Thursday, August 15, 2013

ನಮ್ಮೊಳಗಿನ ಇಬ್ಬಂದಿತನಕ್ಕೆ ಕನ್ನಡಿ ಹಿಡಿದ ರುಬಾಇಶ್

   ಒಂದು ಕವಿತೆಯನ್ನೋ ಲೇಖನವನ್ನೋ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕಾದರೆ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳೇನು? ವಿದ್ಯಾರ್ಥಿಗಳು ಇದನ್ನು ಓದಬಹುದು ಅಥವಾ ಓದಬಾರದು ಎಂದು ತೀರ್ಮಾನಿಸುವುದು ಯಾವುದರ ಆಧಾರದಲ್ಲಿ? ಒಂದು ಕವಿತೆಯ ಯೋಗ್ಯತೆಯನ್ನು ಅಳೆಯುವುದರ ಮಾನದಂಡ ಯಾವುದು?
    ಓ ಸಮುದ್ರವೇ ನಮ್ಮ ಸರಪಳಿಗಳು ನಿನ್ನನ್ನು ನೀರಸಗೊಳಿಸುತ್ತಿವೆಯೇ?
    ಒತ್ತಾಯಕ್ಕೆ ಮಣಿದು ನಾವು ಬಂದು ಹೋಗುತ್ತಿದ್ದೇವೆ
    ತಿಳಿದಿದೆಯೇ ನಿನಗೆ ನಮ್ಮ ಪಾಪಗಳ ಕುರಿತು
    ವಿಷಾದದ ನೆರಳಿನಲ್ಲಿ ನಮ್ಮನ್ನು ಎಳೆದೊಯ್ಯಲಾಯಿತೆಂಬುದು ನಿನಗೆ    ಗೊತ್ತಿದೆಯೇ?
    ಓ ಸಮುದ್ರವೇ, ನಮ್ಮ ಸಂಬಂಧದ ಬಗ್ಗೆ ನಮ್ಮನ್ನು ಗೇಲಿ ಮಾಡುತ್ತಿರುವೆಯಾ?
    ನಮ್ಮ ವೈರಿಗಳೊಂದಿಗೆ ಸೇರಿ ನೀನು ನಮಗೆ ಕಾವಲು ಕಾಯುತ್ತಿರುವೆ
    ನಡೆದ ಕ್ರೌರ್ಯಗಳ ಬಗ್ಗೆ ಬಂಡೆಗಳು ನಿನ್ನೊಂದಿಗೆ ಹೇಳುತ್ತಿಲ್ಲವೇ?
    ಗ್ವಾಂಟನಾಮೊ ಶಿಬಿರವು ತನ್ನ ಕತೆಯನ್ನು ನಿನ್ನೊಂದಿಗೆ ವಿವರಿಸಿಲ್ಲವೇ?...
ಕೋಯಿಕ್ಕೋಡ್ ವಿಶ್ವವಿದ್ಯಾಲಯದ, 'ಸಾಹಿತ್ಯ ಮತ್ತು ಸಮಕಾಲೀನ ಪ್ರಶ್ನೆಗಳು' (Literature and contemporary  issues) ಎಂಬ ಪಠ್ಯಪುಸ್ತಕದಿಂದ ಇತ್ತೀಚೆಗೆ ಈ ಕವಿತೆಯನ್ನು ಕಿತ್ತು ಹಾಕಲಾಗಿದೆ. ಮೂರನೇ ಸೆಮಿಸ್ಟರ್‍ನ BA- BSC ವಿದ್ಯಾರ್ಥಿಗಳಿಗೆ ಕಳೆದ ಒಂದು ವರ್ಷದಿಂದಲೂ ಬೋಧಿಸಲಾಗುತ್ತಿದ್ದ Ode to