Monday, September 16, 2013

ಇನ್ನಷ್ಟು ಠಾಕೂರ್ ಗಳ ಸೃಷ್ಟಿಗೆ ಚಿತ್ರಕತೆ ರಚಿಸುತ್ತಿದ್ದಾರಲ್ಲ, ಅವರನ್ನೇಕೆ ನಾವು ಪ್ರಶ್ನಿಸುತ್ತಿಲ್ಲ?

 ಜೇಮ್ಸ್ ಡೋಹರ್ಟಿ
ಜಾಯ್ ಡಿಮ್ಯಾಗಿಯೋ
ಅರ್ಥರ್ ಮಿಲ್ಲರ್
   ಈ ಮೂವರನ್ನು ನಟಿ ಮರ್ಲಿನ್ ಮೆನ್ರೋ ಮದುವೆಯಾದರು. ಎಲ್ಲರಿಂದಲೂ ವಿಚ್ಛೇದನ ಪಡಕೊಂಡರು. ರಾತ್ರಿ ಮಲಗುವಾಗ ಹೊಟ್ಟೆಯನ್ನು ಸವರುತ್ತಾ ಗರ್ಭದ ಕೃತಕ ಸುಖ ಅನುಭವಿಸುವಷ್ಟು ಮಗುವಿಗಾಗಿ ಹಂಬಲಿಸಿದರು. ತನ್ನನ್ನು ಅರ್ಥ ಮಾಡುವ ಪುರುಷನಿಗಾಗಿ ಆಕೆ ಹುಡುಕಾಡುವಾಗ, ಆಕೆಯ ಸೌಂದರ್ಯವನ್ನು ಆಸ್ವಾದಿಸುವುದಕ್ಕಾಗಿ ಜಗತ್ತು ಸಾಲುಗಟ್ಟಿತು. ಮೆನ್ರೋ ಒಂದು ಹಂತದ ವರೆಗೆ ಇವನ್ನೆಲ್ಲಾ ಅಸಹ್ಯಪಟ್ಟಳು. ತನ್ನ ಹಿಂದೆ ಬರುವ ಈ ಜಗತ್ತಿನ ಉದ್ದೇಶ, ಬಾಯಾರಿಕೆ ಏನೆಂಬುದು ಆಕೆಗೆ ಚೆನ್ನಾಗಿ ಅರ್ಥವಾಗತೊಡಗಿತ್ತು. ನಯಾಗರ, ಜೆಂಟಲ್‍ಮ್ಯಾನ್, ರಿವರ್ ಆಫ್ ನೋ ರಿಟರ್ನ್, ಸಮ್ ಲೈಕ್ ಇಟ್ ಹಾಟ್.. ಮುಂತಾದ ಸಿನಿಮಾಗಳಲ್ಲಿ ಆಕೆಯ ಅಭಿನಯವನ್ನು ಕಂಡು ಅಮೇರಿಕ ಅಭಿಮಾನ ಪಡುವಾಗ ಆಕೆ ಒಳಗೊಳಗೇ ಕರುಬುತ್ತಿದ್ದಳು. ವಿಶ್ವಾಸಾರ್ಹ ಸಂಗಾತಿ, ಪುಟ್ಟದೊಂದು ಮಗು, ನೆಮ್ಮದಿಯ ಬದುಕಿಗಾಗಿ ಆಕೆ ತವಕಪಡುತ್ತಿದ್ದಳು. ಒಂದು ಕಡೆ ಪ್ರಸಿದ್ಧಿಯಿದ್ದರೆ ಇನ್ನೊಂದು ಕಡೆ ಕತ್ತಲೆಯಿತ್ತು. ಅಮೇರಿಕ ಅಧ್ಯಕ್ಷ  ಕೆನಡಿಯನ್ನು ಪ್ರೀತಿಸಿದಳು. ಮದುವೆಯಾಗುವಂತೆ ಒತ್ತಾಯಿಸಿದಳು. ಅದೂ ಕೈಗೂಡದಾಗ, ಜಗತ್ತಿನ ಮನಸ್ಥಿತಿಯ ಬಗ್ಗೆಯೇ ಜಿಗುಪ್ಸೆಗೊಂಡಳು. ಈ ಜಗತ್ತು ಪ್ರೀತಿಸುವುದು ತನ್ನನ್ನಲ್ಲ, ತನ್ನ ಸೌಂದರ್ಯವನ್ನು ಎಂದು ಖಚಿತಪಡಿಸಿಕೊಂಡಳು. ಕಣ್ಣೀರಿಟ್ಟಳು.
