Tuesday, October 30, 2018

ಸೂರಃ ಫಾತಿಹಾ ಮತ್ತು ವಿಶ್ವಮಾನವ ಪ್ರಜ್ಞೆ: ಒಂದು ಜಿಜ್ಞಾಸೆ




1. ಏಕ
2. ಅನೇಕ
ಮಾನವ ಜಗತ್ತು ಯಾವಾಗಲೂ ಈ ಎರಡರಲ್ಲಿ ವಿಭಜನೆ ಗೊಂಡಿರುತ್ತದೆ. ಒಂದು- ತನ್ನ ಬಗ್ಗೆ ಮಾತ್ರ ಆಲೋಚಿಸುವ ವರ್ಗ; ತಾನು,  ತನ್ನ ಮಕ್ಕಳು, ತನ್ನ ಸಂಪತ್ತು, ತನ್ನ ಆರೋಗ್ಯ, ತನ್ನ ಯಶಸ್ಸು, ತನ್ನ ಲಾಭ, ತನ್ನ ನಿದ್ದೆ, ತನ್ನ ಕುಟುಂಬ, ತನ್ನ ವಿಶ್ರಾಂತಿ, ತನ್ನ ಮನೆ,  ತನ್ನ ವಾಹನ.. ಹೀಗೆ ತನ್ನತನದಲ್ಲಿ ಮುಂದುವರಿಯುತ್ತಿರುತ್ತದೆ. ಒಂದು ರೀತಿಯಲ್ಲಿ, ಏಕಕೇಂದ್ರಿತ ಬದುಕು. ಏಕಕೇಂದ್ರಿತ ಚಿಂತನೆ.  ಇನ್ನೊಂದು- ಇದರ ವಿರುದ್ಧದ ಚಿಂತನೆ. ಈ ಚಿಂತನೆಯಲ್ಲಿ ನಾನು ಇರುವುದಿಲ್ಲ, ನಾವು ಇರುತ್ತದೆ. ನನ್ನದು ಇರುವುದಿಲ್ಲ, ನಮ್ಮದು  ಇರುತ್ತದೆ. ಸಮಾಜದಲ್ಲಿ ಇವತ್ತು ಈ ಎರಡೂ ಭಾವಗಳು ಏಕಪ್ರಕಾರವಾಗಿ ಅಸ್ತಿತ್ವದಲ್ಲೂ ಇವೆ. ನಿಜವಾಗಿ, ಏಕದಲ್ಲಿ ಸ್ವಾರ್ಥಕ್ಕೆ ಅವಕಾಶ  ಹೆಚ್ಚು. ಅನೇಕದಲ್ಲಿ ನಿಸ್ವಾರ್ಥ ಮತ್ತು ವಿಶಾಲ ಭಾವಕ್ಕೆ ಒತ್ತು ಹೆಚ್ಚು. ಇದಕ್ಕೆ ಪವಿತ್ರ ಕುರ್‍ಆನಿನ ಸೂರಃ ಫಾತಿಹಾ ಉತ್ತಮ ಉದಾಹರಣೆ.  ಫಾತಿಹಾವನ್ನೇ ಇಲ್ಲಿ ಉದಾಹರಣೆಯಾಗಿ ಯಾಕೆ ಆಯ್ಕೆ ಮಾಡಲಾಯಿತು ಎಂದರೆ, ಅದು ಪವಿತ್ರ ಕುರ್‍ಆನಿನ ಒಂದು ಭಾಗವಾಗಿ ಮಾತ್ರ  ಉಳಿದಿರುವುದಲ್ಲ. ಅದು ಐದು ಹೊತ್ತಿನ ಕಡ್ಡಾಯ ನಮಾಝïನಲ್ಲಿ ಮುಸ್ಲಿಮರ ಸಂಗಡ ಇರುತ್ತದೆ. ಎಲ್ಲಿಯ ವರೆಗೆ ಎಂದರೆ,

