Wednesday, March 30, 2016

ನನ್ನ ಅಪ್ಪ ನನ್ನ ಹೀರೋ...

      ಮಾರ್ಚ್ 19ರಂದು ನಿಧನರಾದ ನನ್ನ ತಂದೆಯವರನ್ನು (92 ವರ್ಷ)  ಸ್ಮರಿಸುತ್ತಾ..
          
          ಲುಂಗಿ, ಬನಿಯನ್ನು ಮತ್ತು ಮುಂಡಾಸು.. ಇದು ನನ್ನ ಅಪ್ಪ. ಅಪ್ಪ ಅಂದಕೂಡಲೇ ನನ್ನ ಎದುರು ನಿಲ್ಲುವುದು ಈ ಆಕೃತಿಯೇ. ಆದರೆ ಶುಕ್ರವಾರ ಮಾತ್ರ ಅಪ್ಪ ಸಂಪೂರ್ಣ ಬಿಳಿಯಾಗುತ್ತಿದ್ದರು. ಬಿಳಿ ಮುಂಡಾಸು, ಬಿಳಿ ಶರಟು ಮತ್ತು ಲುಂಗಿ. ಅಪ್ಪನ ಹಣೆ ಮತ್ತು ಎಡಗೈ ಅಂಗೈಯಲ್ಲಿ ಕಪ್ಪು ದಡ್ಡುಗಳಿದ್ದುವು. ಹಣೆಗಿಂತಲೂ ದೊಡ್ಡ ಗಾತ್ರದ ದಡ್ಡು ಇದ್ದುದು ಅಂಗೈಯಲ್ಲಿ. ಅಡಿಕೆ ಸುಲಿಯುವ ವೃತ್ತಿ ಅಪ್ಪನದ್ದಾದುದರಿಂದ ಆ ದಡ್ಡು ಅಸಾಮಾನ್ಯವೇನೂ ಆಗಿರಲಿಲ್ಲ. ನನ್ನ ಊರು ತುಂಬಾ ಅಡಿಕೆ ತೋಟಗಳೇ ತುಂಬಿಕೊಂಡಿದ್ದುವು. ಆದ್ದರಿಂದ ಅಪ್ಪ ಅಡಿಕೆ ಸುಲಿಯುವುದನ್ನೇ ಖಾಯಂ ವೃತ್ತಿ ಆಗಿ ಆಯ್ಕೆ ಮಾಡಿಕೊಂಡದ್ದು ಸಹಜವೇ ಆಗಿತ್ತು. ಅಡಿಕೆ ತೋಟದ ಮಾಲಿಕರೆಲ್ಲ ಶ್ರೀಮಂತ ಬ್ರಾಹ್ಮಣರು. ರಜಾದಿನಗಳಲ್ಲಿ ನಾನೂ ಅಪ್ಪನ ಜೊತೆ ಹೋಗುತ್ತಿದ್ದೆ. ಅಡಿಕೆ ಸುಲಿಯುತ್ತಿದ್ದೆ. ಆಗೆಲ್ಲ ಬ್ರಾಹ್ಮಣರ ಕೆಜಿ ಕ್ಲಾಸಿನ ಪ್ರಾಯದ ಮಕ್ಕಳು ಕೂಡ ನನ್ನ ಅಪ್ಪನನ್ನು ಏಕವಚನ ದಲ್ಲಿ ಕರೆಯುತ್ತಿದ್ದುದು ನನ್ನೊಳಗನ್ನು ಇರಿಯುತ್ತಿತ್ತು. ‘ಏ ಮಮ್ಮದೆ, ಇಲ್ಲಿ ಬಾ, ನೀನು ಹಾಗೆ ಮಾಡು.. ಹೀಗೆ ಮಾಡು..' ಮುಂತಾದ ಪದಪ್ರಯೋಗಗಳು ಮಾಮೂಲಾಗಿತ್ತು. ಅಪ್ಪನಲ್ಲಿ ಆ ಬಗ್ಗೆ ಅಸಹನೆ ಇತ್ತೋ ಇಲ್ಲವೋ, ಅದನ್ನು ಪತ್ತೆ ಹಚ್ಚುವಷ್ಟು ಪ್ರಬುದ್ಧತೆ ನನ್ನಲ್ಲಿರಲಿಲ್ಲ. ಆದರೆ ನನಗಂತೂ ಅಸಹನೆಯಿತ್ತು. ಯಾಕೆಂದರೆ, ಅಪ್ಪ ನನ್ನ ಪಾಲಿನ ಹೀರೋ. ನಿಜವಾಗಿ, ಆ ಅಸಂಸ್ಕ್ರತಿ ನನಗೊಂದು ಅಮೂಲ್ಯ ಸಂಸ್ಕಾರದ ಪಾಠವನ್ನು ಕಲಿಸಿತು.
