Tuesday, January 13, 2015

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಚಾರ್ಲಿ ಹೆಬ್ಡೊ

   ಫ್ರಾನ್ಸಿನ ಚಾರ್ಲಿ ಹೆಬ್ಡೋ ಪತ್ರಿಕೆಯ ಉದ್ದೇಶ ಶುದ್ಧಿಯನ್ನು 2012 ಸೆಪ್ಟೆಂಬರ್‍ನಲ್ಲಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮರ ವಕ್ತಾರರು ಪ್ರಶ್ನಿಸಿದ್ದರು. ಪತ್ರಿಕೆಯ ನಿಲುವು ಪ್ರಚೋದನಕಾರಿಯಾಗಿದೆ ಎಂದಿದ್ದರು. ಫ್ರಾನ್ಸಿನ ವಿದೇಶಾಂಗ ಸಚಿವ ಲಾರೆಂಟ್ ಫ್ಯಾಬಿಸ್‍ರು ಪತ್ರಿಕೆಯ ಪ್ರಾಮಾಣಿಕತೆಯ ಬಗ್ಗೆ ಅನುಮಾನಿಸಿದ್ದರು. 'ಫ್ರಾನ್ಸಿನಲ್ಲಿ Freedom of expression (ಅಭಿವ್ಯಕ್ತಿ ಸ್ವಾತಂತ್ರ್ಯ)ಗೆ ನಿಯಮಗಳಿವೆ, ಅದನ್ನು ಕಡೆಗಣಿಸಬಾರದು' ಎಂದು ಎಚ್ಚರಿಸಿದ್ದರು. ಫ್ರಾನ್ಸ್ ನ ಯಹೂದಿ ಕೌನ್ಸಿಲ್‍ನ ಮುಖ್ಯಸ್ಥ ರಿಚರ್ಡ್ ಪ್ರೆಸ್‍ಕೈಮರ್ ಕೂಡ ಪತ್ರಿಕೆಯ ನಿಲುವನ್ನು ಖಂಡಿಸಿದ್ದರು. 2013 ಜನವರಿಯಲ್ಲಿ ಈ ಪತ್ರಿಕೆಯು ಪ್ರವಾದಿ ಮುಹಮ್ಮದ್ (ಸ)ರ  ಜೀವನವನ್ನು ಬಿಂಬಿಸುವ 65 ಪುಟಗಳ ವಿಡಂಬನೆಯ ಸಂಚಿಕೆಯನ್ನು ಪ್ರಕಟಿಸಿತ್ತು. ಪ್ರವಾದಿಯವರನ್ನು ಅವಮಾನಿಸುವ ಮತ್ತು ಅಪಹಾಸ್ಯ ಮಾಡುವ ಧಾಟಿಯಲ್ಲಿದ್ದ ಆ ಸಂಚಿಕೆಯ ವಿರುದ್ಧ ಫ್ರಾನ್ಸಿನ ಮುಸ್ಲಿಮರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು. ಆ ಸಂಚಿಕೆಯನ್ನು ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಿದ್ದರು. ‘ಸಿರಿಯನ್ ಅಸೋಸಿಯೇಶನ್ ಫಾರ್ ಲಿಬರ್ಟಿ’ ಎಂಬ ಸಂಘಟನೆಯು, 'ಚಾರ್ಲಿ ಹೆಬ್ಡೋವು ಜನಾಂಗವಾದ ಮತ್ತು ಧಾರ್ಮಿಕ ದ್ವೇಷ ವನ್ನು ಪ್ರಚೋದಿಸುತ್ತದೆ' ಎಂದು ಆರೋಪಿಸಿ ಕೋರ್ಟಿನಲ್ಲಿ ದಾವೆ ಹೂಡಿತ್ತು. ಆದರೆ ಪತ್ರಿಕೆಯ ಸಂಪಾದಕ ಸ್ಟೀಫನ್ ಚಾರ್‍ಬೊನ್ನಿರ್‍ನಿಂದ ಹಿಡಿದು ಕಾರ್ಟೂನಿಸ್ಟ್ ಗಳಾದ ಜಾರ್ಜ್ ವೊಲಿಂಸ್ಕಿ, ಜೀನ್ ಕ್ಯಾಬಟ್, ಅಕಾಕಬು, ಬೆರ್ಬಾರ್ ವೆರ್ಲಕ್‍ರವರೆಗೆ ಎಲ್ಲರೂ ಪತ್ರಿಕೆಯ ಧೋರಣೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಸಮರ್ಥಿಸಿಕೊಂಡರು. ಪ್ರವಾದಿಯವರನ್ನು ಅವಮಾನಿಸುವ ಕಾರ್ಟೂನ್‍ಗಳನ್ನು ಮತ್ತೆ ಮತ್ತೆ ಅವರು ಪ್ರಕಟಿಸಿದರು. 2006ರಲ್ಲಿ ಡೆನ್ಮಾರ್ಕ್‍ನ ಜಿಲ್ಲ್ಯಾಂಡ್ ಪೋಸ್ಟನ್ ಪತ್ರಿಕೆಯು ಪ್ರವಾದಿಯವರನ್ನು ಅಣಕಿಸುವ ಮತ್ತು ನಿಂದಿಸುವ ರೀತಿಯಲ್ಲಿ ಪ್ರಕಟಿಸಿದ್ದ ಕಾರ್ಟೂನನ್ನು ಚಾರ್ಲಿ ಹೆಬ್ಡೋ ಪ್ರಕಟಿಸಿತಲ್ಲದೇ 2011 ನವೆಂಬರ್ 3ರಂದು ಅದನ್ನು ಮರು ಮುದ್ರಿಸಿತು. ಮಾತ್ರವಲ್ಲ, ಚಾರ್ಲಿ ಹೆಬ್ಡೋ ಎಂಬ ಹೆಸರನ್ನು ಚರಿಯಾ ಹೆಬ್ಡೋ (ಶರಿಯಾವನ್ನು ಅಣಕಿಸುತ್ತಾ) ಎಂದು ಬರೆಯಿತು. ಗಡ್ಡ ಧರಿಸಿದ ಮತ್ತು ಪೇಟದಲ್ಲಿ ಬಾಂಬ್ ಇಟ್ಟುಕೊಂಡ ವ್ಯಕ್ತಿಯಾಗಿ ಪ್ರವಾದಿಯವರನ್ನು ಬಿಡಿಸಿದ ಆ ಕಾರ್ಟೂನಿನ ಕೆಳಗೆ, “ನಗುತ್ತಾ ಸಾಯು, ಇಲ್ಲದಿದ್ದರೆ 100 ಏಟುಗಳನ್ನು ತಿನ್ನು” (100 lashes if you're not dying of laughter ) ಎಂಬ ಒಕ್ಕಣೆಯನ್ನೂ ಸೇರಿಸಿತ್ತು. ನಿಜವಾಗಿ, ಚಾರ್ಲಿ ಹೆಬ್ಡೋ ಪತ್ರಿಕೆಯು ಎಷ್ಟು ಉಡಾಫೆಯ ಕಾರ್ಟೂನ್‍ಗಳನ್ನು ಪ್ರಕಟಿಸುತ್ತಿತ್ತೋ ಅದಕ್ಕಿಂತಲೂ ಉಡಾಫೆಯಾಗಿ ಅದರ ಸಂಪಾದಕ ಸ್ಟೀಫನ್ ಚಾರ್‍ಬೊನ್ನಿರ್ ವರ್ತಿಸುತ್ತಿದ್ದರು. “ಮುಹಮ್ಮದ್ ನನಗೆ ಪರಿಶುದ್ಧ ವ್ಯಕ್ತಿ ಅಲ್ಲ” ಎಂದು ಅವರು 2012ರಲ್ಲಿ ಅಸೋಸಿಯೇಟೆಡ್ ಪ್ರೆಸ್‍ಗೆ(AP) ಹೇಳಿಕೆ ಕೊಟ್ಟಿದ್ದರು. “ನಮ್ಮ ಕಾರ್ಟೂನ್‍ಗಳನ್ನು ನೋಡಿ ಮುಸ್ಲಿಮರು ನಗುತ್ತಿಲ್ಲ ಎಂಬುದು ಗೊತ್ತು. ಆದರೆ ಅದಕ್ಕಾಗಿ ನಾನವರನ್ನು ದೂಷಿಸುವುದಿಲ್ಲ. ನಾನು ಫ್ರೆಂಚ್ ಕಾನೂನಿನಂತೆ ಬದುಕುತ್ತಿರುವೆ. ಕುರ್‍ಆನಿನ ಕಾನೂನಿನಂತೆ ಅಲ್ಲ..” ಎಂದೂ ಹೇಳಿದ್ದರು. ಬಹುಶಃ ‘ಚಾರ್ಲಿ ಹೆಬ್ಡೋ: ಡೋಂಟ್ ಬ್ಲೇಮ್ ದಿಸ್ ಬ್ಲಡ್‍ಶೆಡ್ ಆನ್ ಫ್ರಾನ್ಸಸ್ ಮುಸ್ಲಿಮ್ಸ್’(ಚಾರ್ಲಿ ಹೆಬ್ದೋ: ಈ ರಕ್ತದೋಕುಳಿಗೆ ಫ್ರಾನ್ಸ್ ನ ಮುಸ್ಲಿಮರನ್ನು ದೂರಬೇಡಿ) ಎಂದು ಲಂಡನ್ನಿನ ಗಾರ್ಡಿಯನ್ ಪತ್ರಿಕೆಯಲ್ಲಿ ನಬಿಲಾ ರಮ್ದಾನಿ ಬರೆದಿರುವುದಕ್ಕೆ ಅಥವಾ ‘ವೈ ಐ ಆಮ್ ನಾಟ್ ಚಾರ್ಲಿ'( ನಾನೇಕೆ ಚಾರ್ಲಿಯಲ್ಲ) ಎಂದು ಗಯತಿ ಸಿಂಗ್ ಬರೆದಿರುವುದಕ್ಕೆ ಮತ್ತು, 'ಇನ್ ಇಸ್ರೇಲ್ , ಚಾರ್ಲಿ ಹೆಬ್ದೋ ವುಡ್ ನಾಟ್ ಹಾವ್ ಇವನ್ ಹಾಡ್ ದ ರೈಟ್ ಟು ಎಕ್ಸಿಸ್ಟ್'  (ಇಸ್ರೇನಲ್ಲಾಗಿರುತ್ತಿದ್ದರೆ ಚಾರ್ಲಿ ಹೆಬ್ದೋಗೆ  ಅಸ್ತಿತ್ವವೇ  ಇರುತ್ತಿರಲಿಲ್ಲ )  ...  ಎಂದು ಇಸ್ರೇಲ್ ನ ಪ್ರಮುಖ ಪತ್ರಿಕೆ ಹಾರೆಟ್ಜ್ ನಲ್ಲಿ ಇಡೋ ಅಮಿನ್ ಬರೆದಿರುವುದಕ್ಕೆಲ್ಲ ಚಾರ್ಲಿ ಹೆಬ್ಡೋ ಪತ್ರಿಕೆಯ ಈ ಎಲ್ಲ ಅಸಂಬದ್ಧತೆಗಳೇ  ಕಾರಣ ಎನ್ನಬಹುದು.
   ಚಾರ್ಲಿ ಹೆಬ್ಡೋದ ಮೇಲಿನ ದಾಳಿಯಲ್ಲಿ ಅಹ್ಮದ್ ಮೆರಾಬೆಟ್ ಮತ್ತು ಮುಸ್ತಫಾ ಔರಾದ್ ಎಂಬಿಬ್ಬರು ಮುಸ್ಲಿಮರೂ ಸಾವಿಗೀಡಾಗಿದ್ದಾರೆ. ಮೆರಾಬೆಟ್ ಪೊಲೀಸಧಿಕಾರಿಯಾಗಿದ್ದರೆ, ಮುಸ್ತಫಾ ಚಾರ್ಲಿ ಹೆಬ್ಡೋ ಪತ್ರಿಕೆಯಲ್ಲಿ  ಉದ್ಯೋಗಿಯಾಗಿದ್ದ. ಆದರೆ 12 ಮಂದಿಯನ್ನು ಕೊಂದ ಉಗ್ರರನ್ನು ಮುಂದಿಟ್ಟು ಕೊಂಡು ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿರುವವರು ಮುಸ್ತಫಾನನ್ನು ಎಲ್ಲೂ ಉಲ್ಲೇಖಿಸುತ್ತಲೇ ಇಲ್ಲ. ಪತ್ರಿಕೆಯೊಂದು ಸತತವಾಗಿ ಪ್ರವಾದಿ ನಿಂದನೆಯನ್ನು ಮತ್ತು ಜನಾಂಗೀಯ ದ್ವೇಷವನ್ನು ಕಾರುತ್ತಿದ್ದರೂ ಮುಸ್ಲಿಮನೊಬ್ಬ ಅದರಲ್ಲಿ ಉದ್ಯೋಗಿಯಾಗಿ ಇರಬಲ್ಲ ಎಂಬುದು ಯಾವುದರ ಸೂಚನೆ, ಅಸಹಿಷ್ಣುತೆಯದ್ದೋ ಉದಾರತೆಯದ್ದೋ? ತೀವ್ರವಾದಿಗಳು ಮತ್ತು ಉದಾರವಾದಿಗಳು ಮುಸ್ಲಿಮರಲ್ಲಿ ಮಾತ್ರ ಇರುವುದಲ್ಲ. ತಮ್ಮ ನಿಲುವಿಗೆ ಸರಿ ಹೊಂದದ ವ್ಯಕ್ತಿಗಳನ್ನು ಕೊಲೆಗೈಯುವುದು ಇದು ಮೊದಲ ಸಲವೂ ಅಲ್ಲ. ಎಲಿಯಟ್ ರಾಡ್ಜರ್, ಆ್ಯಂಡರ್ಸ್ ಬ್ರೇವಿಕ್, ಜೇಮ್ಸ್ ಹಾಲ್‍ಮೆಸ್, ವಾಡೆ ಮೈಕೆಲ್ ಪೇಜ್, ಡ್ಯಾರೆನ್ ವಿಲ್ಸನ್, ತಿಮೋತಿ ಮೆಕ್‍ವಿಗ್.. ಇವರೆಲ್ಲ ಯಾರು? ಮುಸ್ಲಿಮರ ಬಗ್ಗೆ ಮೃದು ನಿಲುವನ್ನು ತಳೆದಿರುವರೆಂದು ಆರೋಪಿಸಿ ನಾರ್ವೆಯಲ್ಲಿ ಸುಮಾರು 80 ಮಂದಿ ಎಡಪಂಥೀಯರನ್ನು ಆ್ಯಂಡರ್ಸ್ ಬ್ರೇವಿಕ್ ಕೊಂದನಲ್ಲ, ಅವನನ್ನು ಯಾವ ಧರ್ಮಕ್ಕೆ ಸೇರಿಸೋಣ? ಅವನ ತೀವ್ರವಾದಿ ನಿಲುವಿಗೆ ಯಾವ ಧರ್ಮದ, ಯಾವ ಚಿಂತನೆಗಳು ಕಾರಣ ಎಂದು ಪಟ್ಟಿ ಮಾಡೋಣ? ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ್ ಸಮಿತಿ’ ಎಂಬ ಸಂಘಟನೆಯನ್ನು 1989ರಲ್ಲಿ ಸ್ಥಾಪಿಸಿ ಧಾರ್ಮಿಕ ಮೌಢ್ಯಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ನರೇಂದ್ರ ದಾಬೋಲ್ಕರ್‍ರನ್ನು 2013 ಆಗಸ್ಟ್ 20ರಂದು ಹತ್ಯೆ ಮಾಡಲಾಯಿತಲ್ಲ, ಅದು ಯಾವ ಧರ್ಮದ ತೀವ್ರವಾದ? ಔಟ್‍ಲುಕ್ ವಾರಪತ್ರಿಕೆಯಲ್ಲಿ ವ್ಯಂಗ್ಯ ಚಿತ್ರ ಬಿಡಿಸುತ್ತಿದ್ದ ಇರ್ಫಾನ್ ಹುಸೈನ್‍ರನ್ನು 1999 ಮಾರ್ಚ್ 8ರಂದು ಹತ್ಯೆ ನಡೆಸಿದ್ದಕ್ಕೆ ಯಾವ ತೀವ್ರವಾದಿ ವಿಚಾರಧಾರೆಗಳು ಕಾರಣ? ಉದಾರವಾದ ಮತ್ತು ತೀವ್ರವಾದವನ್ನು ಅಳೆಯುವುದಕ್ಕೆ ಪಾಶ್ಚಾತ್ಯ ಜಗತ್ತು ಒಂದು ತಕ್ಕಡಿಯನ್ನು ತಯಾರಿಸಿಟ್ಟುಕೊಂಡಿದೆ. ಆ ತಕ್ಕಡಿಯಲ್ಲಿ ಬಿಳಿಯರು ಮತ್ತು ಬಿಳಿಯೇತರರು ಒಂದೇ ರೀತಿಯಲ್ಲಿ ತೂಗುವುದಿಲ್ಲ. ನಾರ್ವೆಯ ಬಿಳಿ ಚರ್ಮದ ಆ್ಯಂಡರ್ಸ್ ಬ್ರೇವಿಕ್ ಓರ್ವ ಸಾಮಾನ್ಯ ಕ್ರಿಮಿನಲ್ ಆರೋಪಿಯಾಗಿ ವಿಚಾರಣೆಯನ್ನು ಎದುರಿಸಿದ. ಅಮೇರಿಕದಲ್ಲಿ ಬಿಳಿಯ ಪೊಲೀಸರು ಮತ್ತು ನ್ಯಾಯಾಲಯವು ಕರಿಯರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಪ್ರತಿಭಟಿಸಿ ಬೀದಿಗಿಳಿದ ಜನರ ಆಕ್ರೋಶ ಇನ್ನೂ ತಣಿದಿಲ್ಲ. ಎಬೋಲಾದ ಬಗ್ಗೆ ಬಿಳಿ ಜಗತ್ತು ಗಂಭೀರ ಭಾಷೆಯಲ್ಲಿ ಮಾತಾಡತೊಡಗಿದ್ದೇ ಬಿಳಿ ಮನುಷ್ಯ ಅದಕ್ಕೆ ಬಲಿಯಾದ ಬಳಿಕ. ಆದರೆ ಈ ಸಾವಿಗಿಂತ ಮೊದಲು ಆಫ್ರಿಕಾ ಖಂಡದ ಸಾವಿರಾರು ಕಪ್ಪು ಮನುಷ್ಯರು ಯಾರ ಕರುಣೆಗೂ ಪಾತ್ರರಾಗದೇ ಸಾವಿಗೀಡಾಗಿದ್ದರು. ಇರಾಕ್, ಪಾಕ್, ಸಿರಿಯಾ, ಫೆಲೆಸ್ತೀನ್‍ಗಳಲ್ಲಿ ಚಾರ್ಲಿ ಹೆಬ್ಡೋ ಪತ್ರಿಕೆಯಂತೆ ಯಾರನ್ನೂ ನಿಂದಿಸದ, ವಿಡಂಬನಾತ್ಮಕ ಕಾರ್ಟೂನ್ ರಚಿಸದ, ಪ್ರವಾದಿಗೆ 100 ಏಟುಗಳನ್ನು ಕೊಡುವೆ ಎಂದು ಹೇಳದ ಸಾಮಾನ್ಯ ಮಂದಿ ನಿತ್ಯ ಸಾಯುತ್ತಿದ್ದಾರೆ. ಅವರನ್ನು ಸಾಯಿಸುವ ತೀವ್ರವಾದಿಗಳಿಗೆ ಆಯುಧಗಳನ್ನು ಇವೇ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕ ರಾಷ್ಟ್ರಗಳು ಒದಗಿಸುತ್ತಿವೆ. ಬಿಳಿಯ ಜಗತ್ತಿನ ಹೊರಗೆ ನಡೆಯುವ ಹತ್ಯೆಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿ ತೀವ್ರವಾದವನ್ನು ಪೋಷಿಸುತ್ತಲೇ 'ಮುಸ್ಲಿಮರಿಗೆ ನಗಲು ಬರುವುದಿಲ್ಲ, ಅವರಲ್ಲಿ ಉದಾರತನ ಇಲ್ಲ' ಎಂದು ಅವೇ ಮಂದಿ ಆರೋಪಿಸುವುದನ್ನು ಏನೆಂದು ಕರೆಯಬೇಕು?
   ಫ್ರಾನ್ಸ್ ಗೆ ವಸಾಹತುಶಾಹಿತ್ವದ ದೊಡ್ಡ ಇತಿಹಾಸವೇ ಇದೆ. ಅಲ್ಜೀರಿಯಾ, ಲಿಬಿಯಾ ಮುಂತಾದ ಮುಸ್ಲಿಮ್ ರಾಷ್ಟ್ರಗಳನ್ನು ತನ್ನ ವಸಾಹತನ್ನಾಗಿ ಮಾಡಿಕೊಂಡು ಆಳಿದ ಅನುಭವ ಅದಕ್ಕಿದೆ. ಫ್ರಾನ್ಸ್ ನ 66 ಮಿಲಿಯನ್ ಜನಸಂಖ್ಯೆಯಲ್ಲಿ ಇವತ್ತು ಸುಮಾರು 6 ಮಿಲಿಯನ್ ಮುಸ್ಲಿಮರಿದ್ದಾರೆ. ಹೆಚ್ಚಿನ ಮುಸ್ಲಿಮರು ಆಫ್ರಿಕಾ ಸಹಿತ ತನ್ನ ಮಾಜಿ ವಸಾಹತುಗಳಿಂದ ವಲಸೆ ಬಂದವರು. ಇವರನ್ನು ಇವತ್ತು ಫ್ರಾನ್ಸ್ ನಲ್ಲಿ ತಾರತಮ್ಯದಿಂದ ನಡೆಸಿಕೊಳ್ಳಲಾಗುತ್ತಿದೆ. ಜನಾಂಗೀಯ ನಿಂದನೆಗೆ ಗುರಿಪಡಿಸಲಾಗುತ್ತಿದೆ. ತಮ್ಮ ಜನಾಂಗವಾದಿ ನಿಲುವಿಗಾಗಿ ಶಿಕ್ಷೆಗೀಡಾಗಿರುವ ನ್ಯಾಶನಲ್ ಫ್ರಂಟ್ ಪಕ್ಷದ ಸ್ಥಾಪಕ ಜೀನ್ ಮೇರಿ ಲಿಪೆನ್ ಎಂಬವರು ಈ ಪ್ರಚಾರಾಭಿಯಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಮಗಳಾದ ಪಕ್ಷದ ಈಗಿನ ಅಧ್ಯಕ್ಷೆ ಮರೀನೆ ಲಿಪೆನ್‍ರು ಮುಸ್ಲಿಮರನ್ನು ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳನ್ನು ಅವಮಾನಿಸುವ ಮಾತುಗಳನ್ನು ನಿರಂತರ ಆಡುತ್ತಿದ್ದಾರೆ. ಫ್ರಾನ್ಸ್ ನ ವಲಸೆ ನಿಯಮವನ್ನು ವಿರೋಧಿಸುತ್ತಾ, ಜನರನ್ನು ಜನಾಂಗೀಯವಾಗಿ ಧ್ರುವೀಕರಿಸುತ್ತಿದ್ದಾರೆ. ಈ ದ್ವೇಷಪೂರಿತ ರಾಜಕಾರಣ ಎಷ್ಟು ಬಲ ಪಡೆದಿದೆಯೆಂದರೆ, ‘ರೋಮಾ ಜಿಪ್ಸಿಗಳು ಫ್ರಾನ್ಸಿನೊಂದಿಗೆ ಬೆರೆಯಲಾಗದ ಜನರಾಗಿದ್ದು, ಅವರನ್ನು ರೊಮೇನಿಯಾ ಮತ್ತು ಬಲ್ಗೇರಿಯಾಗಳಿಗೆ ಗಡೀಪಾರು ಮಾಡಬೇಕೆಂದು’ ಇತ್ತೀಚೆಗೆ ಫ್ರಾನ್ಸ್ ನ ಪ್ರಧಾನಿ ಮ್ಯಾನುವೆಲ್ ವಲ್ಲಾಸ್ ಅಭಿಪ್ರಾಯ ಪಟ್ಟಿದ್ದರು. ಈ ಹೇಳಿಕೆಯ ಬಳಿಕ ರೊಮೇನಿಯನ್ನರ ಮೇಲೆ ಹಿಂಸಾತ್ಮಕ ದಾಳಿಗಳು ನಡೆದಿದ್ದುವು. ಅದರ ಬೆನ್ನಿಗೇ ಬಲಪಂಥೀಯ ಮೇಯರ್ ಓರ್ವರು ತಮ್ಮ ಮುನ್ಸಿಪಲ್ ವ್ಯಾಪ್ತಿಯ ರುದ್ರಭೂಮಿಯಲ್ಲಿ ರೊಮೇನಿಯದ ಮಗುವಿನ ಅಂತ್ಯಸಂಸ್ಕಾರ ನಡೆಸುವುದರಿಂದ ತಡೆದಿದ್ದರು. ಒಂದು ರೀತಿಯಲ್ಲಿ, ಮುಸ್ಲಿಮ್ ದ್ವೇಷವನ್ನು ಬಿತ್ತುವ ಹಾಗೂ ಜನಾಂಗೀಯವಾದಿ ಪೂರ್ವಗ್ರಹಗಳನ್ನು ಹರಡುವ ಪ್ರಯತ್ನಗಳು ಫ್ರಾನ್ಸ್ ನಲ್ಲಿ ತೀವ್ರಗತಿಯಲ್ಲಿ ನಡೆಯುತ್ತಿರುವ ಹೊತ್ತಿನಲ್ಲಿಯೇ ಚಾರ್ಲಿ ಹೆಬ್ಡೋದ ಮೇಲೆ ದಾಳಿ ನಡೆದಿದೆ. ಇದನ್ನು ಉದಾರವಾದ ಮತ್ತು ತೀವ್ರವಾದ ಎಂದು ವಿಭಜಿಸಿ ಒಂದನ್ನು ಸರಿ ಮತ್ತು ಇನ್ನೊಂದನ್ನು ತಪ್ಪು ಎಂದು ವ್ಯಾಖ್ಯಾನಿಸುವುದು ಸುಲಭ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಪದಪುಂಜವನ್ನು ಬಳಸಿಕೊಂಡು ಚಾರ್ಲಿ ಹೆಬ್ಡೋದ ಪರ ನಿಲ್ಲುವುದು ಕಷ್ಟವೂ ಅಲ್ಲ. ಆದರೆ, ಹೀಗೆ ವಾದಿಸುವವರಲ್ಲೂ ಕೆಲವೊಂದು ಅನುಮಾನಗಳು ಖಂಡಿತ ಇರಬಹುದು. ಚಾರ್ಲಿ ಹೆಬ್ಡೋದ ಕಾರ್ಟೂನ್‍ಗಳು ಬರೇ ಸೃಜನಶೀಲತೆಯ ಉದ್ದೇಶದಿಂದಷ್ಟೇ ಸೃಷ್ಟಿಯಾಗಿವೆಯೇ? ಡೆನ್ಮಾರ್ಕ್‍ನ ಜಿಲ್ಲ್ಯಾಂಡ್ ಪೋಸ್ಟನ್‍ನಲ್ಲಿ ಪ್ರಕಟವಾದ ಪ್ರವಾದಿ ನಿಂದನೆಯ ಕಾರ್ಟೂನನ್ನು 2006ರಲ್ಲಿ ಪ್ರಕಟಿಸಿ ಮತ್ತೆ ಪುನಃ 2011ರಲ್ಲಿ ಪ್ರಕಟಿಸಿದ್ದೇ ಅಲ್ಲದೇ 2012ರಲ್ಲಿ 65 ಪುಟಗಳ ಪ್ರವಾದಿ ಕಾರ್ಟೂನ್‍ಗಳನ್ನು ಪ್ರಕಟಿಸಿರುವುದರಲ್ಲೂ ಬರೇ ಸೃಜನಶೀಲತೆಯ ಉದ್ದೇಶವಷ್ಟೇ ಕಾಣುತ್ತಿದೆಯೇ? ಅದೇಕೆ ಪ್ರವಾದಿಯವರು ಮತ್ತು ಮುಸ್ಲಿಮರೇ ಈ ಪತ್ರಿಕೆಯ ಸೃಜನಶೀಲತೆಗೆ ವಸ್ತುವಾಗಿದ್ದಾರೆ? ಹಾಲೋಕಾಸ್ಟನ್ನು (ಹಿಟ್ಲರ್ ನಡೆಸಿದ ಯಹೂದಿ ಹತ್ಯಾಕಾಂಡ)  ತನ್ನ ಸೃಜನಶೀಲತೆಗೆ ಚಾರ್ಲಿ ಹೆಬ್ಡೋ ಬಳಸಿಕೊಂಡಿತ್ತೇ? ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಪ್ರವಾದಿ ಮತ್ತು ಮುಸ್ಲಿಮರ ವಿಷಯದಲ್ಲಿ ಮಾತ್ರ ಘರ್ಜಿಸುವ ಮತ್ತು ಹಾಲೋಕಾಸ್ಟ್ ಹಾಗೂ ಬಿಳಿ ಜಗತ್ತಿನ ವಿಷಯದಲ್ಲಿ ಕುಂಯ್‍ಗುಡುವಂಥ ವಸ್ತುವೇ? ವಿಡಂಬನೆ, ನಿಂದನೆ, ಅಪಹಾಸ್ಯ, ವ್ಯಂಗ್ಯ ಮುಂತಾದ ಪದಗಳಿಗೆಲ್ಲ ವಿಭಿನ್ನ ಅರ್ಥಗಳಿವೆ ಎಂದಾದರೆ ಮತ್ತೇಕೆ ಚಾರ್ಲಿ ಹೆಬ್ಡೋದ ಅಗ್ಗದ ಪತ್ರಿಕೋದ್ಯಮವು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಸಮರ್ಥನೆ ಗೀಡಾಗುವುದು? ವಿಡಂಬನೆ ಮತ್ತು ನಿಂದನೆಯ ನಡುವೆ ಸ್ಪಷ್ಟ ನೈತಿಕ ಗೆರೆಯನ್ನು ಎಳೆಯಲು ನಾವೆಲ್ಲ ಹಿಂದೇಟು ಹಾಕುತ್ತಿರುವುದು ಯಾರ ಮತ್ತು ಯಾವುದರ ಭಯದಿಂದ! ಅವೆರಡರ ನಡುವೆ ವ್ಯತ್ಯಾಸ ಇವೆಯೇ? ಇದ್ದರೆ ಅವು ಯಾವುವು? ಅಷ್ಟಕ್ಕೂ, ಚಾರ್ಲಿ ಹೆಬ್ಡೋದ ಕಾರ್ಟೂನುಗಳಲ್ಲಿ ಎಷ್ಟು ಕಾರ್ಟೂನ್‍ಗಳು ಕೇವಲ ವಿಡಂಬನೆ ಎಂಬ ವೃತ್ತದೊಳಗೆ ನಿಲ್ಲಬಲ್ಲವು? ವೃತ್ತದಿಂದ ಹೊರಗೆ ಜಿಗಿಯುವ ಮತ್ತು ವೃತ್ತದೊಳಗೇ ಬಾರದವುಗಳಿಗೆ ನಾವು ಏನೆಂದು ಹೆಸರು ಕೊಡಬಲ್ಲೆವು? ನಿಂದನೆ, ವ್ಯಂಗ್ಯ, ಅಪಹಾಸ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಮತ್ತು, ಮತ್ತು..
    ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿಯಲ್ಲಿ ನಡೆದ ಹತ್ಯಾ ಕಾಂಡವನ್ನು ಕನ್ನಡ ಅಕ್ಷರ ಮಾಲೆಯಲ್ಲಿ ಬರುವ ಸಕಲ ಕಟು ಪದಗಳನ್ನು ಬಳಸಿ ಖಂಡಿಸುತ್ತಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿ-ಮಿತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲೇಬೇಕಾಗಿದೆ.

1 comment:

  1. ಕುಕ್ಕಿಲಾಯ ಅವರಿಗೆ--- ತಮ್ಮ ವಿಶ್ಲೇಷಣಾತ್ಮಕ ಲೇಖನ ಉತ್ತಮವಾಗಿದೆ. ಆದರೆ ಕೆಲವೊಂದು ಅನುಮಾನಗಳೂ ಇವೆ. ತಮ್ಮ ತಮ್ಮ ದೇವರುಗಳನ್ನು , ದೇವತಾಪುರುಷರುಗಳನ್ನು (ಅವರುಗಳು ಹಿಂದೂ/ಮುಸ್ಲಿಂ/ಕ್ರೈಸ್ತ ಇತ್ಯಾದಿ ಯಾವುದೇ ಧರ್ಮಕ್ಕೆ ಸೇರಿದವರಾಗಲಿ) ವಿಡಂಬನಾತ್ಮಕವಾಗಿ ನೋಡಲೇ ಬಾರದು, ಚಿತ್ರಿಸಬಾರದು, ಅವರ ಬಗ್ಗೆ ಸದಾ ಕಾಲವೂ ಭಕ್ತಿಯ ಭಾವ ಹುಟ್ಟಿಸುವ ಲೇಖನ/ಪುಸ್ತಕಗಳು ಮಾತ್ರವೇ ಪ್ರಕಟವಾಗಬೇಕು ಎಂದು ಆಗ್ರಹಿಸುವುದರಲ್ಲೇ ಆಯಾ ಧರ್ಮಗಳ ದೌರ್ಬಲ್ಯಗಳು, weak pointsಗಳು ಇರಬಹುದಲ್ಲವೇ? ಆ ಮಹಾಪುರುಷರನ್ನು ಕುರಿತಂತೆ ಬೇರೆ ರೀತಿಯಲ್ಲಿ ಯೋಚಿಸುವುದನ್ನು, ಬರೆಯುವುದನ್ನು ನಿಷೇಧಿಸುವುದು ಆಯಾ ಧರ್ಮಗಳವರ ಅಸಹನೆಯನ್ನು ಮಾತ್ರ ತೋರಿಸುತ್ತವೆ. ಮಾನವರೇ ಅಪೂರ್ಣರಾಗಿರುವಾಗ ಅವರುಗಳ ಸೃಷ್ಟಿಯಾದ ದೇವರುಗಳು ಪರಿಪೂರ್ಣರಾಗಿರುವುದು ಹೇಗೆ ತಾನೇ ಸಾಧ್ಯ? ಫ್ರಾನ್ಸಿನ ಆ ಪತ್ರಿಕೆ ಪ್ರಕಟಿಸಿದ ಆ ವ್ಯಂಗ್ಯ ಚಿತ್ರವನ್ನು ಜರ್ಮನಿಯ ಪತ್ರಿಕೆಯೊಂದು ಮರುಮುದ್ರಿಸಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

    ReplyDelete