Monday, July 22, 2013

ಹಾಗಂತ, ಅಮೀನಳಿಗೆ ಕಣ್ಣು ಮರಳಿಸಲು ನಮ್ಮಿಂದ ಸಾಧ್ಯವಿಲ್ಲವಲ್ಲ..

   ದಿ ನ್ಯೂಯಾರ್ಕ್ ಟೈಮ್ಸ್, ಬಿಬಿಸಿ, ದಿ ಗಾರ್ಡಿಯನ್, ದಿ ಹಿಂದೂ, ಟೈಮ್ಸ್ ಆಫ್ ಇಂಡಿಯಾ.. ಸಹಿತ ಜಗತ್ತಿನ ಹೆಚ್ಚಿನೆಲ್ಲ ಪತ್ರಿಕೆಗಳೂ 2008 ನವೆಂಬರ್‍ನಲ್ಲಿ ಅಮೀನಾ ಬಹ್ರಾಮಿ ಎಂಬ ಯುವತಿಯ ಬಗ್ಗೆ ಬರೆದುವು. ಕಣ್ಣಿಗೆ ಕಣ್ಣು (Eye for an Eye) ಅನ್ನುವ ಇರಾನಿನ ನ್ಯಾಯದ ಕುರಿತು ವಿಮರ್ಶಿಸಿದುವು. ಮಜೀದ್ ಮುವಾಹಿದಿ ಅನ್ನುವ ಯುವಕ ಮಾಧ್ಯಮಗಳ ಕಣ್ಮಣಿ ಆಗಿಬಿಟ್ಟ. ಮುವಾಹಿದಿ ಮತ್ತು ಅಮೀನಾರನ್ನು ಎದುರಿಟ್ಟುಕೊಂಡು ಮಾಧ್ಯಮಗಳು ಮಾನವ ಹಕ್ಕುಗಳ ಸುತ್ತ ಗಂಭೀರ ಚರ್ಚೆಯನ್ನೇ ಹುಟ್ಟು ಹಾಕಿದುವು. ಇರಾನಿನಲ್ಲಿ ಚಾಲ್ತಿಯಲ್ಲಿರುವ ಕಾನೂನುಗಳು ಎಷ್ಟು ಪುರಾತನ ಮತ್ತು ಎಷ್ಟು ಅವೈಜ್ಞಾನಿಕ ಎಂದು ತರ್ಕಿಸಿದುವು. ಮುಲ್ಲಾ ತೀರ್ಪು (Mulla verdict) ಅಂದುವು. ಕಣ್ಣಿಗೆ ಕಣ್ಣು ಶಿಕ್ಷೆಯನ್ನು ರದ್ದುಪಡಿಸುವಂತೆ ಬ್ರಿಟನ್ನಿನ ವಿದೇಶಾಂಗ ಇಲಾಖೆಯು ಇರಾನಿಗೆ ಒತ್ತಾಯಿಸಿತು. ಅಂತಾರಾಷ್ಟ್ರೀಯ ಕಾನೂನುಗಳನ್ನು ಇರಾನ್ ಗೌರವಿಸಬೇಕೆಂದು ಆಮ್ನೆಸ್ಟಿ ಇಂಟರ್ ನ್ಯಾಶನಲ್ ಅಗ್ರಹಿಸಿತು. ಮಾನವಹಕ್ಕು ಕಾರ್ಯಕರ್ತರು ಜಗತ್ತಿನ ಹಲವು ಕಡೆ ಪ್ರತಿಭಟನೆಗಳನ್ನು ನಡೆಸಿದರು. ಒಂದೆಡೆ, ತನ್ನೆರಡೂ ಕಣ್ಣುಗಳನ್ನು ಕಳಕೊಂಡ ಅಮೀನಾ ಬಹ್ರಾಮಿ ಎಂಬ ಯುವತಿ, ಇನ್ನೊಂದೆಡೆ ಜಾಗತಿಕ ಒತ್ತಡಗಳು, ಮತ್ತೊಂದೆಡೆ ತನ್ನ ನೆಲದ ಕಾನೂನು... ಇರಾನ್ ಇಕ್ಕಟ್ಟಿಗೆ ಸಿಲುಕಿತು. ಒಂದು ವೇಳೆ ಕಣ್ಣಿಗೆ ಕಣ್ಣು ಎಂಬ ತೀರ್ಪನ್ನು ಮಜೀದ್ ಮುವಾಹಿದಿಯ ಮೇಲೆ ಪ್ರಯೋಗಿಸದೇ ಇರಬೇಕಾದರೆ ಇರಾನಿನ ಕಾನೂನಿನಂತೆ ಸಂತ್ರಸ್ತ ಯುವತಿಯು ಆತನನ್ನು ಕ್ಷಮಿಸಬೇಕು. ಆದರೆ ಅಮೀನಾ ಕ್ಷಮಿಸುವುದಕ್ಕೆ ಸಾಧ್ಯವೇ ಇಲ್ಲ ಅಂದಳು. ಅದಕ್ಕೆ ಕಾರಣವೂ ಇದೆ..
