Friday, April 21, 2017

ಅಸ್ಪೃಶ್ಯರನ್ನು ತಯಾರಿಸುವ ಪ್ರಜಾತಂತ್ರ ಎಷ್ಟು ಪರಿಪೂರ್ಣ?

    ಈ ದೇಶದ ಪ್ರಜಾತಂತ್ರ ವ್ಯವಸ್ಥೆಯು ಪರಿಪೂರ್ಣವೇ? ಈ ದೇಶದ ಎಲ್ಲರನ್ನೂ ಒಳಗೊಳ್ಳುವ ಅಥವಾ ಒಳಗೊಳಿಸುವ ಸಾಮರ್ಥ್ಯ ಇದಕ್ಕಿದೆಯೇ? ಧರ್ಮ, ಜಾತಿ, ಪಂಗಡಗಳಾಗಿ ವಿಭಜನೆಗೊಂಡಿರುವ ದೇಶವೊಂದರ ಜನರನ್ನು ಈ ವ್ಯವಸ್ಥೆ ಹೇಗೆ ಪ್ರತಿನಿಧಿಸಬಲ್ಲುದು? ಅವರೆಲ್ಲರನ್ನೂ ಜೊತೆಗೊಯ್ಯಲು ಮತ್ತು ನ್ಯಾಯ ಕೊಡಿಸಲು ಈ ವ್ಯವಸ್ಥೆ ಶಕ್ತವೇ ಅಥವಾ ಪರ್ಯಾಯ ಚಿಂತನೆಯೊಂದು ನಡೆಯಬೇಕಾಗಿದೆಯೇ?
2014ರಲ್ಲಿ ನಡೆದ ಲೋಕಸಭಾ ಚುನಾವಣೆ ಮತ್ತು ತಿಂಗಳ ಹಿಂದೆ ನಡೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯು ಈ ಪ್ರಶ್ನೆಯನ್ನು ಸಹಜವಾಗಿಯೇ ಎತ್ತುತ್ತದೆ. ಜೊತೆಗೇ ಈ ದೇಶವನ್ನಾಳುವ ಪಕ್ಷದ ನಿಲುವುಗಳು ಕೂಡ ಈ ಪ್ರಶ್ನೆಯ ಹುಟ್ಟಿಗೆ ಕಾರಣವಾಗಿವೆ. ಪ್ರಸ್ತುತ ಲೋಕಸಭೆಯಲ್ಲಿ 37 ರಾಜಕೀಯ ಪಕ್ಷಗಳಿಗೆ ಸೇರಿದ 543 ಸದಸ್ಯರಿದ್ದಾರೆ. ಇವರಲ್ಲಿ ಮುಸ್ಲಿಮ್ ಸದಸ್ಯರ ಸಂಖ್ಯೆ ಬರೇ 23.`
ಇದಕ್ಕಿಂತಲೂ ಆಘಾತಕಾರಿ ಸಂಗತಿ ಏನೆಂದರೆ, ಆಡಳಿತ ಪಕ್ಷವಾದ ಬಿಜೆಪಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಂಸದನಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳು ಆಯ್ಕೆಯಾದುದು ಬರೇ 7 ರಾಜ್ಯಗಳಿಂದ. ಪಶ್ಚಿಮ ಬಂಗಾಳದಿಂದ 8, ಬಿಹಾರದಿಂದ 4, ಜಮ್ಮುಕಾಶ್ಮೀರ ಮತ್ತು ಕೇರಳದಿಂದ ತಲಾ 3, ಅಸ್ಸಾಮ್‍ನಿಂದ 2, ತಮಿಳುನಾಢು, ತೆಲಂಗಾಣ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಿಂದ ತಲಾ ಒಂದು. ಈ 7 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 179 ಲೋಕಸಭಾ ಕ್ಷೇತ್ರಗಳಿವೆ. ಮಾತ್ರವಲ್ಲ, ಒಟ್ಟು ಮುಸ್ಲಿಮ್ ಜನಸಂಖ್ಯೆಯ 