Tuesday, April 30, 2013

A ಗ್ರೇಡ್ ಪಡೆದೂ ಏಟು ತಿಂದ ಮಗಳನ್ನು ನೆನೆದು..

   “...ನನ್ನನ್ನು ಯಾವಾಗಲೂ ಕಾಡುವ ಹುಡುಗ ಆತ. ಹುಡುಗ ಅನ್ನುವುದಕ್ಕಿಂತ ಮಗು ಅನ್ನಬಹುದೇನೋ? ಇಷ್ಟಕ್ಕೂ, 8 ವರ್ಷ ಪ್ರಾಯಕ್ಕೆ ಹುಡುಗ ಎಂಬ ಪದ ಬಳಕೆಯು ಭಾರ ಆಗಬಹುದಲ್ಲವೇ? ನನ್ನ ವೃತ್ತಿ ಬದುಕಿನಲ್ಲಿ ಅಂಥದ್ದೊಂದು ವಿದ್ಯಾರ್ಥಿಯನ್ನು ನಾನು ಕಂಡೇ ಇಲ್ಲ. ಆತನ ಮುಖದಲ್ಲಿ ನಗುವನ್ನು ಪತ್ತೆ ಹಚ್ಚಲು ನನಗೆ ಈ ವರೆಗೂ ಸಾಧ್ಯವಾಗಿಲ್ಲ. ನಗುವೇ ಇಲ್ಲದ ಮಗು ಆತ. ಬೆಳಗ್ಗೆ ಬಂದು ಕ್ಲಾಸಲ್ಲಿ ಕೂತರೆ ಸಂಜೆ ಮನೆಗೆ ಹೋಗುವ ವರೆಗೂ ಮುಖ ಬಿಗಿದುಕೊಂಡೇ ಇರುತ್ತಿದ್ದ. ಭಯ, ನಿರಾಶೆ, ನಿರ್ವಿಕಾರ ತುಂಬಿದ ಮುಖ. ಬಿಸಿಲಿನಲ್ಲಿ ಆಟ ಆಡಿದ ಕಾರಣದಿಂದಾಗಿ ಮುಖ ಕೆಂಪು ಕೆಂಪಾಗಿದ್ದರೂ ತುಟಿಗಳನ್ನು ಕಚ್ಚಿ ಹಿಡಿದೇ ಕ್ಲಾಸಲ್ಲಿ ಕೂರುತ್ತಿದ್ದ. 8 ವರ್ಷದ ಮಕ್ಕಳೆಲ್ಲಾ ಹೀಗಿರುತ್ತಾರಾ? ನಗು, ಹರಟೆ, ತಮಾಷೆ, ಜಗಳಗಳೆಲ್ಲ ಆ ಪ್ರಾಯದಲ್ಲಿ ಸಾಮಾನ್ಯ ತಾನೇ? ಹೀಗಿರುವಾಗ, ಈ ಮಗು ಮಾತ್ರ ನಗುವುದನ್ನೇ ಮರೆತಂತೆ, ತುಟಿ ಬಿಗಿ ಹಿಡಿದು ಪಾಠ ಕೇಳುವುದನ್ನು ನಾನು ಗಮನಿಸುತ್ತಲೇ ಇದ್ದೆ. ಹಾಗಂತ, ನನ್ನ ಜೊತೆ ಕ್ಲಾಸಿನಲ್ಲಿ ಮುಕ್ತವಾಗಿ ಬೆರೆಯದಂತೆ ಮಕ್ಕಳನ್ನು ನಾನು ನಿರ್ಬಂಧಿಸಿಟ್ಟಿದ್ದೇನೆ ಎಂದಲ್ಲ. ನನ್ನ ಸೀರೆಯ ಸೆರಗು ಹಿಡಿದು ಮಕ್ಕಳು ಆಡುವಷ್ಟು ನಾನು ಕ್ಲಾಸಿನಲ್ಲಿ ಮಗುವಾಗುತ್ತಿದ್ದೆ. ಮಕ್ಕಳ ನಗು, ಹರಟೆ, ಮುದ್ದು ಮಾತುಗಳನ್ನೆಲ್ಲ ಅನುಭವಿಸುವ ಮನಸ್ಸನ್ನೂ ಹೊಂದಿದ್ದೆ. ಆದರೂ ನಾನು ಈ ಮಗುವಿನ ಮನಸ್ಸಿನೊಳಗೆ ಇಣುಕಿ ನೋಡುವ ಪ್ರಯತ್ನವನ್ನು ಮಾಡಿಯೇ ಇಲ್ಲ. ಬಹುಶಃ ನನ್ನ ಅಸಡ್ಡೆಯೋ, ಕೆಲಸದ ಒತ್ತಡವೋ ಅಥವಾ ಇನ್ನೇನೋ ಕಾರಣಗಳನ್ನು ಕೊಟ್ಟರೂ ಅದು ಸಮರ್ಥನೆ ಆಗದು ಎಂಬುದು ನನಗೆ ಗೊತ್ತು. ಆ ಮಗುವಿನ ಮಟ್ಟಿಗೆ ನಾನು ತಪ್ಪು ಮಾಡಿದೆನೋ ಎಂಬೊಂದು ಅಳುಕು ಈಗಲೂ ನನ್ನನ್ನು ಕಾಡುತ್ತಿದೆ. ಆ ಮಗುವಿಗೆ ಹೋಲಿಸಿದರೆ ಆತನ ಅಣ್ಣ ತುಂಬಾ ಹುಷಾರು. ಪ್ರತಿದಿನ ತಾಯಿಯೊಂದಿಗೆ ಬರುವ ಈತ ಮಾತ್ರ ಹೀಗೆ..
