
ಮಲಹೊರುವ ಕಾರ್ಮಿಕನ ಮಗಳಾದ ಈ ಹುಡುಗಿಯ ಮೇಲೆ ವೈದ್ಯನೋರ್ವ ಅತ್ಯಾಚಾರ ಎಸಗಿದ್ದಾನೆ. ಯಾರಲ್ಲೂ ಬಾಯಿ ಬಿಡಬಾರದೆಂದು ಬೆದರಿಸಿದ್ದಾನೆ. 14ರ ಹರೆಯದ ಈ ಹುಡುಗಿ ಅತ್ಯಾಚಾರ ಮತ್ತು ಬೆದರಿಕೆಯೆಂಬ ಎರಡು ಅಲುಗಿನ ಕತ್ತಿಯನ್ನು ಎದುರಿಸಲಾಗದೇ ಮೌನವಾಗುತ್ತದೆ. ತನ್ನ ಮಗುವಿನ ಹೊಟ್ಟೆಯೊಳಗೆ ಭ್ರೂಣವೊಂದು ಬೆಳೆಯುತ್ತಿರುವುದು ಆ ಬಾಲೆಯ ಅಪ್ಪನ ಗಮನಕ್ಕೂ ಬಂದಿರುವುದಿಲ್ಲ. ಅದು ಗೊತ್ತಾಗುವಾಗ 24 ವಾರಗಳೇ (6 ತಿಂಗಳು) ಸಂದಿರುತ್ತವೆ. ಅಪ್ಪ ಗುಜರಾತ್ ಹೈಕೋರ್ಟ್‍ನ ಮೊರೆ ಹೋಗುತ್ತಾನೆ. ಭ್ರೂಣವನ್ನು ತೆಗೆಸುವುದಕ್ಕೆ (ಅಬಾರ್ಷನ್) ಅನುಮತಿ ನೀಡಬೇಕೆಂದು ವಿನಂತಿಸುತ್ತಾನೆ. ಆದರೆ ಕಳೆದ ಜುಲೈ 24ರಂದು ಗುಜರಾತ್ ಹೈಕೋರ್ಟ್ ಆತನ ಮನವಿಯನ್ನು ತಳ್ಳಿ ಹಾಕುತ್ತದೆ. ಗರ್ಭಕ್ಕೆ ಸಂಬಂಧಿಸಿ 1971ರ ವೈದ್ಯಕೀಯ ಕಾಯ್ದೆಯ ಪ್ರಕಾರ, 20 ವಾರಗಳೊಳಗಿನ ಭ್ರೂಣವನ್ನಷ್ಟೇ ಕಿತ್ತು ಹಾಕಲು (ಅಬಾರ್ಷನ್) ಅನುಮತಿ ಇದೆ. ಈ ಅನುಮತಿಯೂ ಬೇಕಾಬಿಟ್ಟಿಯಲ್ಲ. ಗರ್ಭಿಣಿಯ ಆರೋಗ್ಯಕ್ಕೆ ಅಪಾಯವಿರುವುದಾದರೆ ಅಥವಾ ಭ್ರೂಣದ ಬೆಳವಣಿಗೆಯಲ್ಲಿ ತೊಂದರೆಗಳಿದ್ದರೆ ಮಾತ್ರ ಅಬಾರ್ಷನ್ ಮಾಡಬಹುದು. ಆದರೆ, ಈ ಹುಡುಗಿಗೆ ಸಂಬಂಧಿಸಿ ಈ ಯಾವ ತೊಂದರೆಯೂ ಇಲ್ಲ. ಹುಡುಗಿಯೂ ಆರೋಗ್ಯದಿಂದಿದ್ದಾಳೆ. ಭ್ರೂಣವೂ ಆರೋಗ್ಯದಿಂದಿದೆ. ಇಲ್ಲಿನ ಸಮಸ್ಯೆ ಏನೆಂದರೆ, ಹುಡುಗಿಯ ಹೊಟ್ಟೆಯೊಳಗಿನ ಭ್ರೂಣಕ್ಕೆ ಆಕೆ ಹೊಣೆಯಲ್ಲ ಎಂಬುದು. ಅದನ್ನು ಆಕೆ ಇಚ್ಛೆಪಟ್ಟು ಪಡೆದದ್ದಲ್ಲ. ಅದು ಕ್ರೌರ್ಯವೊಂದು ಬಿಟ್ಟುಹೋದ ಕುರುಹು. ಆದರೆ ಪ್ರಶ್ನೆ ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಇದರಲ್ಲಿ ಭ್ರೂಣದ ತಪ್ಪು ಏನಿದೆ? ತನ್ನನ್ನು ಬಸಿರಾಗು ಎಂದು ಆ ಭ್ರೂಣ ಕೇಳಿಕೊಂಡಿಲ್ಲ. ತಾಯಿ ಹೇಗೆ ಮುಗ್ಧೆಯೋ ಹಾಗೆಯೇ ಭ್ರೂಣವೂ ಮುಗ್ಧ. ಸಂತ್ರಸ್ತೆಯಷ್ಟೇ ಆ ಭ್ರೂಣವೂ ಪವಿತ್ರ. ಬಸಿರಿಗೆ ಕಾರಣ ಏನೇ ಇರಲಿ ಮತ್ತು ಅದರಿಂದಾಗಿ ಸಂತ್ರಸ್ತೆಗಾಗಿರುವ ಆಘಾತದ ಪ್ರಮಾಣವು ಎಷ್ಟೇ ತೀವ್ರವಾಗಿರಲಿ ಅದಕ್ಕೆ ಭ್ರೂಣವನ್ನು ಹೊಣೆಗಾರವನ್ನಾಗಿ ಮಾಡಲು ಸಾಧ್ಯವಿಲ್ಲವಲ್ಲ.. ಒಂದು ಕಡೆ ಭ್ರೂಣ ಬೇಡ ಅನ್ನುವ ಸಂತ್ರಸ್ತೆ ಮತ್ತು ಇನ್ನೊಂದು ಕಡೆ ಸಂತ್ರಸ್ತೆಯ ಜಗತ್ತನ್ನು ನೋಡುವ ಉತ್ಸಾಹದಿಂದ ಕಣ್ಣು ಮಿಟಕಿಸುತ್ತಿರುವ ಭ್ರೂಣ- ಇವುಗಳ ನಡುವಿನ ಈ ಸಂಘರ್ಷದಲ್ಲಿ ಭ್ರೂಣವೇ ಗುಜರಾತ್ ಹೈಕೋರ್ಟ್‍ನಲ್ಲಿ ಮೇಲುಗೈ ಪಡೆಯಿತು. ನ್ಯಾಯಾಧೀಶರಾದ ಅಭಿಲಾಷಾ ಕುಮಾರಿಯವರು `ಭ್ರೂಣದ ಜೀವಿಸುವ ಹಕ್ಕನ್ನು ನಿರಾಕರಿಸಲಾರೆ...' ಎಂದರು. ಆದರೆ ಹೈಕೋರ್ಟ್‍ನ ಈ ತೀರ್ಪನ್ನು ಅನೂರ್ಜಿತಗೊಳಿಸಿದ ಸುಪ್ರೀಮ್‍ಕೋರ್ಟ್, ಆ ಹುಡುಗಿಯ ಮನವಿಯನ್ನು ಗೌರವಿಸಿತು.
ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಕವರೇಜ್ ಸಿಗದ ಪ್ರಕರಣ ಇದು. ಪತ್ರಿಕೋದ್ಯಮದ ತುರ್ತಿನಲ್ಲಿ ಅನೇಕ ಬಾರಿ ಸುದ್ದಿಗಳ ಗಂಭೀರತೆಯೇ ಹೊರಟು ಹೋಗುವುದಿದೆ. ಆಳ ವಿಶ್ಲೇಷಣೆಗೆ ಒಳಗಾಗಬೇಕಾದ ಮತ್ತು ಮಹತ್ವಪೂರ್ಣವೆನ್ನಿಸಿಕೊಳ್ಳಬೇಕಾದ ಸುದ್ದಿಗಳು ತೀರಾ ಅಪ್ರಾಮುಖ್ಯತೆಯೊಂದಿಗೆ ಪ್ರಕಟವಾಗಿ ಕಳೆದುಹೋಗುವುದಿದೆ. 14ರ ಹರೆಯದ ಈ ಹುಡುಗಿಯ ಪ್ರಕರಣವೂ ತಲ್ಲಣ ಸೃಷ್ಟಿಸದೇ ಇರುವುದಕ್ಕೆ ಅತ್ಯಾಚಾರ ಪ್ರಕರಣಗಳು ಈ ದೇಶದಲ್ಲಿ ಸಾಮಾನ್ಯವಾಗಿರುವುದು ಕಾರಣವಾಗಿರಲೂಬಹುದು. ನಿಜವಾಗಿ ಅತ್ಯಾಚಾರ, ಗರ್ಭಧಾರಣೆ, ಅಬಾರ್ಷನ್.. ಮುಂತಾದ ಸಹಜ ಪದಗಳಾಚೆಗೆ ನಮ್ಮನ್ನು ಕೊಂಡೊಯ್ಯಬೇಕಾದ ಪ್ರಕರಣ ಇದು. ಓರ್ವ ಹೆಣ್ಣಿನ ಮೇಲೆ ಬಲಾತ್ಕಾರ ಮಾಡುವಲ್ಲಿಗೆ ಗಂಡಿನ ಹೋರಾಟ ಕೊನೆಗೊಳ್ಳುತ್ತದೆ. ಆದರೆ, ಹೆಣ್ಣಿನ ಸಮಸ್ಯೆ ಆರಂಭಗೊಳ್ಳುವುದೇ ಇಲ್ಲಿಂದ. ಅತ್ಯಾಚಾರವು ಗಂಡಿನ ಪಾಲಿಗೆ ಎಷ್ಟು ಇಚ್ಚಿತವೋ ಹೆಣ್ಣಿನ ಪಾಲಿಗೆ ಅಷ್ಟೇ ಅಇಚ್ಚಿತ. ಆಕೆ ಅದನ್ನು ನಿರೀಕ್ಷಿಸಿಲ್ಲವಾದ್ದರಿಂದ ಅದು ಆಘಾತವನ್ನಷ್ಟೇ ಅಲ್ಲ, ದೈಹಿಕ ಮತ್ತು ಮಾನಸಿಕವಾದ ಹಲವಾರು ಏರು-ಪೇರುಗಳಿಗೂ ಕಾರಣವಾಗುತ್ತದೆ. ಮನೆಯಲ್ಲಿ ಹೇಳಬೇಕೋ ಬೇಡವೋ ಅನ್ನುವ ತೊಳಲಾಟ ಒಂದು ಕಡೆಯಾದರೆ, ಹೇಳಿದರೆ ಏನೇನೆಲ್ಲ ಎದುರಿಸಬೇಕಾದೀತು ಎಂಬ ಭಯ ಇನ್ನೊಂದು ಕಡೆ. ಅತ್ಯಾಚಾರಿಯ ಬೆದರಿಕೆ ಮತ್ತೊಂದು ಕಡೆ. ಒಂದು ವೇಳೆ, ಇವೆಲ್ಲವನ್ನೂ ಮೀರಿ ತನ್ನ ಮೇಲಾದ ಕ್ರೌರ್ಯವನ್ನು ದಿಟ್ಟತನದಿಂದ ಬಹಿರಂಗಪಡಿಸಿದರೂ ಸಮಸ್ಯೆ ಅಲ್ಲಿಗೇ ಮುಗಿಯುವುದಿಲ್ಲ. `ಅತ್ಯಾಚಾರಕ್ಕೊಳಗಾದವಳು' ಎಂಬ ಪಟ್ಟಿಯೊಂದು ಆಕೆಯ ಹಣೆಯ ಮೇಲೆ ಸದಾ ತೂಗುತ್ತಿರುತ್ತದೆ. ಮದುವೆಯ ಸಂದರ್ಭದಲ್ಲಿ ಆ ಪಟ್ಟಿ ಸದ್ದು ಮಾಡಬಹುದು. ನೆರೆಕರೆಯಲ್ಲಿ, ಸಮಾಜದಲ್ಲಿ ಆ ಪಟ್ಟಿಗೆ ಇನ್ನಿಲ್ಲದ ಮಹತ್ವ ಸಿಗಬಹುದು. ಅದರ ಜೊತೆಗೇ ಗರ್ಭಧರಿಸುವ ಸಾಧ್ಯತೆಯೂ ಇರುತ್ತದೆ. ಸಂತ್ರಸ್ತತೆಯು ಅತ್ಯಾಚಾರಿಗೋ, ಮನೆಯವರಿಗೋ ಅಥವಾ ಸಮಾಜಕ್ಕೋ ಹೆದರಿ ಎಲ್ಲವನ್ನೂ ಮುಚ್ಚಿಟ್ಟು ಕೂತರೆ ಅಥವಾ ಅತ್ಯಾಚಾರದ ಪರಿಣಾಮದ ಬಗ್ಗೆ ಅರಿವು ಇಲ್ಲದವಳಾಗಿದ್ದರೆ, ಭ್ರೂಣದ ರೂಪದಲ್ಲಿ ಅತ್ಯಾಚಾರ ಮತ್ತೆ ಕಾಡುತ್ತದೆ. ಕೊನೆಗೊಂದು ದಿನ ಅದು ಸಂತ್ರಸ್ತೆಗೆ ಸವಾಲೆಸೆಯುವ ಹಂತಕ್ಕೂ ತಲುಪುತ್ತದೆ. ಒಂದು ರೀತಿಯಲ್ಲಿ, ‘ಅತ್ಯಾಚಾರದ ಸಂತ್ರಸ್ತೆ’ ಎದುರಿಸುವ ಸವಾಲುಗಳ ಹಲವು ಮಜಲುಗಳಿವು. ಆಕೆ ಮೌನವಾದರೂ ಸಮಸ್ಯೆಯೇ, ಮಾತಾಡಿದರೂ ಸಮಸ್ಯೆಯೇ. ವಿಷಾದ ಏನೆಂದರೆ, ಇವತ್ತು ಅತ್ಯಾಚಾರ ಪ್ರಕರಣಗಳು ಸಹಜ `ಪ್ರಕರಣ'ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಷ್ಟು ಜುಜುಬಿ ಅನ್ನಿಸಿಕೊಳ್ಳುತ್ತಿರುವುದು. ಸಂತ್ರಸ್ತೆಯ ಭಾವನಾತ್ಮಕ ಜಗತ್ತನ್ನು ಸ್ಪರ್ಶಿಸುವುದಕ್ಕೆ ನಮ್ಮ ಲೇಖನಿ, ಮೈಕುಗಳು ಆಸಕ್ತಿ ತೋರದೇ ಇರುವುದು. ಸುಪ್ರೀಮ್ ಕೋರ್ಟಿನ ತೀರ್ಪನ್ನು ನಮ್ಮ ಮಾಧ್ಯಮ ಜಗತ್ತು ಸ್ವೀಕರಿಸಿರುವ ರೀತಿಯೇ ಇದನ್ನು ಸಮರ್ಥಿಸುತ್ತದೆ.
ಅತ್ಯಾಚಾರವೆಂಬುದು ಕ್ರೌರ್ಯವಷ್ಟೇ ಅಲ್ಲ, ಅದು ಒಂದು ನಿಷ್ಪಾಪಿ ಭ್ರೂಣದ ಹುಟ್ಟು ಮತ್ತು ಅದರ ಸಾವನ್ನು ಅನಿವಾರ್ಯಗೊಳಿಸುವ ಪಾತಕ ಕೂಡ. ಒಂದು ವೇಳೆ ಅತ್ಯಾಚಾರಿಯು ಸಂತ್ರಸ್ತೆಯನ್ನು ಕೊಲೆ ಮಾಡದೆ ಬಿಟ್ಟು ಬಿಡಲೂಬಹುದು. ಆದರೆ, ಅತ್ಯಾಚಾರದಿಂದಾಗಿ ಜೀವ ತಳೆಯಬಹುದಾದ ಭ್ರೂಣ(ಮಗು)ವನ್ನು ಸಂತ್ರಸ್ತೆ ಕೊಲ್ಲಲೇಬೇಕಾಗುತ್ತದೆ. ಅದಕ್ಕೆ ಆಕೆ ಹೊಣೆಗಾರಳಲ್ಲ. ಆ ಹತ್ಯೆಯ ಸಂಪೂರ್ಣ ಹೊಣೆಯನ್ನು ಅತ್ಯಾಚಾರಿಯೇ ಹೊರಬೇಕು. ಸುಪ್ರೀಮ್ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಈ ಕುರಿತಂತೆ ಇನ್ನಷ್ಟು ಚರ್ಚೆಯಾಗಬೇಕಿದೆ. ಅತ್ಯಾಚಾರದ ಪರಿಣಾಮಗಳನ್ನು ಆಳ ವಿಶ್ಲೇಷಣೆಗೆ ಒಳಪಡಿಸಬೇಕಿದೆ. ಅತ್ಯಾಚಾರಿಗೆ ಮರಣದಂಡನೆಯೇ ಯಾಕೆ ಸೂಕ್ತ ಎಂಬುದಕ್ಕೆ ಬಲವಾದ ಉತ್ತರವನ್ನು ಪಡೆಯುವುದಕ್ಕಾದರೂ ಇಂಥದ್ದೊಂದು ಮರು ಅವಲೋಕನ ಅನಿವಾರ್ಯ.
No comments:
Post a Comment