46% ಮಂದಿ ಈ ರಾಜ್ಯಗಳಲ್ಲಿದ್ದಾರೆ. ಅದೇ ವೇಳೆ, ದೇಶದ ಉಳಿದ 22 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಿಗೆ ಒಬ್ಬನೇ ಒಬ್ಬ ಮುಸ್ಲಿಮ್ ಸಂಸದ ಇಲ್ಲ. ಇರುವ 23 ಸಂಸದರನ್ನು ಕಾಂಗ್ರೆಸ್ 4, ತೃಣಮೂಲ 4, ಕಾಶ್ಮೀರದ ಪಿಡಿಪಿ 3, ಅಸ್ಸಾಮ್‍ನ ಎಐಯುಡಿಎಫ್, ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್, ಸಿಪಿಐಎಂ ಮತ್ತು ಎನ್‍ಸಿಪಿಗಳು ತ ಲಾ 2, ಓವೈಸಿಯ ಎಐಎಂಐಎಂ, ಎಐಎಡಿಎಂಕೆ, ಲಾಲೂ ಪ್ರಸಾದ್‍ರ ಆರ್‍ಜೆಡಿ ಮತ್ತು ರಾಮ್‍ವಿಲಾಸ್ ಪಾಸ್ವಾನ್‍ರ ಎಲ್‍ಜೆಪಿ ತಲಾ ಒಂದು ಆಗಿ ಹಂಚಿಕೊಂಡಿವೆ. ಆದರೆ ಆಡಳಿತ ಪಕ್ಷವಾದ ಬಿಜೆಪಿ ಮತ್ತು ಮಿತ್ರ ಪಕ್ಷಗಳಾದ ಶಿವಸೇನೆ, ಅಕಾಲಿದಳ, ತೆಲುಗುದೇಶಂ ಪಾರ್ಟಿಗಳು ಮುಸ್ಲಿಮ್ ಸಂಸದರನ್ನು ಹೊಂದಿಲ್ಲ. ಮಾತ್ರವಲ್ಲ, ತೀರಾ ಸೆಕ್ಯುಲರ್ ಆಗಿ ಗುರುತಿಸಿಕೊಳ್ಳುತ್ತಿರುವ ಎಎಪಿ, ಬಿಜು ಜನತಾದಳ (ಬಿಜೆಡಿ), ಸಮಾಜವಾದಿ ಪಾರ್ಟಿ, ಸಿಪಿಐಗಳೂ ಮುಸ್ಲಿಮ್ ಸಂಸದರ ಬರ ಅನುಭವಿಸುತ್ತಿವೆ. ಲೋಕಸಭೆಯಲ್ಲಿ ಮುಸ್ಲಿಮರನ್ನು ಪ್ರತಿನಿಧಿಸದ 22 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶ ಗಳಲ್ಲಿ ಒಟ್ಟು ಮುಸ್ಲಿಮ್ ಜನಸಂಖ್ಯೆಯ ಶೇ. 54 ಮಂದಿ ಇದ್ದಾರೆ. ಜೊತೆಗೇ 364 ಲೋಕಸಭಾ ಸ್ಥಾನಗಳು ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿವೆ. ಒಂದು ವೇಳೆ, ಮುಸ್ಲಿಮ್ ಜನಸಂಖ್ಯೆಯ ಅನು ಪಾತವನ್ನು ಆಧರಿಸಿ ಲೋಕಸಭೆಯಲ್ಲಿ ಪ್ರಾತಿ ನಿಧ್ಯವನ್ನು ಪಡೆಯುವುದಾದರೆ ಕನಿಷ್ಠ 77 ಸ್ಥಾನಗಳನ್ನಾದರೂ ಪಡೆಯಬೇಕಿತ್ತು. 