   ಇರಾನಿನ ರಾಜಧಾನಿ ಟೆಹ್ರಾನಿನ ಯುನಿವರ್ಸಿಟಿಯಲ್ಲಿ ಮಜೀದ್ ಮತ್ತು ಅಮೀನ ಸಹಪಾಠಿಗಳಾಗಿದ್ದರು. ಎಲೆಕ್ಟ್ರಾನಿಕ್ಸ್ ನಲ್ಲಿ ಪದವಿ ಪಡೆದಿದ್ದಲ್ಲದೇ ಮೆಡಿಕಲ್ ಎಂಜಿನಿಯರಿಂಗ್ ಕಂಪೆನಿಯಲ್ಲಿ ಅಮೀನಾ ಕೆಲಸವನ್ನೂ ಗಿಟ್ಟಿಸಿಕೊಂಡಳು. ಇತ್ತ ಮಜೀದ್, ಅಮೀನಳಲ್ಲಿ ವಿವಾಹ ಪ್ರಸ್ತಾಪವನ್ನು ಮುಂದಿಟ್ಟ. ಆತನ ಮನೆಯವರೂ ಬೆಂಬಲಿಸಿದರು. ಆದರೆ ಅಮೀನಾ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಜೀದ್, 2004 ನವೆಂಬರ್‍ನಲ್ಲಿ ಆಕೆಯ ಮುಖವನ್ನು ಗುರಿಯಾಗಿಸಿ ಆಸಿಡ್ ಎರಚಿದ. ಸಲ್ಫರಿಕ್ ಆಸಿಡ್‍ನ ಪ್ರಭಾವ ಆಕೆಯ ಮುಖವನ್ನಿಡೀ ಆವರಿಸಿಕೊಂಡಿತು. ಹೆಚ್ಚಿನ ಚಿಕಿತ್ಸೆಗಾಗಿ ಇರಾನ್ ಸರಕಾರ ಆಕೆಯನ್ನು ಸ್ಪೈನ್‍ಗೆ ವರ್ಗಾಯಿಸಿತು. 17 ಸರ್ಜರಿಗಳು ನಡೆದುವು. ಆಕೆ ಪಡಬಾರದ ಸಂಕಟ ಪಟ್ಟಳು. ವಿರೂಪಗೊಂಡ ಮುಖ, ದೃಷ್ಟಿ ಕಳಕೊಂಡ ಕಣ್ಣುಗಳು, ಹೆತ್ತವರ ಕಣ್ಣೀರು.. ಅಮೀನಾ ಪ್ರತೀಕಾರಕ್ಕೆ ಮುಂದಾದಳು. ತನ್ನನ್ನು ಕುರುಡಾಗಿಸಿದವನ ಕಣ್ಣನ್ನು ಕುರುಡಾಗಿಸುವುದಕ್ಕೆ ತನ್ನ ದೇಶದ ಕಾನೂನಿನಲ್ಲಿ ಅನುಮತಿ ಇರುವುದರಿಂದ, ತನಗೆ ಅವಕಾಶ ನೀಡಬೇಕೆಂದು ನ್ಯಾಯಾಲಯವನ್ನು ಆಗ್ರಹಿಸಿದಳು-
   ‘ಆತ ಕಣ್ಣಿಗೆ ಕಣ್ಣು ಶಿಕ್ಷೆಗೆ ಅರ್ಹನಾಗಿದ್ದಾನೆ. ನನ್ನ ಉದ್ದೇಶ ಬರೇ ಪ್ರತೀಕಾರವಷ್ಟೇ (ಕಿಸಾಸ್) ಅಲ್ಲ, ಇನ್ನಿತರ ಹೆಣ್ಣು ಮಕ್ಕಳಿಗೆ ಇಂಥ ದುರ್ದೆಸೆ ಬರಬಾರದೆಂಬುದೇ ನನ್ನ ನಿಲುವು. ಆದ್ದರಿಂದ, ಈ ಶಿಕ್ಷೆಯು ಇರಾನಿನಲ್ಲಿ ಮಾದರಿಯಾಗಿ ಸದಾ ಸ್ಮರಣೆಯಲ್ಲಿ ಉಳಿಯಬೇಕು’- ಸ್ಪೈನಿನ ABC ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಆಕೆ ಅಭಿಪ್ರಾಯಪಟ್ಟಳು.