ಅದನ್ನು  ಪಠಿಸದೇ ಇದ್ದರೆ ನಮಾಝï ಸಿಂಧುವಾಗುವುದಿಲ್ಲ. ಆದರೆ, ಈ ಸೂರಃ ಫಾತಿಹಾ ಏಕವನ್ನು ಪ್ರತಿನಿಧಿಸುವುದಿಲ್ಲ ಬದಲು ಅನೇಕತನವನ್ನು  ಪ್ರತಿ ಪಾದಿಸುತ್ತದೆ. ಮನೆಯ ಏಕಾಂತ ಕೋಣೆಯಲ್ಲಿ ಒಂಟಿಯಾಗಿ ನಮಾಝï ಮಾಡುವ ಮಹಿಳೆಯೋರ್ವಳು ದೇವನೊಂದಿಗೆ ಹೇಗೆ  ಸಂವಾದಿಸಬೇಕು? ಆಕೆ ಒಂಟಿ. ಕೋಣೆಯಲ್ಲಿ ಇನ್ನಾರೂ ಇಲ್ಲ. ಇಂಥ ಸಮಯದಲ್ಲಿ ತನ್ನ ದೇವನೊಂದಿಗೆ ಪ್ರಾರ್ಥಿಸುವಾಗ, ‘ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ’ (ಇಯ್ಯಾಕ ನಅïಬುದು) ಎಂದು ಯಾಕೆ ಹೇಳಬೇಕು? ಇಲ್ಲಿ ಬಹುವಚನದ ಅಗತ್ಯ ಏನಿದೆ? ದೇವರು  ಮತ್ತು ಓರ್ವ ದಾಸಿಯ ನಡುವಿನ ಖಾಸಗಿ ಸಂವಾದದಲ್ಲಿ ನಾನು ನಿನ್ನನ್ನು ಆರಾಧಿಸುತ್ತೇನೆ (ಇಯ್ಯಾಕ ಅಅïಬುದು) ಎಂದೇ ಹೇಳಬೇಕಿತ್ತಲ್ಲವೇ? ನಾನೋರ್ವಳೇ ಇರುವಾಗ ನಾವು ಎಂಬ ಬಹುವಚನ ಪ್ರಯೋಗ ಯಾಕೆ? ಇದು ಇಲ್ಲಿಗೇ ನಿಲ್ಲುವುದಿಲ್ಲ. ಇದರ ನಂತರದ  ವಚನ ಕೂಡ ಹಾಗೆಯೇ ಇದೆ. ‘ನಾವು ಕೇವಲ ನಿನ್ನೊಡನೆ ಸಹಾಯ ಯಾಚಿಸುತ್ತೇವೆ’ (ವ ಇಯ್ಯಾಕ ನಸ್ತಈನ್) ಎಂದು ಆ ಒಂಟಿ  ಮಹಿಳೆ ನಮಾಝïನಲ್ಲಿ ಅರಿಕೆ ಮಾಡಿಕೊಳ್ಳುತ್ತಾಳೆ. ಇಲ್ಲೂ ತಕರಾರು ಎತ್ತಬಹುದು. ‘ನಾನು ನಿನ್ನೊಡನೆ ಸಹಾಯ ಯಾಚಿಸುತ್ತೇನೆ’ (ವ  ಇಯ್ಯಾಕ ಅಸ್ತಈನ್) ಎಂದು ಹೇಳುವುದೇ ಸರಿಯಲ್ಲವೇ? ಒಂಟಿ ಮಹಿಳೆಯೋರ್ವಳು ಬಹುವಚನದಲ್ಲಿ ತನ್ನನ್ನು ನಿವೇದಿಸಿಕೊಳ್ಳುವುದೇಕೆ?

    ಮಾನವ ಸಮೂಹವನ್ನು ಸಮೂಹ ಪ್ರಜ್ಞೆಗೆ ತಳ್ಳುವುದೇ ಈ ಬಗೆಯ ಪದಪ್ರಯೋಗದ ಉz್ದÉೀಶ. ಈ ಸಮಾಜವನ್ನು ನಾನುವಿನಿಂದ  ನಾವಾಗಿ ಪರಿವರ್ತಿಸುವುದು. ನಿಜವಾಗಿ,

     ನಾನು ಅನ್ಯವಲ್ಲ. ನಾವು ಅನ್ಯ. ಅನುಮಾನವಿದ್ದರೆ ನಮ್ಮ ಬದುಕಿನಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಯನ್ನೂ ಪರಿಶೀಲಿಸಿ  ನೋಡಿಕೊಳ್ಳಿ. ಎಲ್ಲದರಲ್ಲೂ ನಾನೇ ಇರುತ್ತದೆ.
1. ನಾನು ಇಂತಿಂಥ ಶೀರ್ಷಿಕೆಯಲ್ಲಿ, ಇಂತಿಂಥ ಪತ್ರಿಕೆಯಲ್ಲಿ, ಇಂತಿಂಥ ವಿಷಯದಲ್ಲಿ ಅಂಕಣವನ್ನು ಬರೆದಿದ್ದೇನೆ.
2. ನಾನು ಇಂತಿಂಥ ದಿವಸ ಇಂತಿಂಥ ಕಂಪೆನಿಯ, ಇಂತಿಂಥ ಮಾಡೆಲ್‍ನ ಕಾರು ಖರೀದಿಸಿದ್ದೇನೆ.
3. ನಾನು ಇಂತಿಂಥ ಕಡೆ, ಇಂತಿಂಥ ವಸ್ತುಗಳ ವ್ಯಾಪಾರ ಮಳಿಗೆಯನ್ನು ಪ್ರಾರಂಭಿಸಿದ್ದೇನೆ.
4. ನಾನು ಇಂತಿಂಥ ದಿನ, ಇಂತಿಂಥ ಕಡೆ ಪ್ರಯಾಣ ಹೊರಡಲಿದ್ದೇನೆ.
5. ನನ್ನ ಮನೆ ಇಲ್ಲಿದೆ, ನನ್ನ ಮಗ ಇಂತಿಂಥ ದೇಶದಲ್ಲಿ ದುಡಿಯುತ್ತಿದ್ದೇನೆ, ನಾನು ಇಂಥ ಕಂಪೆನಿಯಲ್ಲಿ ಉದ್ಯೋಗ ದಲ್ಲಿದ್ದೇನೆ. ನಾನು  ಭಾಷಣಗಾರ, ನಾನು ಬರಹಗಾರ, ನಾನು ಹಾಡುಗಾರ, ನಾನು ಕವಿ, ನಾನು ನಿರೂಪಕ, ನಾನು ರಾಷ್ಟ್ರಾಧ್ಯಕ್ಷ, ನಾನು ಛಾಯಾಗ್ರಾಹಕ..
ಹೀಗೆ ಬದುಕಿನ ಪ್ರತಿಯೊಂದು ಕ್ಷಣವೂ ನಾನುವಿನಿಂದ ಪ್ರಾರಂಭವಾಗುತ್ತದೆ. ನಾನುವಿನಲ್ಲೇ  ಅಂತ್ಯವಾಗುತ್ತದೆ. ಆದ್ದರಿಂದ, ಮನುಷ್ಯ  ನಾನಾಗುವುದು ಸುಲಭ. ನಾವಾಗುವುದು ಕಷ್ಟ. ಬಹುಶಃ ನಮಾಝïನಲ್ಲಿ ಫಾತಿಹಾವನ್ನು ಕಡ್ಡಾಯಗೊಳಿಸಿರು ವುದರ ಹಿಂದೆ ಈ ಉದ್ದೇಶವೂ ಇರಬಹುದು. ಮಾನವ ಜೀವನದ ಅನುಕ್ಷಣವನ್ನೂ ನಾನು ಆವರಿಸಿರುವಾಗ ಆ ಭಾವದಿಂದ ಕಳಚಿಕೊಳ್ಳುವ ಒಂದು ದಾರಿ ಮತ್ತು  ಎಚ್ಚರಿಕೆಯಾಗಿ ಅಲ್ಲಾಹನು ಫಾತಿಹಾವನ್ನು ಕಡ್ಡಾಯ ಮಾಡಿರಬಹುದು. ಫಾತಿಹಾ ಅಂದರೆ ಅದು ಬಹುವಚನದ ಗುಚ್ಛ. ನನಗೆ ಸನ್ಮಾರ್ಗವನ್ನು ತೋರಿಸು (ಇಹ್ದಿನಿಸ್ಸಿರಾತುಲ್ ಮುಸ್ತಕೀಮ್) ಎಂದು ಒಂಟಿ ವ್ಯಕ್ತಿಯೋರ್ವ ನಮಾಝïನಲ್ಲಿ ಬೇಡಿದರೆ ಅದು ಅಸಿಂಧು  ಕ್ರಮವಾಗುತ್ತದೆ. ಇಹ್ದಿನಸ್ಸಿರಾತುಲ್ ಮುಸ್ತಕೀಮ್ (ನಮಗೆ ಸನ್ಮಾರ್ಗವನ್ನು ತೋರಿಸು) ಎಂದೇ ಆತ/ಕೆ ಹೇಳಬೇಕಾಗುತ್ತದೆ. ‘ಅಸ್ಸಲಾಮು  ಅಲೈನಾ ವಆಲಾ ಇಬಾದಿಲ್ಲಾಹಿ ಸ್ಸಾಲಿಹೀನ್’ - ಅಲ್ಲಾಹನ ರಕ್ಷಣೆ ಮತ್ತು ಶಾಂತಿಯು ನಮ್ಮ ಮೇಲೆಯೂ ಸಜ್ಜನರಾದ ಎಲ್ಲ ದಾಸರ  ಮೇಲೆಯೂ ಇರಲಿ - ಎಂದು ಪ್ರಾರ್ಥಿಸುವುದು ಸಿಂಧು. ಇಲ್ಲಿ, ನಾವು ಇರುವಲ್ಲಿಗೆ ನಾನು ಸೇರಿಸಿದರೆ ಅದು ಅಸಿಂಧು. ಇನ್ನು ಒಂಟಿ  ವ್ಯಕ್ತಿ ಯೋರ್ವ ನಮಾಝïನಿಂದ ವಿರಮಿಸುವಾಗ, ‘ಅಲ್ಲಾಹನ ಅನುಗ್ರಹ ಮತ್ತು ಶಾಂತಿ ನಮ್ಮ ಮೇಲಿರಲಿ’ (ಅಸ್ಸಲಾಮು ಅಲೈಕುಮ್  ವರಹ್ಮತುಲ್ಲಾಹಿ) ಎಂದು ಬಹುವಚನದಲ್ಲೇ ಎಡ ಮತ್ತು ಬಲಗಡೆಗೆ ಕತ್ತು ತಿರುಗಿಸಿ ಹೇಳಬೇಕು. ಹಿಂದುಗಡೆ ಯಾರು ಇದ್ದರೂ ಇಲ್ಲದಿದ್ದರೂ ಏಕವಚನ ಬಳಕೆ ಮಾಡುವಂತಿಲ್ಲ.

     ಮಾನವನು ಏಕನಾಗಿ ಬದುಕಲು ಸಾಧ್ಯವಿಲ್ಲ ಮತ್ತು ಆ ಬಗೆಯ ಚಿಂತನೆ ಸಲ್ಲ ಅನ್ನುವುದನ್ನು ಸಾರುವುದಕ್ಕಾಗಿ ಈ ಬಗೆಯ ನಿಯಮಗಳನ್ನು ಇಸ್ಲಾಮ್ ವಿಧಿಸಿದೆ ಎಂದೇ ಅನಿಸುತ್ತದೆ. ಇಂಥ ಸೂಚನೆಗಳು ಕೇವಲ ಸೂರಃ ಫಾತಿಹಾ ದಲ್ಲಿ ಮಾತ್ರ ಕಾಣಸಿಗುವುದಿಲ್ಲ. ಪವಿತ್ರ  ಕುರ್‍ಆನಿನ ಬೇರೆ ಬೇರೆ ಕಡೆ ಮತ್ತು ಪ್ರವಾದಿ ಬದುಕಿನ ಅನೇಕಾರು ಸಂದರ್ಭಗಳಲ್ಲಿ ಈ ಭಾವವನ್ನು ಕಂಡುಕೊಳ್ಳಬಹುದು. ಪವಿತ್ರ  ಕುರ್‍ಆನಿನ 107ನೇ ಅಧ್ಯಾಯ- ಅಲ್ ಮಾಊನ್‍ನ ಅರ್ಧ ಭಾಗ ಹೀಗಿದೆ,

     ‘ಕರ್ಮಫಲದ ದಿನವನ್ನು ನಿರಾಕರಿಸುವವನನ್ನು ನೀವು ನೋಡಿದಿರಾ? ಆತನು ಅನಾಥನನ್ನು ನಿರ್ಲಕ್ಷಿಸುವವನು ಮತ್ತು ನಿರ್ಗತಿಕರಿಗೆ  ಆಹಾರ ನೀಡಲು ಪ್ರೇರೇಪಿಸದವನಾಗಿದ್ದಾನೆ.’
      ನಮಾಝï ನಿರ್ವಹಿಸುವ ವ್ಯಕ್ತಿಯನ್ನುದ್ದೇಶಿಸಿ ಹೇಳಲಾದ ಈ ಮಾತುಗಳಲ್ಲಿ ಒಳನೋಟಗಳಿವೆ. ನಮಾಝï ನಿರ್ವಹಿಸು ವವನನ್ನೇ  ಧರ್ಮನಿಷೇಧಿ ಎಂದು ಈ ಪೂರ್ಣ ಅಧ್ಯಾಯವು ಸಾರುತ್ತದಲ್ಲದೇ, ಅದಕ್ಕೆ ಕೊಡುವ ಕಾರಣಗಳಲ್ಲಿ ಎರಡು ಕಾರಣಗಳು ಆತ ನಾನು  ಆಗಿರುವುದು ಎಂದಾಗಿರುತ್ತದೆ ಅಥವಾ ಸೂರಃ ಫಾತಿಹಾ ಪ್ರತಿಪಾದಿಸುವ ನಾವು ಎಂಬ ಸಮೂಹ ಪ್ರಜ್ಞೆಗೆ ಆತ ಬದ್ಧನಾಗಿಲ್ಲ  ಎಂದಾಗಿರುತ್ತದೆ. ನಿರ್ಗತಿಕರು ಮತ್ತು ಅನಾಥರನ್ನು ನಿರ್ಲಕ್ಷಿಸುವ ಮೂಲಕ ಆತ ‘ನಾನು’ ಭಾವಕ್ಕೆ ಅಂಟಿಕೊಂಡಿದ್ದಾನೆ ಮತ್ತು ನಾವು ಭಾವದಿಂದ ದೂರ ಹೋಗಿದ್ದಾನೆ ಎಂದು ಪ್ರತಿಪಾದಿಸುತ್ತದೆ. ನಾವು ಎಂಬ ಭಾವದಲ್ಲಿ ನಿರ್ಗತಿಕರೂ ಇರುತ್ತಾರೆ, ಅನಾಥರೂ ಸೇರುತ್ತಾರೆ.  ಯಾಕೆಂದರೆ, ನಾವು ಎಂಬ ಭಾವ ವ್ಯಕ್ತಿಯನ್ನು ಸಮಾಜ ಜೀವಿಯಾಗಿ ಬದಲಾಯಿಸುತ್ತದೆ. ತನ್ನ ಪರಿಸರದಲ್ಲಿ, ಸಮಾಜದಲ್ಲಿ, ತಾನು  ನಡೆದಾಡುವ ರಸ್ತೆಯಲ್ಲಿ, ಹೀಗೆ ತನ್ನ ಕುಟುಂಬದಲ್ಲಿ ಏನೇ ಸಮಸ್ಯೆಗಳು ಕಂಡರೂ ಅದರಲ್ಲಿ ಆತ/ಕೆ ತನ್ನನ್ನು ಕಂಡು ಕೊಳ್ಳುತ್ತಾನೆ. ಅಲ್ಲಿನ  ಸಂಕಟವನ್ನು ತನ್ನ ಸಂಕಟವಾಗಿ ಪರಿಗಣಿಸು ತ್ತಾನೆ. ರಸ್ತೆಯಲ್ಲಿ ಅಸಹಾಯಕವಾಗಿ ಕುಳಿತ ವ್ಯಕ್ತಿಯನ್ನು ನೋಡಿ ನಿರಾಳಭಾವದಿಂದ  ಮುಂದೆ ಹೋಗಲು ಆತನಿಗೆ ಸಾಧ್ಯವಾಗುವುದಿಲ್ಲ. ಆದರೆ, ನಾನು ಭಾವಕ್ಕೆ ಇದು ಸಾಧ್ಯವಿದೆ. ಆದ್ದ ರಿಂದಲೇ, ಅನಾಥ ಮತ್ತು ನಿರ್ಗತಿಕರ ಬಗ್ಗೆ ನಿರ್ಲಕ್ಷ್ಯ  ತಾಳಿದುದನ್ನೇ ಗಂಭೀರ ಅಪರಾಧವಾಗಿ ಅಲ್ ಮಾಊನ್ ಅಧ್ಯಾಯ ಎತ್ತಿ ಹೇಳುವುದು. ಅಂದಹಾಗೆ,  ಮಗುವಿನ ಅಳು ಕೇಳಿದರೆ, ನಮಾಝನ್ನು ಬೇಗನೇ ಮುಗಿಸುವುದು ಪ್ರವಾದಿ ಯವರ(ಸ) ಸ್ವಭಾವವಾಗಿತ್ತು.

     ನಮಾಝನ್ನು ಸುದೀರ್ಘಗೊಳಿಸಬೇಕೆಂಬ ಭಾವನೆಯಿಂದ ನಾನು ನಿಲ್ಲುತ್ತೇನೆ. ಆಗ ನನಗೆ ಪುಟ್ಟ ಮಗುವಿನ ಅಳು ಕೇಳಿಸುತ್ತದೆ. ಆ  ಮಗುವಿನ ಅಳುವಿನಿಂದ ತಾಯಿಗೆ ಆಗುವ ತಳಮಳವನ್ನು ಗ್ರಹಿಸಿ ನಾನು ನಮಾಝïನಲ್ಲಿ ಕಡ್ಡಾಯ ಕ್ರಿಯೆಗಳನ್ನು ಮಾತ್ರ ನಿರ್ವಹಿಸುತ್ತೇನೆ’  ಎಂದು ಪ್ರವಾದಿ ಯವರು(ಸ) ಹೇಳಿರುವುದಾಗಿ ಬುಖಾರಿ  ಹದೀಸ್ ಗ್ರಂಥದಲ್ಲಿದೆ.

     ಪ್ರವಾದಿಯವರು ‘ನಾನು’ವಿನ ಪ್ರತಿನಿಧಿಯಾಗಿದ್ದರೆ, ಆ ತಾಯಿ ಮತ್ತು ಮಗುವಿಗೆ ಮರುಗಬೇಕಾದ ಅಗತ್ಯ ಇರಲಿಲ್ಲ. ಆದರೆ ಅವರು  ನಾವು ಭಾವದ ಎಷ್ಟು ಪ್ರಬಲ ಪ್ರತಿಪಾದಕರಾಗಿದ್ದರೆಂದರೆ, ಇನ್ನೊಬ್ಬರಿಗಾಗಿ ಕಡ್ಡಾಯ ನಮಾಝನ್ನೂ ಮೊಟಕುಗೊಳಿಸು ವಷ್ಟು. ಅದೇವೇಳೆ,  ಅವರು ನಮಾಝನ್ನು ಸಂಘಟಿತವಾಗಿ ನಡೆಸಲು ಆದೇಶಿಸಿದರು. ಅಷ್ಟಕ್ಕೂ, ವ್ಯಕ್ತಿಯೋರ್ವ ಗುಂಪಿನಲ್ಲಿ ಸೇರುವುದಕ್ಕೂ ಒಂಟಿಯಾಗಿ ನಿ ಲ್ಲುವುದಕ್ಕೂ ಬಾಹ್ಯ ವ್ಯತ್ಯಾಸಗಳಷ್ಟೇ ಇರುವುದಲ್ಲ. ಆಂತರಿಕವಾದ ವ್ಯತ್ಯಾಸಗಳೂ ಇವೆ. ಗುಂಪಿನಲ್ಲಿ ಒಬ್ಬನಾಗುವಾಗ ಆತನೊಳಗಿನ ಹಲವು  ಮೇಲರಿಮೆಗಳು ಕುಸಿದು ಹೋಗುತ್ತವೆ. ತನಗಿಂತ  ದೊಡ್ಡವರು ಇz್ದÁರೆ ಎಂದೋ ತಾನು ಏನೂ ಅಲ್ಲ ಎಂದೋ ಆತನಿಗೆ  ಮನವರಿಕೆಯಾಗುತ್ತದೆ. ಆತ ವಿವೇಚನೆಗೆ ತೊಡಗುತ್ತಾನೆ. ಸದಾ ಒಂಟಿಯಾಗಿರುವವರಿಗೆ ಈ ಭಾವ ಬರಲು ಸಾಧ್ಯವಿಲ್ಲ. ಸತ್ಯನಿಷೇಧಿಗಳೊಂದಿಗೂ ಉತ್ತಮವಾಗಿ ವರ್ತಿಸಿರಿ ಎಂದು ಪ್ರವಾದಿ ಇಬ್ರಾಹೀಮ(ಅ)ರಿಗೆ ಅಲ್ಲಾಹನು ಆದೇಶಿಸಿರುವುದಾಗಿ ಪ್ರವಾದಿ ಮುಹಮ್ಮದ್(ಸ)  ಹೇಳಿದ್ದಾರೆ. ಯಾಕೆಂದರೆ,