   “..ದಯವಿಟ್ಟು ನನ್ನನ್ನು ತಮಾಷೆಯ ವಸ್ತುವಾಗಿ ನೋಡಬೇಡಿ. ನಾನು ಈ ಜಗತ್ತನ್ನು ಮತ್ತು ಬದುಕನ್ನು ಅಪಾರವಾಗಿ ಪ್ರೀತಿಸುತ್ತೇನೆ. ಆದರೆ ನನ್ನ ಬದಲು ನನ್ನ ಸೌಂದರ್ಯವನ್ನು ಮಾತ್ರ ಈ ಜಗತ್ತು ಪ್ರೀತಿಸುವುದನ್ನು ನೋಡುವಾಗ ಅಸಹ್ಯವಾಗುತ್ತದೆ. ಜನರು ನನ್ನನ್ನು ನೋಡುತ್ತಿಲ್ಲ. ನನ್ನ ದೇಹವನ್ನಷ್ಟೇ ನೋಡುತ್ತಿದ್ದಾರೆ..” ಎಂದೆಲ್ಲಾ ಹೇಳಿಕೊಂಡಳು. ಕೇವಲ ಸೆಕ್ಸ್ ಸಿಂಬಲ್ ಆಗಿ ಮಾತ್ರವೇ ಗುರುತಿಗೀಡಾಗುವುದನ್ನು ವಿರೋಧಿಸುತ್ತಲೇ ತನ್ನ 36ನೇ ವರ್ಷದಲ್ಲೇ ಆತ್ಮಹತ್ಯೆ ಮಾಡಿ ಕೊಂಡಳು. ವಿಪರ್ಯಾಸ ಏನೆಂದರೆ,
Merlyn Menro was an actress, model and ಸಿಂಗರ್, who became ಅ major sex symbol - ‘ಪ್ರಮುಖ ಸೆಕ್ಸ್ ಸಿಂಬಲ್ ಆಗಿರುವ ಮರ್ಲಿನ್ ಮೆನ್ರೋರು ಓರ್ವ ನಟಿ, ಮಾಡೆಲ್ ಮತ್ತು ಗಾಯಕಿ ಕೂಡ ಆಗಿದ್ದರು’ ಎಂದೇ ಜಗತ್ತು ಇವತ್ತು ಆಕೆಯನ್ನು ಗುರುತಿಸುತ್ತದೆ. (ವಿಕಿಪೀಡಿಯಾ).
   ಮಹಿಳೆ ಇವತ್ತು  ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ಭಾಗವಾಗಿದ್ದಾಳೆ. ದೆಹಲಿ ಅತ್ಯಾಚಾರ ಪ್ರಕರಣದಲ್ಲಿ ಕೋರ್ಟು ನೀಡಿದ ತೀರ್ಪು- ಹೆಣ್ಣು ಮತ್ತು ಗಂಡಿನ ಮನಸ್ಥಿತಿಯ ಸುತ್ತ ಮತ್ತೊಂದು ಸುತ್ತಿನ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ, ‘ವಿವಾಹೇತರ ಲೈಂಗಿಕ ಸಂಬಂಧವನ್ನು ಅಪರಾಧವಾಗಿ ಪರಿಗಣಿಸಬೇಕಿಲ್ಲ..’ ಎಂದು ಸುಪ್ರೀಮ್ ಕೋರ್ಟು ಇದೇ ಸಂದರ್ಭದಲ್ಲಿ ಹೇಳಿರುವುದನ್ನು ಇದರ ಜೊತೆಗಿಟ್ಟು ನೋಡಿದರೆ ಚರ್ಚೆಯ ವ್ಯಾಪ್ತಿ ಇನ್ನಷ್ಟು ವಿಸ್ತಾರ ಮತ್ತು ಗಟ್ಟಿಗೊಳ್ಳುತ್ತದೆ. ಅತ್ಯಾಚಾರಕ್ಕೆ ಕೇವಲ ಅತ್ಯಾಚಾರಿಯಷ್ಟೇ ಕಾರಣವೇ? ಕಾಲಕಾಲಕ್ಕೆ ಬದಲಾಗುತ್ತಿರುವ ಕಾನೂನುಗಳು, ಜೀವನ ಕ್ರಮದ ವ್ಯಾಖ್ಯಾನಗಳಿಗೆ ಇದರಲ್ಲಿ ಯಾವ ಪಾತ್ರವೂ ಇಲ್ಲವೇ? ಹೆಣ್ಣನ್ನು ನಾವು ಇವತ್ತು ಬಿಂಬಿಸುತ್ತಿರುವ ರೀತಿ ಹೇಗಿದೆ? ಸಿನಿಮಾ ಸಹಿತ ಮಾಧ್ಯಮ ಕ್ಷೇತ್ರವು ಯಾಕಾಗಿ ಹೆಣ್ಣನ್ನು ಇಷ್ಟಪಡುತ್ತವೆ? ಇವೆಲ್ಲ ಹೆಣ್ಣನ್ನು ಮೆಚ್ಚಿಕೊಳ್ಳುವುದು ಬರೇ ಪ್ರತಿಭೆಗಾಗಿಯೋ ಅಥವಾ ಸೌಂದರ್ಯಕ್ಕಾಗಿಯೋ? ಅಪಾರ ಪ್ರತಿಭೆಯಿದ್ದೂ ಮರ್ಲಿನ್ ಮೆನ್ರೋ ಗುರುತಿಗೀಡಾದದ್ದು ಸೌಂದರ್ಯಕ್ಕಾಗಿ. ಹಾಗಂತ ಪ್ರತಿಭೆ ಚರ್ಚೆಗೆ ಒಳಗಾಗಿಲ್ಲ ಎಂದಲ್ಲ. ಆಗಿದೆ. ಆದರೆ ಮರ್ಲಿನ್ ಮೆನ್ರೊ ಅಂದರೆ ಮೊದಲು ನೆನಪಿಗೆ ಬರುವುದು ಸೌಂದರ್ಯವೇ. ಬಳಿಕ ಅಭಿನಯ. ನಟಿಯರಿಗೆ ಸಂಬಂಧಿಸಿ ಜಗತ್ತಿನ ನಿಲುವು ಬಹುತೇಕ ಇದುವೇ. ಡ್ಯಾನ್ಸು, ಡ್ರೆಸ್ಸು, ಸೌಂದರ್ಯದ ಕಾರಣಕ್ಕಾಗಿಯೇ ಓರ್ವ ನಟಿ ಚಿತ್ರದುದ್ದಕ್ಕೂ ವೀಕ್ಷಕರನ್ನು ಸೆಳೆಯುತ್ತಿರುತ್ತಾಳೆ. ಸೌಂದರ್ಯ ಪ್ರದರ್ಶನ ಮತ್ತು ಸೆಕ್ಸ್ ಅಪೀಲ್ ಇಲ್ಲದ ಪಾತ್ರಗಳು ಇರುವುದು ತೀರಾ ಕಡಿಮೆ. ಇವರಿಗೆ ಹೋಲಿಸಿದರೆ, ನಟರು ತೀರಾ ಭಿನ್ನ. ಡಯಲಾಗು, ಸಾಹಸ, ಮ್ಯಾನರಿಸಂನ ಕಾರಣಕ್ಕಾಗಿಯೇ ಪ್ರಥಮತಃ ಅವರು ನೆನಪಿಗೆ ಬರುತ್ತಾರೆ. ಹಾಗಂತ, ಹೆಣ್ಣು ಸೌಂದರ್ಯದ ವಸ್ತುವಾಗಿ ಗುರುತಿಗೀಡಾಗಿರುವುದಕ್ಕೆ ಆಕೆಯೊಬ್ಬಳೇ ಕಾರಣ ಎಂದು ಹೇಳುತ್ತಿಲ್ಲ. ಸಿನಿಮಾ ರಂಗ, ಮಾಡಲಿಂಗ್ ಅಥವಾ ಮಾಧ್ಯಮ.. ಯಾವುದೇ ಕ್ಷೇತ್ರವಿರಲಿ, ಅಲ್ಲೆಲ್ಲಾ ನಿರ್ದೇಶಕ, ನಿರ್ಮಾಪಕರು, ಬಹುತೇಕ ಪುರುಷರೇ. ಹೆಣ್ಣಿನ ಮತ್ತು ಗಂಡಿನ ಪಾತ್ರವನ್ನು ರಚಿಸುವುದೂ ಅವರೇ. ಹೆಣ್ಣು ಹೇಗಿದ್ದರೆ, ಹೇಗೆ ಅಭಿನಯಿಸಿದರೆ, ಎಷ್ಟು ಪ್ರಮಾಣದಲ್ಲಿ ಬಟ್ಟೆ ತೊಟ್ಟರೆ, ಯಾವ ಹಾಡಿಗೆ ಹೇಗೆ ಕುಣಿದರೆ ಚೆನ್ನ.. ಎಂದೆಲ್ಲಾ ತೀರ್ಮಾನಿಸುವುದೂ ಬಹುತೇಕ ಪುರುಷರೇ. ಒಂದು ರೀತಿಯಲ್ಲಿ, ಹೆಣ್ಣು ಇವತ್ತು ತನ್ನತನಕ್ಕಿಂತ ತನ್ನ ಸೌಂದರ್ಯದ ಕಾರಣಕ್ಕಾಗಿ ಸುದ್ದಿಯಲ್ಲಿದ್ದರೆ, ಅದು ಸಂಪೂರ್ಣ ಆಕೆಯ ಬಯಕೆಯೆಂದು ಹೇಳುವಂತಿಲ್ಲ. ಮರ್ಲಿನ್ ಮೆನ್ರೊ ಹೇಗೆ ತನ್ನ ದೇಹ ಪ್ರದರ್ಶನವನ್ನು ಅಸಹ್ಯ ಪಟ್ಟುಕೊಂಡೂ ಆ ಕ್ಷೇತ್ರದಲ್ಲಿ ಮುಂದುವರಿದಳೋ ಅದೇ ರೀತಿಯಲ್ಲಿ ಗೊಂದಲದಲ್ಲಿರುವ ಹೆಣ್ಣು ಮಕ್ಕಳು ಖಂಡಿತ ಇವತ್ತೂ ಇರಬಹುದು. ಆದರೆ, ಅವರ ನಿಯಂತ್ರಣ ಅವರ ಕೈಯಲ್ಲಿಲ್ಲ. ಅವರು ಯಾವ ಕ್ಷೇತ್ರವನ್ನು ತನ್ನ ಪ್ರತಿಭೆ, ಕೆರಿಯರ್‍ನ ಬೆಳವಣಿಗೆಗೆ ಉತ್ತಮ ಎಂದು ಭಾವಿಸಿರುವರೋ ಆ ಕ್ಷೇತ್ರದ ತುಂಬಾ ವ್ಯಾಪಾರಿಗಳೇ ತುಂಬಿದ್ದಾರೆ. ಸೌಂದರ್ಯ ಪ್ರದರ್ಶನದ ಹೊರತು ಹೆಣ್ಣಿಗೆ ವ್ಯಕ್ತಿತ್ವವಿಲ್ಲ ಎಂದವರು ಸಾರುತ್ತಿ ದ್ದಾರೆ. ನಿಜವಾಗಿ, ಹೆಣ್ಣನ್ನು ಶೋಷಿಸುತ್ತಿರುವ ಸಿನಿಮಾ ಸಹಿತ ಎಲ್ಲ ರಂಗಗಳ ವಿರುದ್ಧವೂ ನಮ್ಮ ಮಧ್ಯೆ ಪ್ರತಿಭಟನೆಗಳು ಕಾಣಿಸಿಕೊಳ್ಳಬೇಕಿತ್ತು. ಲಿಂಗ ಸಮಾನತೆ, ಮಹಿಳಾ ಸ್ವಾತಂತ್ರ್ಯ ಎಂದೆಲ್ಲಾ ಹೋರಾಟಕ್ಕಿಳಿಯುವವರು ಪುರುಷ ಶೋಷಣೆಯ ಈ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಬೇಕಿತ್ತು. ಪುರುಷ ಸಾಮ್ರಾಜ್ಯದ ಈ ಶೋಷಣೆಗೆ ಪರ್ಯಾಯವಾಗಿ ಇನ್ನೊಂದು ರಂಗವೊಂದನ್ನು ತಯಾರಿಸಬೇಕಿತ್ತು. ಆದರೆ ಕಲೆ, ಸಂಸ್ಕøತಿ, ಮನರಂಜನೆಯನ್ನು ಪುರುಷ ಏನೆಂದು ವ್ಯಾಖ್ಯಾನಿಸುತ್ತಾನೋ ಅದನ್ನೇ ಮಹಿಳಾ ಜಗತ್ತೂ ಇವತ್ತು ಒಪ್ಪಿಕೊಳ್ಳುತ್ತಿದೆ. ಸೌಂದರ್ಯ ಪ್ರದರ್ಶನಕ್ಕೆ ಹೊರತಾದ ವ್ಯಕ್ತಿತ್ವವೊಂದು ಹೆಣ್ಣಿಗಿದೆ ಎಂಬುದನ್ನು ಸಾಬೀತುಪಡಿಸುವ ಸವಾಲನ್ನು ಸ್ವೀಕರಿಸುವುದಕ್ಕೆ ಅದು ಮುಂದಾಗುತ್ತಲೂ ಇಲ್ಲ. ಅಂದಹಾಗೆ,
   ಫೆಲಿಸಿಟೆ ಎದುರಿಸಿದ್ದೂ ಇದೇ ಸವಾಲನ್ನು.
