Tuesday, September 18, 2012

ಅಂಥ ಜಪಾನ್ ಗೇ ಬೇಡವಾಗಿರುವಾಗ, ಅನುಮಾನಿಸುವುದರಲ್ಲಿ ತಪ್ಪೇನಿದೆ?

‘ಅಬ್ಲೇಝ್, ದಿ ಸ್ಟೋರಿ ಆಫ್ ದಿ ಹೀರೋಸ್ ಆಂಡ್  ವಿಕ್ಟಿಮ್ಸ್ ಆಫ್ ದಿ ಚೆರ್ನೊಬಿಲ್’ ಎಂಬ ಕೃತಿ ಅಥವಾ ‘ಚರ್ನೋಬಿಲ್: ದಿ ಹಿಡನ್ ಲೆಗೆಸಿ’ ಎಂಬ ಕೃತಿಯನ್ನು ಭಾಗಶಃ ಓದಿದವರು ಕೂಡ, ತಮಿಳುನಾಡಿನ ಕುಡಂಕುಳಂನಲ್ಲಿ ಇನ್ನೂ ಕಾರ್ಯಾಚರಿಸದ ಅಣುಸ್ಥಾವರವನ್ನು ಬಿಡಿ, ಈ ದೇಶದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ಎಲ್ಲ ಅಣುಸ್ಥಾವರಗಳನ್ನೂ ಮುಚ್ಚುವಂತೆ ಪ್ರತಿಭಟಿಸಿಯಾರು ..
      1986 ಎಪ್ರಿಲ್ 24ರಂದು ರಷ್ಯಾದ ಚರ್ನೋಬಿಲ್‍ನಲ್ಲಿ ನಡೆದ ಅಣು ಅವಘಡದ 25 ವರ್ಷಗಳ ಬಳಿಕ 2011ರ ಮಾರ್ಚ್‍ ನಲ್ಲಿ  ಜಪಾನ್‍ನ ಫುಕುಶಿಮಾದಲ್ಲಿ ಅಣು ಅವಘಡ ನಡೆಯುತ್ತದೆ. ಚರ್ನೋಬಿಲ್‍ನಲ್ಲಿ 93 ಸಾವಿರ ಮಂದಿ ಸಾವಿಗೀಡಾಗುತ್ತಾರೆ. 4 ಲಕ್ಷಕ್ಕಿಂತ ಅಧಿಕ ಮಂದಿ ಸ್ಥಳಾಂತರಗೊಳ್ಳುತ್ತಾರೆ. ಅವಘಡ ನಡೆದ ಕೂಡಲೇ ರಷ್ಯನ್ ಸರಕಾರ ಮಾಡಿದ ಮೊಟ್ಟ ಮೊದಲ ಕೆಲಸ ಏನೆಂದರೆ, ಸುದ್ದಿಯನ್ನು ಗುಟ್ಟಾಗಿಡುವುದು. ಅಣುಸ್ಥಾವರದಲ್ಲಿ ಸ್ಫೋಟ ಉಂಟಾಗಿದೆ ಎಂಬ ಸುದ್ದಿ ತಿಳಿದ ತಕ್ಷಣ ಸೇನೆ ಓಡೋಡಿ ಬರುತ್ತದೆ. ಕನಿಷ್ಠ  ಮಟ್ಟದ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳದೇ ಕರ್ನಲ್ ಯುರೊಶಕ್ ನೇರ ರಿಯಾಕ್ಟರ್ ಬಳಿಗೆ ಹೋಗುತ್ತಾರೆ. ವಿಕಿರಣವು ತಮ್ಮ ದೇಹದ ಮೇಲೆ ಯಾವ ಬಗೆಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಸೈನಿಕರಿಗೂ ಸರಿಯಾದ ತಿಳುವಳಿಕೆ ಇರುವುದಿಲ್ಲ. ಅಷ್ಟೇ ಅಲ್ಲ, ಅಣುಸ್ಥಾವರದಲ್ಲಾದ ಬೆಂಕಿಯನ್ನು ಅಗ್ನಿ ಶಾಮಕ ದಳದ ಸಿಬಂದಿ ಶಾರ್ಟ್ ಸರ್ಕ್ಯೂಟ್ ಎಂದೇ ನಂಬಿರುತ್ತಾರೆ. ಪರಸ್ಪರ ಜೋಕ್ ಮಾಡುತ್ತಾ ರಿಯಾಕ್ಟರ್‍ಗೆ ತಗುಲಿದ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಾರೆ. ಅಗ್ನಿಶಾಮಕ ದಳದ ಮುಖ್ಯಸ್ಥ ವ್ಲಾದಿಮೀರ್ ಪ್ರಾವಿಕ್‍ರಂತೂ ಖುದ್ದು ಅಲ್ಲೇ ನಿಂತು ಜೊತೆಗಾರರಿಗೆ ನಿರ್ದೇಶನ ನೀಡುತ್ತಾರೆ. ಆದ್ದರಿಂದಲೇ ಅಣು ಅವಘಡ ನಡೆದು 13 ದಿನಗಳೊಳಗೇ ವಿಕಿರಣದ ಪ್ರಭಾವದಿಂದಾಗಿ ಅವರು ಸಾವಿಗೀಡಾಗುತ್ತಾರೆ. ರಕ್ಷಣಾತ್ಮಕ ಉಡುಪು ಧರಿಸದೆಯೇ ರಿಯಾಕ್ಟರುಗಳಿಗೆ ನೀರು ಹರಿಸುತ್ತಾ ಬೆಳಗ್ಗಿನವರೆಗೆ ಅಣುಸ್ಥಾವರದಲ್ಲೇ ಉಳಿದ ಮುಖ್ಯ ಎಂಜಿನಿಯರ್ ಅಕಿಮೋವ್, 3 ವಾರಗಳೊಳಗೇ ಕೊನೆಯುಸಿರೆಳೆಯುತ್ತಾರೆ..
       ಒಂದು ವೇಳೆ, ಚರ್ನೋಬಿಲ್‍ನಿಂದ ಸಾವಿರ ಕಿಲೋಮೀಟರ್ ದೂರದ ಸ್ವೀಡನ್ನಿನ ಫೋರ್ಸ್  ಮಾರ್ಕ್ ಅಣುಸ್ಥಾವರವು ಅವಘಡದ ವಾಸನೆಯನ್ನು ಹಿಡಿಯದೇ ಇರುತ್ತಿದ್ದರೆ, ರಶ್ಯವು ಅಣು ಅವಘಡವನ್ನು ಒಪ್ಪಿಕೊಳ್ಳುವ ಸಾಧ್ಯತೆಯೇ ಇರಲಿಲ್ಲ..
          ಆಗ ಅಮೇರಿಕಕ್ಕೂ ರಶ್ಯಕ್ಕೂ ತೀವ್ರತರದ ಪೈಪೋಟಿಯಿತ್ತು. ಈ ಅವಘಡದ ಸುದ್ದಿ ಅಮೇರಿಕಕ್ಕೆ ತಲುಪಿಬಿಟ್ಟರೆ ತನಗೆ ಮುಖಭಂಗವಾಗುತ್ತದೆ ಎಂದೇ ರಶ್ಯ ಅಂದುಕೊಂಡಿತ್ತು. ಆದ್ದರಿಂದಲೇ ಚರ್ನೋಬಿಲ್‍ಗೆ ಹೋಗಿ ಪೋಟೋ ತೆಗೆಯುವುದಕ್ಕೋ ಶೂಟಿಂಗ್ ಮಾಡುವುದಕ್ಕೋ ಅದು ಅನುಮತಿಯನ್ನೇ ನೀಡಲಿಲ್ಲ. ಅದು ಜನರನ್ನು ಹೇಗೆ ಸ್ಥಳಾಂತರಿಸಿತು, ಯಾವ ರೀತಿಯಲ್ಲಿ ಜನರ ಮೇಲೆ ರೇಡಿಯೇಶನ್ ಬಾಧಿಸಿತು ಎಂಬ ಮಾಹಿತಿಯನ್ನು ರಶ್ಯ ಬಿಟ್ಟು ಕೊಡಲೂ ಇಲ್ಲ. ಇಷ್ಟಕ್ಕೂ, ಚರ್ನೋಬಿಲ್ ಅವಘಡದ ಸಂತ್ರಸ್ತರನ್ನು ಎಷ್ಟು ಮಂದಿಗೆ ಭೇಟಿಯಾಗಲು ಸಾಧ್ಯವಾಗಿದೆ?  ಕೆಲವೊಂದು ಪೋಟೋಗಳು, ವೀಡಿಯೋಗಳು ಯೂಟ್ಯೂಬ್‍ನಲ್ಲಿ ಸಿಗಬಹುದಾದರೂ ರಶ್ಯದ ಅಧಿಕಾರಿಗಳು ಕಿತ್ತು ಕೊಂಡ ಕ್ಯಾಮರಾಗಳು, ವೀಡಿಯೋಗಳ ಲೆಕ್ಕ ಎಷ್ಟು ಮಂದಿಯಲ್ಲಿದೆ? ಮಸಿಯಂತೆ ಕಪ್ಪಾದವರು, ಕಣ್ಣು ಗುಳಿ ಬಿದ್ದವರು, ಅಂಗವಿಕಲಗೊಂಡವರು.. ಇವರೆಲ್ಲರ ಮಾಹಿತಿಯನ್ನು ರಶ್ಯ ತಡೆದಿರಿಸಿಲ್ಲವೇ? ರಶ್ಯ ಎಂದಷ್ಟೇ ಅಲ್ಲ, 2011ರ ಫುಕುಶಿಮಾ ಅವಘಡದ ಸಂದರ್ಭದಲ್ಲೂ ಜಪಾನ್ ಒಂದು ಬಗೆಯ ಮುಚ್ಚುಮರೆಯೊಂದಿಗೇ ವರ್ತಿಸಿತು. ಫುಕುಶಿಮಾದಿಂದ 350 ಕಿಲೋಮೀಟರ್ ದೂರ ಇರುವ ಟೋಕಿಯೋದ ವರೆಗೆ ವಿಕಿರಣ ಬಾಧಿಸಲಿದೆ ಎಂಬುದು ಗೊತ್ತಿದ್ದೂ ಅದನ್ನು ಬಹಿರಂಗಪಡಿಸಲಿಲ್ಲ. (ಇಂಟರ್ ನ್ಯಾಶನಲ್ ಹೆರಾಲ್ಡ್ ಟ್ರಿಬ್ಯೂನ್, 2012 ಫೆ. 29) ನಿಜವಾಗಿ, ಯಾವ ರಾಷ್ಟ್ರವೂ ಅಣು ಅವಘಡವನ್ನು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದೇ ಇಲ್ಲ. 1987 ಮೇ 4ರಂದು ತಮಿಳುನಾಡಿನ ಕಲ್ಪಕ್ಕಮ್ ಅಣುಸ್ಥಾವರದಲ್ಲಿ ಅವಘಡವಾಗಿ 2 ವರ್ಷ ಸ್ಥಾವರವನ್ನೇ ಮುಚ್ಚಲಾಯಿತು. 1989 ಸೆ. 10ರಂದು ಮಹಾರಾಷ್ಟ್ರದ ತಾರಾಪುರ್ ಅಣುಸ್ಥಾವರದಲ್ಲಿ ರೇಡಿಯೇಶನ್ ಸೋರಿಕೆಯಾಯಿತಲ್ಲದೇ ಅದನ್ನು ಸರಿಪಡಿಸಲು ಒಂದು ವರ್ಷ ತಗುಲಿತು. 1992 ಮೇ 13ರಂದು ಮತ್ತೆ ತಾರಾಪುರ್ ಸ್ಥಾವರದಲ್ಲಿ ರೇಡಿಯೇಶನ್ ಸೋರಿಕೆಯಾಯಿತು. ಉತ್ತರ ಪ್ರದೇಶದ ಬುಲಂಧ್‍ಶೇರ್‍ನಲ್ಲಿರುವ ನರೋರಾ ಅಣುಸ್ಥಾವರದಲ್ಲಿ 1993, ಮಾರ್ಚ್ 31ರಂದು ರೇಡಿಯೇಶನ್ ಸೋರಿಕೆಯಾಗಿ ಕಲುಷಿತ ನೀರು ರಾಣಾ ಪ್ರತಾಪ್ ನದಿಗೆ ಹರಿದು ವಿವಾದ ಸೃಷ್ಟಿಯಾಯಿತು. ಅಷ್ಟಕ್ಕೂ, 1986ರ ಚರ್ನೋಬಿಲ್ ಅವಘಡಕ್ಕೂ 2011ರ ಫುಕುಶಿಮಾ ಅವಘಡಕ್ಕೂ ನಡುವೆ 25 ವರ್ಷಗಳ ಅಂತರವಿದೆ. ತಂತ್ರಜ್ಞಾನದಲ್ಲಿ ಮುಂದಿದ್ದೂ ಚರ್ನೋಬಿಲ್ ದುರಂತವನ್ನು ಕಂಡಿದ್ದೂ ಫುಕುಶಿಮಾ ಅವಘಡವನ್ನು ತಡೆಯಲು ಜಪಾನ್‍ಗೆ ಸಾಧ್ಯವಾಗಲಿಲ್ಲವೇಕೆ?  ಚರ್ನೋಬಿಲ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿ ವಿಕಿರಣ ಸೋರಿಕೆಯಾಗಿದ್ದರೆ, ಭೂಕಂಪ ಉಂಟಾಗಿ ಸುನಾಮಿ ಅಲೆಗಳು ಎದ್ದು ಫುಕುಶಿಮಾ ಅಣುಸ್ಥಾವರಕ್ಕೆ ಹಾನಿಯಾಗಿತ್ತು. ಇದು ನೀಡುವ ಸೂಚನೆಯೇನು? ಪ್ರಾಕೃತಿಕ ಮತ್ತು ತಾಂತ್ರಿಕ ಎರಡೂ ಕಾರಣಗಳಿಂದಲೂ ಅಣು ಅವಘಡಗಳಾಗಬಹುದು ಎಂಬುದನ್ನೇ ಅಲ್ಲವೇ? ಫುಕುಶಿಮಾದಲ್ಲಿ ಅಣು ಸ್ಥಾವರ ಸ್ಥಾಪಿಸುವಾಗ ಜಪಾನ್‍ನ ಮುಂದೆ ಚರ್ನೋಬಿಲ್ ದುರಂತದ ವಿವರಗಳು ಮಾತ್ರ ಇದ್ದುವು. ಅಂಥದ್ದು ಮತ್ತೆ ಘಟಿಸದಿರಲು ಏನೆಲ್ಲಾ ಮುಂಜಾಗರೂಕತೆಯನ್ನು ಮಾಡಿಕೊಳ್ಳಬೇಕೋ ಅವನ್ನೆಲ್ಲಾ ಅದು ಮಾಡಿಸಿ ಕೊಂಡಿತ್ತು. ಆದರೆ ಭೂಕಂಪ ಮತ್ತು ಸುನಾಮಿಯಿಂದ ಜಗತ್ತಿನ ಯಾವ ಅಣು ಸ್ಥಾವರದಲ್ಲೂ ಅವಘಡ ಆಗಿರಲಿಲ್ಲವಲ್ಲ. ಆದ್ದರಿಂದಲೇ ಅದು ಆ ಬಗ್ಗೆ ನಿರ್ಲಕ್ಷ್ಯ ವಹಿಸಿತು. ಹೀಗಿರುವಾಗ ಸಮುದ್ರ ಬದಿಯಲ್ಲೇ ಇರುವ ತಮಿಳುನಾಡಿನ ಕುಡಂಕುಳಂ ಅಣುಸ್ಥಾವರದ ಸುರಕ್ಷಿತತೆಯ ಬಗ್ಗೆ ಅನುಮಾನಿಸುವುದನ್ನು ಹೇಗೆ ತಪ್ಪೂಂತ ಹೇಳುವುದು?  ಕುಡಂಕುಳಂನ ಅಣುಸ್ಥಾವರವು ಸುನಾಮಿ, ಭೂಕಂಪ, ಮತ್ತಿತರ ಆಘಾತಗಳನ್ನು ತಡೆದು ಕೊಳ್ಳುವಂತೆ ಸ್ಥಾಪಿಸಲಾಗಿದೆ ಎಂದೇ ಒಪ್ಪಿಕೊಳ್ಳೋಣ. ಆದರೆ ಎಂಥ ಭೂಕಂಪವನ್ನು? ಅದರ ಮಿತಿಯೇನು? ಸುನಾಮಿ ಎಂಬ ಪದವನ್ನು, ಅದು ಉಂಟು ಮಾಡುವ ಅನಾಹುತವನ್ನು ಜಗತ್ತಿನ ಕೋಟ್ಯಂತರ ಮಂದಿ ತಿಳಿದದ್ದೇ ಎರಡು ವರ್ಷಗಳ ಹಿಂದೆ. ಆ ವರೆಗೆ ಅಂಥದ್ದೊಂದು ಕಲ್ಪನೆಯೇ ಸಮಾಜದಲ್ಲಿ ಬಹುತೇಕ ಇದ್ದಿರಲಿಲ್ಲ. ಹೀಗಿರುವಾಗ ಸಮುದ್ರವು ನಾವು ನಿರೀಕ್ಷಿಸದೇ ಇರುವ ರೂಪದಲ್ಲಿ ದಿಢೀರ್ ಆಗಿ ಉನ್ಮಾದಗೊಂಡರೆ ಆಗ ಕುಡಂಕುಳಂನ ಗತಿಯೇನಾದೀತು?
       ಕುಡಂಕುಳಂನಲ್ಲಿ ರಶ್ಯದ ಸಹಕಾರದೊಂದಿಗೆ 2002ರಲ್ಲೇ ಅಣು ಸ್ಥಾವರ ನಿರ್ಮಾಣದ ಬಗ್ಗೆ ಚಟುವಟಿಕೆಗಳು ಪ್ರಾರಂಭವಾಗಿದ್ದರೂ ಅದರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳಾದದ್ದು ಫುಕುಶಿಮಾ ಅಣು ಅವಘಡದ ನಂತರವೇ. ಹಾಗಂತ ಎಲ್ಲರೂ ಅಣುಸ್ಥಾವರವನ್ನು ವಿರೋಧಿಸುತ್ತಿದ್ದಾರೆ ಎಂದೂ ಅಲ್ಲ..
        “..ರಾಜಸ್ತಾನದ ರಾವತ್‍ಬಾಟ್‍ನಲ್ಲಿರುವ ಅಣು ಸ್ಥಾವರದ ತೀರಾ ಸಮೀಪ 1994ರಿಂದ 99ರ ವರೆಗೆ  ನಾನು ವಾಸ  ಮಾಡಿದ್ದೇನೆ. ರಾವತ್‍ಬಾಟ್ ಅಣು ಸ್ಥಾವರವು ಅಲ್ಲಿನ ಚಂಬಲ್ ನದಿಯ ದಂಡೆಯಲ್ಲಿದೆ. ನಾನು ಗರ್ಭಿಣಿಯಾಗಿದ್ದಾಗಲೂ ಆ ಬಳಿಕವೂ ಅದೇ ಚಂಬಲ್ ನದಿಯಿಂದ ಸರಬರಾಜು ಮಾಡುವ ನಳ್ಳಿ ನೀರನ್ನು ಉಪಯೋಗಿಸಿದ್ದೇನೆ. ನಿಮಗೆ ಗೊತ್ತಿರಲಿ, ಅಣುಸ್ಥಾವರವನ್ನು ತಂಪು ಮಾಡಲು ಉಪಯೋಗಿಸುವ ನೀರನ್ನು ಬಳಿಕ ಅದೇ ನದಿಗೆ ಪಂಪ್ ಮಾಡಲಾಗುತ್ತದೆ. ನಾನು ನೀರನ್ನು ಉಪಯೋಗಿಸುವಾಗ ಬಿಸಿ ಮಾಡಿದ್ದೂ ಕಡಿಮೆ. ಆದರೆ ಈ ವರೆಗೆ ನನಗೇನೂ ಆಗಿಲ್ಲ. ನನ್ನ ವಿನಂತಿ ಏನೆಂದರೆ, ತಂತ್ರಜ್ಞಾನದಲ್ಲಿ ನಂಬಿಕೆ ಇಡಿ. ಇದೇ ಅಣುಸ್ಥಾವರದಲ್ಲಿ ಅನೇಕಾರು ಅಧಿಕಾರಿಗಳು, ಇನ್ನಿತರರು ಕೆಲಸ ಮಾಡುತ್ತಿಲ್ಲವೇ? ಇದರ ಆಸು-ಪಾಸಿನಲ್ಲೇ ಅವರ ಕುಟುಂಬ ವಾಸಿಸುತ್ತಿಲ್ಲವೇ? ವಿಕಿರಣಕ್ಕೆ ಮೊತ್ತಮೊದಲು ತುತ್ತಾಗ ಬೇಕಾದ ಅವರಿಗೇಕೆ ಈ ಬಗ್ಗೆ ಆತಂಕವಿಲ್ಲ.. ಎಂದೆಲ್ಲಾ 2012 ಮಾರ್ಚ್ 11ರ ದಿ ಹಿಂದೂ ದೈನಿಕದಲ್ಲಿ ಸೂಸಾನ್ ಡೇವಿಸ್ ಅನ್ನುವ ಪತ್ರಕರ್ತೆ ಪ್ರಶ್ನಿಸುತ್ತಾ ಹೋಗುತ್ತಾರೆ. ಚೆನ್ನೈ ಅಥವಾ ದೇಶದ ಇನ್ನಾವುದೇ ಬೃಹತ್ ನಗರಗಳಲ್ಲಿ ವಾಸಿಸುವುದಕ್ಕಿಂತ ಕುಡಂಕುಳಂ, ಕಲ್ಪಕ್ಕಮ್‍ನಂಥ ಅಣುಸ್ಥಾವರಗಳ ಪಕ್ಕ ಬದುಕುವುದೇ ಹೆಚ್ಚು ಉತ್ತಮ ಎಂದು ವಿಜ್ಞಾನಿ ರಾಹುಲ್ ಸಿದ್ಧಾರ್ಥನ್ (ದಿ ಹಿಂದೂ, 2012 ಸೆ. 14) ಬರೆಯುತ್ತಾರೆ.
ಆದರೆ..
ಅಣುಸ್ಥಾವರಗಳಿಗೆ ಇರುವುದು ಇದೊಂದೇ ಮುಖ ಅಲ್ಲವಲ್ಲ. ಜರ್ಮನಿಯ ಬೇಕರ್ ಮತ್ತು ಹಾಯೆಲ್‍ರ ತಂಡ 2007ರಲ್ಲಿ ಬ್ರಿಟನ್, ಕೆನಡ, ಫ್ರಾನ್ಸ್, ಅಮೇರಿಕ, ಜರ್ಮನಿ, ಜಪಾನ್, ಸ್ಪೈನ್.. ಮುಂತಾದ ರಾಷ್ಟ್ರಗಳಲ್ಲಿರುವ ಅಣುಸ್ಥಾವರಗಳ ಸುತ್ತ ಅಧ್ಯಯನ ನಡೆಸುತ್ತದೆ. ಅಣುಸ್ಥಾವರಗಳ ಪಕ್ಕ ಬದುಕುತ್ತಿರುವ ಮಕ್ಕಳಲ್ಲಿ ರಕ್ತದ ಕ್ಯಾನ್ಸರ್ ಹೆಚ್ಚಿರುವುದೂ ಪತ್ತೆಯಾಗುತ್ತದೆ. 2008ರಲ್ಲಿ ಸ್ಪಿಕ್ಸ್ ಮತ್ತು ತಂಡ ಜರ್ಮನಿಯ 16 ಅಣುಸ್ಥಾವರಗಳ ಸುತ್ತ ಬದುಕುತ್ತಿರುವವರನ್ನು ಕೇಂದ್ರೀಕರಿಸಿ ನಡೆಸಿದ ಅಧ್ಯಯನದಲ್ಲೂ ಮಕ್ಕಳಲ್ಲಿ ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತದೆ. ಒಂದು