Monday, October 1, 2012

ಇವರನ್ನೇ ದೇಶದ್ರೋಹಿಯಾಗಿಸಲು ಸಾಧ್ಯವಿರುವಾಗ, ಉಳಿದವರ ಬಗ್ಗೆ ಹೇಳುವುದಾದರೂ ಏನು?


ನಂಬಿ ನಾರಾಯಣನ್
          28 ವರ್ಷಗಳ ಕಾಲ ಪತ್ನಿ, ಮಕ್ಕಳಿಗೆ ಸಮಯವನ್ನು ಕೊಡದೆ ದೇಶಕ್ಕಾಗಿ, ಇಸ್ರೋದ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ISRO) ಅಭಿವೃದ್ಧಿಗಾಗಿ ದಣಿವರಿಯದೇ ದುಡಿದ ನನ್ನನ್ನೇ ದೇಶದ್ರೋಹಿ ಅಂದರಲ್ಲ, ಅವರನ್ನು ಹೇಗೆ ಸಹಿಸಿಕೊಳ್ಳುವುದು? ದುಡ್ಡಿಗಾಗಿ ದೇಶವನ್ನೇ ಮಾರಿದ ವಂಚಕ ಅಂದದ್ದನ್ನು ಹೇಗೆ ಜೀರ್ಣಿಸಿಕೊಳ್ಳುವುದು? ಪೊಲೀಸರನ್ನು ಬಿಡಿ, ಮಾಧ್ಯಮಗಳು ಬರೆದಿದ್ದಾದರೂ ಏನು? ದೇಶದ್ರೋಹಿ, ವಂಚಕ, ರಕ್ಷಣಾ ರಹಸ್ಯಗಳನ್ನು ಸೋರಿಕೆ ಮಾಡಿದವ, ಕಳ್ಳ.. ಎಂಬೆಲ್ಲಾ ಪದಗುಚ್ಛಗಳನ್ನು ಅವು ಎಷ್ಟು ಬಾರಿ ಪ್ರಯೋಗಿಸಿಲ್ಲ? ಹಾಗೆಲ್ಲ ಬರೆಯುವಾಗ ನಿಜವಾಗಿಯೂ ನಾನು ಆ ಪದಗಳಿಗೆ ಅರ್ಹನೇ ಎಂದು ಅವು ಆಲೋಚಿಸದಿದ್ದುದೇಕೆ? ಅಷ್ಟಕ್ಕೂ, ನಾನೇನೂ ಅಪರಿಚಿತ ವ್ಯಕ್ತಿ ಅಲ್ಲವಲ್ಲ. ಇಸ್ರೋದಲ್ಲಿ 28 ವರ್ಷಗಳಿಂದ ಕೆಲಸ ಮಾಡುತ್ತಿರುವ, ಎ.ಪಿ.ಜೆ. ಕಲಾಮ್‍ರ ಜೊತೆ ದುಡಿದಿರುವ ಮತ್ತು ಆವರೆಗೆ ಒಂದೇ ಒಂದು ಆರೋಪವೂ ಇರದ ವ್ಯಕ್ತಿತ್ವವನ್ನು ಅಷ್ಟು ಪಕ್ಕನೆ ದೇಶದ್ರೋಹಿ ಎಂದು ಮುದ್ರೆಯೊತ್ತುವುದಕ್ಕೆ ಮಾಧ್ಯಮಗಳಿಗೆ ಮನಸಾದರೂ ಹೇಗೆ ಬಂತು? ವಿಚಾರಣೆಯ ಹೆಸರಲ್ಲಿ ಮಾಧ್ಯಮಗಳಲ್ಲಿ ದಿನಂಪ್ರತಿ ಬರುತ್ತಿದ್ದ ಸುದ್ದಿಗಳ ಹಿಂದೆ ಯಾರಿದ್ದರು? ಅವರ ಉದ್ದೇಶ ಏನಿತ್ತು? ಚಿಕ್ಕಂದಿನಲ್ಲಿ ನನ್ನ ಅಮ್ಮ ಚಂದ್ರನನ್ನು ತೋರಿಸಿ, ನೀನು ಊಟ ಮಾಡಿದರೆ ಆ ಚಂದ್ರನನ್ನು ಕೊಡುವೆ ಎಂದು ಆಸೆ ಹುಟ್ಟಿಸುತ್ತಿದ್ದರು. ದೊಡ್ಡವನಾದ ಮೇಲೆ ನಾನೇ ಒಂದು ದಿನ ಅಮ್ಮನ ಹೆಗಲು ಮುಟ್ಟಿ, ಆ ಚಂದ್ರನನ್ನು ನಿನಗೆ ನಾನು ಕೊಡುವೆ ಅಂದಿದ್ದೆ. ಚಂದ್ರನ ಬಗ್ಗೆ, ಆಕಾಶಕಾಯಗಳ ಬಗ್ಗೆ ನನ್ನಲ್ಲಿ ಅಷ್ಟೊಂದು ಕುತೂಹಲ ಇತ್ತು. ಈ ದೇಶದ ರಾಕೆಟ್‍ಗಳನ್ನು ಆಕಾಶಕ್ಕೆ ಉಡಾಯಿಸುವ ಕ್ರಯೋಜನಿಕ್ ಎಂಜಿನ್‍ಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ನಾನೇ ಆ ಎಂಜಿನ್‍ಗಳ ರಹಸ್ಯವನ್ನು 'ಶತ್ರು'ಗಳಿಗೆ ಮಾರಾಟ ಮಾಡಿರುವೆನೆಂದು ಹೇಳಿದವರಿಗೆ ಯಾವ ಶಿಕ್ಷೆಯಿದೆ? ಇಸ್ರೋದ ಹೆಮ್ಮೆಯ ವಿಜ್ಞಾನಿ ಎಂಬ ಪಟ್ಟದಿಂದ ದೇಶದ್ರೋಹಿ ವಿಜ್ಞಾನಿ ಎಂಬ ಪಟ್ಟಕ್ಕೆ ಇಳಿಸಿದ ವ್ಯಕ್ತಿಗಳಿಗೆ ಯಾಕೆ ಒಂದು ದಿನದ ಮಟ್ಟಿಗಾದರೂ ಶಿಕ್ಷೆಯಾಗಿಲ್ಲ? ನನಗಾದ ಅವಮಾನ, ಸಂಕಟ, ಬೇಗುದಿಗಳನ್ನು ಆರೋಪ ಹೊರಿಸಿದವರು, ಅದನ್ನು ರಸವತ್ತಾದ ಕತೆಯಾಗಿಸಿ ಮಾರಾಟ ಮಾಡಿದವರೆಲ್ಲ ಹಂಚಿಕೊಳ್ಳಲು ಸಿದ್ಧರಿದ್ದಾರಾ? ಅಮೇರಿಕದ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದ 25 ವಿದ್ಯಾರ್ಥಿಗಳಲ್ಲಿ ಮೊದಲಿಗನಾಗಿ ನಾನು ತೇರ್ಗಡೆಗೊಂಡಾಗ ಅಮೇರಿಕವೇ ಪ್ರಭಾವಿತಗೊಂಡಿತ್ತು. ನಾಸಾದಲ್ಲಿ (ಅಮೇರಿಕದ ಬಾಹ್ಯಾಕಾಶ ಸಂಸ್ಥೆ) ಉದ್ಯೋಗದ ಭರವಸೆ ನೀಡಿತ್ತಲ್ಲದೆ, ಅಮೇರಿಕನ್ ಪೌರತ್ವದ ಆಮಿಷವನ್ನೂ ಒಡ್ಡಿತ್ತು. ಅವೆಲ್ಲವನ್ನೂ ತಿರಸ್ಕರಿಸಿ ಇಸ್ರೋದಲ್ಲೇ ಮುಂದುವರಿಯಲು ತೀರ್ಮಾನಿಸಿದ ನಾನು ದೇಶದ್ರೋಹಿಯಾದೇನೇ? ದುಡ್ಡಿಗಾಗಿ ದೇಶದ ರಹಸ್ಯಗಳನ್ನು ಮಾರಲು ಮುಂದಾದೇನೇ..
          ಹಾಗಂತ, ಈ ದೇಶದ ಪ್ರಮುಖ ವಿಜ್ಞಾನಿಗಳಲ್ಲಿ ಓರ್ವರೆಂದು ಗುರುತಿಸಿಕೊಂಡಿರುವ ನಂಬಿ ನಾರಾಯಣನ್ ಪ್ರಶ್ನಿಸುತ್ತಾ ಹೋಗುತ್ತಾರೆ..