   ಈ ಮಧ್ಯೆ ಶಿಕ್ಷೆಯ ಜಾರಿಯನ್ನು ಇರಾನ್ ಸರಕಾರವು 2011 ಜುಲೈ 31ಕ್ಕೆ ಮುಂದೂಡಿತು.
ಜುಲೈ 31 ಹತ್ತಿರವಾಗುವಾಗ ಮಾಧ್ಯಮಗಳು ಮತ್ತೆ ಈ ಪ್ರಕರಣವನ್ನು ಚರ್ಚೆಗೆ ತಂದುವು. ಆದರೆ ಆಕೆಯ ವಿರೂಪ ಮುಖವನ್ನು ಮಾಧ್ಯಮಗಳಲ್ಲಿ ಕಂಡ ಅಸಂಖ್ಯ ಮಂದಿ, ‘ಕಣ್ಣಿಗೆ ಕಣ್ಣು’ ಶಿಕ್ಷೆಯ ಬಗ್ಗೆ ಒಂದಿಷ್ಟು ಮೃದುವಾದರು. ಇಂಥ ಹೆಣ್ಣು ಮಕ್ಕಳ ಸಾಲು ಬೆಳೆಯದಿರಬೇಕಾದರೆ, ಅಪರಾಧಿಗಳಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ವಾದಿಸುವಷ್ಟು ಬದಲಾದರು. ಇದರ ಜೊತೆಗೆ, ಶಿರಿನ್ ಜುವಾಲೆ, ಪ್ರೀತಿ ರತಿ, ಲಕ್ಷ್ಮೀಯಂಥ ಅನೇಕಾರು ಹೆಣ್ಣು ಮಕ್ಕಳ ಬರ್ಬರ ಬದುಕಿನ ಕತೆಗಳೂ ಬಿಚ್ಚಿ ಕೊಂಡವು. ಹೀಗೆ ಸರಿ-ತಪ್ಪುಗಳ ಚರ್ಚೆ ಸಾಗುತ್ತಿರುವಂತೆಯೇ ಜಗತ್ತು ಜುಲೈ 31ರ ಅಪರೂಪದ ಶಿಕ್ಷೆಗಾಗಿ ಇರಾನಿನೆಡೆಗೆ ಕಣ್ಣು ನೆಟ್ಟಿತು. ಅಂತಾರಾಷ್ಟ್ರೀಯ ಮಾಧ್ಯಮಗಳ ಅನೇಕಾರು ಪತ್ರಕರ್ತರು ಇರಾನಿನಲ್ಲಿ ತಂಗಿ ಬ್ರೇಕಿಂಗ್ ನ್ಯೂಸ್‍ಗಾಗಿ ಕಾಯ ತೊಡಗಿದರು. ಆದರೆ,
   ‘ನನ್ನ ಧರ್ಮ ನನಗೆ ಪ್ರತೀಕಾರದ ಹಕ್ಕನ್ನು ಒದಗಿಸಿಕೊಟ್ಟಿದೆ. ಅದರಂತೆ ಮಜೀದ್ ಮುವಾಹಿದಿಯ ಕಣ್ಣಿಗೆ 20 ಆಸಿಡ್ ಹನಿಗಳನ್ನು ಸುರಿಸಿ ನನ್ನಂತೆ ಆತನನ್ನೂ ಕುರುಡು ಮಾಡುವುದಕ್ಕೆ ಅವಕಾಶ ಇದೆ. ಆದರೆ ಪ್ರತೀಕಾರಕ್ಕಿಂತ ಕ್ಷಮೆ ಶ್ರೇಷ್ಠವಾದುದು ಎಂದು ನನ್ನ ಧರ್ಮ ನನಗೆ ಕಲಿಸಿದೆ. ನಾನು ಕಳೆದ 7 ವರ್ಷಗಳಿಂದ ಈ ತೀರ್ಪಿಗಾಗಿ ಹೋರಾಡಿದ್ದೇನೆ. ಆಸಿಡ್ ಸುರಿಸುವವರ ಮೇಲೆ ಪ್ರತೀಕಾರ ಪಡೆಯುವ ಹಕ್ಕಿದೆ ಎಂಬುದನ್ನು ನನ್ನ ದೇಶದ ಮಂದಿಗೆ ಸಾಬೀತುಪಡಿಸಿ ತೋರಿಸುವ ಉದ್ದೇಶ ನನಗಿತ್ತು. ಆ ಉದ್ದೇಶ ಈಡೇರಿದೆ. ಆದ್ದರಿಂದ ನಾನಿನ್ನು ಪ್ರತೀಕಾರವನ್ನು ಬಯಸುತ್ತಿಲ್ಲ. ನನ್ನ ಧರ್ಮದ ಆದೇಶದಂತೆ ಕ್ಷಮೆಯನ್ನು ಎತ್ತಿ ಹಿಡಿಯುತ್ತೇನೆ. ಜಗತ್ತಿನ ಎಲ್ಲ ರಾಷ್ಟ್ರಗಳೂ ಇರಾನಿನಲ್ಲಿ ಈ ಘಟನೆ ನಡೆಯುವುದಕ್ಕಾಗಿ ಕಾತರದಿಂದ ಕಾಯುತ್ತಿವೆ ಎಂಬುದೂ ನನಗೆ ಗೊತ್ತು. ನನ್ನ ದೇಶಕ್ಕೆ ಈ ಕ್ಷಮೆಯನ್ನು ಅರ್ಪಿಸುತ್ತೇನೆ’- ಎಂದು ಆಕೆ ಹೇಳಿದಳು. ಅಲ್ ಜಝೀರಾ ಚಾನೆಲ್ ಅದನ್ನು ಪ್ರಸಾರ ಮಾಡಿತು.
   ಚೀನಾ, ದಕ್ಷಿಣ ಆಫ್ರಿಕಾ, ಬ್ರಿಟನ್, ಇಥಿಯೋಪಿಯಾ, ಭಾರತ, ಪಾಕಿಸ್ತಾನ, ಬಂಗ್ಲಾದೇಶ, ನೇಪಾಳ, ಕಾಂಬೋಡಿಯಾ, ಉಗಾಂಡ..
ಜಗತ್ತಿನ ಯಾವ ರಾಷ್ಟ್ರಗಳೂ ಆಸಿಡ್ ಬಾಳಿಯಿಂದ ಮುಕ್ತವಾಗಿಲ್ಲ. ಆಸಿಡ್  ದಾಳಿಗೆ ಒಳಗಾಗುವವರಲ್ಲಿ 90% ಹೆಣ್ಣು ಮಕ್ಕಳೇ. ಅದರಲ್ಲೂ 18ರಿಂದ 28 ವರ್ಷದ ಒಳಗಿನ ಯುವತಿಯರೇ ಹೆಚ್ಚು. ಜಗತ್ತಿನ 20 ರಾಷ್ಟ್ರಗಳಲ್ಲಿ ಪ್ರತಿ ವರ್ಷ 2,500ರಷ್ಟು ಆಸಿಡ್ ದಾಳಿ ಪ್ರಕರಣಗಳು ನಡೆಯುತ್ತವೆ ಎಂದು ಅಧಿಕೃತ ವರದಿಗಳೇ ಹೇಳುತ್ತವೆ. 2002ರಿಂದ 2010ರ ಮಧ್ಯೆ ಭಾರತದಲ್ಲಿ ನೂರಾರು ಆಸಿಡ್ ಪ್ರಕರಣಗಳು ವರದಿಯಾಗಿವೆ. 