   ಪ್ರಾಥಮಿಕ ಶಾಲೆಯ ಅಧ್ಯಾಪಕಿ ಮಿಣಿ ಹೇಳುತ್ತಾ ಹೋಗುತ್ತಾರೆ..
ಮಕ್ಕಳು ಅಧ್ಯಾಪಕರನ್ನು ಅತ್ಯಂತ ಹೆಚ್ಚು ಹಚ್ಚಿಕೊಳ್ಳುವುದು ಯಾವಾಗ ಗೊತ್ತೇ? ಪ್ರೈಮರಿಯಲ್ಲಿ. ತಾಯಿಯ ಮಡಿಲಿನಿಂದ ಆಗಷ್ಟೇ ಎದ್ದು ಬರುವ ಮಕ್ಕಳಿಗೆ ಅಧ್ಯಾಪಕಿಯು ತಾಯಿಯಂತೆ ಕಾಣುವುದರಲ್ಲಿ ಅಚ್ಚರಿಯೇನೂ ಅಲ್ಲ. ಆ ವರೆಗೆ ಮಕ್ಕಳು ಮನೆಯಲ್ಲಿ ತಾಯಿಯೊಂದಿಗೇ ಬೆಳೆದಿರುತ್ತಾರೆ. ಇದೀಗ ಬೆಳಗ್ಗಿನಿಂದ ಸಂಜೆಯ ತನಕ ತಾಯಿಯಿಂದ ಬೇರ್ಪಟ್ಟು ಬದುಕುವ ಸಂದರ್ಭ ಬಂದಾಗ ಮಗು ಆ ವಾತಾವರಣಕ್ಕೆ ಹೊಂದಿಕೊಳ್ಳಲು ಚಡಪಡಿಸುತ್ತದೆ. ತಾಯಿ ಸಿಗದೇ ಹೋದಾಗ ಅದು ಅಧ್ಯಾಪಕಿಯಲ್ಲಿ ಆ ತಾಯಿಯನ್ನು ಹುಡುಕತೊಡಗುತ್ತದೆ. ಅಧ್ಯಾಪಕಿಯು ತಾಯಿಯಂತೆಯೇ ಪ್ರೀತಿ, ಕಕ್ಕುಲತೆ, ಅಲಿಂಗನ ಮಾಡಬೇಕೆಂದು ಅದು ಬಯಸುತ್ತದೆ. ಅಂದಹಾಗೆ, ಅಧ್ಯಾಪಕಿ ಹತ್ತಿರ ಕರೆದರೆ, ಮಗು ದೂರ ನಿಲ್ಲುವುದು ಕಡಿಮೆ. ಅಧ್ಯಾಪಕಿಗೆ ಚಾಚಿಕೊಂಡೋ ಅವರ ಮೇಲೆ ಭಾರ ಹಾಕಿಯೋ ಅವು ನಿಲ್ಲುತ್ತವೆ. ಯಾಕೆ ಹೀಗೆ ಎಂದರೆ, ತಾಯಿಯೊಂದಿಗಿನ ವರ್ತನೆಯ ಗುಂಗಿನಿಂದ ಅದು ಹೊರಬಂದಿರುವುದಿಲ್ಲ. ಶಾಲೆಯಲ್ಲೂ ಅದಕ್ಕೆ ಓರ್ವ ತಾಯಿ ಬೇಕು ಅಥವಾ ಹಾಗೆ ಪ್ರೀತಿಸುವ ಅಧ್ಯಾಪಕಿ ಬೇಕು. ಆದರೆ ಮಗು ಬೆಳೆಯುತ್ತಾ ಹೋದಂತೆ ಅಧ್ಯಾಪಕರೊಂದಿಗೆ ಅಂತರವೂ ಹೆಚ್ಚುತ್ತಾ ಹೋಗುತ್ತದೆ. ಅಧ್ಯಾಪಕಿ ಮತ್ತು ತಾಯಿಯ ನಡುವಿನ ಅಂತರ, ಸಂಬಂಧಗಳಲ್ಲಿನ ವ್ಯತ್ಯಾಸಗಳನ್ನು ಮಗು ತಿಳಿಯುತ್ತಾ, ಪಾಲಿಸುತ್ತಾ ಬೆಳೆಯುತ್ತದೆ.
   ‘..ನಾನು ಪ್ರಸವ ರಜೆಯನ್ನು ಪಡಕೊಂಡು ಶಾಲೆಯಿಂದ ಹೊರಬಂದೆ. ಮೆಟ್ಟಿಲು ಇಳಿಯುವಾಗ ಮನಸ್ಸು ಭಾರವಾಗುತ್ತಿತ್ತು. ನನ್ನ ಜಾಗಕ್ಕೆ ತಾತ್ಕಾಲಿಕವಾಗಿ ಇನ್ನೋರ್ವ ಅಧ್ಯಾಪಕರನ್ನು ನೇಮಿಸಲಾಗಿತ್ತು. ನಾನು ನನ್ನ ಮಗುವಿನೊಂದಿಗೆ ಮಗುವಾದೆ. 6 ತಿಂಗಳು ಹೇಗೆ ಕಳೆಯಿತೆಂಬುದೇ ಗೊತ್ತಾಗಲಿಲ್ಲ. ಮತ್ತೆ ಕೆಲಸಕ್ಕೆ ಸೇರಿಕೊಂಡೆ. ಸ್ಟಾಫ್ ರೂಮ್‍ಗೆ ಹೋಗುವಾಗ ಅಲ್ಲಿಂದ  ಜೋರಾದ ನಗು ಕೇಳಿ ಬರುತ್ತಿತ್ತು. ನಡುನಡುವೆ ಆ ಮಗುವಿನ ಹೆಸರೂ. ನಾನು ಕುತೂಹಲಗೊಂಡೆ. ಆ ನಗದ ಮಗುವಿನ ಬಗ್ಗೆ ಮಾಹಿತಿಗಳನ್ನು ಕೇಳಿದೆ. ಮಗು ತಲೆ ಸುತ್ತು, ವಾಂತಿ, ಹೊಟ್ಟೆ ನೋವಿನಿಂದ ಬಳಲುತ್ತಿರುವ ಸಂಗತಿಯನ್ನು ಸಹ ಅಧ್ಯಾಪಕಿ ನನಗೆ ವಿವರಿಸಿದರು. ಕ್ಲಾಸಿನಲ್ಲಿ ಇರುವಾಗಲೇ ಎಷ್ಟೋ ಬಾರಿ ತಲೆ ಸುತ್ತು ಬಂದು, ವಾಂತಿ ಮಾಡಿಕೊಂಡ ಕತೆ. ಹೆತ್ತವರು ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡಿದ ಕತೆ. ಹಲವು ವೈದ್ಯರುಗಳಿಗೆ ತೋರಿಸಿದರೂ ರೋಗ ಏನೆಂದೇ ಗೊತ್ತಾಗದೇ, ಅನಾರೋಗ್ಯ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲಾಗದೇ ಪರೀಕ್ಷೆಗಳು, ಸ್ಕ್ಯಾನಿಂಗ್‍ಗಳ ವರದಿಗಳೊಂದಿಗೆ ಕ್ಲಿನಿಕ್‍ಗಳಿಗೆ ಅಲೆದಾಡಿದ ಅಪ್ಪನ ಕತೆ. ಮಗುವಿನಿಂದಾಗಿ ದುಡಿಯಲೂ ಆಗದೇ ಒದ್ದಾಡುವ ಹೆತ್ತವರ ಕತೆ. ಕೊನೆಗೆ, ಯಾವ ರೋಗ ಲಕ್ಷಣಗಳೂ ಕಾಣಿಸದಾದಾಗ ಮಾನಸಿಕ ತಜ್ಞ(ಸೈಕ್ರಿಯಾಟ್ರಿಸ್ಟ್)ರಿಗೆ ತೋರಿಸುವಂತೆ ವೈದ್ಯರು ಸಲಹೆ ಮಾಡಿದ್ದು, ಆ ಮಗು ಮತ್ತು ಹೆತ್ತವರೊಂದಿಗೆ ಮಾನಸಿಕ ತಜ್ಞರು ದೀರ್ಘ ಸಮಯ ಮಾತಾಡಿದ್ದು ಹಾಗೂ, ‘ಈ ಮಗುವಿನ ಟೀಚರ್ ಮರಳಿ ಶಾಲೆಗೆ ಬಂದ ಬಳಿಕವೂ ಈ ರೋಗ ಕಾಣಿಸಿಕೊಂಡರೆ ನನ್ನ ಬಳಿಗೆ ಬನ್ನಿ..' ಎಂದು ಅವರು ಹೇಳಿ ಕಳುಹಿಸಿದ್ದು.. ಎಲ್ಲವನ್ನೂ ಸಹ ಅಧ್ಯಾಪಕರು ನನಗೆ ವಿವರಿಸಿದರು. ಮರುದಿನ ನಾನು ಶಾಲೆಗೆ ಹೋದಾಗ ಆ ತಾಯಿ ಭಾರೀ ನಿರೀಕ್ಷೆಯೊಂದಿಗೆ ನನ್ನನ್ನು ಕಾದು ನಿಂತಿದ್ದರು. ಆಕೆಗೆ ಹೇಳಿಕೊಳ್ಳುವುದಕ್ಕೆ ಧಾರಾಳ ವಿಷಯಗಳಿದ್ದುವು. ಆಕೆಯ ಜೊತೆಗಿದ್ದ ಮಗನಾದರೋ ಈ ಹಿಂದಿನಂತೆಯೇ ಬಿಗಿದ ಮುಖದೊಂದಿಗೆ ತಣ್ಣಗೆ ಇದ್ದ. ನಾನು ಇಲ್ಲದಿದ್ದ ಸಂದರ್ಭದಲ್ಲಿ ಅನುಭವಿಸಿದ ತೊಂದರೆಗಳನ್ನು ಆ ತಾಯಿ ಪಟ್ಟಿ ಮಾಡಿ ಹೇಳತೊಡಗಿದರು. ಮಗುವಿನ ರೋಗಕ್ಕಾಗಿ ಕಣ್ಣೀರಾದರು. ಇನ್ನೂ ಈ ರೋಗ ಹೀಗೆಯೇ ಮುಂದುವರಿದರೆ ಇಲ್ಲಿಂದ TC  ಪಡಕೊಂಡು ಬೇರೆ ಸ್ಕೂಲಿಗೆ ಹೋಗುವುದು ಇಲ್ಲವೇ ಒಳ್ಳೆಯ ಆಸ್ಪತ್ರೆಯಲ್ಲಿ ತಪಾಸಿಸಿ ಚಿಕಿತ್ಸೆ ನಡೆಸುವುದು.. ಇವೆರಡೇ ನನ್ನ ಮುಂದಿರುವ ಆಯ್ಕೆಗಳು ಎಂದು ಅವರು ಕಣ್ಣೀರು ತುಂಬಿ ಹೇಳಿದರು. ನಾನೂ ಒಮ್ಮೆ ಬೆವೆತು ಹೋದೆ. ಯಾಕೆ ಹೀಗೆ, ಏನಾಗಿರಬಹುದು ಎಂಬುದು ನನ್ನ ಅಂದಾಜಿಗೂ ಹೊಳೆಯಲಿಲ್ಲ. ಆದರೂ ಧೈರ್ಯ ತಂದುಕೊಂಡೆ. ‘ಇರಲಿ ಏನೂ ಆಗಲ್ಲ. ನೀವು ಹೋಗಿ..' ಎಂದು ಬೆನ್ನು ತಟ್ಟಿ ಅವರನ್ನು ಬೀಳ್ಕೊಟ್ಟೆ. ಕ್ಲಾಸಿಗೆ ಹೋದೆ. ನಂಬಲಾಗಲಿಲ್ಲ. ಆತ ಆ ಹಳೆಯ ಮಗುವೇ. ಆವತ್ತು ಮಾತ್ರವಲ್ಲ, ಉಳಿದ ಎಲ್ಲ ದಿನಗಳಲ್ಲೂ ಆತ ಯಾವ ರೋಗ ಲಕ್ಷಣಗಳೂ ಇಲ್ಲದೇ ಈ ಹಿಂದಿನಂತೆಯೇ ಕಾಣಿಸಿಕೊಂಡ. ವಾಂತಿಯೂ ಇಲ್ಲ. ತಲೆ ಸುತ್ತೂ ಇಲ್ಲ..