  ಅಪ್ಪ ಅನಕ್ಷರಸ್ಥರು, ಅಮ್ಮ ಕೂಡ. ಊರಲ್ಲಿ ಏಕೈಕ ಪ್ರಾಥಮಿಕ ಶಾಲೆಯಿತ್ತು. 7ನೇ ತರಗತಿಯ ವರೆಗೆ ಅಲ್ಲಿ ಕಲಿಯಬಹುದಾಗಿತ್ತು. ಇದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆಯಬೇಕಾದರೆ, ಊರಿನಿಂದ 13 ಕಿಲೋಮೀಟರ್ ದೂರವಿರುವ ‘ವಿಟ್ಲ’ಕ್ಕೆ ಹೋಗಬೇಕಿತ್ತು. ಹಾಗಂತ, ಅಲ್ಲಿಗೆ ಹೋಗುವುದು ಸುಲಭವಾಗಿರಲಿಲ್ಲ. ಬಸ್‍ಗಳಿರಲಿಲ್ಲ. ಮಣ್ಣಿನ ರಸ್ತೆ. ಅಷ್ಟಕ್ಕೂ, ರಸ್ತೆಯ ಮೂಲಕವೇ ಹೋದರೆ ದೂರ ಇನ್ನಷ್ಟು ಹೆಚ್ಚಾಗುತ್ತಿತ್ತು. ಊರಿನ ಮಂದಿ ವಿಟ್ಲ ಪೇಟೆಗೆ ಹೋಗಬೇಕಾದರೆ ಐದಾರು ಕಿಲೋಮೀಟರ್ ನಡೆದು ಮುಖ್ಯರಸ್ತೆಗೆ ಬಂದು, ಅಲ್ಲಿಂದ ಖಾಸಗಿ ವಾಹನಗಳನ್ನೋ ಅಪರೂಪಕ್ಕೆ ಓಡಾಡುವ ಸರಕಾರಿ ಬಸ್ಸುಗಳನ್ನೋ ಹಿಡಿಯಬೇಕಾಗಿತ್ತು. ಆದ್ದರಿಂದ ಊರಿನವರಿಗೆ ವಾರಕ್ಕೊಮ್ಮೆ ಪೇಟೆಗೆ ಹೋಗುವುದೆಂದರೆ ಅದುವೇ ಒಂದು ಸುದ್ದಿ. ಈ ಸ್ಥಿತಿಯು ಬಡವರೇ ಹೆಚ್ಚಿರುವ ಊರಿನ ಮೇಲೆ ತೀವ್ರ ಅಡ್ಡ ಪರಿಣಾಮವನ್ನು ಬೀರಿತು. ಊರಿನ ಎಲ್ಲರ ಶಿಕ್ಷಣವೂ 7ನೇ ತರಗತಿಯ ಒಳಗೇ ಮುಕ್ತಾಯಗೊಳ್ಳುತ್ತಿತ್ತು. ಆದರೆ ನನ್ನ ಅಪ್ಪ ಈ ಪರಿಸ್ಥಿತಿಯನ್ನು ದಾಟಲು ಪ್ರಯತ್ನಿಸಿದರು. ನನ್ನ ಮೂವರು ಅಣ್ಣಂದಿರಲ್ಲಿ ಇಬ್ಬರ ಶಿಕ್ಷಣ 7ನೇ ತರಗತಿಯ ಒಳಗಡೆಯೇ ಮುಕ್ತಾಯವನ್ನು ಕಂಡಿತ್ತು. ಆದರೆ ಮೂರನೆಯವನನ್ನು ತಂದೆ ವಿಟ್ಲದ ಹೈಸ್ಕೂಲಿಗೆ ಸೇರಿಸಿದರು. ಊರಿನ ಸುಮಾರು 25 ಮುಸ್ಲಿಮ್ ಮನೆಗಳಲ್ಲಿ ಹೈಸ್ಕೂಲ್ ಮೆಟ್ಟಿಲೇರಿದ ಮೊದಲ ಹುಡುಗ ನನ್ನ ಅಣ್ಣನಾಗಿದ್ದ. ಬಳಿಕ ನಾನು. ಊರಿನಲ್ಲಿ ಮೊಟ್ಟಮೊದಲು ಎಸೆಸೆಲ್ಸಿ ಪಾಸು ಮಾಡಿದ ವಿದ್ಯಾರ್ಥಿ ನನ್ನ ಅಣ್ಣನಾಗಿದ್ದ. ಆ ಬಳಿಕ ನಾನು. ಅನಕ್ಷರಸ್ಥರಾಗಿದ್ದ ಮತ್ತು ತೀರಾ ಬಡವರಾಗಿದ್ದ ಅಪ್ಪ ನಮ್ಮನ್ನು ಓದಿಸಲು ತೀರ್ಮಾನಿಸಿದ್ದು ಆ ಕಾಲದಲ್ಲಿ ಕ್ರಾಂತಿಕಾರಿ ನಿರ್ಧಾರವಾಗಿತ್ತು. ಮುಖ್ಯವಾಗಿ, ನನ್ನ ಊರಿನ ಪ್ರತಿಯೊಂದು ಮನೆಯಲ್ಲೂ ಒಂದಕ್ಕಿಂತ ಹೆಚ್ಚು ಉಸ್ತಾದರುಗಳು (ಮೌಲಾನಾ) ಮತ್ತು ಮುತಅಲ್ಲಿಂಗಳು (ದರ್ಸ್ ವಿದ್ಯಾರ್ಥಿಗಳು) ಇದ್ದರು. ಹೆಚ್ಚಿನವರು ಕಲಿಯುತ್ತಿದ್ದುದೆಲ್ಲ ಕೇರಳದ ಧಾರ್ಮಿಕ ವಿದ್ಯಾಸಂಸ್ಥೆಗಳಲ್ಲಿ. ಹೈಸ್ಕೂಲ್ ಶಿಕ್ಷಣಕ್ಕಾಗಿ ದೂರದ ವಿಟ್ಲಕ್ಕೆ ಹೋಗುವುದು ಮತ್ತು ಫೀಸು ತುಂಬುವುದು ಎರಡೂ ಹೊರೆಯಾದುದರಿಂದ 7ನೇ ತರಗತಿಯ ಬಳಿಕ ಅಥವಾ ಅದರ ಮುಂಚೆಯೇ ದರ್ಸ್ ವಿದ್ಯಾಭ್ಯಾಸಕ್ಕೆ ಸೇರ್ಪಡೆಗೊಳ್ಳುವುದು ಊರಿನವರ ಏಕೈಕ ದಾರಿಯಾಗಿತ್ತು. ಕೊನೆಯ ಗಂಡು ಮಗುವಾದ ನನ್ನ ಮೇಲೂ ಊರಿನ ಕುಟುಂಬಿಕರಿಂದ ಈ ಬಗ್ಗೆ ತಂದೆಯ ಮೇಲೆ ಒತ್ತಡ ಬಂದಿತ್ತು. ಮನೆಯಲ್ಲಿ ಒಬ್ಬನನ್ನಾದರೂ ‘ಉಸ್ತಾದ್' ಮಾಡಬೇಕೆಂಬ ಸಲಹೆಗಳು ಬಲವಾಗಿಯೇ ಕೇಳಿಬಂದಿದ್ದುವು. ಒಂದು ಹಂತದಲ್ಲಿ ನನ್ನ ಮಾವನ ಮಗನ ಜೊತೆ ನನ್ನನ್ನು ‘ದರ್ಸ್'ಗೆ ಸೇರ್ಪಡೆಗೊಳಿಸುವುದಕ್ಕೆ ನನ್ನ ತಾಯಿಯ ಕಡೆಯಿಂದ ಮಾತುಕತೆಗಳೂ ನಡೆದಿದ್ದುವು. ಆದರೆ ಕಲಿಯುವುದರಲ್ಲಿ ಮುಂದಿದ್ದ ನನ್ನನ್ನು