       1994 ನವೆಂಬರ್ 30ರಂದು ಓರ್ವ ಉಗ್ರವಾದಿಯ ಮನೆಗೆ ನುಗ್ಗುವಂತೆ ಪೊಲೀಸರು ನನ್ನ ಮನೆಗೆ ನುಗ್ಗಿದರು. ಮಾತಿಗೂ ಅವಕಾಶ ಕೊಡದೇ ಬಂಧಿಸಿದರು. ಹೊರಡುವುದಕ್ಕಿಂತ ಮೊದಲು ನಾನೊಮ್ಮೆ ಪತ್ನಿಯ ಕಡೆಗೆ ತಿರುಗಿ ನೋಡಿದೆ. ಆಘಾತದಿಂದ ಕುಸಿದು ಬೀಳುವ ಹಂತದಲ್ಲಿದ್ದಳು ಆಕೆ. ಮತ್ತೊಮ್ಮೆ ನೋಡುವ ಧೈರ್ಯ ನನ್ನಲ್ಲಿರಲಿಲ್ಲ. ಮಾಲ್ಡೀವ್ಸ್ ನ ಇಬ್ಬರು ಗೂಢಚರರಾದ ಮರ್ಯಮ್ ರಶೀದಾ ಮತ್ತು ಫೌಝಿಯ ಹಸನ್‍ರಿಗೆ ಕ್ರಯೋಜನಿಕ್ ಎಂಜಿನ್‍ಗಳ ರಹಸ್ಯವನ್ನು ಕೋಟ್ಯಂತರ ರೂಪಾಯಿಗೆ ಮಾರಿದ್ದೇನೆಂಬುದು ನನ್ನ ಮೇಲಿನ ಆರೋಪವಾಗಿತ್ತು. ನಿಜವಾಗಿ ರಶೀದಳನ್ನು ನಾನು ನೋಡಿದ್ದೇ ವಿಚಾರಣೆಯ ಸಂದರ್ಭದಲ್ಲಿ. ಪೊಲೀಸರು ಮೊತ್ತಮೊದಲು ನನ್ನನ್ನು ಗೆಸ್ಟ್ ಹೌಸ್‍ನಲ್ಲಿ ಕೂರಿಸಿದರು. ಆ ಬಳಿಕ ಸರಣಿ ದೌರ್ಜನ್ಯಗಳು ಶುರುವಾದುವು. ದೇಹ ಕೆಂಪಾಯಿತು. ಅಂದಹಾಗೆ, ಗೂಂಡಾಗಳಂತಿದ್ದ ಆ ಮನುಷ್ಯರಿಗೆ ಕ್ರಯೋಜನಿಕ್‍ನ ಬಗ್ಗೆ, ವಿಜ್ಞಾನದ ಬಗ್ಗೆ ಗೊತ್ತಿದ್ದರಲ್ಲವೇ? 3 ದಿನಗಳ ಕಾಲ ಅವರ ನಿಂದನೆಯನ್ನು ಸಹಿಸಿದೆ. ಉಣ್ಣದೆ, ಮಲಗದೆ ಕಳೆದೆ. 3 ದಿನಗಳಾಗಿತ್ತಲ್ಲ, ಅಸಾಧ್ಯ ಬಾಯಾರಿಕೆಯಾಗಿತ್ತು. ನೀರು ಕೇಳಿದೆ. ದೇಶದ್ರೋಹಿಗೆ ನೀರಾ ಎಂದು ಸಿಟ್ಟಾಗಿ ಪೊಲೀಸನೊಬ್ಬ ಬೂಟುಗಾಲಿನಿಂದ ನನ್ನನ್ನು ತುಳಿದ. ನೆಲಕ್ಕುರುಳಿದೆ. ಬಿದ್ದಲ್ಲಿಂದ ಏಳಲು ಮತ್ತೆ ಮತ್ತೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಗಂಟೆಗಳ ಬಳಿಕ ಕುಳಿತು ಕೊಳ್ಳಲೆಂದು ಕುರ್ಚಿ ಕೇಳಿದೆ. ದೇಶದ್ರೋಹಿಗೆ ಕುರ್ಚಿ ಇಲ್ಲ ಅಂದ ಪೊಲೀಸನೊಬ್ಬ. ಇದೇ ಕೈಯಿಂದ ನಾನು ಆಕಾಶಕ್ಕೆ ರಾಕೆಟ್‍ಗಳನ್ನು ಹಾರಿಸಿದ್ದೆ. ಆದರೆ ಈಗ ಅಸಹಾಯಕನಾದೆನಲ್ಲ ಅಂತ ಅನಿಸುತ್ತಿದ್ದಾಗ ಕಣ್ಣು ತುಂಬಿ ಬರುತ್ತಿತ್ತು. ಕಾಲುಗಳು ಬಾತುಕೊಂಡವು. ನೀರು ಮತ್ತು ನಿದ್ದೆಯಿಲ್ಲದೇ ನಾನು ಕೋಣೆಯಲ್ಲಿ ಕುಸಿದು ಬಿದ್ದೆ. ಕೋರ್ಟು ನನ್ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರೂ ನಾನು ಪೊಲೀಸ್ ಕಸ್ಟಡಿಯಲ್ಲಿ ಇರಲೇ ಇಲ್ಲ. ವಿಚಾರಣೆಯ ನೆಪದಲ್ಲಿ ಯಾರ್ ಯಾರೋ ನನ್ನನ್ನು ಎಲ್ಲೆಲ್ಲಿಗೋ ಕೊಂಡೊಯ್ದು ದೌರ್ಜನ್ಯ ನಡೆಸಿದರು. ಒಮ್ಮೆ ಕತ್ತಲ ಕೋಣೆಯಲ್ಲಿ ಕೂರಿಸಿ ವಿಚಾರಣೆ ಪ್ರಾರಂಭಿಸಿದರು. ಮಧ್ಯ ಭಾಗದಲ್ಲಿ ಟೆಲಿಪೋನ್ ಇಟ್ಟಿದ್ದರು. ವಿಚಾರಣೆ ಪ್ರಾರಂಭವಾದ ಸಮಯದಿಂದ ಕೊನೆಯ ವರೆಗೂ ಆ ಫೋನ್‍ಗೆ ಒಂದೇ ಒಂದು ಕಾಲ್ ಬಂದಿರಲಿಲ್ಲ. ನಿಜವಾಗಿ, ರಿಸೀವರ್‍ನ ಅಡಿಯಲ್ಲಿ ಮೈಕ್ ಇಟ್ಟು ರಹಸ್ಯವಾಗಿ ನನ್ನ ಮಾತುಗಳನ್ನು ಪೊಲೀಸರು ದಾಖಲಿಸುತ್ತಿದ್ದರೆಂಬುದು ಗೊತ್ತಾಯಿತು. ಆ ಬಳಿಕ ವಿಚಾರಣೆಯ ಹೊಣೆಯನ್ನು ಸಿಬಿಐ ವಹಿಸಿಕೊಂಡಿತು. 50 ದಿನಗಳ ಕಾಲ ನಾನು ವೆಯ್ಯೂರ್ ಜೈಲಿನಲ್ಲಿ ಕಳೆಯಬೇಕಾಯಿತು.. ಅಂದಹಾಗೆ, 1966 ಸೆ. 12ರಂದು ಇಸ್ರೋಗೆ ಸೇರ್ಪಡೆಗೊಳ್ಳುವಾಗ, ಮುಂದೊಂದು ದಿನ ಸುಳ್ಳು ಕೇಸಿನಲ್ಲಿ ಸಿಲುಕಿಕೊಳ್ಳಬಹುದು ಎಂಬುದಾಗಿ ನಾನೆಂದೂ ಊಹಿಸಿರಲಿಲ್ಲ. PSLV  ಉಪಗ್ರಹವನ್ನು ಆಕಾಶಕ್ಕೆ ಹಾರಿಸಲು ಉಪಯೋಗಿಸುವ ವಿಕಾಸ್ ಎಂಜಿನ್‍ಗಳನ್ನು ನಿರ್ಮಿಸುವಾಗ, ಒಂದು ದಿನ ದೇಶದ್ರೋಹಿಯಾಗುವೆ ಎಂಬ ಸಣ್ಣ ಸುಳಿವೂ ನನ್ನಲ್ಲಿರಲಿಲ್ಲ..
        ರಾಕೆಟ್ ತಂತ್ರಜ್ಞಾನ ರೂವಾರಿ ಎಂದೇ ಗುರುತಿಸಿಕೊಂಡಿರುವ ನಾರಾಯಣನ್ ಹೇಳುತ್ತಾ ಹೋಗುತ್ತಾರೆ..