   ಈ ಘಟನೆ ನಡೆದು 5 ವರ್ಷಗಳೇ ಕಳೆದಿವೆ. ನಾನೀಗ ಆ ಸ್ಕೂಲಿನಲ್ಲೂ ಇಲ್ಲ. ಬೇರೆಡೆ ವರ್ಗವಾಗಿ ಹೋಗಿದ್ದೇನೆ. ಆದರೆ ಅಧ್ಯಾಪಕ ವೃತ್ತಿಯಲ್ಲಿ ಒಂದು ಪಾಠವಾಗಿ ಈಗಲೂ ಅದು ನನ್ನ ಮನಸ್ಸಿನಲ್ಲಿದೆ. ಒಂದು ಪ್ರೈಮರಿ ಸ್ಕೂಲಿನ ಮಗುವಿಗೆ ಅಧ್ಯಾಪಕಿ ಯಾರಾಗಿರಬೇಕು ಎಂಬ ಪಾಠ. ಆದರೂ ಈ ಸಂದರ್ಭದಲ್ಲಿ ನನ್ನ ಹೃದಯ ಭಾರವಾಗುತ್ತದೆ. ಕಣ್ಣು ತುಂಬುತ್ತದೆ. ಯಾಕೆಂದರೆ, ಆ ಮಗು ನನ್ನಲ್ಲಿ ಇಟ್ಟಿದ್ದ ವಿಶ್ವಾಸ ಮತ್ತು ಪ್ರೀತಿಯನ್ನು ಅಷ್ಟೇ ತೀವ್ರತೆಯಿಂದ ಮರಳಿಸಿಕೊಡಲು ನನ್ನಿಂದ ಸಾಧ್ಯವಾಗಿಲ್ಲ ಎಂಬುದಕ್ಕಾಗಿ. ನೀನು ಒಳ್ಳೆಯ ವಿದ್ಯಾರ್ಥಿ ಮಗು ಎಂದು ತಲೆ ನೇವರಿಸಿ
ಹೇಳುವ ಪ್ರಯತ್ನ ಮಾಡಿಲ್ಲ ಎಂಬುದಕ್ಕಾಗಿ..'
   ಕೇರಳದ ಮಿಣಿ ಎಂಬ ಈ ಅಧ್ಯಾಪಕಿಯು ಕಳೆದವಾರ ಬಿಚ್ಚಿಟ್ಟ ಈ  ಸಂಗತಿಗಳನ್ನು ಓದುತ್ತಾ ಹೋದಂತೆ ಮಿತ್ರ ರಾಘವೇಂದ್ರ ಹೆಬ್ಬಾರ್ ನೆನಪಾದರು. ತಮ್ಮ ಪಕ್ಕದ ಮನೆಯಲ್ಲಿ ನಡೆದ ಘಟನೆಯನ್ನು ಅವರು ಎಪ್ರಿಲ್ 11ರಂದು ಹೀಗೆ ಹಂಚಿಕೊಂಡಿದ್ದರು.