the Sea- ‘ಸಮುದ್ರಕ್ಕೊಂದು ಗೀತೆ’ - ಎಂಬ ಹೆಸರಿನ ಈ ಕವಿತೆಯ ವಿರುದ್ಧ ಕೇರಳದಲ್ಲಿ ಇತ್ತೀಚೆಗೆ ಒಂದು ವರ್ಗ ತೀವ್ರ ಪ್ರತಿಭಟನೆ ನಡೆಸಿತ್ತು. ‘ಗ್ವಾಂಟನಾಮೋದ ಕವನಗಳು: ಬಂಧಿತರು ಮಾತಾಡುತ್ತಿದ್ದಾರೆ’ (Poems from Guantanamo: The detainees speak).. ಎಂಬ ಕವನ ಸಂಕಲನದಿಂದ ಆಯ್ಕೆ ಮಾಡಲಾದ ಈ ಕವನವನ್ನು ಪಠ್ಯದಿಂದ ಕಿತ್ತು ಹಾಕಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಈ ಕವಿತೆಯನ್ನು ಬರೆದಿರುವ ಇಬ್ರಾಹೀಮ್ ಅಲ್ ರುಬಾಇಶ್ ಓರ್ವ ಭಯೋತ್ಪಾದಕನಾಗಿದ್ದಾನೆ ಅಂದರು. ಕವಿತೆಯನ್ನು ಪಠ್ಯವಾಗಿ ಆಯ್ಕೆ ಮಾಡಿರುವ ಮುರುಗನ್ ಮತ್ತು ಅರವಿಂದಾಕ್ಷನ್ ಎಂಬವರ ದೇಶಬದ್ಧತೆಯನ್ನೇ ಪ್ರಶ್ನಿಸಿದರು. ಈ ಎಲ್ಲ ಬೆಳವಣಿಗೆಗಳಿಂದ ತತ್ತರಿಸಿದ ವಿಶ್ವವಿದ್ಯಾಲಯವು ಕವಿತೆಯ ಪರಿಶೀಲನೆಗೆ ತಂಡವೊಂದನ್ನು ರಚಿಸಿತಲ್ಲದೆ, ಅದು ಕೊಟ್ಟ ವರದಿಯ ಆಧಾರದಲ್ಲಿ ಕವಿತೆಯನ್ನು ಪಠ್ಯಪುಸ್ತಕದಿಂದ ಕಿತ್ತು ಹಾಕಿತು. ವರದಿ ಹೇಳಿದ್ದು ಇಷ್ಟೇ-
    ‘..ಕವಿತೆ ಉತ್ತಮವಾಗಿದೆ. ಆದರೆ ಕವಿಯ ಬದುಕು ಸರಿ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ಈ ಕವಿತೆಯನ್ನು ಅಭ್ಯಸಿಸಬೇಕಿಲ್ಲ..’
   ಅಷ್ಟಕ್ಕೂ, ಓರ್ವ ಬರಹಗಾರನ ಬದುಕನ್ನು ನೋಡಿಕೊಂಡು ಆತನ ಬರಹವನ್ನು ಅರ್ಹ ಅಥವಾ ಅನರ್ಹವೆಂದು ಸಾರುವುದು ಎಷ್ಟರ ಮಟ್ಟಿಗೆ ಪ್ರಾಯೋಗಿಕವಾಗಬಹುದು? ಒಂದು ವೇಳೆ, ಇದೇ ಮಾನದಂಡವನ್ನು ವಿಶ್ವವಿದ್ಯಾಲಯದ ಪಠ್ಯಪುಸ್ತಕಗಳಲ್ಲಿರುವ ಇತರ ಕವಿತೆಗಳಿಗೂ ಅಳವಡಿಸಿದರೆ ಏನಾದೀತು? ಎಷ್ಟು ಕವಿತೆಗಳು ಪಠ್ಯ ಪುಸ್ತಕಗಳಲ್ಲಿ ಉಳಿದೀತು? ದಸ್ತಾಯೋವಸ್ಕಿ, ರಿಂಬೊ, ಶೆನೆ, ಯೇಟ್ಸ್, ಬೀಟ್ಸ್.. ಮುಂತಾದ ವಿಶ್ವವಿಖ್ಯಾತ ಸಾಹಿತಿಗಳ ಬರಹಗಳನ್ನು ಹೆಚ್ಚಿನೆಲ್ಲ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲಾಗುತ್ತಿದೆ. ಹಾಗಂತ, ಅವರ ಜೀವನ ಕ್ರಮಗಳನ್ನು ಅಭ್ಯಸಿಸಿದ ಬಳಿಕವೇ ಅವನ್ನೆಲ್ಲ ಪಠ್ಯಗಳಲ್ಲಿ ಅಳವಡಿಸಿಕೊಳ್ಳಲಾಗಿದೆಯೇ? ದಸ್ತಾಯೋವಸ್ಕಿ ಜೂಜುಕೋರನಾಗಿದ್ದ ಎಂದು ಅವರ ಜೀವನ ಚರಿತ್ರೆಯೇ ಹೇಳುತ್ತದೆ. ಗುಲಾಮರನ್ನು ಮಾರಾಟ ಮಾಡುತ್ತಿದ್ದ ರಿಂಬೊ, ಅನೈತಿಕ ಸಂಬಂಧ ಹೊಂದಿದ್ದ ಶೆನೆ, ಮದ್ಯಪಾನಿಯಾಗಿದ್ದ ಬೀಟ್ಸ್.. ಹೀಗೆ ಎಲ್ಲರಲ್ಲೂ ದೌರ್ಬಲ್ಯಗಳು ಇದ್ದೇ ಇತ್ತು. ಖ್ಯಾತ ಕವಿ, ಕತೆಗಾರ ಸಾದಾತ್ ಹಸನ್ ಮಾಂಟೊನಂತೂ ಕಳ್ಳತನ, ಮದ್ಯಪಾನದಲ್ಲೂ ಗುರುತಿಸಿಕೊಂಡಿದ್ದ. ಉಗ್ರ ಫ್ಯಾಸಿಸಂನ ಪ್ರತಿಪಾದಕನೆಂದು ಗುರುತಿಸಿಕೊಂಡಿರುವ ಎಸ್ರಾ ಪೌಂಡ್‍ನ ಸಾಹಿತ್ಯವು ಯಾವ ವಿಶ್ವವಿದ್ಯಾಲಯಗಳಲ್ಲೂ ನಿಷೇಧಕ್ಕೆ ಒಳಗಾಗಿಲ್ಲ. ಸಾಮ್ರಾಜ್ಯ ಶಾಹಿತ್ವದ ಪ್ರಬಲ ಪ್ರತಿಪಾದಕರಾದ ರುಡ್‍ಯಾರ್ಡ್ ಕ್ಲಿಪ್ಪಿಂಗ್ಸ್ ರು ಈಗಲೂ ಎಲ್ಲರ ಇಷ್ಟದ ಸಾಹಿತಿ. ಅವರ ಜಂಗಲ್ ಬುಕ್ ಎಂಬ ಪುಸ್ತಕ ಮಕ್ಕಳ ಪಾಲಿಗೆ ಅಚ್ಚುಮೆಚ್ಚು. ಕರಿಯರ ವಿಮೋಚನೆಗಾಗಿ ಉಗ್ರವಾದಿ ಧೋರಣೆಯನ್ನು ಪ್ರತಿಪಾದಿಸಿದ ಕವಿ ಲ್ಯಾಂಗ್‍ಸ್ಟನ್ ಹ್ಯೂಗ್ಸ್ ನನ್ನು ಉಲ್ಲೇಖಿಸದ, ಮೆಚ್ಚಿಕೊಳ್ಳದ ವಿಶ್ವವಿದ್ಯಾಲಯಗಳು ಇವತ್ತು ಇವೆಯೇ? ಓರ್ವ ಬಿಳಿ ಪೊಲೀಸನನ್ನು ಕೊಂದ ಅಪರಾಧಕ್ಕಾಗಿ 1985ರಲ್ಲಿ ದಕ್ಷಿಣ ಆಫ್ರಿಕಾ ಸರಕಾರವು ಗಲ್ಲಿಗೇರಿಸಿದ ಬೆಂಜಮಿನ್ ಮೊಲೊರಿಲಸ್‍ನನ್ನು ಗೌರವಿಸದ ಸಾಹಿತಿಗಳೇ ಇವತ್ತಿಲ್ಲ.. ಇವೆಲ್ಲ ಏನು, ಸಾಹಿತ್ಯದ ತೂಕವನ್ನು ಸಾಹಿತಿಯ ಜೀವನ ಕ್ರಮದ ಆಧಾರದಲ್ಲಿ ಅಳೆಯಲಾಗುವುದಿಲ್ಲ ಎಂಬುದಕ್ಕಿರುವ ಪುರಾವೆಗಳೇ ಅಲ್ಲವೇ? ಇಲ್ಲೆಲ್ಲಾ ಪರಿಗಣನೆಗೆ ಬಾರದ ನಿಯಮವು ಕೇವಲ ರುಬಾಯಿಶ್‍ನ ವಿಷಯದಲ್ಲಿ ಮಾತ್ರ ಜಾರಿಗೆ ಬಂದುದೇಕೆ? ಹಾಗಂತ ರುಬಾಇಶ್‍ನನ್ನೋ ಆತನ ಕವಿತೆಯನ್ನೋ ಸಮರ್ಥಿಸುವುದು ಇಲ್ಲಿನ ಉದ್ದೇಶ ಅಲ್ಲ. ಅಂಥದ್ದೊಂದು ತೂಕದ ಕವಿತೆಯೂ ಅದಲ್ಲ, ಆದರೂ
    1979ರಲ್ಲಿ ಸೌದಿಯಲ್ಲಿ ಹುಟ್ಟಿದ ರುಬಾಇಶ್‍ನು ಬಳಿಕ ಪಾಕ್-ಅಫಘಾನ್ ಗಡಿಯಲ್ಲಿ ಶಿಕ್ಷಕನಾಗಿ ಸೇರಿಕೊಳ್ಳುತ್ತಾನೆ. ಈ ಮಧ್ಯೆ ಅಲ್ ಖಾಯಿದಾದೊಂದಿಗೆ ಸಂಬಂಧ ಇದೆಯೆಂಬ ಆರೋಪದಲ್ಲಿ ಆತ ಬಂಧನಕ್ಕೆ ಒಳಗಾಗುತ್ತಾನಲ್ಲದೇ, ಗ್ವಾಂಟನಾಮೋ ಜೈಲು ಸೇರುತ್ತಾನೆ. ನಿಜವಾಗಿ, ಗ್ವಾಂಟನಾಮೋ ಎಂಬುದು ಕ್ಯೂಬಾದ ಕೆರಿಬಿಯನ್ ಸಮುದ್ರ ತೀರದಲ್ಲಿ ಅಮೇರಿಕದ ಅಧ್ಯಕ್ಷ  ಜಾರ್ಜ್ ಬುಶ್‍ರು 9/11ರ ಬಳಿಕ ತಯಾರಿಸಿಟ್ಟ ಬಂಧೀಖಾನೆ. 1903ರಲ್ಲಿಯೇ ಅಮೇರಿಕವು ಈ 45 ಚದರ ಮೈಲು ಪ್ರದೇಶವನ್ನು ಕರಾರಿನಂತೆ ಪಡಕೊಂಡಿತ್ತು. ಅಲ್ಲಿ ಅಮೇರಿಕದ ನೌಕಾನೆಲೆಯೊಂದಿದೆ. ಅಮೇರಿಕದ ಹೊರಗೆ ಈ ಬಂದೀಖಾನೆ ಇರುವುದರಿಂದಾಗಿ ಅಮೇರಿಕದಲ್ಲಿ ಕೈದಿಗಳಿಗೆ ಏನೆಲ್ಲ ಹಕ್ಕು, ಸ್ವಾತಂತ್ರ್ಯ, ಸೌಲಭ್ಯಗಳಿವೆಯೋ ಅವೊಂದೂ ಇಲ್ಲಿರುವವರಿಗೆ ದಕ್ಕಬೇಕಿಲ್ಲ. ಅಮೇರಿಕದ ಕಾನೂನು ಇವರಿಗೆ ಲಾಗೂ ಆಗಬಾರದು ಎಂಬ ಉದ್ದೇಶದಿಂದಲೇ ಬುಶ್ ಇದನ್ನು ನಿರ್ಮಿಸಿದ್ದರು. ಬಂಧನದ 3 ವರ್ಷಗಳ ಬಳಿಕ 2006ರಲ್ಲಿ ಅಮೇರಿಕವು ರುಬಾಇಶ್‍ನನ್ನು ಸೌದಿ ಅರೇಬಿಯಾಕ್ಕೆ ಹಸ್ತಾಂತರಿಸಿತ್ತು. ಮಾತ್ರವಲ್ಲ, ಆತನ ಮೇಲಿರುವ ಆರೋಪ, ಬಿಡುಗಡೆಗಿರುವ ಕಾರಣ ಯಾವುದನ್ನೂ ಅಮೇರಿಕ ಈವರೆಗೂ ಬಹಿರಂಗಪಡಿಸಿಲ್ಲ. ಒಂದು ರೀತಿಯಲ್ಲಿ, ಶಂಕಿತ ಆರೋಪಿಯಾಗಿ ಗ್ವಾಂಟಾನಾಮೋ ಸೇರಿಕೊಂಡು ಆತ ನಿರಪರಾಧಿಯಾಗಿ ಹೊರಬಂದಿದ್ದಾನೆ. ಆತನಿಗೆ ಯಾವ ಕೋರ್ಟೂ ಶಿಕ್ಷೆ ವಿಧಿಸಿಲ್ಲ. ಅಲ್ಲದೇ ಬಿಡುಗಡೆಯ ಮೂರು ವರ್ಷಗಳ ಬಳಿಕ ಆತ ಸೌದಿಯಿಂದಲೂ ನಾಪತ್ತೆಯಾಗಿದ್ದಾನೆ. ಆತ ಜೀವಂತ ಇದ್ದಾನೋ ಇಲ್ಲವೋ ಅನ್ನುವುದೂ ಸ್ಪಷ್ಟವಿಲ್ಲ. ಹೀಗೆ ಶಿಕ್ಷಕನಾಗಿ, ಶಂಕಿತ ಭಯೋತ್ಪಾದಕನಾಗಿ ಮತ್ತು ನಿರಪರಾಧಿಯಾಗಿ ಬಿಡುಗಡೆ ಗೊಳ್ಳುವುದಕ್ಕಿಂತ ಮೊದಲು ಆತ ಜೈಲಿನಲ್ಲಿ ಬರೆದ ಕವನವೇ ‘ಸಮುದ್ರಕ್ಕೊಂದು ಗೀತೆ’. ಆತನಂತೆಯೇ ಅನೇಕ ಕೈದಿಗಳು ಗ್ವಾಂಟನಾಮೋದಲ್ಲಿ ಕವನ ಬರೆದಿದ್ದರು. ಅಮೇರಿಕದ ಮಾನವ ಹಕ್ಕು ಹೋರಾಟಗಾರರಾದ ಮಾರ್ಕ್ಸ್  ಫಾಲ್‍ಕಾಪ್‍ರು ಅವನ್ನೆಲ್ಲ 'ಗ್ವಾಂಟನಾಮೋದ ಕವನಗಳು..' ಎಂಬ ಹೆಸರಿನಲ್ಲಿ ಸಂಗ್ರಹಿಸಿದರು. ಮಾತ್ರವಲ್ಲ, ಆಮ್ನೆಸ್ಟಿ ಇಂಟರ್‍ನ್ಯಾಶನಲ್ ಈ ಕವನ ಸಂಕಲನವನ್ನು ಪ್ರಕಟಿಸಿತು. ನಿಜವಾಗಿ, ಈ ಕವನಗಳು ಪ್ರಕಟವಾಗುವುದಕ್ಕಿಂತ ಮೊದಲು ಅಮೇರಿಕದ ಉನ್ನತ ಅಧಿಕಾರಿಗಳು ಒಂದಕ್ಕಿಂತ ಹೆಚ್ಚು ಬಾರಿ ಆಮೂಲಾಗ್ರವಾಗಿ ಅವನ್ನು ಪರಿಶೀಲಿಸಿದ್ದಾರೆ. ಒಂದು ವೇಳೆ ಭಯೋತ್ಪಾದನೆಗೆ ಬೆಂಬಲ ನೀಡಬಲ್ಲ ಏನಾದರೂ ಇರುತ್ತಿದ್ದರೆ ಅಮೇರಿಕ ಈ ಕವನ ಸಂಕಲನವನ್ನು ಪ್ರಕಟಿಸಲು ಅನುಮತಿ ನೀಡುತ್ತಿತ್ತೇ? ಸಮುದ್ರವನ್ನು ಕೇಂದ್ರೀಕರಿಸಿ ಜೈಲಿನ ಕಷ್ಟ, ಒಂಟಿತನ, ತನ್ನ ಅಮಾಯಕತನವನ್ನಲ್ಲದೇ ಇನ್ನೇನನ್ನಾದರೂ ರುಬಾಇಶ್ ಬರೆಯುತ್ತಿದ್ದರೆ, Ode to the Sea ಪ್ರಕಟಗೊಳ್ಳುತ್ತಿತ್ತೇ?
   1. ಗಾಯದ ನೆನಪುಗಳು...