1915 ಅಕ್ಟೋಬರ್ 17ರಂದು ಕಾಂಗೋದ ರಾಜ ಕಿಂಗ್ ಲಿಯೋ ಫೋಲ್ಡ್ ನ ಮೊಮ್ಮಗ ರಾಜಕುಮಾರ ಕ್ಲೆಮೆಂಟ್‍ನ ಮೇಲೆ ಆತನ ಪತ್ನಿ ಕ್ಯಾಮಿಲಾ ರಿಬಿಕಾ ಆಸಿಡ್ ಎರಚಿದ್ದು ಜಾಗತಿಕವಾಗಿ ಸುದ್ದಿ ಯಾಗಿತ್ತು. ಪತಿಯ ಹಿಂಸೆಯನ್ನು ತಾಳಲಾರದೇ ಆಕೆ ಆಸಿಡ್ ಎರಚಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಳು. ವರ್ಷದ ಹಿಂದೆ ಸೋನಾಲಿ ಮುಖರ್ಜಿ ಎಂಬ ಯುವತಿ ಕೌನ್ ಬನೇಗಾ ಕರೋಡ್ ಪತಿಯಲ್ಲಿ 2.5 ಮಿಲಿಯನ್ ರೂಪಾಯಿಯನ್ನು ಗೆದ್ದಾಗ, ಆಸಿಡ್ ಮತ್ತೊಮ್ಮೆ ಚರ್ಚೆಗೆ ಒಳಗಾಯಿತು. ಯಾಕೆಂದರೆ, ಆಕೆ ಅದಾಗಲೇ, 22 ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಳು. 9 ವರ್ಷಗಳ ಹಿಂದೆ ಈಕೆಯ ಮೇಲೆ ಮೂವರು ಯುವಕರು ಆಸಿಡ್ ಎರಚಿದ್ದರಿಂದ ಆಕೆ ಎಷ್ಟು ವಿರೂಪಗೊಂಡಿದ್ದಳೆಂದರೆ ಚರ್ಮ, ಕಣ್ಣು, ಕಿವಿ, ಮೂಗು, ಬಾಯಿ ಯಾವುದೂ ಇಲ್ಲದ ಮಾಂಸದ ಮುದ್ದೆಯಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಳು. ಜಾರ್ಖಂಡ್‍ನ ಧನಾಬಾದ್‍ನ ಕಾಲೇಜಿನಲ್ಲಿ ಕಲಿಯುತ್ತಿದ್ದ ವೇಳೆ ಈ ಆಘಾತ ಸಂಭವಿಸಿತ್ತು. ಆದರೆ ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತನಾಗಿದ್ದರಿಂದ ಆತನಿಗೆ ಶಿಕ್ಷೆಯೇ ಆಗಲಿಲ್ಲ. ಇನ್ನಿಬ್ಬರು 3 ವರ್ಷ ಜೈಲಲ್ಲಿದ್ದು ಹೊರಬಂದರು. ತನ್ನನ್ನು ವಿರೂಪಗೊಳಿಸಿರುವವರು ತನ್ನೆದುರೇ ಅಡ್ಡಾಡುತ್ತಿದ್ದುನ್ನು ಕಂಡು ಹತಾಶೆಗೊಂಡ ಆಕೆ ಸರಕಾರಕ್ಕೆ ದಯಾಮರಣದ ಅರ್ಜಿಯನ್ನೂ ಸಲ್ಲಿಸಿದ್ದಳು.
   ಒಂದು ರೀತಿಯಲ್ಲಿ,  ಆಸಿಡ್‍ಗೂ ಈ ದೇಶದ ಯುವ ಸಮೂಹಕ್ಕೂ ಸಂಬಂಧ ಇದೆ. ಜಗತ್ತಿನ ಎಲ್ಲೇ ಆಗಲಿ, ಆಸಿಡ್ ಎರಚು ವವರು ಮತ್ತು ಅದಕ್ಕೆ ಬಲಿಯಾಗುವವರೆಲ್ಲ ಯುವಕ ಯುವತಿಯರೇ. ಮಾತ್ರವಲ್ಲ, ವಿದ್ಯಾಭ್ಯಾಸ ಪಡೆದ ಶಿಕ್ಷಿತ ವರ್ಗವೇ ಇಂಥ ಪ್ರಕರಣಗಳಲ್ಲಿ ಕಾಣಿಸಿಕೊಳ್ಳುತ್ತಿದೆ. 1982ರಲ್ಲಿ ಭಾರತದಲ್ಲಿ ಮೊತ್ತ ಮೊದಲ ಆಸಿಡ್ ಪ್ರಕರಣ ದಾಖಲಾಯಿತು. ಆ ಬಳಿಕ, ಆಸಿಡ್ ಸಂತ್ರಸ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ಇಷ್ಟಕ್ಕೂ, ಆಸಿಡ್ ದಾಳಿಗಳಿಗೆ ಮುಖ್ಯ ಕಾರಣವೇ ಪ್ರೀತಿ, ಪ್ರೇಮ, ದ್ವೇಷಗಳು. ಮಾರುಕಟ್ಟೆಯಲ್ಲಿ ಹೈಡ್ರೋಕ್ಲೋರಿಕ್‍ನಂಥ ಆಸಿಡ್ ಸುಲಭ ದರದಲ್ಲಿ ತರಕಾರಿಗಳಂತೆ ಮಾರಾಟಕ್ಕಿರುವಾಗ, ಮುವಾಹಿದಿಯಂಥ ವ್ಯಕ್ತಿಯೊಬ್ಬ ಹುಚ್ಚು ದ್ವೇಷದಲ್ಲಿ ಅದನ್ನು ಬಳಸಲಾರನೇ? ಒಂದು ಕಡೆ ಮುಕ್ತ ಸಂಸ್ಕøತಿ, ಒಪ್ಪಿತ ಜೀವನ ಶೈಲಿಯು ಈ ದೇಶದಲ್ಲಿ ದಿನೇ ದಿನೇ ಜನಪ್ರಿಯವಾಗುತ್ತಿದೆ. ಇನ್ನೊಂದೆಡೆ, ಮಹಿಳೆಯರ ಪಾಲಿಗೆ ಅಪಾಯಕಾರಿಯಾಗಿರುವ ರಾಷ್ಟ್ರಗಳ ಪೈಕಿ ಭಾರತಕ್ಕೆ 4ನೇ ಸ್ಥಾನವಿದೆ. ನಿಜವಾಗಿ, ಆಸಿಡ್ ಎರಚುವುದರಿಂದ ಒಂದು ಹೆಣ್ಣು ಮಗುವಿನ ಮುಖ ವಿರೂಪವಷ್ಟೇ ಆಗುವುದಲ್ಲ, ಒಂದು ಸಮೂಹದ ವಿರೂಪ ಆಲೋಚನೆಗೂ ಅದು ಸಾಕ್ಷಿ ನುಡಿಯುತ್ತದೆ. ಇಂಥ ಆಲೋಚನೆಗಳನ್ನು ತಡೆಗಟ್ಟಲು ಮೂರು ವರ್ಷಗಳ ಜೈಲು ಶಿಕ್ಷೆಯಿಂದ ಸಾಧ್ಯವೇ? ಕಣ್ಣಿಗೆ ಕಣ್ಣು ಅನ್ನುವ ಶಿಕ್ಷಾ ಮಾದರಿಯನ್ನು ಪುರಾತನ ಕಾಲದ್ದೆಂದು ತಳ್ಳಿ ಹಾಕುವುದು ಸುಲಭ. ಆದರೆ, ಕಳೆದು ಹೋದ ಮುಖ, ಕಣ್ಣು, ಸೌಂದರ್ಯ ಮತ್ತು ಭವಿಷ್ಯವನ್ನು ಅಮೀನಾ ಬಹ್ರಾಮಿಗೆ, ಪ್ರೀತಿರತಿಗೆ, ಮುಖರ್ಜಿಗೆ ಮತ್ತು ಇಂಥ ಅಸಂಖ್ಯ ಹೆಣ್ಣು ಮಕ್ಕಳಿಗೆ ಮರಳಿಸುವವರಾದರೂ ಯಾರು? ಇರಾನಿನಲ್ಲಿ ಇವತ್ತು ಆಸಿಡ್ ಪ್ರಕರಣಗಳು ಇಲ್ಲವೇ ಇಲ್ಲ ಅನ್ನುವಷ್ಟು ಅಪರೂಪವಾಗಿರುವುದಕ್ಕೆ ಅಲ್ಲಿಯ ಶಿಕ್ಷಾ ಮಾದರಿಯೂ ಒಂದು ಕಾರಣ ಎಂಬುದು ಸುಳ್ಳೇ?
