸಿರುವ ಅಭಿಪ್ರಾಯಕ್ಕೂ ಅದು ತಯಾರಿಸಲಿರುವ ಏಕರೂಪ ನಾಗರಿಕ  ಸಂಹಿತೆಗೂ ಸಂಬಂಧ ಇರಬಹುದು ಎಂದು ಅನಿಸುತ್ತಿಲ್ಲ. ಅದು ಈಗಾಗಲೇ ಒಂದು ಕರಡನ್ನು ಸಿದ್ಧಪಡಿಸಿರಬಹುದು ಅಥವಾ  2024ರ ಚುನಾವಣೆಗಾಗಿ ಬರೇ ಗದ್ದಲವನ್ನಷ್ಟೇ ಎಬ್ಬಿಸಿ ಸುಮ್ಮನಾಗಬಹುದು. ಅಷ್ಟೇ.

No comments:

Post a Comment