Tuesday, February 17, 2015

ಕಾರ್ಲ್ ಮಾರ್ಕ್ಸ್ ರ ಅಪ್ರಕಟಿತ ಬರಹಗಳನ್ನು ಎದುರಿಟ್ಟುಕೊಂಡು..

    1989 ಡಿಸೆಂಬರ್ 2ರಂದು ವಿ.ಪಿ. ಸಿಂಗ್‍ರು ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಹಿಂದುಳಿದ ಮತ್ತು ದಲಿತ ವರ್ಗಗಳಲ್ಲಿ ಭಾರೀ ಸಡಗರ ಕಾಣಿಸಿಕೊಂಡಿತ್ತು. ಉತ್ತರ ಪ್ರದೇಶ, ಬಿಹಾರದಂಥ ರಾಜ್ಯಗಳು ಆ ಕ್ಷಣವನ್ನು ಎಷ್ಟರ ಮಟ್ಟಿಗೆ ಸಂಭ್ರಮಿಸಿದುವು ಅಂದರೆ, ಹಿಂದುಳಿದ ವರ್ಗಗಳ ಮಸೀಹ ಎಂಬಂತೆ ವಿ.ಪಿ. ಸಿಂಗ್‍ರನ್ನು ಅವು ಕೊಂಡಾಡಿದುವು. ದಮನಿತ ವರ್ಗಗಳ ಕುರಿತಂತೆ ಅವರಿಗಿರುವ ಕಾಳಜಿ, ಅವರ ಹೋರಾಟ, ಹೆಜ್ಜೆಗುರುತುಗಳೆಲ್ಲ ಅಪಾರ ಗೌರವದೊಂದಿಗೆ ಸ್ಮರಣೆಗೀಡಾದುವು. 1978ರಲ್ಲಿ ಪ್ರಧಾನಿ ಮೊರಾರ್ಜಿ ದೇಸಾಯಿಯವರು ರಚಿಸಿದ ಮಂಡಲ್ ಆಯೋಗದ ವರದಿಯನ್ನು ವಿ.ಪಿ. ಸಿಂಗ್ ಜಾರಿ ಮಾಡುತ್ತಾರೋ ಅನ್ನುವ ಅನುಮಾನ ಮಾಧ್ಯಮಗಳೂ ಸೇರಿದಂತೆ ಉನ್ನತ ಜಾತಿಗಳಲ್ಲಿ ಕಂಡುಬಂದರೆ ಹಿಂದುಳಿದ ವರ್ಗಗಳು ಅದಕ್ಕಾಗಿ ಕಾತರದಿಂದ ಕಾದುವು. 1980 ಡಿ. 30ರಂದು ಬಿ.ಪಿ. ಮಂಡಲ್ ಅವರು ರಾಷ್ಟ್ರಪತಿಯವರಿಗೆ ಸಲ್ಲಿಸಿದ ವರದಿಯಲ್ಲಿ ಹಿಂದುಳಿದ ಜಾತಿಗಳಿಗೆ (OBC) ಸರಕಾರಿ ಮತ್ತು ವಿಶ್ವವಿದ್ಯಾಲಯಗಳ ಹುದ್ದೆಗಳಲ್ಲಿ 27% ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಿದ್ದರು. ಆದರೆ ಈ ದೇಶದ ಎಲ್ಲ ಕ್ಷೇತ್ರಗಳನ್ನು ನಿಯಂತ್ರಿಸುತ್ತಿರುವ ಉನ್ನತ ವರ್ಗವು ಈ ವರದಿಯ ವಿರುದ್ಧ ಒಂದಾಗಿ ಬಿಟ್ಟವು. ಮಂಡಲ್ ವರದಿಯ ಶಿಫಾರಸ್ಸುಗಳನ್ನು ಉತ್ಪ್ರೇಕ್ಷಿತವಾಗಿ ಜನರ ಮುಂದಿಟ್ಟವು. ‘ಪ್ರತಿಭೆ ಇಲ್ಲದ ಮಂದಿ ನಮ್ಮ ಉದ್ಯೋಗವನ್ನು ಕಸಿಯುತ್ತಿದ್ದಾರೆ..’ ಎಂದೆಲ್ಲ ವ್ಯಾಖ್ಯಾನಗಳು ಬರತೊಡಗಿದುವು. ಆದರೆ, ವಿ.ಪಿ. ಸಿಂಗ್ ಇವಾವುದಕ್ಕೂ ಕಿವಿಗೊಡಲಿಲ್ಲ. ಅವರು ಮಂಡಲ್ ವರದಿಯ ಜಾರಿಗೆ ಮುಂದಾದರು. ಮೇಲ್ವರ್ಗದ ಮಂದಿ ಇದರ ವಿರುದ್ಧ ವ್ಯಾಪಕ ಪ್ರತಿಭಟನೆಯನ್ನು ಹುಟ್ಟು ಹಾಕಿದರು. ರಸ್ತೆ ತಡೆ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ, ಬಂದ್ ಮುಂತಾದುವುಗಳು ನಡೆದುವು. ಮಾಧ್ಯಮಗಳು ಇವುಗಳಿಗೆ ಭಾರೀ ಕವರೇಜನ್ನೂ ಕೊಟ್ಟವು. ‘ಅರ್ಮಾನೋಂಕಾ ಬಲಿದಾನ್-ಆರಕ್ಷಣ್’ ಎಂಬ ಹೆಸರಿನಲ್ಲಿ ಇಮಾಜಿನ್ ಟಿ.ವಿ. ಪ್ರಸಾರ ಮಾಡುತ್ತಿದ್ದ ಧಾರಾವಾಹಿಯಲ್ಲಿ ಈ ಪ್ರತಿಭಟನೆಯನ್ನು ಬಳಸಿಕೊಳ್ಳಲಾಯಿತು. ನಿಜವಾಗಿ, ಆ ಧಾರಾವಾಹಿ ಪ್ರೀತಿ-ಪ್ರೇಮದ ಕತೆಯನ್ನಾಧರಿಸಿದ್ದಾಗಿದ್ದು ಯಾವ ರೀತಿಯಲ್ಲೂ ಆ ಪ್ರತಿಭಟನೆಗೆ ಸಂಬಂಧವೇ ಇರಲಿಲ್ಲ. ಪ್ರತಿಭಟನೆಯಲ್ಲಿ ಸಾರ್ವಜನಿಕರನ್ನು ಸೇರ್ಪಡೆಗೊಳಿಸುವ ದುರುದ್ದೇಶದಿಂದ ಆ ದೃಶ್ಯವನ್ನು ಬಳಸಿಕೊಳ್ಳಲಾಯಿತು ಎಂಬ ದೂರು ವ್ಯಾಪಕವಾಗಿ ಕೇಳಿಬಂದಿತ್ತು. ದೆಹಲಿ ವಿಶ್ವವಿದ್ಯಾನಿಲಯದ ರಾಜೀವ್ ಗೋಸ್ವಾಮಿ ಎಂಬ ವಿದ್ಯಾರ್ಥಿ 1990 ಅಕ್ಟೋಬರ್‍ನಲ್ಲಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ. ದೆಹಲಿಯ ದೇಶಬಂಧು ಸಂಜೆ ಕಾಲೇಜಿನ ವಿದ್ಯಾರ್ಥಿ ಸುರೀಂದರ್ ಸಿಂಗ್ ಚೌಹಾನ್ ಆತ್ಮಹತ್ಯೆ ಮಾಡಿಕೊಂಡ. ‘ಮೀಸಲಾತಿಯನ್ನು ಓಟ್‍ಬ್ಯಾಂಕ್ ಆಗಿ ಪರಿಗಣಿಸುತ್ತಿರುವ ವಿ.ಪಿ. ಸಿಂಗ್, ಪಾಸ್ವಾನ್, ಶರದ್ ಯಾದವ್‍ರೇ ತನ್ನ ಸಾವಿಗೆ ಕಾರಣ’ ಎಂದು ಡೆತ್ ನೋಟ್ ಬರೆದಿಟ್ಟ. ಹೀಗೆ ಮಂಡಲ್ ವರದಿಯನ್ನು ಸಮಾಧಿ ಮಾಡುವಲ್ಲಿ ಉನ್ನತ ವರ್ಗದ ಪ್ರತಿಭಟನಾ ಚಳವಳಿಯು ಯಶಸ್ವಿಯಾಯಿತು. ವಿಶೇಷ ಏನೆಂದರೆ, ಇಂಥ ಪ್ರತಿಭಟನಾ ಹಿನ್ನೆಲೆಯೊಂದು ಆಮ್ ಆದ್ಮಿಯ ಅರವಿಂದ್ ಕೇಜ್ರಿವಾಲ್‍ಗೆ ಇದೆ ಎಂಬುದು. ಮೀಸಲಾತಿ ವಿರೋಧಿ ನಿಲುವನ್ನು ಅವರು ಹೊಂದಿದ್ದಾರೆ ಎಂಬ ಅನುಮಾನವೊಂದು ಹಲವರಲ್ಲಿದೆ. ಅದಕ್ಕೆ ಪೂರಕವೆಂಬಂತೆ ಕೆಲವು ವಿಷಯಗಳಲ್ಲಿ ಅವರ ನಿಲುವು ನಿಗೂಢವಾಗಿಯೂ ಇದೆ. ಕೆಳವರ್ಗದ ಹೋರಾಟದ ದಾರಿಯನ್ನು, ಮೈತ್ರಿ ರಾಜಕಾರಣದ ಸಾಧ್ಯತೆಯನ್ನು ಒಂದು ಹಂತದವರೆಗೆ ಅಮ್ ಆದ್ಮಿ ಮುಚ್ಚಿ ಬಿಡುತ್ತಿದೆಯೇ ಎಂಬ ಭಯವೂ ಕಾಡತೊಡಗಿದೆ. ಮಾಯಾವತಿ, ಮುಲಾಯಂ ಸಿಂಗ್ ಯಾದವ್, ಲಾಲೂ ಪ್ರಸಾದ್ ಯಾದವ್.. ಮುಂತಾದವರ ರಾಜಕೀಯ ನಡೆಗಳ ಕುರಿತಂತೆ ಭಿನ್ನಾಭಿಪ್ರಾಯಗಳೇನೇ ಇರಲಿ, ಅವರು ದಮನಿತ ವರ್ಗಗಳಿಗೆ ಧ್ವನಿಯಾಗುತ್ತಲೇ ಬಂದವರು. ಲಲ್ಲೂ ಪ್ರಸಾದ್ ಮುಖ್ಯಮಂತ್ರಿ ಆದರೂ ನಿತೀಶ್ ಕುಮಾರ್ ಆದರೂ ಹಿಂದುಳಿದ ಮತ್ತು ದಮನಿತ ವರ್ಗಗಳ ಕುರಿತಂತೆ ಅವರ ನಿಲುವಿನಲ್ಲಿ ದೊಡ್ಡ ವ್ಯತ್ಯಾಸಗಳಿರುವುದಿಲ್ಲ. ಅಸ್ಪ್ರಶ್ಯತೆಯನ್ನು, ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ಅವರು ಪ್ರತಿಭಟಿಸುತ್ತಲೇ ಬೆಳೆದವರು. ಸಂದರ್ಭ ಸಿಕ್ಕಾಗ ಉನ್ನತ ವರ್ಗಗಳನ್ನು ಪ್ರತಿನಿಧಿಸುವವರ ವಿರುದ್ಧ ರಾಜಕೀಯ ಮೈತ್ರಿಯನ್ನು ಬೆಳೆಸಲೂ ಅವರು ಮುಂದಾಗುತ್ತಾರೆ. ಆದರೆ, ಕೇಜ್ರಿವಾಲ್ ಹೇಗೆ? ಧರ್ಮ, ಜಾತಿ, ಭಾಷೆ, ಲಿಂಗಗಳ ಬಗ್ಗೆ ಅವರ ಖಚಿತ ನಿಲುವು ಏನು? ಅವರು ಯಾರನ್ನು, ಯಾವುದನ್ನು ಪ್ರತಿನಿಧಿಸುತ್ತಿದ್ದಾರೆ? ಅಲ್ಪಸಂಖ್ಯಾತರ ಬಗ್ಗೆ ಅವರ ಅಭಿಪ್ರಾಯ ಏನು? ಘರ್ ವಾಪಸಿ, ಭಾರತೀಯರೆಲ್ಲ ಹಿಂದೂಗಳು, ಪಠ್ಯ ಪುಸ್ತಕಗಳ ಬಿಜೆಪೀಕರಣ, ಇತಿಹಾಸದ ತಿರುಚುವಿಕೆ, ಭಯೋತ್ಪಾದನೆಯ ಹೆಸರಲ್ಲಿ ಬಂಧನಕ್ಕೀಡಾಗಿರುವ ಅಮಾಯಕರು, ಮುಸ್ಲಿಮರನ್ನೇ ಗುರಿ ಮಾಡಿರುವ ಬಿಜೆಪಿ ರಾಜಕಾರಣ... ಇತ್ಯಾದಿಗಳ ಕುರಿತಂತೆ ಅವರ ನಿಲುವು ಏನು? ಕೆಲವರು ಹೇಳುವಂತೆ ಅವರ ನಿಯೋ ಲಿಬರ್‍ಲಿಸಂನ ಪ್ರತಿನಿಧಿಯೇ? ಅವರದು ಸೋಶಿಯಲ್ ಫ್ಯಾಸಿಝಮ್ಮೆ? ನೀರು, ವಿದ್ಯುತ್, ರಸ್ತೆ, ಶಾಲೆ, ಆಸ್ಪತ್ರೆಗಳಾಚೆಗೆ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಕುರಿತು, ಮೀಸಲಾತಿಯ ಕುರಿತು, ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳ ಕುರಿತು ಅವರೇಕೆ ಏನನ್ನೂ ಹೇಳಿಲ್ಲ? ಅಂಥದ್ದೊಂದು ಸಂದರ್ಭದಿಂದ ಅವರು ತಪ್ಪಿಸಿಕೊಳ್ಳುತ್ತಿದ್ದಾರೋ ಅಥವಾ ಅಂಥ ಸಂದರ್ಭಕ್ಕಾಗಿ ಕಾಯುತ್ತಿದ್ದಾರೋ? ಕಾರ್ಲ್ ಮಾರ್ಕ್ಸ್ ಹುಟ್ಟಿ 200 ವರ್ಷಗಳಾಗುತ್ತಿರುವ (1818) ಈ ಸಂದರ್ಭದಲ್ಲಿ ‘ಅವರ ಬರಹಗಳು ಇನ್ನೂ ಇವೆ, ಎಲ್ಲವೂ ಪ್ರಕಟಗೊಂಡಿಲ್ಲ..' ಎಂಬ ಹೇಳಿಕೆ ಅಧಿಕೃತವಾಗಿ ಇತ್ತೀಚೆಗೆ ಹೊರಬಿದ್ದಿರುವಂತೆಯೇ ಕೇಜ್ರಿವಾಲ್‍ರ ಬಗ್ಗೆಯೂ ಹೇಳಬಹುದೇ? ಕಮ್ಯೂನಿಸ್ಟ್ ಮೆನಿಫೆಸ್ಟೋವನ್ನು ಬರೆದವರು ಕಾರ್ಲ್ ಮಾಕ್ಸ್. ಶ್ರೀಮಂತರು ಬಡವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದುದರ ಬಗ್ಗೆ ಅವರು ಮಾತಾಡಿದರು. ನಿಜವಾಗಿ, ಜೀವಿತ ಕಾಲದಲ್ಲಿ ಮಾರ್ಕ್ಸ್ ಪ್ರಭಾವಿ ಬರಹಗಾರರೇನೂ ಆಗಿರಲಿಲ್ಲ. ಕಾವ್ಯಾತ್ಮಕ ಭಾಷೆಯಲ್ಲಿ ಅವರು ಬರೆಯುತ್ತಿದ್ದ ಬರಹಗಳು ಜನರ ನಡುವೆ ಚರ್ಚಿತಗೊಳ್ಳುತ್ತಲೂ ಇರಲಿಲ್ಲ. 1848ರಲ್ಲಿ ಬರೆದ ಕಮ್ಯೂನಿಸ್ಟ್ ಮೆನಿಫೆಸ್ಟೋ ಮತ್ತು ದಾಸ್ ಕ್ಯಾಪಿಟಲ್ ಅನ್ನು ಬಿಟ್ಟರೆ ಉಳಿದಂತೆ ಅವರು ಬರೆದ ಪುಸ್ತಕಗಳಲ್ಲಿ ಹೆಚ್ಚಿನವು 1930ರ ಬಳಿಕವೇ ಬೆಳಕು ಕಂಡವು. ಹಾಗಂತ, ಅವರಿಗೆ ಇತರ ವಿಷಯಗಳ ಬಗ್ಗೆ ಜಿಜ್ಞಾಸೆ ಇದ್ದಿರಲಿಲ್ಲ ಎಂದಲ್ಲ. `ಕಾನೂನು ನಿರ್ಮಾಣ' ‘ಯಹೂದಿ ಸಮಸ್ಯೆ’, ‘ತತ್ವಶಾಸ್ತ್ರಗಳ ದಾರಿದ್ರ್ಯ’, ‘ವರ್ಗ ಸಂಘರ್ಷ’, ’ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆ’, ‘ವಂಶೀಯತೆ-ದೇಶೀಯತೆ-ಒಂದು ಅಧ್ಯಯನ..’ ಮುಂತಾದ ವಿಷಯಗಳ ಮೇಲೆ ಮಾರ್ಕ್ಸ್ ನಿಖರ ಅಭಿಪ್ರಾಯಗಳನ್ನು ಮಂಡಿಸಿದ್ದರು. ಹುಟ್ಟಿದ ಜರ್ಮನಿಯಿಂದ ಫ್ರಾನ್ಸ್ ಗೆ ವಲಸೆ ಹೋಗಿ, ಅಲ್ಲಿ ಫ್ರೆಡ್ರಿಕ್ ಏಂಗಲ್ಸ್ ನನ್ನು ಭೇಟಿಯಾಗಿ, ಅಲ್ಲಿಂದ ಗಡಿಪಾರುಗೊಂಡು ಇಂಗ್ಲೆಂಡ್‍ಗೆ ಹೋಗಿ, ಅಲ್ಲಿ 30 ವರ್ಷ ಇದ್ದೂ ಇಂಗ್ಲಿಷ್ ಕಲಿಯದೇ ಅಲ್ಲೇ ಸಾವಿಗೀಡಾದ ಅವರ ಚಿಂತನೆಗಳಿಗೆ ಜಗತ್ತಿನಲ್ಲಿ ಇವತ್ತೂ ಒಂದು ಬಗೆಯ ಪ್ರಭಾವ ಇದೆ. ಸಮಾಜವನ್ನು ಅವರು ಶ್ರೀಮಂತರು ಮತ್ತು ಕಾರ್ಮಿಕರು ಎಂದು ಒಡೆದು ನೋಡಿದರು. ಅದರ ಆಧಾರದಲ್ಲಿಯೇ ಚಿಂತನೆಗಳನ್ನು ಕಟ್ಟಿದರು. ಕೇಜ್ರಿವಾಲ್ ಮಾತಾಡುತ್ತಿರುವುದು ಹೆಚ್ಚು ಕಡಿಮೆ ಇದೇ ಭಾಷೆಯಲ್ಲಿ. ಅಂಬಾನಿಯನ್ನು ಖಳನಾಯಕನಂತೆ ಬಿಂಬಿಸಿ ಅವರು ಕಾರ್ಮಿಕರ ಬಗ್ಗೆ ಕರುಣೆ ತೋರಿಸುತ್ತಿದ್ದಾರೆ. ಆದರೆ ಭಾರತೀಯ ಸಾಮಾಜಿಕ ಪರಿಸ್ಥಿತಿಯು