ಅಪ್ಪ ಹೈಸ್ಕೂಲ್‍ಗೆ ಸೇರಿಸಿದರು. ಹೀಗೆ ನಾನು ಪ್ರತಿದಿನ ಕನಿಷ್ಠ 26 ಕಿಲೋಮೀಟರ್ ನಷ್ಟು ದೂರ ನಡೆಯಲೇಬೇಕಿತ್ತು. ಅಕ್ಷರಭ್ಯಾಸ ಇಲ್ಲದ ಅಪ್ಪನ ಅಂದಿನ ಈ ನಿರ್ಧಾರ ನನ್ನನ್ನು ಇವತ್ತಿಗೂ ಅಚ್ಚರಿಗೆ ತಳ್ಳಿದೆ. ಅಪ್ಪನ ಈ ನಿರ್ಧಾರ ಊರಿನ ಸಂಪ್ರದಾಯಕ್ಕೆ ತೀರಾ ವಿರುದ್ಧವಾಗಿತ್ತು. ಒಂದು ರೀತಿಯ ಬಂಡಾಯ. ಹಾಗಂತ, ಆ ಬಂಡಾಯ ಅಲ್ಲಿಗೇ ಮುಕ್ತಾಯಗೊಳ್ಳಲಿಲ್ಲ.
  ಜಮಾಅತೆ ಇಸ್ಲಾಮೀ ಹಿಂದ್‍ನ ದಕ್ಷಿಣ ಭಾರತ ಸಮ್ಮೇಳನವು ಕೇರಳದ ಹಿರಾ ನಗರದಲ್ಲಿ ಜರುಗಿದಾಗ ನಾನೂ ಅದರಲ್ಲಿ ಪಾಲುಗೊಂಡಿದ್ದೆ. ಹಾಗಂತ, ಆ ಸಂದರ್ಭದಲ್ಲಿ ಜಮಾಅತ್‍ಗೂ ನನಗೂ ಯಾವ ಸಂಬಂಧವೂ ಇರಲಿಲ್ಲ. ಅಂದು ನಾನು ಕಲಿ ಯುತ್ತಿದ್ದ ಮದ್ರಸಕ್ಕೆ ಪಕ್ಕದೂರಿನ ಡಿ.ಕೆ. ಇಬ್ರಾಹೀಮ್ ಎಂಬವರು ಆಗಾಗ ಬರುತ್ತಿದ್ದರು. ಅವರಿಗೂ ಉಸ್ತಾದರಿಗೂ ಒಳ್ಳೆಯ ಸಂಬಂಧವೂ ಇತ್ತು. ಹೀಗೆ ನಾನು ಮತ್ತು ನನ್ನ ಪ್ರಾಯದ ಒಂದಿಬ್ಬರು ಗೆಳೆಯರು ಇಬ್ರಾಹೀಮ್‍ರೊಂದಿಗೆ ಗೆಳೆತನ ಬೆಳೆಸಿದೆವು. ಆದರೆ ಒಂದು ದಿನ ನನ್ನ ಮದ್ರಸದಲ್ಲಿ ದೊಡ್ಡ ಕೋಲಾಹಲ ಉಂಟಾಯಿತು. ಇಬ್ರಾಹೀಮ್‍ರಿಗೂ ಜಮಾಅತೆ ಇಸ್ಲಾಮಿಗೂ ನಡುವೆ ಇರುವ ಸಂಬಂಧವು ತೀವ್ರ ಚರ್ಚೆಗೆ ಒಳಪಟ್ಟು ಹಲ್ಲೆಯ ಹಂತಕ್ಕೂ ಹೋಯಿತು. ಅವರ ಮೇಲೆ ಅಲಿಖಿತ ಬಹಿಷ್ಕಾರವನ್ನು ಹೇರಲಾಯಿತು. ಬಹುಶಃ, ನನ್ನಲ್ಲಿ ಈ ಬೆಳವಣಿಗೆ ತೀವ್ರ ಪರಿಣಾಮವನ್ನು ಬೀರಿತು. ನನಗೆ ಅವರ ಮೇಲೆ ಅನುಕಂಪವೋ ಅಭಿಮಾನವೋ ಏನೋ ಉಂಟಾಯಿತು. ಆದ್ದ ರಿಂದಲೋ ಏನೋ ನಾನು ಅವರೊಂದಿಗಿನ ಗೆಳೆತನವನ್ನು ಗಟ್ಟಿಗೊಳಿಸಿದೆ. ಆ ಗೆಳೆತನವೇ ನನ್ನನ್ನು ಹಿರಾ ಸಮ್ಮೇಳನಕ್ಕೆ ಕರೆದೊಯ್ದಿತ್ತು. ಅಪ್ಪನ ಅನುಮತಿಯನ್ನು ಕೇಳದೆಯೇ ನಾನು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. ಆದರೂ ಅಪ್ಪ ನನ್ನ ಮೇಲೆ ರೇಗಲಿಲ್ಲ. ತರಾಟೆಗೆತ್ತಿಕೊಳ್ಳಲಿಲ್ಲ. ಈ ಹಿಂದಿನಂತೆಯೇ ನನ್ನನ್ನು ಪ್ರೀತಿಸಿದರು. ಹೀಗೆ ಬೆಳೆದ ಸಂಬಂಧ ನನ್ನನ್ನು ಜಮಾಅತ್‍ಗೆ ಹತ್ತಿರಗೊಳಿಸಿತು. 2000ನೇ ಇಸವಿಯಲ್ಲಿ ನಾನು ಸನ್ಮಾರ್ಗ ಪತ್ರಿಕೆ ಸೇರಿಕೊಂಡೆ. ಬಹುಶಃ ಈ ಬೆಳವಣಿಗೆಯಿಂದಾಗಿ ನಾನು ಎದುರಿಸಿದುದಕ್ಕಿಂತ ಹೆಚ್ಚಿನ ಮುಜುಗರ ಮತ್ತು ಸವಾಲನ್ನು ನನ್ನ ತಂದೆ ಎದುರಿಸಿರಬಹುದು ಎಂದೇ ನನ್ನ ಭಾವನೆ. ಈ ಬಗ್ಗೆ ನನ್ನ ವಿರುದ್ಧ ಊರಿನಲ್ಲಿ ತೀವ್ರ ಆಕ್ಷೇಪಗಳೂ ವ್ಯಕ್ತವಾದುವು. ನನ್ನ ನಿಲುವನ್ನು ಅಲ್ಲಲ್ಲಿ ಪ್ರಶ್ನಿಸಲಾಯಿತು. ಅಪಹಾಸ್ಯಕ್ಕೂ ಗುರಿ ಪಡಿಸಲಾಯಿತು. ಹತ್ತಿರದ ಕುಟುಂಬಿಕರೋರ್ವರ ಬಾಡಿಗೆ ಕಾರಿನಲ್ಲಿ ನನಗೆ ಬಹಿಷ್ಕಾರವೂ ಬಿತ್ತು. ಹೀಗಿರುತ್ತಾ, ನನ್ನ ಅಪ್ಪನಿಗೆ ಊರಿನವರಿಂದ ತುಂಬು ಗೌರವ ಸಿಕ್ಕಿರಬಹುದೆಂದು ನಾನು ಭಾವಿಸುತ್ತಿಲ್ಲ. ಆದರೂ ಅಪ್ಪ ಎಲ್ಲೂ ಈ ಬಗ್ಗೆ ನನ್ನಲ್ಲಿ ಹೇಳಿಕೊಂಡೇ ಇಲ್ಲ. ನನ್ನ ನಿಲುವಿಗೆ ಎದುರಾಡಿದ್ದೂ ಇಲ್ಲ. ಒಂಟಿತನವನ್ನು ಇಷ್ಟಪಡುತ್ತಿದ್ದ ಮತ್ತು ಅಂತರ್ಮುಖಿಯಾಗಿದ್ದ ಅಪ್ಪ ಬದುಕಿನುದ್ದಕ್ಕೂ ಒಂದು ಬಗೆಯ ನಿರ್ಲಿಪ್ತತೆಯನ್ನು ಕಾಯ್ದುಕೊಂಡೇ ಬಂದರು. ಅವರು ಭಾವನೆಗಳನ್ನು ಪ್ರಕಟಿಸುತ್ತಿದ್ದುದು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಬದುಕಿನ ಕೊನೆಯ ದಿನಗಳನ್ನು ಬಿಟ್ಟರೆ ಉಳಿದಂತೆ ಅವರು ಕಣ್ಣೀರು ಹರಿಸಿದ್ದನ್ನು ನಾನು ನೋಡಿಯೂ ಇಲ್ಲ. ಅವರು ಒಂದು ರೀತಿಯಲ್ಲಿ ಅಂತರ್ಮುಖಿ ಬಂಡಾಯಗಾರನಾಗಿದ್ದರು. ಇಸ್ಲಾಮ್‍ಗೆ ಸಂಬಂಧಿಸಿ ಊರಿನ ತಪ್ಪು ಸಂಪ್ರದಾಯಗಳನ್ನು ನಿಷ್ಠೆಯಿಂದ ಪಾಲಿಸುತ್ತಿದ್ದ ಅಪ್ಪ, ಕ್ರಮೇಣ ಎಲ್ಲವನ್ನೂ ಕೈಬಿಟ್ಟರು. ಹಾಗಂತ ನಾನೇನೂ ಅವರ ಮೇಲೆ ಒತ್ತಡವನ್ನು ಹೇರಿರಲಿಲ್ಲ. ನನ್ನ ನಿಲುವನ್ನು ಬಲವಂತದಿಂದ ಮಂಡಿಸಿಯೂ ಇರಲಿಲ್ಲ. ಅಪ್ಪ ಇವೆಲ್ಲವನ್ನೂ ತೀರಾ ಸಹಜವಾಗಿ ನಿರ್ವಹಿಸಿದರು. ವರದಕ್ಷಿಣೆ ಮಾಮೂಲಾಗಿದ್ದ ಮತ್ತು ಊರಿನಲ್ಲಿ ತೀರಾ ಸಹಜವಾಗಿದ್ದ ಸಂದರ್ಭದಲ್ಲೂ ಅವರು ನನ್ನ ವರದಕ್ಷಿಣೆ ರಹಿತ ಮದುವೆಯನ್ನು ಬೆಂಬಲಿಸಿದರು. ಅವರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಏಕಾಂತದಲ್ಲಿ ಪರೋಕ್ಷವಾಗಿ ಅದನ್ನು ವ್ಯಕ್ತಪಡಿಸುತ್ತಲೂ ಇದ್ದರು. ಅವರಿಗೆ ನನ್ನ ಮೇಲೆ ತುಂಬಾ ವಿಶ್ವಾಸವಿತ್ತು. ನನ್ನ ಪ್ರತಿ ಹೆಜ್ಜೆಯನ್ನೂ ಅವರು ಬೆಂಬಲಿಸಿದುದಕ್ಕೆ ಈ ವಿಶ್ವಾಸವೇ ಕಾರಣವಾಗಿತ್ತು. ನಿಜವಾಗಿ, ಓರ್ವ ಮಗನಾಗಿ ಇಂಥ ವಿಶ್ವಾಸಾರ್ಹ ತಂದೆಯನ್ನು ಪಡೆಯುವುದಕ್ಕಿಂತ ದೊಡ್ಡ ಭಾಗ್ಯ ಇನ್ನೇನೂ ಇಲ್ಲ..