   2 ಈಳಂ ಕವಿತೆಗಳು
ರುಬಾಇಶ್
   3 ಹಾಲೋಕಾಸ್ಟ್ ಕವಿತೆಗಳು
ಮುಂತಾದ ಅನೇಕ ಕೃತಿಗಳು ಈ ಜಗತ್ತಿನಲ್ಲಿ ಪ್ರಕಟವಾಗಿವೆ. ಇವೆಲ್ಲ ಕಾದಂಬರಿಗಳಂಥಲ್ಲ. ಈ ದೇಶದಲ್ಲಿ ನಡೆದ ಕೋಮುಗಲಭೆಗಳ ದಾರುಣ ಚಿತ್ರಣವನ್ನು ‘ಗಾಯದ ನೆನಪುಗಳು’ ಹೇಳುತ್ತಿದ್ದರೆ, ಲಂಕಾದ ತಮಿಳರ ತಲ್ಲಣಗಳನ್ನು ‘ಈಳಂ ಕವಿತೆಗಳು’ ವಿವರಿಸುತ್ತವೆ. ಹಿಂದಿ ಸಿನಿಮಾ ಗೀತೆಗಳನ್ನು ಹಾಡಿದಂತೆ ಈಳಂ ಕವಿತೆಗಳನ್ನು ಓದಲು ಸಾಧ್ಯವಿಲ್ಲ. ಯಾಕೆಂದರೆ, ಅವುಗಳಲ್ಲಿ ಒಂದು ಜನಾಂಗದ ತಲ್ಲಣ, ನೋವು, ಕಣ್ಣೀರು, ಅಸಹಾಯಕತೆಗಳೇ ತುಂಬಿವೆ. ರುಬಾಇಶ್‍ನ ಕವಿತೆ ಮುಖ್ಯವಾಗಬೇಕಾದದ್ದು ಈ ಹಿನ್ನೆಲೆಯಲ್ಲಿ. ಅದನ್ನು ಓದುವಾಗ, ಗ್ವಾಂಟನಾಮೋ ಕಾಣುತ್ತದೆ. ಅಮೇರಿಕದ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ಒಂದು ವೇಳೆ, ವಿಶ್ವವಿದ್ಯಾಲಯದ ಪಠ್ಯದಲ್ಲಿ ಈಳಂ ಕೃತಿಯಿಂದ ಒಂದು ಕವಿತೆ ಸೇರ್ಪಡೆಗೊಂಡರೂ ವಿದ್ಯಾರ್ಥಿಗಳ ಅಧ್ಯಯನ ಆ ಒಂದು ಕವಿತೆಗಷ್ಟೇ ಸೀಮಿತಗೊಳ್ಳುವುದಿಲ್ಲ. ಅದನ್ನು ಅಧ್ಯಯನ ನಡೆಸುವ ಸಂದರ್ಭದಲ್ಲಿ ಇಡೀ ಲಂಕಾ ಕಲಹದ ಚಿತ್ರಣವೇ ಅವರೆದುರು ತೆರೆದುಕೊಳ್ಳುತ್ತದೆ. ಹಾಲೋಕಾಸ್ಟ್ ಆಗಲಿ, ಸಮುದ್ರಕ್ಕೊಂದು ಗೀತೆಯಾಗಲಿ ವಿದ್ಯಾರ್ಥಿಗಳನ್ನು ತಟ್ಟುವುದು, ತಟ್ಟಬೇಕಾದದ್ದು ಈ ರೀತಿಯಲ್ಲೇ.
   ನಿಜವಾಗಿ, ಬರಹಗಾರನಿಗೂ ಆತನ ಬರಹಕ್ಕೂ ಖಂಡಿತ ಸಂಬಂಧ ಇರಬೇಕು. ಭಯೋತ್ಪಾದಕನೊಬ್ಬ ದಯೆಯ ಬಗ್ಗೆ ಮಾತಾಡುವುದಕ್ಕೆ ಯಾವ ಅರ್ಥವೂ ಇಲ್ಲ. ಹತ್ಯಾಕಾಂಡದ ರೂವಾರಿಯೋರ್ವ ಮಾನವೀಯತೆಯ ಬಗ್ಗೆ ಭಾಷಣ ಮಾಡುವುದನ್ನು ಯಾವ ಸಮಾಜವೂ ಒಪ್ಪುವುದಿಲ್ಲ. ಕೋಮುವಾದಿ ಸಾಹಿತಿಯೊಬ್ಬ ತನ್ನ ಬರಹದಲ್ಲಿ ಮನುಷ್ಯ ಪ್ರೇಮದ ಬಗ್ಗೆ ಬರೆಯುವುದು ಹಾಸ್ಯಾಸ್ಪದವಾಗುತ್ತದೆ. ಆದರೆ, ನಮ್ಮ ಪಠ್ಯಪುಸ್ತಕಗಳೆಲ್ಲ ಇಂಥ ವೈರುಧ್ಯಗಳಿಂದ ಮುಕ್ತವಾಗಿವೆ  ಎಂದು ಸಾಬೀತುಪಡಿಸಲು ರುಬಾಇಶ್‍ನನ್ನು ಭಯೋತ್ಪಾದಕ ಕವಿ ಎಂದು ಸಾರುತ್ತಿರುವವರಿಗೆ ಸಾಧ್ಯವೇ? ಅಷ್ಟಿದ್ದೂ, ಇತರ ಯಾರಿಗೂ ಅನ್ವಯವಾಗದ ನಿಯಮವೊಂದು ರುಬಾಇಶ್‍ನಿಗೆ ಅನ್ವಯವಾಗಲು ಏನು ಕಾರಣ? ಈ ದೇಶದಲ್ಲಿ ಸಾಹಿತ್ಯವನ್ನು ಸಾಹಿತಿಗಳ ಬದುಕಿನಿಂದ ಹೊರಗಿಟ್ಟೇ ಈವರೆಗೆ ಪರಿಶೀಲಿಸಲಾಗಿದೆ. ಸಾಹಿತಿ ಪ್ರಬಲ ಕೋಮುವಾದಿಯಾಗಿದ್ದರೂ ಆತನ ಸಾಹಿತ್ಯ ಮನುಷ್ಯ ಪ್ರೇಮಿಯಾಗಿದ್ದರೆ, ಅದನ್ನು ಪರಿಗಣಿಸಿರುವ ಉದಾಹರಣೆಗಳು ಧಾರಾಳ ಇವೆ. ಹೀಗಿರುವಾಗ Ode to the Sea ಮಾತ್ರ ಈ ನಿಯಮದಿಂದ ಹೊರಗುಳಿಯಲು ರುಬಾಇಶ್‍ನ 'ಶಂಕಿತ ವ್ಯಕ್ತಿತ್ವ' ಮಾತ್ರ ಕಾರಣವೋ ಅಥವಾ ಅದರ ಹಿಂದೆ ಇಸ್ಲಾಮೋಫೋಬಿಯಾವೂ ಕೆಲಸ ಮಾಡಿವೆಯೇ? ಭಯೋತ್ಪಾದನೆಯ ಆರೋಪದಲ್ಲಿ ಜೈಲು ಸೇರಿ ಬಳಿಕ ಅಮಾಯಕರೆಂದು ಬಿಡುಗಡೆಗೊಂಡವರು ಈ ದೇಶದಲ್ಲಿ ಧಾರಾಳ ಇದ್ದಾರೆ. ಅವರು ಭವಿಷ್ಯದಲ್ಲಿ ರಚಿಸಬಹುದಾದ ಸಾಹಿತ್ಯಕ್ಕೂ ಇದೇ ಮಾನದಂಡವೇ ಅಥವಾ ಅಮೇರಿಕ ಯಾರನ್ನು ಭಯೋತ್ಪಾದಕರೆನ್ನುತ್ತದೋ, ಯಾರನ್ನು ಕಪ್ಪು ಪಟ್ಟಿಯಲ್ಲಿಡುತ್ತದೋ ಅವರನ್ನು ಮಾತ್ರ ವಿರೋಧಿಸುತ್ತೇವೆ ಎಂಬ ನಿಲುವೇ? ಹಾಗಾದರೆ ನರೇಂದ್ರ ಮೋದಿಯವರ ಸ್ಥಿತಿಯೇನು? ಅವರನ್ನು ಇನ್ನೂ ಅಮೇರಿಕ ಸೇರಿಸಿಕೊಳ್ಳುತ್ತಿಲ್ಲವಲ್ಲ? ಅಂದಹಾಗೆ,
    ರುಬಾಇಶ್‍ನ ನೆಪದಲ್ಲಾದರೂ ನಮ್ಮೊಳಗಿನ ಇಬ್ಬಂದಿತನ, ಅಸಹಿಷ್ಣುತೆ, ಶಂಕಿತ ಮನಸ್ಥಿತಿಯು ಚರ್ಚೆಗೆ ಒಳಗಾದರೆ ಖಂಡಿತ 'ಸಮುದ್ರಕ್ಕೊಂದು ಗೀತೆ'ಯ ಉದ್ದೇಶ ಈಡೇರಿತೆಂದೇ ಹೇಳಬಹುದು.

No comments:

Post a Comment