2011ರ ಜನಗಣತಿ ಪ್ರಕಾರ, ಈ ದೇಶದಲ್ಲಿ 14.2% ಮುಸ್ಲಿಮರಿದ್ದಾರೆ. ಆದರೆ ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಗೆ ಮುಸ್ಲಿಮ್ ಜನಪ್ರತಿನಿಧಿಗಳ ಸಂಖ್ಯೆ ಇಳಿ ಮುಖವಾಗುತ್ತಲೇ ಹೋಗುತ್ತಿದೆ. ಆದ್ದರಿಂದಲೇ, ಆರಂಭದಲ್ಲಿ ಎತ್ತಲಾದ ಪ್ರಶ್ನೆಗಳು ಮತ್ತೆ ಮತ್ತೆ ಪ್ರಸ್ತುತವಾಗುವುದು. ಸುಮಾರು 15 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಮುದಾಯವೊಂದು ಶಾಸಕಾಂಗದ ಪರಿಧಿಯಿಂದ ಮೆಲ್ಲ ಮೆಲ್ಲನೆ ಹೊರಬೀಳುವುದು ಏನನ್ನು ಸೂಚಿಸುತ್ತದೆ? ಇದು ಯೋಜಿತವೇ, ಷಡ್ಯಂತ್ರವೇ, ಸಹಜವೇ ಅಥವಾ ಪ್ರಜಾತಂತ್ರದ ದೌರ್ಬಲ್ಯವೇ? ತಿಂಗಳ ಹಿಂದೆ ನಡೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನೇ ಎತ್ತಿಕೊಳ್ಳಿ. ಉತ್ತರ ಪ್ರದೇಶದಲ್ಲಿ ಸುಮಾರು 20%ದಷ್ಟು ಮುಸ್ಲಿಮರಿದ್ದಾರೆ. 2012ರ ವಿಧಾನಸಭಾ ಚುನಾವಣೆಯಲ್ಲಿ 69 ಮುಸ್ಲಿಮ್ ಶಾಸಕರು ಅಲ್ಲಿನ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈ ಬಾರಿ ಬರೇ 24 ಮಂದಿಯಷ್ಟೇ ಆಯ್ಕೆಯಾಗಿದ್ದಾರೆ. ಈ ಬೆಳವಣಿಗೆ ಯನ್ನು ಏನೆಂದು ವಿಶ್ಲೇಷಿಸಬೇಕು? ಒಂದು ಕಡೆ 325 ಸ್ಥಾನಗಳನ್ನು ಪಡೆದು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೇರಿದ ಬಿಜೆಪಿಯು ಮುಸ್ಲಿಮರನ್ನು ಅಭ್ಯರ್ಥಿಯಾಗಿ ನಿಲ್ಲಿಸುವುದಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಮುಸ್ಲಿಮರಿಗೆ ಸ್ಪರ್ಧಿಸಲು ಟಿಕೆಟ್ ಕೊಡುವು ದಿಲ್ಲ ಎಂದು ಬಹಿರಂಗವಾಗಿಯೇ ಅದು ಹೇಳಿಕೊಂಡಿದೆ. ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಈ ಮುಸ್ಲಿಮ್ ಅಸ್ಪೃಶ್ಯ ನೀತಿಯನ್ನು ಪಾಲಿಸಲಾಗುವುದು ಎಂದು ಯಡಿಯೂರಪ್ಪ ಬಹಿರಂಗವಾಗಿಯೇ ಹೇಳಿದ್ದಾರೆ. ಇನ್ನೊಂದೆಡೆ, ಮುಸ್ಲಿಮರ ತಲ್ಲಣಗಳು ಚರ್ಚೆಗೊಳಗಾಗುವ ಸಾಧ್ಯತೆಗಳು ದಿನೇ ದಿನೇ ಕ್ಷೀಣಗೊಳ್ಳುತ್ತಿವೆ. 2006ರಲ್ಲಿ ಪಾರ್ಲಿಮೆಂಟ್‍ನಲ್ಲಿ ಮಂಡನೆ ಯಾದ ಸಾಚಾರ್ ವರದಿಯ ಬಗ್ಗೆ ಸದ್ಯ ಯಾವ ರಾಜಕೀಯ ಪಕ್ಷಗಳೂ ಮಾತಾಡುತ್ತಿಲ್ಲ. ಕನಿಷ್ಠ ಆ ವರದಿಯ ಪಾರ್ಲಿಮೆಂಟ್ ಮಂಡನೆಗೆ ಒಂದು ದಶಕವಾದ ನೆಪದಲ್ಲಾದರೂ ಆ ವರದಿಯ ಅಂಶಗಳನ್ನು ನೆನಪಿಸಿಕೊಳ್ಳುವ ಸೌಜನ್ಯವನ್ನೂ ಅವು ತೋರಿಸು ತ್ತಿಲ್ಲ. ಸಾಚಾರ್ ನೇತೃತ್ವದ 7 ಸದಸ್ಯರ ಆಯೋಗವು 2006ರಲ್ಲಿ ತನ್ನ ವರದಿಯನ್ನು ಮಂಡಿಸಿತ್ತು. ಈ ವರದಿಯ ಮೌಲ್ಯಮಾಪನ ಕ್ಕಾಗಿ ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯವು 2014ರ ಆರಂಭದಲ್ಲಿ ಕುಂಡು ಸಮಿತಿಯನ್ನು ರಚಿಸಿತ್ತು. ವರದಿ ಯ ಪ್ರಕಾರ, 31% ಭಾರತೀಯ ಮುಸ್ಲಿಮರು ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದ್ದಾರೆ. ಸರಕಾರಿ ಉದ್ಯೋಗದಲ್ಲಿ ಮುಸ್ಲಿಮರ ಪ್ರಾತಿನಿಧ್ಯ 4.9%. ಶಿಕ್ಷಣ ಕ್ಷೇತ್ರದಲ್ಲಿ ಈ ದೇಶದ ರಾಷ್ಟ್ರೀಯ ಸರಾಸರಿಯು 64.8% ಆಗಿದ್ದರೆ ಮುಸ್ಲಿಮರು ಶೇ. 59.1ರಷ್ಟು ಸರಾಸರಿಯನ್ನು ಹೊಂದಿದ್ದಾರೆ. ಉನ್ನತ ಶಿಕ್ಷಣ ರಂಗದಲ್ಲಂತೂ ಈ ಸರಾಸರಿ ಇನ್ನಷ್ಟು ಕಳವಳಕಾರಿ. ಖಾಸಗಿ ಮತ್ತು ಸರಕಾರಿ ಬ್ಯಾಂಕುಗಳೆರಡೂ ಮುಸ್ಲಿಮರಿಗೆ ಸಲ ಕೊಡುವುದಕ್ಕೆ ಹಿಂಜರಿ ಯುತ್ತವೆ ಎಂದೂ ವರದಿ ಹೇಳಿತ್ತು. 2013ರಲ್ಲಿ ಬಿಡುಗಡೆ ಯಾದ ವಿಶ್ವಬ್ಯಾಂಕ್‍ನ ವರದಿಯಂತೂ ಈ ವಿವರಗಳನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳಿಕೊಂಡಿತ್ತು. ನಗರ ಭಾರತದ 34% ದಷ್ಟು ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದರೆ ಹಿಂದೂ ಗಳಲ್ಲಿ ಈ ಪ್ರಮಾಣ 19%. 1983ರಿಂದ 2010ರ ನಡುವೆ ನಗರ ಭಾರತದಲ್ಲಿರುವ ಹಿಂದೂಗಳ ಬಡತನದ ಪ್ರಮಾಣವು 52%ಕ್ಕೆ ಇಳಿದಿದ್ದರೆ ಮುಸ್ಲಿಮರ ಮಟ್ಟಿಗೆ 39%ದಷ್ಟು ಮಾತ್ರ ಇಳಿ ಮುಖವಾಗಿವೆ. ಭಾರತದ ಪ್ರತಿ 4 ಭಿಕ್ಷುಕರಲ್ಲಿ ಓರ್ವರು ಮುಸ್ಲಿಮರೆಂಬುದು ಇಲ್ಲಿ ಉಲ್ಲೇಖನೀಯ. ದುರಂತ ಏನೆಂದರೆ, ಇತ್ತಿತ್ತಲಾಗಿ ಮುಸ್ಲಿಮರ ಹಿಂದುಳಿಯುವಿಕೆಯ ಬಗ್ಗೆ ಮಾತೆತ್ತುವು ದಕ್ಕೇ ಸೆಕ್ಯುಲರ್ ಪಕ್ಷಗಳು ಭಯಪಡತೊಡಗಿವೆ. ಒಂದು ವೇಳೆ ಬಾಯಿ ತಪ್ಪಿ ಅವು ಏನಾದರೂ ಹೇಳಿಬಿಟ್ಟರೆ ಅದನ್ನು ಬಿಜೆಪಿಯು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತದೆ. ಮುಸ್ಲಿಮ್ ತುಷ್ಠೀಕರಣ ಎಂದು ವ್ಯಾಖ್ಯಾನಿಸುತ್ತದೆ. ಮುಸ್ಲಿಮರ ಕಲ್ಯಾಣ ಕ್ಕಾಗಿ ಯೋಜನೆಗಳನ್ನು ಹಮ್ಮಿಕೊಳ್ಳುವುದು, ಅವರ ಹಿಂದುಳಿ ಯುವಿಕೆಗೆ ಪರಿಹಾರಗಳನ್ನು ಹುಡುಕುವುದೆಲ್ಲ ಸೆಕ್ಯುಲರ್ ಪಕ್ಷಗಳ ಪಾಲಿಗೆ ‘ಓಟು ಕಳಕೊಳ್ಳುವ’ ವಿಷಯವಾಗಿ ಮಾರ್ಪಾಟು ಆಗತೊಡಗಿವೆ. ಈ ವರೆಗೆ ಬಿಜೆಪಿಯ ಉನ್ನತ ನಾಯಕತ್ವವು ಮುಸ್ಲಿಮ್ ಅಸ್ಪೃಶ್ಯ ನೀತಿಯನ್ನು ಸಾರ್ವಜನಿಕವಾಗಿ ನಿರ್ಭಿಡೆಯಿಂದ ಹೇಳಿ ಕೊಳ್ಳುತ್ತಿರಲಿಲ್ಲ. ಇವತ್ತು ಆ ಮುಲಾಜೂ ಹೊರಟು ಹೋಗಿದೆ. ಮಾತ್ರವಲ್ಲ, ಮುಸ್ಲಿಮರನ್ನು ಸಾರ್ವಜನಿಕವಾಗಿ ಜಾಡಿಸುವುದನ್ನೇ ಮತ ಧ್ರುವೀಕರಣದ ಹೊಸ ತಂತ್ರವಾಗಿ ಅದು ಕಂಡುಕೊಂಡಿದೆ. ಪ್ರಧಾನಿಯವರೇ ಅದರ ನೇತೃತ್ವವನ್ನು ವಹಿಸಿ ಕೊಂಡಿದ್ದಾರೆ. ಮಾತ್ರವಲ್ಲ, ಹೀಗೆ ಮಾಡುವುದರಿಂದ ಮುಸ್ಲಿಮೇತರ ಮತಗಳು ಜಾತಿ ಕಟ್ಟುಪಾಡುಗಳನ್ನು ಮರೆತು ಒಂದೇ ಕಡೆ ಸೇರುವುದಕ್ಕೆ ಮತ್ತು ತಮಗೇ ಹೆಚ್ಚು ಲಭ್ಯವಾಗುವುದಕ್ಕೆ ಅವಕಾಶಗಳು ಹೆಚ್ಚಿವೆ ಎಂಬುದನ್ನೂ ಅದು ತಿಳಿದುಕೊಂಡಿದೆ. ಮುಸ್ಲಿಮ್ ಅಸ್ಪೃಶ್ಯ ನೀತಿಯು ಈಗಾಗಲೇ ಅಸ್ಪೃಶ್ಯವಾಗಿರುವ ದಲಿತ ಸಮುದಾಯವನ್ನು ತನ್ನ ಬೆಂಬಲಿಗರಾಗಿಸುವಂತೆ ಮಾಡ ಬಹುದು ಅನ್ನುವ ಅದರ ತಂತ್ರ ಬಲ ಪಡೆಯುತ್ತಲೂ ಇದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಬಿಜೆಪಿಯ ಈ ನೀತಿಗೆ ಜನರು ಒಗ್ಗಿಕೊಳ್ಳುತ್ತಾ ಹೋದರೆ ಅದರ ಪರಿಣಾಮ ಏನಾಗ ಬಹುದು? ಇತರ ರಾಜಕೀಯ ಪಕ್ಷಗಳಿಗೆ ಯಾವ ಅನಿವಾರ್ಯತೆ ಎದುರಾಗಬಹುದು? ಮುಸ್ಲಿಮರ ಹಕ್ಕು, ಸ್ವಾತಂತ್ರ್ಯದ ಬಗ್ಗೆ ಮಾತಾಡುವುದರಿಂದ ಮತ ಕಳಕೊಳ್ಳಬೇಕಾಗುತ್ತದೆ ಎಂದಾದರೆ ಅವು ಯಾವ ನಿರ್ಧಾರ ತಳೆದಾವು? ಮುಸ್ಲಿಮರನ್ನು ಅವು ಕೂಡ ನಿಧಾನವಾಗಿ ನಿರ್ಲಕ್ಷಿಸುವ ನೀತಿಯನ್ನು ಅಳವಡಿಸಿ ಕೊಳ್ಳಲಾರದೇ? ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದ್ದುಕೊಂಡೇ ಒಂದು ಬೃಹತ್ ಸಮುದಾಯವನ್ನು ರಾಜಕೀಯವಾಗಿ ಅಸ್ಪೃಶ್ಯಗೊಳಿಸುವುದು ಸಾಧ್ಯವೆಂದಾದರೆ, ಆ ಪ್ರಜಾತಂತ್ರ ಎಲ್ಲಿಯ ವರೆಗೆ ಪರಿಪೂರ್ಣ? ಯಾವುದೇ ಸಮುದಾಯದ ಪಾಲಿಗೆ ರಾಜಕೀಯ ಪ್ರಾತಿನಿಧ್ಯವು ಅತ್ಯಂತ ಅಗತ್ಯ ಮತ್ತು ಅನಿವಾರ್ಯ. ಅದರ ಹೊರತು ಸಾಮಾಜಿಕ ನ್ಯಾಯವನ್ನು ಪಡಕೊಳ್ಳುವುದು ಸುಲಭ ಅಲ್ಲ. ರಾಜಕೀಯ ಪ್ರಾತಿನಿಧ್ಯ ಇದ್ದೂ ಮುಸ್ಲಿಮರು ಹಕ್ಕು ವಂಚಿತರಾಗಿ, ಸುಳ್ಳು ಕೇಸುಗಳಿಗೆ ಒಳಗಾಗಿ ಮತ್ತು ಉದ್ಯೋಗ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿರಳ ಸಂಖ್ಯೆಯಲ್ಲಿರುವಾಗ ಇನ್ನು, ಆ ಪ್ರಾತಿನಿಧ್ಯವೂ ಇಲ್ಲವಾದರೆ ಅದು ಉಂಟು ಮಾಡುವ ಶೂನ್ಯ ಯಾವ ಬಗೆಯದ್ದಾಗಿರಬಹುದು? ಹಿಂದುಳಿದ ಸಮುದಾಯಗಳು ಸಾಮಾಜಿಕವಾಗಿ ಬಲ ಪಡೆಯಬೇಕಾದರೆ ರಾಜಕೀಯ ಪ್ರಾತಿನಿಧ್ಯ ಅನಿವಾರ್ಯ ಎಂಬುದನ್ನು ಸಂವಿಧಾನವೇ ಒಪ್ಪಿಕೊಂಡಿದೆ. ಆದ್ದರಿಂದಲೇ ದಲಿತರಿಗೆ ಮೀಸಲಾತಿಯ ಸೌಲಭ್ಯವನ್ನು ಒದಗಿಸಿದೆ. ಅಲ್ಲದೇ, ಮುಸ್ಲಿಮರ ಮೇಲೆ ರಾಜಕೀಯ ಅಸ್ಪೃಶ್ಯ ನೀತಿಯನ್ನು ಜಾರಿಗೊಳಿಸಿರುವ ಬಿಜೆಪಿಯು ದಲಿತ ತುಷ್ಟೀಕರಣ ನೀತಿಯನ್ನು ಅವಲಂಬಿಸುತ್ತಲೂ ಇದೆ. ದಲಿತ ವಿರೋಧಿ ಎಂಬ ಹಣೆಪಟ್ಟಿಯಿಂದ ಕಳಚಿಕೊಳ್ಳುವುದಕ್ಕೆ ದಲಿತರಿಗೆ ವಿವಿಧ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೂ ಇದೆ. ಈ ಹಿನ್ನೆಲೆಯಲ್ಲಿ ಒಟ್ಟು ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಅವಲೋಕನವೊಂದು ನಡೆಯಬೇಕಾಗಿದೆ.