ರೀತಿಯಲ್ಲಿ ಅಣುಸ್ಥಾವರದ ಪರ ಮತ್ತು ವಿರುದ್ಧ ಮಾತಾಡುವ ಪ್ರತಿಯೊಬ್ಬರಲ್ಲೂ ಇಂಥ ಪರ ಮತ್ತು ವಿರುದ್ಧವಾದ ತರ್ಕಗಳು ಇದ್ದೇ ಇವೆ. ಅಷ್ಟಕ್ಕೂ, ಅಣುಸ್ಥಾವರಗಳು ಅತ್ಯಂತ ಸುರಕ್ಷಿತ ಮತ್ತು ನೂರು ಶೇಕಡಾ ನಿರಪಯಕಾರಿ ಎಂದಾಗಿದ್ದರೆ 2040ರೊಳಗೆ ಅಣು ವಿದ್ಯುತ್‍ನಿಂದ ಸಂಪೂರ್ಣ ಮುಕ್ತವಾಗುವ ಘೋಷಣೆಯನ್ನು ಜಪಾನ್ ಮಾಡಿದ್ದೇಕೆ? (ದಿ ಹಿಂದೂ 2012 ಸೆ. 15) ವಿದ್ಯುತ್‍ಗಾಗಿ ಜಪಾನ್ ಆಶ್ರಯಿಸಿರುವುದೇ ಅಣು ಸ್ಥಾವರಗಳನ್ನು. ಜಗತ್ತಿನ 3ನೇ ಅತಿದೊಡ್ಡ ಅಣುವಿದ್ಯುತ್ ರಾಷ್ಟ್ರವಾಗಿರುವ ಜಪಾನ್‍ಗೇ ಅಣುಸ್ಥಾವರಗಳು ಬೇಡವಾಗಿದ್ದರೆ ಮತ್ತೇಕೆ ಕುಡಂಕುಳಂನಲ್ಲಿ, ಮಹಾ ರಾಷ್ಟ್ರದ ಜೈತಾಪುರದಲ್ಲಿ ಸರಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ? ಕಲ್ಲಿದ್ದಲು, ಗಾಳಿ ಅಥವಾ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವುದು ವೆಚ್ಚದಾಯಕ ಎಂಬುದು, ಅಪಾಯಕಾರಿ ಅಣುಸ್ಥಾವರಗಳ ಸ್ಥಾಪನೆಗೆ ಪರವಾನಿಗೆ ಆಗುತ್ತದೆಯೇ? ಅಂದಹಾಗೆ ತಂತ್ರಜ್ಞಾನದಲ್ಲಿ ಮುಂದಿರುವ ಜರ್ಮನಿ, ಅಮೇರಿಕ, ಜಪಾನ್‍ಗಳಂಥ ರಾಷ್ಟ್ರಗಳೇ ಅಣುಸ್ಥಾವರಗಳ ಬಗ್ಗೆ ಹಿಂಜರಿಕೆ ವ್ಯಕ್ತಪಡಿಸುತ್ತಿರುವಾಗ ನಮ್ಮ ರಾಜಕಾರಣಿಗಳೇಕೆ ಇಷ್ಟೊಂದು ಆತುರದಲ್ಲಿದ್ದಾರೆ?
      ಇವತ್ತು ಚೆನ್ನೈನ ಕುಡಂಕುಳಂ ಸಮುದ್ರದಲ್ಲಿ , ಮರಳಿನಲ್ಲಿ   ಅರ್ಧ ಮುಳುಗಿ ಪ್ರತಿಭಟಿಸುತ್ತಿರುವ ಸ್ಥಳೀಯರು ಎತ್ತುತ್ತಿರುವುದೂ ಇಂಥ ಅನುಮಾನಗಳನ್ನೇ.

No comments:

Post a Comment