ಫೆಲಿಸಿಟೆ ಓರ್ವ ಸಾಮಾನ್ಯ ಹೆಣ್ಣು ಮಗಳು. ಬದುಕನ್ನು ಅಪಾರವಾಗಿ ಪ್ರೀತಿಸುವ ಅವಳಿಗೆ ಸುಂದರ ಜಗತ್ತಿನ ಕನಸಿತ್ತು. ತಾನು, ತನ್ನ ಮಗು, ಪತಿ, ಮನೆ.. ಮುಂತಾದ ಚಿಕ್ಕದೊಂದು ಕನಸು ಕಟ್ಟಿಕೊಂಡು ಬದುಕಲು ಹೊರಟ  ಫೆಲಿಸಿಟೆಳ ಬದುಕಿನಲ್ಲಿ ಒಬ್ಬರ ನಂತರ ಒಬ್ಬರಂತೆ ಮೂವರು ಬಂದು ಹೋದರು. ಆದರೆ ಯಾರೂ ಆಕೆಗೆ ಕನಸಿನ ಬದುಕನ್ನು ಒದಗಿಸಲೇ ಇಲ್ಲ. ಕೊನೆಗೆ ಆಕೆ ಓರ್ವ ವಿಧವೆಯ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಪಾತ್ರೆ ತೊಳೆಯುವುದು, ಮಕ್ಕಳನ್ನು ನೋಡಿಕೊಳ್ಳುವುದು, ಹೂದೋಟಕ್ಕೆ ನೀರುಣಿಸುವುದು.. ಹೀಗೆ ಬದುಕನ್ನು ಆನಂದಿಸಲು ಆರಂಭಿಸಿದಳು. ಸಂಬಳವನ್ನು ಆಕೆ ಎಣಿಸಿಯೇ ಇರಲಿಲ್ಲ. ಹೀಗಿರುತ್ತಾ, ಆ ವಿಧವೆಗೆ ಒಂದು ಪಕ್ಷಿ ಸಿಗುತ್ತದೆ. ಹೆಸರು ಲುಲು. ಆಕೆ ಅದನ್ನು  ಫೆಲಿಸಿಟೆಗೆ ಕೊಡುತ್ತಾಳೆ. ಲುಲು ಅಂದರೆ ಪ್ರೀತಿ, ತನ್ನತನ ಎಂದರ್ಥ. ಲುಲುವಿನಲ್ಲಿ  ಫೆಲಿಸಿಟೆ ತನ್ನತನವನ್ನು ಕಾಣತೊಡಗುತ್ತಾಳೆ. ಅದರೊಂದಿಗೆ ತನ್ನ ವ್ಯಕ್ತಿತ್ವ, ಹೆಣ್ಣಿನ ಭಾವನೆ, ಲಜ್ಜೆ, ಆಸೆ.. ಎಲ್ಲವನ್ನೂ ಹೇಳಿಕೊಳ್ಳುತ್ತಾ ಬದುಕತೊಡಗುತ್ತಾಳೆ. ಪತಿಯಂದಿರು ಕೊಡದ ಬದುಕನ್ನು ಲುಲುವಿನಲ್ಲಿ ಆಕೆ ಪಡೆಯತೊಡಗುತ್ತಾಳೆ..’
   ‘ಸಿಂಪಲ್ ಹಾರ್ಟ್’ ಎಂಬ ತಮ್ಮ ಕತೆಯೊಂದರಲ್ಲಿ ಫ್ರಾನ್ಸಿನ ಖ್ಯಾತ ಬರಹಗಾರ ಫ್ಲೋಬರ್ಟ್‍ರು ಹೆಣ್ಣನ್ನು ಹೀಗೆ
ಚಿತ್ರಿಸಿದ್ದಾರೆ. ನಿಜವಾಗಿ, ಫ್ಲೋಬರ್ಟ್ ಹೇಳಿದರೂ ಹೇಳದಿದ್ದರೂ ಹೆಣ್ಣು ಯಾವಾಗಲೂ ಭಾವುಕ ಜೀವಿ. ಲಜ್ಜೆ ಆಕೆಯ ಸೌಂದರ್ಯ. ಪುರುಷ ಜಗತ್ತಿನಿಂದ ಆಕೆ ಬಯಸುವುದು ತನ್ನ ಸೌಂದರ್ಯದ ದುರ್ಬಳಕೆಯನ್ನಲ್ಲ, ಸಂರಕ್ಷಣೆಯನ್ನು. ಆದರೆ, ಅತ್ಯಾಚಾರದ ಸುತ್ತ ಇವತ್ತು ಆಗುತ್ತಿರುವ ಚರ್ಚೆಗಳಲ್ಲಿ, ಆಧುನಿಕತೆಯ ಹೆಸರಲ್ಲಿ ಹೆಣ್ಣನ್ನು ದುರುಪಯೋಗಿಸುತ್ತಿರುವ ಪುರುಷ ಜಗತ್ತಿನ ಬಗ್ಗೆ ಯಾರೂ ಮಾತಾಡುವುದಿಲ್ಲ. ಅತ್ಯಾಚಾರವೆಂಬುದು ಕ್ರೂರ, ಅಮಾನವೀಯ, ಗಲ್ಲು ಶಿಕ್ಷೆಗೆ ಅರ್ಹ.. ಎಲ್ಲವೂ ಹೌದು. ಆದರೆ ಹೆಣ್ಣಿನ ಬಗ್ಗೆ ನಮ್ಮ ದೃಷ್ಟಿಕೋನವಾದರೂ ಹೇಗಿದೆ? ಸಿನಿಮಾ, ಮಾಡೆಲಿಂಗ್‍ನ ಹೆಸರಲ್ಲಿ ಹೆಣ್ಣು ಬೆತ್ತಲೆಗೊಳ್ಳುತ್ತಾಳಲ್ಲ, ಯಾರಿಂದ? ಹೆಣ್ಣು ಇವತ್ತು ಪ್ರವೇಶಿಸದ ಕ್ಷೇತ್ರವೇ ಇಲ್ಲ ಎಂದು ಅಭಿಮಾನ ಪಡುವಾಗಲೆಲ್ಲ, ಅವಳನ್ನು ಈ ಕ್ಷೇತ್ರಗಳು ಸುಖವಾಗಿಟ್ಟಿವೆ ಎಂದು ಎಷ್ಟರ ಮಟ್ಟಿಗೆ ಹೇಳಬಹುದು? ಆಕೆಗೆ ಪ್ರವೇಶ ಕೊಟ್ಟವರು ಅವರಿಂದ ಏನನ್ನೆಲ್ಲಾ ಕಸಿದುಕೊಂಡಿದ್ದಾರೆ? ಅವಳ ವ್ಯಕ್ತಿತ್ವವನ್ನು ಪ್ರದರ್ಶಿಸುವುದಕ್ಕೆ ಎಷ್ಟಂಶ ಅವಕಾಶ ಮಾಡಿಕೊಟ್ಟಿದ್ದಾರೆ?