      ಅದು ಇಸ್ಲಾಮಿನ ಗುಣ. ಪ್ರವಾದಿಯವರು(ಸ) ಈ ಗುಣದ ಅಪ್ಪಟ ಮಾದರಿಯಾಗಿದ್ದರು. ಅವರ ಕಡು ವೈರಿಗ ಳಾಗಿದ್ದಂತಹವರನ್ನೂ ಅವರು ತಮ್ಮ ನಾವುತನದ ಗುಣದಿಂದಾಗಿ ಮಿತ್ರರಾಗಿಯೂ ಆಪ್ತರನ್ನಾಗಿಯೂ ಮಾಡಿ ಕೊಂಡರು. ಉಮರ್ ಬಿನ್  ಖತ್ತಾಬ್, ಖಾಲಿದ್ ಬಿನ್ ವಲೀದ್, ಅಮ್ರ್ ಬಿನ್ ಆಸ್, ಉರ್ವಾ ಬಿನ್ ಮಸ್‍ಊದ್, ಸುಹೈಲ್ ಬಿನ್ ಅಮ್ರ್, ಅಬೂಸುಫ್‍ಯಾನ್,  ಹಿಂದ್, ತುಫೈಲುದ್ದೂಸಿ, ವಹ್ಶಿ ಇತ್ಯಾದಿ ಇತ್ಯಾದಿ ಅನೇಕರು ಅವರ ಆಪ್ತ ವಲಯದಲ್ಲಿ ಸೇರಿಕೊಂಡದ್ದು ಅವರ ‘ನಾವು’ ನೀತಿಯಿಂದಾಗಿತ್ತು. ಮುಹಮ್ಮದರು ಪ್ರವಾದಿಯಾಗಿ 40ನೇ ಪ್ರಾಯದಲ್ಲಿ ನಿಯುಕ್ತರಾದ ಬಳಿಕದ ಬದುಕನ್ನು ಪರಿಶೀಲಿಸಿದರೆ ಅವರು ನಮಗೆ  ಯಾವ ಕಾರಣಕ್ಕಾಗಿ ಮುಖ್ಯವಾಗಬೇಕು ಅನ್ನುವುದು ಸ್ಪಷ್ಟವಾಗುತ್ತದೆ. ನಾನು ಪ್ರವಾದಿ ಎಂದು ಹೇಳಿಕೊಂಡು ಅವರು ಒಂಟಿಯಾಗಿ ನಿಲ್ಲುತ್ತಿದ್ದರೆ ಅವರ ಬಳಿಗೆ ಯಾರೂ ಬರುವ ಸಾಧ್ಯತೆ ಇರಲಿಲ್ಲ. ಅವರು ‘ನಾವು’ ಅಂದರು. ಎಲ್ಲರನ್ನೂ ಒಳಗೊಳ್ಳುವ ವಿಶಾಲ ಗುಣವನ್ನು  ಪ್ರದರ್ಶಿಸಿದರು. ವೈರಿಯನ್ನೂ ದ್ವೇಷಿಸದೇ ಪ್ರೀತಿಸಿದರು. ತನ್ನನ್ನು ಟೀಕಿಸಿದವರನ್ನೂ ದ್ವೇಷಿಸಲಿಲ್ಲ. ಆದ್ದರಿಂದ,

     ಬರೇ ನಮಾಝïನಲ್ಲಿ ಪಠಿಸಿ ಪುನೀತವಾಗುವುದಕ್ಕಾಗಿ ಇರುವ ಅಧ್ಯಾಯವಲ್ಲ, ಫಾತಿಹಾ. ಅದು ಪಠಿಸುವವರನ್ನು ಸ್ವಾರ್ಥ ಮುಕ್ತ  ರಾಗುವಂತೆ ಮತ್ತೆ ಮತ್ತೆ ಒತ್ತಾಯಿಸುವ ಅಧ್ಯಾಯ. ನಮ್ಮೊಳಗಿನ ನಾನನ್ನು ನಾವಾಗಿ ಪರಿವರ್ತಿಸುವುದಕ್ಕೆ ಒತ್ತಡ ಹೇರುವ ಅಧ್ಯಾಯ.  ಅದನ್ನು ಅರಿತು ಪಠಿಸಿದರೆ ಪಠಿಸಿದವರು ವಿಶ್ವಮಾನವರಾಗುತ್ತಾರೆ.

No comments:

Post a Comment