   2012ರಲ್ಲಿ ಸೇವಿಂಗ್ ಫೇಸ್ ಎಂಬೊಂದು ಡಾಕ್ಯುಮೆಂಟರಿ ಸಿನಿಮಾ ಪಾಕ್ ಮತ್ತು ಅಮೇರಿಕಾಗಳಲ್ಲಿ ಬಿಡುಗಡೆಯಾಯಿತು. ಶರ್ಮೀನ್ ಮತ್ತು ಡ್ಯಾನಿಯಲ್ ಜಂಗ್ ಎಂಬವರ ನಿರ್ದೇಶನದಲ್ಲಿ ತಯಾರಾದ ಈ 40 ನಿಮಿಷಗಳ ಡಾಕ್ಯುಮೆಂಟರಿಯಲ್ಲಿ ಝಾಕಿಯಾ ಮತ್ತು ರುಕ್ಸಾನ ಎಂಬ ಆಸಿಡ್ ಪೀಡಿತ ಮಹಿಳೆಯರ ಮನಮಿಡಿ ಯುವ ಕಥೆಯಿದೆ. ಲಂಡನ್ನಿನಲ್ಲಿರುವ ಪಾಕಿಸ್ತಾನಿ ಮೂಲದ ಪ್ಲಾಸ್ಟಿಕ್ ಸರ್ಜನ್ ಡಾ| ಮುಹಮ್ಮದ್ ಜವ್ವಾದ್‍ರು ಆಸಿಡ್ ಸರ್ಜರಿ ನಡೆಸಲು ಪಾಕ್‍ಗೆ ಬರುವ ಕಥೆಯ ಸುತ್ತ ಈ ಡಾಕ್ಯುಮೆಂಟರಿ ತಯಾರಾಗಿದೆ. ಅದೇನೇ ಇದ್ದರೂ, ಅಮೀನಾಳಂಥ ಹೆಣ್ಣು ಮಕ್ಕಳು ವಿರೂಪಗೊಂಡ ಮುಖ, ದೃಷ್ಟಿಕಳಕೊಂಡ ಕಣ್ಣು, ಸುಕ್ಕುಗಟ್ಟಿದ ಚರ್ಮದ ಜೊತೆ ಪಡಬಾರದ ಸಂಕಟಗಳೊಂದಿಗೆ ಜಗತ್ತಿನಾದ್ಯಂತ ಬದುಕುತ್ತಿದ್ದಾರೆ. ತಿನ್ನಲಾಗದ, ಕುಡಿಯಲಾಗದ, ಇತರರನ್ನು ಭೇಟಿಯಾಗಲಾಗದ, ಪ್ರತಿಕ್ಷಣ ನೋವನ್ನು ಅನುಭವಿಸುತ್ತಾ ಅವರು ಆಯುಷ್ಯ ಕಳೆಯುತ್ತಿದ್ದಾರೆ. ಇಂಥವರ ಎದುರು ಆಸಿಡ್ ಎರಚಿದವರು 2-3 ವರ್ಷಗಳ ಬಳಿಕ ಯಾವ ಅಂಗ ಊನತೆಯೂ ಇಲ್ಲದೇ ಸ್ವಚ್ಛಂದವಾಗಿ ತಿರುಗಾಡುವುದೆಂದರೆ, ಏನೆನ್ನಬೇಕು? ಅದು ಸಂತ್ರಸ್ತರ ಪಾಲಿಗೆ ಎರಡನೇ ಬಾರಿ ಆಸಿಡ್ ಎರಚಿದಂತಲ್ಲವೇ? ‘ಕಣ್ಣಿಗೆ ಕಣ್ಣು’ ತಪ್ಪು ಅನ್ನುವ ಜಗತ್ತಿನಲ್ಲಿ ಕಣ್ಣೇ ಕಳಕೊಂಡ, ನಾಲಗೆಯೇ ಇಲ್ಲವಾದ ಹೆಣ್ಣು ಮಕ್ಕಳಿಗೆ ಅವುಗಳನ್ನು ಯಾರು ಮರಳಿಸುತ್ತಾರೆ? ಹೇಗೆ ಮರಳಿಸುತ್ತಾರೆ?


No comments:

Post a Comment