       ನಾವು ತಂದೆಯನ್ನು ಬಾಪ ಎಂದು ಕರೆಯುತ್ತಿದ್ದೆವು. ಧಾರ್ಮಿಕವಾಗಿ ಬಾಪ ತುಂಬಾ ನಿಷ್ಠೆ ಉಳ್ಳವರಾಗಿದ್ದರು. ಸೂರಃ ಯಾಸೀನ್ ಅನ್ನು ಕಂಠಪಾಠವಾಗಿ ಪಠಿಸುತ್ತಿದ್ದರು. ನಾವು ತಪ್ಪಿ ಓದಿದರೆ ತಿದ್ದುತ್ತಿದ್ದರು. ಅಪಾರ ಸ್ವಾಭಿಮಾನಿ. ಪರಿಶ್ರಮ ಜೀವಿ. ನಮ್ಮ ಮುಳಿಹುಲ್ಲಿನ ಮನೆಯನ್ನು ಹೆಂಚಿನ ಮನೆಯಾಗಿ ಪರಿವರ್ತಿಸಿದ್ದು ಅಪ್ಪನೇ. ವರ್ಷ ವರ್ಷವೂ ಮುಳಿಹುಲ್ಲನ್ನು ಮಾಡಿಗೆ ಹಾಸಬೇಕಾಗಿತ್ತು. ಇಲ್ಲದಿದ್ದರೆ ಮಳೆಗಾಲದಲ್ಲಿ ನೀರು ಸೋರುತ್ತದೆ. ಆ ದಿನಗಳೇ ಒಂದು ಕೌತುಕ. ಸರಕಾರಿ ಜಾಗದಲ್ಲಿರುವ ಮುಳಿಹುಲ್ಲನ್ನೇ ಊರಿನವರು ಆಶ್ರಯಿಸಬೇಕಾಗಿತ್ತು. ಇಂತಿಂಥ ದಿನದಂದು ಹುಲ್ಲನ್ನು ಜನರು ಕತ್ತರಿಸಬೇಕೆಂದು ಗ್ರಾಮ ಕರಣಿಕರು ಫರ್ಮಾನು ಹೊರಡಿಸುವರು. ಆ ದಿನ ತಂದೆಯ ನೇತೃತ್ವದಲ್ಲಿ ನಾವು ಊರಿನ ಸರಕಾರಿ ಭೂಮಿಗೆ ತೆರಳಿ ಮುಳಿಹುಲ್ಲು ಕತ್ತರಿಸಿ ಕಟ್ಟು ಮಾಡು ತ್ತಿದ್ದೆವು. ಅಪ್ಪ ಅದನ್ನು ತಲೆಯಲ್ಲಿ ಹೊತ್ತು ಮನೆಗೆ ಸಾಗಿಸುತ್ತಿದ್ದರು. ನಾವೂ ಅವರ ಜೊತೆಗೂಡುತ್ತಿದ್ದೆವು. ಮುಳಿಹುಲ್ಲನ್ನು ಮಾಡಿಗೆ ಹಾಸುವಾಗ ಮಕ್ಕಳಾದ ನಾವೆಲ್ಲ ಮಾಡಿನಲ್ಲಿರುವ ಹಳೆ ಹುಲ್ಲಿನ ಕಾರಣದಿಂದ ಬಹುತೇಕ ಕಪ್ಪಾಗುತ್ತಿದ್ದೆವು. ಅಪ್ಪ ಆ ಬಳಿಕ ಮನೆಯನ್ನು ಹೆಂಚಿಗೆ ಬದಲಾಯಿಸಿದರು. ಬೆಳ್ಳಂಬೆಳಗ್ಗೆದ್ದು ಮಣ್ಣಿನ ಗೋಡೆಯನ್ನು ಮುಟ್ಟಿ(ಒಂದು ಬಗೆಯ ಮರದ ವಸ್ತು)ಯಿಂದ ಹದಗೊಳಿಸುತ್ತಿದ್ದುದು ಮತ್ತು ಬಳಿಕ ಕೆಲಸಕ್ಕೆ ತೆರಳುತ್ತಿದ್ದುದು ಈಗಲೂ ನೆನಪಿದೆ. ಈ ಎಲ್ಲ ಸಂದರ್ಭಗಳಲ್ಲಿ ಅವರು ತನ್ನ ಜೊತೆ ನಮ್ಮನ್ನು ಸೇರಿಸಿಕೊಳ್ಳುತ್ತಿದ್ದರು. ಅಂದಹಾಗೆ, ಬಾಲ್ಯದ ಈ ಅನುಭವಗಳಿಂದಲೋ ಏನೋ ಯಾವ ಕೆಲಸವೂ ನನ್ನ ಪಾಲಿಗೆ ಅಸ್ಪೃಶ್ಯವಾಗಿ ಕಾಣಿಸಲಿಲ್ಲ. ಶಾಲಾ ಖರ್ಚುಗಳನ್ನು ಭರಿಸ ಲಿಕ್ಕಾಗಿ ಬೀಡಿ ಸುರುಟಿದೆ. ವಿದ್ಯಾಭ್ಯಾಸ ಮುಗಿದು ಸನ್ಮಾರ್ಗ ಪತ್ರಿಕೆಗೆ ಸೇರ್ಪಡೆಗೊಳ್ಳುವುದರ ಮಧ್ಯೆ ವಿವಿಧ ಕೆಲಸಗಳನ್ನು ನಿರ್ವಹಿಸಿದೆ. ಅಪ್ಪ ಈ ಎಲ್ಲವನ್ನೂ ಸಹಜವಾಗಿಯೇ ಸ್ವೀಕರಿಸಿದರು. ನಾನು ಬರಹಗಾರನಾದ ಬಳಿಕವೂ ಅವರ ಈ ನಿಲುವು ಮುಂದುವರಿದಿತ್ತು. ಅವರು ನೈತಿಕವಾಗಿ ನನ್ನ ಬೆನ್ನೆಲುಬಾಗಿದ್ದರು. ಅಪ್ಪ ನನ್ನ ಜೊತೆಗಿದ್ದಾರೆ ಎಂಬ ಧೈರ್ಯವೊಂದು ನನ್ನನ್ನು ನನ್ನ ನಿಲುವಿಗೆ ಅಂಟಿಕೊಳ್ಳುವುದಕ್ಕೆ ಸದಾ ಒತ್ತಾಸೆಯಾಗಿ ನಿಲ್ಲುತ್ತಿತ್ತು. ಆದರೂ ಅಪ್ಪ ನನ್ನ ಮೇಲೆ ಇಷ್ಟೊಂದು ಭರವಸೆ ಯನ್ನು ಯಾಕೆ ಇಟ್ಟುಕೊಂಡಿದ್ದರು ಎಂಬುದು ನನಗಿನ್ನೂ ಗೊತ್ತಿಲ್ಲ. ನಾನು ಕೇಳಿಯೂ ಇಲ್ಲ. ಅಪ್ಪ ಹೇಳಿಯೂ ಇಲ್ಲ. ನನ್ನ ಬಾಲ್ಯದ ದಿನಗಳಲ್ಲಿ ಅವರ ಊಟದ ತಟ್ಟೆ ಹೇಗಿತ್ತು, ಅದರಲ್ಲಿ ಏನೇನಿತ್ತು ಮತ್ತು ಎಷ್ಟೆಷ್ಟಿತ್ತು ಎಂಬುದೂ ನನಗೆ ಗೊತ್ತಿಲ್ಲ. ಬಾಲ್ಯದ ಹಬ್ಬದ ದಿನಗಳೂ ಬಹುತೇಕ ಮಸುಕು ಮಸುಕು. ಅದರಲ್ಲಿ ಅಪ್ಪನ ಉಡುಪು ಏನಿತ್ತು, ಹೊಸತೋ.. ಸ್ಪಷ್ಟವಾಗಿ ಕಾಣುತ್ತಿಲ್ಲ. ಅಪ್ಪನ ಬದುಕು ತೀರಾ ಸರಳವಾದುದೂ ಸಹಜವಾದುದೂ ಆಗಿತ್ತು. ಬದುಕನ್ನು ಅವರು ಇದ್ದಂತೆ ಸ್ವೀಕರಿಸಿದರು. ಬದಲಾವಣೆಗೆ ಸಹಜವಾಗಿ ಒಗ್ಗಿಕೊಂಡರು. ಮಕ್ಕಳನ್ನು ಅಪಾರವಾಗಿ ಪ್ರೀತಿಸಿದರು. ಭಾವನೆಗಳನ್ನು ಅದುಮಿಟ್ಟುಕೊಂಡರು. ಅತ್ಯಂತ ಪ್ರತಿಕೂಲ ಸಂದರ್ಭದಲ್ಲಿಯೂ ನನ್ನನ್ನು ಓದಿಸಿದರು. ನನ್ನ ನಿಲುವುಗಳನ್ನು ಗೌರವಿಸಿದರು. ನೈತಿಕವಾಗಿ ನನ್ನ ಬೆಂಬಲಕ್ಕೆ ನಿಂತರು.. ಇವು ಮತ್ತು ಇಲ್ಲಿ ಹೇಳಲಾಗದ ಇಂಥ ಅನೇಕಾರು ಕಾರಣಗಳಿಂದಲೇ,
  ನನ್ನ ಅಪ್ಪ ನನ್ನ ಹೀರೋ, ಎಂದೆಂದೂ.. 

No comments:

Post a Comment