ಪ್ರಜಾತಂತ್ರ ಎಷ್ಟು ಜನಪರವೋ ಜನಾಂಗ ವಾದಿ ರಾಜಕೀಯ ಪಕ್ಷವೊಂದು ಅದನ್ನು ಅಷ್ಟೇ ಜನವಿರೋಧಿಯಾಗಿ ಮಾರ್ಪಡಿ ಸುವುದಕ್ಕೂ ಅವಕಾಶ ಇದೆ ಅನ್ನುವುದಕ್ಕೆ ಕಳೆದ ಮೂರ್ನಾಲ್ಕು ವರ್ಷಗಳ ರಾಜಕೀಯ ಬೆಳವಣಿಗೆ ಪುರಾವೆಯನ್ನು ಒದಗಿಸುತ್ತದೆ. ಪ್ರಜಾತಂತ್ರ ಯಶಸ್ವಿಯಾಗುವುದಕ್ಕೆ ಜಾಗೃತ ಮತದಾರರ ಪಾತ್ರ ಬಹಳ ಮುಖ್ಯ. ಮತದಾರರು ಜಾಗೃತರೂ ಪ್ರಜ್ಞಾವಂತರೂ ಮತ್ತು ಮನುಷ್ಯ ಪ್ರೇಮಿಗಳೂ ಆಗಿರದಿದ್ದರೆ ಪ್ರಜಾತಂತ್ರ ವ್ಯವಸ್ಥೆ ಸರ್ವಾಧಿಕಾರಿ ವ್ಯವಸ್ಥೆ ಗಿಂತಲೂ ಕ್ರೂರವಾಗುವುದಕ್ಕೂ ಅವಕಾಶ ಇದೆ. ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುವುದೇ ಪ್ರಜಾತಂತ್ರ ಅಲ್ಲ. ಅದು ಅದರ ಯಶಸ್ಸಿನ ಗುರುತೂ ಅಲ್ಲ. ಈ ಪ್ರಜಾತಂತ್ರ ವ್ಯವಸ್ಥೆ ಸರ್ವರನ್ನೂ ಹೇಗೆ ನಡೆಸಿಕೊಳ್ಳು ತ್ತದೆ ಎಂಬುದೇ ಬಹುಮುಖ್ಯ ಅಂಶ. ಮನುಷ್ಯ ವಿರೋಧಿಗಳು ಈ ಪ್ರಜಾತಂತ್ರ ವ್ಯವಸ್ಥೆಯನ್ನೇ ಬಳಸಿಕೊಂಡು ಅಧಿಕಾರ ಕ್ಕೇರಬಲ್ಲರಾದರೆ ಮತ್ತು ಪ್ರಜಾತಂತ್ರದ ಆಶಯಗಳನ್ನೇ ಬುಡ ಮೇಲು ಮಾಡಬಲ್ಲಷ್ಟು ಶಕ್ತರಾಗುತ್ತಾರೆಂದಾದರೆ ಆ ಪ್ರಜಾತಂತ್ರ ಮರು ಅವಲೋಕನಕ್ಕೆ ಒಳಪಡಬೇಕಾದುದು ತೀರಾ ತೀರಾ ಅಗತ್ಯ. ಇವತ್ತು ಮುಸ್ಲಿಮರು ಈ ಸಂದಿಗ್ಧತೆಯನ್ನು ಎದುರಿ ಸುವ ಭೀತಿಯಲ್ಲಿದ್ದಾರೆ. ನಾಳೆ ಅದು ದಲಿ ತರಿಗೂ ಆದಿವಾಸಿ ಗಳಿಗೂ ಕ್ರೈಸ್ತರಿಗೂ ಎದುರಾಗಬಹುದು. ಒಂದೊಂದೇ ಸಮುದಾಯವನ್ನು ರಾಜಕೀಯವಾಗಿ ಅಸ್ಪೃಶ್ಯಗೊಳಿಸುತ್ತಾ ಕೊನೆಗೆ ಒಂದೇ ಸಮುದಾಯ ಸ್ಪೃಶ್ಯವಾಗುವ ಹಂತಕ್ಕೂ ಅದು ತಲುಪಬಹುದು. ಆದ್ದರಿಂದ ಚುನಾವಣೆ ಆಧಾರಿತ ಪ್ರಜಾ ತಂತ್ರ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕಾದ ಅನಿವಾರ್ಯತೆ ಇದೆ. ರಾಜಕೀಯ ಪಕ್ಷಗಳು ನಿರ್ದಿಷ್ಟ ಸಮುದಾಯಕ್ಕೆ ಪ್ರಾತಿ ನಿಧ್ಯ ಕೊಡಲು ನಿರಾಕರಿಸುವ ಸ್ಥಿತಿ ಉಂಟಾದರೆ ಅದಕ್ಕೆ ಪರಿಹಾರ ಏನು ಎಂಬುದು ಚರ್ಚೆಗೊಳಗಾಗಬೇಕು. ‘ನಿರ್ದಿಷ್ಟ ಸಮುದಾಯಕ್ಕೆ ಸ್ಪರ್ಧಿಸಲು ಟಿಕೆಟು ಕೊಡಲ್ಲ’ ಅನ್ನುವ ಪಕ್ಷದ ರಾಜಕೀಯ ಮಾನ್ಯತೆಯನ್ನು ರದ್ದುಪಡಿಸುವ ಅಧಿಕಾರ ಚುನಾ ವಣಾ ಮಂಡಳಿಗೆ ಒದಗಿಸಬಹುದೇ, ಸಮುದಾಯವೊಂದರ ಜನಸಂಖ್ಯೆಗೆ ಅನುಗುಣವಾಗಿ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ವನ್ನು ಒದಗಿಸುವ ಕ್ರಮಗಳನ್ನು ಕೈಗೊಳ್ಳಬಹುದೇ, ಮಹಿಳಾ ಮೀಸಲಾತಿ ಇರುವಂತೆಯೇ ಪ್ರತಿ ರಾಜಕೀಯ ಪಕ್ಷಗಳೂ ಕಡ್ಡಾಯವಾಗಿ ಇಂತಿಷ್ಟೇ ಟಿಕೇಟುಗಳನ್ನು ಜನಸಂಖ್ಯಾಧಾರಿತ ವಾಗಿ ನಿರ್ದಿಷ್ಟ ಸಮುದಾಯಗಳಿಗೆ ನೀಡಲೇಬೇಕೆಂಬ ಕಾನೂನು ರಚಿಸಬಹುದೇ.. ಇತ್ಯಾದಿ ಅಂಶಗಳೂ ಈ ಚರ್ಚೆಯ ವ್ಯಾಪ್ತಿಗೆ ಒಳಪಡಬೇಕು. ನ್ಯಾಯಾಂಗ ಈ ವಿಷಯದಲ್ಲಿ ಮುತುವರ್ಜಿ ವಹಿಸುವ ಅಗತ್ಯವೂ ಇದೆ. ಇಲ್ಲದಿದ್ದರೆ,  
            ಪ್ರಜಾತಂತ್ರವು ಇನ್ನೊಂದು ಸರ್ವಾಧಿಕಾರವಾದೀತು.

No comments:

Post a Comment