   49, 48, 47, 48, 46, 48.. ಇಷ್ಟು ಅಂಕಗಳನ್ನು ಪಡೆದ 4ನೇ ತರಗತಿಯ ಮಗಳಿಗೆ ಅಪ್ಪ ಬೆಲ್ಟ್ ನಿಂದ ಹೊಡೆಯುತ್ತಿದ್ದರು. ಆಕೆ ಜೋರಾಗಿ ಅಳುತ್ತಿದ್ದಳು. ಹಾಗಂತ ಈ ಮಗು ಇಷ್ಟು ಅಂಕಗಳನ್ನು ಪಡೆದದ್ದು ಒಟ್ಟು 100 ಮಾರ್ಕ್ಸ್ ನ ಪ್ರಶ್ನೆಪತ್ರಿಕೆಯಲ್ಲಿ ಎಂದು ಭಾವಿಸಬೇಡಿ. 50 ಅಂಕಗಳ ಒಟ್ಟು 6 ಪ್ರಶ್ನೆ ಪತ್ರಿಕೆಗಳಲ್ಲಿ ಆ ಮಗು ಪಡೆದ ಅಂಕಗಳವು. ಒಟ್ಟು 300ರಲ್ಲಿ 286 ಅಂಕ ಗಳನ್ನು ಪಡೆದ ಬಳಿಕವೂ ಮಗುವಿಗೆ ಏಟು ತಪ್ಪಲಿಲ್ಲ. 5 ವಿಷಯಗಳಲ್ಲಿA  ಮತ್ತು ಒಂದರಲ್ಲಿA+ ಗ್ರೇಡನ್ನು ಆ ಮಗು ಪಡೆದಿತ್ತು. ಇಷ್ಟಿದ್ದೂ ಏಟು ಯಾಕೆಂದರೆ, ಎಲ್ಲ ವಿಷಯಗಳಲ್ಲೂA+ ಬರಲೇಬೇಕೆಂದು ಅವಳ ಹೆತ್ತವರು ತಾಕೀತು ಮಾಡಿದ್ದರು. ಸಂಜೆ ತನ್ನ ಕೈ ಮತ್ತು ಕಾಲಿಗಾದ ಗಾಯವನ್ನು ಮಗು ತೋರಿಸಿದಾಗ ಮಿತ್ರ ಹೆಬ್ಬಾರರು ಕಂಗಾಲಾದರು..’
   ಮಕ್ಕಳನ್ನು ಮಕ್ಕಳಾಗಿ ಅನುಭವಿಸುವುದಕ್ಕೆ, ಅವರನ್ನು ಅವರ ಮಾರ್ಕು, ಸೌಂದರ್ಯ, ಜಾಣತನ, ಚುರುಕುತನಗಳ ಹೊರತಾದ ಕಾರಣಕ್ಕಾಗಿಯೂ ಪ್ರೀತಿಸುವುದಕ್ಕೆ ಹೆತ್ತವರು, ಅಧ್ಯಾಪಕರು ಅಥವಾ ಒಟ್ಟು ಸಮಾಜ ವಿಫಲವಾಗುತ್ತಲೇ ಇವೆ ಎಂಬುದನ್ನು ಇಂಥ ಹತ್ತು-ಹಲವು ಘಟನೆಗಳು ನಿತ್ಯ ಸಾಬೀತುಪಡಿಸುತ್ತಲೇ ಇವೆ. ದುರಂತ ಏನೆಂದರೆ, ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಮಕ್ಕಳಾಗಿ ಬೆಳೆಯುವುದಕ್ಕೆ ಅನೇಕ ಹೆತ್ತವರು ಅವಕಾಶವನ್ನೇ ಕೊಡುತ್ತಿಲ್ಲ ಎಂಬುದು. ತಮ್ಮ ಮಕ್ಕಳನ್ನು ಅಂಕದ ಕೋಳಿಯಂತೆ ಸ್ಪರ್ಧೆಗೆ ಸಜ್ಜುಗೊಳಿಸುವಲ್ಲಿ ಹೆಚ್ಚಿನೆಲ್ಲ ಪಾಲಕರು ಬ್ಯುಝಿಯಾಗಿ ಬಿಟ್ಟಿದ್ದಾರೆ. ತಾರೆ ಝಮೀನ್ ಪರ್, ವೇಕ್ ಅಪ್ ಸಿದ್‍ನಂಥ ಚಿತ್ರಗಳು, ಟೋಟೊ ಚಾನ್‍ನಂಥ ಕಾದಂಬರಿಗಳು ಈ ಮನಸ್ಥಿತಿಯನ್ನು ಬದಲಿಸಲು ಶ್ರಮಿಸಿವೆಯಾದರೂ ಅವುಗಳ ಪರಿಣಾಮ ಒಂದು ಹಂತದ ವರೆಗಷ್ಟೇ ಆಗಿವೆ. ಹೆಚ್ಚು ಅಂಕ ಯಾರು ಪಡೆಯುತ್ತಾರೋ ಅವರೇ ಅತ್ಯಂತ ಪ್ರತಿಭಾವಂತರು ಎಂಬ ನಂಬುಗೆ ಈಗಲೂ ಹೆಚ್ಚಿನ ಎಲ್ಲ ಪಾಲಕರಲ್ಲೂ ಇವೆ. ಸಮಾಜದ ನಿಲುವೂ ಬಹುತೇಕ ಹೀಗೆಯೇ. ಹಾಗಂತ ಎಲ್ಲ ಮಕ್ಕಳಿಗೂA+ ಗ್ರೇಡನ್ನೇ ಪಡೆಯಲು ಸಾಧ್ಯವಿದೆಯೇ? ಎಲ್ಲ ಮಕ್ಕಳೂ ಅತಿ ಬುದ್ಧಿವಂತರೂ ಜಾಣರೂ ಚುರುಕಿನವರೂ ಆಗಿರುತ್ತಾರಾ? ಪ್ರತಿಯೊಂದು ಮಗುವಿಗೂ ಅದರದ್ದೇ ಆದ ಇತಿ-ಮಿತಿಗಳೂ ಸಾಮರ್ಥ್ಯ -ಅಸಾಮರ್ಥ್ಯಗಳೂ ಇರುತ್ತವಲ್ಲವೇ? ಮಗುವಿನ ಸಾಮರ್ಥ್ಯ, ಒಲವುಗಳನ್ನು ನೋಡಿಕೊಂಡು ಅದಕ್ಕೆ ಪೂರಕವಾಗಿ ಕಾರ್ಯ ಯೋಜನೆಯನ್ನು ರೂಪಿಸಲು ಹೆತ್ತವರು ಮತ್ತು ಶಿಕ್ಷಕರು ಯಾಕೆ ಪದೇಪದೇ ವಿಫಲವಾಗುತ್ತಿದ್ದಾರೆ? ಕಲಿಕೆಯನ್ನೇಕೆ ನಾವು ‘ಕಷ್ಟ'ವಾಗಿ ಮಾರ್ಪಡಿಸಿ ಬಿಟ್ಟಿದ್ದೇವೆ? ಅದನ್ನು ಅನುಭವಿಸುತ್ತಾ, ಆಟದಂತೆ ಪ್ರೀತಿಸುತ್ತಾ ಬೆಳೆಯುವ ಒಂದು ವಾತಾವರಣವನ್ನು ನಾವೇಕೆ ತಯಾರಿಸುತ್ತಿಲ್ಲ? ಮಕ್ಕಳ ಆಸಕ್ತಿ, ನಿಲುವು, ಮಾತುಗಳೆಲ್ಲ ದೊಡ್ಡವರ ಆಸಕ್ತಿ, ಮಾತುಗಳಂತೆ ಇರಬೇಕೆಂದಿಲ್ಲವಲ್ಲ. ಮಕ್ಕಳು ಮಕ್ಕಳಂತಾಡದೆ ದೊಡ್ಡವರಂತಾಡಬೇಕೆಂದು ನಾವು ಬಯಸುವುದಾದರೂ ಏಕೆ? ಅವರ ಬಾಲ್ಯವನ್ನು ನಮ್ಮ ಉದ್ದೇಶದ ಈಡೇರಿಕೆಗಾಗಿ ಕಸಿಯುತ್ತೇವಲ್ಲ, ಸರಿಯೇ? ನ್ಯಾಯವೇ?
   ತನ್ನ ತರ್ಲೆ ಬುದ್ಧಿಗಾಗಿ ಒಂದನೇ ಕ್ಲಾಸಿನಿಂದ ಉಚ್ಛಾಟನೆಗೊಂಡ ಟೋಟೋಚಾನ್‍ನನ್ನು ಅದ್ಭುತ ವ್ಯಕ್ತಿಯಾಗಿ ಬೆಳೆಸುವ ಸಸುಕು ಕೊಬೆಯಾಚಿ ಎಂಬ ಮುಖ್ಯೋಪಾಧ್ಯಾಯಿನಿ, ನಗದ ಮಗುವನ್ನು ಅಪಾರವಾಗಿ ಪ್ರೀತಿಸಿದ ಅನಾಮಧೇಯ ಹೆತ್ತವರು ಮತ್ತು ಮಿಣಿ ಎಂಬ ಆ ಟೀಚರ್.. ಇಂಥವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾದರೆ ಅದೆಷ್ಟು ಚೆನ್ನ, ಅಲ್ಲವೇ?

No comments:

Post a Comment