   ‘ಅತ್ಯಾಚಾರಿಗಳಿಗೆ ಮರಣ ದಂಡನೆಯಾಗಲಿ’ ಎಂದು ಒತ್ತಾಯಿಸುವವರಲ್ಲಿ ಅತ್ಯಾಚಾರಕ್ಕೆ ಪ್ರಚೋದನೆ ಕೊಡುವವರೂ ಇದ್ದಾರೆ ಅನ್ನುವುದೇ ಅತಿದೊಡ್ಡ ವ್ಯಂಗ್ಯ. ತಮ್ಮ ವ್ಯಾಪಾರವನ್ನು, ಬ್ಯಾಂಕ್ ಬ್ಯಾಲೆನ್ಸನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಅವರೆಲ್ಲ ಅತ್ಯಾಚಾರದಲ್ಲಿ ಪಾಲ್ಗೊಂಡೇ ಇರುತ್ತಾರೆ. ಆದರೆ ಅದಕ್ಕೆ ಅತ್ಯಾಚಾರ ಎಂಬ ಪದ ಬಳಕೆ ಆಗುತ್ತಿಲ್ಲ ಎಂಬುದಷ್ಟೇ ವ್ಯತ್ಯಾಸ. ಹೆಣ್ಣಿಗೆ ತನ್ನ ಸೌಂದರ್ಯವನ್ನೇ ವ್ಯಕ್ತಿತ್ವ ಎಂದು ಹೇಳಿಕೊಟ್ಟು, ಅದರ ಪ್ರದರ್ಶನವೇ ವ್ಯಕ್ತಿತ್ವ ಪ್ರದರ್ಶನ ಎಂದು ನಂಬಿಸಿದ್ದು ಗಲ್ಲು ಶಿಕ್ಷೆಗೊಳಗಾಗಿರುವ ಅಕ್ಷಯ್ ಠಾಕೂರ್, ವಿನಯ್, ಮುಖೇಶ್, ಪವನ್ ಖಂಡಿತ ಅಲ್ಲ. ಯುವತಿಯ ಮೇಲೆ ಕ್ರೂರವಾಗಿ ಎರಗಲು ಧೈರ್ಯ ಕೊಟ್ಟ ಮದ್ಯದ ತಯಾರಕರು ಅಥವಾ ವಿತರಕರೂ ಇವರಲ್ಲ. ಹೆಣ್ಣನ್ನು ಭೋಗದ ವಸ್ತುವಾಗಿ ಪ್ರಚಾರ ಮಾಡುತ್ತಿರುವ ಯಾವ ಮಾಧ್ಯಮದ ನಿರ್ದೇಶಕರೂ ಇವರಲ್ಲ. ಶ್ರೀಮಂತರಿಗೆ ಹೆಣ್ಣು, ಮದ್ಯ, ಲವರ್ಸ್.. ಎಂದು ಬೇಕಾದ್ದೆಲ್ಲವೂ ಸಿಗುವಂತಹ ಈ ವ್ಯವಸ್ಥೆಯ ನಿರ್ಮಾತೃಗಳೂ ಇವರಲ್ಲ. ಹಾಗಂತ ಇದರರ್ಥ ಇವರಿಗೆಲ್ಲ ಮರಣ ದಂಡನೆಯಾಗಬಾರದು ಎಂದಲ್ಲ. ಅವರೆಸಗಿದ ಕ್ರೌರ್ಯಕ್ಕೆ ಇದೂ ಕಡಿಮೆಯೇ. ಆದರೆ ಅವರನ್ನು ಖಂಡಿಸುವಾಗಲೆಲ್ಲ, ಆ ಕ್ರೌರ್ಯದಲ್ಲಿ ಅವರು ಮಾತ್ರ ಪಾಲುದಾರರಲ್ಲ ಎಂಬ ಅರಿವು ನಮ್ಮಲ್ಲಿರಬೇಕು. ಅವರನ್ನು ಆ ಅಪರಾಧಕ್ಕೆ ದೂಡಿದವರು ಆರಾಮವಾಗಿದ್ದಾರೆ. ಇನ್ನಷ್ಟು ಮುಖೇಶ್, ಪವನ್, ವಿನಯ್, ಠಾಕೂರ್‍ಗಳನ್ನು ಸೃಷ್ಟಿಸುವುದಕ್ಕೆ ಚಿತ್ರಕತೆ ರಚಿಸುತ್ತಿದ್ದಾರೆ. ಆದ್ದರಿಂದ ನಮ್ಮ ಅತ್ಯಾಚಾರದ ಚರ್ಚೆಯಲ್ಲಿ 'ಅವರ ಪಾತ್ರ' ಪ್ರಸ್ತಾಪವಾಗದ ಹೊರತು ಚರ್ಚೆ ಖಂಡಿತ ಪೂರ್ಣವಾಗಲಾರದು. ಒಪ್ಪಿ, ಬಿಡಿ.No comments:

Post a Comment