     ನಿಜವಾಗಿ, ಕ್ರಯೋಜನಿಕ್ ಆಧಾರಿತ ಇಂಧನ ತಂತ್ರಜ್ಞಾನದ ಅಭಿವೃದ್ಧಿಗೆ 1992ರಲ್ಲಿ ರಶ್ಯದೊಂದಿಗೆ ಒಪ್ಪಂದಕ್ಕೆ ಭಾರತವು ಸಹಿ ಹಾಕುತ್ತದೆ. 235 ಕೋಟಿ ರೂಪಾಯಿಯ ಈ ಬೃಹತ್ ಒಪ್ಪಂದ ಸಹಜವಾಗಿಯೇ ಅಮೇರಿಕದ ಕಣ್ಣು ಕುಕ್ಕುತ್ತದೆ. ಅಮೇರಿಕವು ಅದಾಗಲೇ ಇದೇ ಮಾದರಿಯ ಒಪ್ಪಂದಕ್ಕೆ 950 ಕೋಟಿ ರೂಪಾಯಿಯ ಬೇಡಿಕೆಯಿಟ್ಟಿತ್ತು. ಫ್ರ್ರಾನ್ಸ್ ಕೂಡಾ 650 ಕೋಟಿ ರೂಪಾಯಿ ಷರತ್ತು ವಿಧಿಸಿತ್ತು. ರಶ್ಯದ ಅಧ್ಯಕ್ಷರಾಗಿದ್ದ ಬೋರಿಸ್ ಯೇಲ್ಸಿನ್‍ರ ಮೇಲೆ ಅಮೇರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಶ್‍ರು ಒಪ್ಪಂದ ರದ್ದುಗೊಳಿಸುವಂತೆ ಒತ್ತಡ ಹೇರುತ್ತಾರೆ. ಈ ಒಪ್ಪಂದ ಜಾರಿಯಾದದ್ದೇ ಆದಲ್ಲಿ ರಶ್ಯವನ್ನು ಕಪ್ಪು ಪಟ್ಟಿಯಲ್ಲಿ (Select Five Club) ಸೇರಿಸುವುದಾಗಿ ಬೆದರಿಕೆ ಹಾಕುತ್ತಾರೆ. ಯೇಲ್ಸಿನ್‍ರು ಒಪ್ಪಂದವನ್ನು ರದ್ದುಗೊಳಿಸುತ್ತಾರೆ. ಬಳಿಕ ರಶ್ಯಾದೊಂದಿಗೆ ಭಾರತ ಹೊಸ ಒಪ್ಪಂದವೊಂದಕ್ಕೆ ಸಹಿ ಹಾಕುತ್ತದೆ. ತಂತ್ರಜ್ಞಾನಗಳನ್ನು ವರ್ಗಾಯಿಸದೇ 4 ಕ್ರಯೋಜನಿಕ್ ಎಂಜಿನ್‍ಗಳನ್ನು ಸ್ವಯಂ ತಯಾರಿಸಿಕೊಡುವುದಕ್ಕೆ ರಶ್ಯಾ ಒಪ್ಪಿಕೊಳ್ಳುತ್ತದೆ. ಅಂದಹಾಗೆ, ಆ ಸಂದರ್ಭದಲ್ಲಿ ಇಸ್ರೋದಲ್ಲಿ ಕ್ರಯೋಜನಿಕ್ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದದ್ದು ಇದೇ ನಂಬಿ ನಾರಾಯಣನ್. ದ್ರವ ಇಂಧನ ಚಾಲಿತ ರಾಕೆಟನ್ನು ಭಾರತಕ್ಕೆ ಮೊತ್ತಮೊದಲು ಪರಿಚಯಿಸಿದ್ದೂ ಇವರೇ. ಆದ್ದರಿಂದಲೇ 1994ರಲ್ಲಿ ಅವರನ್ನು ದೇಶದ್ರೋಹಿಯಂತೆ ಚಿತ್ರಿಸಿ ಬಂಧಿಸಿದ್ದರ ಹಿಂದೆ ಅನುಮಾನಗಳು ಮೂಡುವುದು. ವಿಚಾರಣೆಯ ಪ್ರಥಮ ಹಂತದಲ್ಲೇ ಇದೊಂದು ಪಿತೂರಿ ಎಂಬುದು ಸಿಬಿಐಗೆ ಗೊತ್ತಾಗಿತ್ತು. ಇಡೀ ಪ್ರಕರಣವನ್ನು ಪಿತೂರಿ ಎಂದು ಹೇಳಿದ  ಸಿಬಿಐ, ಈ ಪಿತೂರಿಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವ ವರದಿಯನ್ನು 1996ರಲ್ಲಿ ದೇಶದ ಮುಂದಿಟ್ಟಿತು. ಬಳಿಕ, 1998ರಲ್ಲಿ ನಂಬಿ ನಾರಾಯಣನ್‍ರನ್ನು ನಿರ್ದೋಷಿ ಎಂದು ಸುಪ್ರೀಮ್ ಕೋರ್ಟ್ ಹೇಳಿತಲ್ಲದೇ, ಇಡೀ ಪ್ರಕರಣವನ್ನೇ ವಜಾಗೊಳಿಸಿತು. ಅಲ್ಲದೇ ನಂಬಿ ನಾರಾಯಣನ್‍ರಿಗೆ 1 ಕೋಟಿ ರೂಪಾಯಿ ಪರಿಹಾರ ಕೊಡಬೇಕೆಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 2001ರಲ್ಲಿ ಕೇರಳ ಸರಕಾರಕ್ಕೆ ನಿರ್ದೇಶನ ನೀಡಿತು. ಇದಷ್ಟೇ ಅಲ್ಲ,
     ರಶ್ಯ ಇನ್ ಸ್ಪೇಸ್: ದಿ ಫೇಲ್‍ಡ್ ಫ್ರಂಟಿಯರ್' (Russia in Space: The Failed Frontier) ಎಂಬ ಹೆಸರಿನಲ್ಲಿ ಬ್ರಿಯಾನ್ ಹಾರ್ವೆಯ ಪುಸ್ತಕವೊಂದು 2001ರಲ್ಲಿ ಮಾರುಕಟ್ಟೆಗೆ ಬರುತ್ತದೆ. ನಂಬಿ ನಾರಾಯಣನ್ ಪ್ರಕರಣವು ಅಮೇರಿಕದ ಗುಪ್ತಚರ ಸಂಸ್ಥೆ ಸಿಐಎ ಹೆಣೆದ ನಾಟಕವಾಗಿತ್ತೆಂದು ಅದು ಸ್ಪಷ್ಟಪಡಿಸುತ್ತದೆ.
     ..ತನ್ನ ಮೇಲೆ ಸುಳ್ಳು ಕೇಸು ಹಾಕಿದ, ದೇಶದ್ರೋಹಿ ಎಂದು ಜನಸಾಮಾನ್ಯರು ನಂಬುವಂಥ ವಾತಾವರಣವನ್ನು ನಿರ್ಮಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಬಿಐ ಹೇಳಿತ್ತಲ್ಲವೇ? ಆದರೆ ಇವತ್ತು ಆ ಫೈಲೇ ಕಾಣುತ್ತಿಲ್ಲವಲ್ಲ, ಯಾಕೆ? ಹಾಗಾದರೆ ಇದರ ಹಿಂದಿದ್ದವರು ಯಾರು? ನಿಜವಾಗಿ, ನನ್ನ ಮೇಲಿದ್ದದ್ದು ಕೋಟ್ಯಂತರ ರೂಪಾಯಿಯನ್ನು ಪಡಕೊಂಡ ಆರೋಪ. ಹಾಗಿದ್ದರೆ, ತನಿಖಾಧಿಕಾರಿಗಳು ನನ್ನ ಮನೆಯ ಮೇಲೆ ದಾಳಿ ಮಾಡಬೇಕಿತ್ತಲ್ಲವೇ? ದಾಖಲೆಗಳನ್ನು ವಶಪಡಿಸಿಕೊಳ್ಳ ಬೇಕಿತ್ತಲ್ಲವೇ? ನನ್ನ ಅಕೌಂಟ್ ಪುಸ್ತಕಗಳ ತಪಾಸಣೆ ನಡೆಸಬೇಕಿತ್ತಲ್ಲವೇ? ಇವಾವುದನ್ನೂ ಮಾಡದೇ ಕೇವಲ ದೇಶದ್ರೋಹಿ ಎನ್ನುತ್ತಾ ತಿರುಗಿದ್ದುದರ ಹಿಂದಿನ ಗುಟ್ಟೇನು? ಇಸ್ರೋದ ವರ್ಚಸ್ಸನ್ನು ಕೆಡಿಸಲು, ಬಾಹ್ಯಾಕಾಶ ವಿಭಾಗದಲ್ಲಿ ಇಸ್ರೋದ ಸಾಧನೆಗೆ ಅಡ್ಡಿಪಡಿಸಲು ಯಾವುದೋ ಶಕ್ತಿ ಈ ಎಲ್ಲ ಪಿತೂರಿಗಳನ್ನು ನಡೆಸಿರಬಾರದೇಕೆ? ಅಂದಹಾಗೆ, ನನಗೆ ನನ್ನ ಕಳೆದು ಹೋದ ವರ್ಚಸ್ಸನ್ನು ಯಾರು ಕೊಡುತ್ತಾರೆ? ದೇಶದ್ರೋಹಿಯಾಗಿ ತಲೆ ತಗ್ಗಿಸಿ ಮುಖ ಮುಚ್ಚಿಕೊಂಡು ನಡೆದಾಡುವಂತಾಯಿತಲ್ಲ, ಪತ್ನಿ ಕಣ್ಣೀರಿನೊಂದಿಗೆ ನಿತ್ಯ ಬದುಕುವಂತಾಯಿತಲ್ಲ, ಆ ಸಂಕಟಕ್ಕೆ ಸುಪ್ರೀಮ್ ಕೋರ್ಟಿನಲ್ಲಿ ಯಾವ ಪರಿಹಾರವಿದೆ..
     ನಾರಾಯಣನ್ ಹೀಗೆ ಪ್ರಶ್ನಿಸುತ್ತಾ ಹೋಗುವಾಗ ನಮ್ಮೊಳಗೆ ಅನುಮಾನಗಳೂ ಹೆಚ್ಚುತ್ತಾ ಹೋಗುತ್ತವೆ. ದೇಶದ ಪ್ರಸಿದ್ಧ ವಿಜ್ಞಾನಿಯನ್ನೇ ದೇಶದ್ರೋಹಿಯಾಗಿಸುವ ಸಾಮರ್ಥ್ಯ  ನಮ್ಮ ಪೊಲೀಸ್ ವ್ಯವಸ್ಥೆಗೆ ಇದೆಯೆಂದ ಮೇಲೆ, ಪತ್ರಕರ್ತ, ವೈದ್ಯ, ಇಂಜಿನಿಯರ್, ವಿದ್ಯಾರ್ಥಿಗಳೆಲ್ಲ ಯಾವ ಲೆಕ್ಕ? ಅವರನ್ನೆಲ್ಲಾ ಭಯೋತ್ಪಾದಕರಾಗಿಸುವುದಕ್ಕೆ ಏನು ಕಷ್ಟವಿದೆ? ಇಸ್ರೋದ ವಿಜ್ಞಾನಿಗೇ ಬೂಟುಗಾಲಿನಲ್ಲಿ ಒದೆಯುವ, ದೌರ್ಜನ್ಯ ನಡೆಸುವ ಪೊಲೀಸರಿರುವಲ್ಲಿ ಜನಸಾಮಾನ್ಯರ ಪರಿಸ್ಥಿತಿಯಾದರೂ ಹೇಗಿದ್ದೀತು?
     ನಾರಾಯಣನ್‍ರಿಗೆ 1 ಕೋಟಿ ಪರಿಹಾರ ಕೊಡಬೇಕೆಂಬ ಮಾನವ ಹಕ್ಕು ಆಯೋಗದ 2001ರ ನಿರ್ದೇಶನವನ್ನು 10 ಲಕ್ಷಕ್ಕೆ ಇಳಿಸಿ 2012 ಸೆಪ್ಟೆಂಬರ್ ಕೊನೆಯಲ್ಲಿ ಸುಪ್ರೀಮ್ ಕೋರ್ಟು ನೀಡಿದ ಆದೇಶವನ್ನು ಓದುತ್ತಾ, ಇವೆಲ್ಲ ನೆನಪಾಯಿತು.

2 comments:

  1. ಇದರ ಹಿಂದಿನ ಉದ್ಧೇಶ ಏನು? ಯಾಕೆ ಇಂತಾ ಶಿಕ್ಷೆ?ನಿಮ್ಮ ಊಹೆ ಏನು? ನಂಬಿ ನಾರಾಯಣ್ ಅವರ ಇಂದಿನ ಸ್ಥಿತಿ ಏನು?

    ReplyDelete
    Replies
    1. This comment has been removed by the author.

      Delete