ಇಂಗ್ಲೆಂಡ್, ಜರ್ಮನಿ, ರಷ್ಯಾಗಳಂತೆ ಅಲ್ಲವಲ್ಲ. ಕಾರ್ಲ್ ಮಾರ್ಕ್ಸ್ ಅಲ್ಲಿನ ಪರಿಸ್ಥಿತಿಗೆ ತಕ್ಕದಾಗಿ ವರ್ಗ ಸಂಘರ್ಷ ಕೃತಿಯನ್ನು ಬರೆದಿರಬಹುದು. ಅದು ಅಂದಿನ ಕಾಲದ ಅಗತ್ಯವಾಗಿರಬಹುದು. ಆದರೆ ಭಾರತದಲ್ಲಿ ಸಂಘರ್ಷವಿರುವುದು ವರ್ಗಗಳ ನಡುವೆ ಅಲ್ಲ, ಜಾತಿಗಳು ಮತ್ತು ಧರ್ಮಗಳ ನಡುವೆ. ಮತಾಂತರ, ಲವ್‍ಜಿಹಾದ್, ಭಯೋತ್ಪಾದನೆಯ ನೆಪದಲ್ಲಿ ನಿರ್ದಿಷ್ಟ ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ಹಿಂಸೆಗೆ ಒಳಪಡಿಸುವ ವಾತಾವರಣವೊಂದು ಇಲ್ಲಿದೆ. ಇನ್ನೊಂದು ಕಡೆ ಬಂಡವಾಳಶಾಹಿತ್ವವನ್ನು ಪೋಷಿಸುವ ಪ್ರಯತ್ನವನ್ನೂ ಇವೇ ಮಂದಿ ನಡೆಸುತ್ತಿದ್ದಾರೆ. 1846ರಲ್ಲಿ ಕಾರ್ಲ್ ಮಾರ್ಕ್ಸ್ ಬರೆದ ದಾಸ್ ಕ್ಯಾಪಿಟಲ್‍ಗಿಂತ ಭಿನ್ನವಾದ ಬಂಡವಾಳಶಾಹಿ ಮತ್ತು ಕೋಮುವಾದಿ ಜುಗಲ್‍ಬಂದಿ ಇದು. ಈ ಸಂದರ್ಭದಲ್ಲಿ ಬರೇ ಅಂಬಾನಿಯನ್ನು, ಬಿರ್ಲಾರನ್ನು, ಟಾಟಾರನ್ನು ಪ್ರಶ್ನಿಸುತ್ತಾ ಹೋಗುವುದು ಮತ್ತು ಎಲ್ಲ ಅನಾಹುತಗಳಿಗೆ ಅವರೇ ಹೊಣೆಗಾರರು ಎಂಬಂತೆ ಮಾತಾಡುವುದರಿಂದ ಸಮಸ್ಯೆಯ ಒಂದು ಮುಖವನ್ನಷ್ಟೇ ಪ್ರತಿನಿಧಿಸಿದಂತಾಗುತ್ತದೆ. ಅಂಬಾನಿ, ಅದಾನಿಗಳಿಗೆ ಬೇಕಾದಂತೆ ಇಲ್ಲಿನ ಕಾನೂನು ಸಡಿಲಿಕೆಯೋ ಅಥವಾ ಕಾನೂನನ್ನೇ ರದ್ದು ಪಡಿಸುವುದೋ ನಡೆಯುವಾಗ ಅದರ ಬಗ್ಗೆ ಸಾರ್ವಜನಿಕ ಚರ್ಚೆ ಆಗದಂತೆ ನೋಡಿಕೊಳ್ಳುವ ಹೊಣೆಯನ್ನು ಘರ್ ವಾಪಸಿಗಳು, ರಾಮ ಮಂದಿರಗಳು, ಭಯೋತ್ಪಾದನೆಗಳು, ಐದು- ಹತ್ತು ಮಕ್ಕಳು, ದೇಶಭಕ್ತ ಗೋಡ್ಸೆಗಳು, ಸ್ವಚ್ಛ ಭಾರತಗಳೆಲ್ಲ.. ವಹಿಸಿಕೊಳ್ಳುತ್ತವೆ. ಈ ಹಿಂದೆ ಮಂಡಲ್‍ಗೆ ವಿರುದ್ಧವಾಗಿ ಕಮಂಡಲ್ (ರಾಮ ಜನ್ಮಭೂಮಿ) ಅನ್ನು ಚರ್ಚೆಗೆ ತಂದವರೇ ಇವತ್ತು ಈ ಎಲ್ಲವನ್ನೂ ಚರ್ಚೆಗೆ ತಂದಿದ್ದಾರೆ. ಮಂಡಲ್ ವರದಿಯ ಶಿಫಾರಸ್ಸುಗಳನ್ನು ‘ಹುಟ್ಟಿನಾಧಾರದ ಮೀಸಲಾತಿ’ ಎಂದು ಹೀಗಳೆದವರು ಮತ್ತು ‘ಪ್ರತಿಭೆಯಿಲ್ಲದವರಿಗೆ ಉದ್ಯೋಗ’ ಎಂದು ಟೀಕಿಸಿದವರು ಇವತ್ತು ವಿವಿಧ ಪಕ್ಷ ಮತ್ತು ಸಂಘಟನೆಗಳಲ್ಲಿ ತೊಡಗಿಸಿಕೊಂಡಿರಬಹುದು. ಮಾಧ್ಯಮಗಳ ಆಯ ಕಟ್ಟಿನ ಜಾಗದಲ್ಲಿ ಗಟ್ಟಿಯಾಗಿರಬಹುದು. ಮೋದಿ ಪ್ರಣೀತ ಚಿಂತನೆಗಳಿಗೆ ಮಾರುಕಟ್ಟೆ ಒದಗಿಸಿಕೊಡುವಲ್ಲಿ ಅವರು ಶ್ರಮಪಟ್ಟಿರಲೂಬಹುದು. ಕೇಜ್ರಿವಾಲ್‍ಗೆ ಆ ಹಿನ್ನೆಲೆ ಇದೆಯೋ ಇಲ್ಲವೋ ಆದರೆ ಮೀಸಲಾತಿ, ಅಲ್ಪಸಂಖ್ಯಾತರು, ಭಯೋತ್ಪಾದನೆ, ಬಂಡವಾಳಶಾಹಿತ್ವ, ಕೋಮುವಾದ, ಧರ್ಮ, ಹಿಂದುಳಿದವರು, ಅಸ್ಪ್ರಶ್ಯರು.. ಮುಂತಾದವುಗಳ ಬಗ್ಗೆ ಈ ದೇಶದ ರಾಜಕಾರಣಿಗೆ ಅಥವಾ ರಾಜಕೀಯ ಪಕ್ಷವೊಂದಕ್ಕೆ ಖಚಿತ ನಿಲುವು ಇರಬೇಕಾದುದು ಅತ್ಯಗತ್ಯ. ತುಳಿತಕ್ಕೊಳಗಾದವರನ್ನು ಮುಖ್ಯ ವಾಹಿನಿಗೆ ತರಬೇಕಾದರೆ ಏನು ಮಾಡಬೇಕು, ಮೀಸಲಾತಿ ಪ್ರತಿಭೆಯಿಲ್ಲದವರ ಬೇಡಿಕೆಯೇ, ಮುಸ್ಲಿಮರೆಲ್ಲ ಭಯೋತ್ಪಾದಕರೋ.. ಎಂಬುದರ ಕುರಿತಂತೆಲ್ಲ ಮೌನ ಪಾಲಿಸುವುದರಿಂದ ಅನುಮಾನಗಳು ಹೆಚ್ಚುತ್ತಾ ಹೋಗುತ್ತವೆಯೇ ಹೊರತು ವಿಶ್ವಾಸವಲ್ಲ.
   ಕಾರ್ಲ್ ಮಾರ್ಕ್ಸ್ ರ ಅಪ್ರಕಟಿತ ಚಿಂತನೆಗಳು ಇನ್ನೂ ಇವೆ ಎಂಬ ಸುದ್ದಿಯಂತೆಯೇ ಕೇಜ್ರಿವಾಲ್‍ರಿಂದಲೂ ಸಮಾಜ ಸುದ್ದಿಯನ್ನು ನಿರೀಕ್ಷಿಸುತ್ತಿದೆ. ಹಾಗಂತ, ಸುರೇಂದರ್ ಸಿಂಗ್ ಚೌಹಾನ್‍ನನ್ನು ಕೇಜ್ರಿವಾಲ್ ಪ್ರತಿನಿಧಿಸದಿರಲಿ.

No comments:

Post a Comment